…. ಆಳವಿ

ಸಾಸಿವೆಯಷ್ಟು ಕಾಳಿನಲ್ಲಿ ಸಾಗರದಷ್ಟು ಶಕ್ತಿ ನೋಡಾ

 

…. ಆಳವಿ

 

ತನ್ನ ಮಕ್ಕಳ ಎದೆ, ಬೆನ್ನು ಗಟ್ಟಿಯಾಗಲಿ ಎಂದು ಆಶಿಸುವ ತಾಯಿ ಮಕ್ಕಳಿಗೆ ತುಪ್ಪದಲ್ಲಿ ಈ ಪುಟ್ಟ ಕಾಳುಗಳನ್ನು ಹುರಿದು ಹಾಲು ಹಾಕಿ ಕುದಿಸಿ ತುಸು ಸಕ್ಕರೆ ಇಲ್ಲವೇ ಬೆಲ್ಲವನ್ನು ಸೇರಿಸಿ ಕುಡಿಯಲು ಕೊಡುತ್ತಾಳೆ. ಮತ್ತೆ ಕೆಲವು ಮನೆಗಳಲ್ಲಿ ಹಿರಿಯರಿಗೆ ಕೂಡ ಕಡ್ಡಾಯವಾಗಿ ವಾರದಲ್ಲಿ ಒಂದೆರಡು ಬಾರಿ ಈ ಪೇಯವನ್ನು ಕೊಡಲಾಗುತ್ತದೆ.

ಆಗ ತಾನೆ ಮಗುವನ್ನು ಹೆತ್ತಿರುವ ತನ್ನ ಮಗಳು ಮತ್ತೆ ಶಕ್ತಿಯನ್ನು ಮೈಗೂಡಿಸಿಕೊಳ್ಳಲಿ ಎಂದು ಬಾಣಂತನಕ್ಕೆ ಕೊಬ್ಬರಿ, ಬೆಲ್ಲ ಗೋಡಂಬಿ ದ್ರಾಕ್ಷಿ ಗೇರ್ ಬೀಜ ಬಾದಾಮಿ ಉತ್ತತ್ತಿ ಅಂಟು ತುಸು ಪ್ರಮಾಣದಲ್ಲಿ ಹಿಪ್ಪಲಿ ಲವಂಗ ಗಳನ್ನು ಹಾಕಿ ಮಾಡುವ ಅಂಟಿನುಂಡೆಯಲ್ಲಿ ಕೂಡ ತುಪ್ಪದಲ್ಲಿ ಹುರಿದ ಈ ಧಾನ್ಯಗಳನ್ನು ಹಾಕಿ ಮಾಡುತ್ತಾರೆ.
ಮಗಳು ಋತುಮತಿಯಾದ ಸಂದರ್ಭದಲ್ಲಿಯೂ ಆಂಟಿನುಂಡೆ ಹೆಣ್ಣು ಮಕ್ಕಳಿಗೆ ಕಡ್ಡಾಯ.

ಮನೆಯಲ್ಲಿ ಯಾರಿಗಾದರೂ ಕೈಕಾಲು ಮುರಿದಾಗ ಎಲುಬುಗಳು ಮತ್ತೆ ಗಟ್ಟಿಯಾಗಿ ಕೂಡಿಕೊಳ್ಳಲು ಈ ಪೇಯ ಕಡ್ಡಾಯ.

ಗಾತ್ರದಲ್ಲಿ ಸಾಸಿವೆ, ರಾಗಿ ಧಾನ್ಯಗಳಿಗಿಂತ ಚಿಕ್ಕದಾಗಿರುವ ಈ ಕಾಳಿನಲ್ಲಿ ಸಾಗರದಷ್ಟು ಅಪಾರ ಶಕ್ತಿ ನೀಡುವ ಪೋಷಕಾಂಶಗಳ ಅಗರವೇ ಇದೆ. ಅದನ್ನು ಆಳವಿ ಎಂದು ಕರೆಯುತ್ತೇವೆ.

ಅತಿ ಪುಟ್ಟ ಗಾತ್ರದ ಆಳವಿಯಲ್ಲಿ ನೈಸರ್ಗಿಕವಾಗಿ ಎಲುಬುಗಳನ್ನು ಕೂಡಿಸುವ ಶಕ್ತಿ ಇರುವುದರಿಂದ ಶತಶತಮಾನಗಳಿಂದ ಇದನ್ನು ನಮ್ಮ ಸಾಂಪ್ರದಾಯಿಕ ಆರೋಗ್ಯಕರ ಅಡುಗೆ ಮತ್ತು ಪೇಯಗಳಲ್ಲಿ ಬಳಸಲಾಗುತ್ತದೆ.

ಆಳವಿಯಲ್ಲಿ ವಿಟಮಿನ್ ಎ,ಸಿ, ಇ ಮತ್ತು ಕೆ ಗಳು ಹೇರಳವಾಗಿದ್ದು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಐರನ್ ಮತ್ತು ಫಾಲಿಕ್ ಆಸಿಡ್ಗಳನ್ನು ಹೊಂದಿರುವ ಈ ಧಾನ್ಯ ಮನುಷ್ಯನ ದೇಹಕ್ಕೆ ಬೇಕಾಗುವ ಎಲ್ಲ ಪೋಷಕಾಂಶಗಳನ್ನು ಒದಗಿಸುತ್ತದೆ.
ಆಳವಿ ಧಾನ್ಯದಲ್ಲಿರುವ ವಿಟಮಿನ್ ಸಿ ಪೋಷಕಾಂಶವು ಹೆಚ್ಚಿನ ರೋಗ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು ದೇಹವನ್ನು ಎಲ್ಲ ರೀತಿಯ ಸೋಂಕುಗಳಿಂದ,ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುವುದಲ್ಲದೆ ದೇಹವನ್ನು ಗಟ್ಟಿಗೊಳಿಸುತ್ತದೆ.

ಆಳವಿಯು ಅತಿಹೆಚ್ಚಿನ ನಾರಿನಂಶ ಇರುವ ಆಹಾರ ಧಾನ್ಯವಾಗಿದ್ದು ಜೀರ್ಣಶಕ್ತಿಯನ್ನು ಹೆಚ್ಚಿಸುವುದಲ್ಲದೆ ಮಲಬದ್ಧತೆಯ ತೊಂದರೆಯನ್ನು ನಿವಾರಿಸುತ್ತದೆ.

ಆಳವಿಯನ್ನು ಬಳಸುವುದರಿಂದ ಹೆಣ್ಣು ಮಕ್ಕಳ ಅನಿಯಮಿತ ಮಾಸಿಕ ಋತುಚಕ್ರವು ಸರಿಯಾಗುವುದು… ಇದರ ಜೊತೆ ಜೊತೆಗೆ ತಿಂಗಳ ಆ ದಿನಗಳಲ್ಲಿ ಹೆಣ್ಣು ಮಕ್ಕಳು ಅನುಭವಿಸುವ ದೈಹಿಕ ನೋವು, ಕಿರಿಕಿರಿಗಳನ್ನು ಶಮನಗೊಳಿಸುವುದು.

ಆಳವಿಯಲ್ಲಿ ಪ್ರೊಟೀನ್ ನ ಮತ್ತು ಕಬ್ಬಿಣದ ಪೋಷಕಾಂಶಗಳು ಹೆಚ್ಚಾಗಿ ಇರುವುದರಿಂದ ಕೂದಲ ಆರೋಗ್ಯಕ್ಕೆ ಕೂಡ ಒಳ್ಳೆಯದು. ಕೂದಲಿನ ಕೋಶಗಳನ್ನು ಬುಡದಿಂದಲೇ ಗಟ್ಟಿಗೊಳಿಸಿ ಸದೃಢ ಮತ್ತು ಸುಂದರವಾದ ಕೂದಲುಗಳ ಬೆಳವಣಿಗೆಗೆ ಆಳವಿಯ ಬಳಕೆಯಿಂದ ಸಾಧ್ಯ.

ಆಳವಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಚರ್ಮದಲ್ಲಿನ ಸ್ವತಂತ್ರ ರಾಡಿಕಲ್ ಗಳನ್ನು ಉತ್ತೇಜಿಸುವುದರಿಂದ ಮುಖದಲ್ಲಿನ ಮುಖದಲ್ಲಿ ಸುಕ್ಕುಗಳು ಮೂಡುವುದನ್ನು ತಡೆಗಟ್ಟುವುದು. ಚರ್ಮವು ತಾರುಣ್ಯದಿಂದಲೂ ಕಾಂತಿಯುತವಾಗಿಯೂ ಕೂಡಿರುತ್ತದೆ.

ಆಳವಿಯ ನಿಯಮಿತ ಬಳಕೆಯು ಜೀರ್ಣ ಸಂಬಂಧಿ ತೊಂದರೆಗಳನ್ನು ನಿವಾರಿಸುವುದರಿಂದ ಸರಿಯಾದ ತೂಕವನ್ನು ಸದಾ ಹೊಂದಿರಲು ಬಳಸಬಹುದಾದ ಅವಶ್ಯಕವಾದ ಧಾನ್ಯವಾಗಿದೆ.

ಒಟ್ಟಿನಲ್ಲಿ ಅಪಾರ ಪೋಷಕಾಂಶಗಳ ಆಧಾರವಾಗಿರುವ ಆಳವಿಯನ್ನು ಪ್ರತಿದಿನ ಸೇವಿಸಬಹುದು. ಪ್ರಾರಂಭದಲ್ಲಿ ಸ್ವಲ್ಪವೇ ಧಾನ್ಯವನ್ನು ಬಳಸುವ ಮೂಲಕ ಆರಂಭಿಸಿ ನಂತರ ಪ್ರಮಾಣವನ್ನು ಹೆಚ್ಚಿಸಬಹುದು. ಆಳವಿಯ ಇನ್ನೂ ಹೆಚ್ಚಿನ ಬಳಕೆಗೆ ನುರಿತ ನ್ಯೂಟ್ರಿಷನ್ ತಜ್ಞ ವೈದ್ಯರನ್ನು
ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ.

ಬಹುಶಹ ಆಳವಿಯ ಈ ಬಹೂಪಯೋಗದ ಅರಿವಿದ್ದೇ ನಮ್ಮ ಹಿರಿಯರು ಆಳವಿಯನ್ನು ಆಗಾಗ ಸೇವಿಸಲು ಸಲಹೆ ಮಾಡುವುದಲ್ಲದೆ ತಾವು ಕೂಡ ನಿಯಮಿತವಾಗಿ ಸೇವಿಸುತ್ತಾರೆ.

 

 

 

 

 

 

 

 

 

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!