ಶ್ರಾವಣ ಮಾಸದ ಶರಣ ಮಾಲಿಕೆ
ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ
ಮುಂದೆ ಬಂದಿಪ್ಪಳು ನೋಡಾ
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ ,
ಆತನೆ ಲಿಂಗಕ್ಯನು ಗುಹೇಶ್ವರಾ
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಹುಟ್ಟಿದ ದಿವ್ಯ ಜ್ಞಾನಿ ಅಲ್ಲಮಪ್ರಭುವಿನ ಆಳವಾದ ಚಿಂತನದ ವಚನಗಳು ,ಪ್ರತಿಭಟನಾತ್ಮಕ ಹಾಗೂ ವಿಮರ್ಶಾತ್ಮಕ ಅಂಶವನ್ನು ಒಳಗೊಂಡ ಅಲ್ಲಮನ ವಚನಗಳು ನಮಗೆ ಸತ್ಯಾನ್ವೇಷಣೆಯ ದಿಕ್ಕಿನತ್ತ ನಮ್ಮನ್ನು ಕರೆದೊಯ್ಯುತ್ತವೆ .
ನೇರ ಹಾಗೂ ದಿಟ್ಟವಾಗಿ ಹೇಳುವ ವೀರ ಗಣಾಚಾರಿ ಅಲ್ಲಮನ ಈ ಒಂದು ವಚನದ ಅರ್ಥ ನನ್ನ ಬುದ್ಧಿಗೆ ನಿಲುಕಿದ್ದು ನಿಮ್ಮ ಮುಂದೆ ತೆರೆದು ಇಡುತ್ತಿರುವೆ.
ಆಸೆಯೆಂಬ ಕೂಸು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ
ಇಲ್ಲಿ ಆಸೆಯೆಂಬ ಕೂಸನ್ನು
ಹಡೆದ ತಾಯಿ ರೋಷ.
ರೋಷದ ತಾಯಿಯು ಆಸೆಯ ಕೂಸನ್ನು ಬೆಳೆಸುತ್ತ ಬೆಳೆಸುತ್ತ ಹೋದಂತೆ ಅದರ ರೋಷವೆಂಬ ತಾಯಿ ಅದನ್ನು ತಡೆದು ಹಾಕಲು ತುಂಬಾ ಕಷ್ಟವನ್ನು ಅನುಭವಿಸಬೇಕಾಗುತ್ತದೆ.
ಕೂಸು ಇದ್ದಾಗಲೇ ಆಸೆಯ ಕೂಸನ್ನು ತಾಯಿಯಾದವಳು ಪಳಗಿಸಿ,ಅದನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನಡೆಸಬೇಕಾಗುತ್ತದೆ.
ಮುಂದೆ ದೊಡ್ಡದಾಗಿ ಬೆಳೆದ ಆಸೆಯ ಕೂಸು ತನ್ನ
ಮನಸ್ಸಿಚ್ಚೆಯಂತೆ ಹೋಗುವುದನ್ನು ತಡೆಯಲು ರೋಷದಿಂದ ತಾಯಿ ಹೆಣಗುವಂತ್ತಾಗುತ್ತದೆ.
ಕೂಸು ಇದ್ದಾಗಲೇ ಅದಕ್ಕೆ ಸುಂದರ, ಸುಸಂಸ್ಕೃತ ಪರಿಸರದ ಒಲವಿನಿಂದ ಅಪ್ಪಿ ಮುದ್ದಿಸುವ ತಾಯಿ ಮುಂದಿನ ತನ್ನ ಕೂಸಿನ ಆಸೆಯನ್ನು ತೀರಿಸಲು ಒದ್ದಾಡುವ ಪರಿಸ್ಥಿತಿಯು ಬಂದು ಬಿಡುತ್ತದೆ .
ಆಸೆಗೂ, ರೋಷಕ್ಕೂ ಅನ್ಯೋನ್ಯ ಸಂಬಂಧ ಮಗು ಹಾಗೂ ತಾಯಿಯಷ್ಟು ಆಸೆಗೆ ಏನಾದರೂ ತೊಂದರೆ ,ಬಾಧೆ ಬಂದರೆ ರೋಷ ಅದನ್ನು ರಕ್ಷಿಸಲು ಧಾವಿಸುತ್ತದೆ .
ಆಸೆಗೆ ರೋಷದ ಅವಲಂಬನ ರೋಷಕ್ಕೆ ಆಸೆಯ ಮೇಲೆ ತುಂಬಾ ಅನುರಾಗ ಭಾಂದವ್ಯ .
ಈ ಲೌಕಿಕ ಆಸೆ ರೋಷಗಳ ಆಮಿಷಕೆ ಬಲಿಯಾಗದೇ ಇರುವ ಮಧುರ ಬಾಂಧವ್ಯದ ಮಿಲನವೇ ಭಕ್ತಿ.
ಇಂಥಹ ಶರಣರ ಭಕ್ತಿಯು ಪರಮಾತ್ಮ ಸ್ವರೂಪರಿಗೆ ಸಲ್ಲಿಸುವ ನಿಷ್ಕಲ್ಮಷ ಹೃದಯಕ್ಕೆ ಸಲ್ಲಿಸುವ ಭಕ್ತಿಯೆಂದು ನಾನಿಲ್ಲಿ ತಿಳಿದುಕೊಂಡಿರುವೆ .
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ ಆತನೆ ಲಿಂಗಕ್ಯನು
ಆಸೆಯಿಲ್ಲದ, ರೋಷವಿಲ್ಲದ ಕೂಸನ್ನು ಪರಮಾತ್ಮ ಎತ್ತಿ ಮುದ್ದಿಸುವ ನಿರ್ಮಲ ಭಕ್ತಿ .ಅದು ಸರ್ವಪ್ರೀಯ. ದೇವರಿಗೂ ಕೂಡ .ಇಂತಹ ಭಕ್ತಿಯನ್ನು ಎತ್ತಿ ತನ್ನ ಹೃದಯ ಕಮಲದಲ್ಲಿರಿಸಿ ಓಲೈಸುವ ಭಕ್ತ. ಅವನಿಗೆ ಲಿಂಗ ಸಮರಸತೆ ಸಹಜ ಲಭ್ಯ. ಲಿಂಗಸಮ ರಸವನನುಭವಿಸುವ ಲಿಂಗೈಕ್ಯನೆನಿಸುವ .
ಲಿಂಗಾಂಗ ಸಾಮರಸ್ಯದ ಮಹಾ ಬೆಳಗಿನಲ್ಲಿ ಆಶೆಯಾಮಿಷಗಳು ಹೇಳ ಹೆಸರಿಲ್ಲದ ಬೆಳಕನ್ನು ಕಂಡ ಕತ್ತಲೆಯಂತೆ ನೋಡು ನೋಡುವಷ್ಟರಲ್ಲಿಯೇ ತಂತಾನೆ ದೂರಾಗುತ್ತವೆ.ಶರಣರ ಧರ್ಮದ ಪ್ರಭಾವವಿದು. ಅವರು ಉಂಡು ಉಪವಾಸಿಗಳು ಬಳಸಿ ಬ್ರಹ್ಮಚಾರಿಗಳು. ಅವರಿಗೆ ಸೂತಕಗಳಿಲ್ಲ .ಅವರು ನಿರಹಂಕಾರಿಗಳು .ಪ್ರಾಣದಲ್ಲಿ ನಿರ್ಭಯರು ,ಚಿತ್ತದಲ್ಲಿ ನಿರಪೇಕ್ಷೆಯುಳ್ಳವರು .ಅಂತೆಯೇ ಅವರು ಅಜಾತ ಶತ್ರುಗಳು ವಿಷಯದಲ್ಲಿ ಉದಾಸೀನರು ಭಾವದಲ್ಲಿ ದಿಗಂಬರರು .ಜ್ಞಾನದಲ್ಲಿ ಪರಮಾನಂದ ಭರಿತರು ಸದ್ಗುಣ ಪರಿಪೂರ್ಣರು .
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ*