ಶರಣೆ ಗಂಗಾಂಬಿಕೆ ಅವರ ವಚನ

 

ಶರಣೆ ಗಂಗಾಂಬಿಕೆ ಅವರ ವಚನ

 

 

 

 

 

 

 

 

 

ಒಂದು ಹಾಳಭೂಮಿಯ ಹುಲಿಬಂದು
ಎನ್ನ ಎಳಗರುವ ಭಕ್ಷಿಸಿತ್ತಲ್ಲಾ!
ಆ ಹುಲಿ ಹಾಳಿಗೆ ಹೋಗದು.
ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು.
ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ ?

ಗಂಗಾಂಬಿಕಾ ಸಮಗ್ರ ವಚನ ಸಂಪುಟ. 5.

ಶರಣರ ವಚನಗಳು ಅಧರಕ್ಕೆ ಕಹಿ ಉದರಕ್ಕೆ ಸಿಹಿಯಾಗಿಯೂ ಕಬ್ಬಿಣ ಕಡಲೆಯಾಗಿಯೂ ಕಾಣುತ್ತವೆ. ಗಂಗಾ0ಬಿಕೆಯವರ ಒಟ್ಟು ದೊರೆತ ೮ ವಚನಗಳಲ್ಲಿ
ಈ ವಚನವು ಅತ್ಯಂತ ಲೌಕಿಕ ಬದುಕಿನ ಅಲೌಕಿಕ ಚಿಂತನೆಯಿಂದ ಕೂಡಿದೆ.
ಸಂಜ್ಞೆ ಸಂಕೇತ ಬೆಡಗನ್ನು ಬಳಸಿದ ಶರಣರು, ಹಲವು ಬಾರಿ ಬೆಡಗು ರೂಪಕ ಪ್ರತಿಮೆಗಳನ್ನು ಬಳಸಿ ವಚನದ ಅರ್ಥವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಒಂದು ಹಾಳಭೂಮಿಯ ಹುಲಿಬಂದು

ಭೂಮಿಯಲ್ಲಿನ ಒಂದು ದುಷ್ಟ ಶಕ್ತಿಯ ಹಾಳು ಪೊದರಿನ ಹುಲಿಯೊಂದು ಬಂದು: ಇಲ್ಲಿ ಭೂಮಿ ಶರೀರ, ಅಲ್ಲಿರುವ ಕೆಟ್ಟ ಕ್ರೂರ ಶಕ್ತಿ ಭಾವವೆ ಕಾಡು ಹುಲಿ ಅಥವಾ ಹಾಳು ಹುಲಿ. ಮನುಷ್ಯನಲ್ಲಿ ತಾಮಸ ಮತ್ತು ಸಾತ್ವಿಕ ಗುಣಗಳು ಇರುತ್ತವೆ.
ಹುಲಿ ಪಂಚೆಂದ್ರಿಯ ಮೂಲದ ವಿಷಯಗಳ ಪ್ರತೀಕ. ಹುಲಿ ಇದು ತಾಮಸ ಗುಣ.

ಎನ್ನ ಎಳಗರುವ ಭಕ್ಷಿಸಿತ್ತಲ್ಲಾ!

-ಪಂಚೆಂದ್ರಿಯ ವಿಷಯಗಳು ಈ ಶರೀರದ ಸಾತ್ವಿಕ ಭಕ್ತಿ ಗುಣವನ್ನು ತಾಮಸ ಕ್ರೂರ ಗುಣದ ಹುಲಿ ಭಕ್ಷಿಸಿತಲ್ಲಾ ಎಂದು ಗೊಗರೆಯುತ್ತಾಳರೆ ಗಂಗಾಂಬಿಕಾ ತಾಯಿ.

ಆ ಹುಲಿ ಹಾಳಿಗೆ ಹೋಗದು

ಇಂದ್ರಿಯ ವಾಸನೆಯ ಹುಲಿ ಬೇಟೆಗೆ ಬಂದು ಮತ್ತೆ ಮರಳಿ ತನ್ನ ಹಾಡ್ಯಿಗೆ (ಪೊದರು ) ಅಥವಾ ಹಾಳಿಗೆ (ಹುಲಿ ಇರುವ ಸ್ಥಳಕ್ಕೆ )
ಮರಳಿ ಹೋಗಲಾರದು. ಬಂದ ಹುಲಿ ಎಳೆಗರವನ್ನು ತಿನ್ನಬೇಕು ಅಥವಾ ತನ್ನ ಮೂಲ ಸ್ವರೂಪವನ್ನು ಬದಲಾಯಿಸಬೇಕು.

ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು.

-ತಾಮಸ ಗುಣದ ಹಿ೦ಸೆಯ ಪ್ರತೀಕವಾದ ಹುಲಿಯು ಸಾತ್ವಿಕ ಭಕ್ತಿ ಗುಣದ ಎಳೆಗರು ಕಂಡು ತಾನು
ಪರಿವರ್ತನೆಯಾಗಲು ಇಚ್ಚಿಸಿ ಭಕ್ತಿ ಭಾವವ ಪಡೆಯಲು, ಸಾತ್ವಿಕ ಗುಣದ ಜನನಿಯಾಗಬೇಕೆಂದು ಆಶೆ ಪಟ್ಟಿತು ಎಂದು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ ಗಂಗಾಂಬಿಕಾ.

ಪರಿವರ್ತನೆ ಇದು ಸೃಷ್ಟಿಯ ಸಹಜ ನಿಯಮ. ವ್ಯಕ್ತಿ ಎಷ್ಟೆ ಕ್ರೂರಿಯಾಗಿದ್ದರೂ ಸಾತ್ವಿಕ ಗುಣದ ಮುಂದೆ ಪರಿವರ್ತಿತನಾಗಿ ಆ ಭಾವ ಕೂಡಾ ಇನ್ನೊಂದು ಸಾತ್ವಿಕ ಭಕ್ತಿಯ ಜನನಕ್ಕೆ ಕಾರಣವಾಗುತ್ತದೆ.

ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ ?

-ಇಂತಹ ಪವಾಡ ಪರಿವರ್ತನೆಯನ್ನು ಏನೆ೦ಬೆ ಎಂದು ತನ್ನ ಆಧ್ಯಾತ್ಮದ ಚೈತನ್ಯಕ್ಕೆ ಪ್ರಶ್ನಿಸುತ್ತಾರೆ.
ಕತ್ತಲಿದ್ದರೆ ಮಾತ್ರ ಬೆಳಕಿಗೆ ಬೆಲೆ ಎನ್ನುವ ಹಾಗೆ ಹುಲಿಯೆಂಬ ಹಿ೦ಸೆಯ ತಾಮಸ ಗುಣವು ಎಳಗರುವೆಂಬ ಸಾತ್ವಿಕ ಗುಣಕ್ಕೆ ಮಾರು ಹೋಗಿ ಪರಿವರ್ತಿತವಾಗಿ
ತಾನು ಆ ಸಾತ್ವಿಕ ಗುಣದ ಜನಿತಕ್ಕೆ ತಾಯಿಯಾಗುವ ಹಂಬಲ ವ್ಯಕ್ತವಾಗುತ್ತದೆ.
ಇದು ಉತ್ತಮ ಬೆಡಗಿನ ವಚನ. ಒಬ್ಬ ವ್ಯಕ್ತಿಯ ಬದುಕಿನಲ್ಲಿ ಇಂತಹ ಪ್ರಸಂಗಗಳು ಅನೇಕ ಬರುತ್ತವೆ.

 

 

 

 

 

 

 

 

-ಡಾ.ಶಶಿಕಾಂತ.ಪಟ್ಟಣ.ಪೂನಾ

One thought on “ಶರಣೆ ಗಂಗಾಂಬಿಕೆ ಅವರ ವಚನ

Comments are closed.

Don`t copy text!