ನಾವು- ನಮ್ಮವರು
ರಾಜಕೀಯದ ಕೆಸರಿನಲ್ಲಿದ್ದರು ಕೆಸರು ಅಂಟಿಸಿಕೊಳ್ಳದ ವಿರುಪಾಕ್ಷಪ್ಪ ಅಗಡಿ
“ಅದೃಷ್ಟ ವಂಚಿತನಾದರೂ, ಅವಕಾಶ ವಂಚಿತನಾಗಬಾರದು” ಎನ್ನುವ ಗಾದೆ ಮಾತಿದೆ.ಅಂತಹ ಅನೇಕ ಅವಕಾಶಗಳನ್ನು ಕಳೆದುಕೊಂಡು ನಿರ್ಲಿಪ್ತತೆಯಿಂದ ಕೈಚೆಲ್ಲಿ ಕುಳಿತುಕೊಂಡವರು ಕೊಪ್ಪಳದ ಶ್ರೀ ವಿರುಪಾಕ್ಷಪ್ಪ ಸಂಗಣ್ಣ ಅಗಡಿಯವರು.
ಬಂದಂತಹ ಅನೇಕ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ಹಿಂದೆ ಬೀಳುವ ಇವರ ಮನೋಭಾವದ ಹಿಂದಿರುವ ಸತ್ಯ ಯಾವುದು ನನಗಂತೂ ಗೊತ್ತಿಲ್ಲ? ಕಳೆದುಕೊಂಡಿರುವ ಅವಕಾಶಗಳ ಬಗ್ಗೆ ಒಂದಿನಿತೂ ಇಂದಿಗೂ ಚಿಂತಿಸಿದವರಲ್ಲ.ಹುಟ್ಟುತ್ತಲೇ ಬೆಳ್ಳಿ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರು.ಇವರ ತಂದೆ ಲಿಂಗೈಕ್ಯ ಸಂಗಣ್ಣ ಅಗಡಿಯವರು ಕಲ್ಯಾಣ ಕರ್ನಾಟಕ ಕಂಡ ಅದ್ಭುತ ಸಂಸದೀಯ ಪಟು, ಚಾಣಾಕ್ಷ ರಾಜಕಾರಣಿ,ಮುಂಬಯಿ ಸಟ್ಟಾ ವ್ಯಾಪಾರದಲ್ಲಿ ಪಳಗಿದ ವ್ಯಾಪಾರಿ, ಪ್ರಗತಿಪರ ಕೃಷಿಕ,ಉದ್ಯಮಶೀಲರು,ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಸ್ಥಾಪನೆ ಮಾಡಿದ ಶಿಕ್ಷಣ ಪ್ರೇಮಿ ಹಾಗೂ ಅಪ್ಪಟ ಬಸವಾಭಿಮಾನಿ.ಶ್ರೀ ಎಸ್ ನಿಜಲಿಂಗಪ್ಪ, ಶ್ರೀ ಎಸ್. ಆರ್. ಕಂಠಿ ಶ್ರೀ ಬಿ.ಡಿ.ಜತ್ತಿ.ಶ್ರೀ ವೀರೇಂದ್ರ ಪಾಟೀಲ್ ಮುಂತಾದವರ ಸಮಕಾಲೀನರು.
ಸ್ವಾತಂತ್ರ್ಯಪೂರ್ವದಲ್ಲಿಯೇ ಕೊಪ್ಪಳ ನಾಡಿನಲ್ಲಿ ಹೈದ್ರಾಬಾದ ನಿಜಾಮನ ಸಹಭಾಗಿತ್ವದಲ್ಲಿ ಮುನಿರಾಬಾದ್ ನಲ್ಲಿ ಸಕ್ಕರೆ ಕಾರ್ಖಾನೆ, ಕಾಗದ ಮತ್ತು ರಟ್ಟಿನ ಕಾರ್ಖಾನೆ, ಕೊಪ್ಪಳದಲ್ಲಿ ಕರ್ನಾಟಕ ಆಯಿಲ್ ರಿಫೈನರೀಸ್ ಕಾರ್ಖಾನೆ ಹಾಗೂ ಕಾಟನ್ ಜಿನ್ನಿಂಗ್ &ಪ್ರೆಸ್ಸಿಂಗ್ ಮಿಲ್ಲನ್ನು ಸ್ಥಾಪಿಸುವ ಮೂಲಕ ಕೈಗಾರಿಕೋದ್ಯಮಗಳ ಬೆಳವಣಿಗೆಗೆ ನಾಂದಿ ಹಾಡಿದವರು ಇವರ ತಂದೆ ಸಂಗಣ್ಣ ಅಗಡಿಯವರು.ಇಂತಹ ವೈಶಿಷ್ಟ್ಯಪೂರ್ಣವಾದ ಮನೆತನದಲ್ಲಿ ದಿನಾಂಕ 19-12-1940 ರಂದು ಜನಿಸಿದ ವಿರುಪಾಕ್ಷಪ್ಪ ಸಂಗಣ್ಣ ಅಗಡಿಯವರು ಇಂದು ಎಂಭತ್ತನೆಯ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.ಎಂಬತ್ತು ವರ್ಷಗಳ ಬದುಕಿನಲ್ಲಿ ಅವರು ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು.
ಕೊಪ್ಪಳದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ, ಹುಬ್ಬಳ್ಳಿಯ ಜೆ.ಜಿ.ಕಾಮರ್ಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಕಾಲೇಜು ಶಿಕ್ಷಣವನ್ನು ಪಡೆದುಕೊಂಡು ಕೊಪ್ಪಳಕ್ಕೆ ಬಂದಾಗ, ಇವರ ಮನೆತನ ಸಂಪೂರ್ಣ ರಾಜಕೀಯ ಮಯವಾಗಿತ್ತು.ತಂದೆ ಸಂಗಣ್ಣ ಅಗಡಿಯವರು ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರು.ಪ್ರತಿನಿತ್ಯ ನಾಡಿನ ದೊಡ್ಡ ದೊಡ್ಡ ರಾಜಕಾರಣಿಗಳ ದಂಡೆ ಇವರ ಮನೆಯಲ್ಲಿರುತ್ತಿತ್ತು. ಇವರೆನ್ನೆಲ್ಲ ನೋಡುತ್ತ ಬೆಳೆದ ವಿರುಪಾಕ್ಷಪ್ಪ ಅಗಡಿಯವರು ಸಹಜವಾಗಿಯೇ ರಾಜಕೀಯದ ಕಡೆಗೆ ತಮ್ಮ ಒಲವನ್ನು ಬೆಳೆಸಿಕೊಂಡರು.197೦ ಮತ್ತು 1979 ರಲ್ಲಿ ಕೊಪ್ಪಳ ಪುರಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ಹೆಜ್ಜೆಯ ಗುರುತನ್ನು ಮೂಡಿಸಿ,1979 ರ ಸುಮಾರಿನಲ್ಲಿ ಶ್ರೀ ವೀರಣ್ಣ ಮುದಗಲ್ ರವರು ಕೊಪ್ಪಳದ ಶಾಸಕರಾಗಿದ್ದಾಗ ಎ.ಪಿ.ಎಂ.ಸಿ ಚೇರಮನ್ ರಾಗುವ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.ನಂತರ ಶ್ರೀ ಮಲ್ಲಿಕಾರ್ಜುನ ದಿವಟರವರು ಶಾಸಕರಾಗಿದ್ದಾಗ ಕೊಪ್ಪಳ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು.1985 ರಲ್ಲಿ ಜನತಾ ಪಕ್ಷದಿಂದ ಕೊಪ್ಪಳದ ಶಾಸಕರಾಗಿ ಆಯ್ಕೆಯಾದರು.ಈ ಅವಧಿಯಲ್ಲಿ ಕೊಪ್ಪಳದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವ ಬವಣೆಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರ ಗಮನಕ್ಕೆ ತಂದು,ತುಂಗಭದ್ರಾ ನದಿಯಿಂದ ಕೊಪ್ಪಳಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಅಂದಿನ ಕಾಲಕ್ಕೆ ಬಜೆಟ್ ನಲ್ಲಿ ಸುಮಾರು ಆರು ಕೋಟಿ ರುಪಾಯಿಗಳನ್ನು ಮೀಸಲಾಗಿರಿಸಿ ಕಾಮಗಾರಿಗಳನ್ನು ಪ್ರಾರಂಭಿಸುವಲ್ಲಿರುವ ಇವರ ಬದ್ಧತೆಯನ್ನು ಇಂದಿಗೂ ಕೊಪ್ಪಳದ ಜನತೆ ಸ್ಮರಿಸುತ್ತಾರೆ.ಶಾಸಕರಾಗಿದ್ದಾಗ ಪರ್ಸೆಂಟೇಜ್ ಗಾಗಿ ಎಂದೂ ಯಾವ ಗುತ್ತಿಗೆದಾರರ ಮುಂದೆ ಕೈಚಾಚದೆ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬಂದವರು.
1989 ರಲ್ಲಿ ಶ್ರೀ ಎಸ್.ಆರ್.ಬೊಮ್ಮಾಯಿಯವರ ಸಂಪುಟದಲ್ಲಿ “ವೈದ್ಯಕೀಯ ಶಿಕ್ಷಣ ಸಚಿವರಾಗುವ ಅದೃಷ್ಟ ಇವರ ಪಾಲಿಗೆ ಬಂತು, ಆದರೆ ಅವಕಾಶ ಸಿಗಲಿಲ್ಲ” ಇವರು ಸಚಿವರಾಗಿ ಏಳು ದಿನಗಳ ಅಂತರದಲ್ಲಿ ಎಸ್.ಆರ್. ಬೊಮ್ಮಾಯಿಯವರ ಸರಕಾರ ಪತನವಾಯಿತು.ಮುಂದೆ ವಿಧಾನಸಭೆ, ಲೋಕಸಭೆ ಸದಸ್ಯತ್ವಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಸಹ ಜಯಶೀಲರಾಗಲು ಸಾಧ್ಯವಾಗಲಿಲ್ಲ ಆದರೂ ರಾಜಕೀಯದ ಹಂಬಲ ಕಡಿಮೆಯಾಗಲೇ ಇಲ್ಲ. ಶ್ರೀ ಜೆ.ಹೆಚ್.ಪಟೇಲರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದ ಇವರು, ಪಟೇಲರ ಪ್ರೀತಿ ಮತ್ತು ವಿಶ್ವಾಸವನ್ನು ಎಂದೂ ದುರ್ಬಳಕೆ ಮಾಡಿಕೊಳ್ಳುವ ಸಾಹಸವನ್ನು ಮಾಡಲಿಲ್ಲ.ಅಷ್ಟೊಂದು ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಬಂದವರು.
ಶ್ರೀ ಎಚ್.ಡಿ.ದೇವೇಗೌಡರು ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಕ್ಕಿಂತ ಮುಂಚೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಶ್ರೀ ಜೆ. ಹೆಚ್.ಪಟೇಲರು ಮತ್ತು ಸಿದ್ದರಾಮಯ್ಯನವರ ನಡುವೆ ಸ್ಪರ್ಧೆ ಏರ್ಪಟ್ಟಾಗ,ವಿರುಪಾಕ್ಷಪ್ಪ ಅಗಡಿಯವರು ಜೆ.ಎಚ್.ಪಟೇಲ್ ರ ಪರವಾಗಿ ಎಲ್ಲ ಶಾಸಕರನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಕೇಳಿದ್ದೇನೆ.ಜೆ. ಹೆಚ್.ಪಟೇಲರು ಇವರನ್ನು ಸದಾ ವಿರುಪಾಕ್ಷಿ ಎಂದೇ ಕರೆಯುತ್ತಿದ್ದರು.ಚಿತ್ರದುರ್ಗದ ಶಾಸಕರಾಗಿದ್ದ ಶ್ರೀ ಏಕಾಂತಯ್ಯ ನವರು,ಕಲಬುರ್ಗಿಯ ಶ್ರೀ ಎಸ್.ಕೆ. ಕಾಂತಾ, ಶ್ರೀ ಎನ್. ಎಸ್. ಖೇಡ, ಗದಗಿನ ಶ್ರೀ ಸಿ. ಎಸ್.ಮುತ್ತಿನ ಪೆಂಡಿಮಠ, ಮುಂಡರಗಿಯ ಶಾಸಕರಾಗಿದ್ದ ಡಾಕ್ಟರ್ ಹುಯಿಲ ಗೋಳ,ಕಲಬುರ್ಗಿಯ ಶ್ರೀ ವೈಜನಾಥ ಪಾಟೀಲ್,ಶ್ರೀ ಬಿ.ಆರ್. ಪಾಟೀಲ್,ಶ್ರೀ ವಿಶ್ವನಾಥ ಪಾಟೀಲ್ ಹೆಬ್ಬಾಳ ಇವರ ಆತ್ಮೀಯ ಶಾಸಕ ಮಿತ್ರರಾಗಿದ್ದವರು
ಇಂದಿನ ಸಂಸದ ಸಂಗಣ್ಣ ಕರಡಿಗೆ ಗುರು ಇವರು.
ಇವರ ಶಾಸಕತ್ವದ ಅವಧಿಯಲ್ಲಿಯೇ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂತು.ಕೊಪ್ಪಳ ತಾಲ್ಲೂಕಿನ ಮಂಡಲ ಪಂಚಾಯಿತಿಗಳಲ್ಲಿ ಜನತಾಪಕ್ಷದ ಬಹುಮತ ಬರುವಂತೆ ನೋಡಿಕೊಂಡು ಗ್ರಾಮ ಗ್ರಾಮಗಳಲ್ಲಿ ಯುವ ನಾಯಕತ್ವವನ್ನು ಬೆಳೆಸಿದರು.ಇವರ ಅತ್ಯಂತ ಆತ್ಮೀಯ ಗೆಳೆಯರೆಂದರೆ ಬಳ್ಳೊಳ್ಳಿ ವೀರಬಸಪ್ಪನವರು.ವೀರಬಸಪ್ಪ ಬಳ್ಳೊಳ್ಳಿ ಹಾಗೂ ಅಗಡಿ ವಿರುಪಾಕ್ಷಪ್ಪನವರ ಆಲೋಚನೆ,ಚಿಂತನೆಗಳು ಸದಾ ವಿರುದ್ಧ ದಿಕ್ಕಿನಲ್ಲಿದ್ದರೂ ಇವರ ಆತ್ಮೀಯತೆಗೆ ಎಂದೂ ಕುಂದು ಬರಲಿಲ್ಲ.ಅಷ್ಟೊಂದು ಅನ್ಯೋನ್ಯ ಹಾಗೂ ಬಲಯುತವಾದ ಸ್ನೇಹ ಇವರದಾಗಿತ್ತು.
ಶ್ರೀ ಗವಿಸಿದ್ಧೇಶ್ವರ ಮಹಾ ವಿದ್ಯಾಲಯದ ಶ್ರೀ ಮಲ್ಲಿಕಾರ್ಜುನ ಸೋಮಲಾಪುರ,ಹುಬ್ಬಳ್ಳಿಯಲ್ಲಿರುವ ಪ್ರೊಫೆಸರ್ ಭಂಡರಗಲ್, ವಿದ್ಯಾಲಯದಲ್ಲಿ ವಕೀಲರಾಗಿದ್ದ ರುದ್ರಪ್ಪ ನಿಡಶೇಸಿ, ನಗರಸಭೆಯ ಕಮಿಷನರಾಗಿದ್ದ ಯಾದಗಿರಿ ಪರಮೇಶಪ್ಪ,ವಾಣಿಜ್ಯ ತೆರಿಗೆ ಆಯುಕ್ತರಾಗಿದ್ದ ಶ್ರೀ ಕೊಟ್ರೇಶ ಕುದರಿಮೋತಿ,ಜೆ.ಪ್ರಭು,ವಿರುಪಾಕ್ಷಪ್ಪ ನಾಲ್ವಾಡ,ಗದಗಿನ ಎಸ್.ಟಿ. ಮೇಲಗಿರಿ,ಎಸ್.ಎಸ್.ಕಳಸಾಪುರ ಶೆಟ್ಟರು,ಕಿನ್ನಾಳದ ಗಡಾದ ವೀರಣ್ಣನವರು,ಯಲಮಗೇರಿಯ ಶ್ರೀ ಬಿ.ಟಿ ಪಾಟೀಲರು,ಡಾಕ್ಟರ್ ಶ್ರೀ ಎನ್.ಎಸ್.ಗಾಯಕ್ವಾಡ್,ಶ್ರೀ ಅಭಯಕುಮಾರ್ ಮೆಹತಾ,ಚಂಪಾಲಾಲ್ ಜಿ ಮೆಹತಾ,ಶ್ರೀ ಕಾಂತಿಲಾಲ್, ಶ್ರೀ ಶಿವಪ್ಪನವರು ಹೆಬ್ಬಾಳ,ಶ್ರೀ ಬಸವರಾಜ ಹಲಗೇರಿ,ಮುಂತಾದವರು ಇವರ ಆತ್ಮೀಯ ಗೆಳೆಯರು.ಸಣ್ಣ ವಯಸ್ಸಿನಲ್ಲಿ ಗೆಳೆಯ ಶ್ರೀ ಬಿ.ಟಿ.ಪಾಟೀಲರು ಲಿಂಗೈಕ್ಯರಾದರು. ಗೆಳೆಯನ ಹೆಸರು ಚಿರಂತನವಾಗಿ ಉಳಿಯಲಿ ಎಂದು ಕೊಪ್ಪಳದ ಹೊಸಪೇಟೆ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನಿರ್ಮಿಸಿದ ತಮ್ಮ ಸ್ವಂತ ಬಡಾವಣೆ(ಲೇ ಔಟ್ )ಗೆ ಬಿ.ಟಿ.ಪಾಟೀಲ ನಗರ ಎಂದು ನಾಮಕರಣ ಮಾಡಿದರು. ಇಂದು ಕೊಪ್ಪಳದಲ್ಲಿಯೇ ಆ ಬಡಾವಣೆ ಅತ್ಯಂತ ಪ್ರತಿಷ್ಠಿತವಾದ ಬಡಾವಣೆಯಾಗಿದೆ.ಎಂದೂ ಇವರು ಜಾತಿ,ಧರ್ಮದ ಅಮಲನ್ನು ತಲೆಗೇರಿಸಿಕೊಂಡವರಲ್ಲ.ಇವರ ಅತ್ಯಂತ ಆತ್ಮೀಯ ಕಿರಿಯ ನಿಕಟವರ್ತಿಗಳಲ್ಲಿ ಮೊದಲನೆಯವರು .ಶ್ರೀ ನೀಲಕಂಠಯ್ಯ ಹಿರೇಮಠ, ಸುಮಾರು ನಲವತ್ತು ವರ್ಷಗಳಿಂದ ಇವರ ನೆರಳಿನಂತಿದ್ದಾನೆ.ನೀಲಕಂಠಯ್ಯ ಹಿರೇಮಠನಿಲ್ಲದ ವಿರುಪಾಕ್ಷಪ್ಪ ಅಗಡಿಯವರನ್ನು ಊಹಿಸಿಕೊಳ್ಳಲು ಅಸಾಧ್ಯ. ಅಷ್ಟೊಂದು ಆತ್ಮೀಯತೆ ಇವರ ನಡುವೆ ಇದೆ.ಇನ್ನುಳಿದಂತೆ ನೇರ,ನಿಷ್ಠುರವಾದಿ ಶ್ರೀ ನಾಗರಾಜ (ಬಂಡು ) ಬಬಲೇಶ್ವರ್, ಶ್ರೀ ಸಿದ್ಧಣ್ಣ ನಾಲ್ವಾಡ್,ಇತ್ತಿತ್ತಲಾಗಿ ಶ್ರೀ ಸಂಗಮೇಶ್ವರ ಡಂಬಳ,ಮಾರುತಿ ಅಂಗಡಿ ಈ ಗುಂಪಿನಲ್ಲಿ ಸೇರಿಕೊಂಡಿದ್ದಾರೆ.
ಕೊಪ್ಪಳ ಲಯನ್ಸ್ ಕ್ಲಬ್ಬಿನ ಸಂಸ್ಥಾಪಕ ಸದಸ್ಯರಾದ ವಿರುಪಾಕ್ಷಪ್ಪ ಅಗಡಿಯವರು ಲಯನ್ಸ್ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಚೇರ್ಮನ್ ರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಉದ್ಯಮಿ ಮಲ್ಲಿಕಾರ್ಜುನ ಬಳ್ಳೊಳ್ಳಿ, ಶ್ರೀನಿವಾಸ ಗುಪ್ತಾ, ಪ್ರಭು ಹೆಬ್ಬಾಳ, ಪರಮೇಶ್ವರಪ್ಪ ಕೊಪ್ಪಳ,ಎಲ್.ಐ ಸಿ.ಯ ಶಾನಭಾಗ್,ಗವಿಸಿದ್ದಪ್ಪ ಮುದಗಲ್,ಬಸವರಾಜ ಬಳ್ಳೊಳ್ಳಿ ಮುಂತಾದವರು ಇವರ ಲಯನ್ಸ್ ಸೇವಾ ಕಾರ್ಯಗಳಲ್ಲಿ ಸಂಗಾತಿಗಳಾಗಿದ್ದಾರೆ.ಸಭೆ ಸಮಾರಂಭಗಳಲ್ಲಿ ವೇದಿಕೆ ಏರಿ ಕುಳಿತು ಮಿಂಚುವ ಮನಸ್ಥಿತಿಯಿಂದ ಬಲುದೂರ.ಒಂದರ್ಥದಲ್ಲಿ ಇವರಿಗೆ ವೇದಿಕೆಯೆ೦ದರೇನೇ ಅಲರ್ಜಿ.ಮೇಲ್ನೋಟಕ್ಕೆ ಮಠ-ಮಂದಿರ,ದೇವಸ್ಥಾನಗಳ ದರ್ಶನಕ್ಕೆ ಹಾತೊರೆಯದೆ ನಾಸ್ತಿಕನಂತೆ ಕಾಣುವ ವಿರುಪಾಕ್ಷಪ್ಪ ಅಗಡಿಯವರು ಕೊಪ್ಪಳ ಸಂಸ್ಥಾನ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ತಲೆಬಾಗುತ್ತಾರೆ.
ಕೊಪ್ಪಳದ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಹೆಜ್ಜೆಯ ಗುರುತನ್ನು ಮೂಡಿಸಿರುವ ವಿರುಪಾಕ್ಷಪ್ಪ ಅಗಡಿಯವರಿಗೆ ಎಂಭತ್ತನೆಯ ಹುಟ್ಟುಹಬ್ಬದ ಶುಭಾಶಯಗಳು..
–ಗವಿಸಿದ್ದಪ್ಪ ವೀ. ಕೊಪ್ಪಳ