ಗುರಿ ಮತ್ತು ಅದರ ಸಾಧನೆ..

ಗುರಿ ಮತ್ತು ಅದರ ಸಾಧನೆ…..

 

 

“ಜೀವನಕ್ಕೆ ಗುರಿ ಹಾಗೂ ಅದನ್ನು ಪಡೆಯುವ ಸರಿಯಾಗಿ ಅರಸಿಕೊಳ್ಳುವ ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು”

ಗುರಿಯಿಲ್ಲದ ಜೀವನ ಸಮುದ್ರದಲ್ಲಿ ಯಾವ ಮಾರ್ಗದಲ್ಲಿ ಚಲಿಸಬೇಕೆಂದು ತಿಳಿಯದೆ ಹೊರಟ ದೋಣಿಯಂತೆ. ಪ್ರಪಂಚದ ಯಾವುದೇ ವ್ಯಕ್ತಿ, ವಸ್ತು ಭೂಮಿಯಲ್ಲಿ ಬಂದಿದ್ದರೆ ಅದಕ್ಕೆ ಇಂತದ್ದೇ ಒಂದು ಕಾರಣ ಇದ್ದೇ ಇರುತ್ತದೆ. ಜೀವನಕ್ಕೆ ಹುಟ್ಟು ಮತ್ತು ಸಾವು ಎರಡಕ್ಕೂ ಕಾರಣ ಇದ್ದಂತೆ, ಜೀವನದಲ್ಲಿ ಯಾವುದೊ ಕಾರಣಕ್ಕಾಗಿ ಉದ್ದೇಶಕ್ಕಾಗಿ ಜನ್ಮ ತಳಿದಿರುತ್ತೇವೆ. ಹುಟ್ಟಿಗೆ ಮತ್ತು ಜೀವನಕ್ಕೆ ಕಾರಣ ಇದ್ದರೂ ಎಷ್ಟೋ ಬಾರಿ ನಮ್ಮ ಹುಟ್ಟು ಏಕೆ ಆಗಿದೆ ಎಂಬ ಹುಡುಕಾಟ ಎಷ್ಟೋ ಜನರು ಯೋಚಿಸುವುದೇ ಇಲ್ಲ.

ಮನುಷ್ಯ  ಬುದ್ದಿವಂತಿಕೆ ಹಾಗೂ ವಿವೇಚನೆಗೆ ಪ್ರಸಿದ್ಧ ಪ್ರಾಣಿಗಳಿಗೆ ಅಂತಹ ಒಂದು ಗುಣ ವಿಶೇಷ ಇರುವುದಿಲ್ಲ. ಸಣ್ಣ ಮಕ್ಕಳು ಇರುವಾಗಲೇ ಅವರಲ್ಲಿ ಜೀವನದ ಪ್ರತಿ ಆಸೆ ಹಾಗೂ ಗುರಿಯನ್ನು ಬಿತ್ತುವ ಕೆಲಸ ತಂದೆ ತಾಯಿಯರದ್ದಾಗಿರುತ್ತದೆ. ಮಕ್ಕಳು ಹುಟ್ಟಿದ ನಂತರ 5-6 ವರ್ಷ ಆಟ ಪಾಠ ಊಟಗಳಲ್ಲಿ ಸುತ್ತ ಮುತ್ತಲಿನ ಪ್ರಪಂಚವನ್ನು ಅರಿಯುವಲ್ಲಿ ಕಳೆಯುತ್ತಾರೆ.

ಹಿಂದಿನ ಕಾಲದಲ್ಲಿ ಗುರುಕುಲಕ್ಕೆ ವಿದ್ಯಾರ್ಜನೆಗೆ ಕಳುಹಿಸುತ್ತಿದ್ದರು ಈಗ ಶಾಲೆಗೆ ಕಳುಹಿಸುತ್ತಾರೆ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಸಾಧಕರ ದೊಡ್ಡವರ ಪುರಾಣ ಮತ್ತು ಐತಿಹಾಸಿಕ ಪುರುಷರ ಕತೆಗಳನ್ನು ಹೇಳಿ ಬೆಳೆಸಲಾಗುತ್ತದೆ. ಆಗ ಮಕ್ಕಳು ತಮ್ಮ ಆದರ್ಶ ಮತ್ತು ಪ್ರಿಯ ವ್ಯಕ್ತಿಯಂತೆ ಬೆಳೆಯುವ ಸಾಧಿಸುವ ಆಸೆಯನ್ನು ಜೊತೆಗೆ ಗುರಿಯನ್ನು ಬೆಳೆಸಿಕೊಳ್ಳುತ್ತಾರೆ. ತಂದೆ ತಾಯಿಯರು ಮಕ್ಕಳಿಗೆ ಕನಸುಗಳನ್ನು ಗುರಿಯನ್ನು ನೀಡುವ ಮಾಧ್ಯಮವಾಗಿರುತ್ತಾರೆ.

ಮಕ್ಕಳ ಗುಣ ಸ್ವಭಾವ ಹಾಗೂ ಅವರ ಆಸೆ ಆಕಾಂಕ್ಷೆಗಳಿಗೆ ಅನುಗುಣವಾಗಿ ಅವರ ಕನಸುಗಳಿಗೆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಪಡವಲ್ಲಿ ಸಹಾಯಕರಾಗುತ್ತಾರೆ.

ಜೀವನಕ್ಕೆ ಗುರಿ ಇರಲೇ ಬೇಕು. ಮೊದಲು ವಿದ್ಯೆಯನ್ನು ಕಲಿಯುವ ಗುರಿ, ನಂತರ ಕೆಲಸ ಪಡೆಯುವ ಸ್ವಂತ ಕಾಲಿನ ಮೇಲೆ ನಿಂತು ದುಡಿದು ಬದುಕುವ ಗುರಿ, ತಮ್ಮ ವೃತ್ತಿ ಜೀವನದಲ್ಲಿ ಸಾಧಿಸುವ, ಸಮಾಜದಲ್ಲಿ ಸ್ಥಾನಮಾನ ಗಳಿಸುವ ಗುರಿ, ಪ್ರಸಿದ್ಧಿ ಹೊಂದುವ ಗುರಿ ನಮ್ಮ ಜೀವನಕ್ಕೆ ಅರ್ಥವನ್ನು ಮೌಲ್ಯವನ್ನು ನೀಡುತ್ತದೆ.

ಗುರಿ ಉದ್ದೇಶ ಪ್ರಸಿದ್ಧಿ ಯಾವುದೇ ಸಾಧನೆಗೆ ಆಗಲಿ ಪರಿಶ್ರಮ ಹಾಗೂ ಸರಿಯಾದ ಮಾರ್ಗ ಇರಲೇ ಬೇಕು. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಜೀವನದಲ್ಲಿ ಎದುರಿಗೆ ಬದುಕುತ್ತಿರುವ ಹಿಂದೆ ಸಾಧಿಸಿದ ಜನರ ಜೀವನವನ್ನು ತೋರಿಸಿ ಗುರಿಯನ್ನು ಯೋಚಿಸುವಂತೆ ಮಾಡಬೇಕು. ಕೆಲವು ಮಕ್ಕಳಲ್ಲಿ ಆತ್ಮ ವಿಶ್ವಾಸ, ಯೋಚನೆ ಮತ್ತು ವಿವೇಚನೆಯ ಕೊರತೆ ಇರುತ್ತದೆ. ಅವರಿಗೆ ಸರಿಯಾಗಿ ಯೋಚಿಸಲು ಗುರಿಯನ್ನು ಹೊಂದಲು ಪ್ರೇರಣೆ ನೀಡಬೇಕು.

ಇತ್ತೀಚಿಗೆ ಹಿರಿಯರಲ್ಲೇ ಜೀವನದ ಗುರಿ ಉದ್ದೇಶದ ಕೊರತೆ ಇರುವ ಕಾರಣ ಮಕ್ಕಳು ಕೂಡ ಸಾಧನೆ ಮಾಡುವ ಬಗ್ಗೆ ಯೋಚಿಸುವುದಿಲ್ಲ. ಯಾಂತ್ರಿಕ ಬದುಕಿಗೆ ಒಳಪಟ್ಟು ಶಾಲೆಗೆ ಹೋಗುವುದು ಪರೀಕ್ಷೆ ಬರೆಯುವುದು ಮಾತ್ರ ತಮ್ಮ ಕೆಲಸ ಎಂದು ಭಾವಿಸಿರುತ್ತಾರೆ.

ಎಸ್ ಎಸ್ ಎಲ್ ಸಿ ನಂತರ ಏನು ಓದಬೇಕು. ವೃತ್ತಿಯನ್ನು ಯಾವ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ತಮ್ಮ ಸಾಮರ್ಥ್ಯ ಏನು ಎಂದು ತಿಳಿಯದ ಮಕ್ಕಳಿಗೆ ಪೋಷಕರು ಹಾಗೂ ಅಧ್ಯಾಪಕರು ಸಹಾಯ ಮಾಡಬೇಕು. ಮಕ್ಕಳ ಸಾಮರ್ಥ್ಯ ಮತ್ತು ಕೊರತೆಗಳು ಅವರ ಪೋಷಕರಿಗೆ ಜೊತೆಗೆ ದಿನದ 8-10 ತಾಸುಗಳು ಜೊತೆಗೆ ಇದ್ದು ಅವರನ್ನು ರೂಪಿಸುತ್ತಿರುವ ಅಧ್ಯಾಪಕರಿಗೆ ಚೆನ್ನಾಗಿ ತಿಳಿದಿರುತ್ತದೆ.

ಹದಿಹರೆಯ ಸಮಯದಲ್ಲಿ ಎಲ್ಲವೂ ಚಂದವೇ, ಕಂಡಿದ್ದು ಬೇಕು, ಇಷ್ಟ ಆಗಿದ್ದು ಮಾಡಬೇಕೆಂಬ ಹುಮ್ಮಸ್ಸು ಇರುತ್ತದೆ. ತಮ್ಮ ಸಾಮರ್ಥ್ಯ ಅನುಕೂಲತೆ ಹಾಗೂ ಅವಶ್ಯಕತೆಗೆ ತಕ್ಕ ವೃತ್ತಿಗೆ ಸಹಾಯಕವಾಗುವ ಓದನ್ನು ಆಯ್ದು ಕೊಂಡು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನುಗ್ಗಬೇಕು. ನಮ್ಮ ಸಾಮರ್ಥ್ಯ ನಮಗೆ ಅಲ್ಲದೇ ಬೇರೆಯವರಿಗೆ ತಿಳಿಯುವುದಿಲ್ಲ. ತಂದೆ ತಾಯಿಗಳು ಮತ್ತು ಶಿಕ್ಷಕರ ಬಳಿ ನಮ್ಮ ಇಷ್ಟ ಕಷ್ಟ ಆಸಕ್ತಿಗಳ ಬಗ್ಗೆ ಚರ್ಚಿಸಬೇಕು. ಕಷ್ಟವೆನಿಸುವ ವಿಷಯಗಳನ್ನು ಗುರುತಿಸಿ ಅದನ್ನು ಅಭ್ಯಾಸ ಮಾಡಲು ಕಲಿಯ ಬೇಕು. ಯಾವ ವಿಷಯದ ಬಗ್ಗೆ ಹೆಚ್ಚು ಜ್ಞಾನ ಹಾಗೂ ಆಸಕ್ತಿ ಇರುತ್ತದೆಯೋ ಅದರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಬೇಕು.

ಯಾರು ಕೂಡ ಹುಟ್ಟಿನಿಂದಲೇ ಜಾಣರು ಅಥವಾ ದಡ್ಡರು ಇರುವುದಿಲ್ಲ. ನಮ್ಮ ಕಲಿಕೆ, ಪರಿಶ್ರಮದಿಂದ ಬೇಕಾದ್ದು ಕಲಿಯಬಹುದು ಸಾಧಿಸಬಹುದು.

ಇಂತದ್ದೇ ವಯಸ್ಸಿಗೆ ಕಲಿಯ ಬೇಕು ಸಾಧಿಸಬೇಕೆಂಬ ನಿಯಮವಿರುವಿದಿಲ್ಲ. ಎಂದು ನಾವು ಸಾಧಿಸುವ ನಿರ್ಣಯ ಮಾಡುತ್ತೇವೋ ಅಂದೇ ನಮ್ಮ ಜೀವನಕ್ಕೆ ಹೊಸ ಗುರಿ ದೊರೆತಂತೆ. ನಿಂತ ನ ನೀರಾಗಿ ಒಂದೇ ಕಡೆ ನಿಲ್ಲದೆ, ಹರಿಯುವ ನೀರಿನಂತೆ ಹೊಸತನ ಪಡೆಯುತ್ತ ಜೀವನವನ್ನು ಸಾಗಿಸುತ್ತಾ ಹೋಗಬೇಕು.

ಜೀವನ ಬಹು ದೊಡ್ಡದಾದ ಪ್ರಯಾಣ ಅದಕ್ಕೆ ಇಂತಿಷ್ಟು ಆದರೆ ಸಾಕು ಎಂದು ನಿಲ್ಲುವ ಸ್ವಭಾವ ಬೆಳೆಸಿಕೊಳ್ಳದೆ ಅಭಿವೃದ್ಧಿಯತ್ತ ಸಾಗುತ್ತಿರಬೇಕು. ಆತ್ಮ ವಿಶ್ವಾಸದೊಂದಿಗೆ ಸ್ವಲ್ಪ ಆಕಾಂಕ್ಷೆ ಗಳನ್ನು ಸಾಧಿಸುವ ಛಲವನ್ನು ಬೆಳೆಸಿಕೊಂಡಾಗ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ.

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!