ಕನ್ನಡದ ಓಜ
ನಿರ್ಲಿಪ್ತ ನಿರಪೇಕ್ಷ
ನಿರ್ವಿಕಲ್ಪ ರೂಪ
ಕನ್ನಡದ ಈ ತವನಿಧಿಗೆ
ಗುರುಲಿಂಗ ನಾಮವೇ
ಅನುರೂಪ.
ಕೃತಿಯ ಒರೆಗೆ ಹಚ್ಚಿದಂತೆ
ನಿಷ್ಕಲ್ಮಷ ನಿರ್ವ್ಯಾಜದ
ನಡೆನುಡಿಯ ಬಾಳು
ಮಧುರಚೆನ್ನರ ಸಂತತಿಯ
ಅನುಭಾವದ ತೇರು .
ನುಡಿಯ ಗುಡಿಗೆ ಬಣ್ಣವಾದ
ಅರಿವಿನ ಮಹಾಮೇರು
ಹಿರಿಯ ಕಿರಿಯ
ಭೇದವಳಿದು ಅಕ್ಕರವ
ಬೆಳೆಸುವ ನೀರು.
ಹಗಲು-ಇರುಳು
ಒಂದು ಮಾಡಿ
ಓದಿ-ಬರೆವುದೇ
ಪೂಜೆ-ಕಾಯಕ,
ಅರಿವು-ಆಚಾರ ಮೇಳದ
ಶರಣ ತತ್ವಕೆ
ಈ”ಗುರುಲಿಂಗ “ರ
ಬಾಳು ಸಾರ್ಥಕ.
ನೂರು ಮುಟ್ಟದಿದ್ದರೇನು?
ನೂರಾರು ಗಡಿಯ ಕುಟ್ಟುತ
ಸಾವಿರದ ಅಕ್ಕರದಿ
ಹೊಂಬೆಳಕಿನ ತೇಜ
ಕನ್ನಡಕೆ ಕಳೆಯ ಕಟ್ಟಿದ ಓಜ.
ಕರ್ಪುರದ ಕಾಯವಳಿದು
ಕಳೆಯು ಉಳಿವುದೇ
“ಗುರುಲಿಂಗ” ದ
ಮಹಿಮೆಯು
ಸಾವಿಲ್ಲದ ಕೇಡಿಲ್ಲದ
ಈ ಶರಣ ನಿಲುವು
ಅಳಿಯದು .
–
-ಕೆ.ಶಶಿಕಾಂತ
ಲಿಂಗಸೂಗೂರ