ಯಾರು ಕಾಣಿಹರು ಅವಳಂತರಂಗವ
ಕಾರಿರುಳ ದಾರಿಯಲಿ ಸುರಸುಂದರಿ ಕಾದಿಹಳು
ದಾರಿಹೋಕರನೆಲ್ಲ ಕೈ ಬೀಸಿ ಕರೆಯುತ್ತಿಹಳು
ಗೆಜ್ಜೆಯ ಕಟ್ಟಿಹಳು ಲಜ್ಜೆಯ ತೊರೆದಿಹಳು
ಮನಸೆಳೆಯುವ ಮೋಹಕ ನಗೆಯ ಬೀರಿಹಳು
ವಿಧ ವಿಧವಾಗಿ ಅಲಂಕಾರ ಮಾಡಿಕೊಂಡಿಹಳು
ಕುಡಿನೋಟದಿಯೇ ಕಾಮದ ಮತ್ತೇರಿಸುತ್ತಿಹಳು
ಗಂಡಸಿನ ಹೃದಯದ ಬಡಿತ ಜೋರಾಗಿಸಿಹಳು
ರಾಸಲೀಲೆ ವ್ಯವಹಾರ ಕುದಿರಸಲು ಹಾತೊರೆದಿಳು
ಸಂತೆಯ ವ್ಯಾಪಾರದಂತೆ ಚೌಕಾಸಿ ಮಾಡುತ್ತಿಹರು
ಕ್ಷಣಿಕ ತೃಷೆ ವಾಂಛಿತ ಕಾಮಾಂಧರು
ಮೋಹಕ ಸೌಂದರ್ಯದ ಹಿಂದಿರುವ ನೋವರಿಯರು
ಅಪಹಾಸ್ಯ ಮಾಡಿ ಕೀಳಾಗಿ ಕಂಡಿಹರು
ನಿನ್ನಯ ಕಸುಬು ಸರಿಯಲ್ಲವೆಂದು ಹೇಳುವವರಾರು
ಈ ಅಸಹ್ಯ ಕಾರ್ಯಕ್ಕೆ ಮೂಲ ಹುಡುಕುವರಾರು
ಆಕೆಯ ಒಡಲಾಳದ ನೋವಿಗೆ ಸ್ಪಂದಿಸುವವರಾರು
ಎಲ್ಲರು ಅವಳ ನುಣುಪು ಚರ್ಮಸುಖ ಬಯಸಿಹರು
ಆದರೆ ಆ ಕಪ್ಪನೆ ಕಾಡಿಗೆಯ ಹಿಂದಿರುವದು
ಯಾರಿಗೂ ಕಾಣದ ಕರಾಳ ಜೀವನವದು
ಅದರಗಳ ಮೇಲೆ ಲೇಪಿಸಿದ ರಂಗಾದ ಬಣ್ಣದ
ಒಳಗಿದೆ ವಿಕೃತರು ಕೊರೆದ ಕಲೆಗಳ ಅಚ್ಚದು
ಅಂದವಾದ ಅಲಂಕಾರದಿ ಅಡಗಿಕೊಂಡಿದೆ
ಅಪರಿಮಿತ ಆಕ್ರಂದನದ ಜ್ವಾಲಾಮುಖಿಯು
ಕಿರಾತಕರು ಮಾಡಿದ ಆರದ ಗಾಯದ ಗುರುತುಗಳ
ಮನಸೋರೆಗೊಳಿಸೋ ಆ ವಸ್ತ್ರ ಮರೆಮಾಚಿದೆ
ಇದು ಭಾರತಾಂಬೆಯ ಪುಣ್ಯ ಭೂಮಿ,ಇಲ್ಲಿ
ಯಾವ ಹೆಣ್ಣು ಬಯಸಿ ಈ ವೃತ್ತಿಗಿಳಿಯಲ್ಲ
ಅರಿತುಕೊಳ್ಳಿರಿ ಪುರುಷ ಸಂತಾನರೆಲ್ಲ
ನಮ್ಮನೆಯ ಮಗಳಂತೆ ಅವಳೊಂದು ಹೆಣ್ಣು
ಆಕೆಯ ಹೃದಯದಿ ಸುಂದರ ಸುಮಧುರವಾದ
ಆಸೆ ಆಕಾಂಕ್ಷೆಗಳ ಮೇರು ಪರ್ವತವಿದೆ
ಅದನೆಲ್ಲ ಸುಟ್ಟಾಕಿ ಈ ದಾರಿಗೆ ಬಂದಿರುವಳೆಂದರೆ
ಪರಸ್ಥಿತಿ ಅದೆಷ್ಟೊಂದು ಭೀಕರವಾಗಿರಬಹುದು
ಅವಳಿಗೂ ಗೌರವ ಸ್ಥಾನಮಾನ ನೀಡಬೇಕಾಗಿದೆ
ಕೀಚಕರ ಕೃತ್ಯಕ್ಕೆ ಬಲಿಯಾಗಿ ಈ ವೃತ್ತಿಗಿಳಿದಿರ ಬಹುದು ಕಿತ್ತು ತಿನ್ನುವ ಬಡತನದ ಬೇಗೆಯಲಿ ಬೆಂದಿರಬಹುದು
ಹಸುಗೂಸಿನ ಉದರ ಪೋಷಣೆಗಾಗಿ ನಿಂತಿರಬಹುದು
ಓ ಪುರುಷ ಶ್ರೇಷ್ಟರೆ ಯಾರು ಕಾಣಿಹರು ಅವಳಂತರಂಗವ ????????
✍ ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ