ಪ್ರೇಮಿಗಳ ದಿನಾಚರಣೆ

ಪ್ರೇಮಿಗಳ ದಿನಾಚರಣೆ

(ಕಾಲಾಯ ತಸ್ಮೈ ನಮಃ)

ಪ್ರತಿ ವರ್ಷ ಫೆಬ್ರುವರಿ ತಿಂಗಳು ಬಂತೆಂದರೆ ವಿಶ್ವದಾದ್ಯಂತ ಯುವ ಜನರಿಗೆ ಹೊಸ ಹುಮ್ಮಸ್ಸು, ಉತ್ಸಾಹ ಎಂದೆಂದೂ ಕಾಣದಷ್ಟು ನವೋಲ್ಲಾಸ. ಕಾರಣ ಫೆಬ್ರುವರಿ ಪ್ರೇಮಿಗಳ ಮಾಸ ಎಂದೇ ಕರೆಯಲ್ಪಟ್ಟ ತಿಂಗಳಾಗಿದೆ.

ಪ್ರೇಮಿಗಳ ದಿನಾಚರಣೆಯನ್ನು ಫೆಬ್ರುವರಿ ತಿಂಗಳಲ್ಲಿಯೇ ಆಚರಿಸಲು ಕಾರಣ ಹೀಗಿದೆ. ರೋಮ ದೇಶದ ಪೌರಾಣಿಕ ಹಿನ್ನೆಲೆಯನ್ನು ಗಮನಿಸಿದರೆ ಶುಕ್ರನ ಮಗನಾದ ಕ್ಯುಪಿಡ್ ಎಂಬ ವ್ಯಕ್ತಿ ಸೌಂದರ್ಯ ಮತ್ತು ಪ್ರೀತಿಗೆ ಹೆಸರಾಗಿದ್ದು ಆತನು ಬಿಲ್ಲಿಗೆ ಬಾಣವನ್ನು ಹೂಡಿ ಹೃದಯಕ್ಕೆ ತಾಗಿಸಿದ.. ಇದನ್ನು ಪ್ರೇಮಿಗಳ ದಿನ ಎಂದು ಕರೆದರು.

ಇನ್ನೊಂದು ಆಖ್ಯಾಯಿಕೆಯ ಪ್ರಕಾರ… 14 ಮತ್ತು 15ನೇ ಶತಮಾನದ ಮಧ್ಯ ಭಾಗದಲ್ಲಿ ಯುದ್ಧ ಪಿಪಾಸುವಾದ ಕ್ಯಾಡಿಲಸ್ ಎಂಬ ರೋಮನ ದೊರೆ ಯುದ್ಧ ಮುಗಿಯುವವರೆಗೆ ತನ್ನ ಸೈನಿಕರಿಗೆ ವಿವಾಹವಾಗಲು ಬಿಡುತ್ತಿರಲಿಲ್ಲ. ಸದಾ ಯುದ್ಧದಲ್ಲಿ ನಿರತರಾಗಿ ಮದುವೆಯಾಗಲು ಸಾಧ್ಯವಾಗದ ಸೈನಿಕರ ವಿವಾಹವನ್ನು ಅವರು ಇಚ್ಚಿಸಿದ ಯುವತಿಯೊಂದಿಗೆ ಗುಟ್ಟಾಗಿ ನಡೆಸಿಕೊಡುತ್ತಿದ್ದ ವ್ಯಕ್ತಿ ಸಂತ ವ್ಯಾಲೆಂಟೈನ್. ಈ ವಿಷಯ ಕ್ಯಾಡಿಲಸ್ ದೊರೆಗೆ ಗೊತ್ತಾಯಿತು. ಕುಪಿತನಾದ ದೊರೆ ಸಂತ ವ್ಯಾಲೆಂಟೈನ್ ನನ್ನು ಗಲ್ಲಿಗೇರಿಸಿದ. ಹಾಗೆ ಆತ ಗಲ್ಲಿಗೇರಿಸಿದ ದಿನ ಫೆಬ್ರುವರಿ 14 ಆಗಿತ್ತು. ಮುಂದೆ ರಾಜನನ್ನು ವಿರೋಧಿಸಿ ಪ್ರತಿ ವರ್ಷ ಫೆಬ್ರುವರಿ 14ನ್ನು ಸಂತ ವ್ಯಾಲೆಂಟೈನ್ ನ ನೆನಪಿನಲ್ಲಿ ಪ್ರೇಮಿಗಳ ದಿನವಾಗಿ ಆಚರಿಸಲು ಆರಂಭಿಸಿದರು.

ಭಾರತ ದೇಶದಲ್ಲಿ ಕೂಡ ಪ್ರೇಮಕ್ಕೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ತಾನು ಪ್ರೀತಿಸಿದ ವ್ಯಕ್ತಿಯ ಬೆರಳು ಕೂಡ ಸೋಕದೆ ಮನದಲ್ಲಿಟ್ಟು ಆರಾಧಿಸುವ ಪ್ಲೆಟಾನಿಕ್ ಲವ್ ನಿಂದ ಹಿಡಿದು, ತಾವು ಪ್ರೀತಿಸಿದ ಸಂಗಾತಿಗೆ ಬರೆದ ಪತ್ರವನ್ನು ಅವರಿಗೆ ಕೊಡುವ ಧೈರ್ಯವಾಗದೆ ತಮ್ಮ ಬಳಿಗೆ ಇಟ್ಟುಕೊಂಡ ಪ್ರೇಮಿಗಳವರೆಗೆ, ಪ್ರೇಮ ನಿವೇದನೆ ಮಾಡದೆ ತಾವು ಪ್ರೀತಿಸಿದ ಯುವತಿ ಮದುವೆಯಾಗಿ ಹೋಗುವುದನ್ನು ನೋಡಿದವರೇ ಬಹಳಷ್ಟು ಜನ. ಅವರ ಪ್ರೀತಿ ಜೀವನದ ಕೊನೆಗಾಲದವರೆಗೂ ಒಂದು ಮಧುರ ನೋವಾಗಿ ಮನಸ್ಸಿನ ಚಾದರದಲ್ಲಿ ಬೆಚ್ಚಗಿರುತ್ತದೆ.

ಶಿವ ಪಾರ್ವತಿಯರ ಕಲ್ಯಾಣಕ್ಕಾಗಿ ತನ್ನನ್ನು ತಾನು ಬಲಿಕೊಟ್ಟುಕೊಂಡ ಅನಂಗನಾದ ಮನ್ಮಥ ಮತ್ತು ರತಿ, ನಳ ಮತ್ತು ದಮಯಂತಿ, ದುಶ್ಯಂತ ಮತ್ತು ಶಕುಂತಲೆ, ರಾಧಾ ಮತ್ತು ಕೃಷ್ಣ ಇವರು ಕೂಡ ಪ್ರೇಮದ ಪತಿ ರೂಪಗಳೇ. ಆದರೆ ಇವರೆಡೆ ನಮಗೆ ಚಿಮ್ಮಿದ್ದು ಭಕ್ತಿ ಭಾವ.

ಹರೆಯದ ವಯಸ್ಸುಗಳಿಗೆ ಪ್ರೀತಿ ಒಂದು ಮಧುರವಾದ ಯಾತನೆ. ವಯೋ ಸಹಜವಾಗಿ ಗಂಡು ಹೆಣ್ಣಿನಲ್ಲಿ ಪರಸ್ಪರ ಇರುವ ಸ್ನೇಹ ಆಕರ್ಷಣೆಯಾಗಿ ಕಾಲಾಂತರದಲ್ಲಿ ಪ್ರೀತಿಯಾಗಿ ಬದಲಾಗುತ್ತದೆ. .ಹರೆಯದ ಬಯಕೆಗಳಿಗೆ ಪ್ರೀತಿಯ ಹೆಸರಿಟ್ಟು ಪ್ರೇಮದ ಅಮಲಿನಲ್ಲಿ ಹುಚ್ಚಾಟಕ್ಕೆ ಬಲಿಯಾಗದೆ ಪ್ರಬುದ್ಧವಾದ ಪ್ರೇಮ ನಿವೇದನೆ ಇರಬೇಕು.ಪ್ರೀತಿ ಪ್ರೇಮವಾಗಿ ಬದಲಾಗುವ ಮುನ್ನ ಪ್ರೇಮಿಗಳು ಹಲವಾರು ಅಗ್ನಿಪರೀಕ್ಷೆಗಳನ್ನು ಎದುರಿಸಿ ತಮ್ಮ ಕಾಲ ಮೇಲೆ ತಾವು ಸ್ವತಂತ್ರವಾಗಿ ನಿಲ್ಲಬೇಕು…. ಕಾಲನ ಒರೆಯಲ್ಲಿ ತಮ್ಮ ಪ್ರೀತಿಯನ್ನು ಪರೀಕ್ಷಿಸಿ ಪಕ್ವವಾಗಿಸಿಕೊಳ್ಳಬೇಕು.

ಇತ್ತೀಚೆಗೆ ಕೊಳ್ಳುಬಾಕ ಸಂಸ್ಕೃತಿಯ ಕಾರಣದಿಂದಾಗಿ ಎಲ್ಲವನ್ನು ಕಮರ್ಷಿಯಲ್ ಆಗಿ ನೋಡುವ ಬಹು ರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ,ಜಾಹೀರಾತಿಗಾಗಿ ಕೆಲ ವಿಶೇಷ ಸಂದರ್ಭಗಳನ್ನು ವಿಶೇಷವಾದ ರಿಯಾಯಿತಿ ಕೊಡುವ ಮೂಲಕ ಹೆಚ್ಚು ಹೆಚ್ಚು ಆಕರ್ಷಣೀಯವಾಗಿ ಆಚರಿಸಲು ಅನುವು ಮಾಡಿಕೊಡುತ್ತಿದ್ದಾರೆ. ಅವುಗಳಲ್ಲಿ ಪ್ರೇಮಿಗಳ ದಿನಾಚರಣೆಯು ಒಂದು. ನಿಜವಾದ ಪ್ರೀತಿ ಪ್ರೇಮಗಳು ಹಿನ್ನೆಲೆಯಲ್ಲಿ ಉಳಿದು ತೋರಿಕೆಯ ಕೇಕ್ ಕಟ್ಟಿಂಗ್, ಅಲಂಕಾರಗಳು, ಇವೆಂಟ್ಗಳನ್ನು, ಪಾರ್ಟಿಗಳನ್ನು ವಿವಿಧ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಆಯೋಜಿಸುತ್ತಿದ್ದಾರೆ. ಪ್ರೇಮಿಗಳ ದಿನದಂದು ಪರಸ್ಪರ ಒಬ್ಬರಿಗೊಬ್ಬರು ಉಡುಗೊರೆ ಕೊಟ್ಟುಕೊಳ್ಳುವುದು, ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು, ಪ್ರವಾಸ ಹೋಗುವುದು, ಮೋಜು-ಮಸ್ತಿಯ ಪಾರ್ಟಿ ಮಾಡುವುದು ಹೀಗೆ ಹತ್ತು ಹಲವು ಯೋಜನೆಗಳನ್ನು ಪ್ರೇಮಿಗಳು ಹಾಕಿಕೊಳ್ಳುತ್ತಾರೆ. ಇತ್ತೀಚೆಗಂತೂ ವಾರಗಟ್ಟಲೆ ವ್ಯಾಲೆಂಟೈನ್ಸ್ ವೀಕ್ ಆಚರಿಸುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿದೆ. ವ್ಯಾಲೆಂಟೈನ್ಸ್ ವೀಕ್ ನಲ್ಲಿ ಪ್ರವಾಸೋದ್ಯಮ ಕೂಡ ಉತ್ತುಂಗವನ್ನು ಕಾಣುತ್ತದೆ

ಇನ್ನು ಕಾರ್ಪೊರೇಟ್ ಜಗತ್ತಿನಲ್ಲಿ ಬದುಕಿರುವ, ಕೊಳ್ಳುಬಾಕ ಸಂಸ್ಕೃತಿಯ ಶಿಶುಗಳಾಗಿರುವ ಇಂದಿನ ಯುವ ಪೀಳಿಗೆಗೆ ಪ್ರೇಮಿಗಳ ದಿನಾಚರಣೆಯಂದು ತಾವು ಪ್ರೀತಿಸುತ್ತೇವೆ ಎಂದುಕೊಂಡ ವ್ಯಕ್ತಿಗೆ ಹೂವು, ಟೆಡ್ಡಿ ಬೇರ್ ಗಳು, ದುಬಾರಿ ಗಿಫ್ಟುಗಳು, ಮದುವೆಯಾದವರಾದರೆ ತಮ್ಮ ಸಂಗಾತಿಯನ್ನು ಸಂತೋಷಪಡಿಸಲು ಚಿನ್ನ, ಬೆಳ್ಳಿ, ವಜ್ರದ ಪುಟ್ಟ ಒಡವೆಗಳು, ಕಾರು ಸ್ಕೂಟಿ ಗಳಂತಹ ವಾಹನಗಳನ್ನು, ಐಶಾರಾಮಿ ಜೀವನ ನಡೆಸುವವರು ಅದಕ್ಕಿಂತ ಹೆಚ್ಚಿನ ದುಬಾರಿ ವಸ್ತುಗಳನ್ನು ಕೊಟ್ಟು ತಮ್ಮ ಪ್ರೇಮವನ್ನು ಜಗಜ್ಜಾಹೀರು ಮಾಡಿಕೊಳ್ಳಲು ಫೆಬ್ರುವರಿ ತಿಂಗಳ 14ರಂದು ಜಗತ್ತಿನಾದ್ಯಂತ ಆಚರಿಸಲ್ಪಡುವ ಪ್ರೇಮಿಗಳ ದಿನವನ್ನು ಆರಿಸಿಕೊಳ್ಳುತ್ತಾರೆ. ಇಲ್ಲಿ ಆಚರಣೆಯ ಮುಖ್ಯ ಉದ್ದೇಶ ಆಡಂಬರವೇ ಆಗಿರುತ್ತದೆ. ಪ್ರೀತಿಸಿದ್ದೇವೆ ಎಂಬುದಕ್ಕಿಂತ ಮುಖ್ಯವಾಗಿ ಪ್ರೀತಿಸಿರುವುದನ್ನು ಜಗತ್ತಿಗೆ ಸಾರುವುದಾಗಿರುತ್ತದೆ.

ಬದುಕು ಜಾಹಿರಾತುಗಳಂತಲ್ಲ… ಪ್ರೀತಿ ಪ್ರೇಮಗಳು ಹರೆಯದ ಕಾವಿನ, ಹುಚ್ಚು ಆಕರ್ಷಣೆಯ ಸವಕಲು ನಾಣ್ಯಗಳಲ್ಲ. ಕಣ್ಣು ಕೋರೈಸುವ ದೀಪದ ಅಡಿಯಲ್ಲಿಯೆ ಕತ್ತಲಿರುತ್ತದೆ, ಬಣ್ಣ ಬಣ್ಣದ ಕನಸುಗಳ ಹಿಂದೆ ತಂದೆ ತಾಯಿಯ ತ್ಯಾಗದ ಹೊನಲಿದೆ. ಪ್ರೀತಿ ಕೇವಲ ದೈಹಿಕ ಆಕರ್ಷಣೆಯಲ್ಲ ಪ್ರೀತಿ ಉಡುಗೊರೆಗಳನ್ನು ಬಯಸುವುದಿಲ್ಲ. ಪ್ರೀತಿ ಮನಸುಗಳ ಮಿಲನ… ದೇಹಗಳದ್ದಲ್ಲ ಎಂಬುದನ್ನು ಅರಿತಿರಬೇಕು.

*ಪ್ರೀತಿ ದೈವಿಕವಾದದು.
*ನಿಜವಾದ ಪ್ರೀತಿಯಲ್ಲಿ ಸ್ವಾರ್ಥವಿರುವುದಿಲ್ಲ. *ನಿಜವಾದ ಪ್ರೀತಿ ಟರ್ಮ್ಸ್ ಅಂಡ್ ಕಂಡೀಶನ್ಗಳ ಮೇಲೆ ನಿಂತಿರುವುದಿಲ್ಲ .
*ನಿಜವಾದ ಪ್ರೀತಿಗೆ ಎಕ್ಸ್ಪರಿ ಡೇಟ್ ಇರುವುದಿಲ್ಲ. *ನಿಜವಾದ ಪ್ರೀತಿ ನೀ ನನಗೆ ಇದ್ದರೆ ನಾ ನಿನಗೆ ಎಂಬ ವ್ಯಾಪಾರಿ ಮನೋಭಾವವನ್ನು ಹೊಂದಿರುವುದಿಲ್ಲ.

ಪ್ರೀತಿಸಲು ಇಬ್ಬರು ಬೇಕು, ನಿಜ ಆದರೆ ಪ್ರೀತಿಯ ಭಾವನೆ ಏಕಮುಖವಾಗಿಯೂ ಇರಬಹುದು. ಪ್ರೀತಿ ಕೆಲವೊಮ್ಮೆ ತ್ಯಾಗವನ್ನು ಬಯಸುತ್ತದೆ, ತಾನು ಪ್ರೀತಿಸುವ ವ್ಯಕ್ತಿ ಸದಾ ಸಂತಸದಿಂದಿರಲಿ ಎಂದು ಹಾರೈಸುವ ಮನಸ್ಥಿತಿ ಪ್ರೀತಿಯಲ್ಲಿ ಇರುತ್ತದೆ, ಇರಬೇಕು ಕೂಡ. ಪ್ರೀತಿಯಲ್ಲಿ ಸಂಕುಚಿತತೆ ಇರಬಾರದು. ಪ್ರೀತಿ ಎಂಬುದು ಕೇವಲ ಗಂಡು ಹೆಣ್ಣಿನ ನಡುವಿನ ಆಕರ್ಷಣೆಯ ಹೆಸರಲ್ಲ. ತಾಯಿ ಮಗುವಿನ ನಡುವಿನ ತಂದೆ ಮಕ್ಕಳ ನಡುವೆ ಇರುವ ಪ್ರೀತಿ ಸ್ವಾರ್ಥ ರಹಿತವಾದುದು. ಅಲ್ಲಿ ಮಕ್ಕಳ ಅಭ್ಯುದಯವನ್ನಷ್ಟೇ ಅವರು ಬಯಸುವುದು. ಪತಿ ಪತ್ನಿ ಅವರ ನಡುವಿನ ಪ್ರೇಮ ಸುಂದರ ದಾಂಪತ್ಯಕ್ಕೇ ಹಿಡಿದ ಕನ್ನಡಿ.

ಪ್ರೀತಿ ಪ್ರಕೃತಿದತ್ತವಾದದು, ಕೆಲವೊಮ್ಮೆ ಪ್ರೀತಿ ತಂತಾನೆ ಹುಟ್ಟುತ್ತದೆ. ಅಲ್ಲಿ ಕಾರಣಗಳು ಬೇಕಾಗುವುದಿಲ್ಲ ಜಾತಿ,ಮತ ಧರ್ಮ, ದೇಶ, ಭಾಷೆಗಳನ್ನು ಮೀರಿ ತಮ್ಮ ಪ್ರೀತಿಯೊಂದಿಗೆ ಜೀವನವನ್ನು ಕಟ್ಟಿಕೊಂಡ ಹಲವಾರು ನಿದರ್ಶನಗಳಿವೆ. ಸೋತವರೂಇದ್ದಾರೆ.

ಪ್ರೀತಿಸುವುದು ತಪ್ಪಲ್ಲ ನಿಜ ಆದರೆ ಪ್ರೀತಿಯ ಅಂತಿಮ ಗುರಿ ವಿವಾಹವೇ ಆಗಬೇಕೆಂದಿಲ್ಲ. ಹಾಗೆ ವಿವಾಹವಾಗದಿದ್ದ ಪಕ್ಷದಲ್ಲಿ ತಾವು ಪ್ರೀತಿಸಿದ ವ್ಯಕ್ತಿಯನ್ನು ಮರೆಯಲಾಗದೆ ದುರ್ವ್ಯಸನಗಳಿಗೆ ಈಡಾಗುವುದು ತಪ್ಪು. ಪ್ರತಿಯೊಬ್ಬ ವ್ಯಕ್ತಿಯು ಜೀವನದ ಒಂದಲ್ಲ ಒಂದು ಹಂತದಲ್ಲಿ ಪ್ರೀತಿಯಲ್ಲಿ ಬಿದ್ದೆ ಇರುತ್ತಾನೆ. ಆದರೆ ಪ್ರೀತಿಯಲ್ಲಿ ಎದ್ದು ಗೆದ್ದು ಬದುಕು ಕಟ್ಟಿಕೊಳ್ಳುವವರು ಬೇಕು ಪ್ರೀತಿಯಿಂದ ವಿಮುಖರಾಗಿದ್ದಾಗ್ಯು ತಮ್ಮನ್ನು ಪ್ರೀತಿಸಿದವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯದೇ ಪ್ರೇಮದ ಪವಿತ್ರತೆಯನ್ನು ಉಳಿಸಬೇಕು. ಪ್ರೀತಿಸಿದ ಎಲ್ಲವೂ ನಮಗೆ ದಕ್ಕುವುದಿಲ್ಲ ಆದರೆ ಪ್ರೀತಿಯ ಸವಿ ನೆನಪುಗಳು ಸದಾ ಮನದಲ್ಲಿ ಹಸಿರಾಗಿ ಉಳಿಯಬೇಕೆಂದರೆ ಪ್ರೀತಿಯನ್ನು ವಿಕೃತವಾಗಿ ಸಬಾರದು. ತನ್ನನ್ನು ಪ್ರೀತಿಸದ ವ್ಯಕ್ತಿಯ ಮೇಲೆ ಆಸಿಡ್ ಹಾಕಿ ವಿರೂಪಗೊಳಿಸುವುದು ಪ್ರೀತಿಯಲ್ಲ.
ಪ್ರೀತಿ ಸ್ವಾರ್ಥ ದ್ವೇಷ ಗಳನ್ನು ಅಳಿಸಿ ಹಾಕುವ ಬಂಧಗಳನ್ನು ಜೋಡಿಸುವ ಸೇತುವೆಯಾಗಬೇಕು ಅದುವೇ ನಿಜವಾದ ಪ್ರೀತಿ.

ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!