ಉಸುರಿನ ಪರಿಮಳವಿರಲು – ೭
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಣುದೆ?
ಕಡೆಗೀಲು ಬಂಡಿಗಾಧಾರ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.
ಈ ವಚನವು ದೇವರ/ಜೇಡರ ದಾಸಿಮಯ್ಯ ಅವರ ಸರಳವಾದ ವಚನ. ಮನುಷ್ಯನ ಬದುಕನ್ನು ಸರಿಪಡಿಸುವ ಸರಿಯಾದ ಮಾರ್ಗವನ್ನು ಈ ರೀತಿಯಾಗಿ ನುಡಿದಿದ್ದಾರೆ. ಬಂಡಿ ಎಂದರೆ ಗಾಡಿ, ಎತ್ತಿನ ಗಾಡಿ ಅಥವಾ ಯಾವುದೇ ರಥ. ಇದಕ್ಕೆ ಎರಡು ಚಕ್ರಗಳಿವೆ. ಈ ಚಕ್ರಗಳನ್ನು ಒಂದು ಅಚ್ಚಿಗೆ ಜೋಡಿಸಲಾಗಿರುತ್ತದೆ. ಈ ಅಚ್ಚಿನ ಕೊನೆಯ ಭಾಗದಲ್ಲಿ ಚಕ್ರ ಜಾರದಂತೆ, ಕಳಚದಂತೆ ಬಂಧಿಸುವುದೇ ಕಡೆಗೀಲು ಅಥವಾ ಕಡಾಣಿ. ಈ ಕಡೆಗೀಲಿಲ್ಲದೆ ಬಂಡಿಯನ್ನು ಚಲಿಸಲು ಸಾಧ್ಯವಿಲ್ಲ. ಬಂಡಿಗೆ ಕಡೆಗೀಲೇ ಆಧಾರ. ಹಾಗೇಯೇ / ಅಹಂಕಾರ ತುಂಬಿದ ನಮ್ಮ ಶರೀರಕ್ಕೆ(ಮನಸ್ಸು) ಮೃಡ(ಶಿವ)ಭಕ್ತರ ಹಿತವಚನಗಳೇ ಆಧಾರ. ಅಹಂಕಾರ ಇಲ್ಲವಾಗಿಸಿ ಉತ್ತಮ ಜೀವನ ನಡೆಸಲು ಶರಣರ ಮಾತುಗಳು ದಾರಿದೀಪವಾಗುತ್ತವೆ. ಇಲ್ಲಿ ಬಂಡಿಗೆ ಈ ಶರೀರವನ್ನು ಹೋಲಿಸಿ, ಕಡೆಗೀಲಿಗೆ ಶರಣರ ನುಡಿಗಳನ್ನು ಹೋಲಿಸಿದ್ದಾರೆ. ದಾಸಿಮಯ್ಯನ ಈ ವಚನವು ಆದರ್ಶ ಬದುಕಿಗೆ ನಾವು ಯಾರನ್ನು ಅನುಸರಿಸಬೇಕು ಎಂಬ ಎಚ್ಚರವನ್ನು ನೀಡುತ್ತದೆ.
ನಮಗೆ ತಿಳಿಯದೆ ನಮ್ಮ ತಪ್ಪುಗಳ ತಿದ್ದುವ ಕೀಲಿಗಳೂ, ನಮ್ಮನ್ನು ಸದಾ ಕಾಪಾಡುತ್ತಿರುತ್ತವೆ. ಅವುಗಳೇ ಶರಣರ ನುಡಿಗಳಂತಹ ಶಕ್ತಿ ಕಿರಣಗಳು.
ನಿರ್ವಚನ : ಡಾ. ರವಿಶಂಕರ್ ಎ.ಕೆ.