ಕಾನನದ ದೇವಿ ಕಪ್ಪರ ಪಡಿಯಮ್ಮ
ಸಂಪ್ರದಾಯ ಸಂಸ್ಕೃತಿಗಳ ನೆಲೆವೀಡಾದ ಭಾರತದ ಪ್ರತಿಯೊಂದು ಗ್ರಾಮದಲ್ಲಿಯೂ ಒಬ್ಬ ದೇವಾನುದೇವತೆಯರು ಪ್ರಖ್ಯಾತಗೊಂಡು ಅವರು ಇಡೀ ಗ್ರಾಮಸ್ಥರಿಂದ ಆರಾಧನೆಗೊಳ್ಳುತ್ತಾ ಗ್ರಾಮದೇವತೆಗಳು ಎನಿಸಿಕೊಳ್ಳುತ್ತಾರೆ.
ಅಂತಹ ದೇವತೆಗಳು ಪವಾಡ ಪುರುಷರೋ,ಶಕ್ತಿವಂತರೋ ಆಗಿದ್ದರೆ ಅವರು ಗ್ರಾಮದ ಗಡಿಯನ್ನು, ಜಾತಿಮತಗಳ ಸೀಮೆಯನ್ನು ಮೀರಿ ಸರ್ವಜನರಿಂದ ಪೂಜೆ ಸ್ವೀಕರಿಸುತ್ತಾ ಸೀಮಾತೀತ ದೇವತೆಗಳಾಗಿ ಪ್ರಖ್ಯಾತಿ ಪಡೆಯುತ್ತಾರೆ.ಅಂತಹ ಸೀಮಾತೀತ ದೇವತೆಗಳಲ್ಲಿ ಪಡಿಯಮ್ಮ ಸಹ ಒಬ್ಬಳು. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲ್ಲೂಕಿನ ನಾಗರಾಳ ದ ಕಪ್ಪರ ಪಡಿಯಮ್ಮ ದೇವಿಯು ಸಹ ತನ್ನ ಗ್ರಾಮದ ಸೀಮೆಯನ್ನು ಮೀರಿ ಸುತ್ತಮುತ್ತಲಿನ ಗ್ರಾಮಗಳ ಜನರಿಂದ ಪೂಜೆಗೊಳ್ಳುತ್ತಾ ,ಹಬ್ಬ ಹರಿದಿನ ,ಜಾತ್ರೆಗಳನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಾ ಅಂತಹ ಸೀಮಾತೀತ, ಜ್ಯಾತ್ಯಾತೀತ ದೇವತೆಗಳಲ್ಲಿ ಒಬ್ಬಳು ಎನಿಸಿದ್ದಾಳೆ.
ನಾಗರಾಳದ ಎತ್ತರವಾದ ಬೆಟ್ಟಗಳ ನಡುವೆ ಸುತ್ತಮುತ್ತಲು ಮರಗಿಡಗಳಿಂದ ಕೂಡಿದ ಸುಂದರವಾದ ಪ್ರಕೃತಿಯ ಮಧ್ಯ ಪಡಿಯಮ್ಮ ನೆಲೆನಿಂತಿದ್ದಾಳೆ.ನೆಟ್ಟಗಿರುವ ಗುಡ್ಡವು ದೇವಿ ಪ್ರತಿಷ್ಟಾಪನೆಗೊಂಡ ಸ್ಥಳದಲ್ಲಿ ಮಾತ್ರ ಸ್ವಲ್ಪ ಬಾಗಿದ್ದು, ಎಷ್ಟೇ ಮಳೆ, ಬಿಸಿಲು, ಗಾಳಿಗಳಿದ್ದರೂ ದೇವಿಗೆ ತಟ್ಟದೆ ಪ್ರಕೃತಿಯೆ ಅವಳಿಗೆ ಮೇಲ್ಛಾವಣಿಯನ್ನು ಹಾಕಿದಂತಾಗಿದೆ.ಮಳೆಗಾಲದಲ್ಲಿ ಕಡಿದಾದ ಗುಡ್ಡದಿಂದ ಜೋರಾಗಿ ಜಲಪಾತದಂತೆಯೂ,ನಂತರ ಕೆಲದಿನಗಳವರೆಗೆ ಸಣ್ಣಗೆ ಜಿನುಗುವ ನೀರು ದೇವಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ಕಪ್ಪರ ಪಡಿಯಮ್ಮ ಮಹಾತಪಸ್ವಿ ದಿಗಂಬರೇಶ್ವರ ಸ್ವಾಮಿಗಳ ಆರಾಧ್ಯ ದೇವತೆ.ದಿಗಂಬರೇಶ್ವರ ಸ್ವಾಮಿಗಳು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾರ್ಕಂಡೇಯ ನದಿಯ ದಂಡೆಯ ಮೇಲಿರುವ ಯೋಗಿಕೊಳ್ಳ ದಲ್ಲಿ ತಮ್ಮ ಶಿಷ್ಯಂದಿರಾದ ನಿರ್ವಾಣೇಶ್ವರ ಮತ್ತು ಮಲ್ಲಿಕಾರ್ಜುನ ರೊಂದಿಗೆ ತಪಸ್ಸಿಗೆ ನಿಂತಾಗ ಅವರ ಧೃಡ ಮತ್ತು ನಿಶ್ಚಿತವಾದ ಭಕ್ತಿಗೆ ಲಕ್ಷ್ಮೀದೇವಿ ಪ್ರತ್ಯಕ್ಷಳಾಗುತ್ತಾಳೆ.ಅವರು ‘ತಾಯಿ ಆಶೀರ್ವಾದ ಮಾಡಿ’ ಎಂದು ಬೇಡಿದಾಗ ಲಕ್ಷ್ಮೀ ‘ ನಾನು ಸದಾ ನಿನ್ನ ಜೊತೆಯಲ್ಲಿಯೇ ಇರುತ್ತೆನೆ.ನೀನು ಎಲ್ಲಿಯೇ ಹೋದರು ನಿನ್ನ ಜೊತೆಯಲ್ಲಿಯೇ ಆಗಮಿಸುತ್ತೆನೆ ‘ ಎಂದು ಅಭಯ ನೀಡುತ್ತಾಳೆ.
ಯೋಗಿಕೊಳ್ಳ ದಿಂದ ಲೋಕಕಲ್ಯಾಣಕ್ಕೆಂದು ದಿಗಂಬರೇಶ್ವರರು ಲೋಕಸಂಚಾರ ಹೊರಟಾಗ ಕೊಟ್ಟ ಮಾತಿನಂತೆ ಲಕ್ಷ್ಮೀದೇವಿ ಅವರನ್ನು ಹಿಂಬಾಲಿಸುತ್ತಾಳೆ.ಆಧ್ಯಾತ್ಮ ಜೀವಿಗಳು, ಸರ್ವಸಂಗ ಪರಿತ್ಯಾಗಿಗಳು ಆದ ದಿಗಂಬರೇಶ್ವರರು ಚಂಚಲೆಯಾದ ಲಕ್ಷ್ಮೀ ತಮ್ಮನ್ನು ಹಿಂಬಾಲಿಸುವದು ಬೇಡವೆಂದು ನಿರಾಕರಿಸುತ್ತಾರೆ. ಹಠಹಿಡಿದ ಲಕ್ಷ್ಮೀದೇವಿ ‘ ನೀನು ಎಲ್ಲಿ ಕೂಡಸ್ತಿಯೊ ಅಲ್ಲಿಯೇ ಕೂಡ್ತಿನಿ’ ಎಂದು ಮಾತು ಕೊಟ್ಟು ಅವರೊಂದಿಗೆ ಲೋಕಸಂಚಾರ ಹೊರಡುತ್ತಾಳೆ.ಯೋಗಿಕೊಳ್ಳ ದಿಂದ ಹೊರಟ ಸ್ವಾಮೀಜಿಗಳು ಶಿವಪುರ, ಕುಂಚನೂರು,ಮರೆಗುದ್ದಿ ಮೂಲಕ ಸಿದ್ದಾಪುರಕ್ಕೆ ಬಂದು ನೆಲಸುತ್ತಾರೆ.ನಂತರ ಲೋಕಕಲ್ಯಾಣಕ್ಕಾಗಿ ತಪಸ್ಸು ಮಾಡಲು ಬಯಸಿ ನಿರ್ಜನವಾದ ನಾಗರಾಳ ಬೆಟ್ಟಕ್ಕೆ ತಪಸ್ಸಿಗೆ ತೆರಳುತ್ತಾರೆ. ಅಲ್ಲಿ ಹಸಿರಿನಿಂದ ಕಂಗೊಳಿಸುವ ಕಾಡು, ಕಡಿದಾದ ಬೆಟ್ಟ,ಹಕ್ಕಿಗಳ ಕಲರವ ಹೀಗೆ ರುದ್ರರಮಣೀಯ ಪ್ರದೇಶಕ್ಕೆ ಮಾರುಹೋದ ಸ್ವಾಮಿಗಳು ತಮ್ಮೊಂದಿಗೆ ಬಂದ ಲಕ್ಷ್ಮೀದೇವಿ ನೆಲೆಗೊಳ್ಳಲು ಇದೆ ಸೂಕ್ತ ಸ್ಥಳವೆಂದು ನಿರ್ಧರಿಸಿ,ಅಲ್ಲಿಯೇ ಅವಳನ್ನು ಶಾಶ್ವತವಾಗಿ ನೆಲೆಗೊಳಿಸುತ್ತಾರೆ.ಹಾಗೆ ದಿಗಂಬರೇಶ್ವರರಿಂದ ಪ್ರತಿಷ್ಠಾಪನೆಗೊಂಡ ದೇವತೆಯೆ ಪಡಿಯಮ್ಮ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಯೋಗಿಕೊಳ್ಳದ ಲಕ್ಷ್ಮೀದೇವಿಯೇ ನಾಗರಾಳ ಬೆಟ್ಟದಲ್ಲಿ ಪಡಿಯಮ್ಮಳಾಗಿ ನೆಲೆಗೊಂಡಿದ್ದಾಳೆ ಎಂಬುದು ಭಕ್ತರ ನಂಬಿಕೆ. ದಿಗಂಬರೇಶ್ವರರ ಮಠಗಳು ಇರುವಲೆಲ್ಲಾ ದೇವಿಯ ಗುಡಿಗಳಿದ್ದು ನಾಗರಾಳ, ಸಿದ್ದಾಪುರ ಹೊರತು ಪಡಿಸಿ ಇನ್ನಿತರ ಕಡೆಗಳಲ್ಲಿರುವ ದೇವಿಯನ್ನು ಲಕ್ಷ್ಮೀದೇವಿ ಎಂದು ಕರೆಯುವದು ಲಕ್ಷ್ಮೀದೇವಿಯೇ ಪಡಿಯಮ್ಮ ಎಂಬ ಭಕ್ತರ ನಂಬಿಕೆಗೆ ಪುಷ್ಠಿ ನೀಡುತ್ತದೆ.
ಅತ್ಯಂತ ಸುಂದರ ರಮಣೀಯ ಸ್ಥಳವು ತಾಯಿಗೆ ಸಿಕ್ಕಿದ್ದರಿಂದ ಸಂತೋಷಗೊಂಡ ದಿಗಂಬರೇಶ್ವರರು ‘ಎಂತಹ ಅಮೋಘ ಸ್ಥಳವನ್ನು ಪಡೆದೆಯವ್ವಾ ‘ ಎಂದು ಭಾವೋದ್ವೇಗದಿಂದ ಎತ್ತಿದ ಉದ್ಘಾರವೇ ಜನಪದರ ಬಾಯಲ್ಲಿ ‘ ಪಡೆದೆಯವ್ವಾ- ಪಡೆದವ್ವ- ಪಡೆಯವ್ವ ‘ ಆಗಿ ರೂಪಗೊಂಡಿರಬಹುದು.’ ಹಾಸು ಪಡೆಗಳ ಮಧ್ಯ ಇರುವುದರಿಂದ ಪಡೆಯಮ್ಮ ಎಂದು ಹೆಸರು ಪಡೆ ‘ ಎಂದು ಸ್ವಾಮಿಗಳು ಹೇಳಿದರೆಂದು ಭಕ್ತರು ಹೇಳುತ್ತಾರೆ.ಜೊತೆಗೆ ಮಾಂಸಾಹಾರಿಗಳಾದವರು ದೇವಿಗೆ ನೈವೇದ್ಯವನ್ನು ಕೊಡದೆ ( ದೇವಿಗೆ ಪ್ರಾಣಿಬಲಿ ಕೊಟ್ಟರು ಅದನ್ನು ಪರಸನ ಕಟ್ಟೆ ಹತ್ತಿರ ನೆರವೆರಿಸುತ್ತಾರೆ ಹೊರತು ದೇವಿ ಸನ್ನಿಧಿಯಲ್ಲಿ ನೈವೇದ್ಯ ಸಲ್ಲಿಸುವದಿಲ್ಲ) ನೈವೇದ್ಯ ಮಾಡಲು ಬೇಕಾದ ಪದಾರ್ಥಗಳನ್ನು ಪಡಿ( ಅಕ್ಕಿ,ಬೇಳೆ,ತರಕಾರಿ ಮುಂತಾದವುಗಳ ರೂಪದಲ್ಲಿ ಕೊಡುವ ಭತ್ಯೆ) ಕೊಟ್ಟಿದ್ದರಿಂದ ದೇವಿಗೆ ಪಡಿಯಮ್ಮ ಎಂಬ ಹೆಸರು ಬಂದಿರುವ ಸಾಧ್ಯತೆಗಳು ಇವೆ.ಇಲ್ಲಿ ಒಂದು ಕಾಲದಲ್ಲಿ ಕಪ್ಪರ ಮರಗಳು ಹೇರಳವಾಗಿದ್ದವು ಎಂದು ಹೇಳುತ್ತಾರೆ. ಹಾಗಾಗಿ ಕಪ್ಪರ ಮರಗಳಿದ್ದಲ್ಲಿ ನೆಲಸಿದ ದೇವಿ ಕಪ್ಪರ ಪಡಿಯಮ್ಮ ಆಗಿದ್ದಾಳೆ.
ಮೊದಲು ಕೇವಲ ಆಯತಾಕಾರದ ಪಡಿಯ ರೂಪದಲ್ಲಿದ್ದ ದೇವಿಗೆ, ಈಗ ಅಲಂಕಾರ ಮಾಡುವುದಕ್ಕಾಗಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.ಹಸಿರು ಸೀರೆ, ಖಣ,ಬಳೆಗಳೊಂದಿಗೆ ಭಕ್ತರಿಂದ ಹರಕೆಯ ರೂಪದಲ್ಲಿ ಬಂದ ಬೆಳ್ಳಿಯ ಕಣ್ಣಬಟ್ಟು, ಕೋರೆಮೀಸೆ,ಬೆಳ್ಳಿಯ ಹಸ್ತ- ಪಾದಗಳು, ಬಂಗಾರದ ನತ್ತು,ಕಾಲುಂಗರ, ತಾಳಿ ಗಳಿಂದ ಅಲಂಕಾರಗೊಂಡು ಪಡಿಯ ರೂಪದ ಪಡಿಯಮ್ಮ ಈಗ ಮೂರ್ತರೂಪ ತಾಳಿದ್ದಾಳೆ.ನಿತ್ಯ ದೇವಿಗೆ ಕೃಷ್ಣಾನದಿಯ ನೀರಿನಿಂದ ಅಭಿಷೇಕ,ಪ್ರತಿ ಅಮವಾಸ್ಯೆಯಂದು ನಿರ್ದಿಷ್ಟ ಮನೆತನದಿಂದ ರುದ್ರಾಭಿಷೇಕ ನಡೆಯುತ್ತದೆ. ಪಡಿಯಮ್ಮನ ಹತ್ತಿರದ ಎತ್ತರವಾದ ಬಂಡೆಯಲ್ಲಿ ದಿಗಂಬರೇಶ್ವರರ ಮನೆದೇವರಾದ ಕಂಬೋಗಿ ಹನಮಂತದೇವರ ಮೂರ್ತಿ ಮತ್ತು ಹತ್ತಿರವೇ ಪಡಿಯಲ್ಲಿ ರೂಪಗೊಂಡ ಹೊಳೆಗಂಗವ್ವ ನೆಲೆಸಿದ್ದಾರೆ.
ದೇವಿ ನೆಲಸಿರುವ ಬೆಟ್ಟದ ಕೆಳಗಡೆ ದೇವಿಯ ಪಾದಗಟ್ಟೆ ಇದ್ದು ,ಇಲ್ಲಿ ಎತ್ತರವಾದ ಕಟ್ಟೆಯ ಮೇಲೆ ದೇವಿಯ ಪಾದಗಳನ್ನು ಹಾಗೂ ಆಯತಾಕಾರದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ,ಇಲ್ಲಿಯೂ ನಿತ್ಯ ಪೂಜೆ ನಡೆಯುತ್ತದೆ. ದೇವಿಗೆ ದೀಡ್ ನಮಸ್ಕಾರ (ದೀರ್ಘದಂಡ ನಮಸ್ಕಾರ) ಹಾಕುವವರು ಇಲ್ಲಿಂದಲೇ ದೀಡ್ ನಮಸ್ಕಾರ ಪ್ರಾರಂಭಿಸುತ್ತಾರೆ.ದೇವಿಗೆ ಪ್ರಾಣಿಬಲಿ ಕೊಡುವದು ಸಹ ಇಲ್ಲಿಯೇ.
ಪಾದಗಟ್ಟಿ ಹತ್ತಿರವೇ ‘ಪರಸನ ಕಟ್ಟೆ’ ಎಂದು ಕರೆಸಿಕೊಳ್ಳುವ ಪರಸಪ್ಪ ಎಂಬ ವ್ಯಕ್ತಿಯ ಸಮಾಧಿ ಇದೆ.ದಿಗಂಬರೇಶ್ವರ ಸ್ವಾಮಿಗಳು ದೇವಿಯ ದರ್ಶನಕ್ಕೆ ಹೊರಟಾಗ ಪರಸಪ್ಪ ಅವರ ಕುದುರೆ ಹಿಡಿದು ತೆರಳುತ್ತಿದ್ದ.ನಿತ್ಯ ಪರಸಪ್ಪ ಹಾಗೂ ಕುದುರೆಯನ್ನು ಬೆಟ್ಟದ ಕೆಳಗೆ ಬಿಟ್ಟು ಸ್ವಾಮೀಜಿಗಳು ಏಕಾಂಗಿಯಾಗಿ ದೇವಿಯ ದರ್ಶನಕ್ಕೆ ತೆರಳುತ್ತಿದ್ದರು.ಇದರಿಂದ ಕುತೂಹಲಗೊಂಡ ಪರಸಪ್ಪ ಏಕಾಂಗಿಯಾಗಿ ತೆರಳುವ ಬಗ್ಗೆ ಸ್ವಾಮೀಜಿಗಳನ್ನು ಪ್ರಶ್ನಿಸಿದಾಗ ತಾವು ತಾಯಿಯೊಡನೆ ಮಾತನಾಡುವ ವಿಷಯವನ್ನು ಪರಸಪ್ಪನಿಗೆ ತಿಳಿಸುತ್ತಾರೆ.ತಾನು ಸಹ ದೇವಿಯನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಬಯಸಿದ ತನ್ನನ್ನು ತಾಯಿಯ ಹತ್ತಿರ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಾನೆ.ಕೊನೆಗೆ ಅವನ ಹಠಕ್ಕೆ ಮಣಿದ ಸ್ವಾಮೀಜಿ ಅವನನ್ನು ದೇವಿಯ ಹತ್ತಿರ ಕರೆದುಕೊಂಡು ಹೋಗುತ್ತಾರೆ. ತನ್ನ ಅನುಮತಿ ಇಲ್ಲದೆ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದುದಕ್ಕೆ ಕೆರಳಿ ಕೆಂಡವಾದ ದೇವಿ ಕರಾಳ ಸರ್ಪದ ರೂಪದಲ್ಲಿ ದರ್ಶನ ನೀಡುತ್ತಾಳೆ. ಇದರಿಂದ ಗಾಬರಿಗೊಂಡು ಮೂರ್ಛೆ ಹೋದ ಪರಸಪ್ಪ ಬೆಟ್ಟದಿಂದ ಉರುಳಿ ಬಿದ್ದು ಜೀವ ಬಿಡುತ್ತಾನೆ. ಹಾಗೆ ಆತ ಜೀವ ಬಿಟ್ಟ ಸ್ಥಳವೆ ಪರಸನ ಕಟ್ಟೆ.
ಪಡಿಯಮ್ಮ ಮೇಲ್ವರ್ಗ,ಕೆಳವರ್ಗ,ಮೇಲ್ಜಾತಿ,ಕೆಳಜಾತಿ ಎಂಬ ಬೇಧವಿಲ್ಲದೆ ಸರ್ವಜನರಿಂದಲೂ ಆರಾಧನೆಗೆ ಒಳಗಾಗಿದ್ದಾಳೆ. ದಿಗಂಬರೇಶ್ವರರ ಮುಸ್ಲಿಂ ಶೈಲಿಯ ದೇವಾಲಯ,ಮರಾಠಾ ಸ್ವಾಮಿಗಳು, ಅವರಿಗೆ ಲಿಂಗಾಯತ ಸ್ವಾಮಿಗಳಿಂದ ದೀಕ್ಷೆ, ಹಾಲುಮತದವರಿಂದ ಪೂಜೆ, ಭೋವಿಜನಾಂಗ ದವರಿಂದ ರಥದ ಉಸ್ತುವಾರಿ, ಮಾರವಾಡಿಗಳಿಂದ ರಥದ ಎಣ್ಣೆ, ತಳವಾರರ ಜಾಗಟೆ,ಗೌಡರ ಕುದುರೆ, ಲಿಂಗಾಯತರ ಮನೆಯಲ್ಲಿ ವಾಸ,ಬೇಡ,ಬಂಜಾರಾ ಜನಾಂಗದವರಿಂದ ಬ್ಯಾಟಿ ಹೀಗೆ ಸರ್ವಜನರಿಂದ ಆರಾಧನೆ ಪಡೆಯುವ ಮೂಲಕ ಜ್ಯಾತ್ಯಾತೀತ ದೇವತೆಯಾಗಿದ್ದಾಳೆ.ಆಕೆಯ ಜಾತ್ರೆ, ಉತ್ಸವಗಳೆಲ್ಲ ಭಕ್ತನಾದ ದಿಗಂಬರೇಶ್ವರರ ಮೂಲಕ ನಡೆಯುತ್ತಿದ್ದು ಅವೆಲ್ಲ ಭಾವೈಕ್ಯತೆಯ ಪ್ರತಿರೂಪವಾಗಿ ತೋರುತ್ತವೆ.
ಸಮಾಜದ ಜನಕ್ಕೆಲ್ಲ ಸಂಪತ್ತಿನ ಸಮಾನ ಹಂಚಿಕೆ ಆಗಬೇಕೆಂದು ಹೋರಾಟ ಮಾಡಿದ ಸಿಂದೂರ ಲಕ್ಷ್ಮಣ ಸಹ ಪಡಿಯಮ್ಮನ ಪರಮ ಭಕ್ತ.ಅವನನ್ನು ನೆರವಾಗಿ ಎದುರಿಸದ ಬ್ರಿಟಿಷ್ ರು ತೆಗ್ಗಿ ಗ್ರಾಮಸ್ಥರ ಮೂಲಕ ದೇವಿಯ ಹರಕೆಯ ಊಟಕ್ಕೆಂದು ಆತನನ್ನು ಕರೆಯಿಸಿ ತಮ್ಮ ಕುತಂತ್ರದಿಂದ ಸಿಂದೂರ ಲಕ್ಷ್ಮಣನ ಬಲಿ ಪಡೆದದ್ದು ಇದೆ ಪಡಿಯಮ್ಮನ ಸನ್ನಿಧಿಯಲ್ಲಿ. ನಂತರ ಬೀಳಗಿ ಕಛೇರಿ ಹತ್ತಿರ ಅವನ ಅಂತ್ಯಕ್ರಿಯೆ ನೆರವೇರಿಸುತ್ತಾರೆ.
ಪಡಿಯಮ್ಮ ಗ್ರಾಮದೇವತೆ ಆಗಿರುವುದರಿಂದ ಅವಳ ಸೀಮೆಯಲ್ಲಿ ಯಾವುದೇ ಶುಭಕಾರ್ಯಗಳಾದರು ದೇವಿಗೆ ಮೊದಲು ಪೂಜೆ ಸಲ್ಲಿಸಬೇಕು. ಮನೆಯಲ್ಲಿ ಶುಭಕಾರ್ಯಗಳಾದರೆ ಭಕ್ತರು ಪೂಜೆ ,ನೈವೇದ್ಯ,ದೀಡ್ ನಮಸ್ಕಾರ, ಹರಕೆಯ ಮೂಲಕ ಆಕೆಯನ್ನು ಆರಾಧಿಸುತ್ತಾರೆ. ಹೊಲಗಳಲ್ಲಿ ಉತ್ತುಬಿತ್ತನೆ ನಡೆದಾಗ ಮೊದಲು ಅವಳನ್ನು ಪೂಜಿಸಿದ ನಂತರವೇ ತಮ್ಮ ಕಾರ್ಯ ಪ್ರಾರಂಭಿಸುತ್ತಾರೆ.ಹುಟ್ಟಿದ ಮಗುವಿಗೆ ಪಡಿಯಮ್ಮ, ಪಡಿಯಪ್ಪ ಎಂಬ ಹೆಸರಿಡುವ ಮೂಲಕ ತಮ್ಮ ಭಕ್ತಿ ಮೆರೆಯತ್ತಾರೆ.
ಡಾ.ರಾಜೇಶ್ವರಿ ಶೀಲವಂತ
ಬೀಳಗಿ