ಸಮಾಜದ ಒಳಿತಿಗೆ ದುಡಿದು ದೇವರಾದ ಬಣಜಿಗ ಗುರುಗಳು       

ನಾವು- ನಮ್ಮವರು

ಸಮಾಜದ ಒಳಿತಿಗೆ ದುಡಿದು ದೇವರಾದ ಬಣಜಿಗ ಗುರುಗಳು

ಗುರು ಮುಟ್ಟಿ ಗುರುಗಳಾಗಿ ಸಮಾಜದ ಒಳಿತಿಗೆ ದುಡಿದು ದೇವರಾದವರು ಬಣಜಿಗರು.

ಬಣಜಿಗ ಎಂಬುದು ಲಿಂಗಾಯತ ಸಮುದಾಯದ ಒಂದು ಪ್ರಮುಖ ಒಳ ಪಂಗಡ. ವ್ಯಾಪಾರವೇ ಇವರ ಕುಲ ಕಸುಬು. ಆತ್ತ ಶ್ರೀಮಂತರಲ್ಲ, ಇತ್ತ ತೀರಾ ಬಡವರೂ ಅಲ್ಲ ಎಂಬಂತಹ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಸಮುದಾಯವಿದು.
ಐಹೊಳೆಯ ವೀರಗಂಧರ್ವ, ಆತನ ಪತ್ನಿ ಸುಮತಾದೇವಿ, ಮಗಳು ಬಲಿದೇವಿ. ತನ್ನ ತಂದೆಯನ್ನು ಬಂಧಿಸಿದ ಗೋಮುಖಾಸುರನನ್ನು ವಧಿಸಲು ಬಲಿದೇವಿ ಕೈಗೊಂಡ ತಪಸ್ಸಿಗೆ ಮೆಚ್ಚಿ ಪರಮೇಶ್ವರನು ಪಂತಮುಖ ಗಣಾಧೀಶ್ವರನನ್ನು ಸೃಷ್ಟಿ ಮಾಡಿದ. ಗೋಮುಖಾಸುರನನ್ನು ಕೊಂದ ಬಳಿಕ ಬಲಿದೇವಿಯನ್ನು ಗಣಾಧೀಶ್ವರ ವಿವಾಹವಾದ. ಇವರ ಪುತ್ರ ಮಖಾರಿ.
ಈತ ಭೂಲೋಕಕ್ಕೆ ಹೋಗಿ ನಾಗರಾಜನ ಮಗಳು ಪಣಾಮಣಿಯನ್ನು ಮದುವೆಯಾಗಿ ಅಲ್ಲಿಂದ ಶುಭ ಕಾರ್ಯಗಳಿಗೆ ಬೇಕಾಗುವ ನಾಗವಲ್ಲಿ, ಕರತಾಳ, ಅಡಕೆ, ತೆಂಗು, ಅರಿಶಿಣ ಸೇರಿದಂತೆ ಐದು ವಸ್ತುಗಳನ್ನು ತಂದ. ಈ ದಂಪತಿಗೆ ಸೆಟ್ಟಿಗುತ್ತ, ಪಟ್ಟಣ ಸೆಟ್ಟಿ ಮಿಂಡಗುದ್ದಲಿಶೆಟ್ಟಿ ಎಂಬ ಐದು ಮಕ್ಕಳಾದರು. ತಂದೆ ಇವರಿಗೆ ಒಂದೊಂದು ಹೊಣೆ ಹೊರಿಸಿದ.
ಕೃಷಿಕರು ಮತ್ತು ರಾಜನ ನಡುವಣ ವ್ಯಾಜ್ಯಗಳನ್ನು ತೀರ್ಮಾನ ಮಾಡುತ್ತಿದ್ದ ಮೊದಲ ಸೆಟ್ಟಿಗೆ ನಾಡಸೆಟ್ಟಿ, ಕೃಷಿಕರು ಮತ್ತು ಸಮಾಜದ ನಡುವೆ ಉಂಟಾಗುತ್ತಿದ್ದ ತಕರಾರುಗಳನ್ನು ಬಗೆಹರಿಸುತ್ತಿದ್ದ ಎರಡನೇ ಸೆಟ್ಟಿ ಮಹಾಜನ ಸೆಟ್ಟಿ, ಕೃಷಿ ಸುಂಕದ ನಿರ್ಣಯ, ವಸೂಲಿ ಮತ್ತಿತರ ವಿಚಾರಗಳ ಹೊಣೆ ಹೊತ್ತಿದ್ದ ಮೂರನೇ ಸೆಟ್ಟಿ ಗುತ್ತಸೆಟ್ಟಿ, ಕೃಷಿ ಉತ್ಪನ್ನಗಳ ಮಾರಾಟದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ನಾಲ್ಕನೇ ಸೆಟ್ಟಿ ಪಟ್ಟಣ ಸೆಟ್ಟಿ, ಬೇಸಾಯದಲ್ಲಿ ತೊಡಗಿಕೊಂಡಿದ್ದ ಐದನೇ ಸೆಟ್ಟಿಗೆ ಮಿಂಡಗುದ್ದಲಿ ಸೆಟ್ಟಿ ಎಂಬ ಹೆಸರು ಬಂತು ಎಂದು ಬಿಜಾಪುರ ಜಿಲ್ಲೆಯ ಇಂಡಿಯ ಡಾ.ಎಸ್.ಕೆ.ಕೊಪ್ಪಾ ಅವರು ವಿವರಿಸುತ್ತಾರೆ.
ಮೂಲಪುರುಷ ಅಯ್ಯಪ್ಪಶೆಟ್ಟಿ: ಅವರ ಪ್ರಕಾರ, ಬಣಜಿಗರು ಎಂದರೆ ಹಾಸಿಗೆ ಇದ್ದಷ್ಟು ಕಾಲು ಚಾಚುವ ಮಂದಿ. ತಮ್ಮ ವ್ಯಾಪಾರ ಮತ್ತು ವಹಿವಾಟಿನಿಂದ ಎಲ್ಲರಿಗೂ ಬೇಕಾದವರು. ಲಿಂಗಾಯತ ಬಣಿಜಿಗರ ಕುಟುಂಬಗಳು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿವೆ. ಇವರಲ್ಲಿ ಪಂಚಮ ಬಣಜಿಗರು, ಜೈನ ಬಣಜಿಗರು, ತೆಲುಗು ಬಣಜಿಗರು ಎಂಬ ಪಂಗಡಗಳೂ ಇವೆಯಂತೆ.
ಲಿಂಗಾಯತ ಬಣಜಿಗರು ಮದುವೆ ಸಂದರ್ಭದಲ್ಲಿ ಕೇಳಿಬರುವ ಹಾಡುಗಳಲ್ಲಿ ವರನ ತಂದೆ ಹೆಸರು ಏನೇ ಆಗಿದ್ದರೂ ಅಯ್ಯಪ್ಪಶೆಟ್ಟಿ ಮಗ ಎಂದು ಹೆಸರಿಸಲಾಗುವುದು. ಹೀಗಾಗಿ ಬಣಜಿಗರ ಮೂಲಪುರುಷನ ಹೆಸರು ಅಯ್ಯಪ್ಪ ಶೆಟ್ಟಿ ಇರಬಹುದು ಎನ್ನುತ್ತಾರೆ ಕೊಪ್ಪಾ ಅವರು.
ರಾಜ-ಮಹಾರಾಜರ ಕಾಲದಲ್ಲಿ ಬಣಜಿಗರು ಅತ್ಯಂತ ಪ್ರಭಾವಶಾಲಿಗಳಾಗಿದ್ದರು. ರಾಜರ ಆಸ್ಥಾನಗಳಿಗೆ ಇವರೇ ಆಧಾರ ಸ್ಥಂಭಗಳಾಗಿದ್ದರು. ದೇಶದ ಸಮಸ್ತ ವ್ಯಾಪಾರ ಮತ್ತು ವಹಿವಾಟು ಇವರ ಕೈಯ್ಯಲ್ಲಿ ಇದ್ದುದರಿಂದ ರಾಜನ ಮೇಲೆ ಪ್ರಭಾವ ಬೀರಬಲ್ಲವರಾಗಿದ್ದರು. ರಾಜರೊಂದಿಗೆ ಸ್ನೇಹದಿಂದ ಇದ್ದ ಇವರು ನಾಡಿನ ಏಳಿಗೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹಿರಿಯ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ ಅವರೂ ತಿಳಿಸಿದ್ದಾರೆ.


ವ್ಯಾಪಾರವೇ ಮೂಲ ಕಸುಬು: ಮೊದಲೇ ಹೇಳಿದಂತೆ ವ್ಯಾಪಾರವೇ ಲಿಂಗಾಯತ ಬಣಜಿಗರ ಮೂಲ ಕಸುಬು. ಇವರು ಎತ್ತು, ಕತ್ತೆ, ಕೋಣಗಳ ಮೇಲೆ ಸರಕು ಹೊತ್ತೊಯ್ದು ಮಾರಾಟ ಮಾಡುತ್ತಿದ್ದರು. ಸಂತೆ, ಪಟ್ಟಣ ಪ್ರದೇಶಗಳು ಇವರಿಗೆ ವ್ಯಾಪಾರದ ಪ್ರದೇಶಗಳಾಗಿದ್ದವು. ಸರಕು ಹೇರಿಕೊಂಡು ಹೋಗುತ್ತಿದ್ದುದರಿಂದ ಹೇರುವ ಬಣಜಿಗ, ಹೇರುವ ಶೆಟ್ಟಿ ಎಂದು ಈ ಸಮುದಾಯವನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ ಎನ್ನುತ್ತಾರೆ ಕೊಪ್ಪಾ ಅವರು. ಕೆಲವೆಡೆ ಎತ್ತಿನ ವಣಿಜರು, ಕೋಣನ ಸೆಟ್ಟಿಯರು, ಕತ್ತೆಯ ಸೆಟ್ಟಿಯರೂ ಎಂದು ಇವರು ಪ್ರಸಿದ್ಧರಾಗಿದ್ದರು ಎಂಬುದು ಅವರ ವಿವರಣೆ. ಇತ್ತೀಚೆಗೆ ವ್ಯಾಪಾರ ಬಿಟ್ಟು ಕೆಲವರು ಬೇಸಾಯ ಮತ್ತಿತರ ಚಟುವಟಿಕೆಗಳ ಕಡೆಗೆ ವಾಲಿದ್ದಾರೆ.
ನಾವು ಬಸವಣ್ಣನ ಸಂಪ್ರದಾಯದವರು, ಬಸವೇಶ್ವರರ ಸಂತತಿಯವರು ಎಂದು ಲಿಂಗಾಯತ ಬಣಜಿಗರು ಕರೆದುಕೊಳ್ಳುತ್ತಾರೆ. ಹೀಗಾಗಿಯೇ ಇವರು ಬಸವ ಸಂಪ್ರದಾಯದ ವಿರಕ್ತ ಪೀಠಗಳಿಗೆ ಹೆಚ್ಚಾಗಿ ನಡೆದುಕೊಳ್ಳುತ್ತಾರೆ. ಒಟ್ಟಾರೆ ಇವರು ಬಸವನ ಆರಾಧಕರು. ಈ ಸಮುದಾಯವನ್ನು ಗುರುತಿಸುವಲ್ಲಿ ಅಡ್ಡ ಹೆಸರುಗಳೂ ಪ್ರಮುಖ ಪಾತ್ರ ವಹಿಸುತ್ತವೆಯಂತೆ. ಆ ಅಡ್ಡ ಹೆಸರುಗಳೇ ಮನೆತನದ ಹೆಸರುಗಳಾಗಿಯೂ ಬಳಕೆಯಲ್ಲಿದೆ. ಈ ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿದೆ. ಆ ಹೆಸರುಗಳಿಂದ ಜಾತಿ ಮತ್ತು ವೃತ್ತಿಯನ್ನು ಗುರುತಿಸಬಹುದು.
ಲಿಂಗಾಯತ ಬಣಜಿಗ ಸಮಾಜದಲ್ಲಿ ಅನೇಕ ಶರಣ, ಶರಣೆಯರು, ಮಠಾಧೀಶರು, ಪವಾಡ ಪುರುಷರು, ಸಾಹಿತಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ವೈದ್ಯರು, ರಾಜಕಾರಣಿಗಳು ಇದ್ದಾರೆ. ಸುವರ್ಣ ವ್ಯಾಪಾರಿ ಸೌರಾಷ್ಟ್ರದ ಆದಯ್ಯ, ನಿರ್ಮಲ ಸೆಟ್ಟಿಯ ಪುತ್ರಿ ಅಕ್ಕ ಮಹಾದೇವಿ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಕೊಡೇಕಲ್ ಬಸವಣ್ಣ, ಗುಲ್ಬರ್ಗದ ಶರಣ ಬಸವೇಶ್ವರರು, ಹುಬ್ಬಳ್ಳಿಯ ಮೂರು ಸಾವಿರ ಮಠದ ಕರ್ತೃ ಶ್ರೀ ಗುರು ಸಿದ್ದೇಶ್ವರರು, ಬೆಂಗಳೂರಿನ ಶ್ರೀ ಸರ್ಪಭೂಷಣ ಶಿವಯೋಗಿಗಳು, ಅಥಣಿಯ ಗಚ್ಚಿನ ಮಠದ ಶ್ರೀ ಸಿದ್ದಲಿಂಗ ಅಪ್ಪನವರು, ಮೈಲಾರದ ಬಸವಲಿಂಗ ಶರಣರು, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು, ಸೊಲ್ಲಾಪುರದ ಶ್ರೀ ಕಿರೀಟೇಶ್ವರ ಮಠದ ಶ್ರೀ ಶ್ರೀ ಚನ್ನಬಸವ ಸ್ವಾಮಿಗಳು, ಮುಂಡರಗಿ ಸಂಸ್ಥಾನ ಮಠದ ಬಳ್ಳೊಳ್ಳಿ ಸ್ವಾಮಿಗಳು, ಭಾಲ್ಕಿಯ ಡಾ.ಚನ್ನಬಸವ ಪಟ್ಟದೇವರು, ಸಿಂಧಗಿಯ ಸಾರಂಗ ಮಠದ ಶ್ರೀ ಚನ್ನವೀರ ಸ್ವಾಮಿಗಳು, ಬಸವನ ಬಾಗೇವಾಡಿಯ ಶ್ರೀ ಗುರು ಪಾದೇಶ್ವರ ಮಹಾರಾಜರು, ಮುರಗೋಡ ಮಹಾದೇವಪ್ಪ ಮಹಾರಾಜರು ಮತ್ತು ನವಲಗುಂದದ ಶ್ರೀ ಹುರಕಡ್ಲಿ ಅಜ್ಜನವರು ಬಣಜಿಗ ಲಿಂಗಾಯತ ಪಂಗಡಕ್ಕೆ ಸೇರಿದ್ದರೂ ಆಧ್ಯಾತ್ಮ ಸಾಧನೆ, ಸಿದ್ಧಿಗಳಿಂದ ಗುರುಗಳಾಗಿ, ದೇವರಾಗಿ ಪೂಜೆಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಇಂಡಿಯ ಕೊಪ್ಪಾ ಅವರು.

ಸಿಎಂಗಳನ್ನು ಕಂಡ ಸಮಾಜ: ಸಮಾಜ ಸೇವಕರು ಮತ್ತು ಕೊಡುಗೈ ದಾನಿಗಳಾಗಿದ್ದ ಬೆಂಗಳೂರಿನ ಎಲೆ ಮಲ್ಲಪ್ಪ ಶೆಟ್ಟರು ಮತ್ತು ಗುಬ್ಬಿ ತೋಟದಪ್ಪ ಅವರೂ ಇದೇ ಸಮಾಜಕ್ಕೆ ಸೇರಿದವರು ಎಂಬುದು ಮತ್ತೊಂದು ವಿಶೇಷ. ಈ ಇಬ್ಬರೂ ದಾನಿಗಳ ಹೆಸರು ಇಂದಿಗೂ ಜನ ಮಾನಸದಲ್ಲಿ ಚಿರಪರಿಚಿತ ಎಂಬುದರಲ್ಲಿ ಎರಡು ಮಾತೇ ಇಲ್ಲ.

ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಅವರುಗಳು ಮುಖ್ಯಮಂತ್ರಿಗಳಾಗಿ ರಾಜ್ಯಭಾರ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಕೇಂದ್ರದ ಮಾಜಿ ಸಚಿವ ಶಿವರಾಜ ಪಾಟೀಲ್ ಸಹ ಇದೇ ಸಮುದಾಯಕ್ಕೆ ಸೇರಿದವರು. ಇನ್ನು ಅಲ್ಲಂ ವೀರಭದ್ರಪ್ಪ, ಶಿವಾನಂದ ಕೌಜಲಗಿ, ಉಮೇಶ್ ಕತ್ತಿ, ಪ್ರಕಾಶ ಹುಕ್ಕೇರಿ, ಹಳ್ಳಿಕೇರಿ ಗುದ್ಲೆಪ್ಪ, ಕೆ.ಎಂ.ಪಟ್ಟಣಶೆಟ್ಟಿ, ಎಂ.ಕೆ.ಪಟ್ಟಣಶೆಟ್ಟಿ, ಕೊಠಾವಳೆ ಇತರ ಪ್ರಮುಖ ರಾಜಕಾರಣಿಗಳು. ಇನ್ನೂ ಹಲವಾರು ಪ್ರಮುಖರು ಸಮಾಜದಲ್ಲಿದ್ದಾರೆ.


ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೇಳಿಕೊಳ್ಳುವಂತಹ ಆಭಿವೃದ್ಧಿಯನ್ನೇನೂ ಸರ್ಕಾರದ ಜಾತಿ ಪಟ್ಟಿಯಲ್ಲಿ 2 ಎ ವರ್ಗಕ್ಕೆ ಸೇರಿರುವ ಲಿಂಗಾಯತ ಬಣಜಿಗ ಸಮಾಜ ಸಾಧಿಸಿಲ್ಲ. ಆದರೂ ಶೇ. 70ರಷ್ಟು ಮಂದಿ ಪರವಾಗಿಲ್ಲ. ಇನ್ನುಳಿದ ಶೇ. 30ರಷ್ಟು ಮಂದಿ ಮಾತ್ರ ಮಧ್ಯಮ ವರ್ಗಕ್ಕೆ ಸೇರಿದವರು ಮತ್ತು ಬಡವರು. ಸರ್ಕಾರ ಇವರ ನೆರವಿಗೆ ಧಾವಿಸಬೇಕಾಗಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಆಗಡಿ ಅವರು. ನಮ್ಮ ಸಮಾಜದ ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಒಂದೇ ಒಂದು ನಿವೇಶನವನ್ನು ಸಮುದಾಯಕ್ಕಾಗಿ ಯಾರೂ ಮಂಜೂರು ಮಾಡಲಿಲ್ಲ ಎನ್ನುತ್ತಾರೆ ಅವರು.

– ಕೆ.ವಿ.ಪ್ರಭಾಕರ  
—————————————-

ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏

One thought on “ಸಮಾಜದ ಒಳಿತಿಗೆ ದುಡಿದು ದೇವರಾದ ಬಣಜಿಗ ಗುರುಗಳು       

Comments are closed.

Don`t copy text!