ಜನಪದರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ.

ಜನಪದರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

 

 

ನಮ್ಮ ನಾಡು ಹಬ್ಬಗಳ ಬೀಡು.ಅದರಲ್ಲೂ ನಮ್ಮ ಹಳ್ಳಿಗಳಲ್ಲಿ ಹಬ್ಬಗಳ ಆಚರಣೆ ಹೆಚ್ಚು.ಹಳ್ಳಿಯ ಬದುಕು ಹಲವು ವೈವಿಧ್ಯಗಳ ಸಂಗಮ. ಜನಸಾಮಾನ್ಯರ ಚಿಂತನೆ ಆಲೋಚನೆಗಳಾಗಿ ಜನಪದ ಸಾಹಿತ್ಯ,ಜನಪದ ಸಂಸ್ಕ್ರತಿ,ಜನಪದ ಸಂಪ್ರದಾಯ ಪರಂಪರೆಗಳಾಗಿವೆ. ತಿಂಗಳಿಗೊಮ್ಮೆ ಪೂರ್ಣಚಂದ್ರನ ಹುಣ್ಣಿಮೆ,ತಿಂಗಳಿಗೊಮ್ಮೆ ಅನುಭವಿಸುವ ಕಾರ್ಗತ್ತಲು ಅಮಾವಾಸ್ಯೆ ರಾತ್ರಿಗಳು, ನೈಸರ್ಗಿಕ ಬದಲಾವಣೆಗಳು ಅವರ ಬದುಕಿನಲ್ಲಿ ಋತುಮಾನಕ್ಕೆ ತಕ್ಕಂತೆ ಬಗೆಬಗೆಯ ಅನುಭೂತಿ ಆಕಾರಗಳನ್ನು ಕಲ್ಪಿಸಿವೆ.

ಹಳ್ಳಿ ಹಬ್ಬ, ಹಳ್ಳಿ ಹೈದ, ಹಳ್ಳಿ ಹಾಡು, ಹಳ್ಳಿ ಹಕ್ಕಿ, ಹಳ್ಳಿ ಊಟ,ಹಳ್ಳಿ ಹುಡುಗಿ, ಹಳ್ಳಿ ಹೈಕಳು,ಹಳ್ಳಿ ಮನೆ
ಇವು ಹಾಸುಹೊಕ್ಕಾದ ಜನಪದರ ಸುಂದರ ಜನಜೀವನ ಬಿಂಬಿಸುವ ಅರ್ಥ ಪೂರ್ಣ ಶಬ್ದಗಳು.
ಏನೇ ಇರಲಿ ಹಳ್ಳಿಯಲ್ಲಿ ಸಿಗುವ ಸಂತೋಷ, ನೆಮ್ಮದಿ ಬೇರೆಲ್ಲೂ ಸಿಗದು. ಅಂಥ ಜನಪದರ ಹಬ್ಬವೆ ಮಣ್ಣೆತ್ತಿನ ಪರ್ವ.

ಮಣ್ಣು ಪೂಜೆ:

ಕಾರಹುಣ್ಢಿಮೆ ಮುಗಿಯುತ್ತಲೆ ಮಣ್ಣೆತ್ತಿನ ಅಮವಾಸ್ಯೆ ಬರುತ್ತದೆ ಇಲ್ಲಿಂದಲೆ ಮಣ್ಣುಪೂಜೆಯ ಹಬ್ಬಗಳು ಪ್ರಾರಂಭವಾಗುತ್ತವೆ.
ಗುಳ್ಳವ್ವ ಬರುತ್ತಾಳೆ, ನಾಗರ ಪಂಚಮಿ ಹಬ್ಬ ಹಾಗೂ ಗಣೇಶನ ಹಬ್ಬ,ಜೋಕುಮಾರನ ಹಬ್ಬ ಹೀಗೆ ಸಾಲುಸಾಲಾಗಿ ಮಣ್ಣಿನ ಪೂಜೆ ಶುರುವಾಗುತ್ತವೆ.

ಮಣ್ಣೆತ್ತಿನ ಅಮವಾಸ್ಯೆ:

ಕಾರಹುಣ್ಣಿಮೆ ನಂತರ ಬರುವದು ಮಣ್ಣೆತ್ತಿನ ಅಮವಾಸ್ಯೆ.ಅಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಮಣೆಯ ಮೇಲಿಟ್ಟು ಭಕ್ತಿಯಿಂದ ಪೂಜಿಸುತ್ತಾರೆ.ಮಣ್ಣನ್ನೆ ನಂಬಿ ಬದುಕುವ ರೈತರ ದೃಷ್ಟಿಯಲ್ಲಿ ಮಣ್ಢಿ ಬಂಗಾರದಷ್ಟೆ ಬೆಲೆಯುಳ್ಳದ್ದು. ಅದು ಸಂಪತ್ತನೀಯುವ ಜೀವಶಕ್ತಿ. ಪ್ರಕೃತಿಯನ್ನು ಪ್ರೀತಿಸುವ ದ್ಯೋತಕವಾಗಿ ಎಲ್ಲರೂ ಆಚರಿಸುತ್ತಾರೆ. ಆದರೆ ಇತ್ತಿತ್ತಲಾಗಿ ಮಾರಾಟಕ್ಕೆ ಸಿಗುವ ಬಣ್ಣದಲ್ಲಿ ಅಲಂಕೃತಗೊಂಡ ಸುಂದರ ಎತ್ತುಗಳನ್ನು ತಂದಿಟ್ಟು ಪೂಜಿಸುತ್ತಾರೆ. ಗ್ರಾಮೀಣ ಮಕ್ಕಳಿಗೆ ಎತ್ತು ತಯಾರಿಸುವುದರಲ್ಲಿ ವಿಶೇಷ ಒಲವು. ಮನೆಮನೆಗೆ ಹೋಗಿ ಮಾರುವುದುಂಟು.
ಕೃಷಿಕರು ಯಾವುದೆ ಕೆಲಸ ಪ್ರಾರಂಬಿಸಿದರೂ ಪೂಜಿಸಿ ಶುರುಮಾಡುತ್ತಾರೆ. ಹೊಲ ಹಸನು ಮಾಡುವಾಗ,ಬಿತ್ತುವಾಗ,ಒಕ್ಕುವಾಗ,ಬಣವೆ ಒಟ್ಟುವಾಗ,ರಾಶಿ ಮನೆ ತರುವಾಗ ಹೀಗೆ ಬೇರೆ ಬೇರೆ ಆಚರಣೆಗಳಿವೆ.ಕೃಷಿ ಕೆಲಸ ಪ್ರಾರಂಬಿಸುವಾಗ ಮಣ್ಢಿನ ಪೂಜೆ ಮಾಡುತ್ತಾರೆ.ಇದನ್ನು ಮಣ್ಣೆತ್ತಿನ ಅಮವಾಸ್ಯೆ ಎನ್ನುವರು.ಕೃಷಿಕರಲ್ಲದವರೂ ಕೂಡ ಈ ಹಬ್ಬವನುನು ಸಂಭ್ರಮದಿಂದ ಆಚರಿಸುತ್ತಾರೆ. ಎತ್ತುಗಳು ಶಿವನ ವಾಹನ ನಂದಿಯ ಅವತಾರ.ನಂದಿಯ ಪೂಜೆ ಹಿಂದಿನಿಂದಲೂ ಇದೆ. ಪ್ರಾಚಿನ ಜನಪದ ವಾದ್ಯವೊಂದಕ್ಕೆ “ನಂದಿಧ್ವಜ”ವೆಂದು ಹೆಸರು.ಕೃಷಿಕರಿಗೆ ಬಸವಣ್ಢನೆ ದೇವರು.ಎಷ್ಟು ಕೊಂಡಾಡಿದರೂ ಕಡಿಮೆಯೇ.ಹಂತಿಯ ಹಾಡುಗಳಲ್ಲಿ,ಸಂಪ್ರದಾಯದ ಹಾಡುಗಳಲ್ಲಿ,ಜಾನಪದ ಹಾಡುಗಳಲ್ಲಿ ಬಸವಣ್ಣನನ್ನು ವಿಧವಿಧವಾಗಿ ವರ್ಣಿಸಿ ಹಾಡಿದ್ದಾರೆ. ಹೀಗೆ ಹಾಡುವಾಗ ಅವರ ಭಾವನೆಗಳು ಗರಿಗೆದರುತ್ತವೆ. ಕೋಡುಗಳಿಗೆ ಕೋಡಣಸು, ಜೂಲ,ಗೆಜ್ಜೆ,ಬೆನ್ನಿಗೆ ಚಿತ್ತಾರದ ಬಣ್ಣದ ಬಟ್ಟೆ ಹಾಕಿ ಕುಂಕುಮ ಹಚ್ಚಿ ಭಕ್ತಿಯಿಂದ ಆರತಿ ಮಾಡಿ ಸಂಭ್ರಮಿಸುತ್ತಾರೆ. ಎತ್ತು ಇರದಿದ್ದರೆ ಕೃಷಿಯೇ ಇಲ್ಲ.ಒಕ್ಕಲುತನಕೆ ಮೂಲಾಧಾರ ಬಸವಣ್ಣ ಅವನನ್ನು ನಂಬಿ ಬದುಕ ಕಟ್ಟಿಕೊಂಡವರು ಜನಪದರು.ಹೀಗಾಗಿ ಎತ್ತುಗಳನ್ನು ಎಷ್ಟು ಪೂಜಿಸಿದರೂ ಅಲಂಕರಿಸಿದರೂ ತೃಪ್ತಿ ಇಲ್ಲ.ಅಂತೆಯೇ ‘ಎತ್ತು ಎತ್ತಲ್ಲ,ಹತ್ತು ದಿಕ್ಕಿಗೆ ಸಲವೋನೆ ಬಸವಣ್ಣ, ‘ಬಿತ್ತಿದ ಬೆಳವಲಕ ಬೆಳಗ್ಯಾನೊ’ ಎಂದು ನಂಬಿರುವರು. ದಿನವಿಡೀ,ವರ್ಷವಿಡೀ ತಮ್ಮ ಜೊತೆಗೆ ದುಡಿದು ಎಲ್ಲರಿಗೂ ಅನ್ನನೀಡುವ ಬಸವಣ್ಣನನ್ನು ಗೌರವಿಸುವ ಮಣ್ಢೆತ್ತಿನ ಪೂಜೆ ದ್ರಾವಿಡ ಸಂಸ್ಕ್ರತಿಯ ಹಬ್ಬವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.ಬಸವಣ್ಣನವರ ವಚನದಲ್ಲಿ ಮಣ್ಣೆತ್ತಿನ ಉಲ್ಲೇಖ ಇರುವದರಿಂದ 12 ನೇ ಶತಮಾನಕ್ಕಿಂತ ಪೂರ್ವದಲ್ಲಿಯೇ ಈ ಆಚರಣೆ ಇದ್ದಿರಬಹುದೆಂಬ ಅಭಿಪ್ರಾಯ.

ದಂತಕತೆ..

ಒಬ್ಬನು ದುಡ್ಡಿಗಾಗಿ ತನ್ನ ಮಗಳನ್ನು ಸತ್ತ ಗಂಡಿಗೆ ಮದುವೆ ಮಾಡಿಕೊಡುತ್ತಾನೆ.ಅವಳು ಸ್ಮಶಾನದಲ್ಲಿ ಕೆಸರಿನ ನಂದಿ ಮಾಡಿ ಪೂಜಿಸಿ ಸತ್ತ ಗಂಡನನ್ನು ಬದುಕಿಸಿಕೊಳ್ಳುತ್ತಾಳೆ.ಇದು ಅಮವಾಸ್ಯೆಯ ದಿನ ನಡೆದಿರುತ್ತದೆ.ಆದ್ದರಿಂದ ಮಣ್ಣೆತ್ತಿನ ಪೂಜೆ ನಡೆದು ಬಂದಿದೆ ಎಂಬ ಕಥೆಯೂ ಇದೆ.
ಕೋಲಾಟದ ಹಾಡುಗಳು,ಹಂತಿಪದಗಳು ಮಣ್ಣಿನ ಬಸವನ ಬಗ್ಗೆ ಅನೇಕ ಸಂಗತಿಗಳನ್ನು ನೀಡುತ್ತವೆ.ಅಲ್ಲದೆ ಹಾಡುಗಳೂ ಅಷ್ಟೆ ಮಧುರವಾಗಿವೆ.

ಜನಪದ ಹಾಡುಗಳು

‘ಒಂದು ಸುತ್ತಿನ ಕೋಟಿ ಅದರೊಳಗ ಮೂಡಿ ಬರತಾನ ಬಸವ ಬಸವಗ ಬಸವೆಣ್ಣಿರೆ ಬಸವನ ಪಾದಕ ಶರಣೆಣ್ಣಿರೆ’.
ಎಂದು ಸಾಗುವ ಈ ಬಸವನ ಹಾಡು ಹತ್ತುಕೋಟಿಯವರೆಗೆ ಸಾಗುತ್ತ ಬಸವಣ್ಣನ ಗುಣಗಾನ ಮಾಡುತ್ತದೆ.
“ದೇವರು ನಾಡನ್ನು ಕೊಟ್ಟಿದ್ದಾನೆ,ಮನುಷ್ಯ ಸಮಾಜ ಕಟ್ಟಿದ್ದಾನೆ” ಎನ್ನುವ ಗಾದೆಮಾತಿದೆ. ನಮ್ಮ ಹಿರಿಯರ ಗುಣ ದೊಡ್ಡದು.ಸುಂದರ ಸಮಾಜ ನಿರ್ಮಾಣಕ್ಕಾಗಿ, ಭಾವೈಕ್ಯತೆಗಾಗಿ ಅವರು ಹಲವು ಹಬ್ಬ-ಹರಿದಿನಗಳನ್ನು,ಉತ್ಸವಾಚರಣೆಗಳನ್ನು ಹುಟ್ಟು ಹಾಕಿದರು.ಈ ಎಲ್ಲ ಹಬ್ಬಗಳು,ಆಚರಣೆಗಳು ಒಂದರಂತೆ ಒಂದಿಲ್ಲ ಎಲ್ಲವೂ ವೈವಿಧ್ಯಮಯವಾಗಿವೆ.ವಿವಿಧತೆಯಲ್ಲಿ ಏಕತೆ ಸಾರುವ ಸೂತ್ರ ಹಾಸುಹೊಕ್ಕಾಗಿದೆ. ಸಾಂಸ್ಕ್ರತಿಕ ಬೆಸುಗೆ-ಸಹಬಾಳ್ವೆ ಒಸಗೆ ಇಲ್ಲಿದೆ.ಇಂದಿನ ಆಧುನಿಕ ಕಾಲದಲ್ಲಿಯೂ ಹಬ್ಬಗಳ ಆಚರಣೆ ಖುಷಿ ಉಳಿದು ಬೆಳೆಯಲಿ ಎಂಬುದೆ ಸದಾಶಯ. ರೀತಿ,ನೀತಿ ಸಂಪ್ರದಾಯ ಹಾಸುಹೊಕ್ಕಾದ ನಮ್ಮ ಹಳ್ಳಿಗರು ತಕ್ಕಮಟ್ಟಿಗೆ  ಹಬ್ಬ ಗಳನ್ನು    ಆಚರಿಸಿ ಸಮಾಧಾನಪಡುತ್ತಾರೆ ಅದುವೇ ಹೆಮ್ಮೆ.ದಯವಿರಲಿ ಸಕಲ ಪ್ರಾಣಿಗಳಲ್ಲಿ.ಎಂಬ ಮಾತು ನೆನಪಿರಲಿ.

 


ಜಯಶ್ರೀ ಭ.ಭಂಡಾರಿ.
ಬಾದಾಮಿ.

Don`t copy text!