ಶ್ರಾವಣ ಮಾಸದ ಶರಣರ ಮಾಲಿಕೆ – ೪
ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿಭೋ
ಇವ ಕುಟ್ಟಲೇಕೆ? ಕುಸುಕಲೇಕೆ?
ಅತ್ತಲಿತ್ತ ಹರಿವ ಮನದ ಶಿರವನರಿದೆಡೆ
ಬಚ್ಚ ಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ
ಅಕ್ಕ ಮಹಾದೇವಿ
12 ನೇ ಶತಮಾನದ ಪ್ರಸಿದ್ಧ ವಚನಗಾರ್ತಿ ಶಿವಶರಣೆ .ಕನ್ನಡದ ಮೊತ್ತಮೊದಲ ಕವಿಯತ್ರಿ ಎಂದರೆ ಅಕ್ಕಮಹಾದೇವಿ . 1160 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಉಡುತಡಿ ಎಂಬ ಊರಿನಲ್ಲಿ
ಓಂಕಾರ ಶೆಟ್ಟಿ ಮತ್ತೊಂದು ಕಡೆ ನಿರ್ಮಲಶೆಟ್ಟಿ ಅವರ ಮಗಳು.
ಅಕ್ಕಮಹಾದೇವಿಯು ಬೆಳೆಯುತ್ತ ಬೆಳೆಯುತ್ತ ಚೆನ್ನ ಮಲ್ಲಿಕಾರ್ಜುನನೇ ತನ್ನ ಗಂಡನೆಂದು ತಿಳಿದು ನಡೆದ ಅಕ್ಕನಿಗೆ ಒಂದು ದಿವಸ ಕೌಶಿಕನ ಕಣ್ಣಿಗೆ ಅಕ್ಕಮಹಾದೇವಿಯು ಬೀಳುತ್ತಾಳೆ.
ಇಷ್ಟವಿಲ್ಲದಿದ್ದರೂ ಒಪ್ಪಿಕೊಂಡು ಮೂರು ಷರತ್ತುಗಳನ್ನು ಹಾಕಿ ಕೌಶಿಕನ ಅರಮನೆಗೆ ಮದುವೆ ಮಾಡಿಕೊಂಡು ಬರುತ್ತಾಳೆ.
ಅಕ್ಕನ ಮೂರು ವಚನಗಳನ್ನು ಪಾಲಿಸದ ಕೌಶಿಕನನ್ನು ಹಾಗೂ ಅರಮನೆಯನ್ನು ತೊರೆದು ನಡೆದ ಅಕ್ಕನ ಜೀವಭಾವ ಆ ಚೆನ್ನಮಲ್ಲಿಕಾರ್ಜುನ ಒಬ್ಬನೇ ನನಗೆ ಸರ್ವಸ್ವ ಎಂದು ನಡೆದ ಅಕ್ಕ
ಬಹಳ ಅಂತಃಕರಣದ ಮಾತುಗಳನ್ನು ಆಡಿ
ಅಲ್ಲಮಪ್ರಭುವಿನ ಅನುಭಾವ ಮಂಟಪಕ್ಕೆ ಬಂದು ಅಲ್ಲಿ ಕೇಳುವ ಅಕ್ಕನ ಪರೀಕ್ಷೆಯ ಎಲ್ಲ ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿ ಕೊನೆಗೆ ಚೆನ್ನಮಲ್ಲಿಕಾರ್ಜುನಯ್ಯನಿಗೆ ಮೀಸಲು ಈ ದೇಹ ಎಂದು ಅರುವಿ ಕಲ್ಯಾಣವನ್ನು ತೊರೆದು ಚೆನ್ನಮಲ್ಲಿಕಾರ್ಜುನನ್ನು ಹುಡುಕುವ ಅವಳ ಮನೋವೇದನೆಗೆ ನಾವೆಲ್ಲಾ ಮೌನರಾಗಿ ನಿಲ್ಲುತ್ತೇವೆ .
ಅಕ್ಕಳ ದೃಷ್ಟಿಯಲ್ಲಿ ಎಲ್ಲವೂ ಶೂನ್ಯ ಎಲ್ಲವೂ ಮಾಯ ಮತ್ತು ಬಯಲು.
ಈ ಬಯಲು ಶೂನ್ಯದಲ್ಲಿ ಹರಿವ ಜಲರಾಶಿಯ ಈ ಮನವನು ತಡೆಯಲೆಂತು ಕೊಟ್ಟಣವ ಕುಟ್ಟಿ ತೂರುವ ಹೊಟ್ಟಿನಂತಾದ ಈ ವೇದ ಶಾಸ್ತ್ರ ಪುರಾಣದ ಅವಶ್ಯಕತೆ ಎನಗಿಲ್ಲ ಎನ್ನುವ ಅಕ್ಕನ ಮಾತು ನಿಜಕ್ಕೂ ಸತ್ಯ.
ವೇದದಲ್ಲಿ ಯಜ್ಞ ಯಾಗಾದಿ ಕಾಮ್ಯ ಕರ್ಮಗಳಿವೆ ಇವೆಲ್ಲವೂ ಹುರುಳಿಲ್ಲದ ಕರ್ಮಗಳು.
ಇವುಗಳನ್ನು ಮಾಡುತ್ತ ನಂಬುತ್ತ ಹೋದರೆ ನಮ್ಮ ಉದ್ದೇಶ ಮರೆಯಾಗಿ ಹೋಗುತ್ತದೆ ಎನ್ನುವ ಭಾವ ಶರಣರದು.
ಅಲ್ಲಿ ಕಟ್ಟು ಕಥೆ ಕಲ್ಪನೆಯ ಕಥೆ ಜೊಳ್ಳು ಕಥೆಗಳೇ ಹೊರತು ಆತ್ಮ ಕಥೆಗಳೆಲ್ಲಿಯೂ ಇಲ್ಲ.ಅವುಗಳಿಂದ ಸಂತುಷ್ಟನಾಗಬಯಸುವವನು ಮೃಗಜಲವನ್ನು ಬೆನ್ನು ಹತ್ತಿದಂತೆ ಎಂದು ಅಕ್ಕ ಹೇಳುತ್ತಾಳೆ.
ನಮ್ಮ ನಮ್ಮ ಆತ್ಮದ ಅನುಭಾವವೇ ನಿಜವಾದ ವೇದ ನಮ್ಮ ಹಿಂದಿನದನ್ನು ನೆನಪಿಸಿಕೊಳ್ಳುವುದೇ ಪುರಾಣ.
ಇದನ್ನೇ ಸಾಧಿಸಿ ನೋಡಿ ಎಂದು ಅಕ್ಕ ಹೇಳುತ್ತಾಳೆ .
ಪುಣ್ಯ ತೀರ್ಥವೆಂದು ತಿಳಿದು ಎಲ್ಲೆಲ್ಲೋ ಅಲೆದಾಡಬೇಕಿಲ್ಲ .ಸಕಲ ಜೀವವೂ ನನ್ನಂತೆಯೇ ಎಂದು ತಿಳಿದು ನಡೆಯುವ ಮಾರ್ಗ.
ಬೇರೆಯವರಿಗೆ ನಾವು ಏನನ್ನು ಮಾಡಬೇಕೆಂದು ಇಚ್ಛಿಸುವೆವೋ ಅದನ್ನು ಅವರಿಗೆ ಮಾಡಿ ತೋರಿಸುವುದೇ ನೀತಿ .
ಎಲ್ಲರನ್ನೂ ಎಂಥವರೇ ಇರಲಿ, ಪ್ರೀತಿಸುವ ವಿಶ್ವಪ್ರೇಮವನ್ನು ತಂದು ಕೊಡುವ ಬೆಳಕು .ಅನೇಕರ ಕಲ್ಯಾಣ ಕೆಲಸ .ಜೀವಂತ ದೇವರುಗಳ ಕಲ್ಯಾಣದಲ್ಲಿಯೇ ಆ ದೇವ ಪರಮಾತ್ಮನ ತೃಪ್ತಿ ಸಂತೃಪ್ತಿ.
ಇದರಿಂದಾಗಿಯೇ
ಅಧ್ಯಾತ್ಮ ವಿಶ್ವವಿದ್ಯಾಲಯನ್ನು ತೆರೆದ ಅನುಭವ ಮಂಟಪ ತಳ ಸಮುದಾಯದಿಂದ ಹಿಡಿದು ಅಂತ್ಯಜರಿಗೆ ಒಂದೇ ದೇವರನ್ನು ಪೂಜಿಸುವ ಅರಿವನ್ನು ಮೂಡಿಸಿದರು. ಬಸವಣ್ಣನವರು
ವೇದ ಉಪನಿಷತ್ತುಗಳ ವಿಷಯವನ್ನು ಅಚ್ಚಕನ್ನಡ ಭಾಷೆ ಹೃದಯದ ಭಾಷೆಯಲ್ಲಿ ಸಂಗ್ರಹ ಮಾಡಿ ಒಂದು ಸಾಹಿತ್ಯಿಕ ಕ್ರಾಂತಿಯನ್ನು ಮಾಡಿದರು.
ಶಿವಶರಣರು ಎನ್ನುವ ಭಾವವನ್ನು ಅಕ್ಕನ ಈ ಒಂದು ವಚನದಲ್ಲಿ ಕಾಣಬಹುದಾಗಿದೆ .
ಈ ವೇದವೆಂಬುದು ಬರೀ ಓದಿಗಾಗಿ ಮಾತ್ರ. ಶಾಸ್ತ್ರ ವೆಂಬುದು ಸಂತೆಯೊಳಗಿನ ಸುದ್ದಿ. ಈ ಪುರಾಣ ವೆಂಬುದು ಪುಂಡರ ಗೋಷ್ಠಿ .ತಮ್ಮ ಹೊಟ್ಟೆ ಪಾಡಿನ ಲಾಭಕ್ಕಾಗಿ ಎನ್ನುವುದನ್ನು ಜ್ಞಾನಿಯಾದ ಅಲ್ಲಮಪ್ರಭುಗಳು ಹೇಳಿದ್ದಾರೆ .ವೇದ ಶಾಸ್ತ್ರ ಪುರಾಣಗಳೆಲ್ಲ ಒಂದು ಕುಟ್ಟುವ ಕಲ್ಲಿನಲ್ಲಿಯ ಗಟ್ಟಿ ಅಕ್ಕಿಯ ಮೇಲಿನ ತೌಡು. ಆ ತೌಡನ್ನು ಗಾಳಿಗೆ ತೂರಿ ಬಿಟ್ಟರೆ ಸಾಕು ಅದು ಹಾರಿ ಹೋಗುತ್ತದೆ .
ಹಾಗೇ ನಮ್ಮ ಮನಸ್ಸೂ ಕೂಡಾ. ಅದು ಅತ್ತಲಿತ್ತ ಸಂಚರಿಸುವ ಮನವನ್ನು ಹಿಡಿದು ಕಟ್ಟಲು ಆಗಲಾರದು .
ಆ ಮನಸ್ಸು ಬಟ್ಟ ಬಯಲಿನಲ್ಲಿ ಸ್ವತಂತ್ರವಾಗಿ ಚೆನ್ನಮಲ್ಲಿಕಾರ್ಜುನನ ಮನದಲ್ಲಿ ಬಯಲು ಗೊಂಡಿದೆ. ಎನ್ನುವ ಭಾವವನ್ನು ಅಕ್ಕನ ಈ ವಚನದಲ್ಲಿ ಕಾಣಬಹುದಾಗಿದೆ .
-ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ