ಉಪನಿಷತ್ತು ಮತ್ತು ಪುರಾಣದ ಕಥೆಗಳು
ಮುಚುಕುಂದನ ಕಥೆ
ಸೂರ್ಯವಂಶದ ರಾಜ ಮಾಂಧಾತನಿಗೆ ಅಂಬರೀಷ, ಮುಚುಂದ ಪುರುಕುತ್ಸ ಎಂಬ ಗಂಡು ಮಕ್ಕಳು ಮತ್ತು ಇತರ ಹೆಣ್ಣು ಮಕ್ಕಳು ಇದ್ದರು. ಮಚುಕುಂದನು ಪರಾಕ್ರಮಿಯು ಧರ್ಮ ನಿಷ್ಠನು ಆಗಿದ್ದನು. ಆಗಾಗ ದೇವಾಸುರ ಸಂಗ್ರಾಮ ಆದ ಸಮಯದಲ್ಲಿ ದೇವತೆಗಳು ದೈತ್ಯರು ಇಬ್ಬರೂ ಸಹಾಯಕ್ಕಾಗಿ ಮುಚುಕುಂದ ಬಳಿ ಬರುತ್ತಿದ್ದರು. ಧರ್ಮಾತ್ಮನಾದ ಮುಚುಕುಂದನು ದೇವತೆಗಳಿಗೆ ಸಹಾಯವನ್ನು ಮಾಡುತ್ತಿದ್ದನು. ಒಂದು ಬಾರಿ ಬಹು ದೀರ್ಘಕಾಲದ ದೇವಾಸುರ ಸಂಗ್ರಾಮದ ಕಾಲದಲ್ಲಿ ದಣಿವಾಗಿ ಮುಚುಕುಂದನು ತಾನು ಎಷ್ಟು ಸಮಯ ಮಲಗಲು ಬದಸುತ್ತೇನೆಯೋ ಅಷ್ಟು ಸಮಯ ಮಲಗುವ ವರವನ್ನು ಪಡೆದನು. ಆದರೆ ಸ್ವತಃ ನಾನೇ ಏಳದೇ ಯಾರದರೂ ತನ್ನನ್ನು ಎಬ್ಬಿಸಿದರೆ ಅವರು ಸುಟ್ಟು ಬೂದಿಯಾಗಬೇಕೆಂಬ ವರವನ್ನು ಕೂಡ ಬೇಡಿಕೊಂಡನು.
ಮುಚುಕುಂದನು ಮಲಗಿ ಯುಗಗಳೇ ಆದರೂ ಎದ್ದಿರಲಿಲ್ಲ, ತ್ರೇತಾಯುಗ ಹೋಗಿ ದ್ವಾಪರ ಬಂದಿತ್ತು. ಧರ್ಮಿಷ್ಠನಾದ ಭಕ್ತನನ್ನು ಉದ್ಧರಿಸಲು ಹಾಗೂ ಅಸುರರ ಸಂಹಾರ ಮಾಡಲು ಶ್ರೀಕೃಷ್ಣ ಪರಮಾತ್ಮನ ಮುಚುಕುಂದನ ನಿದ್ರೆಯನ್ನು ಎಚ್ಚರಗೊಳಿಸುವ ವಿಚಾರ ಮಾಡಿದನು. ಕಾಲಯವನನು ಜರಾಸಂಧನ ಮಿತ್ರನಾಗಿದ್ದನು. ಜರಾಸಂಧ 17 ಬಾರಿ ಮಥುರೆಗೆ ದಂಡೆತ್ತಿ ಹೋಗಿ ಬಂದರೂ ಪದೇ ಪದೇ ಸೋಲುತ್ತಿದ್ದ ಕಾರಣ, ಕೃಷ್ಣನ ಸಂಹಾರ ಮಾಡುವ ಉದ್ದೇಶದಿಂದ ಕಾಲಯವನ ಜೊತೆಗೆ ಮಥುರೆಗೆ ಯುದ್ಧಕ್ಕೆ ಹೋದನು. ಕಾಲಯವನನೂ ಪರಾಕ್ರಮಿಯಾಗಿದ್ದರೂ, ಅವನಿಗೆ ಸಾವು ಇಲ್ಲ ಎಂಬ ಅಹಂಕಾರ ಇತ್ತು, ಅವನ ಸಾವನ್ನು ಕೃಷ್ಣನು ಮುಚುಕುಂದನಿಗೆ ನಿದ್ರೆಯ ಮುಕ್ತಿಯ ಕೊಡಿಸುವ ಸಲುವಾಗಿ ನಿರ್ಣಯಿಸಿ, ಕಾಲಯವನನಿಂದ ತಪ್ಪಿಸಿಕೊಂಡವನಂತೆ ಓಡಿ ಹೋಗಿ ಮುಚುಕುಂದ ನ ದೇಹದ ಮೇಲೆ ತನ್ನ ಉತ್ತರೀಯವನ್ನು ಹಾಕಿ ಅಲ್ಲಿಯೇ ಮರೆಯಲ್ಲಿ ನಿಂತು ಬಿಟ್ಟನು. ಬಂದ ಕಾಲಯವನನು ಕೃಷ್ಣನ ಉತ್ತರೀಯವನ್ನು ನೋಡಿ ಮಲಗಿರುವ ಮುಚುಕುಂದನನ್ನು ಕೃಷ್ಣನೆಂದು ಭಾವಿಸಿ ಅವನನ್ನು ಬಡಿದು ಎಬ್ಬಿಸಿದನು. ಮುಚುಕುಂದನು ಎದ್ದ ಕೂಡಲೇ ಕಣ್ಣು ತೆರೆದು ನೋಡಿದಾಗ ಕಾಲಯವನನು ಸುಟ್ಟು ಬೂದಿಯಾದನು. ಆಗ ಏನೂ ಅರಿಯದಾದ ಮುಚುಕುಂದನಿಗೆ ಶ್ರೀ ಕೃಷ್ಣ ಪರಮಾತ್ನನು ಅಲ್ಲಿ ನಡೆದ ಕಥೆಯನ್ನು ಹೇಳಿ ಮುಚುಕುಂದನಿಗೆ ನಿದ್ರೆಯಿಂದ ಮುಕ್ತಿಯ ಜೊತೆಗೆ ಮೋಕ್ಷವನ್ನು ನೀಡಿದನು.
ತಿಳಿಯ ಬೇಕಾದ ನೀತಿ :
ಈ ಕಥೆಯಿಂದ ತಿಳಿಯಬೇಕಾದ ಎರಡು ಅಂಶಗಳೆಂದರೆ ನಾವುಗಳು ಮಾಡಿದ ಕೆಲಸಕ್ಕೆ ಪ್ರತಿಫಲವಾಗಿ ಸಿಗುವ ವರಗಳನ್ನು ಅತ್ಯುತ್ತಮವಾಗಿರುತ್ತದೆ ಹೀಗಾಗಿ ವಿವೇಚಿಸಿ ಪಡೆಯಬೇಕು. ಪರಮಾತ್ಮನ ಭಕ್ತಿಯನ್ನು ಯಾವಕಾಲಕ್ಕೆ ಮಾಡಿರಲಿ ಅದರ ಫಲ ಸಮಗೆ ಸಕಾಲಕ್ಕೆ ದೊರೆಯುತ್ತದೆ. ಎಂಬರೆಡು ನೀತಿಯನ್ನು ಕಲಿಯುತ್ತೇವೆ.
–ಮಾಧುರಿ ದೇಶಪಾಂಡೆ, ಬೆಂಗಳೂರು