ಮಹಾ ಜನರು
ಸಂಕಷ್ಟ ಪರಿಹರಸದ ಬಾಬಾ
ಸಾವು ನೋವು ಕಾಣುತ್ತ ನಿಂತ
ಆಧುನಿಕ ಕಾಲದ ಅನಾಗರಿಕರು
ದೇವಮಾನವರ ಸೃಷ್ಟಿಸಿದ
ಮಹಾ ಜನರು
ಟುಸ್ಸೆಂದಿತು ದೇವ
ಮಾನವನ ದೈವವಾಣಿ
ಮೌಢ್ಯ, ಅಜ್ಞಾನ ತುಂಬಿದ
ಅಕ್ಷರ ಜ್ಞಾನದ ಹೊಂದಿದ
ಮಹಾ ಜನರು
ಭಕ್ತಿಯ ಸೋಗು ಹೊತ್ತ
ಅರಿವುಗೇಡಿತನ ಹೊದ್ದ
ಅಮಾಯಕರು
ಬಾಬಾನ ಭಜಿಸುವ
ಮಹಾ ಜನರು
ಅಜ್ಞಾನದ ಕಾಲ್ತುಳಿತಕ್ಕೆ
ಜನ ಬಲಿ, ಜೀವ ಬಲಿ
ಬಲಿಯಾಗಬೇಕಾಗಿರುವುದು
ಮೌಢ್ಯ, ಅಜ್ಞಾನ, ಅನಾಗರಿಕತೆ
ಇದನ್ನರಿಯಬೇಕಿದೆ
ಮಹಾ ಜನರು
ಅವರವರ ಸ್ವಾರ್ಥಕ್ಕೆ
ಬಣ್ಣ ಬಳಿದು, ತಿರುಚಿ
ಕೆಸರೆರಚಿಕೊಳ್ಳುವ
ನಾಯಕರ ದಂಡು
ಕಣ್ಣಲ್ಲಿ ಧೂಳು ತುಂಬಿರಲು
ಮಸಕು ಮಸಕೆಲ್ಲ
ಬೆಳೆಯಲಿ ವೈಚಾರಿಕತೆ
ವೈಜ್ಞಾನಿಕ, ಪ್ರಗತಿಪರ
ಮನೋಭಾವ ಹುಟ್ಟಿ
ಭ್ರಮೆಗಳಿಂದ ಹೊರಬರಬೇಕಿದೆ
ಮಹಾ ಜನರು
–ಉಷಾ ಗೊಬ್ಬೂರ
ಕಲಬುರಗಿ