ಒಂದು ವೈಭವೋಪೇತ ವಿವಾಹ… ಮತ್ತು ಹೆಣ್ಣು ಮಕ್ಕಳ ಅಸ್ಮಿತೆಯ ಕುರಿತಾದ ಮಾತುಗಳು

ಒಂದು ವೈಭವೋಪೇತ ವಿವಾಹ… ಮತ್ತು ಹೆಣ್ಣು ಮಕ್ಕಳ ಅಸ್ಮಿತೆಯ ಕುರಿತಾದ ಮಾತುಗಳು

 

 

ಕೆಲ ದಿನಗಳ ಹಿಂದೆ ಐದು ಸಾವಿರ ಕೋಟಿ ಹಣವನ್ನು ಖರ್ಚು ಮಾಡಿದ ಅತ್ಯಂತ ವೈಭವೋಪೇತ ಮದುವೆ ನಮ್ಮ ಭಾರತ ದೇಶದಲ್ಲಿ ದಾಖಲಾಯಿತು.ಅದ್ದೂರಿ ವಿವಾಹದ, ವರ್ಣ ರಂಜಿತ ಡೆಕೋರೇಷನ್ಗಳು, ಅಲ್ಲಿ ತಯಾರಿಸಲಾದ ಊಟ ತಿಂಡಿಗಳ, ಕ್ರೀಡಾ ಲೋಕದ ಮತ್ತು ಸಿನಿಮಾ ತಾರೆಯರ ಹಾಜರಾತಿಯ ಜೊತೆಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ನಮ್ಮ ಕರ್ನಾಟಕ ರಾಜ್ಯದ ಪ್ರಭಾವಶಾಲಿಗಳ ಕುರಿತು ಪುಂಖಾನುಪುಂಖವಾಗಿ ವಿಡಿಯೋಗಳು ವೈರಲ್ ಆದವು.

‘ನ ಭೂತೋ, ನ ಭವಿಷ್ಯತಿ’ ಎಂಬಂತೆ ಅದ್ದೂರಿಯಿಂದ ನಡೆದ ಈ ವಿವಾಹಮಹೋತ್ಸವ ಕಳೆದ ಹಲವಾರು ದಿನಗಳಿಂದ ಚರ್ಚೆಯಲ್ಲಿದೆ. ಅಂಬಾನಿ ಪರಿವಾರದವರ ವೇಷ ಭೂಷಣ, ಆಭರಣಗಳ ಕುರಿತು ಅತಿ ಹೆಚ್ಚು ಚರ್ಚೆಗಳು ನಡೆದಿವೆ,ಆದರೆ ಇದೆಲ್ಲಕ್ಕಿಂತಲೂ ವಿಭಿನ್ನವಾಗಿ ರಿಲಯನ್ಸ್ ಸಂಸ್ಥೆಯನ್ನು ಹುಟ್ಟು ಹಾಕಿ ಹೂಡಿಕೆದಾರರೆಲ್ಲರನ್ನು ತಮ್ಮ ಪರಿವಾರದವರು ಎಂದೇ ಭಾವಿಸುವ ಅಂಬಾನಿ ಪರಿವಾರದ ಸದಸ್ಯರ ನಡೆ-ನುಡಿಗಳು, ಅವರ ವ್ಯಕ್ತಿತ್ವ, ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ಪ್ರೀತಿ,ಗೌರವ ಮತ್ತು ಪ್ರಾಶಸ್ತ್ಯ, ಕುಟುಂಬದ ಎಲ್ಲ ಸದಸ್ಯರು ಮಕ್ಕಳನ್ನು ಬೆಳೆಸುವ ರೀತಿ ನೀತಿ ಎಲ್ಲರಿಗೂ ಮಾದರಿಯಾಗಿದೆ.

ಅಂಬಾನಿ ಪರಿವಾರದ ಸದಸ್ಯರು ಮದುವೆಗೆ ಆಗಮಿಸಿದ ಸರ್ವರನ್ನು ಪ್ರೀತಿಯಿಂದ ಆಹ್ವಾನಿಸಿದರು. ಪ್ರತಿ ರವಿವಾರ ತಮ್ಮ ಮನೆಗೆ ಊಟ ಸರಬರಾಜು ಮಾಡುವ ಅಜ್ಜಿಯಿಂದ ಹಿಡಿದು ಮದುವೆಗೆ ಸಿಹಿ ತಿಂಡಿಗಳನ್ನು ತಯಾರಿಸಿದ ಪ್ರತಿಯೊಬ್ಬರನ್ನು ಅಷ್ಟೇ ಕಾಳಜಿಯಿಂದ, ಆದರಪೂರ್ವಕವಾಗಿ ನಡೆಸಿಕೊಂಡರು.

ಈಗಾಗಲೇ ಮೊಮ್ಮಕ್ಕಳನ್ನು ಕಂಡಿರುವ ಮುಕೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಅವರ ಮಕ್ಕಳು ಮತ್ತು ಸೊಸೆಯಂದಿರು ತಮ್ಮ ಮಕ್ಕಳನ್ನು ಕೆಲಸದವರ ಸುಪರ್ದಿಗೆ ಕೊಡದೆ ತಾವೇ ತೊಡೆಯ ಮೇಲೆ ಕೂರಿಸಿಕೊಂಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ವಿಶೇಷ ಗಮನವನ್ನು ಸೆಳೆಯಬೇಕಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಂಬಾನಿ ಪರಿವಾರದ ಯಾವುದೇ ಹೆಣ್ಣು ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ಇರಲಿಲ್ಲ… ಅದಾಗ್ಯ್ಯೂ ಒಮ್ಮೆ ಅಂಬಾನಿ ಪರಿವಾರದ ಹಿರಿಯ ಸೊಸೆ ಶ್ಲೋಕ
ಮೆಹತಾಗೆ ಫೋನಿನ ಅವಶ್ಯಕತೆ ಬಿದ್ದಾಗ ಪತಿಯಿಂದ ಕೇಳಿ ಪಡೆದದ್ದು ಕಂಡು ಬರುತ್ತದೆ.
ಇನ್ನು ಮದುವೆಯ ಮುಖ್ಯ ವಿಧಿ ವಿಧಾನಗಳನ್ನು ಪೂರೈಸುವಾಗ ಸ್ವತಃ ನೀತಾ ಅಂಬಾನಿ ಬೀಗರನ್ನು ಪ್ರೀತಿಯಿಂದ ಸಂಬೋಧಿಸಿ ನಮಗೆ ನಮ್ಮ ಸೊಸೆಯಾಗಿ ಬರುವ ರಾಧಿಕಾಳ ಮೇಲೆ ಇರುವಷ್ಟೇ ಹಕ್ಕು ನಿಮಗೆ ನಿಮ್ಮ ಅಳಿಯನಾದ ಅನಂತ್ ಮೇಲೆ ಇದೆ. ನಾವು ನಿಮ್ಮ ಕುಟುಂಬದಿಂದ ಓರ್ವ ಮಗಳನ್ನು ಪಡೆದಿದ್ದರೆ ನೀವು ನಮ್ಮ ಕುಟುಂಬದಿಂದ ಓರ್ವ ಮಗನನ್ನು ಪಡೆದಿದ್ದೀರಿ ಎಂದು ಹೇಳಿದ್ದು ಆಕೆಯ ಮಾನಸಿಕ ಪ್ರಬುದ್ಧತೆಗೆ ಸಾಕ್ಷಿ.

ಎಲ್ಲರನ್ನು ಅತ್ಯಂತ ಸಹನೆಯಿಂದ, ಪ್ರೀತಿಯಿಂದ ಮಾತನಾಡಿಸಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಿ ಯಶಸ್ವಿಯಾದಾಕೆ ನೀತಾ ಅಂಬಾನಿ.
ಒಂದು ಮನೆಯ ಹೆಣ್ಣು ಮಗಳು ಅದೆಷ್ಟೇ ಐಶ್ವರ್ಯವನ್ನು ಹೊಂದಿದ್ದರು ತನ್ನ ನಯ ವಿನಯ, ಪ್ರೀತಿ, ವಾತ್ಸಲ್ಯ ಮತ್ತು ಒಳ್ಳೆಯ ಮನೋಭಾವಗಳ ಸಂಗಮ ಆದಾಗ ಆ ಕುಟುಂಬ ನಂದನವನವಾಗುವುದರಲ್ಲಿ ಸಂಶಯವಿಲ್ಲ.

ಇದೆಲ್ಲಕ್ಕೂ ಹೆಚ್ಚು ಮನಸ್ಸಿಗೆ ಹಿಡಿದಿದ್ದು ನೀತಾ ಅಂಬಾನಿಯವರ ಕನ್ಯಾದಾನದ ಕುರಿತಾದ ಕಾವ್ಯಮಯ ಶೈಲಿಯ ವಿವರಣೆ ಮದುವೆಗೆ ಆಗಮಿಸಿದ್ದ ಎಲ್ಲ ಅತಿಥಿ ಅಭ್ಯಾಗತರ ಕಣ್ಣುಗಳಲ್ಲಿ ಆನಂದ ಭಾಷ್ಪ ತರಿಸಿದ್ದು, ಭಾರತೀಯ ಸಂಸ್ಕೃತಿಯ ವಿವಾಹ ಮಹೋತ್ಸವದ ಕುರಿತಾಗಿ ಹೆಮ್ಮೆಯನ್ನು, ಅಭಿಮಾನವನ್ನು ಸ್ಪುರಿಸುವಂತೆ ಮಾಡಿತ್ತು.

ಹೆಣ್ಣು ಮಕ್ಕಳು ತಮ್ಮನ್ನು ಹೆತ್ತ ಕುಟುಂಬದ ಪಾಲಿಗೆ ಆಶೀರ್ವಾದವಾಗಿ ಬಂದಿರುತ್ತಾರೆ.ಹೆಣ್ಣು ಮಕ್ಕಳು ನಮ್ಮ ಬಾಳಿನಲ್ಲಿ ಪ್ರೀತಿ ಆನಂದ ಮತ್ತು ಸನ್ಮಂಗಳತೆಯನ್ನು ತರುತ್ತಾರೆ.

ಭಾರತೀಯ ವಿವಾಹ ಸಂಸ್ಕೃತಿಯಲ್ಲಿ
ವಧು ಮತ್ತು ವರರಿಗೆ ಸಮನಾದ ಸ್ಥಾನವಿದೆ.
ಕನ್ಯಾ ದಾನ ಎಂಬುದು ಭಾರತೀಯ ಸಂಸ್ಕೃತಿಯ ಅತ್ಯಂತ ಮಹತ್ವದ ಕ್ರಿಯೆ ಆಗಿದ್ದು ಯಾವ ಪಾಲಕರೂ ತಮ್ಮ ಮಕ್ಕಳನ್ನು ದಾನವಾಗಿ ಕೊಡುವುದಿಲ್ಲ. ತಾನು ಹುಟ್ಟಿದ ಮನೆಯ ಸದಸ್ಯರ ಪ್ರೀತಿ, ಸಂತೋಷ ಮತ್ತು ನೆನಪುಗಳನ್ನು ಬದುಕಿನುದ್ದಕ್ಕೂ ಹೊಂದಿರುವ ಕುಟುಂಬದ ಹೃದಯದ ಭಾಗವಾಗಿರುವ ಹೆಣ್ಣು ಮಕ್ಕಳನ್ನು ಪಾಲಕರು ಅದು ಹೇಗೆ ಕೊಟ್ಟುಬಿಡುತ್ತಾರೆ… ಹಾಗೆ ಕೊಡಲು ಹೆಣ್ಣು ಮಕ್ಕಳೇನು ಸೊತ್ತಲ್ಲ!, ಬದಲಾಗಿ ಕಾಪಿಟ್ಟುಕೊಳ್ಳಬಹುದಾದ ಆಶೀರ್ವಾದ ಮತ್ತು ಅಮೂಲ್ಯ ಆಸ್ತಿ.

ಸಂತೋಷದ ಮೂಲವೇ ಹೆಣ್ಣು ಮಕ್ಕಳು, ದಿವ್ಯ ಜ್ಯೋತಿಯಂತೆ ಬೆಳಗುವ ಹೆಣ್ಣು ಮಗಳು ವಿವಾಹವಾದ ನಂತರ ಗಂಡನ ಮನೆಯಲ್ಲಿ ಕೂಡ ತನ್ನ ಬೆಳಕಿನ ಪ್ರಭೆಯನ್ನು ಹಂಚಿಕೊಳ್ಳಬಲ್ಲವಳು
ಎಂದು ನೀತಾ ಅಂಬಾನಿ ಕನ್ಯಾ ದಾನದ ಕುರಿತಾಗಿ ಹೇಳುತ್ತಿರುವಾಗ ಮುಕೇಶ್ ಅಂಬಾನಿ ಸೇರಿದಂತೆ ಅಲ್ಲಿ ನೆರೆದಿದ್ದ ಎಲ್ಲ ಪ್ರಮುಖರ ಕಣ್ಣುಗಳಲ್ಲಿ ಹೆಣ್ಣಿನ ಕುರಿತಾದ ಕೃತಜ್ಞತೆಯ ಕಣ್ಣೀರಿತ್ತು.

ಭಾರತೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಹೆಣ್ಣು ಮಕ್ಕಳಿಗೆ ಮಹತ್ತರ ಸ್ಥಾನವನ್ನು ನೀಡಿವೆ. ನಮ್ಮ ಪೂರ್ವಜರು” ಹೆಣ್ಣು ಮಕ್ಕಳು ನೆಲೆಸಿದಲ್ಲಿ ಮಂಗಳವಾಗುತ್ತದೆ, ದೇವತೆಗಳು ಕೂಡ ನೆಲೆಸಿರುತ್ತಾರೆ” ಎಂದು ಹೇಳಿದ್ದಾರೆ. ಹೆಣ್ಣು ಮಕ್ಕಳಿಗೆ ದೇವರು ಅತ್ಯಂತ ದಿವ್ಯವಾದ ಶಕ್ತಿಯನ್ನು ದಯಪಾಲಿಸಿದ್ದು ಹೆಣ್ಣು ಮಕ್ಕಳು ಮನೆಯನ್ನು ಸ್ವರ್ಗವಾಗಿಸುತ್ತಾರೆ ಎಂದು ಕೂಡ ಆಕೆ ಹೇಳಿದರು.

ಭಾರತೀಯ ವಿವಾಹ ಸಂಸ್ಕೃತಿಯ ಬುನಾದಿಯು ವಧು-ವರರು ಮತ್ತು ಅವರ ಕುಟುಂಬಗಳ ನಡುವೆ ಸಂಪೂರ್ಣ ಸಮಾನತೆಯನ್ನು ಸಾರುತ್ತದೆ. ಅಂತೆಯೇ ವಧುವಿನ ತಂದೆ ತಾಯಿಗಳು ವರನನ್ನು ತಮ್ಮ ಮಗನೆಂದು ಭಾವಿಸಿ, ತಮ್ಮ ಮಗಳನ್ನು ಆತನ ಕುಟುಂಬಕ್ಕೆ ಒಪ್ಪಿಸುತ್ತಾರೆ.
ಯಾವ ಪಾಲಕರು ಎಂದಿಗೂ ತಮ್ಮ ಮಕ್ಕಳನ್ನು ದಾನವಾಗಿ ಕೊಡುವುದಿಲ್ಲ ಎಂಬುದು ಮಗಳಾಗಿ, ತಾಯಿಯಾಗಿ,ಅತ್ತೆಯಾಗಿ ನನಗೆ ಗೊತ್ತಿದೆ.
ಜೀವನವು ನಮಗೆ ದಯಪಾಲಿಸುವ ಅತಿ ದೊಡ್ಡ ಆಶೀರ್ವಾದ ಮತ್ತು ಸಂತೋಷವೇ ಹೆಣ್ಣು ಮಕ್ಕಳು.

ಹೆಣ್ಣು ಮಕ್ಕಳು ಹುಟ್ಟಿದ ಸಮಯದಿಂದಲೇ ಲಕ್ಷ್ಮಿಯ ರೂಪದಲ್ಲಿ ನಮ್ಮ ಮನೆಗೆ ಸಮೃದ್ಧಿ ಮತ್ತು ಮಂಗಳವನ್ನು ತರುತ್ತಾರೆ.ನಮ್ಮ ಅಸ್ತಿತ್ವದೊಂದಿಗೆ ಹೆಣೆದುಕೊಂಡಿರುವ ನಮ್ಮ ಆತ್ಮದ ತುಣುಕುಗಳು ನಮ್ಮ ಹೆಣ್ಣು ಮಕ್ಕಳು ಎಂದು ಭಾವನಾತ್ಮಕವಾಗಿ ಉದ್ದರಿಸಿದ ನೀತಾ ಅಂಬಾನಿ ಹೆಣ್ಣು ಮಕ್ಕಳ ಗೌರವ ಘನತೆಯನ್ನು ಸಾರಿ ಸಾರಿ ಹೇಳಿದ್ದಾರೆ.

ಕಳೆದ ತಿಂಗಳು ಜುಲೈ 12ರಂದು ಅತ್ಯಂತ ಅದ್ದೂರಿಯಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ದೇಶ ವಿದೇಶಗಳ ಗಣ್ಯಾತಿಗಣ್ಯರು, ಉದ್ಯಮಿಗಳು ಸೆಲೆಬ್ರಿಟಿಗಳ ಜೊತೆ ಜೊತೆಗೆ ರಿಲಯನ್ಸ್ ಪರಿವಾರಕ್ಕೆ ಆಪ್ತರಾದ ಸ್ನೇಹ ಬಳಗದವರು ಪಾಲ್ಗೊಂಡಿದ್ದರು.

 

ಆದರೆ ಮುಖ್ಯವಾಗಿ ಇಲ್ಲಿ ಕಂಡದ್ದು ವೈಭವದ ಜೊತೆ ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿಯ ಹಿರಿಮೆ, ಗರಿಮೆಗಳನ್ನು ಸಾರಿ ಹೇಳಿದ ಅಂಬಾನಿ ಪರಿವಾರದ ಸದಸ್ಯರ ನಡುವಣ ಪರಸ್ಪರ ಪ್ರೀತಿ, ವಿಶ್ವಾಸ, ಹೆಣ್ಣು ಮಕ್ಕಳಿಗೆ ನೀಡುವ ಗೌರವಾದರಗಳು ವಿಶೇಷ ಮೆಚ್ಚುಗೆಗೆ ಪಾತ್ರವಾದವು.ಜಗತ್ತಿನ ಕಣ್ಣು ಅಂಬಾನಿ ಪರಿವಾರದ ಈ ವಿವಾಹ ಮಹೋತ್ಸವದ ಮೇಲೆ ಇದ್ದಾಗ ನಿಜವಾಗಿಯೂ ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯನ್ನು ಎತ್ತಿ ಹಿಡಿಯುವ ಮೂಲಕ ಇಡೀ ಸಂಸಾರದ ಚುಕ್ಕಾಣಿ ಹಿಡಿದಿರುವ ನೀತಾ ಅಂಬಾನಿ ಮತ್ತು ಪರಿವಾರ ಯಶಸ್ವಿಯಾಗಿದೆ ಎಂದರೆ ತಪ್ಪಿಲ್ಲ. ಕುಟುಂಬದ ಸದಸ್ಯರ ಮಧ್ಯದಲ್ಲಿರುವ ಪರಸ್ಪರ ಪ್ರೀತಿ, ವಿಶ್ವಾಸ, ಬಾಂಧವ್ಯಗಳು ಸದಾ ಹೀಗೆಯೇ ಇರಲಿ ಎಂದು ಹಾರೈಸೋಣ.

 

 

 

 

 

 

 

 

 

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

One thought on “ಒಂದು ವೈಭವೋಪೇತ ವಿವಾಹ… ಮತ್ತು ಹೆಣ್ಣು ಮಕ್ಕಳ ಅಸ್ಮಿತೆಯ ಕುರಿತಾದ ಮಾತುಗಳು

Comments are closed.

Don`t copy text!