ಗಜಲ್ (ಮಾತ್ರೆ೨೪)
ಸುಮ ಕಂಪು ಸೂಸಿ ದುಂಬಿಯ ಕಾಯುತಿದೆ ಇದುವೆ ಪ್ರೀತಿ
ಬಯಲ ನದಿ ಬಳುಕುತ ಕಡಲು ಅಪ್ಪುತಿದೆ ಇದುವೆ ಪ್ರೀತಿ
ಗರಿಕೆ ಮೇಲಿನ ಇಬ್ಬನಿ ರವಿ ಚುಂಬನಕೆ ಮುತ್ತಾಗಿದೆ
ಉಸಿರ ಬಿಸಿಗೆ ಎದೆ ಬಡಿತವು ಏರುತಿದೆ ಇದುವೆ ಪ್ರೀತಿ
ವಸಂತ ಮಾಸದಿ ವನವು ಚಿಗುರಿ ನಲಿಯುತಿದೆ ಸಂತಸದಿ
ಪಿಕವು ಸಂಭ್ರಮದಿ ನಲ್ಲೆಯ ಕರೆಯುತಿದೆ ಇದುವೆ ಪ್ರೀತಿ
ಕಸ್ತೂರಿ ಮೃಗ ಸುಗಂಧವ ಹರಡಿ ಅರಿಯದೆ ಅಲಿಯುತಿದೆ
ಅವನ ಒಲವ ಗಂಧ ತಂಪು ಬೀಸುತಿದೆ ಇದುವೆ ಪ್ರೀತಿ
ಬಾಳಿನ ಕೊನೆ ಗಳಿಗೆಯಲಿ ಎಲ್ಲರೂ ಒಂಟಿ ಪಯಣಿಗರು
ಅವನ ದಯೆ ಹೃದಯದಿ ಪ್ರಭೆ ಹರಡುತಿದೆ ಇದುವೆ ಪ್ರೀತಿ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ