ಗಣಿತ ಲೋಕದ ಮೇಧಾವಿ.. ಶ್ರೀನಿವಾಸ್ ರಾಮಾನುಜಮ್
ತಮಿಳುನಾಡಿನ ಪುಟ್ಟ ಹಳ್ಳಿಯ ಶಾಲೆಯೊಂದರ ಗಣಿತ ಪಂಡಿತರು ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಉತ್ತರ 1 ಬರುತ್ತದೆ ಎಂದು ಕೆಲವು ಉದಾಹರಣೆಗಳ ಮೂಲಕ ವಿವರಿಸಿದರು. ಆಗ ಪುಟ್ಟ ಬಾಲಕನೋರ್ವ ಎದ್ದು ನಿಂತು ಹಾಗಾದರೆ ಸೊನ್ನೆಯನ್ನು ಸೊನ್ನೆಯಿಂದ ವಿಭಾಗಿಸಿದಾಗ ಒಂದು ಬರುತ್ತದೆಯೇ ಎಂದು
ಪ್ರಶ್ನಿಸಿದನು.
ಆಗ ಶಿಕ್ಷಕರು “ಮೂರ್ಖ ಬಾಲಕನೆ, ಸೊನ್ನೆಗೆ ಯಾವುದೇ ಮೌಲ್ಯವಿಲ್ಲ ಎಂಬುದು ಅರಿವಿಲ್ಲವೇ ಎಂದು ವ್ಯಂಗ್ಯವಾಗಿ ಕೇಳಿದಾಗ ಆ ಬಾಲಕನು ಸೊನ್ನೆಗೆ ಮೌಲ್ಯವಿಲ್ಲವೇಕೆ?? ಒಂದರ ಮುಂದೆ 0 ಇಟ್ಟರೆ 10 ಆಗುತ್ತದೆ, ಹತ್ತರ ಮುಂದೆ ಮತ್ತೊಂದು ಸೊನ್ನೆ ಇಟ್ಟರೆ 100 ಆಗುತ್ತದೆ, ಹೀಗೆ ಒಂದೊಂದೇ ಸೊನ್ನೆಯನ್ನು ಇರಿಸುತ್ತಾ ಹೋದರೆ ಆ ಸಂಖ್ಯೆಯ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಿದಾಗ ಆ ಪುಟ್ಟ 8 ವರ್ಷದ ಬಾಲಕನ ಮಾತಿಗೆ ಬಾಯಿಯ ಮೇಲೆ ಬೆರಳಿಟ್ಟರು ಆ ಪಂಡಿತರು.
ಹೀಗೆ ಪಂಡಿತರಿಗೆ ತನ್ನ ಅಭೂತಪೂರ್ವ ಗಣಿತದ ಜ್ಞಾನದಿಂದ ಅಚ್ಚರಿಪಡಿಸಿದ ಆ ಬಾಲಕನೇ ಖ್ಯಾತ ಗಣಿತಜ್ಞ ಶ್ರೀನಿವಾಸ್ ರಾಮಾನುಜಮ್.
22 ಡಿಸೆಂಬರ್ 1887 ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದ ರಾಮಾನುಜಂ ಅವರ ತಂದೆ ಶ್ರೀನಿವಾಸ ಕುಪ್ಪುಸ್ವಾಮಿ ಅಯ್ಯಂಗಾರ್ ಮತ್ತು ತಾಯಿ ಕೋಮಲತಮ್ಮಾಳ. ಅತ್ಯಂತ ಬಡತನದ ಮನೆ ಪರಿಸ್ಥಿತಿ. ತಂದೆ ಬೇರೆಯವರ ಅಂಗಡಿಯಲ್ಲಿ ಲೆಕ್ಕ ಪತ್ರ ಬರೆದು ಸಂಪಾದಿಸಿದರೆ, ತಾಯಿ ದೇವಸ್ಥಾನಗಳಲ್ಲಿ ಹಾಡಿ, ಮನೆಯಲ್ಲಿ ಸಂಗೀತ ಪಾಠ ಹೇಳಿಕೊಟ್ಟು ಅದರಿಂದ ಬಂದ ದುಡ್ಡಿನಲ್ಲಿ ಮನೆ ನಡೆಸುತ್ತಿದ್ದಳು. ಚಿಕ್ಕಂದಿನಿಂದಲೂ ಅಂಕಗಳ ಜೊತೆ ಆಟವಾಡುತ್ತಾ ಬೆಳೆದ ಬಾಲಕನಿಗೆ ಲೆಕ್ಕ ಹಾಕುವುದೆಂದರೆ ಬಲು ಇಷ್ಟದ ಕೆಲಸ. ಗಣಿತದ ಜೀನಿಯಸ್ ಎಂದೇ ಕರೆಯಲ್ಪಟ್ಟ ರಾಮಾನುಜಮ್ ತನಗಿಂತ ದೊಡ್ಡ ಹುಡುಗರಿಗೆ ಗಣಿತದ ಪಾಠಗಳನ್ನು ಹೇಳಿಕೊಟ್ಟು ಹಣ ಸಂಪಾದಿಸಿ ಮನೆಯ ಖರ್ಚಿಗೆ ನೀಡುತ್ತಿದ್ದ. ಯಾವುದೇ ಆಟೋಟಗಳಲ್ಲಿ ಪಾಲ್ಗೊಳ್ಳದೆ,ಕೇವಲ ಅಂಕಗಳೊಂದಿಗೆ ಆಟವಾಡುತ್ತಾ ಬೆಳೆದ ಬಾಲಕ ಶಾಲೆಯ ವೇಳಾಪಟ್ಟಿಯನ್ನು ತಯಾರಿಸಿ ಕೊಡುವುದರಲ್ಲಿ ನಿಸ್ಸೀಮನಾಗಿದ್ದ. ಹತ್ತನೇ ತರಗತಿಯನ್ನು ಪಾಸಾದ ನಂತರ ಎಫ್ ಎ ಪರೀಕ್ಷೆಗೆ ಕುಳಿತುಕೊಂಡನು.
ಗಣಿತಕ್ಕೆ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡರೂ ಉಳಿದೆಲ್ಲ ವಿಷಯಗಳಲ್ಲಿ ಫೇಲ್ ಆಗುವ ರಾಮಾನುಜನ್ ಗೆ ವಿದ್ಯಾರ್ಥಿ ವೇತನ ದೊರೆಯಲಿಲ್ಲ. ಪರೀಕ್ಷೆಯಲ್ಲಿ ಆತ ಪಾಸಾಗಲೇ ಇಲ್ಲ. ತನ್ನ ಗುರುಗಳ ಸಲಹೆಯ ಮೇರೆಗೆ ಅವರ ಸ್ನೇಹಿತ ಮದರಾಸು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಿಂಗಾರವೇಲು ಮೊದಲಿಯಾರ್ ಅವರನ್ನು ಭೇಟಿಯಾಗಿ ಕಾಲೇಜಿಗೆ ಪ್ರವೇಶ ಪಡೆದನು. ಆದರೆ ಅಲ್ಲಿಯೂ ಕೂಡ ಅನಾರೋಗ್ಯದಿಂದಾಗಿ ಊರಿಗೆ ಮರಳಿದ ರಾಮಾನುಜಮ್ ಗೆ ಮದುವೆ ಮಾಡಿದರೆ ಬದುಕಿನಲ್ಲಿ ಜವಾಬ್ದಾರಿ ಬರುತ್ತದೆ ಎಂದು ಮದುವೆ ಮಾಡಿದರು. ಆತನ ಪತ್ನಿಯಾಗಿ ಬಂದ ಜಾನಕಿ ಅಮ್ಮಾಳ ಅತ್ಯಂತ ಚೆಲುವೆ ಮತ್ತು ಮುಗುದೆ ಕೂಡ.ಮನೆಯ ಖರ್ಚು ವೆಚ್ಚಗಳನ್ನು ತೂಗಿಸಲು ಗಿರಣಿಯೊಂದರಲ್ಲಿ ಲೆಕ್ಕಪತ್ರ ಬರೆಯಲು ಸೇರಿಕೊಂಡರು ರಾಮಾನುಜಮ್.
ತನ್ನ ಗುರುಗಳಾದ ರಾಮಕೃಷ್ಣ ಅಯ್ಯರ್ ಅವರ ಸಹಾಯದಿಂದ ಅಂದಿನ ಮದರಾಸು ಜಿಲ್ಲಾಧಿಕಾರಿಯಾದ ರಾವರನ್ನು ಭೇಟಿಯಾದ. ರಾಮಾನುಜಮನನ್ನು ಮೊದಮೊದಲು ಅಷ್ಟೇನು ಗಂಭೀರವಾಗಿ ಪರಿಗಣಿಸದ ರಾವ್ ರವರ ಕೈಗೆ ಆಕಸ್ಮಿಕವಾಗಿ ರಾಮನುಜಮ್ ನ ಗಣಿತ ಪುಸ್ತಕಗಳು ಗಮನ ಸೆಳೆದವು. ಆತನ ಅದ್ಭುತ ಪ್ರತಿಭೆಯನ್ನು ಕಂಡು ಕಲೆಕ್ಟರ್ ರಾವ್ 1912 ರಲ್ಲಿ ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ರೆಕಾರ್ಡ್ ಸೆಕ್ಷನ ನಲ್ಲಿ ಸಹಾಯಕನಾಗಿ ನೇಮಿಸಿದರು.
ಈ ಪೋರ್ಟ್ ಟ್ರಸ್ಟ್ ನ ಮುಖ್ಯಸ್ಥನಾಗಿದ್ದ
ಬ್ರಿಟಿಷ್ ಅಧಿಕಾರಿ ಸರ್ ಫ್ರಾನ್ಸಿಸ್ ಈತನ ಅದ್ಭುತ ಗಣಿತದ ಪಾಂಡಿತ್ಯವನ್ನು ಕಂಡು ಆತನಿಗೆ ಒಂದು ಕೋಣೆಯನ್ನೇ ಒದಗಿಸಿ ಎಲ್ಲ ರೀತಿಯ ಸಂಶೋಧನೆಗೆ ಅನುಕೂಲ ಮಾಡಿಕೊಟ್ಟರಲ್ಲದೆ ರಾಮಾನುಜಮ್ ಹಿತೈಷಿಯಾಗಿದ್ದ ಶೇಷು ಅಯ್ಯರ್ ಅವರ ಸಹಾಯದಿಂದ ಆತನ ಸಂಶೋಧನಾ ವಿಷಯಗಳ ರಿಸರ್ಚ್ ಪೇಪರ್ ಗಳನ್ನು ಕೇಂಬ್ರಿಡ್ಜ್ ಯೂನಿವರ್ಸಿಟಿ ಗೆ ಕಳುಹಿಸಿ ಕೊಟ್ಟರು. (ಇಷ್ಟರಲ್ಲಾದರೆ ಆತನ ಒಂದು ಸಂಶೋಧನಾ ವಿಷಯದ ಪೇಪರ್ ಇಂಗ್ಲೆಂಡಿನ ಮ್ಯಾಥೆಮ್ಯಾಟಿಕ್ಸ್ ಜರ್ನಲ್ ನಲ್ಲಿ ಪ್ರಕಟವಾಗಿ ಅಪಾರ ಖ್ಯಾತಿಗಳಿಸಿತ್ತು) ಮೊದಮೊದಲು ರಾಮಾನುಜಮ್ ಅವರ ಪೇಪರ್ ಗಳನ್ನು ಗಂಭೀರವಾಗಿ ಪರಿಗಣಿಸದ, ಕೇಂಬ್ರಿಡ್ಜ್ ಯೂನಿವರ್ಸಿಟಿಯ ಪ್ರಖ್ಯಾತ ಗಣಿತಜ್ಞರಾದ ಹಾರ್ಡಿ ಮತ್ತು ಲಿಟಲ್ ವುಡ್ ರಾಮಾನುಜಮ್ ಅವರ ರಿಸರ್ಚ್ ಪೇಪರ್ ಗಳನ್ನು ನೋಡಿ ದಂಗಾದರು. ಕೂಡಲೇ ಅವರನ್ನು ಕೇಂಬ್ರಿಡ್ಜ್ ಯುನಿವರ್ಸಿಟಿಗೆ ಕರೆತರಲು ವ್ಯವಸ್ಥೆ ಮಾಡಿದರು. 50 ವಿವಿಧ ರೀತಿಯ ಪ್ರಮೇಯಗಳನ್ನು ಬಿಡಿಸಿದ್ದ ರಾಮಾನುಜಂ ಕಂಟಿನ್ಯೂಡ್ ಫ್ರಾಕ್ಷನ್ ಮತ್ತು ಎಲೆಕ್ಟ್ರಿಕಲ್ ಫ್ರ್ಯಾಕ್ಷನ್ಗಳಲ್ಲಿ ಹೊಸ ದಿಕ್ಕನ್ನು ತೋರಿಸಿದ್ದರು.
ಎಫ್ ಎ ಪರೀಕ್ಷೆಯಲ್ಲಿ ಪಾಸಾಗದ ರಾಮಾನುಜಮ ರನ್ನು, ಕೇಂಬ್ರಿಡ್ಜ್ ಯೂನಿವರ್ಸಿಟಿಯ ಗಣಿತಜ್ಞರ ಸಲಹೆಯ ಮೇರೆಗೆ ಆತನ ಸಂಶೋಧನೆಗೆ ಅನುವು ಮಾಡಿಕೊಡಲು ಮದ್ರಾಸ್ ವಿಶ್ವವಿದ್ಯಾಲಯದ ಎಲ್ಲ ಗಣಿತ ಪ್ರೊಫೆಸರಗಳು ಒಪ್ಪಿಕೊಂಡರು.
ಈಗಾಗಲೇ ಗಣಿತದಲ್ಲಿ ಹೆಚ್ಚಿನ ಸಂಶೋಧನೆಗೆ ಕೇಂಬ್ರಿಡ್ಜ್ ಯೂನಿವರ್ಸಿಟಿಗೆ ತೆರಳಿದ್ದ ಭಾರತೀಯರಾದ ಪಿ ಸಿ ಮಹಾಲನೋಬಿಸ್ ಅವರೊಂದಿಗೆ ಚರ್ಚಿಸಿದ ಹಾರ್ಡಿ ಮತ್ತು ಲಿಟಲ್ ವುಡ್ ರಾಮಾನುಜಮರನ್ನು ಕೇಂಬ್ರಿಡ್ಜ್ ಯೂನಿವರ್ಸಿಟಿಗೆ ಕರೆಸಲು ಆತುರರಾಗಿದ್ದರು.
ಧರ್ಮ ಬಾಹಿರವಾಗಿ ಸಾಗರದಾಚೆ ಪಯಣಿಸಿ ವಿದ್ಯಾಭ್ಯಾಸಗೈದು ತಮ್ಮ ಗುರಿ ಮುಟ್ಟಲು ತನ್ನ ಕುಲದೇವಿ ನಾಮಕ್ಕಲ್ ನ ನಾಮಗಿರಿ ತಾಯಿಯ ಆಶೀರ್ವಾದ ಮತ್ತು ಹೂವಿನ ಪ್ರಸಾದದ ಸಮ್ಮತಿಯೊಂದಿಗೆ 1914ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ಗೆ ದಾಖಲಾದರು.
ಲಂಡನ್ ನ ಕಾಲೇಜಿನಲ್ಲಿ ಪೈ ಮೂಲ್ಯವನ್ನು ಅರಿಯಲು ಮಾಡ್ಯೂಲರ್ ಇಕ್ವೇಶನ ಪ್ರಯತ್ನದಲ್ಲಿ ರಾಮಾನುಜಮ್ ಇದ್ದರೆ, ಅತ್ತ ಗಣಿತಜ್ಞ ಹಾರ್ಡಿ ಎಲ್ಲ ಗಣಿತಜ್ಞರ ಸಭೆಯಲ್ಲಿ ರಾಮಾನುಜನ್ ಬಿಡಿಸಿದ ಲೆಕ್ಕಗಳ ಪುಸ್ತಕವನ್ನು ಪ್ರಸ್ತುತಪಡಿಸಿದನು. ಆತನ ಅದ್ಭುತ ಗಣಿತ ಪಾಂಡಿತ್ಯವನ್ನು ಕಂಡ ಅಲ್ಲಿದ್ದ ಗಣಿತಜ್ಞರು ಆಶ್ಚರ್ಯ ವ್ಯಕ್ತಪಡಿಸಿದರು. ಆತನಿಗೆ ಎಲ್ಲ ರೀತಿಯ ಸಹಕಾರ ನೀಡೋಣ ಎಂದು ಒಕ್ಕೊರಳಿನಿಂದ ಘೋಷಿಸಿದರು.
ಶುದ್ಧ ಶಾಖಾಹಾರಿಯಾದ ರಾಮನುಜಮ್ ಗೆ ಲಂಡನ್ ನ ತಂಪು ವಾತಾವರಣ ಒಗ್ಗಲಿಲ್ಲ. ಕೇಂಬ್ರಿಡ್ಜ್ ನ ಹಾಸ್ಟೆಲ್ನಲ್ಲಿ ವಾಸವಾಗಿದ್ದ ರಾಮಾನುಜಮ್ ಬೆಳಗಿನ ಜಾವವೇ ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಪೂರೈಸಿ, ಪೂಜೆ ಮಾಡಿ ಜೋರಾಗಿ ಹಾಡುತ್ತಾ, ಮಂಗಳಾರತಿ ಮಾಡುತ್ತಿದ್ದನು. ಇದನ್ನು ಕಂಡು ಆತನ ಸ್ನೇಹಿತರು ನಗಾಡುತ್ತಿದ್ದರು. ಅತ್ಯಂತ ಸೂಕ್ಷ್ಮ ಮನಸ್ಸಿನ ರಾಮಾನುಜಮ್ ಗೆ ಮನೆಯ, ಪತ್ನಿಯ ನೆನಪು ಇನ್ನಿಲ್ಲದಂತೆ ಕಾಡುತ್ತಿತ್ತು. ಹೂಗಳಲ್ಲಿ ಪತ್ನಿಯನ್ನು ಕಲ್ಪಿಸಿ ಮಾತನಾಡುತ್ತಿದ್ದ ಆತನನ್ನು ವಾಸ್ತವ ಜಗತ್ತಿನಲ್ಲಿ ತೇಲುತ್ತಿದ್ದ ಜನರು ಹುಚ್ಚನೆಂದು ಕರೆದು ಅವಮಾನಿಸಿದರು.
ಇತ್ತ ಆತನ ತಾಯಿ ಮಗನ ಓದಿಗೆ ತೊಂದರೆಯಾಗುವುದು ಎಂದು ಆತ ಬರೆದ ಯಾವೊಂದು ಪತ್ರಗಳನ್ನು ಆತನ ಪತ್ನಿಗೆ ದೊರೆಯದಂತೆ ಮಾಡಿದಳು. ಆಕೆ ಬರೆದ ಪತ್ರಗಳನ್ನು ಕೂಡ ಪೋಸ್ಟ್ ಮಾಡದಂತೆ ಗಂಡನಿಗೆ ನಿರ್ಬಂಧ ಹೇರಿದರು. ಪತ್ನಿಯಿಂದ ಕಾಗದ ಕೂಡ ಸಿಗದೇ ಹೋದಾಗ ರಾಮನುಜಮ್ ಮತ್ತಷ್ಟು ವ್ಯಾಕುಲ ಚಿತ್ತ ನಾದನು. ತನ್ನೊಂದಿಗೆ ಇರಲು ಪತ್ನಿಯನ್ನು ಕಳುಹಿಸಿಕೊಡು ಎಂಬ ರಾಮಾನುಜಮ್ ಪತ್ರಕ್ಕೆ ನಿನ್ನ ಅಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ತಾಯಿ ಮರುತ್ತರ ಕಳುಹಿಸಲು ಆತ ಮತ್ತಷ್ಟು ನೊಂದುಕೊಂಡನು. ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಪೊಲೀಸರ ಕೈಯಲ್ಲಿ ಸಿಕ್ಕು ಬಿದ್ದನು. ಬ್ರಿಟಿಷ್ ಕಾನೂನಿನಲ್ಲಿ ಆತ್ಮಹತ್ಯೆ ಅಪರಾಧ ಅದಕ್ಕೆ ಶಿಕ್ಷೆ ಇದೆ ಎಂಬುದನ್ನು ಅರಿಯದ ರಾಮಾನುಜಮ್ ನನ್ನು ಪ್ರಯಾಸ ಪಟ್ಟು ಹಾರ್ಡಿ, ಮಹಾಲನೋಬಿಸ್ ಮತ್ತು ಬ್ಯಾನರ್ಜಿ ಪೊಲೀಸ್ ಠಾಣೆಯಿಂದ ಮರಳಿ ಕರೆ ತಂದರು.
ರಾಮಾನುಜಮ್ ನ ಆರೋಗ್ಯ ಹದಗೆಡುತ್ತಿತ್ತು…. ವೈದ್ಯರು ಆತನ ಸಂಪೂರ್ಣ ತಪಾಸಣೆ ಮಾಡಿ ಆತನಲ್ಲಿ ಕ್ಷಯರೋಗ ಪತ್ತೆಯಾಗಿರುವುದನ್ನು ತಿಳಿಸಿದರು. ಪ್ರತ್ಯೇಕವಾಗಿ ಚಿಕಿತ್ಸೆ ನೀಡುವ ಸ್ಯಾನಿಟೋರಿಯಂ ನಲ್ಲಿ ಭರ್ತಿ ಮಾಡಿದರು. ಅಲ್ಲಿಯೂ ಕೂಡ ಸ್ವಲ್ಪವೂ ವಿಶ್ರಾಂತಿ ಪಡೆಯದೆ ಸದಾ ಅಂಕಗಳ ಜಗತ್ತಿನಲ್ಲಿ ರಾಮಾನುಜಮ್ ಮುಳುಗಿ ಹೋಗಿರುತ್ತಿದ್ದ.
ಅಂತಿಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ರಾಮಾನುಜಂಗೆ 1918ರ ಫೆಬ್ರುವರಿ 28 ರಂದು ಎಫ ಆರ್‌ಎಸ್ ಪದವಿಯನ್ನು ನೀಡಲಾದ ಸಂದೇಶವನ್ನು ಹೊತ್ತು ಬಂದ ಹಾರ್ಡಿ ಮತ್ತಿತರರು ಅಭಿನಂದಿಸಿದರು. ಐಡೆಂಟಿಟಿಸ್ ಗಳನ್ನು ಪರಿಹರಿಸಿದ ವಿಶ್ವದ 464 ಗಣಿತಜ್ಞರಲ್ಲಿ ಒಬ್ಬನಾದನು ರಾಮಾನುಜಮ್.
ರಾಮಾನುಜಮ್ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದಾದಾಗ ಆತನನ್ನು ಭಾರತಕ್ಕೆ ಮರಳಿ ಹೋಗುವಂತೆ ಹಾರ್ಡಿ ಸಲಹೆ ಮಾಡಿದ
ಈಗಾಗಲೇ ಫೆಲೋ ಆಫ್ ರಾಯಲ್ ಸೊಸೈಟಿ ಎಂದು ನಾಮಾಂಕಿತನಾಗಿದ್ದ ರಾಮಾನುಜಮ್ ಗೆ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಎಂದು ನೌಕರಿ ನೀಡಲಾಗಿದ್ದು ಎಫ್. ಆರ್. ಎಸ್ ನವರು ರಾಮಾನುಜಂಗೆ ಪ್ರತಿ ವರ್ಷ 3750 ಗಳ ವಾರ್ಷಿಕ ವೇತನವನ್ನು ಕೂಡ ನೀಡುತ್ತಿದ್ದರು. ಈಗಾಗಲೇ ವಿವಿಧ ಗಣಿತಜ್ಞರೊಂದಿಗೆ ಕೂಡಿ ಬರೆದ ಅವರ 21ಕ್ಕೂ ಹೆಚ್ಚು ಪ್ರಬಂಧಗಳು ಇಂಗ್ಲೆಂಡ್ ನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದವು.
1920ರಲ್ಲಿ ಮರಳಿ ಬಂದ ರಾಮಾನುಜಮ್ ರನ್ನು ಆತನ ತಾಯಿ ಮತ್ತು ತಮ್ಮ ಎದುರುಗೊಂಡರು. ಮರಳಿ ಮದ್ರಾಸಿಗೆ ಬಂದಾಗ ಹಿಂದೂ ನ್ಯೂಸ್ ಪತ್ರಿಕೆಯ ರಾಮಚಂದ್ರರಾವ್, ಆದಿ ನಾರಾಯಣ ಚಟ್ಟಿಯಾರ್, ಕಲೆಕ್ಟರ್ ರಾವ್, ಮದ್ರಾಸ್ ವಿಶ್ವವಿದ್ಯಾಲಯದ ಸಕಲ ಸಿಬ್ಬಂದಿ ವರ್ಗದವರು ರೈಲ್ವೆ ನಿಲ್ದಾಣದಲ್ಲಿ ಅವರನ್ನು ಎದುರುಗೊಂಡು ಅಭಿನಂದಿಸಿದರು.
ಮದರಾಸಿನಲ್ಲಿ ಅವರಿಗೆ ಉಳಿದುಕೊಳ್ಳಲು ಒಂದು ಪುಟ್ಟ ಬಂಗಲೆಯನ್ನು ಮತ್ತು ಆರೋಗ್ಯ ಸುಧಾರಣೆಗಾಗಿ ವೈದ್ಯರನ್ನು ಕೂಡ ಮದ್ರಾಸು ವಿಶ್ವವಿದ್ಯಾಲಯ ನಿಯುಕ್ತಿಗೊಳಿಸಿತ್ತು. ಇದೀಗ ಕೋಮಲತಮ್ಮಾಳ್ ಸೊಸೆಯನ್ನು ಕರೆಸಿದರು. ಬಹಳ ವರ್ಷಗಳ ನಂತರ ಪತಿ-ಪತ್ನಿಯರು ಮನ ಬಿಚ್ಚಿ ಮಾತನಾಡಿದರು. ಆದರೆ ರಾಮಾನುಜಮ್ ಅವರ ಕ್ಷಯ ರೋಗ ಉಲ್ಬಣವಾಗುತ್ತಲೇ ಹೋಯಿತು.
ಇದೇ ಸಮಯದಲ್ಲಿ ಅವರ 3750 ರೂಪಾಯಿಗಳ ವಾರ್ಷಿಕ ವೇತನ ದೊರೆತು ಅದರಲ್ಲಿ ಅರ್ಧ ಭಾಗವನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿದ ರಾಮಾನುಜಮ್ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ಆ ಹಣವನ್ನು ವಿನಿಯೋಗಿಸಿ ಎಂದು ವಿಶ್ವವಿದ್ಯಾಲಯವನ್ನು ಕೇಳಿಕೊಂಡರು.
ಅನಾರೋಗ್ಯ ಮತ್ತು ಚಿಕಿತ್ಸೆಯ ಮಧ್ಯದಲ್ಲಿಯೇ ಮಾಕ ಟೀಟ ಫಂಕ್ಷನ್ ಎಂಬ ಟ್ರಿಗ್ನಾಮೆಟ್ರಿಯ ಕಠಿಣ ಪ್ರಮೇಯವನ್ನು ಅವರು ಕಂಡುಹಿಡಿದದ್ದು.
ತೀವ್ರ ಅನಾರೋಗ್ಯದಿಂದ ಬಳಲಿದ ರಾಮಾನುಜಮ್ ಅವರು 27 ಏಪ್ರಿಲ್ 1920 ರಲ್ಲಿ ತೀರಿಕೊಂಡರು. ಆಗ ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ಜಗತ್ತಿನ ಅಪ್ರತಿಮ ಮೇಧಾವಿ ಗಣಿತಜ್ಞನಾದ ರಾಮಾನುಜಮ್ ಸಾಗರದ ಆಚೆ ಹೋಗಿ ಬಂದಿದ್ದು ಅದಕ್ಕೆ ಯಾವುದೇ ರೀತಿಯ ಪರಿಹಾರಾತ್ಮಕ ದೈವಕಾರ್ಯಗಳನ್ನು ಕೈಗೊಂಡಿಲ್ಲ ಎಂಬ ಕಾರಣವನ್ನು ಒಡ್ಡಿ ರಾಮಾನುಜಮ್ ರವರ ಸಂಸ್ಕಾರಕ್ಕೆ ಅವರ ಸ್ವಜಾತಿಯವರೇ ಬರದೇ ಹೋದದ್ದು ವಿಪರ್ಯಾಸವೇ ಸರಿ.
ಕಾಲಕ್ಕಿಂತ ಬಲು ಮುನ್ನ ಗಣಿತ ಲೋಕದಲ್ಲಿ ಚಲಿಸಿ ಹಲವಾರು ಫಾರ್ಮುಲಗಳನ್ನು ಕಂಡು ಹಿಡಿದಿದ್ದ ರಾಮಾನುಜಮ್ ಅವರ ಸಂಶೋಧನೆಗಳಲ್ಲಿನ ಸತ್ವ ಅಂದಿನ ಗಣಿತಜ್ಞರ ಬುದ್ಧಿಮತ್ತೆಗೆ ನಿಲುಕದ ನಕ್ಷತ್ರವಾಗಿತ್ತು. ರಾಮಾನುಜಮ್ ಅವರ ಸಂಶೋಧನೆಗಳನ್ನು ಇಂದು ಕ್ರಿಪ್ಟೋಲಜಿ, ಕ್ರಿಸ್ಟಲ್ಲಾಲಜಿ, ಆಸ್ಟ್ರೋಫಿಸಿಕ್ಸ್ ಗಳಲ್ಲಿ ಬಳಸಲಾಗುತ್ತಿದೆ. ಅನಾರೋಗ್ಯ ಪೀಡಿತರಾಗಿದ್ದಾಗ ಕಂಡುಹಿಡಿದ ಮಾಕ ಟೀಟಾ ಫಂಕ್ಷನ್… ಬ್ಲಾಕ್ ಹೋಲ್ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ ಎಂದು 2012ರಲ್ಲಿ ಅವರು ತೀರಿ ಹೋದ 90 ವರ್ಷಗಳ ನಂತರ ಜಗತ್ತಿನ ಅರಿವಿಗೆ ಬಂದಿದೆ.
ಜಗತ್ತು ಕಂಡ ಅತ್ಯಂತ ಮೇಧಾವಿ ಗಣಿತಜ್ಞರ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುವ ರಾಮಾನುಜಮ್ ಗಣಿತ ಲೋಕಕ್ಕೆ ನೀಡಿದ ಕೊಡುಗೆ ಅಭೂತಪೂರ್ವವಾದದ್ದು.
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್