ಸಾಹಿತ್ಯ
ಜನಪದ ಸಾಹಿತ್ಯದಲ್ಲಿ ತಾಯಿ
ಜಾನಪದ ಎಂಬ ಪರಿಕಲ್ಪನೆ ಜನರ ಒಡನಾಟದ ಜನಜೀವನವಾಗಿದೆ.ನಮ್ಮ ನಿತ್ಯ ಜೀವನ ದೊಂದಿಗೆ ಸಮಷ್ಟಿ ಆಚರಣೆಯನ್ನು ಕಟ್ಟಿ ಕೊಡುವ ವ್ಯವಸ್ಥೆಯೆ ಜಾನಪದ.ಸಮಾಜದ ಜನರ ಉತ್ಪತ್ತಿ ಹಂಚಿಕೆ ಅನುಭೋಗ ಆಹಾರ ಉಡುಪು ವಸತಿ ಆರ್ಥಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ವಾಗಿ ಗುರುತಿಸಿಕೊಳ್ಳುತ್ತದೆ.ಜನಪದ ಎಂಬ ಪದ ಅನಾದಿ ಕಾಲದಿಂದ ಬಳಕೆಯಲ್ಲಿದೆ.ಜನಪದ ಎನ್ನುವುದೇ ಸಮುದಾಯ, ಜನ ಸಮೂಹ…ಜನಸಮೂಹದ ಆಡಳಿತವೆಂದು ಗುರುತಿಸಿ ಕೊಳ್ಳುತ್ತದೆ. ‘ಜನವಾಣಿ ಬೇರು ಕವಿ ವಾಣಿ ಹೂ” ಎಂಬ ಮಾತು ಜಾನಪದ ಭಾಷೆಯ ಗಟ್ಟಿತನವನ್ನು ಎತ್ತಿ ತೋರಿಸುತ್ತದೆ.
“ಕುರಿತೋದಯಂ ಕಾವ್ಯಪ್ರಯೋಗ ಪರಿಣತ ಮತಿಗಳಿಂದ” ರಚಿತವಾದ ಜಾನಪದವು ನಮ್ಮ ಪ್ರಾಚೀನ ಜನತೆ ಕಾವ್ಯ ರಚಿಸಿದಸಂಸ್ಕೃತಿಯನ್ನು ಬಿಂಬಿಸುತ್ತದೆ.ಆಧುನಿಕ ಬದುಕಿಗೆ ಪ್ರೇರಣೆಯನ್ನು ಕಲ್ಪಿಸುತ್ತದೆ.ಸಮಾಜ ಸಮ್ಮತಿಸಿದ ಕಲಿಕೆಗಳೆಲ್ಲಾ ನಡವಳಿಕೆಗಳು ಸಂಸ್ಕ್ರತಿಯ ಅಂಗವೆಂದು ಪರಿಗಣಿಸುವುದರಿಂದ ಜಾನಪದವು ಸಾಮಾನ್ಯ ಮನಸ್ಸುಗಳ ಸಂಸ್ಕ್ರತಿ ಅಂಗವೆಂದು ಸ್ಪಷ್ಟಪಡಿಸ ಬಹುದು.ಶ್ರಮ ಜೀವಿಗಳಾದ ಜನಪದರು ತಮ್ಮ ಆಯಾಸ ಪರಿಹಾರಕ್ಕೋಸ್ಕ್ರರ ಅನುಭವ ಮುಕ್ತವಾದ ಜಾನಪದ ಹಾಡುಗಳನ್ನು ರಚಿಸಿದರು. ಗ್ರಾಮ್ಯ ಸಮಾಜದ ಕಷ್ಟ ನೋವುಗಳಿಗೆ ಸ್ಪಂದಿಸಿ ನೀತಿಯನ್ನು ಉಪದೇಶಿಸಿದರು…..ಮೌಖಿಕ ತೆಯೇ ಇವರ ಶುದ್ದ ಸಾತ್ವಿಕ ಶಕ್ತಿ.ಆದ್ದರಿಂದ ಜಾನಪದವನ್ನು ಬಾಯಿಂದ ಬಾಯಿಗೆ ಹರಿದಾಡಿದ ಕಂಠಸ್ಥ ಸಾಹಿತ್ಯ ಎಂಬ ಪದ ಬಳಕೆಯೂ ಇದೆ.
ಕವಿರಾಜಮಾರ್ಗ ಕಾರನು ಹೇಳುವಂತೆ” ಕಾವೇರಿಯಿಂದ ಗೋದಾವರಿ ವರಮಿರ್ದಾನಾಡಾವರ್ಗಗಳ್” ಎಂಬ ಹೇಳಿಕೆಯಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಮಾಡುವ ಜನರೇ ಜನಪದರು.ಇಂಥಹ ಜನ ಸಂಸ್ಕ್ರತಿ ಯ ಅನುಸಂಧಾನಗಳು ಮರು ರೂಪ ಪಡೆದವುಗಳಾಗಿವೆ.
ಜಾನಪದ ಸಂಸ್ಕ್ರತಿಯ ಒಡಲಿನ ಸೂಕ್ಷ್ಮಗಳು ನಮ್ಮನ್ನು ಸದಾ ಎಚ್ಚರಿಸುತ್ತವೆ. ಜನಪರವಾದ ನೋವು ನಲಿವುಗಳು ಸೋಲು ಗೆಲುವು ಎತ್ತರ ಬಿತ್ತರ ಕಷ್ಟ ಕಾರ್ಪಣ್ಯ ಈ ಎಲ್ಲಾ ಭಾವನೆಗಳು ಅನುಭವದಲ್ಲಿ ಬೆಂದು ಪರಿ ಶುದ್ದವಾಗಿ ಸಮೂಹಕ್ಕೆ ಅನುಗುಣವಾಗಿ ಬೆಳೆದವು.ಅವೇ ಹಾಡು ಹಸೆ ಕಥೆ ಕುಣಿತ ಗಾದೆ ಒಗಟು … ಇವೆಲ್ಲಾ ಗ್ರಾಮ್ಯಸಂಸ್ಕ್ರತಿಯ ಸಂಕಥನಗಳಾಗಿವೆ. ಜಾನಪದರ ಸಾರ್ವಕಾಲಿಕ ಎಚ್ಚರಿಸುವ ವಿಶ್ವಕೋಶವೇ ಆಗಿದೆ.
ಈ ಹಿನ್ನೆಲೆಯಲ್ಲಿ ಜಾನಪದ ಒಡಲಿನ ನೈತಿಕ ಮೌಲ್ಯಗಳು ಬಹಳ ಮುಖ್ಯ ವಾಗುತ್ತವೆ. ಕಥೆಗಳು ಸಂಪ್ರದಾಯಗಳು ಹಾಡುಗಳು ಕಥನಾತ್ಮಕ ಲಾವಣಿಗಳು ಕೆಲಸದ ಹಾಡುಗಳು ಮಕ್ಕಳ ಹಾಡುಗಳು ಇವೆಲ್ಲವುಗಳನ್ನು ಶಾಬ್ದಿಕ ಜಾನಪದ ವೆಂದು ಹೇಳಲಾಗುತ್ತದೆ.
ಒಂದು ಸಂಸ್ಕ್ರತಿ ಅಥವಾ ಪರಿಸರವನ್ನು ಹೆಚ್ಚು ಪ್ರೀತಿಸ ಬೇಕೆಂದರೆ ಇನ್ನೊಂದು ಸಂಸ್ಕ್ರತಿಯ ಪರಿಚಯವಿರಬೇಕು.ಅರಿವಿರ ಬೇಕು. ಈ ಹಿನ್ನೆಲೆಯಲ್ಲಿ ಜಾನಪದ ಸಂಸ್ಕೃತಿಯ ಪ್ರೇರಣೆ ಶಿಷ್ಟ ಸಾಹಿತ್ಯಕ್ಕೆ ಆಗಿದೆ ಎಂಬುದು ಅಷ್ಟೇ ಸತ್ಯವಾದುದು.
ಮೌಖಿಕ ಸಾಹಿತ್ಯದಲ್ಲಿ ತ್ರಿಪದಿಗೆ ಪ್ರಥಮ ಸ್ಥಾನ. ಜನಪದ ಸಂಸ್ಕ್ರತಿ ಯನ್ನು ಅವಲೋಕಿಸ ಬೇಕಾದರೆ ಆಡು ಭಾಷೆಯ ನೀತಿಯನ್ನು ಪ್ರೇರೇಪಿಸುತ್ತದೆ.
“ಸಾಧುಗೆ ಸಾಧು ಮಾಧುರ್ಯಂಗೆ ಮಾದುರ್ಯಂ||
ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ ” ||
ಮಾಧವ ನೀತನ್ ಪೆರನಲ್ಲ ||
ಕಪ್ಪೆಅರಭಟ್ಟನ ಶಾಸನದಲ್ಲಿ… ಕಪ್ಪೆ ಅರಭಟ್ಟನು ಜನಾನುರಾಗಿಯಾಗಿ ಜನರ ಕಷ್ಟ ಕಾಲದಲ್ಲಿ ನೆರವಾಗುತ್ತಿದ್ದನು. ಆಪತ್ ಬಾಂಧವ್ಯ ನಂತಿದ್ದ ಈತ ಒಳ್ಳೆಯವರಿಗೆ ಒಳ್ಳೆಯವನಾಗಿ ಆತ್ಮೀಯರಿಗೆ ಪ್ರೀತಿ ಪಾತ್ರದವನಾಗಿ ತೊಂದರೆ ಕೊಡುವವರಿಗೆ ಸಿಂಹಸ್ವಪ್ನ ನಾಗಿದ್ದನು.ಮಹಾಭಾರತದಲ್ಲಿ ಕೃಷ್ಣ ಹೇಗೆ ದುಷ್ಟರ ಶಿಕ್ಷೆ ಶಿಷ್ಟರ ರಕ್ಷೆ ಮಾಡಿದ್ದನೊ ಅದೇ ರೀತಿಯಲ್ಲಿ ಇದ್ದನು. ಎಂದು ಒಬ್ಬ ಜನಪದ ಅನಕ್ಷರಸ್ಥ ತಾಯಿ ತನ್ನ ಮಗುವಿಗೆ ನೀತಿಯ ಅಂತಃಸ್ಸತ್ವವನ್ನು ಉಪದೇಶಿಸುತ್ತಾಳೆ.ದೈವತ್ವದಲ್ಲಿ ಬದುಕನ್ನು ಕಾಣುವ ಜನಪದ ಸ್ತ್ರೀಯರು ತ್ರಿಪದಿಯನ್ನೆ ಆಯ್ಕೆ ಮಾಡಿಕೊಂಡರು.ತ್ರಿಪದಿ ಹಾಡು ಮಟ್ಟಿನ ಛಂದಸ್ಸಾಗಿದೆ.ಜನಪದ ಪದ್ಯ ಗಳಿಗೆಲಯ ಮತ್ತು ನಾದಗಳಿಗೆ ಮುಕ್ತತೆಯನ್ನು ಕೊಡುತ್ತದೆ.ಬೇಂದ್ರೆ ಯವರು ತ್ರಿಪದಿಯೆ ಕನ್ನಡ ವೃತ್ತಗಳ ಗಾಯತ್ರಿ ಎಂದಿದ್ದಾರೆ. ಗರತಿಯ ಹಾಡಿನ ರಸ ಋಷಿಯೆ ಜಾನಪದ.
ನಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ನಮ್ಮ ತಾಯಿ ತಂಗಿಯರು ಅಕ್ಕಂದಿರು ಜನಪದ ಹಾಡುಗಳ ಮೂಲಕ ಜೀವ ತುಂಬಿದರು. ಹೀಗಾಗಿ ಜನಪದ ಮಹಿಳೆಯರದೇ ನಿಜವಾದ ಕಾವ್ಯ. ಉಳಿದದ್ದು ಕಾವ್ಯದ ಪ್ರತಿರೂಪ.ಕಾವ್ಯವನ್ನು ಕಾಂತಾಸಂಮಿತಿಯನ್ನಾಗಿ ಕಾಣುವಾಗ ಹೆಂಡತಿ ಎಂಬ ಅರ್ಥದಲ್ಲಿ ಅಲ್ಲ.ಕಾಂತೆಯಲ್ಲ . ಸ್ತ್ರೀಯನ್ನು ಸಮೀಕರಿಸಿ ತಿಳಿಯಬೇಕು. ಮೊದಲನೆಯದಾಗಿ ತನ್ನ ಮಗುವನ್ನು ಸರ್ವಸ್ವವೆಂದು ತಿಳಿದು ಹೇಳುವ ಆ ಮಮತಾ ಮಯಿ ತಾಯಿ……
“ಆಡಿ ಬಾ ಎನ ಕಂದll ಅಂಗಾಲ ತೊಳೆದೇನು
ತೆಂಗಿನ ಕಾಯಿ ತಿಳಿನೀರ ll ತಕ್ಕೊಂಡು
ಬಂಗಾರ ಮಾರಿಯll ತೊಳೆದೇನು.”
ತಾಯಿಯ ಪ್ರೀತಿ ಮಮತೆಗೆ ಜನಪದರ ಹೋಲಿಕೆಯ ರೂಪಕಗಳು ಪ್ರೀತಿಯ ವಾಸ್ತವತೆಯನ್ನು ಸ್ಪಷ್ಟ ಪಡಿಸುತ್ತವೆ.ಮಗು ವಿನ ಆಟ ಪಾಠಗಳಲ್ಲಿ ಪ್ರೀತಿಯ ಮಾರ್ಗದಶ೯ಕಳು ಆಕೆ.ಮಗುವಿನ ಮುಖ ತೊಳೆಯಲು ಸಾಮಾನ್ಯನೀರಿನ ಕಲ್ಪನೆ ಕೊಡುವುದಿಲ್ಲ. ತೆಂಗಿನ ಕಾಯಿ ಎಳೆ ನೀರು ಬೇಕೆಂದು ಹೇಳುವ ಆಕೆ ಅಮೂಲ್ಯವಾದದ್ದು ಬೆಲೆಯುಳ್ಳದ್ದು ಮಾತ್ರ ತನ್ನ ಮಗುವಿಗೆ ಬೇಕೆನ್ನುವಳು.ಮನದ ಶ್ರೀಮಂತಿಕೆಯ ಉತ್ಕರ್ಷ ಎಳೆ ನೀರು ಎನ್ನುವಲ್ಲಿ ಭಾವಾತೀತವಾದ ಸಂತೋಷ ಆಕೆಗೆ. ತನ್ನ ಕನಸುಗಳನ್ನು ಮರೆತು ಮಗುವಿಗಾಗಿ ಮಿಡಿಯುವ ಮಗುವಿನ ಸಂತೋಷ ವನ್ನು ತನ್ನದನ್ನಾಗಿ ಮಾಡಿ ಕೊಳ್ಳುವ ಅವಳ ಹೃದಯ ವೈಶಾಲ್ಯತೆಗೆ ಶಬ್ದಗಳೇ ಇಲ್ಲ.
“ತೊಟ್ಟಿಲ ಹೊತ್ಕೊಂಡುllತವರ್ಬಣ್ಣ ಉಟ್ಕೊಂಡು
llಅಪ್ಪ ಕೊಟ್ಟೆಮ್ಮೆll ಹೊಡ್ಕೊಂಡು
ತಿಟ್ಟಾಂತ ತಿರುಗಿ llನೋಡ್ಯಾಳ”
ತವರಿನ ವ್ಯಾಮೋಹವನ್ನು ಬಿಡಲಾರದೆ ತನ್ನ ಬಾಲ್ಯದ ಘಟನೆಯ ನೆನಪುಗಳನ್ನು ಬಿಟ್ಟು ಹೋಗುತ್ತಾಳೆ. ಗುರುವೆಂಬ ತಾಯಿಯನ್ನು ನೆನಪಿಸಿಕೊಳ್ಳುತ್ತಾಳೆ. ಅದೇ ಹೆರಿಗೆ ಯಾದ ಮಗಳಿಗೆ ತಂದೆ ಪ್ರೀತಿಯಿಂದ ತೊಟ್ಟಿಲನ್ನು ಕೊಡಿಸಿರುತ್ತಾನೆ.ಗಂಡನ ಮನೆಗೆ ಹೋಗುವಾಗ ತಲೆಯ ಮೇಲೆ ತೊಟ್ಟಿಲನ್ನು ಹೊತ್ತು ಕೊಂಡಿದ್ದಾಳೆ.ತವರಿನ ಸೀರೆಯಲ್ಲಿ ಉಡಿ ತುಂಬಿಕೊಂಡು ಹೊರಟಿದ್ದಾಳೆ.ಇದನ್ನೇ ಜನಪದ ಕವಿ ತವರ್ಬಣ್ಣ ಎಂದು ಬಳಸಿದ್ದಾನೆ. ಮಗುವಿನ ಆರೋಗ್ಯಕ್ಕಾಗಿ ಹೆಚ್ವಿನ ಹಾಲಿಗಾಗಿ ಎಮ್ಮೆ ಹೊಡೆದು ಕೊಂಡು ಹೊರಟಿದ್ದಾಳೆ.ತವರನ್ನು ಬಿಟ್ಟು ಹೋಗಬೇಕೆಂಬ ದುಃಖ ದಲ್ಲಿ ತನ್ನ ತವರನ್ನು ತಿರುತಿರಿಗಿ ನೋಡುತ್ತಿದ್ದಾಳೆ.ಈ ಅಂತಃಕರಣಗಳ ಹಿಂದೆ ಜನಪದರ ಸಾಮಾಜಿಕ ಮತ್ತು ಭಾವನಾತ್ಮಕ ಮಾನಸಿಕ ಅಂಶಗಳು ಒಳಗೊಂಡಿರುತ್ತವೆ. ಹೀಗೆ ಎಲ್ಲದರಲ್ಲೂ ಪ್ರಮುಖ ಪಾತ್ರ ತಾಯಿ ಎಂಬ ತವರಾಗಿರುತ್ತದೆ.
ತಾಯಿ ಮತ್ತು ಮಗುವಿನ ಬಾಂದವ್ಯ ಸಾಮಾನ್ಯವಾಗಿ ಮಗು ಹುಟ್ಟಿದ ಕೆಲವೇ ಸಮಯದಲ್ಲಿ ಪ್ರಾರಂಭವಾಗುತ್ತದೆ.ಆಳವಾದ ಮಾನಸಿಕ ಅಥವ ಸಾಮಾಜಿಕ ಸಂಭಾಷಣೆಯ ಅಗತ್ಯಇಲ್ಲಿ ಇರುವಿದಿಲ್ಲ.ಮಗುವಿನ ಜೊತೆಗೆ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ಮಗು ತಾಯಿಯ ಸಂಪರ್ಕದಲ್ಲಿ ಗಟ್ಟಿ ಗೊಳ್ಳುತ್ತದೆ….
“ನಡೆದು ಬಾ ಕಂದಯ್ಯ ll ನಡಿಗೀಯ ನೋಡೇನುll
ಪದುಮದ ಪಾದ ಬಲಗಾಲll ಕಂದಯ್ಯ
ಕಿರುಗೆಜ್ಜೆಯ ಇಡಿಸಿ ನೋಡೇನು”
ಪುಟ್ಟ ಕಂದನ ಬೆಳ್ಳಿ ತಾವರೆಯಂತಹ ಗುಲಾಬಿ ಹೂವಿನಂತಹ ಪಾದಗಳಿಗೆ ಬೆಳ್ಳಿಯ ಕಾಲ್ಗಡಗ ಕಿರು ಗೆಜ್ಜೆಯನ್ನು ಹಾಕಿ ಮುದ್ದು ಪಾದಗಳನ್ನು ಇರಿಸಿ ಗೆಜ್ಜೆ ಗಲ್ಲೆನ್ನುತ್ತಾ ನಡೆದು ಬರುವ ಸೊಬಗು ಹಡೆದ ತಾಯಿಗೆ ಮಾತ್ರ ಗೊತ್ತು. ಮಗುವಿನ ಹೆಜ್ಜೆಯ ನಾದಮಯ ಸಂಗೀತ ಆ ಮನೆಯೆ ಭುವಿಗಿಳಿದ ಸ್ವರ್ಗದಂತೆ ಭಾಸವಾಗುತ್ತದೆ. ಇದನ್ನೇ ಆ ತಾಯಿ ಪ್ರೀತಿಯಿಂದ ನಡೆದು ಬಾ ಕಂದಯ್ಯ ನಡಿಗೀಯ ನೋಡೇನು ಎನ್ನುವ ಅಂತಃಕರಣದ ಪ್ರೀತಿ ..ಪದುಮದ ಪಾದ ಎನ್ನುವ ಪ್ರೀತಿಯನ್ನು ಲಕ್ಷಿಯ ಪಾದಗಳು… ಮನೆಯನ್ನು ಮನವನ್ನು ಶುಭ ಉದಯ ದೊಂದಿಗೆ ಪ್ರವೇಶಿಸಲಿ ಎನ್ನುವ ಹರಕೆಯ ಸೌಂದರ್ಯದ ಸೊಬಗು ಆ ಮಾತೃ ಹೃದಯ ಕ್ಕೆ ಮಾತ್ರ ಅರಿವಾಗುತ್ತದೆ. ತಾಯಿ ಮತ್ತು ಮಗುವಿನ ಬಾಂದವ್ಯದಲ್ಲಿ ಆಳವಾದ ಮಾನಸಿಕ ಅಥವಾ ಸಾಮಾಜಿಕ ಸಂಭಾಷಣೆಯ ಅಗತ್ಯತೆಯನ್ನು ವ್ಯಕ್ತ ಪಡಿಸುತ್ತದೆ.ಇಡೀ ವಿಶ್ವಕ್ಕೆ ತಾಯಿ ಒಬ್ಬ ವ್ಯಕ್ತಿ ಮಾತ್ರವಾದರೆ ಆದರೆ ಒಬ್ಬ ಮಗುವಿಗೆ ತಾಯಿಯೇ ಇಡೀ ವಿಶ್ವ ವಾಗುತ್ತಾಳೆ.
“ಹೆಣ್ಣು ಹಡೆಯಲು ಬೇಡll ಎರವರಿಗೆ ಕೊಡಬೇಡll
ಹೆಣ್ಣು ಹೋಗಾಗ ಅಳಬೇಡll ಹಡೆದವ್ವ
ಸಿಟ್ಟಾಗಿ ಶಿವನ ಬೈಬೇಡ||
ಪ್ರೀತಿಯ ಇನ್ನೊಂದು ಮುಖತಾಯಿ.ನಿಶ್ಕಲ್ಮಷ ಪ್ರೀತಿಯನ್ನು ಕೊಡುವವಳು.ತನ್ನ ಸರ್ವಸ್ವ ವನ್ನುಮಕ್ಕಳ ಒಳಿತಿಗಾಗಿ ತ್ಯಾಗ ಮಾಡುತ್ತಾಳೆ ಹೀಗಾಗಿ ಮಗಳ ಬಗ್ಗೆ ಅಂತಃಕರಣ ಪ್ರೀತಿ ಭಾವುಕ ಆನಂದ ವನ್ನು ಹೊಂದಿದ ತಾಯಿ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ದುಃಖಿತಳಾಗುತ್ತಾಳೆ. ಕೊಟ್ಟ ಹೆಣ್ಣುಕುಲಕ್ಕೆ ಹೊರಗೆ ಎಂದು ಗೊತ್ತಿದ್ದರೂ ವಿದಾಯದ ದುಃಖದ ಸನ್ನಿವೇಶ ದಲ್ಲಿ ಹೆಣ್ಣನ್ನು ಹಡೆದು ಪರರಿಗೆ ಕೊಡುವಾಗಿನ ಪ್ರತಿಭಟನೆ ಆಕೆಯದು.ಕರುಳ ಬಳ್ಳಿಯ ಸಂಬಂದಲ್ಲಿ ಚಡಪಡಿಸುತ್ತಾಳೆ.ಬದುಕಿನ ಬಗ್ಗೆ ಆಕ್ರೋಶ ಗೊಳ್ಳುತ್ತಾಳೆ.ತಾಯಿಗೆ ಮಗಳು ಸರ್ವಸ್ವ.ಮಗಳ ಪಾಲಿಗೆ ಆಕೆ ಪವಿತ್ರ ಆತ್ಮ ದೇವತೆ..ಇಂಥಹ ಭಾವನಾತ್ಮಕ ಸನ್ನಿವೇಶ. ಸ್ತ್ರೀಯ ಪಯಣ ತವರ ಕುಡಿಯ ಬದುಕಿ ನಿಂದ ಪತಿಯ ಸಂಸಾರ, ವಂಶದ ವಾರ ಸುದಾರಳಾಗುವ ತನಕದ ಹೆಜ್ಜೆಗಳು ಎಂದು ಹೇಳಬಹುದು. ಜನಪದರಲ್ಲಿ ಮಹಿಳೆ ಒಂದು ಮೌಲ್ಯವೆ ಸರಿ. ಆದರೆ ಅದಕ್ಕೆ ಪೂರಕ ಆತ್ಮಶಕ್ತಿ ತಾಯಿ ಪ್ರತಿಮೆಯ ವ್ಯಾಮೋಹವಾಗಿದೆ.
“ಯಾರು ಇದ್ದರೂ ತನ್ನllತಾಯವ್ವನೋಲರು
ಸಾವಿರ ಕೊಳ್ಳಿಒಲಿಯಾಗllಇದ್ದರೆ ಜ್ಯೋತಿ
ನಿನ್ನಾರ ಹೋಲರು.ll
ಜನಪದ ಸ್ತ್ರೀಗೆ ತಾಯಿಯ ವ್ಯಕ್ತಿತ್ವ ಗೌರವ ಆದರದ ಪ್ರತೀಕ .ಜೀವನದ ಆದಶ೯ ಗಳನ್ನು ಕಲಿಸಿದಾಕೆ.ಪ್ರೀತಿಯ ಭಾವ ಸಂಬಂದಳನ್ನು ಹಂಚಿಕೊಂಡಾಕೆ.ಗುರುವೆಂಬ ತಾಯಿಗೆ ಗೌರವಿಸುವ ಹಿರಿದಾದ ಮನಸ್ಸು ಮಗಳಿಗೆ. ” ಯಾರು ಇದ್ದರೂ ತನ್ನ ತಾಯವ್ವನೋಲರು ಎಂಬ ಅಭಿಮಾನದ ಮಾತುಗಳು. ಕತ್ತಲೆಂಬ ಬದುಕಿಗೆ ಆಶಾಕಿರಣವಾದ ತಾಯಿಯ ಋಣವನ್ನು ಜ್ಯೋತಿಗೆಹೋಲಿಸಿ ಸಾರ್ಥ ಕತೆಯನ್ನು ಹಂಚಿಕೊಳ್ಳುತ್ತಾಳೆ.ಜ್ಯೋತಿ ನಿನ್ನಾರ ಹೋಲರು. ಜಾನಪದ ಸಮಾಜ ಪ್ರಧಾನವಾಗಿ ನಂಬಿದ್ದು ತಾಯಿಪರವಾದ ದೇವರನ್ನು.ತಾಯಿ ಎಂಬ ಚೈತನ್ಯ ಮೌಲ್ಯದ ಖನಿಯನ್ನು.ಸರ್ವರೀತಿಯಿAದಲೂ ಜನಪದ ಪರಂಪರೆಯ ಸಾಂಸ್ಕ್ರತಿಕ ಮಹಾ ಪೂರ.ಅಗಣಿತವಾದ ಮೌಲ್ಯಗಳ ಮೇರು ಪರ್ವತ ಆಕೆ.ಹೀಗಾಗಿ ಜನಪದರ ಹೇಳಿಕೆಗಳು ಕಲಾಪ್ರತಿಮೆಯ ಹೊಳವುಗಳಾಗಿವೆ.ಅಸಂಖ್ಯಾತ ಮುಕ್ತಕಗಳನ್ನು ಮಿಂಚಿಸಿ ಕಾವ್ಯ ರೂಪಕಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ತನ್ನ. ಮಗು ಆದಶ೯ದ ವ್ಯಕ್ತಿಯಾಗ ಬೇಕೆಂದು ಕನಸು ಕಂಡಾಕೆ…
” ಆಚಾರಕೆ ಅರಸಾಗುllನೀತಿಗೆ ಪ್ರಭುವಾಗು
ಮಾತಿನಲಿ ಚೂಡಾಮಣಿಯಾಗುll ನನ
ಕಂದllಜ್ಯೋತಿಯೆ ಆಗು ಜಗಕ್ಕೆಲ್ಲಾll”
ಜನಪದ ಸ್ತ್ರೀ ಹೇಳಿಕೆಗಳಲ್ಲಿ ಮುತ್ತಿನಂಥಾ ಹೋಲಿಕೆಗಳಿರುತ್ತವೆ.ಒಳ್ಳೆಯ ನಡೆ ನುಡಿ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡರೆ ಸಮಾಜದಲ್ಲಿ ಉತ್ತಮವಾದ ಗೌರವ ಸ್ಥಾನ ಗಳು ಸಿಗುತ್ತವೆ ಎಂಬ ಹಿತೋಪದೇಶದ ಮಾತುಗಳು…. ನೀತಿಗೆ ಪ್ರಭುವಾಗ ಬೇಕಾದರು ಅಹ೯ತೆ ಯನ್ನುಪಡೆಯ ಬೇಕೆಂಬ ಆಶೆಆಕೆಯದು. ಮಗುವಿನ ವ್ಯಕ್ತಿತ್ವ ಸಾಮರ್ಥ್ಯಗಳ ಹಂಬಲ ದಲ್ಲಿ ಮಾತಿನಲಿ ಚೂಡಾಮಣಿಯಾಗ ಬೇಕೆಂಬ ಒತ್ತಾಸೆಯಾಗಿದೆ.ಮಗುವಿನ ಭವಿಷ್ಯ.
ಕಲ್ಪನೆಯ ಕನಸನ್ನು ಕಂಡು ಮಾತಿನ ಸೌಂದರ್ಯ ವನ್ನು ಅಪೇಕ್ಷಿಸುತ್ತಾಳೆ.ಪರಿವಾರವನ್ನು ಬೆಸೆಯುವ ಅಪರೂಪದ ಚೂಡಾಮಣಿ ಹೋಲಿಕೆ ಕೊಡುತ್ತಾಳೆ. ಜಗತ್ತಿಗೆ ಜ್ಯೋತಿಯಾದವನು ಬಸವಣ್ಣ. ಬಸವ ಬೆಳಗಿನ ಉತ್ಕರ್ಷ ತಾಯಿಯದು ದೀಪವು ತಾನೆ ಉರಿದು ಇನ್ನೊಬ್ಬರಿಗೆ ಬೆಳಕು ಕೊಡುವ ಏಕತಾನತೆ ಆಕೆಯದು..
“ಜ್ಯೋತಿ ಬೆಳಗುತಿದೆ ನಿರ್ಮಲ ಪರಂ ಜ್ಯೋತಿ
ಬೆಳಗುತಿದೆ.ಮಾತು ಮನಂಗಳೆಂದತ್ತತ್ತ
ಮೀರಿದ ನಿರ್ಮಲ ಜ್ಯೋತಿ ಬೆಳಗುತಿದೆ”.
ಎನ್ನುವ ನಿಜಗುಣ ಶಿವಯೋಗಿಗ ಕೈವಲ್ಯ ಹಾಡನ್ನು ಗಮನಿಸ ಬೇಕು… ಸತ್ಯ ಶುದ್ದ ಜೀವನಕ್ಕೆ ಆತ್ಮ ಸಾಕ್ಷಾತ್ಕಾರಕ್ಕೆ ಮಾತೆಂಬ ಜ್ಯೋತಿ ಹಿರಿದಾದ ಸಾಮರಸ್ಯವನ್ನು ವಹಿಸುತ್ತದೆ ಜನಪದ ಸಾಹಿತ್ಯವಿರುವುದೇ ಸೌಂದರ್ಯದಲ್ಲಿ ಸರಳತೆಯಲ್ಲಿ ಸಹಜತೆಯಲ್ಲಿ .ಅನುಭವತುಂಬಿ ಬಂದಾಗಲೆಲ್ಲಾ ಮಾತಾಗುತ್ತದೆ. ಆಡುವ ಮಾತೆಲ್ಲಾ ಕಾವ್ಯವಾಗುತ್ತದೆ. ಅವರು ಕೊಡುವ ನುಡಿ ಮುತ್ತುಗಳು ಅಲಂಕಾರ ಪ್ರಾಸ ವಿನೋದ ವಣ೯ನೆ ಇವೆಲ್ಲಾ ಜನಪದರನ್ನು ಬಿಂಬಿಸುವ ಸಂಸ್ಕ್ರತಿ ಯಾಗಿದೆ.ಇನ್ನೊಬ್ಬರ ಕಷ್ಟಕಂಡು ಮರಗುವ ಮಾನವೀಯ ಮೌಲ್ಯಗಳ ಹೂರಣವೇ ಜಾನಪದವಾಗಿದೆ.
–ಡಾ.ಸರ್ವಮಂಗಳ ಸಕ್ರಿ
ಉಪನ್ಯಾಸಕರು,ರಾಯಚೂರು