ಪೀರುತಿ ಹನಿಗಳ ಕವಿ ಶ್ರೀಶೈಲ ಹುಲ್ಲೂರು

 

ಪೀರುತಿ ಹನಿಗಳ ಕವಿ ಶ್ರೀಶೈಲ ಹುಲ್ಲೂರು

ಹಿರಿಯರಾದ ಶ್ರೀಶೈಲ‌ ಸರ್ ರವರು ‌ನಿತ್ಯ ಏನಾದರೂ ಬರೆಯುತ್ತಲೇ ನಮ್ಮ ಗಮನ ಸೆಳೆಯುವ ವಿಭಿನ್ನ ಪ್ರತಿಭೆ.

ನಾನು ಅವರ ಬಗ್ಗೆ ‌ಮಾತಾಡುವಷ್ಟೇನೂ ಬೆಳೆದಿಲ್ಲ. ಕಿರಿಯಳಾದ ನನಗೆ ತಮ್ಮ ಕವಿತೆಗಳನ್ನು ಓದಿಸುತ್ತಾ, ನನ್ನ ಬರಹಗಳಿಗೂ ಸೂಕ್ತ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದಾರೆ.‌ ಈ ಕಾಮೆಂಟ್ ಫೀಡ್‌ಬ್ಯಾಕ್ ಗಳ ನಡುವೆ ಎಷ್ಟೋ ದಿನಗಳಾದ ನಂತರ ಇವರೊಬ್ಬ ಮಹಾನ್ ಬರಹಗಾರರು ಅಂತ ನನಗೆ ತಿಳಿದು ಬಂದಿತು. ಇಷ್ಟೊಂದು ಸರಳ ವ್ಯಕ್ತಿತ್ವ ಹೊಂದಿರುವ ಪ್ರಬುದ್ಧ ಪ್ರತಿಭೆ ಇವರಲ್ಲಿದ್ದರೂ ಯಾವುದೇ ಜನಪ್ರಿಯತೆಯ ಬೆನ್ನು ಹತ್ತದೇ ತನ್ನ ಪಾಡಿಗೆ ತಾವು ಕನ್ನಡಾಂಬೆಯ ಸೇವೆ ಸಲ್ಲಿಸುತ್ತಾ ಬಂದಂತಹ ನಿಜವಾದ ಕವಿಗಳು.

ಮೊನ್ನೆ ತಮ್ಮ ಐದು ಪುಸ್ತಕಗಳನ್ನು ಕಳುಹಿಸಿ ಅಕ್ಕರೆಯಿಂದ ಕೊಟ್ಟಿದ್ದೇನೆ ಪ್ರತಿಯಾಗಿ ಎನೂ ಬೇಡ ಓದಿ ಸಂಭ್ರಮಿಸಿದರೆ ಸಾಕು‌ ಎಂದು ಹೇಳಿದಾಗ ಮನಸ್ಸು ತುಂಬಾ ಭಾವುಕವಾಯಿತು.
ಕವಿ ಪರಿಚಯ:
ಶ್ರೀಶೈಲ ಸರ್ ರವರು 1961 ಆಗಸ್ಟ್ 15 ರಂದು ಗದಗ ಜಿಲ್ಲೆಯ ಹುಲ್ಲೂರಿನಲ್ಲಿ ಹುಟ್ಟಿದ್ದು, ಎಮ್.ಎ. ಬಿ.ಎಡ್. ಪದವೀಧರರಾಗಿದ್ದಾರೆ. ವೃತ್ತಿಯಲ್ಲಿ ಹಿಂದಿ ಶಿಕ್ಷಕರಾಗಿದ್ದ ಇವರು ಪ್ರಸ್ತುತ ತಮ್ಮ ನಿವೃತ್ತಿ ಜೀವನವನ್ನು ಆನಂದಿಸುತ್ತಿದ್ದಾರೆ.
ಇವರ ಪ್ರಕಟಿತ ಕೃತಿಗಳು : ಪೀರುತಿ ಹನಿಗಳು (1996), ಚುಚ್ಚು ಮದ್ದು (2000), ಚಿಟಿಕೆ( 2001 ಸಂಪಾದಿತ), ಪುಳಕ್ ಪುಳಕ್ (2015), ಇರುಳ ಹೆಸರು(2017), ಕಟ್ಟಿರುವೆ ಸಾಲು( 2018), ಪದ ತರಂಗಿಣಿ (2019), ಹೀಗೆ ಏನೇನೋ…(2021)
ತಮ್ಮ ಪ್ರದೇಶದಲ್ಲಿ ಜರುಗಿದ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಶ್ರೀಶೈಲ ಸರ್ ರವರ ಚುಟುಕುಗಳು, ಕವನಗಳು ತೊಂಬತ್ತರ‌ ದಶಕದಿಂದಲೂ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಾ ಬಂದಿವೆ. ಇವರ ಹೀಗೆ ಏನೇನೋ.. ಕೃತಿಗೆ ಬಾಗಲಕೋಟೆ ಜಿಲ್ಲಯ ಕನ್ನಡ ಸಾಹಿತ್ಯ ಪರಿಷತ್ತಿನ ಸಮೀರವಾಡಿ ದತ್ತಿ ಪ್ರಶಸ್ತಿ ಲಭಿಸಿದೆ.
( ನೀ ಶ್ರೀಶೈಲ ಸರ್ ರವರ 2021 ರಲ್ಲಿ ಶರಭ ಪ್ರಕಾಶನದಿಂದ ಪ್ರಕಟವಾದ “ ಹೀಗೆ ಏನೇನೋ…. ಕವನ ಸಂಕಲನದ ಕಿರು ಪರಿಚಯ ಈ ಕೆಳಗಿನಂತಿದೆ.)
ಮುನ್ನುಡಿ ಬೆನ್ನುಡಿಗಳನ್ನು ಯಾರೋ ಸಾಹತಿಗಳಿಂದಲೇ ಬರೆಯಿಸಬೇಕೆಂಬ ಕಟ್ಟಿಟ್ಟ ನಿಮಯಕ್ಕೆ ಜೋತು ಬೀಳದೇ, ಪುಸ್ತಕ‌ ತೆರೆದಾಕ್ಷಣ ಕಣ್ಣಿಗೆ ಏನೋ ವಿಸ್ಮಯ ಎಂಬಂತೆ, ತನ್ನದೇ ಧಾಟಿಯಲ್ಲಿ ಚಾತುರ್ಯ ಭರಿತ ಫಳಫಳಿಸುವ ಪದ ಭಂಡಾರದಿಂದಲೇ, ತನ್ನ ಉತ್ಕೃಷ್ಟ ಸಾಹಿತ್ಯದ ಬಂಡವಾಳವನ್ನು ಅನಾವರಣ ಮಾಡಿ, ಬೆನ್ನುಡಿಗೊಂದು ಭವ್ಯವಾದ ಕವಿತೆಯನ್ನು ಹೊತ್ತಿಸಿದ, ಕವಿ ನೀ‌.ಶ್ರೀಶೈಲ ಸರ್ ರವರ “ಹೀಗೆ ಏನೇನೋ” ಎಂಬ ಕವಿತೆಗಳ ಸಂಕಲವು, ಸಾಹಿತ್ಯ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸುವ ಅರ್ಥಗರ್ಭಿತ ಕವನಗಳನ್ನು ಹೊಂದಿದ ಅತ್ಯದ್ಭುತ ಕೃತಿ ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿ ಸುಮಾರು ತೊಂಬತ್ತೇಳು ಕವಿತೆಗಳಿವೆ. ಪ್ರತಿಯೊಂದು ಕವನದಲ್ಲೂ ಒಂದು ಆಕರ್ಷಕ ಶೀರ್ಷಿಕೆ ಹಾಗೂ ಕಣ್ಮನ ಸೆಳೆಯುವ ಚಿತ್ರದೊಂದಿಗೆ ತನ್ನ ಅಂತರಾಳವನ್ನು ಪದಗಳಾಗಿ ವ್ಯಕ್ತ ಪಡಿಸುವ ಕವಿಯ ಮನಸ್ಸು, ಪ್ರಕೃತಿ, ಜಗತ್ತಿನ ವಿಸ್ಮಯ, ಮನೋಜ್ಞವಾದ ಮನುಷ್ಯನ ಮನೋಭಾವ, ಪ್ರೀತಿ, ಪ್ರೇಮ, ಒಲವು, ನೋವು, ನಲಿವು, ಬಯಲು, ನೆನಪು, ಮರೆವು, ಗಾಯ, ವಿಹಾರ, ವಿರಹ, ಆಸೆ, ಆಕಾಂಕ್ಷೆ, ನಿರೀಕ್ಷೆ, ಬವಣೆ, ಮಮತೆ, ನಿದಿರೆ, ಸಂಬಂಧ, ಅನುಬಂಧ, ದಡ, ತೀರ, ನೆಲ, ಆಕಾಶ, ಹೀಗೆ ನಾನಾ ಆಯಾಮಗಳ ಜೊತೆಗೆ ಮನುಜನಿಂದ ಹಿಡಿದು ದೇವರ ಬಗೆಯೂ ವಿಭಿನ್ನ ಭಾವಾಭಿವ್ಯಕ್ತಿಯ ರೋಮಾಂಚಕ ಅನುಭವಗಳನ್ನು ನೀಡುವ ಕವಿತೆಗಳನ್ನು ಒಳಗೊಂಡಿದೆ.
ಪಾಳು ಮಹಲ ಪ್ರಲಾಪ ಕವನದಲ್ಲಿ- ದೇವ ನಿನ್ನ ಬೆಳಕಿನಲ್ಲಿ ಕುಣಿದು ತಣಿದೆ ಅನುದಿನ ಎಂಬ ಸಾಲುಗಳಿಂದ ಆರಂಭವಾಗುವ ಕವಿತೆಯು – ಜನರ ದಡಿತ ಅವರ ದಣಿತ/ತುಳಿದು ಹಾಡಿ ನಲಿವರು/ ಮದಿರೆ ಮಾನಿನಿ ಸಂಗ ಬಿಡದೆ/ ತಿಂದು ತೇಗಿ ಉಲಿದರು, ಎಂದು ಬರೆಯುತ್ತಾ ಕವಿಯು ಪ್ರಸ್ತುತ ಪೂರ್ವಗ್ರಹ ಪೀಡಿತ ಶೋಷಣೆ ಮಾಡುವ ವರ್ಗದ ಅಧಿಕಾರ ದಾಹ, ದುರ್ನಡೆತೆಗಳ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತ ಪಡಿಸುತ್ತಾ ದೇವರಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತಾ, ಸಮಾಜದ ಅಂತಃಕರಣದ ಮರಣ ಹೊಂದುತ್ತಿರುವ ಸನ್ನಿವೇಷಗಳತ್ತ ಬೆಳಕು ಚೆಲ್ಲಿದ್ದಾರೆ.
ಸಿಡಿದೇಳು ಸಾಕಿನ್ನು ಎಂಬ ಕವಿತೆಯಲ್ಲಿ – ನೀ ಬೀಳು ನಡೆಯಡಿ ನಲುಗುವವರೆಗೂ/ ಇರುವ ಖೂಳ ಹುಡಿ ಹಾರಿಸುತ್ತಲೇ ನಲಿವರು/ ಗಟ್ಟಿಯಾಗಿ ಜಗಜಟ್ಟಿಯಾಗಿ ಮೆಟ್ಟಿ ಬಿಡು/ ನೆಟ್ಟಗಾಗಲಿ ಈ ಭ್ರಷ್ಟ ದಟ್ಟದರಿದ್ರ ಪಟ್ಟಭದ್ರರು ಎಂದು ಕೊನೆಗೊಳಿಸಿದ ಸಾಲುಗಳಲ್ಲಿ ಸಾಮಾಜಿಕ ಸುಧಾರಣಾ ಧ್ವನಿಯನ್ನು ಕಾಣಬಹುದುದಾಗಿದೆ. ನಮ್ಮ ನಡುವೆಯೇ ಇದ್ದು ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರಗಳೂ ನಡೆಯುತ್ತವೆ ಅಂಥ ಪಟ್ಟಭದ್ರ ಹಿತಾಸಕ್ತಿಗಳನ್ನು ಶಮನ ಮಾಡಲು ಸಿಡಿದೇಳಬೇಕು ಎಂದು ಕವಿ ಇಲ್ಲಿ ಆತ್ಮಸ್ಥೈರ್ಯಕ್ಕೆ ಬಲ ನೀಡುತ್ತಿರುವುದು ವಿಶೇಷವಾಗಿದೆ.
ಬಲವೀ ಒಲವು ಎಂಬ ಶೀರ್ಷಕೆಯ ಕವಿತೆಯಲ್ಲಿ – ನಿಜವಾದ/ ಎದೆಮಾತು ಇದಿಷ್ಟೇ../ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ/ ರಾಶಿ ರಾಶಿಯಾಗಿ/ ಬಿದ್ದುಕೊಂಡಿವೆ ಅಂಗಳದಲ್ಲಿ/ ಒಣಗಿದ ಎಲೆಗಳು/ ಅವ್ವನ ನಡುಗುವ ನಡುವು/ ನೇರವಾಗದು ಇನ್ನೆಂದೂ/ ಎಂಬ ಸಾಲುಗಳು ಮನಸ್ಸಿಗೆ ನಾಟುವಂತಿವೆ. ಮನುಷ್ಯನ ಜೀವನದ ಗತಿಶೀಲತೆಯನ್ನು ತೋರುಸಿತ್ತಿವೆ. ಮಕ್ಕಳ ಬಾಲ್ಯದಲ್ಲಿ ಅವರನ್ನು ಬೆಳೆಸುವ ಜವಾಬ್ದಾರಿ ಹೊತ್ತ ತಂದೆ ತಾಯಿ ವೃದ್ಧರಾದ ಮೇಲೆ ಅವರೂ ಮಕ್ಕಳಾಗಿಬಿಡುತ್ತಾರೆ. ಆದರೆ ಅವರಿಗೆ ಮಾತ್ರ ಮಕ್ಕಳು ಮತ್ತೇ ನೋಡಿಕೊಳ್ಳದೇ ತಮ್ಮ ಜೀವನದಲ್ಲಿ ಬಿಡುವಿಲ್ಲದೇ ಮಗ್ನರಾಗಿ ಬಿಡುತ್ತಾರೆ. ಆದರೆ ಪೋಷಕರ ವಯಸ್ಸಾದರೂ ಅವರ ಕೆಲಸ ಬೇರೆ ಯಾರೂ ಮಾಡಲಾರರು. ನಿರ್ಜೀವವಾಗಿ ಬಿದ್ದ ರಾಶಿ ರಾಶಿ ಎಲೆಗಳನ್ನು ಮತ್ತೇ ಅಮ್ಮ ನಡುಗುತ್ತಾನೇ ಸ್ವಚ್ಛಗೊಳಿಸಬೇಕು ಎಂಬ ಮಾತಿನಲ್ಲಿ ವೃದ್ಧಾಪ್ಯದ ಹೊರೆಹೊತ್ತ ಹಿರಿ ಜೀವಗಳ ನೋವಿನಾಳ ಹೊರಹಾಕಿದ್ದಾರೆ. ಅಪ್ಪನ ಕಣ್ಣಂಚಿನಲ್ಲಿ ಸೋರುವ ಬೆಚ್ಚಗಿನ ಕಂಬನಿಗೂ ಹರಿದು ಹೋದ ಅಮ್ಮನ ಸೆರಗೇ ನೆರವಾಗುತ್ತದೆಯೇ ವಿನಃ ಮಕ್ಕಳಿಂದ ಯಾವುದೇ ತರಹದ ಪ್ರತಿ ಸ್ಪಂದನೆ ಸಿಗದ ಮನುಜ ಜೀವನದ ನಗ್ನ ಸತ್ಯವನ್ನು ಕವಿ ಈ ಕವನದಲ್ಲಿ ವಿವರಿಸಿದ್ದಾರೆ.
ಮತ್ತೊಂದು ಅಪೂರ್ವ ನಿಧಿ ಎಂಬ ಕವನದಲ್ಲಿ ಮಗಳು ಹುಟ್ಟಿದಾಗಿನ ಪೋಷಕರ ಸಂಭ್ರಮವನ್ನು – ಭರವಸೆಯ ಬೆಳಕನ್ನು/ ಬದುಕಿನಲಿ ತೀಡಿ/ ಎಂಟು ವರುಷಗಳ ನಂತರ/ ಮಡಿಲಲಿ ಆಡಿ/ ಅಪ್ಪ ಅಮ್ಮ ಬಿರುದನು/ ನಮಗೆ ನೀಡಿ/ ನಕ್ಕು ನಲಿದಳು ಮಗಳು/ ತೊದಲು ಹಾಡಿ/ ಎಂದು ಕವಿಯು ಮಗಳು ಹುಟ್ಟಿದಾಗ ಮತ್ತೇ ಪೋಷಕರಾಗುವ ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.
ಅಭಿಲಾಷೆ ಎಂಬ ಕವಿತೆಯಲ್ಲಿ – ಬೀಸುಗಾಳಿಯ ನಡುವೆ/ ನಲುಗಿ ಹೀಗಿದೆ ಮನಸು/ ಸೋತು ಸುಣ್ಣವಾಗುವ ಮುನ್ನ/ ಚಿಗುರೀತೆ ಕನಸು? ಎಂಬ ಸಾಲುಗಳ ಮೂಲಕ ಸ್ವಯಂ ಪ್ರೋತ್ಸಾಹದ ಮಾತಿನ ಮಂಟಪ ಕಟ್ಟಿ, ಜೀವನ ಜಂಜಾಟಿನ ನಡುವೆ ಕೊರಗಿ ಹೋಗಿದ್ದರೂ ಮತ್ತೇ ಸೊರಗುವ ಮುನ್ನ ಕನಸು ಚಿಗುರ ಬಹುದೇ ಎಂಬ ಮಹಾದಾಸೆಯಲ್ಲಿ ಕವಿಯು ತಮ್ಮ ಆಕಾಂಕ್ಷೆ ಗಳಿಗೆ ಹೊಸ ರೆಕ್ಕೆ ನೀಡಿ ಆಶಾವಾದಿಯಾಗಿದ್ದಾರೆ. ಎಲ್ಲಾ ಕವಿತೆಗಳೂ ವಿಭಿನ್ನ ದಾರಿದೀಪ, ಬದುಕಿನ ಮಾರ್ಗಸೂಚಿ, ಮನುಷ್ಯನ ಖಿನ್ನತೆಗೊಂದು ಅಭಯ ಹಸ್ತ ನೀಡುತ್ತಾ ಬದುಕಿನೊಲ್ಲಾಸವನ್ನು ಸಂಭ್ರಮಿಸಿ ಎಷ್ಟೇ ಬಿದ್ದರೂ ಮತ್ತೇ ಏಳಬೇಕು ಎದ್ದು ನಡೆ‌ನಡೆಯುತ್ತಾ ಓಡಲೇ ಬೇಕು ಎಂಬ ಜೀವನ ಛಲದೊಂದಿಗೆ ಕವಿತೆಗಳನ್ನು ರಚಿಸಿದ್ದಾರೆ.
ಹೀಗೆ ಅಪರಿಮಿತ ಆಸೆಗಳ ಆಗರವನ್ನೂ, ಉದಾತ್ತ ಭಾವನೆಗಳನ್ನು ಉನ್ಮೀಲಿಸುವ ಕವಿತೆಗಳು ಈ ಕವನ ಸಂಕಲನದ ಜೀವಾಳವಾಗಿವೆ.. ಸಾಹಿತ್ಯಾಸಕ್ತರಿಗೆ ಅದ್ಭುತ ಸ್ವಾದಗಳನ್ನು ಉಣಬಡಿಸುವ ಈ ಕವನ ಸಂಕಲವನ್ನು ಓದುಗ ಬಳಗ, ಈಗ ತಾನೆ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸುತ್ತಿರುವ ಉದಯೋನ್ಮುಖ ಬರಹಗಾರರು ಹಾಗೂ ಎಲ್ಲಾ ರೀತಿಯ ಸಾಹಿತ್ಯಾಭಿಮಾನಿಗಳು ಓದಲೇ ಬೇಕಂದು ಹೇಳ ಬಯಸುತ್ತೇನೆ.
ಧನ್ಯವಾದಗಳು…

🖋ಫರ್ಹಾನಾಜ಼್ ಮಸ್ಕಿ
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು
ಸ.ಪ್ರ.ದ.ಕಾಲೇಜು, ನೆಲಮಂಗಲ..

Don`t copy text!