ಮಹಿಳಾ ದಿನ
ಕಾಯುತ್ತಿದೆ
ನ್ಯಾಯಾಲಯದಲ್ಲಿ
ಹೆತ್ತ ತಾಯಿಯೆ
ಮಗಳನು ವೇಶ್ಯಾವಾಟಿಕೆ
ತಳ್ಳಿದ ಪ್ರಕರಣ
ನಲುಗಿ ನರಳುತ್ತಿದ್ದಾರೆ
ಮೂವರು ಹೊಂಗನಸಿನ
ಹುಡುಗಿಯರು
ಎಸಿಡ್ ದಾಳಿಗೆ
ಪತ್ತೆ ಹಚ್ಚಿಲ್ಲ
ಕಾರಣ ಯಾರೆಂದು
ಪ್ರಾಥಮಿಕ ಶಾಲೆಯ
ಪೋರಿ ಬಸಿರು ಹೊತ್ತು
ಕಂಗಾಲಾಗಿದ್ದಾಳೆ
ಬಂಧಿತನಾಗಿದ್ದನೆ
ಕಾವಿ ಧರಿಸಿದ
ಬಾಲ ಸ್ವಾಮಿ
ಅಪ್ರಾಪ್ತ ಬಾಲಕಿಗೆ
ಲೈಂಗಿಕ ಕಿರುಕುಳ ನೀಡಿದ
ಆರೋಪದ ಮೇಲೆ
ಸಿಕ್ಕಿಲ್ಲ
ಕಾಮುಕರಿನ್ನೂ
ಪೋಲಿಸರ ಕೈಗೆ
ಸಿದ್ದಗಂಗಾ ಜಾತ್ರೆಯಲಿ
ಸಾಮೂಹಿಕ ಅತ್ಯಾಚಾರ
ಎಸಗಿ ಹೆಣ್ಣಿನ ಬದುಕು
ಹೊಸಕಿ ಹಾಕಿದವರು
ಕೈಕಟ್ಟಿ ಕುಳಿತಿದೆ
ಕಾನೂನು
ತಿಂಗಳು ಉರುಳಿದರೂ
ಕ್ರಮ ಜರುಗಿಸದೆ
ಹಾನಗಲ್ಲ ಸಾಮೂಹಿಕ
ಅತ್ಯಾಚಾರಕ್ಕೆ ಒಳಗಾದ
ಮಹಿಳೆಯ ನೋವು
ಕೇಳುವರಿಲ್ಲ
ಆಗಿಲ್ಲ ಇನ್ನು ಶಿಕ್ಷೆ
ಹೆಣ್ಣು ಭ್ರೂಣ ಪತ್ತೆ
ಹತ್ಯೆಯ
ಮಾರಣ ಹೋಮ
ಮಾಡಿದ ವಂಚಕರ
ಜಾಲಕ್ಕೆ
ಅತ್ತೆಯ ಸಾವು ಬಯಸಿ
ದೇವರೆ ಹರಕೆ ಹೊತ್ತು
ಹುಂಡಿಗೆ
ದುಡ್ಡು ಸುರಿವ ಸೊಸೆ
ಸಂಬ್ರಮಿಸುತ್ತಿದ್ದೆವೆ
ಎಲ್ಲ ಮರೆತು
ಮಹಿಳಾ ದಿನ
ಸಾಧಕರಿಗೆ ಪದವಿ ಸನ್ಮಾನ
ರಾಜಕೀಯ ಸ್ಥಾನಮಾನ
–ಡಾ. ನಿರ್ಮಲ ಬಟ್ಟಲ