ಪುಸ್ತಕ ಪರಿಚಯ
ಕೃತಿಯ ಶೀಷಿ೯ಕೆ……ಮದರಂಗಿ ಮಹೆಕ್(ಗಜಲ್ ಖುಷ್ಬು)
ಲೇಖಕರ ಹೆಸರು….ಡಾ.ಮಲ್ಲಿನಾಥ ಎಸ್ ತಳವಾರ* ಮೊ.೯೯೮೬೩೫೩೨೮೮
ಪ್ರಕಾಶನ……..ಸಿವಿಜಿ ಬುಕ್ಸ ಬೆಂಗಳೂರು .೫೬೦೦೫೮
ಮುದ್ರಿತ ವರ್ಷ…..೨೦೨೩, ಬೆಲೆ ೧೫೦₹
ಡಾ.ಮಲ್ಲಿನಾಥ ಎಸ್ ತಳವಾರ ಅವರು ಕಲಬುರಗಿ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದರು ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿಯೂ ಗಜಲ್ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಜಲ್ ರಚನೆ ಹಾಗೂ ಗಜಲ್ ರಚನಾ ಮೂಲಗಳ ಬಗ್ಗೆ ,ಛಂದಸ್ಸಿನ ಬಗ್ಗೆ ಅಧ್ಯಯನ ಮಾಡಿ ತಮ್ಮ ಗಜಲ್ ಕೃತಿಗಳಲ್ಲಿ ಬರೆದಿದ್ದಾರೆ. ಇವರು ಪ್ರಕಟಿತ ಕೃತಿಗಳಲ್ಲಿ ತಮ್ಮ ಗಜಲ್ ಗಳನ್ನು ಮಾತ್ರ ಪ್ರಕಟಿಸದೆ ಗಜಲ್ ಬರೆಯುವವರಿಗೆ ಉಪಯುಕ್ತ ವಾಗುವಂತೆ ಗಜಲ್ದ ರಚನಾ ಕ್ರಮದ ಬಗ್ಗೆ ವಿವರವಾಗಿ ಬರೆದಿದ್ದಾರೆ .ಇವರ *ಮದರಂಗಿ ಮಹೆಕ್*(ಗಜಲ್ ಖುಷ್ಬು )ಇದು ಇವರ ಐದನೇ ಗಜಲ್ ಕೃತಿಯಾಗಿದ್ದು ಇವರ ತಖಲ್ಲುಸನಾಮ “ಮಲ್ಲಿ” ಇದೆ. ಈ ಗಜಲ್ ಸಂಕಲನದಲ್ಲಿ ಗಜಲ್ ಬರೆಯುವಾಗ ಬಳಸುವ ಮತ್ಲಾ ,ರದೀಫ ,ಕಾಫಿಯ ,ಮಕ್ತಾ ಗಳು ಹೇಗಿರಬೇಕೆಂದು ವಿವರಿಸಿದ್ದಾರೆ. ಇದು ಕಲಿಯುವವರಿಗೆ ಒಂದು ಆಕಾರ ಗ್ರಂಥವಾಗಿದೆ .
ಗಜಲ್ ಎಂದರೆ ಏನೆಂದು ಮಲ್ಲಿನಾಥ್ ತಳವಾರ್ ಅವರು ತಮ್ಮದೇ ಆದ ಒಂದು ವ್ಯಾಖ್ಯಾನದಲ್ಲಿ ಹೀಗೆ ಹೇಳಿದ್ದಾರೆ “ಗಜಲ್ ಉರ್ದು ಕಾವ್ಯದ ಕೆನೆ ,ಘನತೆ ,ಗೌರವ ,ಪ್ರತಿಷ್ಠೆಗಳ ಪ್ರತೀಕ ,ಗಜಲ್ ಪ್ರೇಮ ಸಾಮ್ರಾಜ್ಞಿ ,ರಸ ಜಲಧಿ ,ಬದುಕಿನ ರುಚಿ ,ಆತ್ಮಾನಂದದ ತಂಬೆಳಕು ,ಅಧ್ಯಾತ್ಮದ ಮೆರಗು.ಗಜಲ್ ಎಂದರೆ ಉರ್ದು ಕಾವ್ಯದ ಕಂಬನಿಗಳು ,ವಿಶ್ವದ ಎಲ್ಲಾ ಅಸಹಾಯಕ ಯಾತನೆಗಳ ಅರ್ಥರೂಪವೇ ಇದರ ತಿರುಳು .ಈ ನೆಲೆಯಲ್ಲಿ ಗದಲ್ಗಳಲ್ಲಿ ಪ್ರೇಮ ಎನ್ನುವುದೇ ಒಂದು ಭಾಷೆ ಪ್ರೇಮಭಂಗುರ ,ಕ್ಷಣ ಬಂಗುರ, ಗಜಲ್ದನಾದ , ಬದುಕಿನ ನೋವುಗಳಿಗೆ ಸಾವೇ ಅಂತಿಮ ಸಾಂತ್ವನ , ಅಲ್ಲಿಯವರೆಗೆ ಹೃದಯ ಹೊತ್ತಿ ಉರಿಯಬೇಕು .ಆ ಜ್ವಾಲೆಯ ಕಂಪನ್ನು ಉಣಪಡಿಸುವುದೇ ಈ ಗಜಲ್ , ಅಂತೆಯೇ ಗಜಲ್ ಉರ್ದು ಕಾವ್ಯದ ಮುಕುಟವಾಗಿ ಪ್ರಜ್ವಲಿಸುತ್ತಿದೆ . ಗಜಲ್ ಸುಕೋಮಲ ಭಾವಗಳ ಅಭಿವ್ಯಕ್ತಿಗೆ ಉತ್ತಮ ಮಾಧ್ಯಮವಾಗಿದೆ ಎಂದು ಹೇಳುತ್ತಾರೆ .ಇದು ಮನುಕುಲದ ಸಮಗ್ರ ವಿಷಯಗಳನ್ನು ತನ್ನ ಒಡರೊಳಗೆ ಗರ್ಭಿಕರಿಸಿಕೊಂಡಿದೆ .ಗಜಲ್ ಬಾಹ್ಯ ಜಗತ್ತನ್ನು ಅತಿಕ್ರಮಿಸಿ ಅಲೌಕಿಕದ ಕಡೆಗೆ ನಮ್ಮನ್ನು ಒಯ್ಯುತ್ತದೆ. ” ಇದು ಡಾ. ಮಲ್ಲಿನಾಥ್ ತಳವಾರ್ ಅವರ ವ್ಯಾಖ್ಯಾನವಾಗಿದೆ.
*ಮದರಂಗಿ ಮಹೆಕ್(ಗಜಲ್ ಖುಷ್ಬು)* ಸಂಕಲನದಲ್ಲಿ ಒಟ್ಟು ೭೯ ಗಜಲ್ ಗಳ ಜೊತೆಗೆ “ಗಜಲ್ ನ ಪ್ಯಾಲಾ….ಮನದ ರಂಗೀಲಾ” ಎಂಬ ಶೀಷಿ೯ಕೆಯಲ್ಲಿ ಸುಮಾರು ೧೬ ಪುಟಗಳ ಸುದೀರ್ಘವಾದ ಲೇಖನವನ್ನು ಬರೆದಿದ್ದಾರೆ. ಈ ಲೇಖನದಲ್ಲಿ ಗಜಲ್ ಕಾವ್ಯದ ಬಂಧ ಮತ್ತು ಗಜಲ್ ದಲ್ಲಿ ಬರುವ ಮತ್ಲಾ,ರದೀಪ್, ಕಾಫಿಯ ,ಮಿಶ್ರಾ- ಎ – ಊಲ,ಮಿಶ್ರಾ- ಎ – ಸಾನಿ ,ಮಕ್ತಾ, ತಖಲ್ಲುಸನಾಮ, ಇವುಗಳನ್ನು ಹೇಗೆ ಬರಿಯ ಬೇಕು, ಯಾವ ರೀತಿಯಾಗಿರಬೇಕು ಎಂದು ಲೇಖನದಲ್ಲಿ ಉದಾಹರಣೆ ಸಹಿತ ವಿವರಿಸಿದ್ದಾರೆ .ಇದರ ಜೊತೆಗೆ ಗಜಲ್ ದಲ್ಲಿ ಲಯ, ಗೇಯತೆ ,ಛಂದಸ್ಸು ,ಮೃದು ಭಾಷೆ, ಮೀಟರ್ ,ಭಾವತೀವ್ರತೆ ಗಳ ಬಗ್ಗೆಯೂ ಸೊಗಸಾಗಿ ವಿವರಿಸಿದ್ದಾರೆ, ಗಜಲ್ ಒಂದು ಹಾಡುಗಬ್ಬ ವಾದ ಕಾರಣ ಮೇಲಿನ ಎಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಗಜಲ್ ರಚಿಸುವುದು ಅತ್ಯವಶ್ಯಕವಾಗಿದೆ ಎಂಬುವುದು ಸತ್ಯ.
*ಮದರಂಗಿ ಮಹಕ್ (ಗಜಲ್ ಖುಷ್ಬು)* ಸಂಕಲನಕ್ಕೆ ಖ್ಯಾತ ಗಜಲ್ ಕಾರರಾದ ಡಾ. ಜಯದೇವಿ ಗಾಯಕವಾಡ್ ಬೀದರ್ ಅವರು ಮೌಲಿಕವಾದ ಮುನ್ನುಡಿಯನ್ನು ಬರೆದಿದ್ದಾರೆ . ಇನ್ನೊಬ್ಬ ಖ್ಯಾತ ಗಜಲ್ ಕಾರರಾದ ಶ್ರೀದೇವಿ ಕೆರೆಮನೆ ಯವರು ತೌಲಿಕವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ .ಕೃತಿಯ ಮುಖ ಚಿತ್ರ ಸೊಗಸಾಗಿದೆ .ಸಂಕಲನವು ಓದುಗರಿಗೆ ಮುದ ನೀಡುತ್ತಾ ಓದಿಸಿಕೊಂಡು ಹೋಗುತ್ತದೆ .ಡಾ. ಮಲ್ಲಿನಾಥ್ ತಳವಾರ ಇವರ ಗಜಲ್ ಗಳಲ್ಲಿ ಗೇಯತೆ ,ಲಯ ,ಭಾವತೀವ್ರತೆ, ಮೃದು ಭಾಷಾ, ಸಾಮಾಜಿಕ ಕಳಕಳಿ, ಅಧ್ಯಾತ್ಮಿಕ ಚಿಂತನೆ ,ಮಹಿಳಾ ಸಂವೇದನೆಯನ್ನು ಕಾಣುತ್ತೇವೆ. ವಿಷಯ ವೈವಿಧ್ಯತೆಯಿಂದ ಕೂಡಿದ ಗಜಲ್ ಗಳು ಓದಿದಾಗ ಮನಕ್ಕೆ ಸಂತಸವಾಗುತ್ತದೆ .ವಿವಿಧ ಹೂಗಳಿಂದ ಕಟ್ಟಿದ ಸುಂದರವಾದ ಮಾಲೆ ತಯಾರಿಸಿ ಓದಿಗರಿಗೆ ಆಸ್ವಾದಿಸಲು ಕೊಟ್ಟಿದ್ದಾರೆ.
“ಸನ್ಮಾನ ಪುರಸ್ಕಾರಗಳಿಂದ ಮನುಷ್ಯರನ್ನು ಅಳೆಯಬೇಡ”
“ಸಾಧನೆಯ ಹೊಸ್ತಿಲಲ್ಲಿ ಎಡವಿದವರನ್ನು ಅವಮಾನಿಸಬೇಡ”. ( ಗ.೩)
ಮೇಲಿನ ಮತ್ಲಾದಲ್ಲಿ ಇಂದು ನಾವು ನಿತ್ಯ ಕಾಣುವ ವಿಷಯ ವನ್ನು ನಿರೂಪಿಸಿದ್ದಾರೆ. ಅನೇಕರಿಗೆ ಹೇರಳವಾಗಿ ಪ್ರಶಸ್ತಿ ಪುರಸ್ಕಾರಗಳು ಬರುತ್ತಿರುತ್ತವೆ,ಅವರು ಬಹಳ ಹೆಮ್ಮೆ ಯಿಂದ ಹೇಳಿಕೊಳ್ಳುತ್ತಿರುತ್ತಾರೆ,ಕೆಲವರು ಅವರು ಬಹಳ ಬುದ್ಧಿ ವಂತರೆಂದು ತಿಳಿದು ಕೊಳ್ಳುತ್ತಾರೆ.ಅದಕ್ಕಾಗಿ ಗಜಲ್ ಕಾರರು ಬಂದ ಪ್ರಶಸ್ತಿ,ಪುರಸ್ಕಾರಗಳಿಂದ ಮನುಷ್ಯರನ್ನು ಅಳಿಯ ಬೇಡಿ,ಪುರಸ್ಕಾರ ಬರದವರು ದಡ್ಡರೆಂದು ಅವಮಾನಿಸ ಬೇಡಿ ಎಂದು ತಮ್ಮ ಮನಸಿನ ತಳಮಳವನ್ನು ದುಗುಡವನ್ನು ಗಜಲ್ ದಲ್ಲಿ ಬಿತ್ತರಿಸಿದ್ದಾರೆ,ಹಾಗೂ ಓದುಗರನ್ನು ಚಿಂತನೆಗೆ ಹಚ್ಚಿದ್ದಾರೆ.
” ತನುವಿನಾಸೆಯ ಬಿಟ್ಟು ಮಹಾದೇವಿ ಅಕ್ಕ ಮಹಾದೇವಿಯಾಗಿ ಬಾಳಿದಳು”
“ಲೌಕಿಕದ ಕಾಮವಾಸನೆಯ ಗೆದ್ದು ಶರಣಮಾರ್ಗದಲ್ಲಿ ಅನುಪಮ ಅನುದಿನ ನಡೆದಳು” ( ಗ೧೬)
ಈ ಗಜಲ್ ದಲ್ಲಿ ಶರಣೆ ಅಕ್ಕಮಹಾದೇವಿಯ ಮಾನಸಿಕ ನಿಗ್ರಹ ಮತ್ತು ಲೌಕಿಕ ವಾಸನೆಗಳನ್ನು ತೊರೆದು ಅಲೌಕಿಕ ಮಾರ್ಗದಿಂದ ತನ್ನ ಜೀವನ ಸವಿಸಿ ವೈರಾಗ್ಯಿಣಿಯಾಗಿ ಶರಣ ಸತಿ ಲಿಂಗ ಪತಿ ಎಂದು ಮಲ್ಲಿಕಾರ್ಜನನ್ನು ತನ್ನ ಬಾಳ ಸಂಗಾತಿಯಾಗಿ ಮಾಡಿಕೊಂಡು ಮಾಯೆ,ಮೋಹ ಗಳನ್ನು ದಿಕ್ಕರಿಸಿ ಜಗದಲ್ಲಿ ಶ್ರೇಷ್ಠ ವೈರಾಗಿಣಿಯಾದದನ್ನು ಸೊಗಸಾಗಿ ಗಜಲ್ ದಲ್ಲಿ ಕವಿ ಬಿಂಬಿಸಿದ್ದಾರೆ.
“ಎಳೆಯ ಚಿಣ್ಣರ ಅಂಗಗಳು ಬಿಕರಿ ಆಗುತ್ತಿವೆ ಹಸಿವಿನ ಬಜಾರಿನಲ್ಲಿ”
“ಮಾಯಾವಿ ಕಾಲವುಂಕುಣಿಯುತಿದೆ ಹರಕು ಬಚ್ಚಲಿನ ಚಿಲ್ಲರೆಯಲ್ಲಿ”. (ಗ ೨೯)
ಇಂದು ಸಮಾಜದಲ್ಲಿ ತೆರೆಯ ಮರೆಯ ಹಿಂದೆ ನಡೆಯುವ ಅನೇಕ ಅಪರಾಧಗಳ ಸರಮಾಲೆಯನ್ನೇ ಕವಿ ಈ ಗಜಲದಲ್ಲಿ ಬಹಿರಂಗ ಪಡಿಸಿದ್ದಾರೆ ಬಡತನದ ಬೇಗೆಯಲ್ಲಿ ಬೇಯುವ ಜನ ಹಸಿವು ಹಿಂಗಿಸಿಕೊಳ್ಳಲು ತಮ್ಮ ಕರುಳ ಕುಡಿಯನ್ನೇ ಮಾರುವುದು, ಮಕ್ಕಳನ್ನು ಭಿಕ್ಷೆ ಬೇಡಲು ಹಚ್ಚುವುದು, ಅಪ್ರಾಪ್ತ ಮಹಿಳೆಯರನ್ನು ಮತ್ತು ಹಸಿವಿನಿಂದ ಬಳಲುತ್ತಿರುವ ಬಡ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವುದು ನಿತ್ಯವೂ ನಡೆಯುತ್ತಿದೆ ಕಾನೂನು ತನ್ನ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕುಳಿತಿದೆ ಯಾವ ಅಪರಾಧಗಳನ್ನು ತಡೆಯಲು ಸರಕಾರಕ್ಕೆ ಆಗುತ್ತಿಲ್ಲವೆಂದು ತಮ್ಮ ಮನದ ನೋವನ್ನು ಕವಿ ಗಜಲ್ ದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ
” ನಿಸರ್ಗದಲ್ಲಿರದ ಲಿಂಗತಾರತಮ್ಯದ ಬೀಜ ಮೊಳಕೆ ಒಡೆದದ್ದು ಕುಟುಂಬದಲ್ಲಿ”
“ಗಂಡು ಮಗುವೆ ಹೆಚ್ಚೆಂಬ ಹುಚ್ಚು ಭ್ರಮೆ ಹುಟ್ಟಿದ್ದು ಮಮತೆಯ ಮಡಿಲಲ್ಲಿ” ( ಗ೩೪)
ನಾವು ಇಂದು 21ನೇ ಶತಮಾನದಲ್ಲಿ ಇದ್ದು ವೈಜ್ಞಾನಿಕವಾಗಿ ಸಾಕಷ್ಟು ಸುಧಾರಣೆ ಹೊಂದಿ ಹೊಸ ಹೊಸ ಗ್ರಹಗಳಿಗೆ ಪಾದರ್ಪಣೆ ಮಾಡಿದರು ಇನ್ನೂ ನಮ್ಮಲ್ಲಿ ಲಿಂಗ ಭೇದ ಹೋಗಿಲ್ಲ ಹೆಣ್ಣಿಗೆ ಒಂದ ನ್ಯಾಯ ಗಂಡಿಗೆ ಒಂದು ನಿಯಮ ,ಪಾಲಕರಿಂದಲೇ ಬಾಲ್ಯದಿಂದಲೇ ಪ್ರಾರಂಭವಾಗುವುದನ್ನು ಕವಿ ಸುಂದರವಾಗಿ ಉದಾಹರಣೆಗಳನ್ನು ಮಂಡಿಸುತ್ತಾ ಗಜಲ್ ದಲ್ಲಿ ವಿವರಿಸಿದ್ದಾರೆ ಮೊದಲು ಪಾಲಕರು ಮಕ್ಕಳೆಲ್ಲ ಒಂದೇ ಎಂಬ ಭಾವದಿಂದ ಬೆಳೆಸಿದರೆ ಈ ಲಿಂಗ ಭೇದ ಅಳೆಯುತ್ತದೆ ನಿಸರ್ಗದಲ್ಲಿ ಜೀವಿಸುವ ಪ್ರಾಣಿ ಪಶು ಪಕ್ಷಿಗಳಲ್ಲಿ ಇಲ್ಲದ ಲಿಂಗ ಭೇದ ಮಾನವ ಜನಾಂಗದಲ್ಲಿ ನಾವು ಕಾಣುತ್ತೇವೆ. ಇದಕ್ಕೆ ಮೂಲ ಪಾಲಕರು ಮತ್ತು ಮನೆಯಲ್ಲಿಯೇ ತಾರತಮ್ಯ ನಡೆಯುತ್ತದೆಂದು ಗಜಲ್ ಕಾರರು ತಮ್ಮ ಗಜಲ್ ದಲ್ಲಿ ಬಿತ್ತರಿಸಿದ್ದಾರೆ.
“ನಿನ್ನ ಪ್ರೇಮದ ಸಲುವಾಗಿ ಆ ಸ್ವರ್ಗವನ್ನೇ ಧಕ್ಕರಿಸುವೆನು”
“ಆತ್ಮದ ಕಣಕಣದಲ್ಲೂ ನಿನ್ನನ್ನೇ ಆವರಿಸಿಕೊಂಡು ಪ್ರೀತಿಸುವೆನು” ( ಗ೪೩)
ಪ್ರಿಯತಮೆಯ ಪ್ರೀತಿಯನ್ನು ಪಡೆಯುವ ಸಲುವಾಗಿ ಎಲ್ಲವನ್ನು ಧಿಕ್ಕರಿಸುತ್ತೇನೆ. ಸ್ವರ್ಗದ ಸುಖ ಸಂಪತ್ತು ಐಶ್ವರ್ಯ ಎಲ್ಲವನ್ನು ನಾನು ನಿನಗಾಗಿ ದಿಕ್ಕರಿಸಲು ಸಿದ್ಧನಿರುವೆ. ನೀನು ನನ್ನ ಆತ್ಮದ ಕಣಕಣದಲ್ಲೂ ನೀನೇ ಆವರಿಸಿರುವೆ ನಿನ್ನ ಹೊರತಾಗಿ ಬೇರೇನೂ ಕಾಣೆ ಎಂದು ಇಲ್ಲಿ ಪ್ರೀತಿಯ ಪ್ರಬಲತೆಯನ್ನು ಮೋಹವನ್ನು ಕವಿ ಗಜಲ್ ದಲ್ಲಿ ಸುಂದರವಾಗಿ ಮಂಡಿಸಿದ್ದಾರೆ ಈ ಗಜಲ್ ಓದಿದಾಗ ಬಸವಣ್ಣವರ ಒಂದು ವಚನ ನೆನಪಾಯಿತು ,”ಕರಿಯನಿತ್ತರು ಒಲ್ಲೆ ಸಿರಿಯನಿತ್ತರು ಒಲ್ಲೆ,” ಎಂದು ಹೇಳುತ್ತಾ ನೀವಲ್ಲದೆ ಬೇರೆ ಏನೂ ಬೇಕಾಗಿಲ್ಲ ವೆಂದು ಬಸವಣ್ಣನವರು ಕೂಡಲಸಂಗಮನಾಥನಿಗೆ ಹೇಳುವಂತೆ ಪ್ರೇಮಿ ಇಲ್ಲಿ ಪ್ರಿಯತಮೆಗೆ ಜಗದ ಎಲ್ಲಾ ಸುಖವನ್ನು ನಿನಗಾಗಿ ಬಿಡಲು ನಾನು ಸಿದ್ಧನಿರುವೆನೆಂದು ಮನದ ಆಸೆಯನ್ನು ಗಜದಲ್ಲಿ ವ್ಯಕ್ತಪಡಿಸಿದ್ದಾರೆ. ಇದು ನಿಜವಾದ ಒಬ್ಬ ಪ್ರೇಮಿಗೆ ಇರಬೇಕಾದ ನಿಷ್ಠೆ .ಕವಿ ತಮ್ಮ ಗಜಲ್ ದಲ್ಲಿ ಸೊಗಸಾಗಿ ನಿವೇದಿಸಿಕೊಂಡಿದ್ದಾರೆ.
“ಹೃದಯವು ಬಜಾರಿನ ಬೀದಿಯಲ್ಲಿ ಬಿಕರಿ ಆಗುವ ವಸ್ತುವಲ್ಲ”
“ನನ್ನ ಬಾಳು ವಾಯು ವಿಹಾರಕ್ಕೆಂದು ಸುತ್ತಾಡುವ ಉದ್ಯಾನವಲ್ಲ”. (ಗ೬೦)
ನಾವು ನಿತ್ಯ ಸಮಾಜದಲ್ಲಿ ಆಗುವ ವಿವಾಹ ವಿಚ್ಛೇದನೆ ಲೈಂಗಿಕ ಶೋಷಣೆ ಪ್ರೀತಿಯಲ್ಲಿ ಮೋಸ ಮಾಡುವುದನ್ನು ಕಾಣುತ್ತೇವೆ ಅದಕ್ಕಾಗಿ ಗಜಲ್ ಕಾಲರು ಹೃದಯವು ಬಜಾರದಲ್ಲಿ ಬಿಕರಯಾಗುವ ವಸ್ತುವಲ್ಲ ,ಬದುಕು ಎಂಬುವುದು ವಿಹಾರಕ್ಕೆ ಎಂದು ಸುತ್ತಾಡುವ ಉದ್ಯಾನವನ ಅಲ್ಲವೆಂದು ಮಾಮಿ೯ಕವಾಗಿ ಸಮಾಜದಲ್ಲಿ ಮೋಸ ಮಾಡುವವರಿಗೆ ಪ್ರಶ್ನಿಸಿದ್ದಾರೆ .ಪ್ರೀತಿ ಪ್ರೇಮದ ಹೆಸರಿನಲ್ಲಿ ದೇಹದ ಹಸಿವು ತೀರಿಸಿಕೊಂಡು ಹೆಣ್ಣನ್ನು ತ್ಯಜಿಸಿ ಹೋಗುವ ಭಂಡರಿಗೆ ಎಚ್ಚರಿಕೆಯನ್ನು ಈ ಗಜದಲ್ಲಿ ಹೇಳಿದ್ದಾರೆ .
“ಮದರಂಗಿ ಮಹೆಕ್( ಗಜಲ್ ಖುಷ್ಬು )”ಸಂಕಲದಲ್ಲಿ ಪ್ರೀತಿ ,ಪ್ರೇಮ, ಅನುರಾಗದ, ಸಾಮಾಜಿಕ, ಮಾನವೀಯ ಮೌಲ್ಯಗಳ ಕುರಿತು ಚಿಂತನೆಗೆ ಹಚ್ಚುವ ಅನೇಕ ಹೊಸತನದ ಭಾವ ಹೊತ್ತ ಗಜಲ್ ಗಳು ಇವೆ. ಓದುಗಳನ್ನು ತಣಿಸುವುದರ ಜೊತೆಗೆ ಚಿಂತನೆಗೆ ಹಚ್ಚುತ್ತವೆ .ಗಜಲ್ದ ಭಾಷೆ ಮೃದುವಾಗಿದ್ದು ಗೇಯತೆ, ಲಯದಿಂದ ಓದುಗರ ಗಮನವನ್ನು ಸೆಳೆಯುತ್ತವೆ .ಗಜಲ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ ಡಾ. ಮಲ್ಲಿನಾಥ ಎಸ್ ತಳವಾರ ಅವರ ಲೇಖಣಿಯಿಂದ ಇನ್ನೂ ಅನೇಕ ಗಜಲ್ ಗಳು ಹೊರಬರಲೆಂದು ಶುಭ ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ