‘ಕವಿರಾಜರು ಹಾಗೂ ಸಾಂಸ್ಕೃತಿಕ ರಾಯಭಾರಿಗಳು’
ನಮ್ಮಲ್ಲಿ ಅನೇಕರು ಎ ಕೃಷ್ಣ ಸುರಪುರ ಅವರ ಹೆಸರು ಹೇಳಿಯೇ ತಮ್ಮ ಬಂಡವಾಳ ಹೆಚ್ಚಿಸಿಕೊಂಡವರಿದ್ದಾರೆ. ಇಂದಿಗೂ ಅವರೇ ಇವರ ದೊಡ್ಡ ಖಜಾನೆ. ಕವಿರಾಜ ನಿಜಕ್ಕೂ ಕಾವ್ಯ ದೊರೆಯೇ ಸರಿ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಯಾವುದೂ ಸಿಗಲಿಲ್ಲ. ಆದರೆ ಇದರಿಂದ ಕವಿಗೆ ಏನೂ ನಷ್ಟವಾಗಲಿಲ್ಲ. ಅವರನ್ನು ಗೌರವಿಸಲಾಗದ ನತದೃಷ್ಟರು ಅವರೆಲ್ಲಾ. ಅವರ ಯಾವ ಕವಿತೆಯೂ ವಿ ವಿ ಪಠ್ಯವಾಗಲಿಲ್ಲ. ಇದು ವಿದ್ಯಾರ್ಥಿಗಳಿಗಾದ ದೊಡ್ಡ ನಷ್ಟ. ಕವಿ ಸಂತೃಪ್ತನಾಗಿಯೇ ಇದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಕ್ಕಿತು. ಅದು ಸಾಂಸ್ಕೃತಿಕ ರಾಯಭಾರಿ ರಾಜಾ ಮದನಗೋಪಾಲ ನಾಯಕರಿಂದ ಅವರಿಗೆ ಸಿಕ್ಕಿದ್ದು. ಮಾಜಿ ಸಾಹೇಬರು ತಮ್ಮ ಗುರುಗಳಿಗೆ ಈ ಮೂಲಕ ಗೌರವ ಅರ್ಪಿಸಿದರು.
ಕವಿರಾಜರಿಗೆ ಅಷ್ಟೊತ್ತಿಗೆ ಪುನರ್ಜನ್ಮವಾಗಿತ್ತು. ನೆನಪಿನ ಶಕ್ತಿ ಕಡಿಮೆಯಾಗಿತ್ತು. ಅವರಿಗೆ ತೀವ್ರ ಅನಾರೋಗ್ಯವಾಗಿದ್ದಾಗ ಅವರೊಂದಿಗೆ ನಾನು ಹಾಗೂ ಪ್ರಕಾಶಚಂದ ಜೈನ ಇಲ್ಲಿದ್ದೆವು. ರಾತ್ರಿಯಿಡಿ ಅವರಿಗೆ ಚಿಕಿತ್ಸೆ ಕೊಡಿಸಿದೆವು ಆದರೆ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದಕ್ಕಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಲಬರ್ಗಾಕ್ಕೆ ಕಳಿಸಿದಾಗ, ಅಲ್ಲಿ ರಾಮಗೋ ನಾಯಕರು ಆಸ್ಪತ್ರೆಯಲ್ಲಿ ಹೇಳಿ ಎಲ್ಲ ವ್ಯವಸ್ಥೆ ಮಾಡಿಸಿದ್ದರು. ಅಲ್ಲಿ ಊರುಗೋಲಾಗಿ ಅಗಸ್ಟಿನ್ ವಕೀಲರು ನಿಂತರು. ಹೀಗಾಗಿ ವಾರದ ನಂತರ ಕವಿರಾಜರು ಗುಣಮುಖರಾಗಿ ಸುರಪುರಕ್ಕೆ ಬಂದರು. ದೇವರ ದಯೆಯೂ ಕೂಡ ಅವರೊಂದಿಗಿತ್ತು. ರಾಯರ ಪರಮ ಭಕ್ತರು ಅವರು. ಸುರಪುರದ ಆರಾಧ್ಯ ದೈವ ಶ್ರೀವೇಣುಗೋಪಾಲಸ್ವಾಮಿ ಹಾಗೂ ರಾಯರ ಬಗ್ಗೆ ಕೃಷ್ಣರು ಅಪರೂಪದ ಸುಪ್ರಭಾತವನ್ನು ರಚಿಸಿದ್ದಾರೆ. ಅದನ್ನು ನಾಡಿನ ಶ್ರೇಷ್ಠ ಗಾಯಕರಿಂದ ಹಾಡಿಸಿ ನಿತ್ಯ ವೇಣುಲೋಲನ ದೇವಸ್ಥಾನದಲ್ಲಿ ಹಚ್ಚುವ ವ್ಯವಸ್ಥೆಯನ್ನು ಅದಕ್ಕೆ ಸಂಬಂಧಪಟ್ಟವರು ಮಾಡಬೇಕಿತ್ತು. ಆದರೆ ಆ ಕೆಲಸ ಆಗಲಿಲ್ಲ. ಕವಿರಾಜರು ಪುನಃರ್ಜನ್ಮ ಪಡೆದ ನಂತರ ಅವರಿಗೆ ನೆನಪಿನ ಶಕ್ತಿ ತುಂಬ ಕಡಿಮೆಯಾಯಿತು. ಆಗ ಎಲ್ಲ ಹಿರಿಯರ ಅಪೇಕ್ಷೆಯಂತೆ ಸಾಹಿತ್ಯ ಸಮ್ಮೇಳನದ ಅವರ ಅಧ್ಯಕ್ಷೀಯ ಭಾಷಣವನ್ನು ನಾನು ಬರೆದೆ. ಅದರೊಂದಿಗೆ ಅವರ ಬದುಕು ಬರಹವನ್ನು ಕೂಡ ಬರೆದು ಅವರಿಗೆ ಕೇಳಿದೆ ಹೇಗಾಗಿದೆ? ಎಂದು, ಅವರು ತಮ್ಮ ಎಂದಿನ ಸಂಹ್ಮೋಹನ ನಗೆ ಬೀರಿ ನನಗೆ ಸಮ್ಮತಿ ಕೊಟ್ಟರು.ಅವರ ಪುತ್ರವಾತ್ಸಲ್ಯದ ಪ್ರೀತಿಯನ್ನು ನಾನು ಅನುಭವಿಸಿದ್ದೇನೆ.
ಅವರು ಧ್ಯಾನದಲ್ಲಿ ಮಿಂದೇಳುತ್ತಿದ್ದ ಸಹಜ ಮಾರ್ಗಿಗಳಾಗಿದ್ದರು. ಶಬ್ಧಗಳ ತೇಲಾಡುವಿಕೆಯನ್ನು ಸ್ವತಃ ಅನುಭವಿಸಿದವರು. ಅವರು ಶಾಲೆಗೆ ಹೋಗಿದ್ದು ಕಡಿಮೆ, ಅಲ್ಲಿ ಕಲಿತಿದ್ದೂ ಕಡಿಮೆಯೇ! ಅವರಿಗೆ ಎಲ್ಲ ದೈವದತ್ತವಾಗಿ ಸಿಕ್ಕಿತ್ತು. ಅವರು ಬಹುಶಃ ಶಾಪಗ್ರಸ್ತ ಋಷಿಯಾಗಿದ್ದವರು ಈ ಲೋಕಕೆ ಸುಮ್ಮನೆ ಬಂದು ಹೋದರೇನೋ? ಇಲ್ಲಿ ಸುಮ್ಮನೆ ಅಂದರೆ ಸತ್ಯಕಾಮರ ‘ಸುಮ್ಮನೆ’. ಅವರು ಸುಮಾರು 10-12 ವರ್ಷದವರಿದ್ದಾಗಲೇ ಚಾಲೆಂಜ್ ಸ್ವೀಕರಿಸಿ ಸನ್ನತಿ ಚಂದ್ರಲಾ
ಪರಮೇಶ್ವರಿ ಸುಪ್ರಭಾತವನ್ನು ಕೇವಲ ಮೂರು ನಾಲ್ಕು ದಿನಗಳಲ್ಲಿ ಬರೆದವರು!ಅದಕ್ಕೇ ಅವರಿಗೆ ನಾನು ‘ಹೈದ್ರಾಬಾದ ಕರ್ನಾಟಕದ ಬೇಂದ್ರೆ’ ಎಂದು ಕರೆಯುತ್ತಿದ್ದೆ. ಅನೇಕ ಪ್ರಸಿದ್ಧರೆನಿಸಿಕೊಂಡವರು(ಹಾಗೆಂದು ತಮ್ಮಷ್ಟಕ್ಕೇ ತಾವು ತಿಳಿದುಕೊಂಡಿದ್ದವರು) ಅವರ ಕಡೆಗೆ ಬಂದು ಕವನ ಬರೆಸಿಕೊಂಡೋ ಇಲ್ಲಾ ಅದನ್ನ ತಿದ್ದಿಸಿಕೊಂಡೋ ಹೋದವರನ್ನು ನಾನು ನೋಡಿದ್ದೇನೆ. ಅವರಿಗೆ ‘ನೀವು ಒಂದು ಮಹಾಕಾವ್ಯ ಬರೆಯಬೇಕಿತ್ತಲ್ಲ ಏಕೆ ಬರೆಯಲಿಲ್ಲ ಸರ್? ‘ಎಂದೊಮ್ಮೆ ಕೇಳಿದ್ದೆ . ಹೌದು, ಎಲ್ಲ ತಯಾರಿ ಮಾಡಿಟ್ಟುಕೊಂಡಿದ್ದೆ ಆದರೆ ಬರೆಯಲಾಗಲೇ ಇಲ್ಲ’ ಎಂದರು.
ಆದರೆ ಅವರು ಹಿಮಾಲಯಕ್ಕೆ ಹೋಗಿ ಬಂದ ಮೇಲೆ ಅಲ್ಲಿಯ ಸ್ವಾಮಿಜಿ ಅವರ ಆಶಯದಂತೆ ಖಂಡ ಕಾವ್ಯವೊಂದನ್ನು ಬರೆದರು. ಸುರಪುರ ಐತಿಹಾಸಿಕ ಕ್ರಾಂತಿ ಬಗ್ಗೆ ಕೂಡ ಅವರ ಒಂದು ಲಾವಣಿಯೋ ಅಥವಾ ಖಂಡ ಕಾವ್ಯವೋ ಇದೆ. ಅಲ್ಲದೇ ಅವರು ಸುರಪುರದ ದುಂದುಮೆ ಹಾಡುಗಾರರಾದ ಲಕ್ಷಣ ಗುತ್ತೇದಾರ ಹಾಗೂ ಸಂಗಡಿಗರನ್ನು ಕರೆದುಕೊಂಡು ಹೋಗಿ ಮೈಸೂರು ದಸರಾದಲ್ಲಿ ಶೂರ ರಾಜನ ಯಶೋಗಾಥೆಯನ್ನು ಹಾಗೂ ಅವನಿಗೆ ಮೋಸವಾದದ್ದರ ಬಗ್ಗೆ ಅವರು ದುಂದುಮೆ ಹಾಡಿಸಿದರು. ಅದು ಜಿ ಎಂ ಶಿರಹಟ್ಟಿ ಅವರು ಆಕಾಶವಾಣಿಯಲ್ಲಿ ನಿರ್ದೇಶಕರಾಗಿದ್ದಾಗ ಪ್ರಸಾರಗೊಂಡು ಅಪಾರ ಜನಪ್ರಿಯತೆ ಪಡೆಯಿತು. ಅದು ಕರ್ನಾಟಕದ ಎಲ್ಲ ಆಕಾಶವಾಣಿ ಕೇಂದ್ರಗಳಿಂದಲೂ ಪ್ರಸಾರವಾಯಿತು. ಹೀಗೇ ಅವರು ತುಂಬ ಕೆಲಸ ಮಾಡಿದರು. ಇವರು ಇಂದೇ ಬರೆಯಲು ಪ್ರಾರಂಭಿಸಿದ ಕವಿ ಕವಯಿತ್ರಿಗೂ ಕೂಡ ಹಿರಿಯ ಕವಿಗಳಿಗೆ ನೀಡುವ ಗೌರವವನ್ನೇ ನೀಡುತ್ತಿದ್ದರು. ಇದು ಇಂದಿನವರಿಗೆ ಮಾದರಿಯಾಗಿದೆ. ಅವರು 2012ರಲ್ಲಿ ಯಾದಗಿರಿ ಜಿಲ್ಲೆಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
ಈ ಮೊದಲು ಅಖಂಡ ಕಲಬುರಗಿ ಜಿಲ್ಲೆ ಇದ್ದಾಗ, ಅವರಿಗೆ ಸಮ್ಮೇಳನಾಧ್ಯಕ್ಷರಾಗಲು ಅನೇಕ ಬಾರಿ ಅವಕಾಶ ಬಂದಾಗಲೂ ಅವರು ನಯವಾಗಿಯೇ ನಿರಾಕರಿಸುತ್ತಿದ್ದರು. ಅನೇಕ ಬಾರಿ ತಮಗಿಂತ ಅವರು ಹಿರಿಯರಿದ್ದಾರೆ, ಇವರು ಹಿರಿಯರಿದ್ದಾರೆ ಎಂದು ನೆಪ ಹೇಳಿ ಅದನ್ನು ಬೇರೆಯವರಿಗೆ ಸಿಗುವಂತೆ ಮಾಡುತ್ತಿದ್ದರು. ಈಗಾಗಲೇ ಹೇಳಿದಂತೆ ಅವರು ಹಿರಿಯರನ್ನು ಆದರಿಸಿದಷ್ಟೇ ಕಿರಿಯರನ್ನೂ ಕೂಡ ಅಷ್ಟೇ ಪ್ರಮಾಣದಲ್ಲಿ ಗೌರವಿಸುತ್ತಿದ್ದರು. ಈ ದೈವದತ್ತ ಕವಿ ಎಂದಿಗೂ ತಾವು ದೊಡ್ಡ ಕವಿ, ವರಕವಿ ಎಂದು ಹೇಳಿಕೊಳ್ಳಲೇ ಇಲ್ಲ, ಹಾಗೇ ಪೋಜನ್ನು ಕೊಡಲಿಲ್ಲ! ಇದು ನಿಜವಾದ ದೊಡ್ಡವರ ನಡವಳಿಕೆ. ಅವರನ್ನು ಕಲಬುರಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಆಗಿನ ಜಿಲ್ಲಾ ಕಸಾಪ ಅಧ್ಯಕ್ಷರು ಒಪ್ಪಿ ಕೊನೆಗೆ ಕೈ ಕೊಟ್ಟಿದ್ದಕ್ಕಾಗಿ, ಆಗಿನ ಸುರಪುರ ತಾಲೂಕ ಕಸಾಪ ಅಧ್ಯಕ್ಷರಾಗಿದ್ದ ಬಸವರಾಜ ಜಮದಖಾನಿ ಅವರು ಆ ಸಭೆ ಮುಗಿದ ತಕ್ಷಣ ರಾಜಿನಾಮೆ ಕೊಟ್ಟು ಬಂದಿದ್ದರು. ನಂತರದ ಎರಡು ವರ್ಷಗಳಿಗೂ ಹೆಚ್ಚು ಕಾಲ ಸುರಪುರ ಕಸಾಪಕ್ಕೆ ಯಾರೂ ಅಧ್ಯಕ್ಷರೇ ಇರಲಿಲ್ಲ! ಆಗಿನ ಕಸಾಪ ಜಿಲ್ಲಾಧ್ಯಕ್ಷರು ಗೋಗರೆದರು ಯಾರೂ ಆಗಲಿಲ್ಲ. ಇನ್ನೊಮ್ಮೆ ಸಾಂಸ್ಕೃತಿಕ ರಾಯಭಾರಿಗಳಿಗೆ ಸನ್ಮಾನ ಮಾಡುತ್ತೇನೆ ಎಂದು ಕೈಕೊಟ್ಟಿದ್ದರಿಂದ ಜೇವರ್ಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನೇ ಇಡೀ ಸುರಪುರ ಸಾಹಿತ್ಯ ವಲಯ ಬಹಿಷ್ಕರಿಸಿ ಅದರಿಂದ ದೂರ ಉಳಿಯಿತು. ಇದು ಸುರಪುರದ ಬದ್ಧತೆಯಾಗಿತ್ತು.
ಜೆ ಅಗಸ್ಟಿನ್ ವಕೀಲರು ಕವಿರಾಜರ ಹೆಚ್ಚು ಕಡಿಮೆ ಎಲ್ಲ ಕವನ ಸಂಕಲನಗಳನ್ನು ಬೆಳಕಿಗೆ ತಂದರು. ಅವರು ಕವಿರಾಜರನ್ನು ಹಿಮಾಲಯಕ್ಕೂ ಕರೆದುಕೊಂಡು ಹೋಗಿದ್ದರು. ಕೆಂಭಾವಿ ಸಮ್ಮೇಳನವು ನಿಜಕ್ಕೂ ಮರೆಯಲಾಗದ ಅನುಭವ ನೀಡಿತು. ಹಣ ಇಲ್ಲದ ಆದರೆ ಅತ್ಯಂತ ಶ್ರೇಷ್ಠ ಗೋಷ್ಠಿಗಳೂ ಹಾಗೂ ಅತ್ಯುತ್ತಮ ಲೇಖಕರು ಕವಿಗಳು ಸಹೃದಯರು ಒಂದೇ ಕಡೆಗೆ ಸಮ್ಮಿಳಿತಗೊಂಡಿದ್ದ 1996ರಲ್ಲಿ ಅಂದರೆ 38 ವರ್ಷಗಳ ಹಿಂದೆ ನಡೆದಿದ್ದ ಸಮ್ಮೇಳನ ಇದು. ‘ತವನಿಧಿ’ ಸ್ಮರಣ ಸಂಚಿಕೆಯು ‘ಸಗರನಾಡ ಸಿರಿ’ಯ ಎರಡನೇ ಭಾಗದಂತೆ ಮೂಡಿ ಬಂತು. ಇದಕ್ಕಾಗಿ ಕವಿರಾಜ ಹಾಗೂ ನಾನು ಬೆಂಗಳೂರಿನ ತಿ ತಾ ಶರ್ಮರ ಪುತ್ರ ತಿರುಮಲೆ ರಂಗಾಚಾರ್ಯರ ನವನೀತ ಮುದ್ರಣಾಲಯದಲ್ಲಿ ಬೀಡು ಬಿಟ್ಟಿದ್ದೇವು. ರವಿ ಹಾಗೂ ರಾಧಿಕಾ ತಿ ತಾ ಶರ್ಮರ ಮೊಮ್ಮಗ ಹಾಗೂ ಸೊಸೆ. ಇವರು ಈ ಸ್ಮರಣ ಸಂಚಿಕೆ ರೂಪಗೊಳ್ಳುವಲ್ಲಿ ಅಪಾರ ಪರಿಶ್ರಮಪಟ್ಟರು. ಇವರ ಮನೆಯವರಾಗಿ ಬಿಟ್ಟಿದ್ದೇವು ನಾವು. ತಿರುಮಲೆ ರಂಗಾಚಾರ್ಯರು ಕಟ್ಟಾ ಕನ್ನಡಾಭಿಮಾನಿಯಾಗಿದ್ದರು. ಅವರ ಭಾಷಣ ಕೇಳಿ ಯುವ ಜನರು ಕನ್ನಡದ ಹೋರಾಟಕ್ಕೆ ಅಣಿಯಾದ ಅನೇಕ ಘಟನೆಗಳು ನಡೆದಿವೆ. ಅವರು ಕೆಂಭಾವಿ ಸಮ್ಮೇಳನಕ್ಕೂ ಬಂದಿದ್ದರು. ಹಾಗೆಯೇ ಸುರಪುರಕ್ಕೂ ಬಂದಿದ್ದರು. ಅವರು ನಮ್ಮೆಲ್ಲರ ಮೇಲೆ ನಿಷ್ಕಲ್ಮಶ ಪ್ರೀತಿ ತೋರಿದರು. ಇವರ ತಾಯಿ ತಿರುಮಲೆ ರಾಜಮ್ಮ ಅವರು ಕನ್ನಡದ ಪ್ರಸಿದ್ಧ ಲೇಖಕಿಯಾಗಿದ್ದರು. ಇವರ ಪುತ್ರ ತಿರುಮಲೆ ಶ್ರೀನಿವಾಸ(ಚಾಮಿ) ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದಾರೆ, ರವಿ ಒಳ್ಳೆಯ ಗಾಯಕರಾಗಿದ್ದರು.(ದುದೈ೯ವ ಮುಂದೆ ನಡೆದ ಅಪಘಾತದಲ್ಲಿ ತಿರುಮಲೆ ರಂಗಾಚಾರ್ಯರು ಹಾಗೂ ರವಿ ತೀರಿಹೋದರು) ನಾವು ಇಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಲ್ಲಿ ಪಾಂಡುರಂಗ ಚಿನ್ನಾಕಾರರು ಸುರಪುರದಿಂದ ಕೆಎಸ್ಆರ್ಟಿಸಿ ಬಸ್ಸಿಗೆ ಇಟ್ಟು ಲೇಖನಗಳನ್ನು ಕಳಿಸುತ್ತಿದ್ದರು. ನಾಗಲಿಂಗಪ್ಪ ಶಾಹಪುರಕರ ಅವರಿಗೆ ಜೊತೆಯಾಗಿದ್ದರು. ಅಗಸ್ಟಿನ್ ವಕೀಲರು ಸಮಗ್ರ ಮೇಲ್ವಿಚಾರಣೆ ವಹಿಸಿದ್ದರು.ಆಗ ನಾವು ಗಂಗಾವತಿ ಬೀchi ಪ್ರಾಣೇಶ ಅವರನ್ನು ಕೆಂಭಾವಿ ಸಮ್ಮೇಳನದ ಮುಖಾಂತರ ನಾಡಿಗೆ ಪರಿಚಯಿಸಿದೆವು. ಆಗ ಗುಲಬರ್ಗಾ ಕಸಾಪ ಅಧ್ಯಕ್ಷರಾಗಿದ್ದ, ಸತ್ಯಕಾಮ ಪತ್ರಿಕೆಯ ಸಂಪಾದಕರೂ ಆಗಿದ್ದ ಮಣೂರ ಅವರು ಎರಡು ದಿನಗಳ ಅರ್ಥಪೂರ್ಣ ಸಮ್ಮೇಳನ ನೋಡಿ, ಇದನ್ನೇ ನಾವು ಜಿಲ್ಲಾ ಸಾಹಿತ್ಯ ಸಮ್ಮೇಳನ ಎಂದು ಮಾಡಬಹುದಾಗಿತ್ತಲ್ಲ? ಎಂದಿದ್ದು ನನಗೆ ಇನ್ನೂ ನೆನಪಿದೆ.
ಚತುರ್ಭಾಷಾ ಕವಿ ಕೆ ಮುದ್ದಣ್ಣ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಎರಡು ಕವಿಗೋಷ್ಠಿಗಳು ಹಾಗೂ ಅನೇಕ ವಿಷಯಗಳ ಮೇಲೆ ಗೋಷ್ಠಿಗಳು ನಡೆದವು. ಸ್ಥಳೀಯ ಕವಿಗಳ ಕವಿತೆಗಳನ್ನು ಸ್ಥಳಿಯ ಗಾಯಕರೇ ಹಾಡಬೇಕೆಂದು ತೀರ್ಮಾನಿಸಿ ವಕೀಲರು ಹಾಡಿಸಿದ್ದೂ ವಿಶೇಷವಾಗಿತ್ತು. ಸುರಪುರದ ಎಲ್ಲ ಹಿರಿಯರನ್ನು ಹಾಗೂ ಪ್ರತಿಭಾವಂತರನ್ನು ಈ ಸಮ್ಮೇಳನದಲ್ಲಿ ಗೌರವಿಸಿದ್ದು ವಿಶೇಷವಾಗಿತ್ತು. ಗರುಡಾದ್ರಿ ಶೈಲಿಯ ಅಂತರಾಷ್ಟ್ರೀಯ ಕಲಾವಿದ ವಿಜಯ ಹಾಗರಗುಂಡಿ ಅವರು ಕೆಂಭಾವಿಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಆಗ ಕನ್ನಡ ಸಾಹಿತ್ಯ ಪರಿಷತ್ತು ಈಗಿನಂತೆ ಸಮ್ಮೇಳನಗಳಿಗೆ ದುಡ್ಡು ಕೊಡುತ್ತಿರಲಿಲ್ಲ. ಎಲ್ಲ ಸಂಪನ್ಮೂಲಗಳನ್ನು ಸ್ಥಳೀಯರಿಂದಲೇ ಸಂಗ್ರಹಿಸಬೇಕಿತ್ತು.ಈಗ ಎಲ್ಲ ಸಂಪನ್ಮೂಲಗಳು ಇದ್ದೂ ಕೂಡ ಅಂಥ ಸಮ್ಮೇಳನವನ್ನು ಮಾಡಲು ಸಾಧ್ಯವಿಲ್ಲ ಅನ್ನುವುದೇ ಕೆಂಭಾವಿ ಸಮ್ಮೇಳನದ ವಿಶೇಷ! ಮಂಜೂರ ಅಹ್ಮದ್ ತನಹಾ ತಿಮ್ಮಾಪುರಿ, ಬುದ್ಧಿವಂತ ಶೆಟ್ಟರು, ಆರ್ ಕೆ ಹುಡುಗಿ, ಸೀತಾರಾಮ ಜಾಗೀರದಾರ, ಗುರುಬಸಯ್ಯ ಅಮ್ಮಾಪುರ, ಎ ಕೃಷ್ಣ ಸುರಪುರ ಹಾಗೂ ಇಡೀ ಕಲಬುರಗಿಯ ಸಾಹಿತಿಗಳೇ ಅಲ್ಲಿ ಸೇರಿದ್ದರು. ಆಗ ಶಂಕರಣ್ಣ ವಣಕ್ಯಾಳ ಗುಲಬರ್ಗಾ ಜಿಲ್ಲಾ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಸಿದ್ಧನಗೌಡ ಪಾಟೀಲರು, ಲಿಂಗನಗೌಡ ಪಾಟೀಲರ ಸಾರಥ್ಯ ಇತ್ತು. ರಾಜಕಾರಣ ಮಾಡದ ಹಾಗೂ ರಾಜಕಾರಣಿಗಳಿಲ್ಲದ ಶುದ್ಧ ಕನ್ನಡ ಸಾಹಿತ್ಯ ಸಮ್ಮೇಳನ ಇದು ಆಗಿತ್ತು. ಇದು ಸಾಹಿತ್ಯ ಲೋಕದ ಹೆಗ್ಗಳಿಕೆ ಎಂದರೆ ತಪ್ಪಾಗಲಿಕ್ಕಿಲ್ಲ. ಕವಿರಾಜರು ಸಂಪಾದಿಸಿದ್ದ ‘ಸಗರನಾಡ ಸಿರಿ ‘ ಗ್ರಂಥದ ಮೇಲೆ ಅನೇಕ ಎಂಫಿಲ್ಗಳೂ ಪಿಎಚ್ಡಿಗಳೂ ಆಗಿವೆ. ಇದು ಇಂದಿಗೂ ಒಂದು ಮಹತ್ವದ ಆಕರ ಗ್ರಂಥವಾಗಿದೆ. ಎ ಕೃಷ್ಣರ ಒಂದು ಕವನ ಸಂಕಲನವನ್ನು ನಾವು ರಾಜಾ ಮದನಗೋಪಾಲ ನಾಯಕರ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಸುರಪುರದ ಗರುಡಾದ್ರಿ ಕಲಾ ಮುಂದಿರದಲ್ಲಿ 2017ರಲ್ಲಿ ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಮಾಡಿದಾಗ ಪ್ರಕಟಿಸಿದ್ದೇವು.
ಇದರ ಜೊತೆಗೆ ನಬೀಲಾಲ ಮಕಾನದಾರ, ಶಿವಕುಮಾರ ಅಮ್ಮಾಪುರ ಹಾಗೂ ಇತರರ 8-10 ಪುಸ್ತಕಗಳು ಹಾಗೂ 700 ಪುಟದ ಬೃಹತ್ ಸಂಚಿಕೆ ‘ಸುರಗಿರಿ’ ಪ್ರಕಟಗೊಂಡವು. ಡಾ.ರಂಗರಾಜ ವಂದುರ್ಗ ಅವರು ಈ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇದೂ ಕೂಡ ಸುರಪುರದಲ್ಲಿ ಐತಿಹಾಸಿಕ ದಾಖಲೆಯನ್ನೇ ಮಾಡಿತು. ಇಡೀ ಸುರಪುರದ ಮುಖಂಡರೆಲ್ಲಾ ಒಂದಾಗಿ ಅಹರ್ನಿಷಿ ದುಡಿದ ಸಮ್ಮೇಳನವಿದು. ಕುಂ.ವೀರಭದ್ರಪ್ಪ, ರಹಮತ್ ತರಿಕೇರೆ, ಆರೀಫ್ ರಾಜಾ, ಹನುಮಾಕ್ಷಿ ಗೋಗಿ, ಡಿ ಎನ್ ಅಕ್ಕಿ, ಚಂದ್ರಕಾಂತ ಕರದಳ್ಳಿ, ಸಿದ್ಧರಾಮ ಹೊನ್ಕಲ್, ಶಿವಕುಮಾರ ಅಮ್ಮಾಪುರ, ಕೈದಾಳ ಕೃಷ್ಣಮೂರ್ತಿ, ರಮಜಾನ ದರ್ಗಾ ಹಾಗೂ ನಾಡಿನ ಅನೇಕ ಶ್ರೇಷ್ಟ ಲೇಖಕರು ಭಾಗವಹಿಸಿದ್ದ ಸಮ್ಮೇಳನವಿದು. ಶಾಂತಪ್ಪ ಬೂದಿಹಾಳ ಅವರು ಕೂಡ ಸ್ಮರಣ ಸಂಚಿಕೆಯ ಕಾರ್ಯದಲ್ಲಿ ಶ್ರಮಿಸಿದ್ದರು. ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಸಮ್ಮೇಳನದ ಯಶಸ್ಸಿಗೆ ತುಂಬಾ ಶ್ರಮಿಸಿದರು.
ಕವಿರಾಜರ ಇನ್ನೂ ಅನೇಕ ಕವನಗಳು ಪ್ರಕಟವಾಗದೇ ಉಳಿದಿದ್ದವು. ಅವುಗಳನ್ನು ಪ್ರಕಟಿಸಲು ಕಲಬುರಗಿಯ ಓದುಗರ ಸಹಕಾರಿ ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ಅವರನ್ನು ಕೋರಿದಾಗ ಅವರು ಅದಕ್ಕೆ ಸಮ್ಮತಿಸಿ ಪ್ರಕಟಿಸಿದರು. ಅದರ ಬಿಡುಗಡೆ ಸಮಾರಂಭಕ್ಕೆ ನಾನು ಕವಿರಾಜರನ್ನು ಕರೆದುಕೊಂಡು ಕಲಬುರಗಿಗೆ ಹೋಗಿದ್ದೆ. ಅಲ್ಲಿ ಅವತ್ತು ಅದನ್ನು ಮಲ್ಲಿಕಾ ಘಂಟಿ ಅವರು ಬಿಡುಗಡೆ ಮಾಡಬೇಕಿತ್ತು. ಅವರು ಕಲಬುರಗಿಗೆ ಬಂದ್ದಿದ್ದರು ಕೂಡ, ಆದರೆ ಅವರ ಕಡೆಯವರ ಯಾರದೋ ಮರಣ ಸಂಭವಿಸಿದ್ದರಿಂದ ಅವರು ಜಮಖಂಡಿಗೆ ಅರ್ಜೆಂಟ ತೆರಳಿದ್ದರು. ಆಗ ಈ ಪುಸ್ತಕ ಹಾಗೂ ಇದರ ಜೊತೆ ಇನ್ನೂ ಅನೇಕರ ಪುಸ್ತಕ ಬಿಡುಗಡೆ ಮಾಡಿದ್ದ ಪ್ರೊ ಆರ್ ಕೆ ಹುಡುಗಿ ಅವರು, ಕೃಷ್ಣರ ಕವನ ಸಂಕಲನದಲ್ಲಿದ್ದ, ಟ್ಯಾಗೋರರ ಗೀತಾಂಜಲಿಯ ಅನುವಾದದ ಒಂದು ಕವಿತೆ ಓದಿದರು, ಅವರು ಹೇಳಿದರು,’ ಇಲ್ಲಿಯವರೆಗೆ ಕನ್ನಡದಲ್ಲಿ ಬಂದ ‘ಗೀತಾಂಜಲಿ’ಯ ಎಲ್ಲ ಅನುವಾದಗಳಲ್ಲಿಯೇ ಅತ್ಯಂತ ಶ್ರೇಷ್ಠ ಅನುವಾದವಿದು’ ಎಂದು ಹೇಳಿದ್ದರು. ಅದಕ್ಕೇ ಹೇಳುವುದು ಕವಿರಾಜರು ಶ್ರೇಷ್ಠ ಕವಿಗಳು ಎಂದು. ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ? ಎಲ್ಲಕ್ಕಿಂತ ಹೆಚ್ಚಾಗಿ ಅವರು ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರಿಗೆ ಗೌರವ ಡಾಕ್ಟರೇಟ್ ಕೊಡಬೇಕೆಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಒಂದು ಅರ್ಜಿ ಸಲ್ಲಿಸಿದ್ದರು, ಅವರ ಹೆಸರು ಪತ್ರಿಕೆಯಲ್ಲಿಯೂ ಬಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಸಿಗಲಿಲ್ಲ. ಆ ಅದೃಷ್ಟ ಬೇಕಲ್ಲಾ ಗುವಿವಿಗೆ?
ಸುರಪುರ ಕವಿ ಸಾಹಿತಿಗಳ ಜಗುಲಿಯಾಗಿತ್ತು. ಎಲ್ಲರೂ ಸಹೃದಯಿಗಳಾಗಿದ್ದರು. ವೀರಸಂಗಪ್ಪ ಹಗರಟಗಿ, ಬಸವೇಶ್ವರನಾಥ ಸುಗೂರಮಠ, ಕೆ ವೀರಪ್ಪ, ವೀರೇಶ ಹಳ್ಳೂರ, ಬಸವರಾಜ ರುಮಾಲ, ಲಕ್ಷ್ಮಿಕಾಂತ ದೇವಿಕೇರಿ, ಲಕ್ಷ್ಮಿಕಾಂತ ಏವೂರ, ಕಲ್ಲಸಕ್ರಿ ಕಂಠದ ಗಾಯಕ ಷಣ್ಮುಖಪ್ಪ ಗವಾಯಿ, ನಾಡಗೀತೆಯನ್ನು ಹಾಡಿದರೇ ಇಡೀ ನಾಡೇ ರೋಮಾಂಚನಗೊಳ್ಳಬೇಕು ಅಂತಹ ಮಧುರ ಕಂಠದ ಗಾಯಕರಾದ ಶ್ರೀಹರಿ ಆದೋನಿ ಹಾಗೂ ಇನ್ನೂ ಅನೇಕ ಪೂರ್ವಸೂರಿಗಳು,ಗಾಯಕರು, ಚಿತ್ರಕಲಾವಿದರು, ನೃತ್ಯಪಟುಗಳು ಇದ್ದ ಲಕ್ಷೀಶನ ನೆಲವಿದು. ನಾಡಿನ ಖ್ಯಾತ ಸಂಶೋಧಕ ಹೂವಿನಳ್ಳಿಯ ಸೀತಾರಾಮ ಜಾಗೀರದಾರರು ಮಹಾಕವಿ ಲಕ್ಷೀಶ ದೇವಪುರದವನೇ ಎಂದು ದಾಖಲೆ ಸಹಿತ ಪ್ರತಿಪಾದಿಸಿದರು. ಜೈಮಿನಿ ಭಾರತದ ಮೂಲ ಪ್ರತಿಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಡುತ್ತೇವೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘಕ್ಕೆ ಬಂದಿದ್ದ ಬೆಂಗಳೂರಿನ ಸಾಹಿತಿಗಳು ಅದನ್ನು ಹಾಗೂ ಲಕ್ಷ್ಮೀಶನನ್ನು ಒಯ್ದು ದೇವನೂರನವನನ್ನಾಗಿ ಮಾಡಿದ್ದನ್ನು ನಾನು ಆಗ ಪತ್ರಿಕೆಗಳಲ್ಲಿ ಖಂಡಿಸಿದೆ, ಇದಕ್ಕಾಗಿ ನನಗೆ ಹಾಗೂ ಹಿರೇಮಗಳೂರು ಕಣ್ಣನ್ ಅವರಿಗೆ ‘ತರಂಗ’ ಪತ್ರಿಕೆಯಲ್ಲಿ ದೊಡ್ಡ ವಾಗ್ವಾದವೇ ನಡೆದು ಹೋಯಿತು. ಆದರೇನು ಪಠ್ಯ ಪುಸ್ತಕದಲ್ಲಿ ಕನ್ನಡ ನಾಡಿನ ಮಕ್ಕಳೀಗ ಮಹಾಕವಿ ಲಕ್ಷ್ಮೀಶ ಚಿಕ್ಕಮಗಳೂರಿನ ದೇವನೂರಿನವನು ಎಂದೇ ಓದುತ್ತಾರಲ್ಲ ಇದಕ್ಕೆನಂತಿರಿ? ಕಣ್ಣನ್ ನನ್ನನ್ನು ಪ್ರೀತಿಯ ಹಿತಶತೃ ಎಂದೇ ಕರೆಯುತ್ತಾರೆ.
ಹೀಗೆ ಶತಮಾನದ ಧೀಮಂತ ಕವಿ ಎ ಕೃಷ್ಣರು 2020 ಜುಲೈ 12 ರಂದು ಸಾರಸ್ವತ ಲೋಕಕ್ಕೆ ವಿದಾಯ ಹೇಳಿದರು. ಸುರಪುರ ನೆಲ ದುಃಖದಿಂದ ಉಮ್ಮಳಿಸಿತು. ಅವರ ನುಡಿ ನಮನ ಕಾರ್ಯಕ್ರಮ ಗರುಡಾದ್ರಿಯಲ್ಲಿ ನಡೆಯಿತು. ಅಲ್ಲಿ ರಾಜ್ಯ ಮಟ್ಟದ ಒಂದು ಪ್ರಶಸ್ತಿಯನ್ನು ಕವಿರಾಜರ ಹೆಸರಿನಲ್ಲಿ ಪ್ರತಿ ವರ್ಷ ನೀಡಬೇಕೆಂದು ನಿರ್ಣಯಿಸಲಾಯಿತು. ಕಾರ್ಯಕ್ರಮ ಮುಗಿದ ನಂತರ ಅದನ್ನು ಹೇಗೆ ಮಾಡಬಹುದು? ಎಂದು ರಾಮಗೋ ನಾಯಕರು ನಮ್ಮೊಂದಿಗೆ ಚರ್ಚಿಸಿದರು. ಆಗಲೇ ಕೋವಿಡ್ ಹಾವಳಿ ಶುರುವಾಗಿತ್ತು. ಆಯ್ತು ಇದನ್ನು ಎಲ್ಲರೂ ಸೇರಿ ಚರ್ಚಿಸಿ ಸೂಕ್ತ ರೀತಿಯಲ್ಲಿ ಮಾಡೋಣ ಸರ್ ಎಂದು ನಾನು ಹೇಳಿದೆ. ಆಯ್ತು ಹಾಗೇ ಆಗಲಿ ಎಂದು ಹೇಳಿದ ಸಾಂಸ್ಕೃತಿಕ ರಾಯಭಾರಿಗಳು ತಮ್ಮ ಗುರುವನ್ನೇ ಹಿಂಬಾಲಿಸಿ 2020 ಜುಲೈ 27ಕ್ಕೆ ಯಾರಿಗೂ ಹೇಳದೇ ಹೋಗಿಬಿಟ್ಟರು. ಗುರು-ಶಿಷ್ಯನಿಗೆ ಕೇವಲ 15 ದಿನಗಳ ಅಂತರ. ಇದು ವಿಧಿ ವಿಪರ್ಯಾಸವಲ್ಲವೆ? ನಾನು ನನ್ನ ಕಾವ್ಯ ಗುರುಗಳೆಂದು ಇಬ್ಬರನ್ನು ಆರಾಧಿಸುತ್ತೇನೆ. ಅವರು ಕಾವ್ಯ ಲೋಕದ ನಕ್ಷತ್ರಗಳಾದ ಎ ಕೃಷ್ಣ ಸುರಪುರ ಹಾಗೂ ಕನ್ನಡ ನಾಡಿಗೆ ಮಕ್ಕಳ ಅಮರ ಗೀತೆ ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ, ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ’ದ ಕವಿ ಶಂ ಗು ಬಿರಾದಾರ ಅವರನ್ನು. ಪ್ರತಿ ವರ್ಷ ಸುರಪುರ ಕನ್ನಡ ಸಾಹಿತ್ಯ ಸಂಘವು ರಾಜಾ ಮದನಗೋಪಾಲ ನಾಯಕರ ಸ್ಮರಣೆಗಾಗಿ ಜುಲೈ 27 ಹಾಗೂ 28ರಂದು ಸಾಹಿತ್ಯ ಸಂಗೀತದ ಕಾರ್ಯಕ್ರಮ ಮಾಡುತ್ತ ಬಂದಿದೆ. ಈಗ ಸುರಪುರ ಬಸ್ ನಿಲ್ದಾಣದ ಪಕ್ಕದಲ್ಲಿ ಕಸಾಸಂ ಸುಸಜ್ಜಿತ ಕಟ್ಟಡವು ಆಗಿದೆ. ಇದನ್ನು ಕೂಡ ಕಸಾಸಂ ಅಧ್ಯಕ್ಷರಾಗಿದ್ದ ರಾಜಾ ಮದನಗೋಪಾಲ ನಾಯಕರೇ ಅರ್ಧ ಕಟ್ಟಿಸಿದ್ದರು. ಅವರ ನಂತರ ಮುಂದೆ ಕಸಾಸಂ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿಯವರು ಹಾಗೂ ಉಪಾಧ್ಯಕ್ಷರಾದ ಜೆ ಆಗಸ್ಟಿನ್ ಹೈಕೋರ್ಟ ನ್ಯಾಯವಾದಿಗಳು ತುಂಬ ಶ್ರಮವಹಿಸಿ ಪೂರ್ಣಗೊಳಿಸಿದರು. ರಾಜಾ ಮದನಗೋಪಾಲ ನಾಯಕರ ಪುತ್ಥಳಿಯನ್ನು ಕೂಡ ಸುರಪುರದ ರಿಕ್ರಿಯೆಶನ್ ಕ್ಲಬ್ ಗರುಡಾದ್ರಿ ಆವರಣದಲ್ಲಿ ಹಾಗೂ ಕಸಾಸಂ ಕಟ್ಟಡದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈಗ ಉಳಿದಿರುವ ಕೆಲಸವೆಂದರೆ, ಎ ಕೃಷ್ಣ ಸುರಪುರ ಹಾಗೂ ರಾಜಾ ಮದನಗೋಪಾಲ ನಾಯಕರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಸ್ಥಾಪಿಸುವುದು. ಅದನ್ನು ಕವಿರಾಜರ ಹೆಸರಿನಲ್ಲಿ ಕವಿ ಸಾಹಿತಿ ಲೇಖಕರಿಗೆ ನೀಡುವುದು. ರಾಜಾ ಮದನಗೋಪಾಲ ನಾಯಕರ ಹೆಸರಿನಲ್ಲಿ ಅತ್ಯುತ್ತಮ ಸಂಘಟಕರಿಗೆ ನೀಡುವುದಾಗಿದೆ. ಈ ಬಗ್ಗೆ ಆದಷ್ಟು ಬೇಗ ಕಾರ್ಯಪ್ರವೃತ್ತರಾಗಲಿ ಎಂದು ಆಶಿಸುತ್ತೇನೆ
–ಶ್ರೀನಿವಾಸ ಜಾಲವಾದಿ
ಸುರಪುರ