ಬರಗಾಲದ ಸುಳಿಯೊಳಗೆ
ಬಿರುಕು ಬಿಟ್ಟ ಎದೆ ನೆಲದೊಳಗೆ
ತಳಮಳಿಸುವ ಭಾವ ಜೀವಗಳು
ಮುರುಕು ಮನದ ಗುಡಿಸಲೊಳಗೆ
ಕುದಿಯೆದ್ದ ರಾಗ ಮೇಳಗಳು..
ಪ್ರೀತಿಯಿರದ ಬದುಕಲಿ ಬರದ
ಬಿಸಿಲ ಬೇಗೆ ಕೊರಳಲಿ..
ತೋರಿಕೆಯ ಸ್ನೇಹ ಸುಳಿಯಲಿ
ನರಳಿದ ತಿಳಿಗೊಳಗಳು…
ಮಳೆ ಸುರಿಸದೇ ಹಾರಿಹೋದ
ಮೋಡಗಳ ಮಂಜುಗಣ್ಣಲಿ ನೋಡುತ
ಮೊಳಕೆಯೊಡೆಯದ ಬೀಜಗಳ
ಎದೆಯಳಲನು ಉಸುರುತ…
ಹಸಿರೊಡೆಯದ ಭೂತಾಯಿಯ
ಮಡಿಲಲಡಿಯಿಡುತ ..
ತಡವರಿಸಿದ ಹೆಜ್ಜೆಗಳ ಪಿಸುಮಾತಿನ
ದನಿಯನಾಲಿಸುತ….
ದನಕರುಗಳ ಆಕ್ರಂದನ ಕೂಗಿಗೆ
ಕಿವುಡಾಯಿತೆ ಹೃದಯ….
ಬಾರದಿರುವ ಮಳೆರಾಯನಿಗೆ
ಮೊರೆಯಿಡುತಿಹ ನೆಲದೊಡೆಯ…
ಸಾಗಿಹನು ಭೂತಾಯ ಮುದ್ದು
ಮಗನಿವನು ನೊಂದ ಮನದಿ…
ಜಗಕೆ ಅನ್ನ ನೀಡುವ ಯೋಗಿ
ಬರಗಾಲದ ಸುಳಿಯೊಳಗೆ ನಲುಗಿ….
—ಇಂದಿರಾ ಮೋಟೆಬೆನ್ನೂರ. ಬೆಳಗಾವಿ