e-ಸುದ್ದಿ, ಮಸ್ಕಿ
ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪಚುನಾವಣೆ ಜೋಶ್‍ನಲ್ಲಿದ್ದ ನಾಯಕರು ಸದ್ಯಕ್ಕೆ ಸೈಲೆಂಟ್ ಆಗಿದ್ದಾರೆ. ಆದರೆ ಹಳ್ಳಿ ರಾಜಕೀಯಕ್ಕೆ ರಂಗು ಬಂದಿದ್ದು, ಎಲ್ಲೆಡೆಯೂ ಈಗ ಲೋಕಲ್ ಫೈಟ್ ಹವಾ ಶುರುವಾಗಿದೆ. ಡಿ.11 ರಿಂದ ನಾಮ ಪತ್ರ ಸಲ್ಲಿಕೆ ಪ್ರಕ್ರೀಯೆ ಆರಂಭವಾಗಿದೆ. ಆದರೆ 5ಎ ಕಾಲುವೆ ಹೋರಾಟ ನಿರತ 4 ಗ್ರಾಪಂ ವ್ಯಾಪ್ತಿಯ 30 ಹಳ್ಳಿಗಳಲ್ಲಿ ಗ್ರಾಪಂಗಳಿಗೆ ಎರಡೂ ದಿನ ಕಳೆದರೆ ಯಾವುದೇ ನಾಮಪತ್ರ ಸಲ್ಲಿಸಿದೆ ಜನ ದೂರ ಸರಿದಿದ್ದಾರೆ.
ಮಸ್ಕಿ ಉಪಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗುತ್ತಿರುವ ಮುನ್ಸೂಚನೆ ಅರಿತ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ಶುರು ಮಾಡಿದ್ದರು. ಬಿಜೆಪಿ, ಕಾಂಗ್ರೆಸ್‍ನ ನಾಯಕರು ದಂಡು ಕ್ಷೇತ್ರಕ್ಕೆ ಹರಿದು ಬಂದಿತ್ತು. ಕಾರ್ಯಕರ್ತರಲ್ಲಿ ಉತ್ಸಾಹ, ಜನರನ್ನು ಸೆಳೆಯುವ ಕಸರತ್ತು ನಡೆಸಿದ್ದರು. ಆದರೆ ದಿಢೀರ್‍ನೆ ಘೋಷಣೆಯಾದ ಗ್ರಾಮ ಪಂಚಾಯಿತಿ ಚುನಾವಣೆ ಮಸ್ಕಿ ಬೈ ಎಲೆಕ್ಷನ್ ಉತ್ಸಾಹವನ್ನು ಕುಗ್ಗಿಸಿದೆ. ಪ್ರಚಾರದ ಅಬ್ಬರದಲ್ಲಿದ್ದ ರಾಜಕೀಯ ನಾಯಕರು ಕೂಡ ವಿಶ್ರಾಂತಿಗೆ ಮರಳಿದ್ದಾರೆ. ಆದರೆ ಇತ್ತ ಹಳ್ಳಿ ರಾಜಕೀಯ ಚುರುಕು ಪಡೆದುಕೊಂಡಿದೆ.
404 ಸ್ಥಾನಗಳಿಗೆ ಚುನಾವಣೆ: ಮಸ್ಕಿ ತಾಲೂಕಿನಲ್ಲಿ ಒಟ್ಟು 21 ಗ್ರಾ.ಪಂ. 404 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಸದ್ಯ 64,646 ಗಂಡು, 66,245 ಹೆಣ್ಣು ಇತರೆ 09, ಸೇರಿ ಒಟ್ಟು 1,30,900 ಮತದಾರಿದ್ದಾರೆ. ಮತದಾರರ ಪರಿಷ್ಕರಣೆ ಇನ್ನು ಮುಂದುವರಿಯುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ಹೆಚ್ಚುತ್ತಿರುವ ಅಕಾಂಕ್ಷಿಗಳ ಪಟ್ಟಿ: ಮಸ್ಕಿ ತಾಲೂಕಿನಲ್ಲಿ ಗ್ರಾ.ಪಂ. ಚುನಾವಣೆ ಎರಡನೇ ಹಂತದಲ್ಲಿ ನಡೆಯಲಿದೆ. ಚುನಾವಣೆಗೆ ಸ್ಪರ್ಧೆ ಬಯಸಿದ ಆಕಾಂಕ್ಷಿಗಳ ಪಟ್ಟಿ ಹನುಮನ ಬಾಲದಂತೆ ಬೆಳೆದಿದೆ. ಒಂದು ಸದಸ್ಯ ಸ್ಥಾನಕ್ಕೆ 4-5 ಜನ ಆಕಾಂಕ್ಷಿಗಳಾಗಿದ್ದಾರೆ. ಈಗ ಹಳ್ಳಿ ರಾಜಕೀಯಕ್ಕೂ ವಿಶೇಷ ಮೆರುಗು ಬಂದಿದೆ.
ಇಕ್ಕಟ್ಟು, ಬಿಕ್ಕಟ್ಟು: ಸದ್ಯ ಗ್ರಾ.ಪಂ ಚುನಾವಣೆ ಕಾವು ಜೋರಾಗಿದ್ದರಿಂದ ಇಲ್ಲಿನ ರಾಜಕೀಯ ಪಕ್ಷಗಳಿಗೆ ಒಂದು ಕಡೆ ಖುಷಿ, ಮತ್ತೊಂದು ಕಡೆ ಕಸಿವಿಸಿ ಶುರುವಾಗಿದೆ. ಗ್ರಾ.ಪಂ.ಫಲಿತಾಂಶ ಉಪ ಚುನಾವಣೆಗೆ ಕರಿ ನೆರಳಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಅಂತರ ಕಾಯ್ದುಕೊಳ್ಳುವ ದಾರಿ ಕಂಡುಕೊಂಡಿದ್ದಾರೆ.
ದಾಖಲೆಗೆ ಅಲೆದಾಟ: ಇನ್ನು ಚುನಾವಣೆಗೆ ಸ್ಪರ್ಧೆ ಬಯಸಿದ ಅಭ್ಯರ್ಥಿಗಳು ಚುನಾವಣೆ ಅಖಾಡಕ್ಕೆ ಇಳಿಯಲು ಬೇಕಾದ ಅಗತ್ಯ ದಾಖಲೆಗಳ ಸಂಗ್ರಹಕ್ಕೆ ಅಲೆದಾಡುತ್ತಿದ್ದಾರೆ. ಜಾತಿ ಪ್ರಮಾಣ ಪತ್ರ, ಪಂಚಾಯಿತಿ ಬೇಬಾಕಿ ಪ್ರಮಾಣ ಪತ್ರ, ಘೋಷಣೆ ಪತ್ರ ಸೇರಿ ಇತರೆ ದಾಖಲೆಗಳನ್ನು ಪಡೆಯಲು ತಾಲೂಕು ಕೇಂದ್ರದ ತಹಸಿಲ್ ಕಚೇರಿ ಸೇರಿ ನಾಡ ಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳ ಮುಂದೆ ದಂಡು ಕಟ್ಟಿ ನಿಲ್ಲುತ್ತಿದ್ದಾರೆ.
—————–
5ಎ ಕಾಲುವೆ ಹೋರಾಟ ನಿರತ ಹಳ್ಳಿಗಳು ಪಂಚಾಯಿತಿ ಎಲೆಕ್ಷನ್ ಕಡೆ ಹೆಚ್ಚಾಗಿ ಗಮನ ಹರಿಸಿಲ್ಲ. ಚುನಾವಣೆ ಬಹಿಷ್ಕಾರ ಹಾಕಿರುವದರಿಂದ ಗ್ರಾ.ಪಂ.ಕಚೇರಿ ಮುಂದೆ ಯಾರೊಬ್ಬರು ನಾಮ ಪತ್ರ ಸಲ್ಲಿಸದಂತೆ ನೋಡಿಕೊಳ್ಳಲು ಬೀಡು ಬಿಟ್ಟಿದ್ದು ಕಂಡು ಬರತೊಡಗಿದೆ. 4 ಗ್ರಾ.ಪಂ. 30 ಹಳ್ಳಿಗರು ನಾಮಪತ್ರಸಲ್ಲಿಕೆ ದಿನಾಂಕ ಘೋಷಣೆಯಾಗಿ ಎರಡು ದಿನಕಳೆದರೂ ಯಾವುದೇ ನಾಮಪತ್ರ ಸಲ್ಲಿಸಿಲ್ಲ. ಆದರೆ ಉಳಿದ ಪಂಚಾಯಿತಿಯಲ್ಲಿ ಎಲೆಕ್ಷನ್ ಜ್ವರ ತೀವ್ರವಾಗಿದೆ. ಒಟ್ಟಿನಲ್ಲಿ ಪಂಚಾಯಿತಿ ಚುನಾವಣೆ ಘೋಷಣೆ ಬೆನ್ನಲ್ಲೇ ಹಳ್ಳಿ ರಾಜಕೀಯ ತೀವ್ರ ಚುರುಕು ಪಡೆದುಕೊಂಡಿದ್ದು ಏನಾಗಲಿದೆ ಕಾದು ನೋಡಬೇಕಿದೆ.