ಇದು ಸರಿಯೇ

ಇದು ಸರಿಯೇ

ಯಾವ ಕಾರಣವಿರದೇ ದೂರ ಸರಿಸಿದೆಯಲ್ಲ ಇದು ಸರಿಯೇ
ಭಾವ ಹೂರಣದ ಸಿಹಿಯನೇ ಕಸಿದೆಯಲ್ಲ ಇದು ಸರಿಯೇ
ಎಸ್
ಎದೆಯ ಹೊಲದಲಿ ಮೂಡಿವೆ ಒಲವ ಹೆಜ್ಜೆಗಳ ಗುರುತು
ಬಿತ್ತಿದ ಭಾವ ಅರಳಿದ ಜೀವ ಹೊಸಕಿದೆಯಲ್ಲ ಇದು ಸರಿಯೇ

ಮೌನದ ಬೇಲಿಯ ತುಂಬೆಲ್ಲ ನಿನ್ನ ಸವಿಮಾತಿನ ಹೂಗಂಧ
ಬೇಲಿಹೂವ ಹೃದಯವ ಚೂರುಮಾಡಿದೆಯಲ್ಲ ಇದು ಸರಿಯೇ

ಅಪ್ಪಿದ ನೆಲವದು ಸುಡುವ ಕೆಂಡವಾಯಿತು ಪ್ರೀತಿಯಿರದೆ
ಒಪ್ಪಿದ ಒಲವನು ತುಳಿಯುತ ನಡೆದೆಯಲ್ಲ ಇದು ಸರಿಯೇ

ತೊರೆದುಹೋದ ತಿರುವಿನಲ್ಲೇ ಕಾಯುತ ಶಬರಿಯಾಗಿರುವೆ
ನೋಡಿ ನೋಡದಂತೆ ಮೊಗತಿರುವಿದೆಯಲ್ಲ ಇದು ಸರಿಯೇ

ಹಾರುವ ಕನಸಿಗೆ ಸಾವಿರ ರೆಕ್ಕೆ ಜೋಡಿಸಿದವ ನೀನಲ್ಲವೇ
ರೆಕ್ಕೆ ಕತ್ತರಿಸಿ ಆಕಾಶ ತೋರಿಸುತಿರುವೆಯಲ್ಲ ಇದು ಸರಿಯೇ

ನೋವ ನೀಡುವುದರಲ್ಲಿ ನಿಸ್ಸೀಮ ಅದೆಷ್ಟು ಸಂಭ್ರಮ ನಿನಗೆ
ಕಂಗಳ ಕನಸ ಕಸಿದು ಶಶಿ ಮರೆಯಾದೆಯಲ್ಲ ಇದು ಸರಿಯೇ

 

 

 

 

 

 

 

 

 

 

ಇಂದಿರಾ ಮೋಟೆಬೆನ್ನೂರ ಬೆಳಗಾವಿ

Don`t copy text!