ಇಲ್ಲ ಮತ್ತು ಇಲ್ಲವೆಂಬ ಭಾವ

 

 

 

 

 

 

 

 

 

ಇಲ್ಲ ಮತ್ತು ಇಲ್ಲವೆಂಬ ಭಾವ

ಅದೊಂದು ಅಭಯಾರಣ್ಯ… ಆ ಅಭಯಾರಣ್ಯದಲ್ಲಿ
ವನ್ಯಮೃಗಗಳನ್ನು ನೋಡಲು ಬಂದ ಪ್ರವಾಸಿಗರ ಗುಂಪೊಂದು ಎಲ್ಲವನ್ನು ವೀಕ್ಷಿಸಿದ ನಂತರ ಅರೆ! ಇಲ್ಲಿ ಆನೆಗಳು ಇಲ್ಲವೇ ಇಲ್ಲ ಎಂದು ಶರಾ ಬರೆದರು. ಅವರಿಗೆ ಮಾರ್ಗದರ್ಶಕನಾಗಿ ಬಂದಿದ್ದ ವ್ಯಕ್ತಿ “ಇಲ್ಲ ಸರ್, ತುಂಬಾ ಆನೆಗಳು ಇವೆ ಆದರೆ ಕಾಡಿನ ಒಳಭಾಗದಲ್ಲಿ ಹೋಗಿವೆ..ಅದಕ್ಕೆ ನಿಮಗೆ ಕಾಣುತ್ತಿಲ್ಲ” ಎಂದು ಹೇಳಿದ.

” ಅಲ್ಲಯ್ಯ ಮುಂಜಾನೆಯಿಂದ ನೋಡ್ತಾ ಇದ್ದೀವಿ ಒಂದಾದರೂ ಆನೆ ಕಾಣ್ತಾ ಇದೆಯಾ? ಉಹೂಂ ನನಗನ್ನಿಸೋ ಮಟ್ಟಿಗೆ ಇಲ್ಲಿ ಯಾವುದೇ ಆನೆಗಳು ಇಲ್ಲ… ನೀನು ಸುಮ್ನೆ ಬೊಗಳೆ ಬಿಡ್ತಾ ಇದ್ದೀಯಾ” ಎಂದು ಹೇಳಿದ.ಬಹಳಷ್ಟು ಜನ ಯುವಕರು ಆತನ ಮಾತನ್ನು ಅನುಮೋದಿಸಿದಾಗ ಆ ಮಾರ್ಗದರ್ಶಿ ಸುಮ್ಮನಾಗಿಬಿಟ್ಟ.

ಅವರೆಲ್ಲಾ ಸಫಾರಿ ವಾಹನವನ್ನು ಇಳಿದು ಹೋದ ಮೇಲೆ ವಾಹನದ ಡ್ರೈವರ್ ಗೈಡ್‌ನನ್ನು ಕುರಿತು
ಆನೆಗಳಿಗೆ ಹೆಸರಾದ ಅಭಯಾರಣ್ಯ ಇದು… ಇಲ್ಲಿ ಆನೆಗಳೇ ಇಲ್ಲ ಅಂತ ಅವರು ಹೇಳಿದಾಗ ನೀನು ಯಾಕೆ ಸುಮ್ಮನೆ ಒಪ್ಪಿಕೊಂಡೆ ಅಣ್ಣಾ” ಎಂದು ತುಸು ಅಸಹನೆಯಿಂದ ಪ್ರಶ್ನಿಸಿದ.
ನಸುನಕ್ಕ ಗೈಡ್ ” ನಾನು ಒಪ್ಪುವುದೇ ಇಲ್ಲ ಅಂತ ಹಠ ಮಾಡಿ ಕುಳಿತ ಆ ಜನರನ್ನು ಒಪ್ಪಿಸುವುದಕ್ಕೆ ನಾನು ಯಾಕೆ ಸುಮ್ಮನೆ ನನ್ನ ಶಕ್ತಿಯನ್ನು ಹಾಳು ಮಾಡಿಕೊಳ್ಳಲಿ. ನಿಜವಾಗಿಯೂ ಇಲ್ಲದೆ ಇರುವುದಕ್ಕೂ, ಇಲ್ಲ ಎಂದು ಭಾವಿಸುವುದಕ್ಕೂ ಬಹಳ ವ್ಯತ್ಯಾಸವಿದೆ.

ಆದ್ರೂ ನೀನು ಸುಮ್ನೆ ಬಿಡಬಾರದಿತ್ತು ಅಣ್ಣ… ಅವರಿಗೆ ತಿಳಿಸಿ ಹೇಳಬೇಕಿತ್ತು ಅಂತ ವಾಹನ ಚಾಲಕ ಮತ್ತೊಮ್ಮೆ ಒರಲಿದ.

ತಮ್ಮ, ನನ್ನ ಅನುಭವ ತುಂಬಾ ದೊಡ್ಡದು,,, ಇಂಥ ಜನರ ಜೊತೆ ವಾದ ಮಾಡಿ ಪ್ರಯೋಜನ ಇಲ್ಲ. ಇಂಥ ಜನರ ಜೊತೆ ಮಾತನಾಡುವಾಗ ಒಂದು ವಿಷಯ ನೆನಪಿನಲ್ಲಿ ಇಟ್ಕೋ.. ನಮ್ಮ ಜೊತೆ ಮಾತಾಡ್ತಾ ಇರೋ ವ್ಯಕ್ತಿ ನಮ್ಮ ಮಾತನ್ನ ಗ್ರಹಿಸುವಂತಹ ಶಕ್ತಿ ಹೊಂದಿದಾನಾ? ಒಂದು ವಸ್ತುವಿಗೆ, ವ್ಯಕ್ತಿಗೆ ಘಟನೆಗೆ ವಿಭಿನ್ನ ಆಯಾಮಗಳು ಇವೆ ಎನ್ನೋದನ್ನು ಅರಿತಿರುವನಾ ಎಂಬುದು ಆತನ ಮಾತಿನಿಂದ ಗೊತ್ತಾಗುತ್ತದೆ. ಅಕಸ್ಮಾತ್ ಆತ ಅರಿತುಕೊಳ್ಳುವ ಮನಸ್ಥಿತಿಯನ್ನು ಹೊಂದಿಲ್ಲದಿದ್ದರೆ ಆತನೊಂದಿಗೆ ವಾದ ಮಾಡಿ ಒಪ್ಪಿಸುವ ಅವಶ್ಯಕತೆಯಾದರೂ ಏನು?
ಕೆಲ ವಿಷಯಗಳನ್ನ ಎಲ್ಲರಿಗೂ ಅರ್ಥ ಮಾಡಿಸುವ ಬದಲು ಹಾಗೆಯೇ ಬಿಟ್ಟುಬಿಟ್ಟರೆ ಜೀವನ ಸರಳ ಮತ್ತು ಸುಲಲಿತವಾಗಿ ಸಾಗುತ್ತದೆ.
ತಿಳುವಳಿಕೆ ಇಲ್ಲದವರಿಗೆ ಬುದ್ಧಿ ಹೇಳಬಹುದು, ತಿಳುವಳಿಕೆ ಇದ್ದವರು ಅರ್ಥಮಾಡಿಕೊಳ್ಳಬಹುದು. ಆದರೆ ತಿಳಿಯದಿದ್ದರೂ ತಿಳಿದವರಂತೆ ವರ್ತಿಸುವವರು,ಅರ್ಥ ಮಾಡಿಕೊಳ್ಳೋದೇ ಇಲ್ಲ ಎನ್ನುವವರಿಗೆ ತಿಳುವಳಿಕೆ ಹೇಳಿ ಒಪ್ಪಿಸುವುದು ಅನವಶ್ಯಕ ಎಂದು ಅಲ್ಲೇ ಬಿದ್ದಿದ್ದ ಆನೆಯ ಲದ್ದಿಯೆಡೆ ಕೈ ತೋರುತ್ತ ಹೇಳಿದ.

ಎಷ್ಟೊಂದು ನಿಜವಾದ ಮಾತುಗಳು ಅಲ್ಲವೇ ಸ್ನೇಹಿತರೆ?

ಎಷ್ಟೋ ಬಾರಿ ನಮ್ಮ ಗುರಿಯಡೆ ನಾವು ಸಾಗುವಾಗ ಹಲವಾರು ಅಡೆತಡೆಗಳು ನಮ್ಮನ್ನು ನಿಲ್ಲಿಸಬಲ್ಲವು. ನಾವು ಮಾಡುತ್ತಿರುವ ಕಾರ್ಯದ ಕುರಿತು ಖಚಿತ ಅವಗಾಹನೆ ನಮಗಿದ್ದರೆ ಸಾಕು.
ತಾನು ಸವಾರಿ ಹೊರಟಾಗ ಅದೆಷ್ಟೇ ನಾಯಿಗಳು ಬೊಗಳಿದರೂ ಆನೆ ತಲೆ ಕೆಡಿಸಿಕೊಳ್ಳುವುದಿಲ್ಲ.. ತನ್ನ ರಾಜಮಾರ್ಗದಲ್ಲಿ ಸಾಗಿಯೇ ಸಾಗುತ್ತದೆ. ಅಂತೆಯೇ ನಾವು ಕೂಡ ನಮ್ಮ ಬದುಕಿನ ದಾರಿಯಲ್ಲಿ ಸಾಗುವಾಗ ಸವಾಲೆತ್ತುವ ಪ್ರತಿಯೊಬ್ಬರಿಗೂ ಉತ್ತರಿಸುತ್ತಾ ನಿಂತರೆ ಗಮ್ಯವನ್ನು ತಲುಪುವುದು ತಡವಾಗುವುದು, ಕೆಲವೊಮ್ಮೆ ಅರ್ಧದಲ್ಲಿಯೇ ದಣಿಯಬಹುದು.
ಬದುಕಿನಲ್ಲಿ ಹಲವಷ್ಟು ಬಾರಿ ಯಾರ ಮಾತುಗಳಿಗೂ ತಲೆ ಕೆಡಿಸಿಕೊಳ್ಳದೆ, ನೋಯದೆ ನಮ್ಮ ಪಾಡಿಗೆ ನಾವು ಸಾಗಿ ಗುರಿ ತಲುಪಬೇಕು.
ಏನಂತೀರಾ?

 

 

 

 

 

 

 

 

 

 

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್

Don`t copy text!