ದೇಹದಲ್ಲಿರುವ ಚಕ್ರಗಳು ಮತ್ತು ಅವುಗಳ ಕಾರ್ಯ ನಿರ್ವಹಣೆ
ಯೋಗ, ಧ್ಯಾನ ಮತ್ತು ರೇಖಿ ತರಗತಿಗಳಲ್ಲಿ ನಾವು ಚಕ್ರಗಳ ಕುರಿತು ಗುರುಗಳು, ತರಬೇತುದಾರರು ಹೇಳುವುದನ್ನು ಕೇಳಿರುತ್ತೇವೆ.
ಏನೀ ಚಕ್ರಗಳು?
ನಮ್ಮ ದೇಹದ ವಿವಿಧ ಭಾಗಗಳಲ್ಲಿ ಇರುವ ವೃತ್ತಾಕಾರದ ಆಕೃತಿಗಳನ್ನು ಚಕ್ರ ಎಂದು ಹೇಳುತ್ತೇವೆ. ಈ ಚಕ್ರಗಳು ದೇಹದ ಆಯಾ ಭಾಗದ ನರವ್ಯೂಹಗಳಿಗೆ ಮತ್ತು ದೇಹದ ಅಂಗಗಳಿಗೆ ಸಂಪರ್ಕವನ್ನು ಹೊಂದಿದ್ದು ಅವು ಸರಿಯಾಗಿ ಕಾರ್ಯನಿರ್ವಹಿಸಲು ತಮ್ಮ ಅಹರ್ನಿಶಿ ಪಾಲನ್ನು ಸಲ್ಲಿಸುತ್ತವೆ. ಚಕ್ರಗಳ ಸರಿಯಾದ ಕಾರ್ಯನಿರ್ವಹಣೆಗೆ ಅವುಗಳು ಸದಾ ತೆರೆದ ಇಲ್ಲವೇ ಸಮತೋಲನ ಸ್ಥಿತಿಯಲ್ಲಿ ಇರಬೇಕು. ಚಕ್ರಗಳು ಮುಚ್ಚಿದ ಸ್ಥಿತಿಯಲ್ಲಿದ್ದರೆ ದೇಹವು ವಿವಿಧ ರೀತಿಯ ಮನೋ ದೈಹಿಕ ತೊಂದರೆಗಳನ್ನು ಅನುಭವಿಸುತ್ತದೆ.
ನಮ್ಮ ದೇಹದಲ್ಲಿ ಒಟ್ಟು 114 ಚಕ್ರಗಳನ್ನು ಗುರುತಿಸಿದ್ದು ಮುಖ್ಯವಾದ ಏಳು ಚಕ್ರಗಳು ನಮ್ಮ ಬೆನ್ನುಹುರಿಯ ತಳ ಭಾಗದಿಂದ ಹಿಡಿದು ನಡು ನೆತ್ತಿಯವರೆಗೆ ಒಂದೇ ಸರಳರೇಖೆಯಲ್ಲಿ ಇರುವ ಏಳು ಚಕ್ರಗಳನ್ನು ಮುಖ್ಯ ಚಕ್ರಗಳೆಂದು ಗುರುತಿಸಲಾಗಿದೆ.
ಮೂಲಾಧಾರ ಚಕ್ರ…
.ಚಕ್ರಗಳಲ್ಲಿ ಮೊದಲನೆಯದು ಮೂಲಾಧಾರ ಚಕ್ರ.ಇದು ನಮ್ಮ ಬೆನ್ನು ಹುರಿಯ ತಳಭಾಗದಲ್ಲಿ ಇದ್ದು, ದೇಹಕ್ಕೆ ಸಂಪೂರ್ಣ ದೃಢತೆಯನ್ನು ಕೊಡುವ ಚಕ್ರವಾಗಿದೆ.ವ್ಯಕ್ತಿಯ ದೈಹಿಕ ದೃಢತೆಗೆ ಮೂಲವಾದ ಈ ಚಕ್ರ ಮಾನಸಿಕ ದೃಢತೆಯನ್ನು ಕೂಡ ಕಾಯುತ್ತದೆ. ಈ ಚಕ್ರವು ಸುರಕ್ಷತೆ,ಉಳಿವಿಗಾಗಿನ ಹೋರಾಟ ಮತ್ತು ಬದುಕಿನ ಮೂಲ ಆಧಾರದ ಶಕ್ತಿಯ ಕೇಂದ್ರವಾಗಿದೆ.
ಈ ಚಕ್ರದ ಶಕ್ತಿಯ ಹರಿವಿನಲ್ಲಿ ತಡೆಯುಂಟಾದರೆ ವ್ಯಕ್ತಿಯು ಖಿನ್ನತೆ ಮತ್ತು ಅಸುರಕ್ಷತೆಗಳಿಂದ ಬಳಲುತ್ತಾನೆ.
ಮೂಲಾಧಾರ ಚಕ್ರವು ದೈಹಿಕ ಶಕ್ತಿ ಮತ್ತು ಮಾನಸಿಕ ಸಂತುಲನದ ಶಕ್ತಿಯ ಹರಿವನ್ನು ಹೊಂದಿರುವುದರಿಂದ,ಮೂಲಾಧಾರ ಚಕ್ರವನ್ನು ಜಾಗೃತಗೊಳಿಸಲು ಮಲಾಸನವನ್ನು ಮಾಡಬೇಕು.
ಸ್ವಾಧಿಷ್ಟಾನ ಚಕ್ರ…
ಎರಡನೆಯ ಚಕ್ರವಾದ ಸ್ವಾದಿಷ್ಟಾನ ಚಕ್ರವು ಹೊಕ್ಕುಳಿನ ಕೆಳಭಾಗದಲ್ಲಿದೆ. ಈ ಚಕ್ರವು ದೇಹದ ಲೈಂಗಿಕ ಆಸೆ, ಆಕಾಂಕ್ಷೆಗಳು ಮತ್ತು ಕ್ರಿಯಾಶೀಲತೆಯ ಹರಿವನ್ನು ಹೊಂದಿದೆ. ವ್ಯಕ್ತಿಯ ವೈಯುಕ್ತಿಕ ಮತ್ತು ಇತರರೊಂದಿಗಿನ ಭಾವನಾತ್ಮಕ ವರ್ತನೆ ಮತ್ತು ಸಂಬಂಧಗಳ ಕುರಿತ ಶಕ್ತಿ ಕೇಂದ್ರ ಈ ಚಕ್ರವಾಗಿದೆ.
ಸ್ವಾಧಿಷ್ಟಾನ ಚಕ್ರವು ನಿಮ್ಮ ದೇಹ ಮತ್ತು ಮನಸ್ಸುಗಳ ಸಮ್ಮಿಳನಕ್ಕೆ ಕಾರಣವಾಗುವ ಶಕ್ತಿಯನ್ನು ಹೊಂದಿರುವುದರಿಂದ, ನಿಮ್ಮೊಂದಿಗೆ ನೀವು ಹೆಚ್ಚು ಅರಿಯಲು ಈ ಚಕ್ರದ ಕ್ರಿಯಾಶೀಲತೆಗೆ ಅಂಜನಿ ಆಸನವನ್ನು ಅಭ್ಯಸಿಸಬೇಕು.
ಮಣಿಪೂರ ಚಕ್ರ…
ಇದು ನಮ್ಮ ಹೊಟ್ಟೆಯ ಭಾಗದಲ್ಲಿ ಇದ್ದು, ದೈಹಿಕವಾಗಿ ಜಠರಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸಲು ಅನುಕೂಲಕರವಾಗಿದ್ದು,ಮಾನಸಿಕವಾಗಿ ಆತ್ಮವಿಶ್ವಾಸ ಮತ್ತು ಆತ್ಮತೃಪ್ತಿಯ ಶಕ್ತಿಕೇಂದ್ರವಾಗಿದೆ. ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣವನ್ನು ಹೊಂದಲು ಮಣಿಪುರ ಚಕ್ರವು ಸಹಾಯಕಾರಿಯಾಗಿದೆ.
ಮಣಿಪುರ ಚಕ್ರವು ನಿಮ್ಮ ಯೋಜನೆಗಳು ಮತ್ತು ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ. ಮಣಿಪೂರ ಚಕ್ರದ ಶಕ್ತಿಯ ಹರಿವನ್ನು ಉದ್ದೀಪಿಸಲು ನಾವಾಸನವನ್ನು ಅಭ್ಯಸಿಸಬೇಕು.
ಅನಾಹತ ಚಕ್ರ….
ಈ ಚಕ್ರವು ನಮ್ಮ ಹೃದಯದ ಭಾಗದಲ್ಲಿ ಸ್ಥಿತವಾಗಿದ್ದು ಹೃದಯಕ್ಕೆ ಸಂಬಂಧಪಟ್ಟ ಎಲ್ಲ ಶಕ್ತಿಯ ಹರಿವಿಗೆ ಕಾರಣವಾದ ಚಕ್ರವಾಗಿದೆ. ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳುವ ಈ ಚಕ್ರವು ಮಾನಸಿಕವಾಗಿ ನಮ್ಮ ಪ್ರೀತಿ ಮತ್ತು ಸಹಾನುಭೂತಿಯ ಶಕ್ತಿಯ ಹರಿವಿನ ಚಕ್ರವಾಗಿದೆ.ಆದ್ದರಿಂದಲೇ ಹೃದಯವನ್ನು ಪ್ರೀತಿಯ ಸಂಕೇತವಾಗಿ ಬಳಸುತ್ತಾರೆ.
ಅನಾಹತ ಚಕ್ರವು ನಿಮ್ಮ ಪ್ರೀತಿಯ ಶಕ್ತಿಯನ್ನು ಮತ್ತು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುವ ಭಾವ ಬಂಧದ ಶಕ್ತಿಯನ್ನು ಹೊಂದಿದೆ.ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಉಷ್ಟ್ರಾಸನವನ್ನು ಅಭ್ಯಸಿಸಿ.
ವಿಶುದ್ಧ ಚಕ್ರ…
ಈ ಚಕ್ರವು ನಮ್ಮ ಗಂಟಲಿನ ಭಾಗದಲ್ಲಿ ಸ್ಥಿತವಾಗಿದ್ದು ನಮ್ಮ ಗಂಟಲಿನ ಸುತ್ತಣ ಅಂಗಗಳ ಕಾರ್ಯವೈಖರಿಗೆ ಅನುಕೂಲಕರವಾದ ಶಕ್ತಿಯ ಹರಿವಿಗೆ ಕಾರಣವಾದ ಚಕ್ರವಾಗಿದೆ. ನಮ್ಮ ಧ್ವನಿ ಪೆಟ್ಟಿಗೆಯ ಮೂಲಕ ಮಾತಿನ ಸಂವಹನದ ಕಾರ್ಯನಿರ್ವಹಣೆ ಈ ಚಕ್ರದ ಶಕ್ತಿಯ ಕಾರಣದಿಂದಲೇ. ಗಂಟಲಿಗೆ ಸಂಬಂಧಪಟ್ಟ ಎಲ್ಲಾ ತೊಂದರೆಗಳಿಗೆ ಕಾರಣವಾಗುವುದು ವಿಶುದ್ಧಿ ಚಕ್ರದ ಶಕ್ತಿಯ ಹರಿವಿನ ತೊಂದರೆಯಿಂದ. ನಿಮ್ಮ ಭಾವನೆಗಳನ್ನು ಅದೆಷ್ಟು ಪರಿಣಾಮಕಾರಿಯಾಗಿ ನೀವು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದು ವಿಶುದ್ಧಿ ಚಕ್ರದ ಶಕ್ತಿಯ ಹರಿವು ನಿರ್ಧರಿಸುತ್ತದೆ. ನಿಮ್ಮ ಧ್ವನಿ ಈ ಜಗತ್ತಿನಲ್ಲಿ ಕೇಳಿಸುವಂತೆ ಮಾಡಲು ವಿಶುದ್ಧಿ ಚಕ್ರವನ್ನು ಹೆಚ್ಚು ಕ್ರಿಯಾಶೀಲವಾಗಿಸಲು ಸೇತುಬಂಧ ಆಸನದ ಅಭ್ಯಾಸ ಅವಶ್ಯಕವಾಗಿ ಮಾಡಬೇಕು.
ಆಜ್ಞಾ ಚಕ್ರ….
ಈ ಚಕ್ರವು ನಮ್ಮ ಎರಡು ಹುಬ್ಬುಗಳ ಮಧ್ಯ ಭಾಗವಾದ ಹಣೆಯಲ್ಲಿ ಸ್ಥಿತವಾಗಿದೆ. ಈ ಚಕ್ರವು ನಮ್ಮ ಮಾನಸಿಕ ದೃಢತೆ, ವೃತ್ತಿ ಪ್ರವೃತ್ತಿಗಳು, ಅಂತಃ ಪ್ರಜ್ಞೆ ಮತ್ತು ಕಲ್ಪನಾ ಶಕ್ತಿಯ ಹರಿವನ್ನು ಹೊಂದಿದೆ. ಆಜ್ಞಾ ಚಕ್ರದ ಶಕ್ತಿಯ ಕೊರತೆಯಿಂದ ಬಳಲುವವರು ಮಂದ ಬುದ್ಧಿ,ಚಂಚಲ ಚಿತ್ರ ಹೊಯ್ದಾಡುವ ಮನಸ್ಥಿತಿಗಳನ್ನು ಹೊಂದಿರುತ್ತಾರೆ.
ನಮ್ಮ ಮನೋದೈಹಿಕ ವಿಷಯಗಳ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳುವ ಶಕ್ತಿ ಈ ಚಕ್ರದ ಶಕ್ತಿಯ ಹರಿವಿಗೆ ಇದೆ. ಹೆಚ್ಚಿನ ಅಂತಃಶಕ್ತಿಯನ್ನು ಮತ್ತು ಜ್ಞಾನವನ್ನು ಗಳಿಸಲು ಈ ಚಕ್ರವು ಸಹಾಯಕವಾಗಿದ್ದು ಎರಡು ಹುಬ್ಬಗಳ ನಡುವಣ ಹಣೆಯ ಭಾಗದಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಿ ಮೂರನೇ ಕಣ್ಣಿನ ನಿರೀಕ್ಷಣೆಯ ಅಭ್ಯಾಸ ಮಾಡಬೇಕು.
ಸಹಸ್ರಾರ ಚಕ್ರ…
ಈ ಚಕ್ರವು ನಮ್ಮ ನಡು ನೆತ್ತಿಯ ಮೇಲೆ ಇದ್ದು ಮನುಷ್ಯನ ಆಧ್ಯಾತ್ಮಿಕ ಜೀವನಕ್ಕೆ ಸಂಬಂಧಪಟ್ಟ, ಪಾರಮಾರ್ಥಿಕ ವಿಷಯಗಳ ಕುರಿತ ಶಕ್ತಿಯ ಹರಿವನ್ನು ಹೊಂದಿದೆ. ಓರ್ವ ವ್ಯಕ್ತಿಯು ವೈಯಕ್ತಿಕವಾಗಿ ಸಾಮಾಜಿಕವಾಗಿ ಮತ್ತು ಪಾರಮಾರ್ಥಿಕವಾಗಿ ಹೊಂದಿರುವ ಆಧ್ಯಾತ್ಮಿಕ ಸಂಬಂಧವನ್ನು ಈ ಚಕ್ರವು ನಿರ್ಧರಿಸುತ್ತದೆ. ಈ ಚಕ್ರದ ಶಕ್ತಿಯ ಹರಿವಿನಲ್ಲಿ ಅಡೆತಡೆ ಉಂಟಾದರೆ ವ್ಯಕ್ತಿಯು ಮಾನಸಿಕ ತೊಂದರೆ ಮತ್ತು ಅಶಾಂತಿಯಿಂದ ಬಳಲುತ್ತಾನೆ. ವ್ಯಕ್ತಿಯು ತನ್ನ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಆಧ್ಯಾತ್ಮದ ಅರಿವನ್ನು ಪಡೆಯಲು ಸಹಸ್ರಾರ ಚಕ್ರವನ್ನು ಉದ್ದೀಪಿಸಲು ಶೀರ್ಷಾಸನವನ್ನು ಅಭ್ಯಾಸ ಮಾಡಬೇಕು.
ಚಕ್ರಗಳ ಸಮತೋಲನದಿಂದ ವ್ಯಕ್ತಿಯ ಮನೋ ದೈಹಿಕ ಆರೋಗ್ಯ ಸುಧಾರಿಸಲು ಸಾಧ್ಯ ಎಂಬುದನ್ನು ಮನಗಂಡು ಚಕ್ರಗಳ ಸುಗಮ ಕಾರ್ಯ ನಿರ್ವಹಿಸುವ
ನಿಟ್ಟಿನಲ್ಲಿ ನಮ್ಮನ್ನು ನಾವು ಪ್ರೇರೇಪಿಸೋಣ.
–ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ
ಸೂಪರ್ ಮೆಡಮ್