ಪ್ರಸ್ತುತ
ಪಾರ್ಲಿಮೆಂಟ್, ಮ್ಯಾಗ್ನಾ ಕಾರ್ಟಾ ಮತ್ತು ಬಸವೇಶ್ವರ
ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂಸತ್ ಭವನ ಒಂದು ಐತಿಹಾಸಿಕ ಕಟ್ಟಡ ಮತ್ತು ಈ ದೇಶದ ಶಕ್ತಿಕೇಂದ್ರ. ಪ್ರಸಿದ್ಧ ಬ್ರಿಟೀಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟೆಯನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರ ವಿನ್ಯಾಸದಲ್ಲಿ ರೂಪುಗೊಂಡ ಕಟ್ಟಡ. ದಿನಾಂಕ 12.02.1921 ರಲ್ಲಿ ಶಂಕುಸ್ಥಾಪನೆಯಾಗಿ ಇದರ ನಿರ್ಮಾಣಕ್ಕೆ ಸುಮಾರು ಆರು ವರ್ಷಗಳ ಕಾಲ ತೆಗೆದುಕೊಂಡಿತು. ಅಂದಿನ ಲೆಕ್ಕದಲ್ಲಿ 83 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ಗವರ್ನರ್ ಜನರಲ್ ಆಗಿದ್ದಂಥ ಲಾರ್ಡ್ ಐರ್ವಿನ್ ದಿನಾಂಕ 18.01.1927 ರಂದು ಉದ್ಘಾಟಿಸಿದರು.
ಈ ಭವನದಿಂದ “ಇಂಪೇರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್” ಎನ್ನುವ ಬ್ರಿಟೀಷ್ ಸರ್ಕಾರ ಆಡಳಿತ ನಡೆಸಿತ್ತು. ಕ್ರಿ. ಶ. 1950 ರಿಂದ ಗಣರಾಜ್ಯವಾದ ಸ್ವತಂತ್ರ ಭಾರತದ ಆಡಳಿತವೂ ಸಹ ಇದೇ ಭವನದಿಂದ ಆರಂಭವಾಯಿತು. ಭಾರತದ ಎಲ್ಲ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ತನ್ನ ಹೃದಯದೊಳಗೆ ಸ್ಥಾಪಿಸಿಕೊಳ್ಳುತ್ತಾ ಬಂದ ಈ ಕಟ್ಟಡಕ್ಕೆ ಪರ್ಯಾಯವಾಗಿ ನೂತನ, ಸರ್ವಸಜ್ಜಿತ ಸಂಸತ್ ಭವನದ ಅವಶ್ಯಕತೆ ಇದೆ ಎನ್ನುವ ಭಾವನೆ ಹೆಚ್ಚಾಯಿತು.
ಹಾಗಾಗಿ ಇದರ ಸಮೀಪದಲ್ಲಿ ಇನ್ನೊಂದು ಭವನದ ನಿರ್ಮಾಣಕ್ಕೆ ಒಲವು ತೋರಿದ ಭಾರತ ಸರ್ಕಾರ ಗುರುವಾರ ದಿನಾಂಕ 10.12.2020 ರಂದು ಶಿಲಾನ್ಯಾಸವನ್ನು ಮಾಡಿ ನೂತನ ಕಟ್ಟಡ ನಿರ್ಮಾಣಕ್ಕೆ ಓಂಕಾರ ಹಾಡಿತು. ದೇಶದ ಹಲವು ಗಣ್ಯರು, ವಿವಿಧ ದೇಶಗಳ ರಾಯಭಾರಿ ಕಛೇರಿಯ ಮುಖ್ಯಸ್ಥರ ಸಮ್ಮುಖದಲ್ಲಿ ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನೂತನ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು.
ಶಿಲಾನ್ಯಾಸ ಮಾಡಿದ ನಂತರ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನೂತನ ಸಂಸತ್ತಿನ ನಿರ್ಮಾಣವು ಪ್ರಜಾತಾಂತ್ರಿಕ ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾಗಲಿದೆ. ಹಳೇಯ ಸಂಸತ್ತು ಸ್ವಾತಂತ್ರೋತ್ತರ ಭಾರತಕ್ಕೆ ದಾರಿ ತೋರಿಸಿತು. ನೂತನ ಸಂಸತ್ತು ಆತ್ಮ ನಿರ್ಭರ (ಸ್ವಾವಲಂಬಿ) ಭಾರತದ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ವ್ಯಾಖ್ಯಾನಿಸಿದರು. ಹಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ಈ ಸಂಸತ್ ಭವನ ಒಳಗೊಂಡು ಕೆಲಸದ ಮಾದರಿ ಮತ್ತು ಕೌಶಲ್ಯವನ್ನೂ ಸಹ ಹೆಚ್ಚು ಮಾಡುತ್ತದೆ ಎಂದು ಹೇಳಿದರು.
ಇದರ ಜೊತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ ಇನ್ನೊಂದು ಮಾತು ಬಸವೇಶ್ವರರ ಆರಾಧಕರಿಗೆ ಮತ್ತು ಅವರ ತತ್ವವನ್ನು ಪಾಲಿಸುವವರಿಗೆ ತಂಪಿನ ಸಿಂಚನವನ್ನುಂಟು ಮಾಡಿತು. 12 ನೇ ಶತಮಾನದಲ್ಲಿ ಬಸವೇಶ್ವರರು ಸ್ಥಾಪಿಸಿದ್ದ ಅನುಭವ ಮಂಟಪದ ಪರಿಕಲ್ಪನೆಯನ್ನು ಸ್ಮರಿಸಿದ್ದು ನಮ್ಮೆಲ್ಲರ ಮತ್ತು ಇಡೀ ಭಾರತದ ಗಮನ ಸೆಳೆಯಿತು. ಈ ಅನುಭವ ಮಂಟಪ ಜನಸಭೆ ನಾಡಿನ ಮತ್ತು ರಾಜ್ಯದ ಉನ್ನತಿ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದು ಬಸವೇಶ್ವರರು ಹೇಳಿದ್ದ ಮಾತುಗಳನ್ನು ಕನ್ನಡದಲ್ಲಿಯೇ ಹೇಳಿದರು. ಇದರ ಜೊತೆಗೆ ಪ್ರಮುಖವಾದ ವಿಷಯವಾದ “ಮ್ಯಾಗ್ನಾ ಕಾರ್ಟಾ” ವನ್ನೂ ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿಯವರು ಆಧುನಿಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಮ್ಯಾಗ್ನಾ ಕಾರ್ಟಾಗಿಂತ ಮುಂಚೆಯೇ ಬಸವಣ್ಣನವರು ಈ ಜಗತ್ತಿಗೆ ಪರಿಚಯಿಸಿದವರೆಂಬುದನ್ನು ನಿರೂಪಿಸಿದರು.
ಹಾಗಾದರೆ ಈ ಮ್ಯಾಗ್ನಾ ಕಾರ್ಟಾ ಎಂದರೇನು? ಇದರ ಮಹತ್ವವೇನು? ಇದನ್ನು ಈ ಲೇಖನದ ಮೂಲಕ ತಿಳಿಯುವ ಪ್ರಯತ್ನವನ್ನು ಮಾಡೋಣ.
“ಪಾರ್ಲಿಮೆಂಟ್” ಎನ್ನುವದರ ಮೂಲವನ್ನು ಅಧ್ಯಯನ ಮಾಡುತ್ತಾ ಹೋದಂತೆ ನಾವು ದಿನಾಂಕ 14.10.1066 ರಂದು ನಡೆದ “The Battle of Hastings” ಗೆ ಬಂದು ನಿಲ್ಲುತ್ತೇವೆ. ಈ ಯುದ್ಧ ಹೇಸ್ಟಿಂಗ್ಸ್ (ಈಗಿನ ಪೂರ್ವ ಸಸೆಕ್ಷ್ ಪ್ರಾಂತ್ಯದ ಜಿಲ್ಲೆ) ದಿಂದ ಉತ್ತರ-ಪಶ್ಚಿಮದ 7 ಮೈಲಿ (11 ಕಿಲೋಮೀಟರ) ದೂರದಲ್ಲಿರುವ ಯುದ್ಧಭೂಮಿಯಲ್ಲಿ ವಿಲಿಯಮ್ಸ್ ನಾರ್ಮನ್ (ಡ್ಯೂಕ್ಕ್ ಆಫ್ ನೋರ್ಮಾಂಡಿ) ನ ನೋರ್ಮಾನ್-ಫ್ರೆಂಚ್ ಸೈನ್ಯ ಮತ್ತು ರಾಜ ಹೆರಾಲ್ಡ್ ಗಾಡ್ವಿನ್ಸನ್ ಅವರ ಇಂಗ್ಲೀಷ್ ಸೈನ್ಯದ ನಡುವೆ ನಡೆಯುತ್ತದೆ.
ಈ ಯುದ್ಧದಲ್ಲಿ ವಿಲಿಯಮ್ಸ್ ನಾರ್ಮನ್ ವಿಜಯಿಯಾಗಿ ಆಡಳಿತವನ್ನು ಪ್ರತಿಷ್ಠಾಪಿಸುತ್ತಾನೆ. ಅದೇ ವರ್ಷದಿಂದ ದೇಶದ ಶ್ರೀಮಂತರು ಮತ್ತು ಪ್ರಭಾವಶಾಲಿ ಜನರನ್ನು ಸೇರಿಸಿ ಚರ್ಚೆ ನಡೆಸುತ್ತಿದ್ದನು. ಆದರೆ ಇಲ್ಲಿ ರಾಜನ ಇಚ್ಛೆಯಂತೆ ಚರ್ಚೆಗಳು ನಡೆಯುತ್ತಿರುತ್ತವೆ. ಪ್ರಮುಖವಾಗಿ ರಾಜನಿಗೆ ಇತರೆ ದೇಶಗಳೊಡನೆ ಯುದ್ಧ ಮಾಡಲು ಧನ ಸಹಾಯ ಬೇಕಿತ್ತು ಮತ್ತು ಇಂತಹ ಚರ್ಚೆಗಳಲ್ಲಿ ಪ್ರಜೆಗಳ ಕಲ್ಯಾಣ ಹಾಗು ಯೋಗಕ್ಷೇಮದ ಬಗ್ಗೆ ಏನೂ ಪ್ರಸ್ತಾಪವಾಗುತ್ತಿರಲಿಲ್ಲ. ಇಂತಹ ಚರ್ಚೆಗಳಿಗೆ “ಪಾರ್ಲಿಮೆಂಟ್” ಎಂದು ಕರೆಯುತ್ತಿದ್ದರು. ಇದು ಪಾರ್ಲಿಮೆಂಟಿನ ಸ್ವರೂಪದ ಮೊದಲ ಮೈಲಿಗಲ್ಲು.
ತದನಂತರ ಸುಮಾರು 200 ವರ್ಷಗಳ ಮೇಲೆ ಬಂದ ಕಿಂಗ್ ಜಾನ್ ತನಗೆ ಬೇಕಾದ ಹಾಗೆ ರಾಜ್ಯಭಾರ ಮಾಡುತ್ತಿದ್ದರಿಂದ ಬೇಸತ್ತ ಸಲಹಾ ಸಮಿತಿ ಅಸಮಾಧಾನಗೊಂಡಿತ್ತು.
ಇಂಗ್ಲಂಡಿನಲ್ಲಿ ಕ್ರಿ. ಶ. 1166 ರಿಂದ ಕ್ರಿ. ಶ. 1216 ರವರೆಗೆ ಆಳಿದ ರಾಜ “ಕಿಂಗ್ ಜಾನ್”. ಅಕ್ವಾಟೈನ್ ರಾಜ ಹೆನ್ರಿ-II ಮತ್ತು ರಾಣಿ ಎಲೀನರ್ನ್ ಅವರ ಕಿರಿಯ ಪುತ್ರ. ಹಠಮಾರಿ ಮತ್ತು ಅನಿಯಂತ್ರಿತ ಎಂದು ಪರಿಗಣಿಸಲ್ಪಟ್ಟ ಕಿಂಗ್ ಜಾನ್ ಆಡಳಿತಗಾರನಾಗಿ ವಿಫಲನಾಗಿದ್ದ. ಅವನ ತಂದೆ ಹೆನ್ರಿ-II (ಕ್ರಿ. ಶ. 1133-1189) ಆನುವಂಶಿಕತೆಯಲ್ಲಿ ಅವನನ್ನು ಬೇರೆ ಮಾಡಿದ್ದರಿಂದ ಅವನನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ಅವನ ಹಿರಿಯ ಸಹೋದರರು ಯಾವುದೇ ಪ್ರದೇಶವನ್ನು ಆಳುವುದಕ್ಕೆ ಬಿಟ್ಟು ಕೊಡಲಿಲ್ಲ ಹಾಗಾಗಿ ಕಿಂಗ್ ಜಾನ್ ನನ್ನು “ಲ್ಯಾಕ್ಲಾಂಡ್” ಎಂದೂ ಸಹ ಕರೆಯುತ್ತಾರೆ.
ಇಂಗ್ಲಂಡಿನಲ್ಲಿ ಸರಿ ಸುಮಾರು 12 ನೇ ಶತಮಾನದ ಅಂತ್ಯಭಾಗ ಮತ್ತು 13 ನೇ ಶತಮಾನದ ಆರಂಭದ ಹೊತ್ತಿಗೆ ನಾಗರೀಕ ಯುದ್ಧಗಳು ಮತ್ತು ಘರ್ಷಣೆಗಳಿಂದ ಪೀಡಿತವಾಗತೊಡಗಿತು. ರಾಜರುಗಳು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಬ್ಯಾರನ್ ಗಳು ಮತ್ತು ಶ್ರೀಮಂತರಿಗೆ ಮಣೆ ಹಾಕಲು ಪ್ರಾರಂಭಿಸಿದರು. ಇದರಿಂದ ಪ್ರಜೆಗಳಿಗೆ ಮತ್ತು ರೈತರಿಗೆ ಅತೀವ ಹಿಂಸೆಯಾಗತೊಡಗಿತು ಮತ್ತು ರಾಜರ ವಿರುದ್ಧ ಬಂಡೆದ್ದರು. ಕ್ರಿ. ಶ. 1215 ರಲ್ಲಿ ಕಿಂಗ್ ಜಾನ್ ಲ್ಯಾಕ್ಲ್ಯಾಂಡ್ (1166-1216) ಆಳ್ವಿಕೆಯಲ್ಲಿಯೂ ಸಹ ಕಾಣಿಸಿಕೊಂಡಿತು. ಈ ಪೀಡನೆಯನ್ನು ತಪ್ಪಿಸಿಕೊಳ್ಳಲು ಒಂದು ಒಪ್ಪಂದವನ್ನು ರಚಿಸಿದರು. ಇದೇ ಕ್ರಿ. ಶ. 1215 ರಲ್ಲಿ ಜಾರಿಗೆ ಬಂದ ಮ್ಯಾಗ್ನಾ ಕಾರ್ಟಾ (Magna Carta) ಎನ್ನುವ ಒಪ್ಪಂದ. ಈ ಒಪ್ಪಂದವು ವಿಂಡ್ಸರ್ ಮತ್ತು ಸ್ಟೇನ್ಸ್ ನಡುವಿನ ಥೇಮ್ಸ್ ನದಿಯ ಬಲದಂಡೆಯ ದಡದಲ್ಲಿರುವ “ರನ್ನಿಮೀಡ್” ಎನ್ನುವ ಹುಲ್ಲುಗಾವಲಿನಲ್ಲಿ ಜಮೀನ್ದಾರರು ಮತ್ತು ಕಿಂಗ್ ಜಾನ್ ನಡುವೆ ದಿನಾಂಕ 15.06.1215 ರಂದು ಆಯಿತು. ರಾಜ ಜಾನ್ ಲಾಕ್ಲ್ಯಾಂಡ್ ಮುದ್ರೆಯೊಂದಿಗೆ ಮೊಹರು ಮಾಡಲಾಗಿದ್ದು ತನ್ನ ಪ್ರಜೆಗಳಿಗೆ ಸವಲತ್ತುಗಳನ್ನು ಮತ್ತು ಹಕ್ಕುಗಳನ್ನು ಖಾತ್ರಿಪಡಿಸುವ ದಾಖಲೆಗೆ ಸಹಿ ಹಾಕಲಾಯಿತು. ಈ ಮ್ಯಾಗ್ನಾ ಕಾರ್ಟಾ ಎನ್ನುವ ಒಪ್ಪಂದವೇ ಮುಂದೆ ಯೂರೋಪ್ ದೇಶಗಳ ಸಾಂವಿಧಾನಿಕ ತಳಹದಿಯಾಯಿತು.
ಲ್ಯಾಟಿನ್ ಭಾಷೆಯಲ್ಲಿ ಬರೆಯಲಾದ ಮ್ಯಾಗ್ನಾ ಕಾರ್ಟಾದಲ್ಲಿ ಮುನ್ನುಡಿ ಮತ್ತು 63 ಅಧ್ಯಾಯಗಳನ್ನು ಒಳಗೊಂಡಿದೆ. 12 ನೇ ಅಧ್ಯಾಯದಲ್ಲಿ ತೆರಿಗೆಯನ್ನು ವಿಧಿಸುವ ಕಲಮುಗಳಿವೆ.
ಸಹಿ ಹಾಕಿದ ನಂತರದ ದಿನಗಳಲ್ಲಿ ಕಿಂಗ ಜಾನ್ ಈ ಮ್ಯಾಗ್ನಾ ಕಾರ್ಟಾವನ್ನು ರದ್ದುಗೊಳಿಸಿದನಾದರೂ ಮುಂದೆ ಆಡಳಿತ ನಡೆಸಿದ ರಾಜರುಗಳಾದ ಹೆನ್ರಿ-III, ಎಡ್ವರ್ಡ್-I ಮತ್ತು ಎಡ್ವರ್ಡ್-II ಮತ್ತೆ ಜಾರಿಗೆ ತಂದರು. ಕ್ರಿ. ಶ. 1225 ರಲ್ಲಿ ಜಾರಿಗೆ ಬಂದ ಎರಡನೇ ಆವೃತಿಯನ್ನು “ಶಾಸನಬದ್ಧ ಕಾನೂನು” ಎಂದೇ ಪ್ರತಿಬಿಂಬಿತವಾಗಿದೆ.
ಸಂವಿಧಾನದ ಮೂಲ ಮಾದರಿಯನ್ನು ಇಂಗ್ಲಂಡನ್ನು ಆಳಿದ ಎಡ್ವರ್ಡ್-I ಸೇರಿದಂತೆ ನಂತರ ಬಂದ ರಾಜರು ಮ್ಯಾಗ್ನಾ ಕಾರ್ಟಾವನ್ನು ಸುಧಾರಿಸಿ ಪುನಃ ಪುನಃ ಪರಿವರ್ತನೆಗಳೊಂದಿಗೆ ಜಾರಿಗೆ ತಂದರು. ಕಿಂಗ್ ಫೆಂಟ್ ರಾಜನು ಕ್ರಿ. ಶ. 1297 ರಲ್ಲಿ ಪರಿಷ್ಕರಿಸಿ ಮಂಡಿಸಿದ ಮ್ಯಾಗ್ನಾ ಕಾರ್ಟಾವನ್ನು “ಡಿ ತಲ್ಲಾಜಿಯೋ ನಾನ್ ಕಾನ್ಸಾಂಡೋ” ಶಾಸನವೆಂದೇ ಕರೆಯಲಾಗುತ್ತದೆ.
ಕ್ರಿ. ಶ. 1215 ರಲ್ಲಿ ಕಿಂಗ್ ಜಾನ್ ಸಹಿ ಮಾಡಿದ ಮ್ಯಾಗ್ನಾ ಕಾರ್ಟಾದ ಪ್ರತಿ ಈಗ ಲಭ್ಯವಿಲ್ಲ. ಆದರೆ 1215 ರ ಈ ಚಾರ್ಟರ್ ನ 4 ಪ್ರತಿಗಳು ಇಂಗ್ಲಂಡಿನಲ್ಲಿ ಲಭ್ಯವಿರುತ್ತವೆ. ವಿದ್ದಾವೆ. ಎರಡು ಬ್ರಿಟೀಷ್ ಗ್ರಂಥಾಲಯದಲ್ಲಿ, ಒಂದು ಲಿಂಕನ್ ಕ್ಯಾಥೆಡ್ರಲ್ ನಲ್ಲಿ, ಇನ್ನೊಂದು ಸ್ಯಾಲಿಸ್ ಬರಿ ಕ್ಯಾಥೆಡ್ರಲ್ ನಲ್ಲಿ ಸಂಗ್ರಹಿಸಿ ಇಡಲಾಗಿದೆ.
ಒಟ್ಟು 13 ಪ್ರತಿಗಳು ಲಭ್ಯವಿರುತ್ತವೆ. ಹೆನ್ರಿ-III ರಾಜನ ಕಾಲಘಟ್ಟದ 8 ಪ್ರತಿಗಳು, ಎಡ್ವರ್ಡ್-I ರಾಜನ ಕಾಲಘಟ್ಟದ 5 ಪ್ರತಿಗಳು ಲಭ್ಯವಿರುತ್ತವೆ. ಎಡ್ವರ್ಡ್-I ರಾಜನ ಕಾಲಘಟ್ಟದ 5 ಪ್ರತಿಗಳಲ್ಲಿ ಒಂದನ್ನು ಆಸ್ಟ್ರೇಲಿಯಾ ಸರ್ಕಾರ ಕ್ರಿ. ಶ. 1952 ರಲ್ಲಿ 12,500 ಪೌಂಡಗಳನ್ನು ಕೊಟ್ಟು ಖರೀದಿಸಿ ಕ್ಯಾನ್ ಬೆರ್ರಾದಲ್ಲಿರುವ ಸಂಸತ್ತಿನಲ್ಲಿ ಪ್ರದರ್ಶನಕ್ಕೆ ಇಟ್ಟದ್ದಾರೆ. ಕ್ರಿ. ಶ. 1984 ರಲ್ಲಿ ಅಮೇರಿಕಾದ ಟೆಕ್ಸಾಸ್ ಶ್ರೀಮಂತ ರಾಜಕಾರಣಿ ರಾಸ್ ಪೆರೋಟ್ ಖರೀದಿಸಿದನು. ಈ ಪ್ರತಿಯನ್ನು “ಯೂ. ಎಸ್. ನ್ಯಾಶನಲ್ ಅರ್ಕೈವ್” ನಲ್ಲಿ ಹಲವಾರು ವರ್ಷಗಳಿಂದ ಪ್ರದರ್ಶನಕ್ಕೆ ಇಡಲಾಗಿದೆ.
ಕ್ರಿ. ಶ. 1791 ರಲ್ಲಿ ಅಮೇರಿಕಾದಲ್ಲಿ ಮ್ಯಾಗ್ನಾ ಕಾರ್ಟಾವನ್ನು ಆಧಾರವಾಗಿ ಇಟ್ಟುಕೊಂಡು “ಹಕ್ಕುಗಳ ಮಸೂದೆ” ಯೊಂದಿಗೆ ಅಳವಡಿಸಿಕೊಂಡು ಸಂವಿಧಾನವನ್ನು ಪರಿಷ್ಕರಿಸಿ ಜಾರಿಗೆ ತರಲಾಯಿತು.
ಈ ಆಲೋಚನೆಗಳು ಮಾನವ ಹಕ್ಕುಗಳ ಮತ್ತು ಪ್ರಜಾಪ್ರಭುತ್ವ ಸಿದ್ಧಾಂತಗಳ ಅಡಿಪಾಯವಾಗಿ ಮಾರ್ಪಟ್ಟಿದೆ. ಒಬ್ಬ ವ್ಯಕ್ತಿಯ ಸ್ವಾಭಾವಿಕ, ಅಳಿಸಲಾಗದ ಹಕ್ಕುಗಳನ್ನು ಹೊಂದಿದ್ದಾನೆ (ಜೀವಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಇತ್ಯಾದಿ) ಎನ್ನುವುದನ್ನು ಮಹಾ ಮಾನವತಾವಾದಿ, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬಸವೇಶ್ವರರು 12 ನೇ ಶತಮಾನದಲ್ಲಿಯೇ “ಅನುಭವ ಮಂಟಪ” ವನ್ನು ಕಟ್ಟಿ ಬೆಳೆಸುವ ಮೂಲಕ ಸಾರಿದ್ದಾರೆ. ಈ ಮ್ಯಾಗ್ನಾ ಕಾರ್ಟಾ ಬರುವದಕ್ಕೆ 100 ವರ್ಷಗಳಿಗಿಂತ ಮುಂಚೆಯೆ ಆಚರಣೆಗೆ ತಂದಿದ್ದನ್ನು ಜಗತ್ತಿಗೆ ತಿಳಿಸುವಲ್ಲಿ ಭಾರತೀಯರು ಎಡವಿದ್ದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಲೇಬೇಕು.
ಬ್ರಿಟೀಷ್ ಪಾರ್ಲಿಮೆಂಟ್ ನಲ್ಲಿ 2009 ರಿಂದ 2019 ರ ವರೆಗೆ ಹತ್ತು ವರ್ಷದವರೆಗೆ ಸ್ಪೀಕರ್ ಆಗಿದ್ದಂಥವರು John Simon Bercow. ಬಸವಣ್ಣನವರ ಬಗ್ಗೆ ಆಪಾರ ಗೌರವ ಮತ್ತು ಹೆಮ್ಮೆಪಟ್ಟವರು. ಅವರು Basavanna’s Philosophy of Universal Significance ಬಗ್ಗೆ ಹೇಳಿದ್ದು ದಾಖಲಾಗಿದೆ.
Basavanna pioneered the idea of democracy and stood for civil liberties even before “Magna Carta” was signed & preached the idea of democracy 700 years before Abraham Lincoln. It is amazing & extraordinary that, Basavanna professed, adopted, campaigned and advocated genuine democracy, human rights, gender equality, way back in the 12th century even before anyone in UK had even thought about it.
ಬಸವಣ್ಣನವರು ಒಬ್ಬ ಯುಗ ಪ್ರವರ್ತಕನರಾಗಿ ಹುಟ್ಟುಹಾಕಿದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸುಧಾರಣೆಗಳನ್ನು “ಮ್ಯಾಗ್ನಾ ಕಾರ್ಟಾ” ಬರುವುದಕ್ಕಿಂತ ಮುಂಚೆಯೇ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು. ಅಮೇರಿಕದ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ನರಿಗಿಂತ 700 ವರ್ಷಗಳ ಮುಂಚೆಯೇ ಸಾಮಜಿಕ ನ್ಯಾಯ ನೀತಿಗಳನ್ನು ಜಾರಿಗೆ ತಂದಿದ್ದರು ಬಸವಣ್ಣನವರು. 12 ನೇ ಶತಮಾನದಲ್ಲಿಯೇ ಬಸವಣ್ಣನವರು ಪ್ರಾಮಾಣಿಕವಾಗಿ ಪ್ರಜಾಪ್ರಭುತ್ವವನ್ನು, ಮಾನವ ಕಲ್ಯಾಣವನ್ನು, ಲಿಂಗ ಸಮಾನತೆಯನ್ನು ಅದ್ಭುತ ಮತ್ತು ಅಸಾಧಾರಣ ರೀತಿಯಿಂದ ಸಮಾಜದಲ್ಲಿ ಪ್ರತಿಪಾದಿಸಿ ಅಳವಡಿಸಿಕೊಂಡು ಪ್ರಚಾರಗೊಳಿಸಿದರು.
ಕ್ರಿ. ಶ. 1933 ರಲ್ಲಿ ಪ್ರಕಟವಾದ ಬ್ರಿಟೀಷ್ ಲೇಖಕ Arthur Miles ಬರೆದ ಪುಸ್ತಕ The Land of Lingam ನಲ್ಲಿ ಬಸವಣ್ಣನವರ ಸಾಮಾಜಿಕ ಸುಧಾರಣೆಯನ್ನು ಬಹಳ ಚನ್ನಾಗಿ ಬರೆದಿದ್ದಾನೆ.
THE LAND OF LINGAM written by ARTHUR MILES (Page-111) :
Whatever legend may say of Basavanna; the fact is pretty clear that he was the “First Indian Free Thinker”. He might be called the “Luther of India”. The acknowledged leadership of the priests was in full swing when Basava came upon the scene, and there was a movement on foot to replace caste and priestly authority with intelligence and free thinking.
ಬಸವಣ್ಣನವರ ಬಗ್ಗೆ ಏನೇ ದಂತ ಕಥೆಗಳಿರಲಿ, ಬಹಳ ಸ್ಪಷ್ಟವಾದ ವಿಷಯವೆಂದರೆ “ಬಸವಣ್ಣನವರು ಒಬ್ಬ ಉದಾತ್ತ ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿ” ಅವರನ್ನು ಭಾರತದ ಲೂಥರ್ ಎಂದು ಹೇಳಬಹುದು. ವೈದಿಕ ಪರಂಪರೆಯು ತನ್ನ ಅಧಿಕಾರವನ್ನು ಚಲಾಯಿಸುತ್ತಿದ್ದ ಸಂಕ್ರಮಣ ಕಾಲದಲ್ಲಿ ಬಸವಣ್ಣನವರು ಎಲ್ಲ ಶ್ರೇಣೀಕೃತ ಸಮಾಜದ ಕಟ್ಟಳೆಗಳನ್ನು ಕಿತ್ತು ಹಾಕಿ ಅಂಧಕಾರದಲ್ಲಿ ಬದುಕುತ್ತಿದ್ದ ಸಮಾಜದಲ್ಲಿ ಬೆಳಕನ್ನು ತಂದರು.
“One India One Constitution” “ಒಂದೇ ದೇಶ ಒಂದೇ ಸಂವಿಧಾನ” ವೆಂಬ ಪ್ರಸ್ತುತ ಭಾರತದ ಸಂಕ್ರಮಣ ಕಾಲದಲ್ಲಿ 12 ನೇ ಶತಮಾನದ ಬಸವಾದಿ ಶರಣರನ್ನು ಇಂದು ನೆನೆಯಲೇಬೇಕಾದ ಸಂದರ್ಭ. ಕಾರಣ ಜಾತಿ ಮತಗಳನ್ನು ಮೀರಿರುವಂಥ ಸ್ತ್ರೀ-ಪುರುಷ ಎಂಬ “Gender Sector” ನ್ನೂ ಮೀರಿದ, ದೇಶ ಭಾಷೆಯೆಂಬ ಗಡಿಯನ್ನೂ ಮೀರಿದ ಸಾಮಾಜಿಕ ವ್ಯವಸ್ಥೆಯನ್ನು ನೀಡಿದ್ದರಿಂದಲೇ ಬಸವಣ್ಣನವರನ್ನು ನಾವು “ವಿಶ್ವಗುರು” ಎನ್ನುವುದು. ಇಂದಿನ ಆಧುನಿಕ ಭಾರತದ ಸಂವಿಧಾನದಲ್ಲಿ ಏನೇನಿದೆಯೋ ಅದೆಲ್ಲವೂ ಮತ್ತು ಅದಕ್ಕೂ ಹೆಚ್ಚಿನ ವಿಚಾರಗಳನ್ನು ಬಸವಾದಿ ಶರಣರ ಸಂವಿಧಾನ ಒಳಗೊಂಡಿದೆ. ಅದಕ್ಕೇನೇ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಭೀಮರಾವ್ ಅಂಬೇಡ್ಕರ್ ಹೇಳತಾರೆ:
ನನಗೆ ಮೊದಲೇ ಬಸವಣ್ಣನವರ ವಿಚಾರಧಾರೆಗಳು ಗೊತ್ತಿದ್ದಿದ್ದರೆ
ಸಂವಿಧಾನದ ಸ್ವರೂಪ ಇನ್ನೂ ಉತ್ಕೃಷ್ಠ ಮಟ್ಟಕ್ಕೇರುತ್ತಿತ್ತು
ತಮ್ಮ ಈ ಸಾಮಾಜಿಕ, ಅರ್ಥಿಕ, ಸಾಂಸ್ಕೃತಿಕ, ಸಾಹಿತ್ಯಿಕ ಉನ್ನತ ಸಿದ್ಧಾಂತಗಳನ್ನು ಪ್ರತಿಪಾದಿಸಿ ಒಂದು ಅದ್ಭುತವಾದ ಪರಿವರ್ತನೆಗೊಂಡ ಸಮಾಜವನ್ನು ಎರಡೇ ಎರಡು ದಶಕಗಳಲ್ಲಿ ಕಟ್ಟಿ ನಿಲ್ಲಿಸಿದಂತಹ ಮಹಾನ್ ದಾರ್ಶನಿಕ ಬಸವಣ್ಣನವರು. ಇದು ಇಡೀ ವಿಶ್ವಕ್ಕೇ ಒಂದು ಮಾದರಿ ನಾಯಕತ್ವ ಮತ್ತು ಪ್ರಜಾಪ್ರಭುತ್ವವನ್ನು ನೀಡಿದ ದಾರ್ಶನಿಕ. ಇಂಥ ದಾರ್ಶನಿಕ ಬಸವೇಶ್ವರರನ್ನು ನೆನೆಯುವ ಅವಕಾಶ ಇಂದು ಬಂದಿದೆ. ಭಾರತದ ನೂತನ ಸಂಸತ್ತಿನ ಕಟ್ಟಡಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡುವಂತೆ ಭಾರತ ಸರ್ಕಾರವನ್ನು ನಾವು ಒತ್ತಾಯಿಸಬೇಕು.
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
ತುಮಕೂರು
ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏