ಮುಪ್ಪಿಲ್ಲದ ಮುಗುಳ್ನಗೆ
ಮುಗುಳ್ನಗೆಗೂ ಮುಪ್ಪುಂಟೆ
ಸದಾ ಹಸಿರು ಅದೇ ನನ್ನುಸಿರು
ತುಟಿಯಂಚಲಿ ಅವಿತು ಕುಳಿತ
ಅದಕೆ ಸದಾ ನಿನ್ನದೇ ಧ್ಯಾನ…
ಕಣ್ಣಂಚಲಿ ಸವಿ ಮಾತಲಿ
ಮುತ್ತಾಗಿ ಉರುಳುವ ತವಕ…
ಮನದಂಚಲಿ ಮೆಲುವಾಗಿ
ಹೂಹಾಡಿನ ಕವಿ ಮೆಲುಕ…
ವರುಷಗಳುರುಳಿ ಮರಳಿ ಅರಳಿದ
ಚೆಲು ವಸಂತ ಸಂಚರ..
ಹರುಷ ಚಿಮ್ಮುತ ಮೆಲ್ಲಡಿಯಿದುತ
ತಂದ ನಗೆ ಇಂಚರ…
ಚಿರನೂತನ ಚೆಲು ಒಲವೇ
ನಿತ್ಯ ನಗೆಯಂಗಳ ಮಲ್ಲಿಗೆ..
ಜೀವನದಿ ಹರುಷ ಹೊಮ್ಮಿಸುವೇ
ಸತ್ಯ ಮುಪ್ಪಿರದ ಮುಗುಳ್ನಗೆ…
ಮುಂಜಾವ ಮುಂಬಾಗಿಲ ಮುಗುಳ್ನಗೆ
ರವಿಕಿರಣ ಪರುಷ ಸ್ಪರ್ಶಧಾರೆ …
ಶಶಿಯೆದೆಯಂಗಳದ ಪ್ರೀತಿ ಚೆಂಬೆಳಕ
ಮುಪ್ಪರಿಯದ ಹರುಷ ವರ್ಷಧಾರೆ …
ಬಚ್ಚ ಬಾಯಲಿ ಬಿರಿದರೆ
ಅಚ್ಚಮಲ್ಲಿಗೆಯರಳ ಬೆಳಕು…
ಮಗು ಮೊಗದಲ್ಲಿ ಹರಿದರೆ
ಚಂದ್ರ ಜೊನ್ನ ಸೆಳಕು…
ತುಟಿಯಂಚಲಿ ಸುರಿದ
ಮೌನ ಮುತ್ತ ಸ್ನೇಹ ಹರಳು…
ಮುಗುಳ್ನಗೆ ನೋವ ಮರೆಸಿ
ಪ್ರೀತಿಸ್ಫುರಿಪ ಸವಿ ಸಕ್ಕರೆ ಹಳಕು…
ನೇಯ್ದರೂ ಮೊಗದಿ ನೆರಿಗೆ
ನಗೆ ಸರಿಗೆಗಿಲ್ಲ ಮುಪ್ಪು…
ನವಜವ್ವನೆ ನಿತ್ಯನೂತನೆ ನಗೆ
ಮಧುರ ಮನವೇ ಇದನೊಪ್ಪಿ ಅವಳನಪ್ಪು…
– ಇಂದಿರಾ ಮೋಟೆಬೆನ್ನೂರ. ಬೆಳಗಾವಿ