ಮಾನ್ವಿ: ಶಿಕ್ಷಕರ ಚುನಾವಣೆಗೆ ‘ಗುರು ಭವನ’ ಅಸ್ತ್ರ

ಒಟ್ಟು 526 ಶಿಕ್ಷಕರು ಮತದಾರರು
ಶಿಕ್ಷಕರ 3 ಬಣಗಳಿಂದ ಸ್ಪರ್ಧೆ
ಒಟ್ಟು 29 ಅಭ್ಯರ್ಥಿಗಳು ಕಣದಲ್ಲಿ

ಡಿ.15ರಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ

ವರದಿ – ಬಸವರಾಜ ಭೋಗಾವತಿ

e-   ಸುದ್ದಿ, ಮಾನ್ವಿ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಡಿ.15ರಂದು ಚುನಾವಣೆ ನಿಗದಿಯಾಗಿದ್ದು ಪೈಪೋಟಿ ತೀವ್ರಗೊಂಡಿದೆ. ಶೈಕ್ಷಣಿಕ ಚಟುವಟಿಕೆಗಳಿಗಾಗಿ ನಿರ್ಮಾಣವಾಗಿದ್ದ ಗುರು ಭವನ ದಶಕಗಳಿಂದ ಪಾಳುಬಿದ್ದಿರುವುದು ತಾಲ್ಲೂಕು ಶಿಕ್ಷಕರ ಸಂಘದ ಚುನಾವಣೆಯ ಪ್ರಚಾರದ ಕೇಂದ್ರ ಬಿಂದುವಾಗಿದೆ. 2004ರಲ್ಲಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಸಮೀಪ ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯ ರೂ.5ಲಕ್ಷ ಅನುದಾನ ಹಾಗೂ ಶಿಕ್ಷಕರ ದೇಣಿಗೆಯಿಂದ ಸಂಗ್ರಹಿಸಿದ ರೂ.4ಲಕ್ಷ ಸೇರಿ ಒಟ್ಟು 9ಲಕ್ಷ ವೆಚ್ಚದಲ್ಲಿ ಗುರು ಭವನವನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ಶಿಕ್ಷಕರಿಗೆ ತರಬೇತಿ, ಸಭೆ ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ನಿರ್ವಹಣೆ ಕೊರತೆಯಿಂದ ನಿರ್ಲಕ್ಷಕ್ಕೀಡಾದ ಗುರು ಭವನ ಈಗ ನಿರುಪಯುಕ್ತವಾಗಿದೆ. ಈಗ ಶಿಕ್ಷಕರ ಬಣಗಳು ಸದರಿ ಗುರು ಭವನದ ಜೀರ್ಣೋದ್ಧಾರ ಅಥವಾ ಹೊಸ ಗುರು ಭವನದ ನಿರ್ಮಾಣವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿವೆ. ಸಂಘದ ಕಾರ್ಯಕಾರಿ ಸಮಿತಿಯ 4 ಮಹಿಳಾ ಸ್ಥಾನಗಳು ಸೇರಿದಂತೆ ಒಟ್ಟು 11 ಸ್ಥಾನಗಳಿಗೆ ಒಟ್ಟು 29 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಸುರೇಶ ಕುರ್ಡಿ, ಮಾಜಿ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ ಹಾಗೂ ಎನ್‍ಪಿಎಸ್ ಶಿಕ್ಷಕರ ಸೇವಾ ಬಳಗದ ಸಂಗಮೇಶ ಮುಧೋಳ ನೇತೃತ್ವದಲ್ಲಿ ಮೂರು ಗುಂಪಿನ ಅಭ್ಯರ್ಥಿಗಳು ಪ್ಯಾನಲ್ ರಚಿಸಿಕೊಂಡು ಸ್ಪರ್ಧಿಸಿದ್ದಾರೆ. ಗುರುಭವನ ನಿರ್ವಹಣೆಯ ವೈಫಲ್ಯ, ಸ್ಥಗಿತಗೊಂಡಿರುವ ನೌಕರರ ಪತ್ತಿನ ಸಹಕಾರ ಸಂಘ, ಶಿಕ್ಷಕರ ಬಡ್ತಿ, ವರ್ಗಾವಣೆ ನೀತಿ ಹಾಗೂ ಎನ್‍ಪಿಎಸ್ ರದ್ಧತಿಗೆ ಹೋರಾಟ ಸೇರಿ ಹಲವು ಸಮಸ್ಯೆಗಳ ಬಗ್ಗೆ ಶಿಕ್ಷಕರು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಅಭ್ಯರ್ಥಿಗಳು ತಾಲ್ಲೂಕಿನ ಶಾಲೆಗಳು ಮತ್ತು ಶಿಕ್ಷಕರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.
ಮತದಾನದ ವಿವರ: ತಾಲ್ಲೂಕಿನ ಒಟ್ಟು 526 ಶಿಕ್ಷಕ ಮತದಾರರು ಮತ ಚಲಾವಣೆಯ ಹಕ್ಕು ಪಡೆದಿದ್ದಾರೆ. ಡಿ.15ರಂದು ಮಾನ್ವಿ ಪಟ್ಟಣದ ಪಿಡಬ್ಲೂಡಿ ಕ್ಯಾಂಪ್ ಶಾಲೆಯಲ್ಲಿ ಬೆಳಿಗ್ಗೆ 8.30ಗಂಟೆಯಿಂದ4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಜೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

ಪೋತ್ನಾಳ ಗ್ರಾಮದಲ್ಲಿ ಶಿಕ್ಷಕರ ವಸತಿ ಗೃಹಗಳು ದಶಕಗಳಿಂದ ಬಳಕೆಯಾಗದೆ ನಿರುಪಯುಕ್ತವಾಗಿವೆ

,———————————-

ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏˜

Don`t copy text!