ನಾ ಓದಿದ ಶಾಲೆ, ನನ್ನ ತವರೂರು

ನಾ ಓದಿದ ಶಾಲೆ, ನನ್ನ ತವರೂರು

ಎಳೆ ವಯಸ್ಸಿನಲಿ ಕೂಡಿ ಓದಿದ ಶಾಲೆ ಗೆಳತಿಯರು
ಇಳೆ ವಯಸಿನಲಿ ಸುಮಾರು 43ವರುಷಗಳ ನಂತರ ಮತ್ತೆ ಕಲಿತ ಶಾಲೆಯ ನೆಲದಲ್ಲಿ ನಾವೆಲ್ಲ ಗೆಳತಿಯರು ಕೂಡಿ ಸಂಭ್ರಮಿಸಿದ ಸವಿಕ್ಷಣ ಹೇಳತೀರದು, ಗೆಳೆತನದ ಸಿರಿಯನು, ಗೆಳೆತನದ ಆ ಮಧುರ ಸವಿನೆನಪುಗಳು ರೆಕ್ಕೆ ಬಿಚ್ಚಿ ಹಾರಾಡಿದ ಆ ಸೊಬಗು ನೆನೆಯುವ ಒಂದು ಸುವರ್ಣಾವಕಾಶವನ್ನು ನಾವೆಲ್ಲರೂ 1980ರ ಬ್ಯಾಚಿನ ಸುಮಾರು ಹದಿನೆಂಟು ಹುಡುಗಿಯರಲ್ಲಿ,07-07-2024ರ ರವಿವಾರ ಮತ್ತೆ ಸೇರಿದ ಹದಿಮೂರು ಜನ ಗೆಳತಿಯರ ಸಂಭ್ರಮಕ್ಕೆ ಪಾರವೇ ಇಲ್ಲ, ಸ್ವರ್ಗವೇ ಮೂರು ಗೇಣು ಇದೆ ಅನ್ನಿಸಿತು,

ಇದಕ್ಕೆ ಕಾರಣ ಈ ಮೊಬೈಲ್ ಎಂಬ ಜಾದುಗಾರ ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವ ಹಾಗೆ ಎಲ್ಲೆಲ್ಲೂ ಇದ್ದ ನಾವು, ಮುಂಬಯಿ,ಗದಗ,ಕೊಪ್ಪಳ, ಮಂಗಳೂರು, ಇಲಕಲ್,ರಾಯಚೂರು, ಮುನವಳ್ಳಿ, ತಾವರಗೇರಾ,ಗಂಗಾವತಿ, ಹೀಗೇ ಬೇರೆ ಊರಲ್ಲಿ ಇರುವ ಗೆಳತಿಯರು ಕನಕಗಿರಿಯಲಿರುವ ಕೆಲವು ಗೆಳತಿಯರು ಸೇರಿ ತವರೂರಿನ ಕನಕಾಚಲಪತಿ ದೇವಸ್ಥಾನ ದಲಿ ಎಲ್ಲರೂ ಸೇರಿ ಊರ ದೇವರ ದರ್ಶನ ಪಡೆದು,ನಾವು ಕಲಿತ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲಿ ಸೇರಿ ವಿದ್ಯಾ ದೇಗುಲದಲ್ಲಿ ಕೈಮುಗಿದು ಒಳಗೆ ಹೋದ ಆ ಸಂಭ್ರಮ ಹಿಂದಿನ ನೆನಪುಗಳ ಗರಿ ಬಿಚ್ಚಿದವು, ಪಂಚಾಂಗ ಪಠಣ ಓದಿದ, ನೆನಪು, ಪ್ರಾರ್ಥನೆಗೆ ಸಮವಸ್ತ್ರದಲಿ ಸಾಲಾಗಿ ನಿಂತ ನೆನಪು,,ಎಲ್ಲಾ
ಕಲಿಸಿದ ಗುರುಗಳ ನೆನೆಯುತ್ತ, ಶ್ರೀಮತಿ ರತ್ನಮ್ಮ ಟೀಚರ್,ಮುಖ್ಯೋಪಾದ್ಯಯರು , ಆದರ್ಶ ಟೀಚರ್, ಮಕ್ಕಳ ಮೇಲಿರುವ ಅವರ ಪ್ರೀತಿ, ಅಂತಃಕರಣ,ಶಾಲಾ ಶಿಕ್ಷಕರ ರೊಂದಿಗೆ ಅವರ ಸಹಕಾರ, ನನಗಂತೂ ಮೂರನೆಯ ಕ್ಲಾಸಿನಿಂದ ಏಳನೇಯ ತರಗತಿಯ ವರೆಗೆ ಮಾನಿಟರ್ ಮಾಡಿದ್ರು, ಅಗಸ್ಟ್ 15 ಮತ್ತು ಜನೇವರಿ 26 ಕ್ಕೆ ನನಗೆ, ಗೆಳತಿ ಜಯಶ್ರೀಗೆ ರಾಷ್ಟ್ರ ಗೀತೆ ಹಾಡಲು ಪೋಲೀಸ್ ಸ್ಟೇಷನಗೆ ಕಳಿಸುತ್ತಿದ್ದರು, ಆಗ ಶಾಲಾ ಮಕ್ಕಳಿಗೆ ಅದರಲ್ಲೂ ಬಾಲಕಿಯರಿಗೂ ಪ್ರೋತ್ಸಾಹ ಕೊಡುವ ಮೂಲಕ ವೇದಿಕೆಗೆ ಅವಕಾಶ ಕಲ್ಪಿಸಲಾಗಿತ್ತು,

ಎಲ್ಲಾ ಟೀಚರು ನನ ಮೇಲೆ ತುಂಬಾ ಅಭಿಮಾನ ಇಟ್ಟಿದ್ದು,ಶ್ರೀ ಕನಕಾಚಲಪತಿಸರ್ ನೆತ್ರತ್ವಲಿ ವನ ಭೋಜನಕ್ಕೆ ಕರಡಿ ಗುಡ್ಡಕ್ಕೆ ಹೋದ ನೆನಪು,ಹಂಪಿ ಪ್ರವಾಸ ಕೆ ಹೋದ ನೆನಪು,,ಶ್ರೀ ಗುರುಸಿದ್ದಪ್ಪ ಸರ್, ಅವರ ಲೋಕಲ್ ಶಿಕ್ಷಕರು, ಇಂಗ್ಲೀಷ್ ಹೇಳಿದ, ಆಯ್ಯಾಮ ಹಾಲಪ್ಪ,ಯುವ್ ಆರ್ ಸೀತಮ್ಮ, ಮತ್ತು ಹಾಟ್ ಕ್ರಾಸ್ ಬನ್ಸ್
ಹಾಟ್ ಕ್ರಾಸ್ ಬನ್ಸ್ ಒನ್ ಪೆನ್ನಿ ಟೂವ್ ಪೆನ್ನಿ ಹಾಟ್ ಕ್ರಾಸ್ ಬನ್ಸ್,ಎಂದು ಹೇಳಿಕೊಟ್ಟ ಸರ್, ಮತ್ತು ಶ್ರೀ, ಸಿದ್ದಲಿಂಗಪ್ಪ ಸರ್, ಗಣಿತ ಹೇಳಿಕೊಡುತ್ತಿದ್ದರು , ಕ್ಲಾಸಿನಲ್ಲಿ ಎಂಟ್ರಿ ಆಗತ್ತಿದ್ದಾಗಲೆ ತಣಿಗ ಡಿಕೊ ತಣಿಗ ಡಿಕೊ ಅಂತಿದ್ರು ಗಣಿತ ಪುಸ್ತಕ ಕೊಡಿ ಎನ್ನುವುದಕ್ಕೆ, ಮತ್ತು ಶ್ರೀ ವೀರಭದ್ರಯ್ಯ ಸರ್ಂತೂ ಏನಾದ್ರೂ ಪ್ರಶ್ನೆ ಕೇಳಿದರೆ ಎಲ್ಲರಿಗೂ ಕೇಳತ್ತಿದ್ರು,ಆಗ ನಾನಂತು ನಾನಂತೂ ಕೈಮೇಲೆ ಮಾಡೋದು, ಬೇರೆಯವರಿಗೆ ಕೇಳಿದರೆ ಕೈ ಅಲುಗಾಡಿಸೋದು ನೋಡಿ ಲಲಿತಾಳ ಕೈಯಲ್ಲಿ ಇದೆ ನೋಡು ಉತ್ತರ ಅಂತಿದ್ರು,
ಶ್ರೀಮತಿ ಶಾಂತಮ್ಮ ಟೀಚರ್ ಹೇಳುವ ರೀತಿ , ಅವರಂತೂ ಯಾರಾದರೂ ತಪ್ಪು ಮಾಡಿದರೆ ಏ ನಿನ ಹೆಬ್ಬಂಕ ಅಂತ ಬೈಯತ್ತಿದ್ರು, ಮತ್ತು ಶ್ರೀ ಮತಿ ಅನಸೂಯಾ ಬಾಯಿ ಟೀಚರ್, ಅಂತೂ ತುಂಬಾ ಸಾಫ್ಟ್ ಹಿಂದಿ ಟೀಚರ್, ಮತ್ತು ಶ್ರೀಮತಿ ಭಾರತಿ ಬಾಯಿ ಟೀಚರ್ಂತೂ ನೋಡಲು ಅಷ್ಟೆ ಸುಂದರವಾಗಿದ್ದು,ಕಲಿಸೋದು ಕೂಡ ಅಷ್ಟೆ ಎಲ್ಲರಿಗೂ ತಿಳಿಯುವಂತೆ ಹೇಳ್ತಾ ಇದ್ರು,ಅವರು ಮಹಾಭಾರತ ಸನ್ನಿವೇಶದ ಉತ್ತರ ಕುಮಾರನ ಪೌರುಷ ಎಂಬ ಚಿಕ್ಕ ನಾಟಕವನ್ನು ಕಲಿಸಿದ್ದು ನೆನಪಿನಂಗಳದಲಿ ತೇಲಿ ಬಂತು,ಮತ್ತು ಶ್ರೀ ಮತಿ ಪರಿಮಳ ಬಾಯಿ ಟೀಚರ್ ಅವರು ಒಂದು ಎರಡನೇ ಕ್ಲಾಸ್ ಟೀಚರ್ ,ಇದ್ರು,ಅವರು ಮಕ್ಕಳಿಗೆ ಹೇಳಿ ಕೊಡುವ ಹಾಡಂತೂ ಇನ್ನೂ ನೆನಪಿನಾಳದಿಂದ ,

ಯಾರು ನೋಡಿರವ್ವ ತಂಗಿ
ಗಾಂಧಿ ಮುದುಕನ್ನ,ಉದ್ದ ಕೋಲು,ಗಿಡ್ಡ ಪಂಜಿ ಹಾಕಿದ ಮುದಕನ್ನ,,,,,,,

ಮತ್ತೋಂದು
ನಾನು ಹೋಗಿದ್ದ್ ಮುಂಬೈಗೆ, ಮುಂಬಯಿ ಪಟ್ನ ನೋಡಲಿಕ್ಕೆ ,ಟಿಕೇಟು ಇಲ್ಲದೆ ಪ್ರಯಾಣ ಮಾಡಿದೆ ಸೆಕೆಂಡಕ್ಲಾಸಿನೊಳಗೆ,,,,,,,
ಹೀಗೆ ಹಲವಾರು ಕವನಗಳು ನಾ ಕಲಿತ ಶಾಲೆಯ ದೇಗುಲದಲ್ಲಿ ಒಂದೊಂದೇ ಸನ್ನಿವೇಶದ ನೆನಪುಗಳು ಧುಮ್ಮಿಕ್ಕಿ ಹರಿಯುವ ಜಲಧಾರೆಯಂತೆ ಮನದಾಳದಿಂದ ಮೂಡಿಬಂದವು,

ಅವರಂತೂ ನನಗೆ ಬಾಳ ಹಚ್ಚಿಕೊಂಡಿದ್ರು, ಶಾಲೆಯ ಆವರಣದಲ್ಲಿ ಬಿಡುವ ಮುಳಜಾಜಿ ಹೂ ಮತ್ತಿತರ ಹೂವಿನ ಮಾಲೆ ಮಾಡಿ ಹೂ ಕಟ್ಟುವುದನ್ನು ತೋರಿಸುತ್ತಿದ್ದರು,ಮತ್ತು ಡಬಲ್ ಮೇಟಿ ಬಟ್ಟೆ ಮೇಲೆ ಹೆಣಿಕೆ ಹಾಕಿಸಿ ಬ್ಯಾಗ್ ಮಾಡುವ ರೀತಿ ಯಂತೂ ಅದ್ಭುತ ಕಲೆ ಕಲಿತ ನೆನಪು, ಮತ್ತು ಶ್ರೀಮತಿ ಸುಜಾತಾ ಬಾಯಿ ಟೀಚರ್, ಇವರು ಬಾಲವಾಡಿ ಟೀಚರ್ ಇದ್ರು ಸಹ ನಮಗೆ ಪಾಠ ಮಾಡುತ್ತಿದ್ದರು,ಇವರು ಹಾಡು,ನ್ರೃತ್ಯಗಳಿಗೆ ಹೊಸ ದಿಕ್ಕನ್ನೆ ತೋರಿಸಿದ ಎಂಟರ್ಟೈನ್ಮಂಟ ಟೀಚರ್ ಇವರ ಜೊತೆಗೆ ನಾವೆಲ್ಲ ಗೆಳತಿಯರು ಕಬಡ್ಡಿ ಆಡಿದ ನೆನಪಂತು ತುಂಬಾ ಖುಷಿಯ ಕ್ಷಣಗಳು ಇವರೆಲ್ಲರ ನೆನೆಯುತ್ತ,ಪಠ್ಯ ಪುಸ್ತಕ ಕೆಲ ಪದ್ಯಗಳ ,ನಾವು ಎಳೆಯರು ನಾವು ಗೆಳೆಯರು ಹ್ರದಯ ಹೂವಿನ ಹಂದರ ನಾಳೆ ನಾವೆ ನಾಡ ಹಿರಿಯರು ನಮ್ಮ ಕನಸದು ಸುಂದರ, ಎನ್ನುವ,
ನಾನು ಪಂಜರದ ಪಕ್ಷಿ ಇನ್ನೂ ನನಗಾರು ಗತಿ ಕೇಳ ಬಯಸುವೆ ಏನು ನನಕಥೆಯಾ,
ನಮ್ಮ ಮನೆಯಲೊಂದು ಸಣ್ಣ ಪಾಪ ಇರುವುದು ಎತ್ತಿಕೊಳ್ಳಲು ಹೋದರದಕೆ ಕೋಪ ಬರುವುದು,

 

 

 

 

 

 

 

 

 

 

 

 

ಇವನೇ ನೋಡು ಅನ್ನದಾತ,ಹೊಲದಿ ದುಡಿಯುವ ರೈತನು,ಹೀಗೆ ಹಲವಾರು ಕವನಗಳನು ನಾವೆಲ್ಲಾ ಗೆಳತಿಯರು ಮೆಲುಕು ಹಾಕಿ,ಉಟ್ಟಸೀರೆ ಸೆರಗು ತಲೆಮೇಲೆ ಹಾಕಿಕೊಂಡು ಒಂದು ರೌಂಡ್ ಹಾಕುತ್ತಾ ಆನಂದದ ಅಲೆಗಳಲ್ಲಿ ತೇಲುತ್ತಾ, ಖುಷಿ ಸಂಭ್ರಮ ಸಡಗರದಲ್ಲಿ ನೆಕ್ಕು ನಲಿದೆವು,ಶಾಲೆಯ ಶಿಕ್ಷಕರು ಕೂಡುವ ಆಫೀಸಿನಲ್ಲಿ ಹೋಗಿ ಕಣ್ತುಂಬ ನೋಡಿ ಅಲ್ಲಿರುವ ದೇಶಭಕ್ತರ, ಜ್ಞಾನಪೀಠ ಪ್ರಶಸ್ತಿ ವಿಜೇತರ,ಮುಂತಾದವರ ಚಿತ್ರಪಟಗಳನ್ನು ಸೆರೆ ಹಿಡಿದು, ಗೆಳತಿಯರ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡು, ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು, ಗೆಳತಿ ಅಚ್ಚಮ್ಮ ತನ್ನ ಮನದಾಳದ ಮಾತಿನಲ್ಲಿ ಕಣ್ಣೀರು ಹಾಕುತ್ತಾ ತಾನು ಕಷ್ಟಪಟ್ಟ ಆ ದಿನ ನೆನೆದು ಈಗ ಟೀಚರ್ ಹುದ್ದೆ ಪಡೆದ ಸಾರ್ಥಕ ಜೀವನದ ಅನುಭವ ಹಂಚಿಕೊಂಡರೆ, ಮತ್ತೊರ್ವ ಗೆಳತಿ ಗಿರಿಜಾ ಸುಮಧುರ ಕಂಠದಿಂದ ಹಾಡುತ್ತ ಎಲ್ಲರನು ರಂಜಿಸಿ,ತನ್ನ ಅನುಭವವನ್ನು ಹಂಚಿಕೊಂಡಳು, ಇನ್ನೋರ್ವ ಗೆಳತಿ ಫಾತೀಮಾ ಬೇಗಂ, ಎಲ್ಲರಿಗೂ ಗೆಳೆತನದ ಮಹತ್ವದ ನುಡಿಗಳ ಶಾಹರಿ ಬರೆದು ಗ್ರಿಟೀಂಗ್ ಕಾರ್ಡ್ಸ್ ಕೊಟ್ಟಿದ್ದು ಒಂದು ಅಚ್ಚಳಿಯದ ನೆನಪು,ಗೆಳತಿ ಸಾವಿತ್ರಿ ರವಾದುಂಡಿ ಮಾಡಿಕೊಂಡು ಬಂದು ಎಲ್ಲರಿಗೂ ಸಿಹಿ ಹಂಚಿದ ಸವಿನೆನಪು,ಮತ್ತು ಗೆಳತಿ ನಿರ್ಮಲಾ ಅವಲಕ್ಕಿ ಡಾಣಿ
( ಸೇವ್) ಸಿಹಿಯ ಜೊತೆಗೆ ಜೋಡಣೆ ಫಳಾರ ಅಂತೀವಲ್ಲ ಆ ತರಹ ಎಲ್ಲರೂ ಶಾಲೆಯ ಆವರಣದಲ್ಲಿ ಕೂತು ತಿಂದ ಆ ಅವಿಸ್ಮರಣೀಯ ಅನುಭವ, ಮತ್ತೆ ನಮ್ಮನ್ನು ಶಾಲೆಯಲ್ಲಿ ಆಗ ಕೊಡುವ ಬಿಸಿ ಬಿಸಿ ಉಪ್ಪಿಟ್ಟು ತಿಂದ ನೆನಪು, ಮರುಕಳಿಸಿದವು, ಎಲ್ಲ ಗೆಳತಿಯರು , ಲಲಿತಾ, ಸಾವಿತ್ರಿ, ಅಚ್ಚಮ್ಮ, ಗಿರಿಜಾ, ಫಾತೀಮಾ,ಹಾಲಮ್ಮ, ಸುಶೀಲಾ,ಸುಜಾತ, ಮುಕ್ತಾ, ನಾಗರತ್ನ ಬಿ, ನಾಗರತ್ನ ಜಿ, ಅನಸೂಯಾ, ಮುಕ್ತಾ ,ಎಲ್ಲರೂ ಸೇರಿ ಒಂದ್ ರೌಂಡ್ ಕುಣಿ ಕುಣಿ ಕುಣಿದು ಕುಪ್ಪಳಿಸಿ ಎಲ್ಲಾ ನೆನಪಿರುವ ಪಠ್ಯ ಪುಸ್ತಕದ ಮತ್ತು ದೇಶಭಕ್ತಿ ಗೀತೆಗಳ ಹಾಗೂ ಎನಿವಲ್ ಡೇ ಗೆ ಹಾಡಿದ ಹಾಡುಗಳಿಗೆ ತಾಳ ಹಾಕುತ್ತಾ ಇಷ್ಟು ಮಜಾ ಮಾಡಿದಿವಿ ಅಂದ್ರೆ ಭಾಪರೆ ಭಾಪರೆ ಆ ಖುಷಿಯ ಕ್ಷಣಗಳು ಮರುಕಳಿಸುತಾವ ಮನತುಂಬಿ ತುಂಬ ತುಂಬಿ ಬರತಾವ ಭಾವಗಳ ಹೊತ್ತು,
ಇವೆಲ್ಲವನ್ನೂ ನಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯಲು ಬಂದ ಸಣ್ಣ ಹುಡುಗ ಹುಡುಗಿಯರ ಸಹಕಾರ ಮರೆಯಲಾದೀತೆ,ಅವರ ಹೆಸರು ಕೇಳಲಿಲ್ಲ , ಕ್ಷಮಿಸಿ.

ಆದಿನ ರವಿವಾರ ಆದರೂ ಸಹ ಆ ಶಾಲೆಯ ಮುಖ್ಯೋಪಾಧ್ಯಾಯರಾದ ಈಗಿನ ಶ್ರೀ. ನಾಯಕ್ ಸರ್ ಜೊತೆ ಫೋನಿನಲ್ಲಿ ಮಾತಾಡಿ ನಾವು ಬರುವ ವಿಷಯ ಮೊದಲೇ ತಿಳಿಸಿರುವದರಿಂದ ಶಾಲೆಯ ಕೀಯನ್ನು ಕಾರಕೂನನ ಕೈಯಲ್ಲಿ ಕೊಟ್ಟು ನಮಗೆ ಸಹಕರಿಸಿದ ಮತ್ತು ನಮ್ಮ ಬರುವಿಕೆಯ ಈ ಪ್ಲಾನ್ ಗೆ ಸುಮಾರು 43 ವರುಷದ ನಂತರ ನಾವೆಲ್ಲರೂ ಸೇರುವ ಅದರಲ್ಲೂ ಮಹಿಳೆಯರು ಸೇರಿ ನೀವು ಬರುವುದೇ ತುಂಬಾ ಖುಷಿಯ ಸಂಗತಿ ಅಂತ ಪ್ರೋತ್ಸಾಹಿಸಿದ ಅವರನ್ನು ನೆನೆಯುತ್ತಾ,
ಇದಕ್ಕೆ ಮುಖ್ಯ ಕಾರಣರಾದ ನಮ್ಮ ರತ್ನಮ್ಮ ಟೀಚರ್ ಮಗ ಸೋದರ ಅನಿಲ ಬಿಜ್ಜಳರ ಸಹಕಾರ ನೆನೆಯಲೆಬೇಕು,

ಎಲ್ಲಾ ಗೆಳತಿಯರೂ ಬಂದು ಸಹಕರಿಸಿ ಸಂಭ್ರಮಪಟ್ಟ ಆ ದಿನದ ಆ ಗುಂಗು,ಆ ಸನ್ನಿವೇಶದ ನೆನಪುಗಳು ನಮ್ಮ ಜೀವನದಲ್ಲಿ ಹೊಸ ಚಿಗುರು ಮೂಡಿದಂತಾಯಿತು, ಈ ಶಾಲೆಯ ದೇಗುಲದಲ್ಲಿ ನಾವೆಲ್ಲರೂ ಮೈಮರೆತು ಸಣ್ಣ ಮಕ್ಕಳಂತೆ ನಕ್ಕು ನಲಿದ ಸಂತಸದ ಕ್ಷಣಗಳು ಹೇಳತೀರದು, ಗೆಳೆತನಕ್ಕೆ ಇರುವ ಶಕ್ತಿಯ ,ಆ ನಂಟಿನ ಗಂಟು ನೆನೆದು ನನ ಮನದಲಿ ಮೂಡಿಬಂದ ಶಬುದಗಳು

ಬಾಲ್ಯದಲ್ಲಿಯಾ ನೆನಪು
ತಿರುಗಿ ಬಂದಾವ ಬೆಳಕನಿತ್ತು
ಸ್ನೇಹದಾ ಪ್ರೀತಿಯ ಹೊತ್ತು
ಕೂಡಿಸ್ಯಾವ ಇಳಿವಯಸಿಗೆ ಸವಿ ನೆನಪುಗಳ ಸುತ್ತು
ಕಳೆದಾವ ಬ್ಯಾಸರಿಕೆ ದೂರವಿಟ್ಟು
ಕಣ್ಮನಗಳಿಗೆ ತಂಪನಿತ್ತು
ನೆಮ್ಮದಿಯ ಜೋಕಾಲಿ ಜೀಕಿ ತುಸು ಹೊತ್ತು.

ಎನ್ನುತ್ತಾ, ನಾನು ಒಂದು ಪ್ರಿಯ ಗೆಳತಿ ಎನ್ನುವ ಶೀರ್ಷಿಕೆ ಯಡಿಯಲಿ ಕವನ ಓದಿದೆ,

ನಂತರ ಎಲ್ಲರೂ ಕನಕರಾಯನ ಗುಡಿಯಲ್ಲಿ ಪ್ರಸಾದ, ಊಟ,ಊಟಂತೂ ಎನ್ ಹೇಳಲ್ರಿ, ನಾನಂತೂ ಹುಟ್ಟಿ ಬೆಳೆದ ಆ ಊರಲ್ಲಿ ಫಸ್ಟ್ ಟೈಮ್ ದೇವರ ಗುಡಿಯಲ್ಲಿ ಊಟ ಮಾಡಿದ್ದು, ಬಾಳೆದೆಲೆಯ ಊಟ, ಚಿತ್ರನ್ನ, ಕೋಸಂಬರಿ,ಹುಗ್ಗಿ ಪಾಯಸ,ಕರಿಗಡಬು,ಮೊಸರನ್ನ,ಅನ್ನ ರಸಂ, ಗಡದ್ದಾಗಿ ಊಟ,
ಯಾವುದೋ ಹಳೆಯ ಸಿನಿಮಾ ಹಾಡು ನೆನಪಾಯಿತು,
ಆಹಾ ಆಹಾ ಆಹಾ
ವಿವಾಹ ಭೋಜನವಿದು
ವಿಚಿತ್ರ ಭೋಜನವಿದು
ಬೀಗರಿಗೆ ಔತಣವಿದು,

ಎನ್ನುವ ಹಾಗೆ ಆನಂದಮಯ ಈ ಉದರಮಯ ಎನ್ನುತ್ತಾ, ಎಲೆ ಅಡಿಕೆ ಸುಣ್ಣ ಮೆಲ್ಲುತ್ತಾ, ಗೆಳತಿ ಸಾವಿತ್ರಿಯ ಇನ್ನೋವಾ ಕಾರಿನಲ್ಲಿ , ಎರಡು ಟ್ರಿಪ್ ಆಗಿ ನಮ್ಮನ್ನು ಕರೆದು ಕೊಂಡು ಹೋದ ಡ್ರೈವರ್ ಶರಣಪ್ಪನಿಗೆ ಮನದಾಳದ ಅಭಿನಂದನೆಗಳು, ಗೆಳತಿ ಸಾವಿತ್ರಿಯ ಈ ಸಹಕಾರಕೆ,ಎಲ್ಲ ಗೆಳತಿಯರ ಪರವಾಗಿ ಅಭಿನಂದನೆಗಳು.ನಮ್ಮೂರಿನ ಕಂಠಿರಂಗ ಗುಡಿ ಆ ಗುಡಿಗೆ ಎಲ್ಲರೂ ಆವಾಗ ತೊಂಡಿತೇರಪ್ಪನ ಗುಡಿ ಅಂತಿದ್ರು,ಊರ ಹೊರಗಡೆ ಇದೆ,ಪ್ರತಿ ಶನಿವಾರ ನಾವೆಲ್ಲರೂ ಹೋಗುತ್ತಿದ್ದಿವಿ,ಅದೇ ರೀತಿ ಆ ಗುಡಿಗೂ ಎಲ್ಲರೂ ಹೋಗಿ ದರುಶನ ಪಡೆದು, ಕುಳಿತು ಹಾಡು ಹಾಡಿದ
ಪವಮಾನ ಪವಮಾನ
ಜಗದ ಪ್ರಾಣ ಸಂಕರುಷಣ,
ಭವ ಭಯಾರಣ್ಯ ದಹನಾ,
ಪವಮಾನ,ಎಂಬ ಹಾಡಿಗೆ ಎಲ್ಲರೂ ಧ್ವನಿಯಾಗಿ ಖುಷಿಪಟ್ಟು, ಫೋಟೋ ಕ್ಲಿಕ್ ಮಾಡಿಕೊಂಡ ಸಂತಸದ ಕ್ಷಣಗಳು ಈಗಲೂ ಮನದಾಳದಿಂದ ಕಣ್ಮುಂದೆ ತೇಲತಾ ಇವೆ,

ಬಾಲ್ಯ ಎಂಬುದು ಅಳಿಸಲಾಗದ ಭಾವಗೀತೆ,ಅಲ್ಲವೆ ಆ ಭಾವಗೀತೆಯಲಿ ಮತೆ ನಾವೆಲ್ಲರೂ ಸೇರಿದ ಆ ಸವಿಕ್ಷಣ ಮರೆಯಲಾರದ
ಮಧುರಕ್ಷಣ,.

ಬೆಸುಗೆ ಸಿನಿಮಾದ ಹಾಡು ಗುಂಯ್ ಗುಟ್ಟುತ್ತಿತ್ತು
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ.

ನಾನು ಸಹ ಬಸ್ ಪಯಣ ಮಾಡ್ತಾ ಈ ಸ್ನೇಹದ ಹೊನಲಲಿ ತೇಲಿಬಂದ ಸವಿ ಕ್ಷಣಗಳ ಸುರುಳಿಯ ಬಿಚ್ಚಿಟ್ಟಿರುವೆ.

 

 

 

 

 

 

 

 

 

ಲಲಿತಾ ಪ್ರಭು ಅಂಗಡಿ ಮುಂಬಯಿ

Don`t copy text!