ಶ್ರಾವಣ ಮಾಸದ ಶರಣರ ವಚನ ಮಾಲಿಕೆ
ಸಂಸಾರವೆಂಬುದೊಂದು
ಗಾಳಿಯ ಸೊಡರು
ಸಿರಿಯೆಂಬುದೊಂದು
ಸಂತೆಯ ಮಂದಿಯ ಮಂದಿ ಕಂಡಯ್ಯ
ಇದ ನೆಚ್ಚಿ ಕೆಡಬೇಡ ಸಿರಿಯೆಂಬುದ
ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ
-ಬಸವಣ್ಣ
ಸಂಸಾರವೆಂಬುದೊಂದು ಗಾಳಿಯ ಸೊಡರು
ಇಲ್ಲಿ ಸಂಸಾರ ಎಂಬುವುದು ಬೆಳಗುತ್ತಿರುವ ದೀಪ .ಹಾಗೂ ಜೀವಂತ ದೇಹ ಇವೆರಡೂ ಭೌತಿಕವಾಗಿ ಮಾಡುವ ಕಾರ್ಯ ಬೇರೆ ಬೇರೆಯಾಗಿ ಕಂಡರೂ, ತಾತ್ವಿಕ ವಾಗಿ ಒಂದೇ ಆಶಯವನ್ನು ಪ್ರಸ್ತುತ ಪಡಿಸುತ್ತವೆ. ಆತ್ಮ ರೂಪಿಯಾದ ದೇಹ ಅಂದರೆ, ಸಂಸಾರ ಹಾಗೂ ಜ್ಞಾನ ರೂಪಿಯಾದ ಹಣತೆಗಳು ಒಂದೇ ತಾತ್ವಿಕತೆಯನ್ನು ಸಾದರ ಪಡಿಸುತ್ತವೆ. ದೇಹವು ಜೀವಾತ್ಮ ನ
ಆಲಯದಂತೆ ಕಂಡುಬಂದರೆ, ಹಣತೆಯು ಬೆಳಕಿನ ಸ್ವರೂಪದ ಜ್ಞಾನದ ಭೌತಿಕ ರೂಪದಂತೆ ಕಾಣುತ್ತದೆ.
ಮಾನವನ ದೇಹದಲ್ಲಿ ಅಡಗಿರುವ ಜೀವಾತ್ಮವೂ ಕೂಡಾ ತನ್ನಲ್ಲಿರುವ ಅಹಂಕಾರವನ್ನು ಸುಟ್ಟುಕೊಂಡು, ಜ್ಞಾನವೆಂಬ ಬೆಳಕಿಗಾಗಿ ಹಂಬಲಿಸಿ ಮುಕ್ತಿಯನ್ನು ಅಂದರೆ ಶಾಂತ ನೆಲೆಯನ್ನು ಹೊಂದಿ, ತನ್ನ ಬದುಕಿನ ಸಾರ್ಥಕತೆಯನ್ನು ಪಡೆಯುವ ಆಶಾಭಾವ .
ಭೌತಿಕ ಆಕರ್ಷಣೆಗೆ ಒಳಗಾದ ವ್ಯಕ್ತಿಗಳಿಗೆ ಈ ಸಂಸಾರ ಅಂದರೆ, ಈ ದೇಹವೆಂಬುದು ಕೇವಲ ರಕ್ತ ಮಾಂಸ ಗಳಿಂದ ಕೂಡಿದ ಹಲವು ಅಂಗಾಂಗಗಳ ಸಮುಚ್ಛಯ ಮಾತ್ರ ವಾಗಿದೆ. ಭಗವಂತ ನ ಧ್ಯಾನದಲ್ಲಿ ತಲ್ಲೀನರಾದವರಿಗೆ ಆತ್ಮದ ಆಲಯವಾಗಿದೆ.
ಸಂಸಾರವೆಂಬ ಜೀವಾತ್ಮವು ಸದ್ದಿಲ್ಲದೆ ಅಜ್ಞಾನದಿಂದ ಸಾಗಿ, ನಶ್ವರವಾಗದೇ ತನ್ನ ಬದುಕಿನ ಅಲ್ಪ ಕ್ಷಣಗಳಲ್ಲಾದರೂ ,ಜ್ಞಾನದ ಬೆಳಕನ್ನು ಪಡೆದು ಎಲ್ಲರಲ್ಲೂ ನಮ್ಮ ಒಳ್ಳೇಯ ಕಾರ್ಯ ಸಿದ್ದಿ ಗಳು ಹರಡಲು ಪ್ರಾರಂಭಿಸಿದಾಗ ಮಾತ್ರ ನಮ್ಮ ಜೀವಾತ್ಮಕ್ಕೆ ಅಂದರೆ ಸಂಸಾರಕ್ಕೆ ಮುಕ್ತಿ ಅಂದರೆ ಸಾಧನೆಯ ಸಿದ್ದಿಯು ದೊರೆತಂತಾಗುತ್ತದೆ .
ಗಾಳಿಯಲ್ಲಿ ಹಣತೆಯು ಸರಿಯಾಗಿ ಬೆಳಗಲಾರದು. ಬೆಳಗಿದರೂ ಯಾವಾಗ ಆರುವುದೋ ಎನ್ನುವ ಅನುಮಾನ ಉಂಟಾಗುತ್ತದೆ .ಅದಕ್ಕಾಗಿ ಈ ಮಾಯೆಯೆಂಬ ಸಂಸಾರವನ್ನು ನೆಚ್ಚಬಾರದೆಂದು ಶರಣರು ಹೇಳಿರುವರು.
ಸಿರಿಯೆಂಬುದೊಂದು
ಸಂತೆಯ ಮಂದಿಯ ಮಂದಿ ಕಂಡಯ್ಯ
ಸಂಸಾರದಲ್ಲಿ ಹೆಣ್ಣು ,ಹೊನ್ನು ,ಮಣ್ಣಿಗಾಗಿ, ಬೇಕು ಬೇಡಗಳ ಆಸೆಗಾಗಿ ಅಂದರೆ ತ್ರೀಕರಣ ಶುದ್ಧವಿಲ್ಲದೇ ಪಂಚೇಂದ್ರೀಯಗಳನ್ನು ಗೆಲ್ಲಲಾರದೆ ,ಗೆಳೆಯ, ಗೆಳತಿ ,ಸ್ನೇಹಿತರು ,ಇವರು ಆತ್ಮೀಯರು, ನಮ್ಮ ಬಂದುಗಳು ಎಂದು ತಿಳಿಯದೇ ,ಸಂಸಾರ ನೆಚ್ಚಿ ಸಿರಿ ಸುಖ ಮೆಚ್ಚಿ ದೂರ ಮಾಡಿಕೊಳ್ಳುವ ಸಣ್ಣ ಬುದ್ಧಿಯ ನಡೆಯನ್ನು ನಮ್ಮ ಶರಣರು ಎಲ್ಲಿಯೂ ತೋರಗೊಟ್ಟಿಲ್ಲ. ಹಾಗೆ ತೋರಗೊಡಲೂ ಬಾರದು .
ಸಿರಿ ಸಂಪತ್ತು ಯಾವುದೂ ಶಾಶ್ವತವಾದುದಲ್ಲ.ಹೋಗುತ್ತದೆ ಮತ್ತು ಬರುತ್ತದೆ .ಒಂದು ಊರಿನ ಸಂತೆಯಲ್ಲಿರುವ ಹೋಗಿ ಬರುವ ಜನರಿದ್ದಂತೆ ಈ ಸಂಪತ್ತು .
ಯಾವತ್ತೂ ಶಾಶ್ವತ ಅಲ್ಲ.ಸ್ನೇಹ ಮದುರ ಬಾಂಧವ್ಯದ ಮುಂದೆ ಒಳ್ಳೆಯ ಸ್ನೇಹ ಕಳೆದುಕೊಂಡು ಪಶ್ಚಾತ್ತಾಪ ಪಡುವುದು ಎಷ್ಷು ಯೋಗ್ಯ.
ನಾವು ಸಂಪತ್ತಿನ ಬೆನ್ನು ಹತ್ತಿ ಹೋಗಬಾರದು .ಸಂಪತ್ತವೇ ನಮ್ಮ ಬೆನ್ನು ಹತ್ತಿ ಬರುವಂತೆ ಕಾಯಕ ಮಾಡಬೇಕು .ಆಸ್ತಿ ಅಂತಸ್ತಿಗಾಗಿ ಬಂಧು ಬಾಂಧವರು ದೂರವಾಗದಂತೆ ನೋಡಿಕೊಳ್ಳಬೇಕು.
ಸಂತೆಗೆ ಬಂದ ಜನರು ತಮ್ಮ ತಮ್ಮ ಸಂತೆ ಮಾಡಿದ ಮೇಲೆ ತಮ್ಮ ಊರಿಗೋ ಅಥವಾ ಮನೆಗೋ ತೆರಳುತ್ತಾರೆಯೋ ಹಾಗೆ, ನಮ್ಮ ಸಂಪತ್ತು .ಅದು ಯಾವಾಗಲೂ ಸಂತೆ ಮಂದಿ ಹಾಗೆ ಹೋಗುತ್ತದೆ ಮತ್ತು ಬರುತ್ತದೆ. ಈ ಸಂಪತ್ತನ್ನು ಮೆಚ್ಚಿ ಮನೆಯಲ್ಲಿಯೇ ಕಾಯುತ್ತ ಕುಳಿತುಕೊಳ್ಳಬಾರದು. ಎನ್ನುವ ಅರಿವು ಎಲ್ಲರಿಗೂ ಆಗಬೇಕು. ಶರಣರು ಕಾಯಕಕ್ಕೆ ಹೆಚ್ಚಿನ ಬೆಲೆಯನ್ನು ಕೊಟ್ಟವರು .ನುಡಿದಂತೆ ನಡೆದು ತೋರಿಸಿದವರು ನಮ್ಮ ಶರಣರು .
ಸಂಸಾರ ಆಸ್ತಿ ಅಂತಸ್ತಿನ ಸಂಪತ್ತಿನಲಿ ದೇವರನ್ನು ಮರೆಯುವೆವು.
ಮರೆಯದೇ ನಮ್ಮ ಕೂಡಲಸಂಗಮದೇವನನ್ನು ನೆನೆ ಪೂಜಿಸು ಎಂದಿರುವರು .ಶರಣರು ತಮ್ಮ ತಮ್ಮ ಕಾಯಕದಲ್ಲಿಯೇ ದೇವರನ್ನು ಕಂಡವರು ಕಾಯವೇ ದೇವರು ಅಂಗವೇ ಲಿಂಗ. ದೇವನೊಬ್ಬ ನಾಮ ಹಲವು ಎಂದಿರುವ ಶರಣರು ನಮ್ಮ ಕರದಲ್ಲಿರುವ ಲಿಂಗವನ್ನು ಭಕ್ತಿಯಿಂದ ಪೂಜಿಸು
ಎಂದಿರುವರು .
ಕಾಂಚನಕ್ಕೆ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯಾ ,
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ.
ದ್ರವ್ಯವೆಂಬ ನಾಯಿಯ ನಂಬಿ ನಿನ್ನನ್ನು ಮರೆತೆ.
ಹಣ ಗಳಿಕೆಗೆ ಸಮಯ ಸಿಕ್ಕೀತೆ ವಿನಃ ಲಿಂಗ ಪೂಜೆಗೆ ಸಿಗಲಿಲ್ಲ. ಸಂಪತ್ತು ಸಾಧನೆಯನ್ನು ಕಾಯಲು ಮನೆಯಲ್ಲಿ ನಾಯಿಯನ್ನು ಇಟ್ಟು .ಗಳಿಸಿದ್ದನ್ನು ಬರೀ ಕಾಯುವ ಕಾಯುವುದರಲ್ಲೇ ಕಾಲ ಹರಣ ಮಾಡಿ ,ಕೂಡಲಸಂಗಮದೇವನನ್ನು ಮರೆತು ಸಾಗುವ ಶರಣರಿಗೆ ದಿವ್ಯ ವಾದ ಸಂದೇಶವನ್ನು ನೀಡಿ ಹೋದರು ನಮ್ಮ ಶರಣರು .
ಮಾಡುವ ನೀಡುವ ಗುಣ ಇದ್ದ ಮೇಲೆ ಅದನ್ನು ಕಾಯುತ್ತ ಕೂಡುವ ಗುಣ ಏಕೋ ಮರಳೆ ಎನ್ನುವ ಅರ್ಥ ಸಂದೇಶವನ್ನು ನಾನು ನನ್ನ ವ್ಯಕ್ತಿ ಗತದಲ್ಲಿ ಕಂಡದ್ದು .
ಒಟ್ಟಿನಲ್ಲಿ ಈ ಬಾಳು ಗಾಳಿಗಿಟ್ಟ ಹಣತೆಯಂತೆ ಯಾವಾಗ ಆರಿ ಹೋಗುವುದೋ ,ಸಂತೆಗೆ ಜನ ಸೇರಿ ಚೆಲ್ಲಾಪಿಲ್ಲಿಯಾಗಿ ಹೋಗುವಂತೆ ದ್ರವ್ಯದ ಸ್ಥಿತಿ ಅನಿಶ್ಚಿತ .ನಶ್ವರವಾದ ಇಂಥ ಬಾಳು ಸಂಪತ್ತು ನೆಚ್ಚಿ ಕೆಡದೆ ನಮ್ಮಸಂಗಮನಾಥನನ್ನು ಎಡಬಿಡದೆ ಪೂಜಿಸಿ ಸಂಸಾರ ಸಫಲವಾಗಿಸಿಕೊ. ಎನ್ನುವ ಅಣ್ಣ ಬಸವಣ್ಣ ನವರ ಈ ನುಡಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳೋಣ.
ಹೊನ್ನಿನೊಳಗೊಂದೆರೆಯ ,ಸೀರೆಯೊಳಗೊಂದಳೆಯ ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ ನಿಮ್ಮಾಣೆ!ನಿಮ್ಮ ಪುರಾತನರಾಣೆ
ಎಂತಹ ಅದ್ಭುತವಾದ ಮಾತನ್ನು ಬಸವಣ್ಣನವರು ಹೇಳಿದ್ದಾರೆ .
ನನ್ನಲ್ಲಿರುವ ಬಂಗಾರದಲ್ಲಿ ಒರೆಗೆ ತಿಕ್ಕುವಷ್ಟನ್ನಾಗಲಿ ,ಬಟ್ಟೆಯಲ್ಲಿ ಸೀರೆಯ ಒಂದು ಎಳೆಯನ್ನಾಗಲಿ ಇಂದಿಗಿರಲಿ ನಾಳೆಗಿರಲಿ ಎಂದು ತೆಗೆದಿಟ್ಟರೆ ನಿಮ್ಮಾಣೆ ನಿಮ್ಮ ಶಿವಶರಣರಾಣೆ .
ಎನ್ನುವ ಸತ್ಯಕ್ಕಳ ಕಾಯಕ ತತ್ವವೂ ನನಗಿಲ್ಲ ನೆನಪಾಗದೇ ಇರದು .ಒಬ್ಬ ಕೆಳಸ್ತರದ ಕಾಯಕ ಯೋಗಿ ನಿಷ್ಕಾಮ ಭಕ್ತೆ, ಬೀದಿಯಲ್ಲಿ ಹೊನ್ನು ,ವಸ್ತ್ರ, ಅದು ಯಾವುದೇ ಬಿದ್ದಿರಲಿ ಅದನ್ನು ಮುಟ್ಟಿದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಎಂದು ನಂಬಿ ನಡೆಯುವ ಸತ್ಯಕ್ಕ ನಮಗಿಲ್ಲಿ ಉದಾಹರಣೆಯಾಗಿ ನಿಲ್ಲುತ್ತಾಳೆ .
ಈಸಕ್ಕಿ ಆಸೆ ನಮಗೇಕೆ ? ಮಾರಯ್ಯ ಪ್ರೀಯ ಅದನ್ನು ಒಪ್ಪಲಾರ ಎನ್ನುವ ಆಯದ ಅಕ್ಕಿ ಕಾಯಕ ಜೀವಿಗಳು ನಮಗಿಲ್ಲಿ ಉದಾಹರಣೆಯಾಗಿ ನಿಲ್ಲುತ್ತಾರೆ .
ಈ ಸಂಸಾರ ಎನ್ನುವ ಅತೀ ಮೋಹ, ಅತಿ ಆಸೆಗೆ ಬಲಿಯಾಗಿ ಮರೆತು ಕೂಡದೇ ಭಕ್ತಿಯಿಂದ ಧೃಢ ವಾದ ಮನಸ್ಸಿನಿಂದ
ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ
ಸಂಸಾರ ಆಸ್ತಿ, ಅಂತಸ್ತಿನ ಸಂಪತ್ತಿನಲಿ, ದೇವರನ್ನು ಮರೆಯುವೆವು. ಮರೆಯದೇ ನಮ್ಮ ಕೂಡಲಸಂಗಮದೇವನನ್ನು ನೆನೆ ಪೂಜಿಸು.
ಶರಣರು ತಮ್ಮ ತಮ್ಮ ಕಾಯಕದಲ್ಲಿಯೇ ದೇವರನ್ನು ಕಂಡವರು .ಕಾಯವೇ ದೇವರು ಅಂಗವೇ ಲಿಂಗ. ದೇವನೊಬ್ಬ ನಾಮ ಹಲವು ಎಂದಿರುವ ಶರಣರು, ನಮ್ಮ ಕರಸ್ಥಲದಲ್ಲಿರುವ ಲಿಂಗವನ್ನು ಭಕ್ತಿಯಿಂದ ಪೂಜಿಸು ಎಂದಿರುವರು.
ಹೊನ್ನು ಹೆಣ್ಣು ಮಣ್ಣೆಂಬ ಕರ್ಮ ದ ಬಲೆಯಲ್ಲಿ ಸಿಲುಕಿ ವೃಥಾಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ
ಸಂಸಾರ ದ ಆಶಾ ಕರ್ಮದಲ್ಲಿ ಸಿಕ್ಕುಬಿದ್ದು ನರಕಕ್ಕೆ ಹೋಗುವ ಬ್ರಾಹ್ಮಣನಲ್ಲ ನಾನು ಎಂದಿರುವ
ಈ ಹೆಣ್ಣು ,ಮಣ್ಣು ,ಸಂಪತ್ತು ಯಾವುದು ನಿನ್ನದಲ್ಲ .ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ .ನಿನ್ನದೆಲ್ಲವೂ ಶೂನ್ಯ ಎನ್ನುವ ಅರಿವು ನಮಗಾದರೆ .ನಾವು ಯಾರಿಗೂ ಕೆಟ್ಟವರು ಆಗಲಾರೆವು .
ವಿಶ್ವವೇ ಒಂದು ಕುಟುಂಬ ಶರಣ ಮಾರ್ಗದ ಸಂದೇಶ ಪಮಗಿಂದು ಪೂರಕ ಎನ್ನುವ
ಬಸವಣ್ಣನವರ ಮಾತನ್ನು ಮನಗಾಣಬೇಕಾಗಿದೆ.
ಎನ್ನಂತರಂಗನೀವಯ್ಯ ,ಎನ್ನ ಬಹಿರಂಗ ನೀವಯ್ಯಾ ಎನ್ನರಿವು ನೀವಯ್ಯಾ ಎನ್ನ ಮರಹು ನೀವಯ್ಯಾ ಎನ್ನ ಭಕ್ತಿ ನೀವಯ್ಯಾ ಎನ್ನ ಯುಕ್ತಿ ನೀವಯ್ಯಾ ಎನ್ನಾಲಸ್ಯ ನೀವಯ್ಯಾ ಎನ್ನ ಪರವಶ ನೀವಯ್ಯಾ ಸಮುದ್ರವ ಹೊಕ್ಕು ಕಾಲು ತೊಳೆದಲ್ಲಿ ಕೊರತೆಯನರಸುವದೇ ಆ ಸಮುದ್ರ? ಎನ್ನ ಲೇಸು ಹೊಲ್ಲೆಯವೆಂಬುದ ನೀವೆ ಬಲ್ಲಿರಿ ಇದಕ್ಕೆ ನಿಮ್ಮ ಪಾದವೇ ಸಾಕ್ಷಿ ಎನ್ನ ಮನವೇ ಸಾಕ್ಷಿ ಕೂಡಲಸಂಗಮದೇವಾ !
ನನ್ನ ಅಂತರಂಗ ಬಹಿರಂಗದ ಅರಿವು ,ಮರೆವು ,ಭಕ್ತಿ ,ಯುಕ್ತಿ, ಆಲಸ್ಯ, ಪರವಶ ಎಲ್ಲದೂ ನೀವು ದೇವಾ.
ಸಮುದ್ರದಲ್ಲಿಳಿದೂ ಕಾಲು ತೊಳೆದರೆ ಎಷ್ಟು ನೀರು ಕಡಿಮೆಯಾಯಿತೆಂದು ಅದು ನೋಡುವದೇ?.
ನನ್ನಲ್ಲಿ ಒಳಿತಿನ ಕೊರತೆ ಎಷ್ಟಿದೆಯೆಂಬುದು ನಿಮಗೆ ಗೊತ್ತು. ಇದಕ್ಕೆ ನಿಮ್ಮ ಪಾದ ನನ್ನ ಹೃದಯವೇ ಸಾಕ್ಷಿ.
ಆಡಿಸುವಾ ,ಮರೆಸುವಾ ,ಮೆರೆಸುವಾ ಕೊಡುವಾ, ಕಳೆದುಕೊಳ್ಳುವಾ. ನನ್ನದೆಲ್ಲವೂ ಯಾವುದೂ ಇಲ್ಲ .ಅದೆಲ್ಲವೂ ನೀವು ಕೊಟ್ಟ ವರ ಭಗವಂತ.
ನನ್ನ ಅಂತರಂಗದ ದೇವ ನೀನೇ ನನ್ನ ಬಹಿರಂಗದ ದೇವ ನೀನೇ ಸಂಗಮನಾಥಾ .
ನನ್ನದೆಲ್ಲವೂ ನಿನಗೆ ಅರ್ಪಿತ ಎನ್ನುವ ಬಸವಣ್ಣನವರ ಶರಣ ಮಾರ್ಗದ ಸಂದೇಶವನ್ನು ಅರಿತುಕೊಂಡು ಸಾಗಿದರೆ ನಿಜದ ನಿಲುವು ನಮಗೆಲ್ಲರಿಗೂ ಆಗುವುದು .
ಒಟ್ಟಿನಲ್ಲಿ ಈ ಬಾಳು ಗಾಳಿಗಿಟ್ಟ ಹಣತೆಯಂತೆ ಯಾವಾಗ ಆರಿ ಹೋಗುವುದೋ, ಸಂತೆಗೆ ಜನ ಸೇರಿ ಚೆಲ್ಲಾಪಿಲ್ಲಿಯಾಗಿ ಹೋಗುವಂತೆ, ದ್ರವ್ಯದ ಸ್ಥಿತಿ ಅನಿಶ್ಚಿತ .ನಶ್ವರವಾದ ಇಂಥ ಬಾಳು ಸಂಪತ್ತು ನೆಚ್ಚಿ ,ಕೆಡದೆ ನಮ್ಮಸಂಗಮನಾಥನನ್ನು ಎಡಬಿಡದೆ ಪೂಜಿಸಿ ಸಂಸಾರ ಸಫಲವಾಗಿಸಿಕೊಳ್ಳಿ ಎನ್ನುವ ಅಣ್ಣ ಬಸವಣ್ಣ ನವರ ಈ ನುಡಿಯನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳೋಣ ಎಂದು ಹೇಳುತ್ತ ನನ್ನ ಈ ಲೇಖನ ಓದಿದ ತಮ್ಮೆಲ್ಲರಿಗೂ ಶರಣು ಶರಣಾರ್ಥಿಗಳು.
_______
–
-ಡಾ ಸಾಹಿತ್ರಿ ಮ ಕಮಲಾಪೂರ