ನಾ ಓದಿದ ಪುಸ್ತಕ
ಸೋತು ಗೆದ್ದವಳು
(ಸಾಮಾಜಿಕ ಕಾದಂಬರಿ)
ಕೃತಿಕಾರರು: ತ್ರಿವೇಣಿ
ನಿಜವಾಗಲೂ ಈ ಕೃತಿಯ ಬಗ್ಗೆ ಬರೆಯಲು ಕೈ ಸಾಗುತ್ತಿಲ್ಲ, ಮನಸ್ಸು ಬರುತ್ತಿಲ್ಲ. ಬರೆಯಲೇಬೇಕೆಂದು ನಿರ್ಧಸಿದರೂ ಭಾವನೆಗೆ ಹತ್ತಿದ ಬೆಂಕಿ ಕ್ಷಣ ಕ್ಷಣಕ್ಕೂ ಕೈ, ಮನಸನ್ನು ಬಿಸಿಯಾಗಿಸುತ್ತಿದೆ.
ಹೌದು ಈ ಪ್ರಾಯ ಬಹಳ ಕೆಟ್ಟದ್ದು, ಈ ಐಹಿಕ ಬದುಕಿನಲ್ಲಿ ದೇಹ ವಾಂಛೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದೇ ಬಹುದೊಡ್ಡ ಸಾಧನೆ. ಒಂದು ಹೆಣ್ಣಿಗೆ/ಗಂಡಿಗೆ ಜೀವಮಾನವಿಡೀ ಗಂಡಿನ/ಹೆಣ್ಣಿನ ಸಾಂಗತ್ಯ ಇಲ್ಲದೇ ಹೋದಲ್ಲಿ, ಅಥವಾ ಬೇಕೆಂದಾಗ ಸಿಗುವ ಗಂಡ/ಹೆಂಡತಿ
ಎನಿಸಿಕೊಂಡವನ/ಳ ಗಂಡಿನ/ಹೆಣ್ಣಿನ ಸಾಂಗತ್ಯ ಯಥೇಚ್ಛವಾಗಿ ಸಿಕ್ಕಲ್ಲಿ ಮನಸು, ದೇಹ ಎರಡೂ ಪ್ರಶಾಂತವಾಗಿರುತ್ತವೆ. ಆದರೆ ತಾರುಣ್ಯದಲ್ಲಿ ಎನ್ನುವುದಕ್ಕಿಂತ ಮದುವೆಯಾದ ಹೊಸತರಲ್ಲಿ ಏಂದಿಗೂ ದಂಪತಿಗಳನ್ನು ದೂರವಿಡಲು ಪ್ರಯತ್ನಿಸಬಾರದೆನಿಸುತ್ತದೆ. ಮದುವೆಯಾಗಿ ಹದಿನೈದು ದಿನಕ್ಕೋ, ತಿಂಗಳಿಗೋ, ಎರಡು ತಿಂಗಳಿಗೂ ದಂಪತಿಗಳು ವರ್ಷಗಟ್ಟಲೇ ಅಗಲಿ ಇರುವ ಸಂದರ್ಭ ಮಾತ್ರ ಯಾವ ಜೋಡಿಗಳಿಗೂ ಬರಬಾರದು.
ಏನಪ್ಪಾ ಇದು ದೈಹಿಕ ಕಾಮನೆಗೆ ಇಷ್ಟೊಂದು ಬೆಲೆ ಕೊಡಬೇಕೇ? ಆಗದಿದ್ದರೇನು ಮಹಾ ಆದೀತು ಎನ್ನುವವರು ತ್ರಿವೇಣಿಯವರ ಸಾಮಾಜಿಕ ಕಾದಂಬರಿ “ಸೋತು ಗೆದ್ದವಳು” ಓದಬೇಕು.
ಅದರಲ್ಲೂ ಗಂಡನ ಧ್ಯಾನ ಮಾಡುತ್ತಲೇ ವಿರಹ ವೇದನೆಯನ್ನು ಅನುಭವಿಸುತ್ತ, ತಮ್ಮೆಲ್ಲಾ ಕಾಮನೆಯನ್ನು ಹತೋಟಿಯಲ್ಲಿಟ್ಟುಕೊಂಡು ಪರಿತಪಿಸುತ್ತಿರುವ ಭಾರತಿ ಅಂತಹ ಸೌಂದರ್ಯದ ಗಣಿ (ನಾಯಕಿ), ಚಂದು (ಅತ್ತೆಯ ತಮ್ಮ) ಅಂತಹ ದುಷ್ಟ, ರಾಕ್ಷಸ ಪ್ರೇಮಿ ಏನಾದರೂ ಹತ್ತಿರವಾದರೆ ಅಲ್ಲಿಗೆ ಅವರ ಮನಸು ಜಾರಿದಂತೆಯೇ.
ಹೀಗೆ ಮದುವೆಯಾದ ಹೊಸತರಲ್ಲೇ ಎಲ್ಲ ವೈಭೋಗವನ್ನು ಮನಸಾರೆ ಸವಿದ ದಂಪತಿಗಳು ಆನಂದ ಮತ್ತು ಭಾರತಿ. ಭಾರತಿಯನ್ನು ಮೊದಲ ಬಾರಿ ಇರಿಯುವ ಕಣ್ಣಿನಿಂದ ನೋಡಿದ ಚಂದು(ಆನಂದನ ಸೋದರ ಮಾವ)ವಿನ ಗುಣವನ್ನು ಮದುವೆಯ ದಿನವೇ ಪತ್ತೆ ಹಚ್ಚಿದ ಭಾರತಿ ಅವನ ಕಣ್ಣಿನಿಂದ ತಪ್ಪಿಸಿಕೊಂಡೇ ಇರುತ್ತಿದ್ದಳು.
ಅತ್ಯಂತ ಮಧುರವಾದ ದಾಂಪತ್ಯದ ರಸ ಸವಿ ಘಳಿಗೆಯನ್ನು ಸವಿಯುತ್ತಿದ್ದ ಆನಂದ ಭಾರತಿಗೆ ವಿಯೋಗ ಉಂಟಾದದ್ದು ಆನಂದನು ಪರದೇಶಕ್ಕೆ ಓದಲು ಹೊರಟು ನಿಂತಾಗ. ಅದೂ ಎರಡು ವರ್ಷದ ಅವಧಿಗೆ. ಆಗ ತಾನೇ ಗಂಡನ ತೋಳಲ್ಲಿ ಕಳೆದು ಮೈ ಮರೆಯುತ್ತ ಸುಖವಾಗಿದ್ದ ಭಾರತಿಗೆ ಇದು ಅಸಖ್ಯವಾಗಿತ್ತು. ಆನಂದನೂ ಈ ವಿಯೋಗದ ವಿರಹ ವೇದನೆಯಿಂದೇನು ಹೊರತಾಗಿರಲಿಲ್ಲ.
ಈ ದಾಂಪತ್ಯದ ಸಿಹಿ ಅನುಭವ ಮತ್ತು ವಿಯೋಗದ ಘಳಿಗೆಯ ವರ್ಣನೆ, ವಿವರಣೆಯನ್ನು ಕಾದಂಬರಿ ಓದಿಯೇ ಓದುಗ ಓದಿನ ಸ್ವಾದವನ್ನು ಅನುಭವಿಸಬೇಕು.
ಭಾರತಿಯ ಮುಖದಿಂದ ಹಿಡಿದ ಪಾದದವರೆಗಿನ ಅವಳ ರೂಪವನ್ನು ಕಣ್ಣಲ್ಲಿ ಉಳಿಯುವಂತೆ, ಹೃದಯದಲ್ಲಿ ಹರಿಯುವಂತೆ ತ್ರಿವೇಣಿಯವರು ಬಣ್ಣಿಸಿದ್ದಾರೆ
***
ಹೀಗೆ ಬೇಡವಾಗಿದ್ದರೂ ಗಂಡನನ್ನು ಬಿಳ್ಕೊಟ್ಟು ಪ್ರತಿ ಕ್ಷಣವನ್ನು ಯುಗವಾಗಿಸಿಕೊಂಡು, ಕಾಲವನ್ನು ಒತ್ತಾಯವಾಗಿ ದೂಡುತ್ತಿದ್ದ ಭಾರತಿಯ ನರಳಾಟ, ಹಾಸಿಗೆಯಲ್ಲಿನ ಹೊರಳಾಟ ಯಾರಿಗೂ ಬೇಡ ಎಂದು ಓದುಗನಿಗೆ ಅನಿಸುತ್ತದೆ.
ಆನಂದನ ಕೀಟಲೆ, ಮಧುರ ಮಾತು, ಪ್ರೇಮದ ಸ್ಪರ್ಶ, ತಾಸು ಗಟ್ಟಲೇ ಅಲಂಕರಿಸಿಕೊಂಡ ಅಲಂಕಾರವನ್ನು ನಿಮಿಷಗಳಲ್ಲಿ ಇಲ್ಲವಾಗಿಸುತ್ತಿದ್ದ ಆನಂದನ ಸಾಂಗತ್ಯ ನೆನೆದು ಸುಸ್ತಾಗಿ ಯಾವಾಗ ಪತಿಯಲ್ಲಿ ಲೀನವಾಗುತ್ತೇನೋ ಎನ್ನುವಷ್ಟು ನರಳುತ್ತಾಳೆ. ಹೀಗೆ ತವರಿಗೂ ಹೋಗಿ ಬಂದು, ಸಣಕಲಾಗಿ ಯಾವುದರಲ್ಲೂ ಆಸಕ್ತಿಯಿಲ್ಲದೆ ದಿನ ದೂಡುತ್ತಾಳೆ. ಅತ್ತೆ ವೇದಮ್ಮ, ಮಾವ ರಂಗಣ್ಣನವರು ಮಗಳಿಗಿಂತಲೂ ಹೆಚ್ಚು ಅಕ್ಕರೆಯಿಂದ ಕಾಣುತ್ತಿದ್ದುದು, ಕೊಂಚ ಸಮಾಧಾನವಿದ್ದರೂ ಗಂಡನ ಅಗಲಿಕೆ ಅದರಲ್ಲೂ ಹೊಸ ದಾಂಪತ್ಯ ಪ್ರಾರಂಭವಾದ ಕೆಲವೇ ದಿನಗಳಲ್ಲಿ ತಡೆಯಲಾರದ್ದಾಗಿತ್ತು.
ಹೀಗೆ ವರ್ಷ ಕಳೆದು, ಮತ್ತೊಂದು ವರ್ಷ ಕಳೆಯುವ ತವಕದಲ್ಲಿದ್ದಾಗಲೇ ನೋಡಿ, ಕಾಮಿ, ರಾಕ್ಷಸ ಪ್ರೇಮಿ ಚಂದುವಿನ ಆಗಮನವಾಗಿದ್ದು. ಹೇಗಾದರೂ ಭಾರತಿಯನ್ನು ತನ್ನ ತೆಕ್ಕೆಗೆ ಪಡೆಯಬೇಕು, ತನ್ನವಳನ್ನಾಗಿಸಿಕೊಳ್ಳಬೇಕೆಂದು ಪಣ ತೊಟ್ಟು ಬಂದವನಂತೆ, ಕಾಡಿ, ಬೇಡಿ, ಪೀಡಿಸಿ, ಮರಳು ಮಾಡಿ ಒಂದು ಘಳಿಗೆಯಲ್ಲಿ ತನ್ನ ಕಾರ್ಯ ಸಾಧಿಸಿಯೇ ಬಿಡುತ್ತಾನೆ. ಪ್ರಕೃತಿಯ ನಿಯಮದಂತೆ ಮೊದಲೇ ವಿರಹ ವೇದನೆಯಲ್ಲಿದ್ದ ಭಾರತಿಯೂ ಮೈ ಮರೆತು ಶರಣಾಗಿಯೇ ಬಿಡುತ್ತಾಳೆ.
ಯಾವುದು ಆಗಬಾರದು, ಆಗಬಾರದು ಎಂದು ಓದುಗ ಮನಸಲ್ಲಿ ಅಂದುಕೊಳ್ಳುವ ಹೊತ್ತಿಗೆ ಪಾಪಿ ಚಂದುವಿನಿಂದ ಭಾರತಿಯನ್ನ ಅಪವಿತ್ರ ಮಾಡುವ ಕೆಲಸ ಅಗಿಯೇ ಬಿಡುತ್ತದೆ.
ಸ್ಫುರದ್ರೂಪಿ ಚಂದು ಬೇರೆಯವರನ್ನು ಮದುವೆ ಮಾಡಿಕೊಳ್ಳುವ ಅವಕಾಶವಿದ್ದರೂ ಮಾಡಿಕೊಳ್ಳದೆ, ಸುಖೀ ದಾಂಪತ್ಯಕ್ಕೆ ಮುಳ್ಳಾಗಿ ಅಡ್ಡ ಬಂದು ಬಿಡುತ್ತಾನೆ. ಈ ಘಟನೆಯಿಂದ ಭಾರತಿ ಹೇಗೆ ವಿಲ ವಿಲ ಒದ್ದಾಡಿ ಪರಿತಪಿಸುತ್ತಳೋ, ವ್ಯಥೆ ಪಡುತ್ತಾಳೋ, ಅಷ್ಟೇ ವೇದನೆ, ವ್ಯಥೆಯನ್ನು ಓದುಗನೂ ಅನುಭವಿಸುತ್ತಾನೆ.
ವಿರಹ ವೇದನೆಯೇ ಈ ವೇದನೆಗಿಂತ ಸಾವಿರ ಪಾಲು ಉತ್ತಮ ಎನಿಸುವುದು, ಈಗಲೇ. ಹೀಗೆ ಚಂದು ಭಾರತಿಯನ್ನು ಕರೆದುಕೊಂಡು ಓಡಿ ಹೋಗಲೂ ತಯಾರಿಯಾಗುತ್ತಾನೆ. ಅವಳೂ ಈ ಮೈಲಿಗೆ ದೇಹವನ್ನು ಮರಳಿ ಪವಿತ್ರವಾದ ಗಂಡನಿಗೆ ಒಪ್ಪಿಸಲು ಮನಸು ಬಾರದೆ ಹೊರಡಲು ಸಿದ್ಧಳಾಗಿ ಕಡೆಯಲ್ಲಿ ಗಂಡನಿಂದ ಕ್ಷಮಾಪಣೆ ಪಡೆದು ಮನೆ ಬಿಟ್ಟು ಹೋಗಲು ನಿರ್ಧರಿಸುತ್ತಾಳೆ, ಆದರೆ ಚಂದುವಿನೊಂದಿಗೆ ಹೋಗಲು ಒಪ್ಪುವುದಿಲ್ಲ. ಇಲ್ಲೇ ಕಥೆಯು ತಿರುವು ಪಡೆದುಕೊಳ್ಳುತ್ತದೆ. ಮರುದಿನ ಮಾತಿನಂತೆ ಬರದ ಭಾರತಿಯನ್ನು ತಬ್ಬಿ ಪ್ರಶ್ನಿಸುತ್ತಿರಾವಾಗಲೇ ಅತ್ತೆ ವೇದಮ್ಮನಿಗೆ ಇವರಿಬ್ಬರ ಅನೈತಿಕ ಸಂಬಂಧ ಕಣ್ಣಿಗೆ ಬೀಳುತ್ತದೆ. ನಂತರದಲ್ಲಿ ಮಗಳೆಂದು ಎಷ್ಟು ಪ್ರೇಮಿಸುತ್ತಿದ್ದರೋ, ಅದಕ್ಕಿಂತ ನೂರುಪಟ್ಟು ಹೆಚ್ಚು ದ್ವೇಷಿಸಲು ಪ್ರಾರಂಭಿಸುತ್ತಾರೆ. ರಂಗಣ್ಣನವರೂ ಬಹಳ ನೋವು ಅನುಭವಿಸುತ್ತಾರೆ.
ತವರಿಗೆ ವಿಷಯ ತಿಳಿದು ಬಂದ ತಂದೆ ಮಗಳದೇ ತಪ್ಪೆಂದು ತಿಳಿದಾಗ ಅವರೂ ಭಾರತಿಯನ್ನು ಹೀಗಳೆದು ಹೊರಟು ಹೋಗುತ್ತರೆ.
ಇತ್ತ ಆನಂದ ಭಾರತಿಯ ಧ್ಯಾನದಲ್ಲೇ ಮರಳಿ ಬರುತ್ತಾನೆ. ಬಂದು ನೋಡಿದರೆ, ಮೊದಲಿನ ಸೌಂದರ್ಯದ ಶಿಖರದಂತಿದ್ದ ಭಾರತಿಯೆಲ್ಲಿ, ಪಶ್ಚಾತ್ತಾಪದಲ್ಲಿ ನೊಂದು ಬೆಂದು ಅಸ್ಥಿ ಪಂಜರದಂತಾಗಿದ್ದ ತನ್ನ ಅರಗಿಣಿ ಈಗಿನ ಭಾರತಿಯೆಲ್ಲಿ. ಎಷ್ಟೊಂದು ವ್ಯತ್ಯಾಸ, ಏಕೆ ಎಂದು ವ್ಯತ್ಯಾಸ ಎಂದು ಆನಂದ ಮರುಗುತ್ತಾನೆ.
ತಾಯಿಯಿಂದ ವಿಷಯ ತಿಳಿದು ಭಾರತಿಯನ್ನು ಪ್ರಶ್ನಿಸಲು, ಅವಳು ನಿಮ್ಮ ಕ್ಷಮೆಗಾಗಿ ಕಾಯುತ್ತಿದ್ದೇನೆ, ಸಿಕ್ಕ ತಕ್ಷಣವೇ ಹೊರಡುತ್ತೇನೆ. ಕ್ಷಮಿಸಿ ಅನುಮತಿ ಕೊಡಿ ಹೊರಡಬಹುದೇ? ಎಂದು ಪಶ್ಚಾತ್ತಾಪದಿಂದ ಕೇಳುತ್ತಾಳೆ.
“ನನಗೆ ಯೋಚಿಸಲು ಅವಕಾಶ ಕೊಡು”, ಎನ್ನುತ್ತಾ ಹೊರಗೆ ಬಂದ ಆನಂದ ತಾನು ಲಂಡನ್ನಿನಲ್ಲಿ ಇದೇ ವಿರಹ ವೇದನೆಯಿಂದ ಬಳಲಿ, ಪ್ರಕೃತಿಯ ಸಹಜ ಕಾಮ ಬಯಕೆಯಿಂದ ತಪ್ಪಿಸಿಕೊಳ್ಳಲಾಗದೆ ಪರಸ್ತ್ರೀಯೋಡನೆ ಬೆಸೆದುಕೊಂಡದ್ದನ್ನು ನೆನಪಿಸಿಕೊಳ್ಳುತ್ತಾನೆ. ನಾನು ಗಂಡು ಎಂಬ ಅಹಂ ಸುಳಿದರೂ, ಗಂಡಾದರೇನು, ಹೆಣ್ಣಾದರೇನು ಪಾವಿತ್ರ್ಯತೆ ಇಬ್ಬರಿಗೂ ಒಂದೆ, ನೈತಿಕತೆಯ ವಿಷಯ ಬಂದಾಗ ಇಬ್ಬರೂ ಸಮಾನರೆ, ನಾನು ಮಾಡಿದ್ದು ಸರಿಯಾದರೆ, ಅವಳು ಮಾಡಿದ್ದರಲ್ಲಿ ತಪ್ಪಿಲ್ಲ ! ದೇಹದ ಬಯಕೆಗೆ ನಾನ್ಹೇಗೆ ಬಲಿಯಾದೆನೋ, ಅವಳೂ ಅಂತೆಯೇ ಬಲಿಯಾಗಿದ್ದಾಳೆ.. ಅವಳನ್ನು ಕ್ಷಮಿಸುವ ಹಕ್ಕೂ ನನಗಿಲ್ಲ, ಇಬ್ಬರ ತಪ್ಪೂ ಒಂದೇ ಆಗಿದೆ. ಒಬ್ಬರಿಗೊಬ್ಬರು ಕ್ಷಮಿಸಿಕೊಂಡು ಹೊಸ ಬದುಕು ಪ್ರಾರಂಭಿಸುವುದೇ ಸರಿ ಎಂಬ ನಿರ್ಧಾರಕ್ಕೆ ಬಂದು ರಾತ್ರಿ ಭಾರತಿ ಕೊಣೆಗೆ ಹೊರಡುತ್ತಾನೆ.
ತಾಯಿ ವೇದಮ್ಮನವರು ತಡೆದರೂ, ನಾನೂ ಅದೇ ತಪ್ಪು ಮಾಡಿದ್ದೇನಮ್ಮ, ನೀತಿ ಎಂದರೆ ಎಲ್ಲರಿಗೂ ಒಂದೇ ಅಲ್ಲವೇನಮ್ಮ ಎಂದು ಸಾಗುತ್ತಾನೆ. ಮುಂದಿನದೆಲ್ಲ ಸುಖಾಂತ್ಯವಾಗುತ್ತದೆ.
ಆನಂದ ಈ ನಿರ್ಧಾರಕ್ಕೆ ಬರುವ ಮುನ್ನ ಅವನ ಮನದ ಹೊಯ್ದಾಟವನ್ನು ಅತ್ಯಂತ ನಾಜೂಕಾಗಿ, ನೈತಿಕ ನೆಲೆಗಟ್ಟಿನಲ್ಲಿ ಮನದ ಪ್ರಶ್ನೋತ್ತರಗಳೊಂದಿಗೆ ಲೇಖಕಿ ಅಮೋಘವಾಗಿ ಬರೆದಿದ್ದಾರೆ.
ಇಬ್ಬರೂ ಮನೋ ನಿಗ್ರಹ ಮಾಡಿಕೊಳ್ಳುವಲ್ಲಿ ಸೋತರು. ಮನೋ ನಿಗ್ರಹವಿದ್ದಾಗ್ಯೂ ಅದನ್ನು ತಪ್ಪಿಸಲು ಒಂದು ಅವಕಾಶ ಸಿಕ್ಕರೂ ಮನಸ್ಸು ದುರ್ಬಲವಾಗಿ ಬಿಡುತ್ತದೆ ಎಂಬುದಕ್ಕೆ ಈ ಕೃತಿಯೇ ಸಾಕ್ಷಿ.
ಆದರೆ ಇಂತಹ ಸಂದರ್ಭದಲ್ಲೂ ಓದಗ ಆ ತಪ್ಪು ಆಗಬಾರದಿತ್ತೆಂದೇ ಬಯಸುತ್ತಾನೆ. ಕೊನೆ ಕ್ಷಣದಲ್ಲಾದರೂ ಭಾರತಿ ಚಂದುವನ್ನು ದೂಡಿ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬಾರದಿತ್ತೇ ಎಂದು ಆಲೋಚಿಸುತ್ತಾನೆ. ತನ್ನ ಕೈ ಹಿಡಿದವನಿಗೆ ಮೋಸ ಮಾಡಬಾರದಿತ್ತು ಎಂದುಕೊಳ್ಳುತ್ತಾನೆ. ಆದರೆ, ಮುಂದೆ ಆನಂದನೂ ಅದೇ ದೌರ್ಬಲ್ಯಕ್ಕೆ ಸಿಲುಕಿ ಕೈ ಹಿಡಿದ ಹೆಂಡಿತಿಗೆ ಮೋಸ ಮಾಡಿದ್ದು ಓದಿದಾಗ, ಗಂಡು ಹೆಣ್ಣಿನ ಮಧ್ಯೆ ನೈತಿಕ ಸಮಾನತೆಯ ಬಗ್ಗೆ ಓದುಗ ಯೋಚಿಸತೊಡಗುತ್ತಾನೆ.
ಒಂದು ವೇಳೆ ಆನಂದ ಪವಿತ್ರವಾಗಿದ್ದು, ಭಾರತಿ ಪತಿತೆಯಾಗಿದ್ದರೆ?
ಭಾರತಿ ಪವಿತ್ರವಾಗಿದ್ದು, ಆನಂದ ಪತಿತ ಆಗಿದ್ದರೆ? ಎಂಬ ಪ್ರಶ್ನೆಯೊಂದಿಗೆ, ಓದುಗ ಕೃತಿಯ ಓದನ್ನು ಅಂತ್ಯಗೊಳಿಸುತ್ತಾನೆ.
ಇಲ್ಲಿ ಸೋತಿದ್ದು, ಗೆದ್ದದ್ದು ಯಾವುದು ಎಂಬುದೇ ಪ್ರಶ್ನೆಯಾಗಿ ಉಳಿಯುತ್ತದೆ. ಎರಡು ತಪ್ಪುಗಳು ಸೇರಿ ಸರಿಯಾಯಿತೇ? ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸಿ ಬಾಳು ಮುಂದುವರೆಸಿದಂತಾಯಿತು. ಹಾಗಾದರೆ ಇಬ್ಬರೂ ತಪ್ಪು ಮಾಡಿದರೆ ಒಪ್ಪಬಹುದೇ?
ಇಲ್ಲ ಓದುಗ ಎಂದಿಗೂ ಇದನ್ನು ಅರಗಿಸಿಕೊಳ್ಳುವುದಿಲ್ಲ. ಕಥೆಯಾಗಿ ಇದನ್ನು ಸ್ವೀಕರಿಸಬಹುದೇ ಹೊರತಾಗಿ ನಿಜ ಜೀವನದಲ್ಲಿ ಗಂಡ, ಹೆಂಡತಿ ಇಬ್ಬರೂ ಪವಿತ್ರವಾಗಿರಬೇಕೆಂದೇ ಅಂತಿಮವಾಗಿ ನಿರ್ಣಯಿಸುತ್ತಾನೆ.
ಇಲ್ಲಿ ಭಾರತಿ ಹೇಗೆ “ಸೋತು ಗೆದ್ದವಳು“, ಆದಳೋ ಹಾಗೆ ಆನಂದನೂ ಇಲ್ಲಿ “ಸೋತು ಗೆದ್ದವನು” ಆದ.
ಕಾರಣ ಈ ಕಾದಂಬರಿಗೆ “ಸೋತು ಗೆದ್ದವರು” ಎಂಬ ಶೀರ್ಷಿಕೆ ನೀಡಬೇಕಿತ್ತು ಎಂಬುದು ನನ್ನ ಅನಿಸಿಕೆ.
—ವರದೇಂದ್ರ ಕೆ ಮಸ್ಕಿ
9945253030
ಇಲ್ಲ ಸೋತು ಗೆದ್ದವಳೇ ಸರಿಯಾಗಿದೆ ಸರ್.
ಅವಳು ತನ್ನ ತಪ್ಪು ಒಪ್ಪಿಕೊಳ್ಳುತ್ತಾಳೆ.
ತಪ್ಪು ಒಪ್ಪಿಕೊಳ್ಳಲು ಸಹ ಧೈರ್ಯ ಬೇಕು.
ಸತ್ಯ ಹೇಳಲು ಸಹ ಧೈರ್ಯ ಬೇಕು. ಭಾರತೀ ತನ್ನ ತಪ್ಪು ಒಪ್ಪಿಕೊಂಡು ಮುಂದಿನ ತನ್ನ ಭವಿಷ್ಯ
ತಾನು ಕಟ್ಟಿಕೊಳ್ಳಲು ನಿರ್ಧರಿಸಿ ಗಂಡನ ಮುಂದೆ ಹೇಳತಾಳೆ.
ಅದೇ ಗಂಡ ಆನಂದ ತಾನು ಮಾಡಿರುವ ತಪ್ಪು ಹೇಳದೇ ಹಾಗೇ ಅವಳೊಂದಿಗೆ ಬದುಕ್ತಾ ಇದ್ದ.
ಆನಂದನಿಗೆ ಪಾಪ ಪ್ರಜ್ಞೆ ಕಾಡತಾ ಇರಲಿಲ್ಲ.
ಅದೇ ಹೆಣ್ಣಾದ ಭಾರತಿಗೆ ಪಾಪ ಪ್ರಜ್ಞೆ ಕಾಡಿ ತಾನು ಮೋಸ ಮಾಡಿದೆನಲ್ಲ, ಚಂದ್ರನ ಸುಳ್ಳು ಪ್ರೀತಿ ಪ್ರೇಮ ಕ್ಕೆ ಬಲಿಯಾದೆನಲ್ಲ ಅನ್ನುವ ಪಾಪ ಪ್ರಜ್ಞೆ ಕಾಡಿ ಇದ್ದ ಸತ್ಯ ವನ್ನು ಒಪ್ಪಿದಳು.
ಇಲ್ಲಿ ಯಾವಾಗಲೂ ತಪ್ಪು ಮಾಡುವುದು ಮೋಸ ಮಾಡುವುದು ಗಂಡೆ. ಆದರೂ ಅವರು ಪವಿತ್ರ ರು.
ಇಲ್ಲಿ ಆನಂದ ತಪ್ಪು ಮಾಡತಾನೆ, ಆದರೆ ಭಾರತಿ ಯಷ್ಟು ಪಾಪಪ್ರಜ್ಞೆ ಪ್ರಾಯಶ್ಚಿತ್ತ ಅವನು ಪಡುವುದಿಲ್ಲ. ಇವಳು ತಪ್ಪಿನಿಂದ ನರಳಿದಷ್ಷು ಅವನು ನರಳುವುದಿಲ್ಲ. ಅವಳು ತಾನು ಮಾಡಿದ ತಪ್ಪಿಗಾಗಿ ಇಡೀ ಜೀವನ ನರಳಿ ಸಾಯತಾಳೆ.
ಆದರೆ ಈ ಗಂಡು ಗಳು ಆನಂದ ಅಥವಾ ಚಂದ್ರು ಇಬ್ಬರಿಗೂ ಪಾಪ ಪ್ರಜ್ಞೆ ಅನ್ನುವುದು ಇರುವುದಿಲ್ಲ.
ಅತ್ತೆಯ ತಮ್ಮ ನಾದ ಚಂದ್ರು ಸಂಬಂಧದಲ್ಲಿ ತಂದೆಯ ಸ್ಥಾನದಲ್ಲಿ ಇರಬೇಕಾದವನು.
ತಾನು ತಪ್ಪು ಮಾಡಿದರೂ ಎಲ್ಲೂ ಅವನ ತಪ್ಪು ಅವನ ಅರಿವಿಗೆ ಬಾರದಿರುವುದು ದುರಂತವೆ.
ಓದುಗರು ಅಥವಾ ಈ ಸಮಾಜ ಇಲ್ಲಿ ಭಾರತಿ ದೇ
ತಪ್ಪು ಅಂತಿವೆ ಹೊರತು ಆ ನೀಚ ಎಂಥಾ ಕೆಲಸ ಮಾಡಿದನಲ್ಲ, ಒಂದು ವೇಳೆ ಅವಳು ಬುದ್ಧಿ ತಪ್ಪಿ ಬಂದರೂ ತಿದ್ದಿ ಬುದ್ಧಿ ಹೇಳಬೇಕಾಗಿದ್ದ ತಂದೆಯೇ ಮೊದಲಿನಿಂದಲೂ ಅವಳ ಮೇಲೆ ಕಣ್ಣು ಇಟ್ಟು ಕೆಟ್ಟ ಯೋಚನೆ ಮಾಡುತ್ತಾ ಇರುತ್ತಾನೆ. ಗಂಡ ಹೆಂಡತಿ ಯಾಗಿ ಬಾಳಿ ಬದುಕುವ ಎರಡು ಜೀವಿಗಳ ಮಧ್ಯೆ ಹೋಗಿ ಅವರಿಗೆ ಒಳ್ಳೆಯದು ಮಾಡದೇ ತನ್ನ ತೆವಲನ್ನು ತೀರಿಸಿಕೊಂಡು ದೂರಾಗಿ ಬಿಡುತ್ತಾನೆ.
ಇವನೂ ಒಬ್ಬ ಗಣಮಗನಾ? ಅನ್ನುವ ಭಾವನೆ ಬರತದೆ ಓದುವ ನಮಗ. ಗಣಮಗ ಆದವನು ಒಳ್ಳೆಯ ಕೆಲಸ ಮಾಡಬೇಕು.
ಅದಕ್ಕೆ ನಮ್ಮ ಹಳ್ಳಿಯಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಹೌದು ನೋಡು ಗಣಮಗನ ಕೆಲಸ ಅಂತ ಹೇಳತಾರೆ.
ಇಲ್ಲಿ ಆನಂದ ಒಬ್ಬ ವಿದ್ಯಾವಂತ ಮತ್ತು ಪ್ರಜ್ಞಾವಂತ
ಹಾಗೂ ಸ್ತ್ರೀ ಯು ಸಹ ನಮ್ಮ ಹಾಗೆಯೇ ಸರಿ ಸಮ ಅನ್ನುವ ಭಾವನೆ ತಾಳಿದ ಕಾರಣ ಅವಳ ಬಾಳು
ನೂರಕ್ಕೆ ತೊಂಬತ್ತು ಭಾಗ ನೆಮ್ಮದಿಯಿಂದ ಬಾಳಲು ಅನುಕೂಲ ಆಯಿತು. ಇನ್ನು ಹತ್ತು ಭಾಗ ಅವಳು ತಾನು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಲೇ ಇರುತ್ತಾಳೆ. ಅವಳು ಈಗ ಚೊಕ್ಕ ಬಂಗಾರವಾಗಿದ್ದಾಳೆ.
ಕಾಯ ಕೆಟ್ಟರೂ ಮನಸ್ಸು, ಭಾವ, ಬಂಧ ಪರಿಪೂರ್ಣ ಅರಿವು ಪರಿಪಕ್ವ ಭಾವನೆಯಿಂದ ಕೂಡಿದೆ.
ಇಲ್ಲಿ ಆನಂದನಂತ ಒಳ್ಳೆಯ ಗಂಡು ಇದ್ದಾರೆ.
ಚಂದ್ರು ನಂತ ಕೆಟ್ಟ ಗುಣಗಳನ್ನು ಹೊಂದಿದ
ಗಂಡುಗಳು ಈ ಸಮಾಜದಲ್ಲಿ ಇದ್ದಾರೆ.
ಇದರಿಂದ ಹೆಣ್ಣು ಮಕ್ಕಳು ಸರಿಯಾಗಿ ಪಾಠ ಕಲಿಯಬೇಕು. ಗಂಡನನ್ನ ಬಿಟ್ಟು ಬೇರೆ ಯಾರನ್ನೂ ಅತಿಯಾಗಿ ನಂಬಬಾರದು ಅನ್ನುವ ಸಂದೇಶ ಸಾರಿದೆ.
ಒಂದು ಸಲ ತಪ್ಪು ಮಾಡಿದರೇ ಮತ್ತೇ ಏನು ಮಾಡಿದರೂ ಸರಿ ಹೋಗುವುದಿಲ್ಲ ಅಂತ ತಪ್ಪು ಅದು ಅನ್ನುವ ಜಾಗೃತಿ ಮೂಡಿಸುವ ಕೆಲಸ ಈ ಕಾದಂಬರಿ ಯಲ್ಲಿ ತಿಳಿಸಿಕೊಟ್ಟಿದ್ದಾರೆ..
ಈ ರೀತಿ ಘಟನೆ ಗಳು ಮುನ್ನೆಚ್ಚರಿಕೆ ಆಗಲಿ ಅಂತ ಹೇಳಿದಂತೆ ಇದೆ ಈ ಕಾದಂಬರಿ ಉದ್ದೇಶ.