ಅಪರ್ಣೇಗೆ ಅರ್ಪಣಾ ನಮನ

ಅಪರ್ಣೇಗೆ ಅರ್ಪಣಾ ನಮನ

 

ನಗುಮೊಗದ ಚೆಂದನವನದ ಲತೆಯು
ಸೊಗಸಾಗಿ ತಾಯಿ ಭಾಷೆಯ ತಬ್ಬಿತ್ತು.
ಮೊಗೆದು ಪದಗಳ ಪೋಣಿಸಿ ಹಬ್ಬಿತ್ತು
ಮಿಗೆಯಗಲ ಪರಿಮಳವ ಪಸರಿಸಿತ್ತು

ಮಾತಿಗೂ, ಹಾಸ್ಯಕೂ ನಟನೆಗೂ ಸೈ
ಮೃದುವಾಗಿ ಅಭಿಮಾನಿಗಳ ಹೃದಯದಿ
ಮಧುರ ವೀಣೆ ನುಡಿಸಿ ಸರಿದ ನವನೀತೆ
ಮನದ ಬಿಂಬದಿ ನಿಷ್ಕಲ್ಮಶ ಪಾರಿಜಾತೆ

ಅಪರ್ಣೆಗೆ ಒಲಿದಿತ್ತು ಅರ್ಪಣಾ ಭಾವವು
ಅಂದಗಾತಿ ನಗು ನೋಡುವುದೇ ಚೆಂದವು
ಅಂತರಂಗದ ತುಂಬ ಕಸ್ತೂರಿ ಕನ್ನಡ ಕಂಪು
ಅಳೆದಳೆದು ತೂಗುವ ತಾಗೂವ ಶಬ್ದವೇದಿ

ಮನೆಯ ವಾತಾವರಣ ಸದಾ ಪ್ಲಾಸ್ಟಿಕ್ ಮುಕ್ತ
ಮಾನಿನಿ ವಸ್ತಾರೆ ಮನದನ್ನೆ ವಿಸ್ತರಿಸಿದ ಶಕ್ತೆ
ಮುಂಗುರುಳು ಮೋಹಕ ಗುಳಿಕೆನ್ನೆಯ ಅನುರಕ್ತ
ಮುಗಿಲ ಬಾಚಿ ಮಿಂಚಿ ಮರೆಯಾದ ಮಾಣಿಕ್ಯ

ರಂಗಭೂಮಿಯಲ್ಲೂ ಛಾಪ ಮೂಡಿಸಿದ ಛಲಗಾತಿ
‌‌.ರಾಗ ದ್ವೇಷ ಲವಲೇಶವೂ ಇಲ್ಲದ ಅಪ್ಪಟ ಕನ್ನಡತಿ
ರಿಂಗಣಿಸುವ ಪದಗಳ ಮೋಡಿಯ ಸ್ವರ ಪರಿಣಿತೆ.
ರಮ್ಯ ಅದ್ಭುತ ನಿರೂಪಣೆ ಎಲ್ಲರ ಮನಗೆದ್ದ ವನಿತೆ

ಯಾವ ದಿರಿಸು ಧರಿಸಿದರೂ ಮುದ್ದಿನ ಬೊಂಬೆ
ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ರೆಂಬೆ
ಯಾವುದೇ ಕೃತಕತೆ ಇಲ್ಲದ ಮಾತಿನ ಮಲ್ಲಿ ಇವಳೆಂಬೆ
ಯುವತಿಯಂತೆ ಸದಾ ಕಂಗೊಳಿಸುವ ಧರೆಗಿಳಿದ ರಂಭೆ

ಕರುನಾಡ ಮಡಿಲು ಬರಿದು ಮಾಡಿದ ಸುಮಂಗಲಿ
ಕಂಬನಿಯ ಕಂಗಳ ಹರಿಸಿದೆ ಅಂಗಳದ ರಂಗವಲ್ಲಿ
ಕವಿಹೃದಯದ ಸಂಗಾತಿ ಒಬ್ಬಂಟಿ ನಿನ್ನ ಮನೆಯಲ್ಲಿ
ಕಂಗೆಟ್ಟಿವೆ ನೀ ನೆಟ್ಟ ತರುಲತೆಗಳು ಅಪರ್ಣೆ ನೆನಪಲಿ

ಬಾ ಅಪರ್ಣೇ ಮತ್ತೆ ಹುಟ್ಟಿ ಬಾ ಕನ್ನಡದ ಮಗಳಾಗಿ.
ನಿನಗಿದೋ ನುಡಿ ಮಾಲೆಯ ನುಡಿ ನಮನ….

 

ಜಯಶ್ರೀ.ಭ.ಭಂಡಾರಿ
ಬಾದಾಮಿ

Don`t copy text!