ಅವಿಸ್ಮರಣೀಯ
ಇದೀಗ ಬಂದ ಸುದ್ದಿ
ಇಂದು ಬೆಳಗಿನ ಜಾವ ಅಮಾವಾಸ್ಯೆಯ ದಟ್ಟವಾದ ಕಾಡಿನ ಕತ್ತಲಿನ ಅವಳ ಎದೆಯೊಳಗೆ ಕೊರೆದು
ಸಾಗಿದ ಕಾರೊಂದು
ಸುರಂಗ ಮಾರ್ಗದೊಳು ಒಳಹೊಕ್ಕು
ರವ್ವನೇ ಹಾದು ಹೋಯಿತು
ಕರ್ಣ ಮಧುರ ಇಂಪನದಲಿ
ತಲ್ಲೀಣ ಮನ ಕೂಗಿ ಕರೆಯಿತು
ದೂರದಲಿ
ತಿರುಗಿ ನೋಡದ
ಬಹು ಅವಸರದ ಸಂಗಾತಿಯ ಕರೆಗೆ ಓಗೊಟ್ಟು ಸಾಗಿತು
ಕೂಗಿದ ಧ್ವನಿಯು ಹಿಂತಿರುಗಿ ಬಡಿದ ಬರ ಸಿಡಿಲು
ಉದರದೊಳ್ ನಾಟಿ
ಹೊರಬಂದ ರಭಸಕ್ಕೆ
ಒಳಗಿರುವ ಬ್ರೂಣ
ಹೊರಬಂದು ಬಿಕ್ಕಿತು
ಪ್ರಜ್ಞೆ ತಪ್ಪಿ ಬಿದ್ದ ತಾಯನ್ನು
ಎದೆಗೆ ಅವಚಿಕೊಂಡು ಕೂಗಿಯೇ ಕೂಗಿತು
ಹಾದು ಹೋದ ಕಾರಿನ ಮಾಲಿಕ ಮಂಗ ಮಾಯ
ಊರ ಜನರೆಲ್ಲ ವಿಡಿಯೋ ಕ್ಯಾಮರಾದಲ್ಲಿ ತಲ್ಲೀಣ
ಗುಸು ಗುಸು ಸಪ್ಪಳ
ಎಚ್ಚರಾದ ಅವ್ವ ಉಸಿರೊಳಗೆ
ಉಸಿರಾದ ಬ್ರೂಣವನು ಮತ್ತೆ
ಮಡಿಲೊಳಗೆ ಹಾಕಿ ಹೊಲೆದು ಕೊಂಡಳು ತನ್ನದೇ ಕೈಗಳಿಂದ
ನವೀರಾದ ಕೈಗಳನ್ನು ಸ್ಪರ್ಶಿಸುತ್ತ ಚುಚ್ಚಿಕೊಂಡಳು ಸೂಜಿ
ಕರೆದು ಕೂಗಿದ ನೋವಿನ
ಮುಂದೆ
ಇದಾವ ನೋವೆಂದು
ಅರಿತು ಹೆಜ್ಜೆ ಹಾಕಿದಳು ತೂಕಡಿಸುತ್ತ
ಸೋರಿ ಹೋದ
ಶಬ್ದ ರಕ್ತವು ಕೆಸರು ಮುದ್ದೆಯಾಯಿತು
ಹದವಾದ ಹೊಲ ಮಾಡಿ
ರಂಟೆ ಕುಂಟೆ ಮಾಡಿ
ಮಡಿ ಕಟ್ಟಿ ಮೈಲಿಗೆ ತೊಳೆದು ಕೊಂಡಳು
ತನ್ನದೇ ಕಂಬನಿಯ ಕಡಲಿನಲಿ
ಮಿಂದೆದ್ದಳು
ಅಹೋರಾತ್ರಿ ಭಯ ಭಕ್ತಿಯಿಂದ ಭಜಿಸಿದ
ಶಿವನ ಕಂಗಳು ತೆರೆದು ನೋಡಲಿಲ್ಲ
ಸುಟ್ಟು ಕೊಂಡಳು ಜೀವಂತ
ಹೆಣಕ್ಕೆ ಸಿಂಗರಿಸುತ್ತಾ
ಕಾಷ್ಠವನ್ನು ಕಡಿ ಕಡಿದು ಒಟ್ಟುತ್ತ
ಆಹುತಿಯಾದಳು
ವಿಡಿಯೋ ಮಾಡುತ್ತ ನಿಂತ ಪ್ರೇಕ್ಷಕರು ಮಂತ್ರ ಮುಗ್ಧರಾಗಿ ನೋಡುತ್ತ
ನಿಂತು ಕೊಂಡೇ ಬಿಟ್ಟರು
ಹಚ್ಚ ಬೇಡಮ್ಮ ಬೆಂಕಿ
ಎಂದು ಚಿರುತ್ತಿರುವ ಬ್ರೂಣಾವಸ್ಥೆಯ ಮಗು
ಅದು ಹೇಗೆ ?
ಬದುಕಿ ಉಳಿಯಿತೆಂದು
ಮತ್ತೆ ಗುಜು ಗುಜು ಶಬ್ದ
ಕೇಳಿ ಸುಮ್ಮನಾದ ಭಾವ ಭ್ರೂಣ
ನಕ್ಕು ಸುಮ್ಮನಾಗಿ ಬಿಟ್ಟಿತು
ಹಾಯಿಸಿ ಹೋದ ಕಾರಿನ ಮಾಲಿಕ
ಹಿಂತಿರುಗಿ ಬಂದು ಎತ್ತಿಕೊಂಡು ಸಾಗಿದ ರೀತಿ ನಿಜಕ್ಕೂ ಅವಿಸ್ಮರಣೀಯ …..
–ಡಾ ಸಾವಿತ್ರಿ ಕಮಲಾಪೂರ