ನಿಜ ಶರಣನ ಮಹಾ ಬೆಳಗಿನ ಗೋಚರ ದರ್ಶನ

ಅಲ್ಲಮರ ವಚನ ವಿಶ್ಲೇಷಣೆ

ನಿಜ ಶರಣನ ಮಹಾ ಬೆಳಗಿನ ಗೋಚರ ದರ್ಶನ


ಆದಿ ಅನಾದಿ ಷಡುದೇವತೆಗಳಿಲ್ಲದಂದು,
ಒಬ್ಬ ಶರಣ ಷಡಕ್ಷರವನು ಷಡುಸ್ಥಲವನು
ಒಳಕೊಂಡು ಇರ್ದನಯ್ಯಾ.
ಆ ಶರಣನ ನೆನಹಿನ ಲೀಲೆಯಿಂದ
ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾಗಿ
ತೋರಿ ಬೆರಸಿದ್ದವಯ್ಯಾ,
ಇದ್ದ ಕಾರಣ ಶರಣನ ಪರಮಶಾಂತಿ
ಭಕ್ತ್ಯಂಗನೆಯಾಗಿ ತೋರಿ ಬೆರಸಿದ್ದಳಯ್ಯ.
ಇದ್ದ ಕಾರಣ ಶರಣನ ಮಹಾಬೆಳಗು
ಷಡುಸ್ಥಲಬ್ರಹ್ಮಿಗಳಾಗಿದ್ದಿತಯ್ಯಾ.
ಇದ್ದ ಕಾರಣ ಶರಣನ ಪರಶಿವನ ಶಕ್ತಿಗಳ ಮಹಾಬೆಳಗು
ಷಡುಭಕ್ತ್ಯಂಗನೆಯಾಗಿ ಷಡುಸ್ಥಲ ಭಕ್ತರ ಬೆರಸಿದ್ದವಯ್ಯಾ.
ಇದ್ದ ಕಾರಣ ಶರಣನೊಳಡಗಿದ ಸುವಾಕುವಕ್ಷರ
ಲಿಂಗ ಪ್ರಣಮ ಮಂತ್ರ ಚಕ್ರ ಕಮಲ ಸತ್ಕ್ರೀ ಭಸಿತ ರುದ್ರಾಕ್ಷಿ
ಇಂತಿವೆಲ್ಲಾ ಇವರೊಳಗಡಗಿದ್ದವಯ್ಯಾ.
ಇದ್ದ ಕಾರಣ ಶರಣನಿವರು ಸಹಿತ ಕೋಟಾನುಕೋಟಿ ಕಾಲವು
ಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ,
ನಿಮ್ಮ ಶರಣ ಗುಹೇಶ್ವರಾ —

*ಅಲ್ಲಮಪ್ರಭುದೇವರು ವಚನಸಂಖ್ಯೆ 879-ಪುಟ 260.

ಪೃಥ್ವಿ , ಮತ್ತು ಜೈವಿಕ ವಿಕಾಸದಲ್ಲಿ ಮನುಷ್ಯನು ಆದಿ ಅಂದರೆ ಹೊಸತು ಅನಾದಿ ಅಂದರೆ ಪ್ರಾಚೀನ ಹಳೆಯದು ಇಂತಹ ವಿಕಸನಗಳಲ್ಲಿ ತನ್ನ ಹುಡುಕುವ ಯತ್ನ ಮಾಡುತ್ತಾನೆ . ಕಾಲ ಜ್ಞಾನ ಸಮಯ ವಿಕಾಸ ಅಧ್ಯಾತ್ಮಿಕ ಕಾಲದ ಪರಿವರ್ತನೆಯನ್ನುಶರಣ ತತ್ವಕ್ಕೆ ಹೋಲಿಸಿ ಅಲ್ಲಮರು ಸೊಗಸಾಗಿ ದಾಖಲಿಸಿದ್ದಾರೆ.

ಆದಿ ಅನಾದಿ ಷಡುದೇವತೆಗಳಿಲ್ಲದಂದು,
ಆದಿ ಅನಾದಿ ಎಂಬ ಕಾಲ ಘಟ್ಟದಲ್ಲಿ ಅನೇಕ ವಿಷಯಗಳ ಸ್ಥಾಪಿತ ಸಿದ್ಧಾಂತಗಳ ಉಪಾದಿತಗಳಲ್ಲಿ ಪೂಜೆ , ಪ್ರಾರ್ಥನೆ ಆರಾಧನೆಗಳಿರುವ ಸಮಯದಲ್ಲಿ ಷಡುದೇವತೆಗಳಾದ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಪರಶಿವ ಮುಂತಾದವರುಕ್ಕಿಂತಲೂ ಪೂರ್ವದಲ್ಲಿ -ಹೊಸ ತತ್ವ ಸಾರ್ವಕಾಲಿಕ ಸತ್ಯದ ಬೆಳಕಿನ ಅಗತ್ಯವಿತ್ತು .

ಒಬ್ಬ ಶರಣ ಷಡಕ್ಷರವನು ಷಡುಸ್ಥಲವನು ಒಳಕೊಂಡು ಇರ್ದನಯ್ಯಾ
ಇಂತಹ ಸಂಕ್ರಮಣ ಕಾಲದಲ್ಲೊಬ್ಬ ಶರಣನು ಷಡಕ್ಷರ ನಕಾರ, ಮಕಾರ,ಶಿಕಾರ,ವಾಕಾರ,ಯಕಾರ, ಓಂಕಾರ ಗಳಿಂದ ಸಂಯೋಜಿತವಾದ ಓಂನಮಶಿವಾಯ ಎಂಬ ಮಂತ್ರದಿಂದ ಷಡುಸ್ಥಲಗಳಾದ ಭಕ್ತ, ಮಹೇಶ ,ಪ್ರಸಾದ , ಪ್ರಾಣ, ಶರಣ, ಐಕ್ಯ ಎಂಬ ಸ್ಥಲಗನ್ನು ಒಳಕೊಂಡು ಇದ್ದನು .ಇಂತಹ ಶರಣನನು ಆದಿ ಅನಾದಿ ಕಾಲ ಘಟ್ಟಕ್ಕೆ ಮೀರಿದ ದಿಟ್ಟ ತತ್ವಗಳನ್ನೊಳಗೊಂಡ ಭಕ್ತನಾಗಿದ್ದವನು.

ಆ ಶರಣನ ನೆನಹಿನ ಲೀಲೆಯಿಂದ ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾಗಿ.ತೋರಿ ಬೆಳಗಿದನಯ್ಯಾ

ಇಂತಹ ದಿಟ್ಟ ಘನ ವ್ಯಕ್ತಿಯ -ಶರಣನ ನೆನಹಿನ ಲೀಲೆಯಿಂದ ಕ್ರಿಯೆಗಳಿಂದಾ ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾದ ಕ್ರಿಯಾ, ಜ್ಞಾನ,ಇಚ್ಛಾ,ಆದಿ,ಪರಾ,ಚಿಚ್ಛಕ್ತಿ ಎಂಬ ಜಗಕೆ ತೋರಿದನಯ್ಯಾ ಆ ಮಹಾ ನಿಲುವಿನ ಶರಣನು.

ಇದ್ದ ಕಾರಣ ಶರಣನ ಪರಮಶಾಂತಿಭಕ್ತ್ಯಂಗನೆಯಾಗಿ ತೋರಿ ಬೆರಸಿದ್ದಳಯ್ಯ.
ಶರಣನನ ನಡೆ ನುಡಿ ಆಚಾರ ವಿಚಾರ ನಡುವಳಿಕೆಗಳು ಪರಮ ಶಾಂತಿ ಷಟಸ್ಥಲ ಭಕ್ತ, ಮಹೇಶ ,ಪ್ರಸಾದ , ಪ್ರಾಣ, ಶರಣ, ಐಕ್ಯ ಎಂಬ ಭಕ್ತ್ಯಂಗನೆಯಾಗಿ -ಅಂದರೆ ಭಕ್ತನು ಅರಿಯುವ ಆದ್ಯ ಸ್ಥಲಗಳನ್ನು ತೋರಿ ಬೆರಸಿದ್ದಳಯ್ಯ ಶರಣನು .

ಇದ್ದ ಕಾರಣ ಶರಣನ ಮಹಾಬೆಳಗು ಷಡುಸ್ಥಲ ಬ್ರಹ್ಮಿಗಳಾಗಿದ್ದಿತಯ್ಯಾ.
ಶರಣನಲ್ಲಿರುವ ಅಗಾಧ ಚೈತನ್ಯ ,ಚಿತ್ಕಳೆ ಮಹಾಬೆಳಗಿನಿಂದ ಷಟಸ್ಥಲದಲ್ಲಿರುವ ಮಹಾ ಬ್ರಹ್ಮ ಜ್ಞಾನಗಳಾದ” ಮೂರ್ತಿ, ಪಿಂಡ,ಕಲಾ,ಆನಂದ,ವಿಜ್ಞಾನ,ಪರ”ಇವುಗಳು ಷಟಸ್ಥಲದಲ್ಲಿ ಬೆರೆತು ಶರಣನ ಮಹಾಬೆಳಗಿನಲ್ಲಿ ಮಾತ್ರ ಗೋಚರಿಸುವಂತಾದವು .

ಇದ್ದ ಕಾರಣ ಶರಣನ ಪರಶಿವನ ಶಕ್ತಿಗಳ ಮಹಾಬೆಳಗು ಷಡುಭಕ್ತ್ಯಂಗನೆಯಾಗಿ ಷಡುಸ್ಥಲ ಭಕ್ತರ ಬೆರಸಿದ್ದವಯ್ಯಾ

ಶರಣನೆ ಪರಶಿವನಾಗಿ ಪರಶಿವನ ಶಕ್ತಿಗಳಾದ ಕ್ರಿಯಾ, ಜ್ಞಾನ,ಇಚ್ಛಾ,ಆದಿ,ಪರಾ,ಚಿಚ್ಛಕ್ತಿ ” ಪಡೆದು ಕೊಂಡು ಷಡುಭಕ್ತ್ಯಂಗನೆಯಾಗಿ ಷಟಸ್ಥಲ ಹೊಸ ವಿಕಸನದ ನೀತಿಯಾಗಿ ಭಕ್ತರನ್ನು ಬೆರೆಸಿದ್ದವಯ್ಯಾ . ಆ ಶರಣನೇ ಶಿವನಾದ ಕಾರಣ .ಪರಶಿವನ ಶಕ್ತಿಗಳ ಮಹಾ ಬೆಳಗಿನೊಳಗೆ ಷಡುಸ್ಥಲ ಭಕ್ತರಲ್ಲಿ ನೆಲೆಗೊಂಡು ಬೆರೆಸಿದ ಆ ಶರಣ .

ಇದ್ದ ಕಾರಣ ಶರಣನೊಳಡಗಿದ ಸುವಾಕುವಕ್ಷರಲಿಂಗ ಪ್ರಣಮ ಮಂತ್ರ ಚಕ್ರ ಕಮಲ ಸತ್ಕ್ರೀ ಭಸಿತ ರುದ್ರಾಕ್ಷಿ ಇಂತಿವೆಲ್ಲಾ ಇವರೊಳಗಡಗಿದ್ದವಯ್ಯಾ.
ಇಂತಹ ಅಪ್ರತಿಮ ಶರಣನಲ್ಲಿ ಅಡಗಿದ್ದ ಸುವಾಕುವಕ್ಷರಗಳಾದ-“ವಶಷಸ, ಬಭಮಯರಲ, ಡಢಣತಥದಧನಪಫ,ಕಖಗಘಙಚಛಜಝಞಟಠ, ಅಆಇಈಉಊಋಋ ಎಏಐಒಓಔಅಂಅಃ,ಹಂ ಕ್ಷಂ ಎಂಬ ಅಕ್ಷರಗಳಿಂದ ಆಚಾರಲಿಂಗ, ಗುರುಲಿಂಗ , ಶಿವಲಿಂಗ , ಜಂಗಮಲಿಂಗ , ಪ್ರಸಾದಲಿಂಗ ,ಮಹಾಲಿಂಗ ಎಂಬ ಘನ ಆಚಾರಣೆಗಳ ತತ್ವವು ಬೆಳಕಿಗೆ ಬಂದವು . ಶರಣನೊಳಡಗಿದ ಪ್ರಣವ ಮಂತ್ರ=ಹ್ರಾಂ, ಹ್ರೀಂ, ಹ್ರೂಂ, ಹ್ರೈಂ, ಹ್ರೌಂ, ಹ್ರಃ ಮತ್ತು ಶರಣನ ಚೇತನ ಪ್ರಭೆಯಲ್ಲಿ ಅರಳಿದ ಚಕ್ರಗಳು =ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ ಬೆಳಕಿಗೆ ಬಂದವು.ಶರಣ ಜ್ಞಾನದಲ್ಲಿ
ಈ ಎಲ್ಲಾ ಚಕ್ರಗಳು ಜಾಗೃತಗೊಂಡ ಮೇಲೆ ಸಹಸ್ರ ಕಮಲಗಳು -ಚತುರ್ದಳ, ಷಡುದಳ, ದಶದಳ, ದ್ವಾದಶ, ಷೋಡಶ, ದ್ವಿದಳ ಮುಂತಾದ ಅರಳಿ ನಿಂತವು ,
ಮಹಾ ಶರಣನ ಒಡಲೊಳಗೆ ಸತ್ಕ್ರೀ ಭಸಿತ ರುದ್ರಾಕ್ಷಿ ಇಂತಿವೆಲ್ಲಾ ಇವರೊಳಗಡಗಿದ್ದವಯ್ಯಾ.. ಅಂದರೆ ಮಂತ್ರ ವಿಭೂತಿ ರುದ್ರಾಕ್ಷಿ ಇವು ಬಾಹ್ಯ ಉಪಾದಿತ ವಸ್ತುಗಳಲ್ಲ ಅವು ಕಾಯ ತತ್ವದಲ್ಲಿ ಅಡಗಿದ ಶರಣನ ಸಾಧಕಗಳು .ಇವು ಶರಣನ ನಿಜ ನಿಲುವಿನಿಂದಾ ಕಾಣುವಂತಾಯಿತು .

ಇದ್ದ ಕಾರಣ ಶರಣನಿವರು ಸಹಿತ ಕೋಟಾನುಕೋಟಿ ಕಾಲವುಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ,ನಿಮ್ಮ ಶರಣ ಗುಹೇಶ್ವರಾ
ಇಂತಹ ಶರಣನ ಮಹಾ ಬೆಳಗಿನಲ್ಲಿ ಕೋಟಾನುಕೋಟಿ ದೇವತೆಗಳು ಕಾಣುತ್ತಾರೆ,ಕಾಲವುಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ,ನಿಮ್ಮ ಶರಣ
ಅಂದರೆ ಶರಣನು ಕಾಲಜ್ಞಾನಿಯು ಪ್ರಮಥ ಗಣೇಶ್ವರನು ನಾಮವನ್ನು ಹೊತ್ತುಕೊಂಡು ಆದಿ ಆನಾದಿಯೂ ಅತೀತ ಮೀರಿದ ಸರ್ವ ಕಾಲದ ಸತ್ಯವಾಗಿದ್ದಾನೆ ಗುಹೇಶ್ವರ . ನಿಮ್ಮ ಶರಣನು ,
ಅಲ್ಲಮರು ತಮ್ಮ ಅನುಭವದ ಆಳದಲ್ಲಿ ಹೊಕ್ಕು ಸಮಗ್ರ ಜಗತ್ತಿನ ಎಲ್ಲಾ ಅಧ್ಯಾತ್ಮಿಕ ಪಯಣದಲ್ಲಿನ ಅನೇಕ ಸೂತ್ರಗಳನ್ನು ಕಂಡು ಕೊಂಡು ಅವುಗಳಿಗಿಂತ ಭಿನ್ನವಾದ ಶರಣ ಸಿದ್ಧಾಂತವನ್ನು ಶರಣನು ಬದುಕಿದ ನೈಜ ಸಹಜ ಬದುಕಿನಲ್ಲಿ ಕಾಣುವ ಚೈತನ್ಯ ,ಆನಂದ, ಶಕ್ತಿ ,ಪರ ಶಿವ ,ಮಂತ್ರ .ಚಕ್ರ ,ಕಮಲಗಳ ವಿಕಾಸತೆ
ಸುವಾಕ್ಷರ ,ಪ್ರಣಮ ಮಂತ್ರ ,ಷಟಸ್ಥಲ ಭಕ್ತಾ0ಗನೆಯ ಆಚರಣೆಗಳು ಷಡುರಶನ ,ಕಾಲ ಹೀಗೆ ಎಲ್ಲಾ ತತ್ವಗಳು ಶರಣನ ಮಹಾ ಬೆಳಗಿನಲ್ಲಿ ತೊಳಗಿ ಬೆಳಗಿ ಗೋಚರಗೊಂಡು ತಮ್ಮಲ್ಲಿ ಬೆರೆಸಿದವು ಎಂದು ಅಲ್ಲಮರು ಅತ್ಯಂತ ಸುಂದರವಾಗಿ ಹೇಳುತ್ತಾರೆ.
ಅಂತಹ ಮಹಾ ಮಣಿಹ ಮಹಾಬೆಳಗಿನ ಶರಣ ಮಹಾ ಮಣಿಹ ಸಂಗನ ಬಸವಣ್ಣ . ಬಸವಣ್ಣನ ಬದುಕಿನಲ್ಲಿ ಇಂತಹ ಎಲ್ಲಾ ಕಾಲ ಘಟ್ಟಗಳು ಕಾಣುವ ಸುಯೋಗ ಬಂದಿತು ಎಂದು ಅಲ್ಲಮ ಪ್ರಭುಗಳು ತಮ್ಮ ಧಾರ್ಮಿಕ ನೇತಾರ ಬಸವಣ್ಣನನ್ನು ಮತ್ತು ಶರಣ ತತ್ವದ ಪ್ರಖರ ಪರಿಚಯ ಮಾಡಿಸಿ ಸಹಸ್ರ ಸಹಸ್ರ ವರುಷಗಳಿಂದ ಅಧ್ಯಾತ್ಮಿಕ ಧಾರ್ಮಿಕ ವಿಧಿ ವಿಧಾನಗಳ ಹುಡುಕಾಟದಲ್ಲಿ ಬಾಳು ಸವೆಸುವ ಭಕ್ತನಿಗೆ ತನ್ನ ಮುಕ್ತಿಯ ನಿಲುವನ್ನು ಶರಣ ಸ್ಥಲದಲ್ಲಿ ಕಾಣುವ ಬಗೆಯನ್ನು ತೋರಿದ್ದಾರೆ ಅಲ್ಲಮರು.

ಮೊದಲಿನ ಎಲ್ಲಾ ಸಿದ್ಧಾಂತ ನಂಬಿಕೆ ತತ್ವಗಳಿಗಿಂತ ಶ್ರೇಷ್ಠ ಸಿದ್ಧಾಂತವೆ ಶರಣ ಸಿದ್ಧಾಂತ ಎಂದು ಅತ್ಯಂತ ಗಟ್ಟಿಯಾಗಿ ಹೇಳುವ ಈ ವಚನ ನಮ್ಮ ಧರ್ಮದ ಮೂಲ ಅಳತೆ ಗೋಲು. ಆತ್ಮಾವಲೋಕನದ ಕೈಗನ್ನಡಿಯಾಗಿದೆ.

 

 

 

 

 

 

 

 

 

-ಡಾ.ಶಶಿಕಾಂತ.ಪಟ್ಟಣ.ಪೂನಾ*
——————————————–—–
ಇಲ್ಲಿ ಬರುವ ಷಡಕ್ಷರ ಷಟಸ್ಥಲ ಭಕ್ತನಂಗನೇ ಸುವಾಕ್ಷರಗಳು ಮಂತ್ರ ಪರಶಿವನ ಶಕ್ತಿ ,ಚಕ್ರ ಶಕ್ತಿ ಬ್ರಹ್ಮ ,ಪ್ರಣಾಮ ಮಂತ್ರ ಕಮಲ ಮುಂತಾದ ಅಧ್ಯಾತ್ಮಿಕ ಪಾರಿಭಾಷಿಕ ಅರ್ಥಗಳನ್ನು ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಸಾಹಿತ್ಯದಿಂದ ಪಡೆಯ ಬಹುದು .ಇವುಗಳನ್ನು ಪಡೆಯುವಲ್ಲಿ ಶರಣೆ -ಭಾರತಿ ಕೆಂಪಯ್ಯ
ಸಹಾಯ ಮಾಡಿದ್ದಾರೆ.

Don`t copy text!