ಪುಸ್ತಕ ಪರಿಚಯ
ನೆಲ ನುಡಿದ ನಾದ
ಲೇಖಕರು- ಯು ಸಿರಾಜ್ ಅಹಮದ್ ಸೊರಬ ಮೊ.೯೭೪೩೯೦೮೮೭೬
ಪ್ರಕಾಶನ………..ನೇರಿಶಾ ಪ್ರಕಾಶನ ಕಡೂರ ಮೊ. ೮೦೭೩೯೩೫೨೯೬
ಪ್ರಕಟಿತ ವರ್ಷ…೨೦೨೪. ಬೆಲೆ ..೧೨೦/₹
ಯು ಸಿರಾಜ್ ಅಹಮದ್ ಸೊರಬ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳು ,ವೃತ್ತಿಯಲ್ಲಿ ವ್ಯಾಪಾರಿಗಳಾದರೂ ಪ್ರವೃತ್ತಿಯಲ್ಲಿ ಸಾಹಿತಿಗಳು ಕವನ, ಹನಿಗವನ, ರುಬಾಯಿ ,ಹೈಕು ,ಚುಟುಕು,ಲೇಖನ, ಪ್ರಬಂಧ ಶಾಯರಿ ,ಗಜಲ್ ,ಭಾವಗೀತೆಗಳು ಹೀಗೆ ವಿವಿಧ ಪ್ರಕಾರದ ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಾಗೂ ಒಂದು ಸಂಕಲನದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ
.ಇವರ ನೆಲ ನುಡಿದ ನಾದ ಇವರ ಎರಡನೇ ಗಜಲ್ ಸಂಕಲನವಾಗಿದೆ. ಇವರು ಅನೇಕ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ .
ಇವರನ್ನು ಅರಸಿಕೊಂಡು ಅನೇಕ ಪ್ರಶಸ್ತಿಗಳು ಬಂದಿವೆ. ಕಾವ್ಯರತ್ನ ಪ್ರಶಸ್ತಿ, ಕನ್ನಡ ಕಟ್ಟಾಳು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಭೂಷಣ ಪ್ರಶಸ್ತಿ ,ಕರುನಾಡು ಸೇವಾ ಪ್ರಶಸ್ತಿ ,ಕನ್ನಡ ಸಾಹಿತ್ಯ ಕೌಸ್ತುಭ ಪ್ರಶಸ್ತಿ ,ಯುವ ಕಾವ್ಯ ಪ್ರತಿಭಾ ಪ್ರಶಸ್ತಿ, ನೆಲಮಂಗಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಲೇಖಕಿ ಶ್ರೀಮತಿ ಲೀಲಾ ವಾಸುದೇವ ದತ್ತಿ ಪ್ರಶಸ್ತಿ ,ಕನ್ನಡದ ಕವಿರತ್ನ ಪ್ರಶಸ್ತಿ, ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ .
ಗಜಲ್ ಅರಬ್ಬಿ ಶಬ್ದವಾಗಿದ್ದು ಇದು ಅರಬ್ಬಿ ಬಾಷೆಯಲ್ಲಿ ಕಾವ್ಯ ಪ್ರಕಾರವಾಗಿ ಬೆಳೆಯದೆ ಇರಾನಿನ ಫಾಸಿ೯ ಭಾಷೆಯಲ್ಲಿ ಕಾವ್ಯವಾಗಿ ಬೆಳೆಯಿತು .ಮುಂದೆ ಭಾರತಕ್ಕೆ ಬಂದ ಈ ಸಾಹಿತ್ಯ ಉರ್ದು ಭಾಷೆಯಲ್ಲಿ ಬೆಳೆದು ಜನಮಾನಸದಲ್ಲಿ ನೆಲೆಸಿತು , ಉದು೯ ಸಾಹಿತ್ಯದಲ್ಲಿ ಕಾವ್ಯರಾಣಿಯಾಗಿ ಮೆರೆಯಿತು ,ಉರ್ದು ಭಾಷೆಯ ಸೌಂದರ್ಯ, ಮಾಧುರ್ಯ ,ಮೃದುವಾದ ಭಾವ ,ಶಬ್ದಗಳ ಲಾಲಿತ್ಯ ಗೇಯತೆಯಿಂದ ಮತ್ತು ಭವ್ಯತೆಯಿಂದ ಜನಸಾಮಾನ್ಯರ ಮನದಲ್ಲಿ ಬೇರೂರಿತು, ಇದು ಒಂದು ಹಾಡು ಗಬ್ಬವಾದ ಕಾರಣ ಜನರ ನಾಲಿಗೆ ಮೇಲೆ ನಲಿದಾಡತೊಡಗಿತು ,ಇಂದು ಭಾರತದ ಎಲ್ಲಾ ಭಾಷೆಯಲ್ಲಿ ಗಜಲ್ ರಚನೆಯಾಗುತ್ತಿದ್ದು ಕನ್ನಡದ ಕವಿಗಳ ಮನ ಗೆದ್ದ ಉರ್ದು ಗಜಲ್ ಗಳಿಗೆ ಮೋಹಿತರಾದ ಕವಿಗಳು ಇಂದು ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ .ಯಾವುದೇ ಒಂದು ಪ್ರಕಾರದ ಕಾವ್ಯವಾದರೂ ಅದರ ರಚನೆಗೆ ತನ್ನದೇ ಆದ ನಿಯಮಬದ್ಧವಾದ ಛಂದಸ್ಸು ಇರುತ್ತದೆ ಆ ಛಂದಸ್ಸಿನಲ್ಲಿಯೇ ಕಾವ್ಯ ರಚನೆಯಾದರೆ ಅದಕ್ಕೆ ಒಂದು ಮೌಲ್ಯವಿರುತ್ತದೆ .
ಉರ್ದು ಸಾಹಿತ್ಯದ ಗಜಲ್ ಕಾವ್ಯ ಪ್ರಕಾರಕ್ಕೆ ಮೂಲ 19 ಛಂದಸ್ಸುಗಳಿವೆ ಅವೆಲ್ಲವುಗಳನ್ನು ಕನ್ನಡ ಗಜಲ್ ರಚನೆಯಲ್ಲಿ ತರಲು ಸಾಧ್ಯವಾಗದ ಕಾರಣ ಕನ್ನಡದ ಗಜಲ್ ಗಳ ಹರಿಕಾರರಾದ ಡಾ. ಶಾಂತರಸ ರವರ ಅಭಿಪ್ರಾಯದಂತೆ ಮಾತ್ರಾಗಣಗಳ ಲೆಕ್ಕದಿಂದಲೇ ಮೀಟರ್ ಗಳಲ್ಲಿ ಬರಿಯುವ ಪದ್ಧತಿ ಈಗ ಚಾಲ್ತಿಯಲ್ಲಿದೆ .
ಯು ಸಿರಾಜ್ ಅಹಮದ್ ಸೊರಬ ಅವರು ಮಾತ್ರಾ ಗಣಗಳ ಲೆಕ್ಕಾಚಾರದಂತೆ ಕನ್ನಡ ಗಜಲ್ ಗಳನ್ನು ರಚಿಸುತ್ತಾ ಬಂದಿದ್ದಾರೆ ನೆಲ ನುಡಿದ ನಾದ ಗಜಲ್ ಸಂಕಲನದಲ್ಲಿಯೂ ಇವರು ಮಾತ್ರಾಗಣಗಳ ಲೆಕ್ಕದಲ್ಲಿ ಗಜಲ್ ಗಳನ್ನು ರಚಿಸಿದ್ದಾರೆ.
ಗಜಲ್ ಎಂದರೆ ಮಹಿಳೆಯರೊಂದಿಗೆ ಮಾತನಾಡುವುದು ,ಹೃದಯಗಳ ಒಲವಿನ ಸಂವಾದ, ಅನುರಾಗ ,ಪ್ರೀತಿ ,ಪ್ರೇಮ ,ಪ್ರಣಯ, ಮೋಹಗಳ ಗಾನ ,ಲೌಕಿಕ ಮತ್ತು ಆಲೌಕಿಕ ಆತ್ಮಾನುರಾಗ , ಎಂದು ಎಲ್ಲರೂ ಸಾಮಾನ್ಯವಾಗಿ ಹೇಳುವ ವ್ಯಾಖ್ಯಾನವಾಗಿದೆ .ಆದರೆ ಯು ಸಿರಾಜ್ ಅಹಮದ್ ಸೊರಬ ಅವರು ಗಜಲ್ ಎಂದರೆ ನೊಂದವರ ಕಂಬನಿ ,ಶೋಷಿತ ವರ್ಗಗಳ ಧ್ವನಿ ,ಶಾಂತಿಯ ಸೆಲೆ , ಕ್ರಾಂತಿಯ ಕಹಳೆ ,ಸ್ವಾತಂತ್ರ್ಯ ಸಂಗ್ರಾಮದ ದೇಶಭಕ್ತಿ ಗೀತೆ ,ಕರ್ಮವೀರರ ಬೆವರಿನ ಭಾಷೆ ,ಶ್ರಮ ಜೀವಿಗಳ ನಂಬಿಕೆಯ ನೆಲೆ ,ದೇಶ ಪ್ರೇಮಿಗಳ ಒಗ್ಗಟ್ಟಿನ ಓಲೆ ,ಕಾಯಕ ಯೋಗಿಗಳ ಆಧ್ಯಾತ್ಮದ ಸಾರ, ಖಾಲಿಯಾಗದ ಅನುರಾಗಿಯ ಅಕ್ಷರಗಳ ಜೋಳಿಗೆ ಎಂದು ವ್ಯಾಖ್ಯಾನಿಸಿದ್ದಾರೆ .
ಅವರವರ ಭಾವಕ್ಕೆ ಅವರವರ ಭಕ್ತಿಗೆ ಅವರವರಿಗೆ ತೆರನಾಗಿ ಭಗವಂತ ಕಾಣುವಂತೆ ಗಜಲ್ ಕೂಡ ಓದುಗರ ಭಾವಕ್ಕೆ, ವಯಸ್ಸಿಗೆ ,ಜ್ಞಾನಕ್ಕೆ, ತಕ್ಕಂತೆ ವಿವಿಧ ಹೊಳಪುಗಳನ್ನು ನೀಡಿ ಹೃದಯವನ್ನು ತಣಿಸುತ್ತದೆ ಎಂದು ನನ್ನ ಭಾವನೆ.
ಗಜಲ್ ರಚನಾ ಸಾಹಿತ್ಯದಲ್ಲಿಯೂ ಅನೇಕ ಪ್ರಕಾರಗಳಿವೆ ಮುರದ್ದಫ್ ಮುಸಲ್ ಸಿಲ್ ,ಗೈರ್ ಮುರದ್ದಫ್ ಗೈರ್ ಮುಸಲ್ ಸಿಲ್, ಆಜಾದ್ ,ಆಜಾದಿ ,ಜದೀದ್ ,ಯಾಂಟಿ ,ಫನಿ ,ಸಿಯಾಸಿ,ಸೂಫಿ, ಇಷ್ಕ ಹಕೀಕಿ ಇಷ್ಕ ,ಮಜಾಜಿ ನಸರಿ,ಹೀಗೆ ಅನೇಕ ಪ್ರಕಾರದ ಗಜಲ್ ಗಳನ್ನು ಉದು೯ ಬಾಷೆಯಲ್ಲಿ ಬರೆಯುತ್ತಾರೆ .
ಯು ಸಿರಾಜ ಅಹಮದ್ ಸೊರಬ ಅವರ ಕೃತಿ ಶೀರ್ಷಿಕೆ ನೆಲ ನುಡಿದ ನಾದ ಗಜಲ್ ಸಂಕಲನದಲ್ಲಿ 65 ಗಜಲ್ ಗಳಿದ್ದು ಎಲ್ಲಾ ಗಜಲ್ ಗಳನ್ನು ಮಾತ್ರೆಗಳ ಅನುಗುಣವಾಗಿಯೇ ಬರೆದಿದ್ದಾರೆ ಮತ್ತು ಈ ಸಂಕಲನದಲ್ಲಿ ಇವರು ತಮ್ಮ ತಖಲ್ಲುಸ್( ಕಾವ್ಯನಾಮ ) *ಸಿರಾಜ್* ಎಂದು ಉಪಯೋಗಿಸಿದ್ದಾರೆ. ಹಾಗೂ ಈ ಸಂಕಲನದಲ್ಲಿ ಮುರದ್ದಫ್,ಗೈರ್ ಮುರದ್ದಫ್ ,ಮುಸಲ್ ಸಿಲ್ ,ಗೈರ್ ಮುಸಲ್ ಸಿಲ್, ಜದೀದ್ ,ನಸರಿ ,ಛೋಟಿ ಬೆಹರ್ ,ಬಡೀ ಬೆಹರ್ ,ಇಷ್ಕ್ ಮುಜಾಜಿ ,ಇಷ್ಕ ಹಕೀಕಿ ಗಜಲ್ ಗಳಿವೆ .*ನೆಲ ನುಡಿದ ನಾದ* ಕೃತಿಗೆ ಚಂದ್ರಶೇಖರ್ ಪೂಜಾರ ಗಜಲ್ ಕಾರರು ಮೌಲಿಕವಾದ ವಿವರವಾದ ಮುನ್ನುಡಿಯನ್ನು ಬರೆದಿದ್ದಾರೆ .ಇನ್ನೊಬ್ಬ ಗಜಲ್ ಕಾರರಾದ ನಂರುಶಿ ಕಡೂರು ಅವರು ತೂಕಬಧ‌್ದವಾದ ಬೆನ್ನುಡಿಯನ್ನು ಬರೆದಿದ್ದಾರೆ. ಅಂದವಾದ ಮುಖಪುಟ ಚಿತ್ರವನ್ನು ಗುರುನಾಥ್ ಬೋರಗಿಯವರು ಅರ್ಥಪೂರ್ಣವಾದ ಸೊಗಸಾದ ಚಿತ್ರವನ್ನು ಚಿತ್ರಿಸಿ ಕೃತಿಯ ಚೆಲುವನ್ನು ಹೆಚ್ಚಿಸಿದ್ದಾರೆ.
ಯು ಸಿರಾಜ್ ಅಹಮದ್ ಅವರು *ನೆಲ ನುಡಿದ ನಾದ* ಸಂಕಲನದಲ್ಲಿ ಗಜಲ್ ಗಳ ಜೀವಾಳವಾದ ಪ್ರೇಮ,ವಿರಹ,ಧ್ಯಾನ,ಆರಾಧನೆ,ಕಾಯುವಿಕೆ,ಇವುಗಳಲ್ಲದೆ ನಾಡು ನುಡಿ ಸಾಮಾಜಿಕ,ರೈತಪರ,ಬಡತನದ ಬೇಗೆ,ಶ್ರಮಜೀವಿಯ ಬೆವರ ಘಮಲು,ತಾಯಿ,ತಂದೆ,ಸೋದರಿ,ಸೋದರ,ಮಡದಿ,ಪುತ್ರಿ,ವೃದ್ಧ ವಿಧವೆ, ವೃದ್ಧಾಶ್ರಮ,ಹೀಗೆ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶಿಸಿ ಉತ್ತಮವಾದ ಗಜಲ್ ಗಳನ್ನು ರಚಿಸಿದ್ದಾರೆ.
ಬಿರುಮಳೆಯಲ್ಲೂ ಬೆವರು ಸುರಿಸುವ ಹೊನ್ನ ಗದ್ದೆಯ ಮಲ್ಲ
ನಾಡ ಜನರಿಗಾಗಿ ದುಡಿಯುವ ಪರಿಶುದ್ಧ ಹುದ್ದೆಯ ಮಲ್ಲ ( ಗಜಲ್ ೧)
ಇದು ರೈತನ ಶ್ರಮ ಜೀವನದ ಬೆವರ ಘಮದ ಗಜಲ್ ಆಗಿದೆ ಗಜಲ್ಕಾರರು ರೈತನ ತುಡಿತ ಮಿಡಿತ ವನ್ನು ವಿವರಿಸಿದ್ದಾರೆ. ಬೇಸಿಗೆಯ ರಣ ಬಿಸಿಲಲ್ಲಿ ಸುರಿಯುವ ಮಳೆಯಲ್ಲಿ ಕೊರೆಯುವ ಚಳಿಯಲ್ಲಿಯೂ ರೈತ ಯಾವುದನ್ನು ಲಕ್ಷಿಸದೆ ಸತತವಾಗಿ ತನ್ನ ಬೆವರಹನಿ ಸುರಿಸಿ ಭೂದೇವಿಯ ಅಭಿಷೇಕ ಮಾಡಿ ಜಗಕ್ಕೆ ಅನ್ನ ಹಾಕುತ್ತಾನೆ ಇವನೊಬ್ಬ ಜಗ ಮಲ್ಲ ಸರ್ವರಿಗೂ ಅನ್ನ ಹಾಕುವ ಅನ್ನದಾತ ಶ್ರೇಷ್ಠ ಎಂದು ಕವಿ ಗಜಲ್ ಗಳಲ್ಲಿ ವಿವರಿಸಿದ್ದಾರೆ .
ಸುಳ್ಳರ ಪರವಿರಲು ಮತ್ತೊಂದು ನಾಲಿಗೆ
ಕಳ್ಳರ ಪರವಾಗಿ ಮಗದೊಂದು ನಾಲಿಗೆ (ಗಜಲ್ ೫)
ಈ ಗಜಲ್ ಓದಿದ ಕೂಡಲೇ ದಾಸರ ನೀಚ ಬುದ್ಧಿಯನ್ನು ಬಿಡು ನಾಲಿಗೆ ಎಂಬ ಹಾಡು ನೆನಪಾಯ್ತು. ಎಲುಬಿಲ್ಲದ ನಾಲಿಗೆ ಯಾವಾಗ ಬೇಕಾದರೂ ಯಾರ ಕಡೆಯಾದರೂ ಹೊರಳಾಡುತ್ತದೆ ಕೆಲವು ಸಾರಿ ಸುಳ್ಳರ ಪರವಾಗಿ ಸಾಕ್ಷಿ ಹೇಳಿದರೆ ಮತ್ತೆ ಕೆಲವು ಸಾರಿ ಕಳ್ಳರ ಪರವಾಗಿ ಸಾಕ್ಷಿ ಹೇಳುತ್ತದೆ ಧನಿಕರಿಗೊಂದು ನಾಲಿಗೆ ಬಡವರಿಗೆ ಒಂದು ನಾಲಿಗೆ ಹೀಗೆ ಎಷ್ಟು ವಿಧದ ಜನರಿದ್ದಾರೆ ಅಷ್ಟು ವಿಧದ ನಾಲಿಗೆ ಇವೆಯೆಂದು ಈ ಗಜಲ್ ದಲ್ಲಿ ನಾಲಿಗೆ ಬಗ್ಗೆ ಸೊಗಸಾಗಿ ವಿವರಿಸಿದ್ದಾರೆ.
ಬಹಳ ಹರುಷವಿತ್ತು ತಾಯಿ ಹೊಲಿದ ರಂಗಿನ ಕೌದಿಯಲಿ
ಕೂಡಿ ಬಾಳುವ ರತ್ನಗಳ ಮೆತ್ತನೆ ಗಾದಿಯೊಳಗಿಲ್ಲ (ಗಜಲ್೧೧)
ಬಡತನ ಇದ್ದರೂ ಬಾಲ್ಯದಲ್ಲಿ ಕೂಡಿ ಬೆಳೆದ ಆ ಸಂತೋಷ ತಾಯಿಯ ಪ್ರೀತಿ ,ಅವಳು ಹೊಲಿದ ಬಣ್ಣದ ಕೌದಿಯಲ್ಲಿ ಕಂಡ ಕನಸುಗಳಲ್ಲಿ ಅದೇನು ಹರುಷವಿತ್ತು ಆದು ಸಣ್ಣ ಗೂಡಾಗಿದ್ದರೂ ನೆಮ್ಮದಿಯ ಬದುಕಿತ್ತು ಇಂದು ದೊಡ್ಡ ದೊಡ್ಡ ಬಂಗ್ಲೆಗಳಲ್ಲಿ ವಾಸಿಸಿದರೂ ಮೆತ್ತನೆಯ ಹಾಸಿಗೆಯಲ್ಲಿ ಮಲಗಿದರೂ ಸುಖ ಸಂತಸಗಳಿಲ್ಲ ನಿದ್ರೆಯೂ ಇಲ್ಲ ಎಂದು ಗಜಲ್ ಕಾರರು ತುಂಬು ಕುಟುಂಬದಲ್ಲಿ ಕಾಣುವ ನೆಮ್ಮದಿ ಈಗಿಲ್ಲವೆಂದು ಹಾಗೂ ತಾಯಿಯ ಆ ಪ್ರೀತಿಯನ್ನು ಗಜಲ್ ದಲ್ಲಿ ವಿವರಿಸುತ್ತ ಹೋಗುತ್ತಾರೆ.
ಈ ಕಣ್ಣುಗಳು ಇರುವತನಕ ನೀ ಬರುವ ದಾರಿ ನೋಡುತ್ತೇನೆ
ಜೀವಾನುರಾಗದ ಕನಸನ್ನು ಸಾವಿರ ಬಾರಿ ನೋಡುತ್ತೇನೆ ( ಗಜಲ್೧೮)
ಇದು ಒಂದು ಭಗ್ನ ಪ್ರೇಮಿಯ ವಿರಹದ ನೋವಿನ ಗಜಲ್ ಆಗಿದ್ದು ಪ್ರಿಯತಮೆಯನ್ನು ಕಾತುರದಲ್ಲಿ ಕಾಯುತ್ತಾ ಅವಳಿಗಾಗಿ ಹಂಬಲಿಸುವ ತನ್ನ ನಲ್ಲೆಯ ನೋಟಕ್ಕೆ ಕಾಯುವ ಪರಿಯನ್ನು ತುಂಬಾ ಸೊಗಸಾಗಿ ಈ ಗಜಲಿನಲ್ಲಿ ಹಿಡಿದಿಟ್ಟಿದ್ದಾರೆ .ನಾನು ಮುದುಕನಾಗಿ ಕಣ್ಣು ಮಂದಾಗುವವರೆಗೂ ನಿನ್ನ ಬರುವನ್ನೇ ಕಾಯುತ್ತೇನೆ ಅನುರಾಗದ ಕನಸುಗಳನ್ನು ಸಾವಿರ ಬಾರಿ ಕಾಣುತ್ತೇನೆ ಎಂದು ತನ್ನ ಮನದ ಅಳಲನ್ನು ಭಗ್ನ ಪ್ರೇಮಿ ಕನವರಿಸುವುದನ್ನು ಬಿತ್ತರಿಸಿದ್ದಾರೆ.
ಮನೆತನದಹಿತಕ್ಕಾಗಿ ಒಂಟಿ ಸಲಗನಾಗಿ ದುಡಿದು ಬಿಟ್ಟನು ಅಪ್ಪ
ನೋವುಗಳ ಸಾಗರವನೇ ಕುಡಿದು ಗಾಯಗಳ ಗೆದ್ದುಬಿಟ್ಟನು ಅಪ್ಪ( ಗಜಲ್೨೮)
ಕುಟುಂಬದ ಆಧಾರ ಸ್ತಂಭವಾದ ತಂದೆ ತನ್ನ ಕುಟುಂಬಕ್ಕಾಗಿ ಮಕ್ಕಳಿಗಾಗಿ ಮನೆತನದ ಏಳಿಗೆಗಾಗಿ ತನ್ನೆಲ್ಲ ನೋವು ನಲಿವು ಕನಸುಗಳನ್ನು ಮರೆತು ಹೇಗೆ ದುಡಿಯುತ್ತಾನೆ ಎಂದು ಗಜಲ್ಕಾರರು ತುಂಬಾ ಸುಂದರವಾಗಿ ಚಿತ್ರಿಸಿದ್ದಾರೆ . ಉತ್ತಮವಾದ ರೂಪಕಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ. ಒಂಟಿ ಸಲಗ ,ಬೆಟ್ಟವನ್ನೇ ಕುಟ್ಟಿ ಪುಡಿ ಮಾಡುವ ಮಲ್ಲ, ಕಾಯಕದ ಅಪರಂಜಿ,ಅಪ್ಪನೆಂದರೆ ಹೆಸರಿಲ್ಲದ ಆಕಾಶ, ವಜ್ರಕವಚವನ್ನು ಧರಿಸಿದವ ,ಹೀಗೆ ವಿವಿಧ ರೂಪಕಗಳೊಂದಿಗೆ ಅಪ್ಪನ ಮಹತ್ವವನ್ನು ಅವನ ಕಾರ್ಯಾಚರಣೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ.
ವಾಹನದಲ್ಲಿ ಕೂಡಿಸಿಕೊಂಡು ವೃದ್ಧಾಶ್ರಮದಲಿ ಬಿಟ್ಟು ಹೋದನು
ಎತ್ತರಕ್ಕೆ ಬೆಳೆದ ನನ್ನ ಮಗ ದೊಡ್ಡ ಬಹುಮಾನ ಕೊಟ್ಟು ಹೋದನು (ಗಜಲ್೪೮)
ಇಂದಿನ ಜಾಗತಿಕ ಸಮಾಜದಲ್ಲಿ ಮಕ್ಕಳು ಹೆಚ್ಚಿನ ವಿದ್ಯೆ ಕಲಿತು ಉನ್ನತ ಹುದ್ದೆಯಲ್ಲಿ ಇರುವುದು ಸಂತೋಷದ ವಿಷಯವಾಗಿದ್ದರೂ ಇನ್ನೊಂದು ಕಡೆ ಮಾನವೀಯತೆಯನ್ನು ಮರೆಯುತ್ತಿರುವ ಇಂದಿನ ಯುವ ಪೀಳಿಗೆಯ ನಡತೆ ಕಳವಳಕಾರಿಯಾಗಿದೆ .ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳದೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಸಮಾಜದಲ್ಲಿ ಆಘಾತಕಾರಿಯಾದ ಕಾರ್ಯವಾಗಿದೆ ವೃದ್ರ ತಂದೆ ತಾಯಿಗಳು ಬಯಸುವುದು ಕೇವಲ ಮಕ್ಕಳ ಮೊಮ್ಮಕ್ಕಳ ಪ್ರೀತಿ ಎಂಬುದು ಯುವಜನ ಅರಿಯದೆ ಅವರನ್ನು ವೃದ್ಧಾಶ್ರಮಕ್ಕೆ ತಂದು ಬಿಡುತ್ತಾರೆ .ಆದರೂ ಹೆತ್ತ ಕರುಳು ಮಕ್ಕಳನ್ನು ಕ್ಷಮಿಸಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ .ಸಮಾಜದ ಈ ಚಿತ್ರಣವನ್ನು ಗಜಲ್ ಕಾರರು ಸುಂದರವಾಗಿ ನಿರೂಪಿಸಿದ್ದಾರೆ.
ಒಲವ ಬಟ್ಟಲಿನಲ್ಲಿ ಅನುರಾಗ ರಸವನ್ನು ಕುಡಿಸಿ ಬಿಡು ಗುರುವೇ
ಸುಜ್ಞಾನದ ಬಲದಿಂದ ಧ್ಯಾನದ ಚೆಲುವನ್ನು ಇಳಿಸಿ ಬಿಡು ಗುರವೇ (ಗಜಲ್೬೩)
ಇದು ಒಂದು ಆಧ್ಯಾತ್ಮಿಕದ ಗಜಲ್ ಆಗಿದೆ.ಗಜಲ್ ಕಾರರು ಲೌಕಿಕದಿಂದ ಅಲೌಕಿಕದ ಕಡೆಗೆ ಕೊಂಡ್ಯೊಯುತ್ತಾರೆ .ತಮ್ಮ ಆರಾಧ ದೈವವಾದ ಗುರುವಿನಲ್ಲಿ ನಿವೇದಿಸಿಕೊಳ್ಳುತ್ತಾರೆ .ಅನುರಾಗದ ರಸ ಕುಡಿಸಿಬಿಡು, ಸುಜ್ಞಾನದ ಬಲದಿಂದ ಧ್ಯಾನದ ಚೆಲುವನ್ನು ಇಳಿಸಿಬಿಡು ,ಜನಿಸಿದ ಮಣ್ಣ ಘಮಲಿನಲ್ಲಿ ಕಾವ್ಯದ ಲಯವನ್ನು ಹುಟ್ಟಿಸಿ ಬಿಡು ,ಆತ್ಮಾನಂದಕ್ಕೆ ವಿಶ್ವಶಾಂತಿಯ ಪದವನ್ನು ಕಳಿಸಿ ಬಿಡು, ಭಕ್ತಿಯಲ್ಲಿ ಅನುಭಾವದ ಮದವನ್ನು ಬೆಳಿಸಿಬಿಡು , ಕರುನಾಡಿನ ಎಲ್ಲರ ಹೃದಯದಲ್ಲಿ ಏಕತೆಯ ಬೀಜವನ್ನು ಬಿತ್ತಿಬಿಡು ಎಂದು ಕವಿ ಗುರುವಿನಲ್ಲಿ ನಿವೇದಿಸಿಕೊಳ್ಳುತ್ತಾನೆ .
ಯು ಸಿರಾಜ್ ಅಹಮದ್ ಸೊರಬ ಅವರ *ನೆಲ ನುಡಿದ ನಾದ* ಗಜಲ್ ಸಂಕಲದಲ್ಲಿ ಇನ್ನೂ ಅನೇಕ ಸುಂದರವಾದ ಮನ ಮುಟ್ಟುವ ಅನೇಕ ಗಜಲ್ ಗಳು ಇದ್ದು ಮಾತ್ರಾ ಗಣದಲ್ಲಿ ಸಮಂಜಸವಾಗಿ ರಚಿಸಿದ್ದಾರೆ .ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ. ಜೊತೆಗೆ ಓದುಗರಿಗೆ ಸಾತ್ವಿಕ ಅಭಿರುಚಿಯನ್ನು ಕೊಡುತ್ತವೆ. ಕೆಲವು ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ .ಇದು ಒಂದು ಮಾತ್ರೆಗಳಿಗೆ ಅನುಗುಣವಾಗಿ ಬರೆದ ಸುಂದರವಾದ ಗಜಲ್ ಸಂಕಲನವೆಂದು ಹೇಳಬಹುದು. ಯು ಸಿರಾಜ್ ಅಹಮದ್ ಸೊರಬ ಅವರು ಇನ್ನೂ ಉತ್ತಮವಾದ ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಗಜಲ್ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಲೆಂದು ಶುಭ ಹಾರೈಸುತ್ತ ನನ್ನ ಬರಹಕ್ಕೆ ವಿರಾಮ ಕೊಡುತ್ತೇನೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ