ಹೆಣ್ಣು-ಮಹಿಳೆ-ಸ್ತ್ರೀ

ಹೆಣ್ಣು-ಮಹಿಳೆ-ಸ್ತ್ರೀ

ಇತ್ತೀಚೆಗೆ ಕೆಲಸದ ನಿಮಿತ್ತ ಕಂದಾಯ ಇಲಾಖೆ ಕಚೇರಿಗೆ ಹೋಗಿದ್ದೆ. ಅಲ್ಲಿನ ಬಹಳ ಜನರು ಸಂಬಂಧಿಸಿದ ಅಧಿಕಾರಿಗಳಿಗಾಗಿ ಕಾಯುತ್ತಿದ್ದರು. ನಾನು ಅಲ್ಲಿಯೇ ಗಾರ್ಡನ್ನಿನ ಬೆಂಚಿನ ಮೇಲೆ ಕುಳಿತುಕೊಂಡೆ. ಬಿಸಿಲಲ್ಲಿ ತಿರುಗಿ ಬಳಲಿದ ಐವತ್ತರ ಆಸುಪಾಸಿನ ಮಹಿಳೆಯೊಬ್ಬಳು ನನ್ನ ಬಳಿ ಬಂದು ಕುಳಿತುಕೊಂಡಳು. ಕಣ್ಣುಗಳಲ್ಲಿ ನಿರಾಸೆ ತುಂಬಿತ್ತು. ನಾನು ಆ ಮಹಿಳೆಯೊಂದಿಗೆ ಮಾತನಾಡಲು ತೊಡಗಿದೆ. ಅವಳು ವಿಧವಾ ವೇತನಕ್ಕಾಗಿ ಅರ್ಜಿ ಹಾಕಿದ್ದು, ಅದು ತಿರಸ್ಕೃತಗೊಂಡು ಮತ್ತೆ ಹೊಸದಾಗಿ ಅರ್ಜಿ ಹಾಕಿ ಅದಕ್ಕಾಗಿ ತಾನು ಅಲೆದಾಡುತ್ತಿರುವ ವಿಷಯವನ್ನು ಹಂಚಿಕೊಂಡಳು. ಮಾತು ಮುಂದುವರಿಸುತ್ತಾ ತನ್ನ ವೈಯಕ್ತಿಕ ಬದುಕಿನ ವ್ಯಥೆಯನ್ನು ಹೇಳಲಾರಂಬಿಸಿದಳು. ಈ ಮೊದಲು ಅವಳ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದು, ಆ ಮಹಿಳೆಯ ಗಂಡ ಒಳ್ಳೆಯ ಉದ್ಯೋಗಸ್ಥನಾಗಿದ್ದ. ಬದುಕಿಗೆ ಯಾವುದೇ ಕೊರತೆ ಇಲ್ಲದೆ ಸಂತಸದ ಜೀವನ ಸಾಗಿಸುತ್ತಿದ್ದರು. ಬೇಡ ಎಂದರೂ ಕೇಳದೆ ಸಾಲ ಮಾಡಿ ಮೂರು ಕೋಟಿಯ ಬಂಗಲೆ ಕಟ್ಟಿಸಿದ್ದ. ಇಬ್ಬರು ಗಂಡು ಮಕ್ಕಳಲ್ಲಿ ಚಿಕ್ಕವನು ದೈಹಿಕ ನ್ಯೂನತೆಯನ್ನು ಹೊಂದಿದ್ದು ಆರೈಕೆಗೆ ಸದಾ ಒಬ್ಬರು ಇರಬೇಕಾದ ಸ್ಥಿತಿಯಲ್ಲಿದ್ದನು. ತಡವಾಗಿಯಾದರೂ ಅವನಿಗೆ ಶಾಲೆಗೆ ಸೇರಿಸಲಾಗಿತ್ತು. ಹೀಗಿರುವಾಗ ಆ ಮಹಿಳೆಯ ಗಂಡ ಉದ್ಯೋಗದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ. ಮಾಡಿದ ಸಾಲಕ್ಕೆ ಮೂರು ಕೋಟಿ ಬೆಲೆಬಾಳುವ ಮನೆಯನ್ನು ತೀರಾ ಕಡಿಮೆ ಅಂದರೆ ಒಂದು ಕೋಟಿಗೆ ಮಾರಿ ಬೆಂಗಳೂರು ತೊರೆದು ಕಲಬುರಗಿಗೆ ಬಂದು ಸೇರಿದರು. ಈ ಆಘಾತ ತಡೆದುಕೊಳ್ಳದೆ ಆಕೆಯ ಗಂಡ ಹೃದಯಾಘಾತದಿಂದ ತೀರಿ ಹೋದನು. ಇದರಿಂದ ಆ ಮಹಿಳೆಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಅವಳು ಪದವೀಧರೆಯಾಗಿದ್ದಳು. ತಾನು ಕೂಡ ಏನಾದರೂ ಒಂದು ಉದ್ಯೋಗಕ್ಕೆ ಸೇರಿಕೊಳ್ಳುವೇನೆಂದರೆ ಆಕೆಯ ಗಂಡ ನಮಗೇನು ಕಮ್ಮಿಯಾಗಿದೆ ? ನೀನು ಕೆಲಸ ಮಾಡುವುದು ಬೇಡವೆಂದು ತಡೆದಿದ್ದನಂತೆ. ಅದರ ಪರಿಣಾಮ ಆಕೆ ಈಗ ಆರ್ಥಿಕವಾಗಿ ಬೇರೆಯವರ ಮೇಲೆ ಅವಲಂಬಿತವಾಗಿರುವ ಪರಿಸ್ಥಿತಿ ಎದುರಾಗಿದೆ. ಗಂಡನ ಮನೆಯವರು ಅವರ ಪಾಲಿನ ಎರಡು ಕೋಣೆಗಳನ್ನು ಕೊಟ್ಟು ಮುಕ್ತರಾಗಿದ್ದಾರೆ. ಯಾವುದೇ ಆರ್ಥಿಕ ಸಹಾಯ ಮಾಡುತ್ತಿಲ್ಲ. ಅವಳ ತವರಿನವರೇ ಅವಳ ಹಾಗೂ ಮಕ್ಕಳ ಜೀವನೋಪಾಯಕ್ಕೆ ಸಹಾಯ ಮಾಡುತ್ತಿದ್ದಾರೆ. ಆ ಮಹಿಳೆ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರತಿ ತಿಂಗಳಿನ ವೈದ್ಯಕೀಯ ಖರ್ಚು ಕೂಡ ತಂದೆ ಹಾಗೂ ತಮ್ಮ ಭರಿಸುತ್ತಿದ್ದಾರೆ. ಅವರ ತಾಯಿಯೂ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹೇಗಾದರೂ ಮಾಡಿ ತಾನು ಒಂದು ಉದ್ಯೋಗ ಹುಡುಕಿಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದಾಳೆ. ಆದರೆ ಅವಳ ಓದು ಹಾಗೂ ವಯಸ್ಸಿಗೆ ಉದ್ಯೋಗ ದೊರೆಯುತ್ತಿಲ್ಲ. ತನ್ನ ಎಲ್ಲಾ ನೋವನ್ನು ತೋಡಿಕೊಳ್ಳುವಷ್ಟರಲ್ಲಿ ದುಃಖ ಮಡುಗಟ್ಟಿ ಗದ್ಗದಿತಳಾಗಿ ಗಳಗಳ ಅಳತೊಡಗಿದಳು. ದುಃಖ, ನಿರಾಸೆ, ನೋವು ಅಸಹಾಯಕತೆ ಇವೆಲ್ಲವುಗಳಿಂದ ನಲುಗಿ ಬದುಕು ಭಾರವಾಗಿ ಜೀವಂತ ಗೊಂಬೆಯಂತೆ ಕಾಣುತ್ತಿದ್ದಳು. “ಮದುವೆಯ ನಂತರ ಉದ್ಯೋಗಕ್ಕೆ ಸೇರಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ, ಈಗಿನ ಪರಿಸ್ಥಿತಿಯಲ್ಲಿ ಬೇರೆಯವರಿಗೆ ಹೊರೆಯಾಗದೆ ಮಕ್ಕಳನ್ನು ನೋಡಿಕೊಳ್ಳಬಹುದಿತ್ತು.” ಎಂಬ ಅವಳ ಮಾತಿನಲ್ಲಿಯ ನೋವಿನ ತೀವ್ರತೆ ಕಣ್ಣುಗಳನ್ನು ಒದ್ದೆಯಾಗಿಸಿದವು.

ಇನ್ನೊಂದು ಘಟನೆ…….

ಹಿಂದಿನ ವರ್ಷ ಮಾರ್ಚ್ 9ರಂದು ಸ್ಕೂಟಿಯಲ್ಲಿ ಕಲಬುರಗಿಯ ಜಗತ್ ವೃತ್ತದ ಬಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದೆ. ಆಗ ಕುಡಿದ ಮತ್ತಿನಲ್ಲಿದ್ದ ಒಬ್ಬ ಅವಿವೇಕಿ ತನ್ನ ಹೆಂಡತಿಯನ್ನು ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸುತ್ತಿದ್ದ. ಅವಳು ಎಷ್ಟು ಗೋಗರೆದರೂ ಬಿಡದೆ ಹೊಡೆಯುತ್ತಿದ್ದ. ತಾಯಿಯ ರೋಧನೆ ಕಂಡ ಚಿಕ್ಕ ಮಕ್ಕಳು ಕೂಡ ಹೆದರಿ ಅಳುತ್ತಿದ್ದವು.

ಅದೆಷ್ಟೋ ದುಡಿಯುವ ಮಹಿಳೆಯರು ಕೂಡ ಆರ್ಥಿಕವಾಗಿ ಸ್ವತಂತ್ರರೂ ಅಲ್ಲ, ಸಬಲರೂ ಅಲ್ಲ. ಅವರ ಸಂಬಳ ಎಷ್ಟಿದೆ ಎಂದು ಅರಿಯದ ಮುಗ್ಧರು ಕೂಡ ನಮ್ಮ ಸುತ್ತ ಇದ್ದಾರೆ. ಅದೆಷ್ಟೋ ನೌಕರ ದಂಪತಿಗಳಾದವರು ಹೆಂಡತಿಯ ಬ್ಯಾಂಕ್ ಪಾಸ್ ಬುಕ್, ಎ.ಟಿ.ಎಂ. ಅವಳಿಗೆ ತೋರಿಸಿಯೇ ಇಲ್ಲ. ಆನ್ಲೈನ್ ಹಣದ ವ್ಯವಹಾರವಂತು ದೂರವೇ ಉಳಿಯಿತು.

ಇಂದಿಗೂ ಅದೆಷ್ಟೋ ಹೆಣ್ಣುಮಕ್ಕಳು ಘನತೆ, ಗೌರವ ಹಾಗೂ ಉತ್ತಮ ಕೌಟುಂಬಿಕ ಮತ್ತು ಸಾಮಾಜಿಕ ಸ್ಥಾನಮಾನ ದೊರೆಯದೆ ಲಿಂಗ ತಾರತಮ್ಯಕ್ಕೆ ಬಲಿಯಾಗಿ ಶೋಷಣೆ, ಹಿಂಸೆ, ನಿಂದನೆ ಹಾಗೂ ದೌರ್ಜನ್ಯಗಳಿಗೆ ತುತ್ತಾಗುತ್ತಿದ್ದಾರೆ. ಸ್ವತಂತ್ರ ಚಿಂತನೆ, ಅಭಿವ್ಯಕ್ತಿ, ಆತ್ಮವಿಶ್ವಾಸ, ಆತ್ಮ ಗೌರವಗಳನ್ನು ಕಳೆದುಕೊಂಡು “ಸಬಲರ ಮುಖವಾಡದೊಳಗಿನ ಅಸಬಲರಾಗಿದ್ದಾರೆ.”

ಇದು ನಮ್ಮ ನೆರೆಯ ಹೆಣ್ಣು ಮಕ್ಕಳ ದುರಾವಸ್ಥೆಯಾದರೆ, ನಮ್ಮ ಮನೆಯಲ್ಲಿಯೇ ಇರುವ ತಾಯಿ, ಅಕ್ಕ, ತಂಗಿ, ಹೆಂಡತಿ, ಮಗಳು ಎಷ್ಟು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬುದನ್ನು ಅರಿಯಬೇಕಿದೆ. ಅವರ ಸ್ಥಿತಿ ಮಳೆಯಲಿ ಸುರಿಸಿದ ಕಣ್ಣೀರಿನಂತಾಗಿದೆ. ಅವರೆಲ್ಲ ಸ್ವತಂತ್ರರೇ….? ಸಂತಸದಿಂದಿದ್ದಾರೆಯೇ……? ಸುರಕ್ಷಿತರೇ…..?

ಮಹಿಳೆಯರ ಸಮಸ್ಯೆಗಳು ಬಹುತೇಕ ನಿರ್ಲಕ್ಷಿಸಲ್ಪಟ್ಟಿವೆ.

ಅನಾಗರಿಕ ಯುಗವೆಂದು ಕರೆಸಿಕೊಂಡಿದ್ದ ಶಿಲಾಯುಗದಲ್ಲಿ ಮಹಿಳೆಯರಿಗೆ ಇದ್ದ ಸಮಾನ ಸ್ಥಾನಮಾನ ನಾಗರಿಕತೆ ಬೆಳದಂತೆಲ್ಲ ಎರಡನೇ ದರ್ಜೆಗೆ ಕುಸಿಯಿತು. ಲಿಂಗ ತಾರತಮ್ಯ ಹೋಗಲಾಡಿಸಿ ಮಹಿಳೆಯರಿಗೆ ಸಮಾನ ಸ್ಥಾನಮಾನ ದೊರಕಿಸುವ ಪ್ರಯತ್ನಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಇವೆ.

ಬೌದ್ಧ ಧರ್ಮದಲ್ಲಿ ಸ್ತ್ರೀ ಪುರುಷರಿಬ್ಬರು ಸರಿಸಮಾನರು ಎಂದು ಹೇಳಲಾಗಿದೆ. ಸ್ತ್ರೀಯರನ್ನು ಭಿಕ್ಕು ಸಂಘಕ್ಕೆ ಸೇರಿಸಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯಲಾಗಿದೆ. ಎಲ್ಲ ಮಾನವರು ಸರಿಸಮಾನರು ಎಂದು ಸಾರುವುದರೊಂದಿಗೆ ಲಿಂಗ ಆಧಾರಿತ ಅಸಮಾನತೆಯನ್ನು ತಿರಸ್ಕರಿಸಲಾಗಿದೆ. ಬಾಳ ಸಂಗಾತಿ ಆಯ್ಕೆ, ಕಲಿಯುವ ಹಕ್ಕು, ವಿಧವಾ ವಿವಾಹ, ವಿಚ್ಛೇದನ ಹಕ್ಕು, ಆಸ್ತಿಯಲ್ಲಿ ಸಮಪಾಲಿನ ಹಕ್ಕುಗಳನ್ನು ನೀಡಲಾಗಿತ್ತು.

12ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸಮಗ್ರ ಬದಲಾವಣೆಗಾಗಿ ವಚನ ಕ್ರಾಂತಿಯನ್ನೇ ಮಾಡಿದರು. ಅವರು ಲಿಂಗ ಭೇದವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದನ್ನು ಹಲವಾರು ವಚನಗಳಲ್ಲಿ ಕಾಣಬಹುದು.

ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ

ಹೆಣ್ಣು ಮಾಯೆ ಎಂಬರು ಹೆಣ್ಣು ಮಾಯೆಯಲ್ಲ

ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ

ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಎಲ್ಲ ದುರಂತಗಳಿಗೆ ‘ಹೆಣ್ಣು- ಹೊನ್ನು- ಮಣ್ಣು’ ಕಾರಣ ಎಂದು ಹೇಳುತ್ತಾ ಬಂದಿರುವುದನ್ನು ನಾವು ಅನಾದಿ ಕಾಲದಿಂದಲೂ ರಾಮಾಯಣ, ಮಹಾಭಾರತಗಳಂತಹ ಮಹಾಕಾವ್ಯಗಳಲ್ಲಿಯೂ ನೋಡುತ್ತೇವೆ. ಜನರ ಮನದಾಳದಲ್ಲಿ ಇಂತಹ ತಪ್ಪು ತಿಳುವಳಿಕೆಯನ್ನು ತುಂಬಲಾಗಿದೆ. ಜೀವನದಲ್ಲಿ ನಡೆಯುವ ಅನಾಹುತಗಳಿಗೆ ಕೇವಲ ಹೆಣ್ಣು, ಹೊನ್ನು, ಮಣ್ಣು ಕಾರಣವಲ್ಲ ಅದಕ್ಕೆ ಹೆಣ್ಣು ಮತ್ತು ಗಂಡು ಇವರಲ್ಲಿರುವ ಆಸೆಯೇ ಕಾರಣವೆಂದು ‘ಅಲ್ಲಮಪ್ರಭು’ ತಮ್ಮ ವಚನದ ಮೂಲಕ ಜನರ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವಾತ್ಮನು

ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥ.

ಈ ವಚನದ ಕರ್ತೃ ‘ಗೊಗ್ಗವ್ವೆ’ಯು ಮಹಿಳೆ ಮತ್ತು ಪುರುಷರಲ್ಲಿ ಶಾರೀರಿಕ ರಚನೆಗಳಲ್ಲಿ ಭಿನ್ನತೆ ಇದೆಯೇ ಹೊರತು ಜ್ಞಾನ ಹಾಗೂ ನೈಸರ್ಗಿಕ ಬಯಕೆಗಳಲ್ಲಿ ಯಾವುದೇ ಭಿನ್ನತೆ ಇರದೆ ಸಾಮ್ಯತೆಯನ್ನು ಹೊಂದಿವೆ. ಸಮಾಜವು ಪುರುಷ ಮೇಲು ಹಾಗೂ ಮಹಿಳೆ ಮಾತ್ರ ಕೀಳು ಎಂಬ ಹಣೆಪಟ್ಟಿ ಕಟ್ಟಿದೆ ಎಂದು ಹೇಳಿದರು. ಅನೇಕ ವಚನಕಾರರು ತಮ್ಮ ವಚನಗಳ ಮೂಲಕ ಈ ಲಿಂಗ ಭೇದವನ್ನು ಕಟುವಾಗಿ ಟೀಕಿಸಿದ್ದಾರೆ.

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ

ಗಂಡು ಗಂಡಾದೆಡೆ ಹೆಣ್ಣಿನ ಸೂತಕ

ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ

ಮುನ್ನಿಲ್ಲದ ಸೂತಕಕ್ಕೆ ಜಗ ಮರುಳಾಯಿತು

ನನ್ನ ದೇವ ಚನ್ನ ಮಲ್ಲಿಕಾರ್ಜುನನೆಂಬ ಗುರುವಂಗೆ ಜಗವೆಲ್ಲ ಹೆಣ್ಣು ನೋಡಾ ಅಯ್ಯಾ

‘ಅಕ್ಕಮಹಾದೇವಿ’ ಯು ಮನಕ್ಕೆ ಅಂಟಿದ ಸೂತಕ ಕಳೆದಾಗ ಮಾತ್ರ ಹೆಣ್ಣು ಮತ್ತು ಗಂಡಿನ ಶರೀರ ಸಂರಚನೆ ಕುರಿತಾದ ಕಲ್ಪಿತ ಸೂತಕವೆಂಬ ಭ್ರಮೆಯಿಂದ ಹೊರಬರಲು ಸಾಧ್ಯ ಎಂದು ಹೇಳಿದ್ದಾರೆ. ವಚನಕಾರರೆಲ್ಲ ಹೆಣ್ಣು ಮತ್ತು ಗಂಡೆಂಬುದು ಜೀವ ವೈವಿಧ್ಯವೆಂದು ತಮ್ಮ ವಚನಗಳ ಮೂಲಕ ಸಾರುತ್ತ ಬಂದಿದ್ದಾರೆ.

ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಹೋರಾಟದ ಫಲವಾಗಿ ಸಮಾನ ವೇತನ, ಸಮಾನ ಆರ್ಥಿಕ ಅವಕಾಶ, ಸಮಾನ ಕಾನೂನು ಹಕ್ಕುಗಳು, ಸಂತಾನೋತ್ಪತ್ತಿ ಹಕ್ಕುಗಳು, ಮಕ್ಕಳ ಆರೈಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆಗಾಗಿ ವಿಶ್ವಸಂಸ್ಥೆಯು 1975 ರಿಂದ ಪ್ರತಿ ವರ್ಷ ಮಾರ್ಚ್ 8 ರಂದು “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಆಚರಿಸಲು ಆರಂಭಿಸಿತು. ಅಂದಿನಿಂದ ನಮ್ಮ ದೇಶದಲ್ಲಿಯೂ ಪ್ರತಿ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಆಚರಿಸುತ್ತ ಬರುತ್ತಿದ್ದೇವೆ. ಪ್ರತಿ ವರ್ಷದ ಆಚರಣೆಯು ಮಹಿಳಾ ಹಕ್ಕುಗಳೊಳಗಿನ ನಿರ್ದಿಷ್ಟ ವಿಷಯ ಅಥವಾ ಸಮಸ್ಯೆಯ ಮೇಲೆ ಕೇಂದ್ರೀಕೃತವಾಗಿದೆ.

‘ಹೆಣ್ಣಿಗೆ ಹೆಣ್ಣೇ ಶತ್ರು’, ‘ಹೆಣ್ಣು ಅಬಲೆ’, ‘ಹೆಣ್ಣಿನ ಬುದ್ಧಿ ಮೊಣಕಾಲು ಕೆಳಗೆ’,’ಹೆಣ್ಣು ಅಡುಗೆ ಮನೆಗಷ್ಟೇ ಸೀಮಿತ’ ಹೀಗೆ ಒಂದೇ ಎರಡೇ ಇಂತಹ ನುಡಿಗಳಿಂದ ಸಮಾಜವು ಹೆಣ್ಣುಮಕ್ಕಳನ್ನು ಹತ್ತಿಕ್ಕುವ ಪ್ರಯತ್ನ ಇಂದಿಗೂ ಮಾಡುತ್ತಲೇ ಇದೆ.

ಜಾಗತಿಕ ಮಟ್ಟದಲ್ಲಿ ಮಹಿಳಾ ಸಮಾನತೆಗಾಗಿ ‘ಬುಚಿ ಎಮೆಚೆಟಾ’, ‘ಜೆರ್ಡಾ ಲರ್ನರ್’, ‘ಫ್ಲಾರೆನ್ಸ್ ಮುಂಬಾ’, ‘ಆನ್ ಕೋಯ್ತೇಡ್’, ‘ಆಲೀಸ್ ಶ್ವಾರ್ಜರ್’,‘ ಮಲಾಲಾ ಯುಸುಫ್ ಜಾಯ್’ ಹೀಗೆ ಅನೇಕರು ಹೋರಾಟ ಮಾಡಿದ್ದಾರೆ ಹಾಗೂ ಮಾಡುತ್ತಲೇ ಇದ್ದಾರೆ.

ಅದರಂತೆ ಭಾರತದಲ್ಲಿಯೂ ಕೂಡ ಮೇಧಾ ಪಾಟ್ಕರ್, ಮಧುಕೀಶ್ವರ್, ಬೃಂದಾ ಕಾರಟ್, ಡಾ.ಜಿ.ವ್ಹಿ. ವೆನ್ನಲ, ಎ.ಅರುಳ್ ಮೌಳಿ ಅಷ್ಟೇ ಅಲ್ಲ ಪ್ರಚಲಿತ ನಮ್ಮ ಭಾಗದ ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ ಇವರೆಲ್ಲರು ಮಹಿಳಾ ಅಸಮಾನತೆ ಹೋಗಲಾಡಿಸಲು ಅವಿರತ ಶ್ರಮ ಪಡುತ್ತಲೇ ಇದ್ದಾರೆ. ಆದಾಗ್ಯೂ ನಿರೀಕ್ಷಿತ ಮಟ್ಟದ ಯಶಸ್ಸು ದೊರೆತಿಲ್ಲ.

ಸ್ವತಂತ್ರ ಭಾರತದಲ್ಲಿ ಸಂವಿಧಾನ ಜಾರಿಯಾದ ನಂತರ ಹಲವು ಕಾನೂನುಗಳು ಮಹಿಳಾ ಪರ ಕಾರ್ಯಕ್ರಮಗಳು ಮತ್ತು ಯೋಜನೆಗಳು ಜಾರಿಗೆ ಬಂದಿವೆ ಅವುಗಳೆಂದರೆ……

ಕೇಂದ್ರದ ‘ಬೇಟಿ ಬಚಾವೋ, ಬೇಟಿ ಪಢಾವೋ’, ‘ಸುಕನ್ಯಾ ಸಮೃದ್ಧಿ’,’ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’,’ಸ್ವಾಧಾರ ಗೃಹ’, ’ಸಖಿ-ಒನ್ ಸ್ಟಾಪ್ ಸೆಂಟರ್’, ಯೂನಿವರ್ಸಲೈಸೇಷನ್ ಆಫ್ ವಿಮೆನ್ ಹೆಲ್ಪ್ ಲೈನ್ -181 ……

ರಾಜ್ಯದ ‘ಸಾಂತ್ವನ ಯೋಜನೆ’, ಬಾಲಕಿಯರ ವಸತಿ ಯೋಜನೆಗಳು, ‘ಭಾಗ್ಯಲಕ್ಷ್ಮೀ ಯೋಜನೆ’…..ಇತ್ಯಾದಿ ಕಾರ್ಯಕ್ರಮಗಳು ಹಾಗೂ ಯೋಜನೆಗಳಿಂದ ಮಹಿಳಾ ಸ್ಥಿತಿಗತಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸುಧಾರಣೆಯಾಗಿದ್ದನ್ನು ಗಮನಿಸಬಹುದು. ಪುರುಷ ಪ್ರಾಬಲ್ಯವಿದ್ದ ಅನೇಕ ವೃತ್ತಿಗಳಲ್ಲಿ ಮಹಿಳೆಯರು ದಾಪುಗಾಲು ಇಟ್ಟಿದ್ದಾರೆ. ಆದರೂ ಕೂಡ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಕೊನೆಗೊಂಡಿಲ್ಲ. ಹಾಗಾಗಿಯೇ ಹಿಂದೆಂದಿಗಿಂತಲೂ ಇಂದು ಮಹಿಳೆಯರು ಸ್ವತಃ ಎಚ್ಚೆತ್ತುಕೊಳ್ಳಬೇಕು. ಏಕವ್ಯಕ್ತಿ ಹೋರಾಟಕ್ಕಿಂತ ಸಂಘಟಿತ ಹೋರಾಟಗಳು ನಡೆಯಬೇಕು.

ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರು “ಶಿಕ್ಷಣವು ಬದಲಾವಣೆಯ ಅಸ್ತ್ರ. ಈ ಬದಲಾವಣೆಯು ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾದರೆ,ಯಾವುದೇ ಹಿಂಸಾತ್ಮಕ ಕ್ರಾಂತಿ ಇಲ್ಲದೆ ಬದಲಾವಣೆ ಸಾಧ್ಯ. ಬದಲಾವಣೆ ಇರುವ ಒಂದೇ ಒಂದು ಅಸ್ತ್ರವೆಂದರೆ ಶಿಕ್ಷಣ” ಎಂದು ಹೇಳುತ್ತಾರೆ. ಆದರೆ 21ನೇ ಶತಮಾನದಲ್ಲಿನ ಶಿಕ್ಷಿತ ಸಮಾಜದಲ್ಲಿ “ಮಹಿಳಾ ಅಸಮಾನತೆ” ಎಂಬುದು ಮಾರಕವಾಗಿ ಪರಿಣಮಿಸಿದೆ.

ಬದಲಾದ ಸನ್ನಿವೇಶಗಳಲ್ಲಿ ಹೊಸ ರೀತಿಯ ಹೋರಾಟಗಳ ಅನಿವಾರ್ಯತೆ ಬಂದೊದಗಿದೆ. ಪುರುಷರು ಹಾಗೂ ಮಹಿಳೆಯರ ಅಂತರಂಗದಲ್ಲಿಯೇ ಲಿಂಗ ತಾರತಮ್ಯದ ವಿರುದ್ಧ ಕಿಡಿ ಹೊತ್ತಿ ಅಸಮಾನತೆ ಶಮನವಾಗಬೇಕಿದೆ. ಮಹಿಳೆಯರಷ್ಟೇ ಅಲ್ಲ ಪ್ರಜ್ಞಾವಂತ ಪುರುಷರು ಸಹ ಈ ಹೋರಾಟದಲ್ಲಿ ಭಾಗಿಯಾಗಬೇಕು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮಹಿಳಾ ಸಬಲೀಕರಣ ಮತ್ತು ಸಶಕ್ತೀಕರಣದ ಕ್ರಾಂತಿ ಉಂಟಾಗಬೇಕಿದೆ. ಪ್ರಜ್ಞಾವಂತ ಸಮಾಜದ ಮೂಲಕ ಈ ಅಸಮಾನತೆ ನಿರ್ಮೂಲವಾಗಬೇಕಿದೆ……..

– ಉಷಾ ಗೊಬ್ಬೂರ

Don`t copy text!