ವಚನ ಬೆಳಗು
ಆಲಿಸೆನ್ನ ಬಿನ್ನಪವ ಪಾಲಿಸೆನ್ನ ಬಿನ್ನಪವ
ಏಕೆನ್ನ ಮೊರೆಯ ಕೇಳೆ ನೀನಲ್ಲದೇ ಮತ್ತಿಲ್ಲ
ನೀನೇ ಎನಗೆ ಗತಿ ನೀನೇ ಎನಗೆ ಮತಿ
ಚೆನ್ನಮಲ್ಲಿಕಾರ್ಜುನಯ್ಯ
ಅಕ್ಕನ ವಚನಗಳು ಭಾವ ತೀವ್ರತೆಯಿಂದ ತುಂಬಿ ತುಳುಕಿದ ಭಾವಗೀತೆಗಳಾಗಿವೆ. ಪರಮಾತ್ಮನ ಹಂಬಲದ ವಚನಗಳು. ಅಕ್ಕನ ಕಂಗಳ ಕಂಬನಿ ಕನವರಿಕೆ ವ್ಯೋಮವನ್ನೇ ವ್ಯಾಪಿಸುವಂತಹುದು. ನಿರ್ಮಲ ಹೃದಯ ಹಾಗೂ ಮನಸ್ಸಿನ ಭಾವದುಂದುಭಿ ಅಕ್ಕನ ವಚನಗಳು. ಮುಗ್ಧ ಭಕ್ತಿಯಭಾವ ಕಾವ್ಯಗಂಗೆಯಾಗಿ ಹರಿದಿದೆ. ರವಿ ಕಾಣದ್ದನ್ನು ಕವಿಯಾಗಿ ಅವರು ಕಂಡಿದ್ದಾರೆ. ಬೇರೆ ಯಾರ ಗ್ರಹಿಕೆಯ ತೆಕ್ಕೆಗೂ ಸಿಗಲಾರದ ದಿವ್ಯ ಅನುಭೂತಿಯನ್ನು ಅಕ್ಕ ತನ್ನಂತರಂಗದ ಆಳದಲ್ಲಿ ಅನುಭವಿಸುತ್ತಾರೆ. ಅಕ್ಕನ ಭಾವಕೋಶದಲ್ಲಿ ಎಲ್ಲವೂ ದೃಷ್ಟಾಂತಗಳಾಗಿ ಉಪಮೆಗಳಾಗಿ ಪ್ರಕಟವಾಗಿವೆ. ಅಕ್ಕನ ವಚನಗಳಲ್ಲಿ ನಾದ,ಲಯ, ಭಕ್ತಿ, ವಿರಹ ಭಾವ, ಭಾವಗೀತೆಯ ರೂಪ ತಾಳಿ ಹೊರಹೊಮ್ಮಿವೆ. ಪ್ರಕೃತಿ ಪ್ರೇಮಿ ಅಕ್ಕ ನಿಸರ್ಗದ ಪ್ರತಿ ಕಣ ಕಣದಲ್ಲೂ ತನ್ನ ಆರಾಧ್ಯ ದೈವ ಚೆನ್ನ ಮಲ್ಲಿಕಾರ್ಜುನನನ್ನು ಅರಸುತ್ತಾ ಪ್ರತಿಕ್ಷಣ ಪ್ರತಿ ದಿನ ಮುಗ್ಧ ಭಕ್ತಿಯ ನೆಲೆಯಲ್ಲಿ ಅಲೆಯುತ್ತಾರೆ. ಚಿತ್ರವತ್ತಾದ ಪರಿಣಾಮಕಾರಿ ದೃಶ್ಯಗಳನ್ನು ಸಣ್ಣ ಸಂಗತಿಗಳನ್ನು ಉದಾಹರಣೆ ನೀಡುತ್ತಾ ವಚನಗಳಲ್ಲಿ ಕಣ್ಮುಂದೆ ತಂದು ನಿಲ್ಲಿಸುತ್ತಾರೆ.
ಆಲಿಸೆನ್ನ ಬಿನ್ನಪವ ಪಾಲಿಸೆನ್ನ ಬಿನ್ನಪವ
ಏಕೆನ್ನ ಮೊರೆಯ ಕೇಳೆ ನೀನಲ್ಲದೆ ಮತ್ತಿಲ್ಲ
ಮೇಲಿನ ಈ ವಚನದಲ್ಲಿ ಅಕ್ಕನ ಬಿನ್ನಹ, ಆರ್ತನಾದ, ಮೊರೆ, ಪ್ರಾರ್ಥನೆಯ ಪರಿಯನ್ನು ನಾವು ಕಾಣುತ್ತೇವೆ. ನನ್ನ ಈ ಮೊರೆಯನ್ನು ದೇವಾ ನೀನು ಕೇಳು, ಪರಮಾತ್ಮನನ್ನು ಕಾಣುವ, ಕಂಡು ಮಾತನಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.
ನೀನೇ ಎನಗೆ ಗತಿ ನೀನೇ ಎನಗೆ ಮತಿ
ಚೆನ್ನಮ್ಮಲ್ಲಿಕಾರ್ಜುನಯ್ಯ
ನಿನ್ನ ಹೊರತು ನನಗೆ ಬೇರೆ ಯಾರೂ ಇಲ್ಲ. ನೀನೇ ನನ್ನ ಸರ್ವಸ್ವ. ಮೌನದಲ್ಲಿ ಮಾತಿನಲ್ಲಿ ಹಾಡಿನಲ್ಲಿ ಭಕ್ತಿಯಿಂದ ಪರಿ ಪರಿಯಾಗಿ ವಿನಂತಿಸಿದ್ದಾರೆ ಅಕ್ಕ. ಆ ದೇವ ಚೆನ್ನಮಲ್ಲಿಕಾರ್ಜುನನನ್ನು ಒಲಿಸಿಕೊಳ್ಳಲು ಎಲ್ಲ ವಿಧದ ಶ್ರೇಷ್ಠ ಭಕ್ತಿಯನ್ನು ಅಕ್ಕಮಹಾದೇವಿಯವರು ನಡೆಸಿದ್ದಾರೆ ಎಂಬುದು ಅವರ ವಚನಗಳಲ್ಲಿ ಕಂಡು ಬರುತ್ತದೆ.
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ