ಜೀವನ ಪ್ರೀತಿ ಕಲಿಸಿದವಳಿಗೆ ಒಂದು ದಿನ ಸಾಕೇ?
ಸೋನು ಪ್ರತೀ ವರ್ಷ ಈ ಫೆಬ್ರುವರಿ ಹದಿನಾಲ್ಕನ್ನು ಪ್ರೇಮಿಗಳ ದಿನವಾಗಿ ಆಚರಿಸ್ತಾರಂತೆ. ಇತ್ತೀಚಿಗೆ ವರ್ಷ ಪೂರ್ತಿ ಪ್ರತೀ ದಿನಾನೂ ಒಂದಿಲ್ಲಾ ಒಂದು ಆಚರಣೆಗಳಿರ್ತವೆ ಬಿಡು. ಅವುಗಳಲ್ಲಿ ಅರ್ಥವಿಲ್ಲದ ಆಚರಣೆಗಳೇ ಹೆಚ್ಚು. ಅಸಲು ಈ ದಿನಾಚರಣೆಗಳನ್ನು ಗೊತ್ತು ಮಾಡವ್ರ್ಯಾರು? ನಿನಗೇನಾದ್ರೂ ಗೊತ್ತಾ? ಗೊತ್ತಿದ್ರೆ ಹೇಳಿಬಿಡು ಅಂವ ಯಾರಾದ್ರೂ ಇರ್ಲಿ, ಹುಡುಕ್ಕೊಂಡ್ ಹೋಗಿ ನಾಲ್ಕ್ ಬಾರಿಸ್ತೀನಿ. ಯಾಕಂದ್ರ ಇದೇ ತಿಂಗ್ಳು ತಗೋ ಈ ಫೆಬ್ರುವರಿ ಆರನೇ ತಾರೀಖಿನಿಂದ ಹದಿನಾಲ್ಕನೇ ತಾರೀಕಿನ ತನಕ – “ವರ್ಲ್ಡ್ ಪ್ರೊಪೋಸಲ್ ಡೇ” ಅಲ್ಲಲ್ಲ “ವರ್ಲ್ಡ್ ಪ್ರೊಪೋಸಲ್ ವೀಕ್!” ಅಂತ….. ಅಂದ್ರ ? ವಾರಗಟ್ಲೆ ಇದನ್ನ ಯೋಚನೇ ಮಾಡೀ ಮಾಡೀ ಸಣ್ ಹುಡುಗ್ರೂ …… ಹುಡಿಗ್ಯಾರೂ ಹಾಳಾಗೋದಿಕ್ಕೆ ಇದು ದಾರಿ ಆಗಾಂಗಿಲ್ಲನು ? ಅದಕ ಅವನ್ನ ಕಂಡ್ರ ನಾಕ್ ಬಾರಿಸ್ತೀನಿ ಅಂದಿದ್ದು. ಬಿಡು ಅದೆಲ್ಲ ಯಾಕೆ ಈ ಹುಚ್ಚು ಪ್ರೇಮಿಗಳ ದಿನದ ಬಗ್ಗೆ ಮಾತಾಡೋಣ. ಇದು ನಾನಿನಗೆ ಬರೆಯುತ್ತಿರುವ ಎಷ್ಟನೇ ಪ್ರೇಮ ಪತ್ರ ಲೆಕ್ಕವಿದೆಯಾ ಸೋನು ? ನಾನು ಕರಾರುವಕ್ಕಾಗಿ ಹೇಳ್ತೇನೆ. ಇದು ಮೂವತ್ತಾರನೇದು. ಮೊದಲು ನಿನ್ನ ಬಗ್ಗೆ ನನಗೂ ಒಂದು ಹುಚ್ಚಿತ್ತು. ನಾನೂ ಪಾಗಲ್ ಪ್ರೇಮಿಯೇ ಆಗಿದ್ದೆ. ಈಗಿಲ್ಲ ಅಂತಲ್ಲ ಆಗ ವಯಸ್ಸಿತ್ತು, ಮೈಯಲ್ಲಿ ಕಸುವಿತ್ತು. ಈಗ ವಯಸ್ಸು ಸೋಲುತ್ತಿದೆ, ಮನಸ್ಸು ಮಾಗುತ್ತಿದೆ. ಮೊದಲಿನ ಹುಚ್ಚು ಪ್ರೀತಿ ಈಗ ಬೆಟ್ಟದಷ್ಟು ಗಟ್ಟಿಯಾಗಿ ಬೆಳೆದು ನಿಂತಿದೆ. ಅದು ಯಾರ ಕೈಗೂ ಎಟುಕದಂತೆ, ಆಕಾಶದಂದದಿ ಅನಂತದವರೆಗೆ ಚಾಚಿದೆ. ಜೀವನ ಪ್ರೀತಿ ಕಲಿಸಿದ ನಿನ್ನನ್ನು ಪ್ರೇಮಿ ಅಂದರೆ ಅದೊಂದು ಸಣ್ಣ ಪದವಾಗಿಬಿಡುತ್ತೆ. ಹಾಗೇನೇ ಫೆಬ್ರುವರಿ ಹದಿನಾಲ್ಕರಂದು ನಿನ್ನ ದಿನಾಚರಣೆ ಆಚರಿಸುವುದು, ಅತೀ ಬಾಲಿಶವೆನಿಸುತ್ತೆ. ಸೋನೂ ನಮ್ಮದು ನಿತ್ಯೋತ್ಸವ ಕಣೇ.
ಸೋನು ನಮ್ಮ ಪ್ರೀತಿಗೆ ಎಷ್ಟರ ಹರೆಯ ಗೊತ್ತಿದೆಯಾ? ಈ ಪ್ರೇಮ ಪತ್ರದ ಕೊನೆಗೆ ನಿಖರವಾಗಿ ಹೇಳ್ತೇನೆ ತಾಳು. ನಮ್ಮ ಆರಂಭದ ದಿನಗಳನ್ನು ನೆನಪಿಸಕೋ, ನಿನ್ನ ಆ ಕಣ್ಸೆಳೆತ, ತುಟಿಯಂಚಿನ ನಗು, ರೇಷ್ಮೆಯಂಥ ಹೆರಳಿಗೆ ಮಂಜಿನಂತೆ ಕರಗಿದವನು ನಾನು. ಬಾರಿ ಬಾರಿ ನಾನಿದನ್ನೇ ಹೇಳ್ತಿದ್ದೆ, ನೀನು ನಾಚಿ ನೀರಾಗುತ್ತಿದ್ದೆ. ನೀನು ನಾಚುವುದನ್ನೇ ನಾನು ಕಾಯುತ್ತಿದ್ದೆ . ಆ ನಾಚಿಕೆಯಲ್ಲೂ ಅದೆಂಥ ಆಕರ್ಷಣೆಯೇ ನಿನ್ನದು ? ಆ ನಾಚಕೆಯ ಹಿಂದಿನ ಮೌನ! ಅಬ್ಬಬ್ಬಾ ಅದಂತೂ ತಂಪು ತಂಪು ಹಿಮ ಶಿಖರ. ನಿನ್ನ ಮೌನ ನನಗಿಷ್ಟ ಕಣೆ, ಯಾಕೆಂದರೆ ನಾನು ವಾಚಾಳಿ, ಮಾತಾಡುತ್ತಲೇ ಇರುವವನು. ನೀನೋ ಮೌನಿ. ಇದೊಂದು ವಿಷಯದಲ್ಲಿ ಮಾತ್ರ ನಾನು ಉತ್ತರ ಧೃವ ನೀನು ದಕ್ಷಿಣ ಧೃವ. ಉಳಿದಂತೆ ನಮ್ಮ ಮನಸ್ಸೂ, ವಿಚಾರಗಳೂ, ಆಲೋಚನೆಗಳೂ……. ಎಲ್ಲವೂ ಒಂದೇ ಅಲ್ಲವೇ. ಹೀಗಾಗಿ ನಾವು ಎರಡಲ್ಲ ಒಂದು, ಇಂದು-ಮುಂದು-ಎಂದೆಂದೂ. ನಾನು ವಾಚಾಳಿ ಆಗಿದ್ದರಿಂದಲೇ ಸಂಜೆ ವಾಕ್ ಮಾಡುವಾಗ ಆವಾಗಾವಾಗ ನಾನು ಜೋಕ್ ಕಟ್ ಮಾಡುತ್ತಿದ್ದೆ. ಆಗ ನೀನು ಮನಬಿಚ್ಚಿ ನಗುತ್ತಿದ್ದೆ. ಮೊನಾಲಿಸಾಳ ಸ್ಮೈಲ್ ನ್ನು ಮೀರುವ ಆ ನಿನ್ನ ತುಂಬು ನಗು, ಅಪರೂಪದ ಬಿಚ್ಚು ನಗು, ನೀನು ನಗುವಾಗ ಕಾಣುವ ಆ ದಾಳಿಂಬೆ ಸಾಲುಗಳು….ವಾಹ್…… ನೋಡುವುದೇ ಚೆಂದ, ಮನಕೆ ಆನಂದ. ಆರಂಭದಲ್ಲಿ ನೀನು ಹೇಳಿದ್ದೆ ನನಗೂ ನಿನಗು ಕನಿಷ್ಟ ಒಂದು ಮೀಟರ್ ಅಂತರ ಇರಲೇ ಬೇಕೆಂದು, ನೀನೇ ಹೇಳು ನಾನದನ್ನು ಪಾಲಿಸಿಲ್ಲವಾ, ಹೌದು ಪರಿಶುದ್ಧ ಪ್ರೇಮಿ ಕಣೇ ನಾನು. ಆದರೂ ಆ ಒಂದು ಸಂಜೆ ಈಗಲೂ ನನಗೆ ನೆನಪಿದೆ, ಬಹುತೇಕರಂತೆ ನಾನೂ ಪಾಗಲ್ ಪ್ರೇಮಿಯಾಗಿದ್ದೆ. ಪುರಾತನ ಕಾಲದ ಹಿಂದಿ ಸಿನೆಮಾ ’ಆಶಿಕಿ’ ಚಿತ್ರದ ನಾಯಕ ನನ್ನ ಮೈಯೊಳಗೆ ಬಂದಿದ್ದ. ಆ ದಿನ ನೀನು ನೀನಾಗಿರದಿದ್ದರೆ ನಾವೂ ಉಳಿದವರಂತೆ ಸ್ಥಿತ ಪ್ರಜ್ಙೆ ಕಳೆದುಕೊಂಡ ಮತಿಹೀನ ಮನುಷ್ಯರಾಗುತ್ತಿದ್ದೆವು, ನಮ್ಮನ್ಯಾರೂ ಪ್ರೇಮಿಗಳು ಅಂತ ಕರೀತಿರಲಿಲ್ಲ. ಅವಿವೇಕಿಗಳು ಅನ್ನುತ್ತಿದ್ದರು. ಯಾಕೆ ನೆನಪಾಗ್ತಿಲ್ವಾ ನಿನಗೆ ಆ ಘಟನೆ ? ನೀನು ಬಿಡು ತುಂಬಿದ ಕೊಡದಂಥವಳು ಇಂತಹ ಕಹಿ ಘಟನೆಗಳನ್ನು ನೆನಪಿನಲ್ಲಿಟ್ಟುಕೊಂಡು ಮನಸ್ಸನ್ನು ಮಲಿನ ಮಾಡಿಕೊಳ್ಳುವವಳಲ್ಲ ನಂಗೊತ್ತು. ನನಗೆ ಅವತ್ತಿನ ಆ ಘಟನೆ ಇಂಚಿಂಚು ನೆನಪಿದೆ, ಅಕ್ಷರಕ್ಷರ ಮರೆಯದೇ ಹೇಳಬಲ್ಲೆ. ಆದರೆ ಹೇಳಲು ನಾಚಿಕೆ. ಆದರೆ ನಿನ್ನ ಮುಂದೆ ಬಿಟ್ಟು ಇನ್ಯಾರ ಮುಂದೆ ಹೇಳಲಿ? ಜೀವದ ಗೆಳತಿ ನೀನು, ನಿನಗೇ ಹೇಳಬೇಕು. ಹೇಳ್ಬಿಡ್ತೀನಿ, ಬಯ್ಯುತ್ತಲಾದ್ರೂ ಕೇಳಿಸ್ಕೊಂಡ್ ಬಿಡು ಚಿನ್ನಾ. ಅವತ್ತು ರಾತ್ರಿ ಹತ್ತು ಗಂಟೆಯ ಮೆಲಾಗಿತ್ತು. ಅರ್ಧ ಊರು ಮಲಗಿತ್ತು. ಬೀದಿ ದೀಪಗಳೂ ಮಂಕಾಗಿದ್ದವು. ಮಬ್ಬಗತ್ತಲು, ಬೇಗ ಬೇಗ ಮನೆಗೆ ಹೋಗಬೇಕೆನ್ನುವ ನಿನ್ನ ಇರಾದೆ ನಿನ್ನ ಹೆಜ್ಜೆಗಳಿಗೆ ವೇಗ ನೀಡುತತ್ತಿತ್ತು. ಮಬ್ಬುಗತ್ತಲನ್ನೇ ಮುದವಾಗಿ ಅನುಭವಿಸುತ್ತಿದ್ದ ನಾನು ನನ್ನ ಹೆಜ್ಜೆಗಳನ್ನು ನೋಡುತ್ತಿದ್ದೆ, ಅವು ಕಿತ್ತುತ್ತಲೇ ಇರಲಿಲ್ಲ. ನಾವು ರವಿಚಂದ್ರನ್ ಸಿನೆಮಾ ನೋಡಿ ಮನೆಗೆ ಹೋಗುತ್ತಿದ್ದೆವು. ಕೇಳಬೇಕೆ ? ಮೈ ಮನಗಳ ತುಂಬಾ ಪ್ರೇಮಾಂಚನ! ದಾರಿಯಲ್ಲಿ ರೇಲ್ವೆ ಟ್ರಾಕು. ದಾಟುವಂತಿಲ್ಲ. ಅವುಗಳ ಮೇಲೆ ಹಾಕಿರುವ ಫ್ಲೈ ಓವರ್ ಬ್ರಿಡ್ಜ್ ಮೇಲೇ ನಾವು ಹೋಗಬೇಕಿತ್ತು. ನಿನ್ನದು ಅವಸರ, ನನ್ನದು ನಿಧಾನ. ನೀನು ಮುಂದೆ ಮುಂದೆ , ನಾನು ನಿನ್ನ ಹಿಂದೆ. ನಡುವೆ ಇರಬೇಕಿದ್ದ ಒಂದು ಮೀಟರ್ ಅಂತರ ಆವಾಗಾವಾಗ ಹೆಚ್ಚುತ್ತಲೇ ಇತ್ತು. ನೀನು ಹುಸಿ ಮುನಿಸು ತೋರುತ್ತಾ ಮೆಲ್ಲಗೆ ಬಯ್ಯುತ್ತಿದ್ದೆ “ಜಲ್ದೀ ಜಲ್ದೀ ಬಾ…….” ನಿನ್ನೆಲ್ಲ ಚೆಂದಗಳ ಮಧ್ಯೆ ಈ ನಿನ್ನ ಹುಸಿ ಮುನಿಸೂ ಅಗ್ರ ಪಂಕ್ತಿಯಲ್ಲೇ ಬರುತ್ತೆ ಕಣೇ. ನಾವು ಆ ಫ್ಲೈ ಓವರ್ ನ ಮೇಲೆ,……. ಸುತ್ತಲೂ ಮಬ್ಬುಗತ್ತಲು,…….. ಊರು ಮಲಗಿದೆ,……. ನಾನೂ ನೀನು ಇಬ್ರೆ. ರವಿಚಂದ್ರನ್ ಸಿನೇಮಾದ ಹ್ಯಾಂಗ್ ಓವರ್ ಬೇರೆ. ನನ್ನನ್ನು ಹೇಗಾದ್ರೂ ಮಾಡಿ ಅವಸರಿಸಿ ಕರೆದುಕೊಂಡು ಅಥವಾ ಎಳೆದುಕೊಂಡು ಹೋಗಲು ನೀನು ನನ್ನ ಹತ್ರ ಬಂದಿದ್ದೆ, ಆಗ ನಮ್ಮ ನಡುವಿನ ಅಂತರ ಅರ್ಧ ಮೀಟ್ರೂ ಇರಲಿಲ್ಲವೇನೋ. ನಾನು, “ಯಾರೂ ನೋಡ್ತಿಲ್ಲ ಒಂದು ಕಿಸ್ ಕೊಡ್ಲಾ ?” ಅಂದಿದ್ದೆ ನೀನಾಗ, “ಒಂದು ಮೀಟರ್ ದೂರ……. ಏನಾರ ಮಾಡ್ಕೋ…..” ಅನ್ನುತ್ತಾ ಆರು ಮೀಟರ್ ದೂರ ಹೋಗಿ, “ನಾ ಹೊಕ್ಕೀನ್ ನೋಡು, ಬರತೀಯಾ ಇಲ್ಲ” ಅಂತ ಕೇಳಿದ್ದೆಲ್ಲಾ ಚಿನ್ನಾ ನೆನಪಾಯ್ತಾ? ಅದಕ್ಕೇ ನಾನು ಹೇಳಿದ್ದು ರಾಜಾ ನೀನು ನೀನಾಗಿಲ್ಲದಿದ್ದರೆ ಅವತ್ತು ನಾವು ಚಿಲ್ಲರೆ ಪ್ರೇಮಿಗಳಲ್ಲ ಮೋಹಿಗಳಾಗಿರುತ್ತಿದ್ದೆವು. ಬುದ್ಧಿ ಮಾಗಿದ ಮೇಲೆ ಈಗನಿಸ್ತಿದೆ ಮೋಹ ಪ್ರೇಮವಾಗುವುದಿಲ್ಲ ಅಂತ. ಅಂದಿಗೂ ಇಂದಿಗೂ ನಾವು ಪ್ರೇಮಿಗಳೇ……… ಇದು ಆ ಚಂದ್ರಾರ್ಕ ಸತ್ಯ.
ಸೋನು ಮೊದಲಿನ ಪ್ರಶ್ನೆ ಈಗ ಮತ್ತೆ ಕೇಳ್ತಿದೇನೆ ಹೇಳು, ನಮ್ಮ ಈ ಪ್ರೇಮಕ್ಕೆಷ್ಟು ಹರೆಯ ನೆನಪಿದೆಯಾ ? , ನನ್ನ ನಿಖರತೆ ನೋಡು, ಇಪ್ಪನಾಲ್ಕು ವರ್ಷ, ಏಳು ತಿಂಗಳು, ಐದು ದಿನ. ಅವತ್ತು ಆಷಾಡ ಏಕಾದಶಿ, ಶಾಸ್ತ್ರಿಗಳ ಪಾಲಿಗೆ, ಶಾಸ್ತ್ರದ ಪ್ರಕಾರ ಅಶುಭ ದಿನ. ಖೋಡಿಗಳವ್ರು ಅವತ್ತು ದೇವ್ರುನ್ನೂ ಉಪವಾಸ ಹಾಕಿ ತಾವೂ ಉಪವಾಸ ಇರತಾರಂತ. ಆದ್ರ ನನ್ನ ಪಾಲಿಗೆ ಅದು ನಿನ್ನ ಕಣ್ಣ ಹೊಳಪಿನಲ್ಲಿ ನನ್ನ ಬದುಕಿನ ಬೆಳಕು ಕಂಡ ದಿನ, ಅದನ್ನು ಮರೆಯುವುದಾದರೂ ಹೇಗೆ? ಅವತ್ತು ನಿನ್ನನ್ನು ನೋಡಲು ನಿಮ್ಮ ಮನೆಗೆ ಬಂದಿದ್ದೆ, ಸರ್ವಾಲಂಕೃತ ನಿನ್ನನ್ನು ಶಾಸ್ತ್ರ ಬದ್ಧವಾಗಿ ನನಗೆ ತೋರಿಸುವ ಕಾರ್ಯಕ್ರಮವಿತ್ತು. ತೋರಿಸಿದರು. ನಿನ್ನ ಮುಖದಲ್ಲಿ ಮಾಸದ ನಗು, ಕಣ್ಣಲ್ಲಿ ಕೋಲ್ಮಿಂಚಿನ ಸೆಲೆ. ಆ ಕ್ಷಣ ನಾನು ಇವತ್ತಿಗೂ ಮರೆತಿಲ್ಲ. ತೋರಿಸುವ ಶಾಸ್ತ್ರ ಮುಗಿಸಿ ನಿನ್ನನ್ನು ಒಳಗೆ ಕಳಿಸಿದರು, ನನ್ನ ದೃಷ್ಟಿ ನೀನು ಹೋದ ಬಾಗಿಲ ಕಡೆಗೇ ಇತ್ತು. ಹಿರಿಯರು ಏನೇನೋ ಮಾತಾಡುತ್ತಿದ್ದರು, ಅವ್ಯಾವೂ ನನ್ನ ಕಿವಿಗೆ ಬೀಳುತ್ತಿರಲಿಲ್ಲ. ನನ್ನ ಮನಸ್ಸು, ಕಿವಿಯಗಲಿಸಿ ಕೇಳಿಸಿಕೊಳ್ಳುತ್ತಿದ್ದುದು ನಿನ್ನ ಕಾಲ್ಗೆಜ್ಜೆಯ ಸದ್ದನ್ನು,
“ಎಲ್ಲಿ ಹೋದ್ಲು?”
“ಮತ್ತೆ ಬರಲ್ವಾ?”
“ಹೆಂಗ್ ಬರತಾಳೋ ತೋರಿಸ್ಯಾರ ಮುಗೀತಪಾ” ಮನಸಿನೊಳಗೆ ಆಸೆಗಳ ಕಲಸುಮೇಲೋಗರ.
ಐದು ನಿಮಿಷ ಆಗಿರಬಹುದು ನೀನು ಮತ್ತೆ ಬಂದಿ. ನಿನ್ನ ಕೈಯೊಳಗಿನ ತಟ್ಟೆಯಲ್ಲಿ ಅವಲಕ್ಕಿ ವಗ್ಗರಣೆ ಪ್ಲೇಟುಗಳು. ನೀನದನ್ನು ನನಗೆ ಕೊಡುವಾಗ ನನ್ನ ಮುಂದೆ ಬಾಗಿದೆ. ಆಗ ದುಂಡು ಮಲ್ಲಿಗೆಯ ಜೊತೆ ಕನಕಾಂಬರಿಯನ್ನು ಮುಡಿದ ನಿನ್ನ ರೇಷ್ಮೆಯಂಥ ಜಡೆ, ನನ್ನ ಮುಂದೆ ನೇತಾಡುತ್ತಿತ್ತು. ಘಂ ಎನ್ನು ತ್ತಿರುವ ದುಂಡು ಮಲ್ಲಿಗೆ ಮತ್ತು ನೀನು. ಒಪ್ಪಿಕೊಳ್ಳದಿರಲು ಸಾಧ್ಯವೇ ನಿನ್ನನ್ನು. ನಾನು ಅವತ್ತೇ ಅನ್ಕೊಂಡೆ ನೀನು ನನಗಾಗಿ ಹುಟ್ಟಿದವಳು ಅಂತ. ನೀನು ಮತ್ತೆ ಒಳಗೆ ಹೋದೆ. ಬಾಯಲ್ಲಿ ಅವಲಕ್ಕಿಯನ್ನು ತಿನ್ನುತ್ತಿದ್ದರೂ ಮನಸ್ಸಿನಲ್ಲಿ ಮೇಯುತ್ತಿದ್ದುದು ನಿನ್ನ ನಗುವಿನ ಮಂಡಿಗೆಯನ್ನೇ. ಅವಲಕ್ಕಿ ಮುಗೀತು ಈಗ ಚಹಾ ಬರುತ್ತೆ, ಮತ್ತೆ ನೀನೇ ತರತೀಯಾ ಅಂತ ಬಕಪಕ್ಷಿಯಂತೆ ಕಾಯುತ್ತಿದ್ದವನಿಗೆ ನಿರಾಸೆಯಾಗಿತ್ತು, ಯಾಕಂದ್ರ ಬೆರಿಕಿ ನಿಮ್ಮವ್ವ ಛಾ ನ ತಾನ ತಂದಿದ್ಲು. ಆ ಚಹಾ ಒಂಚೂರು ರುಚಿಸಿರಲಿಲ್ಲ.
ಸೋನು ಇವೆಲ್ಲ ಘಟಿಸಿ ಇಪ್ಪತ್ನಾಲ್ಕು ವರ್ಷಗಳು ಗತಿಸಿವೆ. ನೆನಪುಗಳು ಮಾತ್ರ ಇನ್ನೂ ಹಸಿಹಸಿಯಾಗಿವೆ. ನೀನೀಗ ನನ್ನ ದಾರಿ ದೀಪ. ಜೀವನ ಪ್ರೀತಿ ಕಲಿಸಿದವಳು ನೀನು . ಈಗ್ಹೇಳು ನಮ್ಮ ಈ ಪರಿಶುದ್ಧ ಪ್ರೇಮಾಚರಣೆಗೆ ಒಂದು ದಿನ ಸಾಕೆ ? ಖಂಡಿತ ಇಲ್ಲ ಅದು ನಿತ್ಯೋತ್ಸವ
ಮುಗಿಸುವ ಮುನ್ನ;
ನಾವು ಒಂದಾಗಿ ಬೆರೆತು ಬದುಕುತ್ತಿರುವ ದಿನಕ್ಕೆ ಇನ್ನು ಕೆಲವೇ ದಿನಗಳಲ್ಲಿ ಇಪ್ಪತೈದು ವರ್ಷ ತುಂಬುತ್ತೆ. ಬೆಳ್ಳಿ ಹಬ್ಬದ ಸಂಭ್ರಮ! ಅದನ್ನು ಹೇಗೆ ಆಚರಿಸೋಣ ನೀನೇ ಹೇಳು. ಆಯ್ಕೆ ಒಂದು, ನಂದಿಹಿಲ್ಸ್ ಗೆ ಹೋಗಿ ಕಲ್ಲು ಬೆಂಚಿನ ಮೇಲೆ ನಮ್ಮ ನಡುವೆ ಅರ್ಧಮಿಲಿಮೀಟ್ರೂ ಗ್ಯಾಪ್ ಇರದಂತೆ ಇಡೀ ದಿನ ಭೂಮಿ ಅಕಾಶ ಒಂದಾಗಿರೋದನ್ನ ನೋಡ್ತಾ ಕುಳಿತು ಕೊಳ್ಳೋಣ್ವೋ ಅಥವಾ ಒಂದು ದೊಡ್ಡ ಹೊಟೆಲ್ ನಲ್ಲಿ ಬಂಧುಗಳು ಗೆಳೆಯರನ್ನು ಕರೆದು ಮತ್ತೊಮ್ಮೆ ಹಾರ ಬದಲಾಯಿಸಿಕೊಳ್ಳೋಣ್ವೋ? ನನ್ನ ಆಯ್ಕೆ ಒಂದು, ನಿಂದು ?
✍️ ಆದಪ್ಪ ಹೆಂಬಾ ಮಸ್ಕಿ