ನಿರೀಕ್ಷೆಯಂತೆ ಪರೀಕ್ಷೆ ಬರೆಯಿರಿ ಮಕ್ಕಳೆ
ಇಂದಿನ ಮಕ್ಕಳು ನಾಳಿನ ನಾಡ ಬೆಳಗುವ ನಾಯಕರು. ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು. ಶಾಲೆಯಲ್ಲಿ ಗುರುಗಳು ಮನೆಯಲ್ಲಿ ಪಾಲಕರು ಮಕ್ಕಳ ಶ್ರೇಯಸ್ಸಿಗೆ ಶ್ರಮಿಸುತ್ತಾರೆ. ಹುಟ್ಟಿದ ಪ್ರತಿಮಗುವಿನಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಅವನನ್ನು ಭಾವಿಭವಿಷ್ಯತ್ತಿಗೆ ಅಣಿಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ. ಮಗ/ಳು ಶಾಲೆಗೆ ಹೋಗತಾರೆ ಅಂದರೆ ಅವರ ಬಗ್ಗೆ ಪಾಲಕರ ಕಾಳಜಿ ಬೇಕೆಬೇಕು. ಅವರನ್ನು ನೀಟಾಗಿ ತಯಾರಿ ಮಾಡಿ ಶಾಲೆಗೆ ಕಳಿಸಿದರೆ ಜವಾಬ್ದಾರಿ ಮುಗಿತು ಅವರು ಕೇಳಿದ್ದೆಲ್ಲ ಕೊಡಿಸಿದರೆ ಆಯ್ತಲ್ಲವಾ ಅನ್ನಬೇಡಿ. ನಿಮ್ಮ ಮಗು ನಿಮ್ಮ ಜವಾಬ್ದಾರಿ ಎನ್ನುವದು ನೆನಪಿರಲಿ. ಶಾಲೆಯಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುತ್ತಾರೆ. ಅವರನ್ನು ಓದಿಸುವ ಅರ್ಥಾತ ಹೋಮವರ್ಕ ಮಾಡಿಸುವ ಹಾಗೂ ಈಡೀ ದಿನ ಶಾಲೆಯಲ್ಲಿ ಮಗ/ಳು ಏನು ಮಾಡಿದಳು/ನು ಎನ್ನುವ ಪರಿವೆಯಿಂದ ಪ್ರತಿದಿನ ಅಂದಿನ ಕ್ಲಾಸವರ್ಕ ಚೆಕ್ ಮಾಡುತ್ತಾ ಇದ್ದರೆ ಪರೀಕ್ಷೆ ಸಮಯದಲ್ಲಿ ಯಾವುದೇ ತೊಂದರೆ ಇರಲ್ಲ. ನಾಲ್ಕು ಗೋಡೆಗಳ ಮಧ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿತವಾಗುತ್ತದೆ.ಪರೀ ಪರೀಕ್ಷೆಯೆಂಬ ಏಣಿಯನ್ನು ಸರಳವಾಗಿ ನಿರಾತಂಕವಾಗಿ ಎದುರಿಸಿದಾಗ ಮಾತ್ರ ನೀವು ಗೆಲುವಿನ ರೂವಾರಿಗಳಾಗುತ್ತಿರಿ ಸುಮ್ಮನೆ ಮನಸ್ಸಿನಲ್ಲಿ ಇಲ್ಲಸಲ್ಲದ ಯೋಚನೆಗಳನ್ನು ತುಂಬಿಕೊಳ್ಳದಿರಿ.
ಈ ವರ್ಷದ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಮಾರ್ಚ್ 25 ರಿಂದ ಪ್ರಾರಂಭವಾಗಿ ಎಪ್ರಿಲ್ 6.ಕ್ಕೆ ಮುಕ್ತಾಯಗೊಳ್ಳುತ್ತದೆ.ಹೀಗಾಗಿ ಮಕ್ಕಳು ಮೊಬೈಲ್ ಹಾಗೂ ಟಿವಿಯಿಂದ ದೂರವಿರಿ.ಆದರೆ ನಿಮಗಾಗಿ ಬಿತ್ತರಿಸುವ ರೇಡಿಯೋ ಪಾಠಗಳನ್ನು ಚಾಚೂ ತಪ್ಪದೆ ಕೇಳಿ. ದಿನಪತ್ರಿಕೆಗಳಲ್ಲಿ ಬರುವ ವಿಷಯವಾರು ಮಹತ್ವದ ಪ್ರಶ್ನೋತ್ತರ ಬಹು ಆಯ್ಕೆಯ ಪ್ರಶ್ನೆಗಳು ಮಹತ್ವದ ವ್ಯಾಕರಣ ಇತ್ಯಾದಿ ಕುರಿತ ಕಟಿಂಗ್ಸ್ ಗಳನ್ನು ತೆಗೆದಿಟ್ಟುಕೊಂಡು ನೀಟಾಗಿ ಓದಿರಿ. ನಿಮ್ಮ ವಿಷಯವಾರು ಚಟುವಟಿಕೆಗಳನ್ನ ಸಂಪೂರ್ಣವಾಗಿ ಬರೆದು ಮುಗಿಸಿ ಶಿಕ್ಷಕರಿಂದ ಸಹಿ ಮಾಡಿಟ್ಟುಕೊಳ್ಳಬೇಕು.
ಎಫ್ ಎ ಒನ್ ಟು ತ್ರೀ ಫೋರ್ ಹೀಗೆ ಎಲ್ಲಾ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನ ಕಾಯ್ದಿಟ್ಟುಕೊಂಡು ಓದಬೇಕು. ವಿಶೇಷವಾಗಿ ವಿಷಯ ಪರಿಣಿತರಿಂದ ತರಗತಿಯಲ್ಲಿ ಹೇಳಿದ ಮಹತ್ವದ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಗಣಿತದ ಪ್ರಮೇಯ ಸೂತ್ರಗಳು, ವಿಜ್ಞಾನದ ಚಿತ್ರಗಳು ಸಮಾಜ ವಿಜ್ಞಾನದ ನಕ್ಷೆಗಳು ಇವನ್ನೆಲ್ಲ ರೂಡಿಸಿಕೊಂಡಿರಬೇಕು.. ಪರೀಕ್ಷೆ ಯುದ್ಧವಲ್ಲ ಅದು ಒಂದು ಪಿಕ್ನಿಕ್ ಅಂತ ತಿಳಿದು ಆರಾಮವಾಗಿ ಪರೀಕ್ಷೆಗೆ ಹೋಗಿರಿ. ನಿಮ್ಮ ಪರೀಕ್ಷಾ ನಂಬರ್ ನಿಧಾನವಾಗಿ ಹುಡುಕಿಕೊಂಡು ಕೂತು ರಿಲ್ಯಾಕ್ಸ್ ಆಗಿರಿ. ಪ್ರಶ್ನೆ ಪತ್ರಿಕೆ ಕೈಗೆ ಬಂದಾಗ ಸಾವಧಾನವಾಗಿ 15 ನಿಮಿಷ ಚೆನ್ನಾಗಿ ಓದಿಕೊಂಡು ಯಾವ ಉತ್ತರಗಳನ್ನು ಬರೆಯಬೇಕು ಎಂದು ಮನಸ್ಸಿನಲ್ಲಿ ನಿರ್ಧರಿಸಿ ಬರೆಯಲು ಪ್ರಾರಂಭಿಸಿರಿ. ಒತ್ತಡ ,ಆತಂಕ ದೂರ ಮಾಡಿಕೊಂಡು ಸಕಾರಾತ್ಮಕವಾಗಿ ಬರೆಯಲು ಪ್ರಾರಂಭಿಸಿ. ವರ್ಷವಿಡಿ ಓದಿದ ನಿಮ್ಮ ತಪಸ್ಸಿನ ಫಲ ಕೈಗೂಡುವ ಸಮಯವಿದು.
ಈಡೀ ವರ್ಷ ಚೆನ್ನಾಗಿ ಪಾಠಗಳು ನಡೆದು ಎಲ್ಲಾ ಪರೀಕ್ಷೆಗಳು ಅಂದರೆ ಸರಣಿ ಪರೀಕ್ಷೆ ಸ್ಟೇಟ್ ಹಾಗೂ ಡಿಸ್ಟ್ರಿಕ್ಟ್ ಪೂರ್ವ ಭಾವಿ ಪರೀಕ್ಷೆ ಮುಗಿದಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕಪಡುವ ಪ್ರಮೇಯವೇ ಬೇಡ. ಪಾಲಕರು ಆದಷ್ಟು ತಮ್ಮ ಮಗ ಅಥವಾ ಮಗಳಿಗೆ ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ತುಂಬಿ ಪರೀಕ್ಷೆಗೆ ಕಳಿಸುವುದರಿಂದ ಮಗು ಚೆನ್ನಾಗಿ ಬರೆಯುತ್ತದೆ.ಶಾಲೆಯಲ್ಲಿ ಪ್ರತಿಯೊಂದು ವಿಷಯದ ಶಿಕ್ಷಕರು ವಿದ್ಯಾರ್ಥಿಗಳಿಗೆ ಚೆನ್ನಾಗಿ ಬೋಧಿಸಿರುತ್ತಾರೆ ಅಷ್ಟೇ ಅಲ್ಲ ಅವರಿಗೆ ಪರೀಕ್ಷಾ ನಿಯಮಗಳ ಕುರಿತು ಹಾಗೂ ಪರೀಕ್ಷೆಯಲ್ಲಿ ಹೇಗೆ ಬರೆಯಬೇಕು ಎಂಬುದರ ಕುರಿತು ಸಾಕಷ್ಟು ಮಾಹಿತಿಗಳನ್ನು ಕೊಟ್ಟಿರುತ್ತಾರೆ. ಅಲ್ಲದೆ ಜನವರಿ ತಿಂಗಳಿಂದ ಬೆಳಗ್ಗೆ ಪ್ರತಿಯೊಂದು ವಿಷಯದ ಶಿಕ್ಷಕರು ವಿಶೇಷ ಕ್ಲಾಸ ಗಳನ್ನು ಹಾಕಿ ಮಕ್ಕಳಿಗೆ ತರಬೇತಿಗೊಳಿಸಿದ್ದಾರೆ. ಸಾಯಂಕಾಲ ಕೂಡ ವಿಶೇಷ ಕ್ಲಾಸುಗಳನ್ನು ತೆಗೆದುಕೊಂಡು ರಸಪ್ರಶ್ನೆ ಹಾಗೂ ಗುಂಪು ಚರ್ಚೆಗಳನ್ನು ಕೂಡ ಮಾಡಿಸಿರುತ್ತಾರೆ ಹೀಗಾಗಿ ಮಕ್ಕಳು ಭಯ ಪಡುವ ಕಾರಣವಿಲ್ಲ.ಪ್ರತಿ ವಿದ್ಯಾರ್ಥಿಗೂ ಪ್ರತಿಯೊಂದು ವಿಷಯದ ಶಿಕ್ಷಕರು fa1 fa2 fa3 fa4 ಹೀಗೆ ನಾಲ್ಕು ಹಂತಗಳಲ್ಲಿ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸಿರುತ್ತಾರೆ. ಆದರೂ ಪಾಲಕರು ತಮ್ಮ ಮಕ್ಕಳ ಬಗ್ಗೆ ಸದಾ ಕಾಳಜಿ ವಹಿಸಬೇಕು. ಈ ವರ್ಷ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯುತ್ತದೆ. ಇದು ನಿಮ್ಮ ಗಮನದಲ್ಲಿರಲಿ ಕಾರಣ ಫೇಲಾದರೆ ಎನ್ನುವ ನಿಮ್ಮ ಮನಸ್ಥಿತಿಗೆ ಹೆದರದೆ ಮತ್ತೊಂದು ಅವಕಾಶವನ್ನ ಬಳಸಿಕೊಳ್ಳಲು ಸಾಧ್ಯವಿದೆ. ಆದರೆ ಯಾವುದೇ ತಪ್ಪು ನಿರ್ಧಾರ ಮಾತ್ರ ಮಾಡದಿರಿ.
ವರ್ಷವಿಡೀ ಓದಿದರೂ ಆತಂಕ ಮಾತ್ರ ಇದ್ದೆಇರುತ್ತದೆ. ಆತಂಕ, ಖಿನ್ನತೆ ದೂರ ಮಾಡಲು ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡುವದು ಒಳ್ಳೆಯದು. ಈಗ ಶಾಲೆಯಲ್ಲಿಯೂ ಇವುಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ನಿಯಮಿತವಾದ ಓದು, ನಿಯಮಿತವಾದ ವ್ಯಾಯಾಮ ಹಾಗೂ ಸ್ವಯಂ ಶಿಸ್ತು ಮಕ್ಕಳನ್ನು ಕಲಿಕೆಯಲ್ಲಿ ಮುಂಚೂಣಿಯಲ್ಲಿರಿಸುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಪ್ರೋಟಿನಯುಕ್ತ ಆಹಾರ ಕೂಡ ಮಕ್ಕಳ ಆರೋಗ್ಯಕ್ಕೆ ಹಿತವಾಗಿರುತ್ತದೆ. ರಾತ್ರಿ ಲಘು ಆಹಾರ ನೀಡುವದರಿಂದ ಓದಲು ಅನುಕೂಲವಾಗುತ್ತದೆ.
ಸುಸ್ತು, ಆಯಾಸ ತಡೆಯುತ್ತದೆ.
ಓದು ಬೇಜಾರಾದಾಗ ಸ್ವಲ್ಪ ಲಘು ಮನರಂಜನೆ ಸಾಕು. ಮತ್ತೆ ಮನಸ್ಸು ಶಾಂತವಾಗಿ ಓದಿನೆಡೆ ಪ್ರೇರಿತವಾಗುತ್ತದೆ. ವಿಷಯಗಳ ಬದಲಾವಣೆಯೇ ವಿಶ್ರಾಂತಿ ಅಂತ ನಮ್ಮ ಗಾಂಧೀ ತಾತ ಹೇಳಿದ್ದಾರೆ. ಸರಳ ವಿಷಯದಿಂದ ಕಠಿಣ ವಿಷಯದೆಡೆಗೆ ಸಾಗಿದರೆ ಬೇಜಾರ ಬರಲ್ಲ. ನಡುವೆ ಟೀ, ಕಾಫಿಗಳು ಬೇಡ. ಓದುವಾಗ ಮನಸ್ಸು ಹಗುರವಾಗಿದ್ದು ಏಕಾಗ್ರತೆ ಇದ್ದರೆ ಸಾಕು. ಓದಿದ್ದೆಲ್ಲ ಮರೆತರೆ ಎಂಬ ಗಿಲ್ಟ ಬೇಡವೆ ಬೇಡ. ಪರೀಕ್ಷೆ ಎಂದರೆ ಒಂದು ಪಿಕನಿಕ್ ಅಂತ ಎದುರಿಸಿ ಹಬ್ಬದಂತೆ ಖುಷಿಪಡಿ. ಆಗ ನೋಡಿ ಆತಂಕವೇ ಇರಲ್ಲ.
ಟಿವಿ, ಮೊಬೈಲ ಬಳಕೆ ತುಂಬಾ ಕಡಿಮೆ ಮಾಡಿ. ಮಕ್ಕಳೆ, ಚಿನ್ನದಂತ ಬದುಕಿನ ಚಿಣ್ಣರು ನೀವು ನೆನಪಿರಲಿ. ಖುಷಿ ಜೀವನದ ಹರವನ್ನು ಹೆಚ್ಚಿಸುತ್ತದೆ. ಆತಂಕ ಬದುಕಿನ ಅದಮ್ಯ ಖುಷಿಯನ್ನ ನುಂಗಿಹಾಕುತ್ತದೆ. ಆರಾಮಾಗಿರಿ ಯಾರ ಮಾತಿಗೂ ಭಯಬೀಳದಿರಿ. ಪರೀಕ್ಷಾ ಹಾಲಿನಲಿ ನೀಟಾಗಿ ಕೂತು ಪ್ರಶ್ನೇ ಪತ್ರಿಕೆ ಕೂಲಂಕುಷವಾಗಿ ಮೊದಲು ಓದಿ ನಂತರ ಬರೆಯಲು ಪ್ರಾರಂಬಿಸಿ. ಭಯ ನಿಮ್ಮನ್ನ ನೋಡಿ ಹೆದರಲಿ ವಿನಃ ನೀವೂ ಹೆದರಬೇಡಿ.
ಒಂದು ವರ್ಷ ಓದಿದ ಅಭ್ಯಾಸ ಪರೀಕ್ಷೆಯಲ್ಲಿ ಮೂರು ಗಂಟೆಯಲ್ಲಿ ಬರೆದು ಯಶೋಗಾಥೆ ರೂಪಿಸಬೆಕಿದೆ.ಪರೀಕ್ಷೆಯ ಓದಿಗೆ ನಿಮ್ಮದೆ ನಿರ್ದಿಷ್ಟ ವೇಳಾಪಟ್ಟಿ ಇರಲಿ.ಅದರ ಪ್ರಕಾರ ಓದು ಸಾಗಲಿ. “ಧೈರ್ಯ ವಂ ಸರ್ವತ್ರ ಸಾಧನಂ” ನಿಮ್ಮ ಬೆನ್ನಿಗಿರಲಿ.” ಪರ್ವತ ತುಂಬಾ ಎತ್ತರವಿರುತ್ತದೆ ಅದನ್ನು ಏರಿದಾಗ ಅದು ನಿಮ್ಮ ಕಾಲಬುಡದಲ್ಲಿರುತ್ತದೆ”ಅಂತೆಯೇ ನಿಮ್ಮ ಶ್ರಮದ ಸಾಧನೆಯು ಹೀಗೆ ಇರುತ್ತದೆ.
ನಾನು ಸರಿಯಾಗಿ ಓದಿಲ್ಲ ಪರೀಕ್ಷೆಯಲಿ ಫೇಲಾದರೆ ಅಂತ ಆತಂಕದಿಂದ ಆತ್ಮಹತ್ಯೆಯಂಥ ಹೀನ ಕಾರ್ಯಕ್ಕೆ ಕೈ ಹಾಕಬೇಡಿ.ಆತ್ಮಸ್ಥೈರ್ಯ ಇರಲಿ. ನೀವೇ ಧೈರ್ಯ ಕಳಕೊಂಡರೆ ಪಾಲಕರ ಗತಿಯೇನು? ಅವರ ಹೆತ್ತೊಡಲ ಸ್ಥಿತಿಯೇನು? ಪರೀಕ್ಷೆಯಲಿ ಫೇಲಾದರೆ ಮತ್ತೇ ಬರೆದು ಪಾಸಾಗಬಹುದು. ಜೀವವನ್ನೆ ಕಳೆದುಕೊಂಡರೆ ಮರಳಿ ತರಬಹುದೇ? ಇಲ್ಲ ತಾನೆ. ಹಾಗಾದರೆ ಸದೃಡ ಮನಸ್ಸನ್ನು ಹೊಂದಿ ಸದೃಡವಾಗಿರಿ. ಹೆತ್ತವರಿಗೆ ಅಮೂಲ್ಯ ಆಸ್ತಿ ನೀವು. ನೀವೇ ಹೀಗೆ ಬದುಕಿಗೆ ವಿಮುಖರಾದರೆ ಹೇಗೆ. ಬದುಕು ದೇವರು ಕೊಟ್ಟ ಕಾಣಿಕೆ. ಅದನ್ನು ಸುಂದರವಾಗಿಸಿಕೊಳ್ಳಿ ಸಫಲವಾಗಿಸಿಕೊಳ್ಳಿ ಅದು ನಿಮ್ಮ ಕೈಲಿದೆ. ಜೊತೆಗೆ ಹೆತ್ತವರ ಮಾರ್ಗದರ್ಶನ ಇದ್ದೆ ಇರುತ್ತೆ. ಸದಾ ಬೆಂಗಾವಲಾಗಿರ್ತಾರೆ. ಇಂಥ ಅಮೂಲ್ಯ ಜೀವನ ಬದುಕಿರಿ. ನಿಮ್ಮನ್ನ ನಂಬಿದವರಿಗೆ ಬೆಳಕಾಗಿರಿ. ಜೀವನದ ಯಶಸ್ಸಿನ ಏಣಿ ಏರಿರಿ. ಮತ್ತೊಬ್ಬರಿಗೆ ಮಾದರಿಯಾಗಿರಿ. ಪರೀಕ್ಷೆಯನ್ನ ಚನ್ನಾಗಿ ಬರಿತಿರಲ್ಲವಾ. ಗುಡಲಕ್ ಮಕ್ಕಳೆ.
–ಜಯಶ್ರೀ.ಭ.ಭಂಡಾರಿ.
ಬಾದಾಮಿ.