ಶೀಗಿ ಹುಣ್ಣಿಮೆ …
ಭೂತಾಯಿಯ ಸೀಮಂತದ ದಿನ
ಭಾರತ ದೇಶ ಕೃಷಿ ಪ್ರಧಾನವಾದದ್ದು. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶ ಇವುಗಳನ್ನು ಕೂಡ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮ್ಮನ್ನು ಹಡೆದ ತಾಯಿಗಿಂತಲೂ ಹೆಚ್ಚು. ‘ ಮಾತಾ ಭೂಮಿಹಿ ಪುತ್ರೋಹಂ ಪೃಥ್ವಿವ್ಯಾಹ’ಎಂದು ನಮ್ಮ ಮಹಾನ್ ಕಾವ್ಯ ಭೂಮಿ ಸೂಕ್ತದಲ್ಲಿ ಹೇಳಿದೆ. ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಹುಟ್ಟಿರುವ, ಬೆಳೆದಿರುವ, ನಡೆದಾಡುವ ಈ ಭೂಮಿ ನಮ್ಮ ಜನನಿ ಮತ್ತು ನಾವೆಲ್ಲರೂ ಆಕೆಯ ಮಕ್ಕಳು. ಆದ್ದರಿಂದಲೇ ನಮ್ಮ ಹಿರಿಯರು ಹೇಳಿದ್ದಾರೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’… ಇಷ್ಟೇ ನಾವು ಜನಿಸಿದ ಈ ಭೂಮಿ ನಮಗೆ ಸ್ವರ್ಗಕ್ಕಿಂತಲೂ ಹೆಚ್ಚು.
ಭೂಮಿಯ ಜೊತೆಗಿರುವ ನಮ್ಮ ಸಂಬಂಧ ತಾಯಿ ಮಕ್ಕಳಂತೆ ಎಂಬುದು ಹಲವು ವಿಧಗಳಲ್ಲಿ ವೇದ್ಯವಾಗುತ್ತದೆ. ಮುಂಜಾನೆ ತಾಯಂದಿರು ಎದ್ದೊಡನೆ ‘ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯಿ, ಎದ್ದೊಂದು ಗಳಿಗೆ ನೆನೆದೇನ’ ಎಂದು ನೆಲ ಮುಟ್ಟಿ ನಮಸ್ಕರಿಸುತ್ತಾರೆ.
ಆಟವಾಡುವ ಪ್ರತಿ ಕ್ರೀಡಾಳು ಕೂಡ ನೆಲವನ್ನು ಮುಟ್ಟಿ ನಮಸ್ಕರಿಸಿ ಗೆಲುವಿಗಾಗಿ ಪ್ರಾರ್ಥಿಸಿ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಆತನ ಎದುರಾಳಿ ಕೂಡ ಅದೇ ಭೂಮಿ ತಾಯಿಯನ್ನು ಅಂದರೆ ನೆಲವನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇದೇ ನಮ್ಮ ಭಾರತೀಯ ಪರಂಪರೆಯ ಸೊಗಡು ಪರಸ್ಪರ ಎದುರಾಳಿಗಳಿಗೂ ಕೂಡ ಭೂಮಿ ತಾಯಿ ಮಾತೃಸ್ವರೂಪಳು. ತನ್ನ ಹೊಲವನ್ನು ಉತ್ತುವ ರೈತ ಕೂಡ..ಅಮ್ಮ ಬಂಗಾರದಂತಹ ಬೆಳೆ ಕೊಡು ಎಂದು ಬೇಡಿ ಕೊಳ್ಳುತ್ತಾನೆ. ಇದು ನಮ್ಮ ಭಾರತೀಯ ಪರಂಪರೆಯ ಶ್ರೀಮಂತಿಕೆಯು ಹೌದು. ಭೂಮಿ ತಾಯೆಡೆಗಿನ ಶ್ರದ್ಧೆ ಅನನ್ಯ. ಅದು ಭಾವಕ್ಕೆ ನಿಲುಕದ್ದು.. ಭಾವನಾತೀತವಾದುದು.
ನಮ್ಮ ಸಂಸ್ಕೃತ ಕಾವ್ಯಗಳಲ್ಲಿ ಮತ್ತು ಯೋಗದ ಪಠ್ಯಗಳಲ್ಲಿ
‘ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶ೦ ಕ್ಷಮಸ್ವಮೇ ‘
ಎಂದು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ. ಇದರ ತಾತ್ಪರ್ಯವಿಷ್ಟೇ ಸಮುದ್ರವೇ ನಿನ್ನ ವಸ್ತ್ರವು, ಪರ್ವತಗಳು ನಿನ್ನ ಸ್ತನ ಮಂಡಲಗಳು, ವಿಷ್ಣು ಪತ್ನಿ ಅಂದರೆ ಮಾತೇ ಲಕ್ಷ್ಮೀದೇವಿಯಾದ ಭೂಮಿ ತಾಯಿಯನ್ನು ನಾನು ನನ್ನ ಕೆಲಸಕಾರ್ಯಗಳಿಗಾಗಿ ತುಳಿಯುತ್ತೇನೆ, ನಡೆದಾಡುತ್ತೇನೆ ಆದ್ದರಿಂದ ನನ್ನನ್ನು ಕ್ಷಮಿಸು ತಾಯಿ ಎಂದು. ಹೀಗೆ ಭೂಮಿ ಮತ್ತು ಮನುಷ್ಯನ ಸಂಬಂಧ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತಾಯಿ ಮಕ್ಕಳ ಸಂಬಂಧದಂತೆ ಹಾಸು ಹೊಕ್ಕಾಗಿದೆ. ಅದರಲ್ಲಿಯೂ ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗ ಎಂದೇ ಕರೆಯುತ್ತಾರೆ.
ಭೂಮಿ ತಾಯಿ ನಮಗೆ ಜೀವನಕ್ಕೆ ಅವಶ್ಯಕವಾದ ಆಹಾರವನ್ನು ನೀರನ್ನು ದಯಪಾಲಿಸುತ್ತಾಳೆ. ನಮ್ಮನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಾಳೆ. ಮುಂದೆ ನಾವು ಮಡಿದ ಮೇಲೆಯೂ ಮತ್ತೆ ತನ್ನ ಉದರದಲ್ಲಿ ನಮಗೆ ಆಶ್ರಯ ನೀಡುತ್ತಾಳೆ.
ಶ್ರಾವಣಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ ಹೊರಡುತ್ತದೆ. ಅದರಲ್ಲಿ ಶೀಗಿ ಹುಣ್ಣಿಮೆಯೂ ಒಂದು. ದಸರೆಯ ನಂತರ ಆಶ್ವಿಜ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ಬಯಲು ಸೀಮೆಯ ಜನ ಶೀಗಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇದನ್ನು ಕರ್ನಾಟಕದ ಕೆಲವೆಡೆ ಭೂಮಿ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮಳೆಗಾಲ ಸ್ವಲ್ಪ ಹಿಂದೆ ಸರಿದು ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು ತೆನೆಗಳು ಕಣ್ಸೆಳೆಯುತ್ತಿರುತ್ತವೆ. ಹೊಲದ ಪ್ರತಿ ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ದಿನದಂದು ರೈತನು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ. ಜೊತೆ ಜೊತೆಗೆ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಡಗರ ಪಡುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ.
ಶೀಗಿ ಹುಣ್ಣಿಮೆಗೆ ಹಲವಾರು ದಿನಗಳ ಮುಂಚೆಯೇ ಈ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆಯೆಂದ ಮೇಲೆ ಅಂಕಿ ಸಂಖ್ಯೆಗಳು ಮುಖ್ಯವಲ್ಲ ಜನರ ಹೊಟ್ಟೆ ತುಂಬುವುದು ಮುಖ್ಯ. ತೆಳ್ಳಗೆ ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳು, ಬಗೆ ಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ (ನವಣೆ ಅಕ್ಕಿಯನ್ನು ಹುರಿದು ಮಾಡುವ ಒಂದು ಸಿಹಿ ಪದಾರ್ಥ), ಕರ್ಚಿಕಾಯಿಗಳು ಮೊದಲೇ ತಯಾರಾದರೆ ಹಬ್ಬದ ದಿನ ಎಣ್ಣೆ ಬದನೆಕಾಯಿ ಪಲ್ಯ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನ ಕಾಯಿಯ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಲವಾರು ಬಗೆಯ ಹಸಿಯಾಗಿಯೇ ತಿನ್ನಬಹುದಾದ ಹಸಿ ಈರುಳ್ಳಿ, ಸೌತೆಕಾಯಿ ಗಜ್ಜರಿ ಮೆಂತ್ಯ ಸೊಪ್ಪು ಜೊತೆಗೆ ಭೂತಾಯಿಯ ಎಡೆಗಾಗಿ ಕುಚ್ಚಗಡಬು,ಸಜ್ಜೆ ಕಡುಬು,ಜೋಳದ ಕಡುಬು, ಚಿತ್ರಾನ್ನ, ಮೊಸರನ್ನಗಳ ಬುತ್ತಿ, ಕರಿದ ಹಪ್ಪಳ ಸಂಡಿಗೆ ಮೆಣಸಿನಕಾಯಿ ಬಾಳಕ ಗಳು ಹೀಗೆ ಹಲವಾರು ಬಗೆಯ ಪದಾರ್ಥಗಳು ತಯಾರಾಗಿ ಒಂದೊಂದೇ ಡಬ್ಬಗಳಲ್ಲಿ ಶೇಖರಿಸಲ್ಪಟ್ಟು.. ಆ ಎಲ್ಲ ಡಬ್ಬಗಳನ್ನು ಶುದ್ಧ ಹಸಿ ವಸ್ತ್ರದಿಂದ ಒರೆಸಿ ವಿಭೂತಿ ಪಟ್ಟಿಯನ್ನು ಬರೆದು ಮತ್ತೆ ಎಲ್ಲಾ ಡಬ್ಬಗಳನ್ನು ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಹೇರಲಾಗುತ್ತದೆ.
ಹೆಂಗಳೆಯರು ಇಲ್ಕಲ್ ಸೀರೆ ಕುಪ್ಪಸ, ರೇಷ್ಮೆ ಸೀರೆಗಳನ್ನು ಧರಿಸಿ ಬೋರಮಾಳ ಸರ, ಗುಂಡಿನ ಸರ, ಟೀಕಿ ಸರ, ಕಾಸಿನ ಸರ, ಗುಂಡ್ಹಚ್ಚಿನ ಸರ, ಪಾಟಲಿ, ಬಿಲವಾರ, ಹಸಿರು, ಕೆಂಪು ಮತ್ತು ಚಿಕ್ಕಿಯಬಳೆಗಳ ಧರಿಸಿ ಸೆರಗುಹೊತ್ತು ಅಲಂಕರಿಸಿಕೊಂಡರೆ, ಇತ್ತೀಚಿನ ನೀರೆಯರು ನಾವೇನು ಕಡಿಮೆ ಎಂಬಂತೆ ಜರತಾರಿ ಸೀರೆಗಳಲ್ಲಿ, ಹಳೆಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ತಯಾರಾಗುತ್ತಾರೆ. ಮಕ್ಕಳಿಗಂತೂ ಹಬ್ಬವೋ ಹಬ್ಬ. ತಂದೆ, ಅಜ್ಜ೦ದಿರಿಗೆ ದನಗಳನ್ನು ಹಳ್ಳಕ್ಕೆ ಕರೆದೊಯ್ದು ಜಳಕ ಮಾಡಿಸಲು, ತಯಾರು ಮಾಡಲು ಅವರ ಸಹಾಯ ಹಸ್ತ ಇದ್ದೇ ಇರುತ್ತದೆ. ದನ ಕರುಗಳು ಕೂಡ ಹಳ್ಳಗಳಲ್ಲಿ ಮೀಯಿಸಲ್ಪಟ್ಟು ಕೋಡುಗಳಿಗೆ ಬಣ್ಣ ಬಳಿದು ಅವುಗಳ ಬೆನ್ನ ಮೇಲೆ ಜರತಾರಿಯ ಸೀರೆಯಿಂದ ತಯಾರಾದ ಅಂಗವಸ್ತ್ರಗಳನ್ನು ಹೊದೆದು, ಕೋಡಣಸು, ಕೊಂಬಿನ ಸರಗಳನ್ನು ಧರಿಸಿ, ಕೊಂಬುಗಳನ್ನು ಕೂಡ ಶೃಂಗರಿಸಿ ಎಲ್ಲರೂ ಭೂತಾಯಿಯ ಪೂಜೆ ಸಲ್ಲಿಸಲು ಹೊಲಕ್ಕೆ ಸಾಗುತ್ತಾರೆ. ಒಟ್ಟಿನಲ್ಲಿ ಕಣ್ಣಿಗೆ ಹಬ್ಬದ ವಾತಾವರಣ, ಸಂಭ್ರಮ ಸಡಗರದ ಕಳೆ. ಎತ್ತಿನ ಕೊರಳಲ್ಲಿರುವ ಗಂಟೆಯ ಝೀಂಕಾರ, ಚಕ್ಕಡಿ ಹೊಡೆಯುವವನ ಹೂಂಕಾರ, ಮರದ ಗಾಲಿಯ ಕ್ಲಿಂಕಾರ, ಗಾಲಿಗೆ ಕೋಲಿಟ್ಟು ಶಬ್ದ ಮಾಡುವ ರೀತಿ ಮನಮೋಹಕ.
ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿರುವ ಒಂದು ಅಚ್ಚುಕಟ್ಟಾದ ತಾವನ್ನು.. ಹೆಚ್ಚಾಗಿ ಬನ್ನಿ ಗಿಡ ಇರುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಜಮಖಾನೆಯನ್ನು ಹಾಸಿ ಬನ್ನಿ ಗಿಡದ ಕೆಳಗೆ ಐದು ಜನ ಪಂಚ ಪಾಂಡವರನ್ನು ( ೫ ಕಲ್ಲುಗಳನ್ನು ಪಾಂಡವರ ರೂಪದಲ್ಲಿ ಮತ್ತು ಹಿಂದೆ ಕರ್ಣನ (ಕೆಲವರು ಕಳ್ಳ ಎಂದು ಅಪಭ್ರಂಶ ಮಾಡಿದ್ದಾರೆ) ಹೆಸರಿನಲ್ಲಿ ಇನ್ನೊಂದು ಕಲ್ಲನ್ನು ಪ್ರತಿಷ್ಠಾಪಿಸಿ ಭೂತಾಯಿಯನ್ನು ಬನ್ನಿ ಮರದಲ್ಲಿ ಆಹ್ವಾನಿಸಿ, ಪ್ರತಿಷ್ಠಾಪಿಸಿ, ಪೂಜಿಸಿ, ಮಂಗಳಾರತಿ ಮಾಡಿ ಕಾಯಿ ಒಡೆದು ನೈವೇದ್ಯವನ್ನು ಮಾಡುತ್ತಾರೆ.
‘ಚಂದ್ರಗಾವಿಯ ಸೀರಿ ಚಂದಾಕ ತಂದೀನಿ ಭೂಮಿ ತಾಯವ್ವ ಉಡು ಬಾರ, ನಮ್ಮವ್ವ ರಾಶಿಗೆ ಹುಲಸು ಕೊಡು ಬಾರ, ಹಸಿರು ಸೀರಿ ಉಟ್ಟು ಬಸರಾದಳು, ಭೂತಾಯಿ ಬಸರಾದ ಅವಳ ನಡು ಚಂದ ಮಲೆನಾಡ ಸೂಸುವ ಭತ್ತದಂಗ ಬಳುಕ್ಯಾಳು”
ಎಂದು ಭೂಮಿ ತಾಯಿಯನ್ನು ಕೊಂಡಾಡುತ್ತಾರೆ.
ಪಾಂಡವರನ್ನು ಪೂಜಿಸುವ ಹಿಂದೆಯೂ ಒಂದು ಕಥೆ ಇದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ಹಸಿವಿನಿಂದ ತತ್ತರಿಸುತ್ತಾ ಹೊಲದ ಬಳಿ ಬಂದಾಗ ಅಲ್ಲಿ ದಂಪತಿಗಳು ಬನ್ನಿ ಮರದ ಕೆಳಗೆ ಭೂತಾಯಿಯ ಪೂಜೆ ಮಾಡಿ ಆಹಾರ ಸ್ವೀಕರಿಸಲು ಅಣಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಬಂದ ಅಭ್ಯಾಗತರನ್ನು ಸ್ವಾಗತಿಸಿದ ರೈತ ದಂಪತಿಗಳು ಅವರಿಗೆ ಊಟಕ್ಕೆ ಬಡಿಸಲು ಮುಂದಾದಾಗ ತಟ್ಟೆ ಅಥವಾ ಎಲೆ ಇರಲಿಲ್ಲ. ಆಗ ಮಾರುವೇಶದಲ್ಲಿದ್ದ ಧರ್ಮರಾಜನು ಮೇಲಿದ್ದ ಬನ್ನಿ ಪತ್ರವನ್ನು ಹರಿದು ಆ ಎಲೆಯಲ್ಲಿಯೇ ಊಟ ಬಡಿಸಲು ದಂಪತಿಗಳನ್ನು ಕೇಳಿಕೊಳ್ಳುತ್ತಾನೆ. ಅಷ್ಟು ಪುಟ್ಟ ಬನ್ನಿ ಎಲೆಯಲ್ಲಿ ಆಹಾರ ಹಿಡಿಸುವುದೇ ಎಂದು ಸೋಜಿಗದಿಂದ ರೈತ ದಂಪತಿಗಳು ಬಡಿಸುತ್ತಾ ಹೋದರೆ ಎಲೆ ತುಂಬುವುದೇ ಇಲ್ಲ, ಆದರೆ ಪಂಚಪಾಂಡವರು ತೃಪ್ತಿಯಿಂದ ಊಟ ಮಾಡುತ್ತಾರೆ. ಅಷ್ಟೇ ಅಲ್ಲ ತಮಗೆ ಉಣ ಬಡಿಸಿದ ರೈತ ದಂಪತಿಗಳಿಗೆ ತಾವು ಯಾವತ್ತೂ ರೈತನ ಹೊಲ ಕಾಯುವ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವೆವು ಎಂದು ಮಾತು ಕೊಡುತ್ತಾರೆ. ಅದಕ್ಕೆ ರೈತ ದಂಪತಿ ಪ್ರತಿವರ್ಷವೂ ಶೀಗಿ ಹುಣ್ಣಿಮೆಯ ಈ ದಿನ ನಿಮ್ಮನ್ನು ನಾವು ಸತ್ಕರಿಸುತ್ತೇವೆ ಎಂದು ಪ್ರತಿಯಾಗಿ ಹೇಳುತ್ತಾರೆ. ಅಜ್ಞಾತವಾಸಕ್ಕೂ ಮುನ್ನವೇ ಕರ್ಣನು ತಮ್ಮ ಸಹೋದರನೆಂಬ ಅರಿವಿದ್ದ ಸಹೋದರರು ಮತ್ತೊಂದು ಬನ್ನಿಯ ಪತ್ರ(ಎಲೆ)ದಲ್ಲಿ ತಮ್ಮ ಸಹೋದರ ಕರ್ಣನಿಗಾಗಿ ಆಹಾರವನ್ನು ಪಡೆಯುತ್ತಾರೆ ಎಂಬುದು.)
ನಂತರ ನೈವೇದ್ಯ ಮಾಡಿದ ಒಂದು ಭಾಗವನ್ನು ಭೂಮಿಯಲ್ಲಿ ಗುಳಿ ತೋಡಿ ಅಲ್ಲಿ ಆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಇನ್ನುಳಿದ ನೈವೇದ್ಯದ ಭಾಗವನ್ನು ಚರಗಾ ಚೆಲ್ಲಲಿಕ್ಕೆಂದು ಹೊರಡುತ್ತಾರೆ. ನೈವೇದ್ಯ ಹಿಡಿದ ವ್ಯಕ್ತಿ ಹುಲ್ಲುಲ್ಲಿಗೋ ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಎಡೆಯಿಂದ ಸ್ವಲ್ಪ ಸ್ವಲ್ಪ ಭಾಗವನ್ನು ಹೊಲದ ಸುತ್ತಲೂ ಚೆಲ್ಲುತ್ತಾ ಸಾಗಿದರೆ ಹಿಂದೆ ಸಾಗುವ ಮಕ್ಕಳು ಚಳ್ಳಂಬರಿಗೋ ಎಂದು ಕೂಗುತ್ತಾ ಸಾಗುತ್ತಾರೆ. ಹುಲ್ಲುಲ್ಲಿಗೋ ಅಂದರೆ ಹೊಲದಲ್ಲಿರುವ ಪ್ರತಿಯೊಂದು ಹುಲ್ಲಿನ ಕಣಕ್ಕೂ, ಚಳ್ಳಂಬರಿಗೋ ಎಂದರೆ ಪ್ರತಿಯೊಂದು ಬೇರಿಗೂ ಈ ಆಹಾರವು ಮುಟ್ಟಲಿ ಎಂಬುದು ರೈತನ ಆಶಯ. ಜೊತೆಗೆ ಹೊಲದಲ್ಲಿರುವ ಎಲ್ಲಾ ಕ್ರಿಮಿಕೀಟಗಳಿಗು ರೈತ ಚರಗ ಚೆಲ್ಲುವ ಮೂಲಕ ಆಹಾರ ಸಲ್ಲಿಸುತ್ತಾನೆ…. ತನ್ಮೂಲಕ ವಸುದೈವ ಕುಟುಂಬಕಂ ಎಂದು ಜಗತ್ತಿಗೆ ಸಾರುತ್ತಾನೆ. ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧು ಬಾಂಧವರೂಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತಾರೆ. ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು ..ಸವಿದಷ್ಟು ಸವಿ ಹೆಚ್ಚಾಗುವ, ಮೊಗೆದಷ್ಟೂ ಬಸಿವ ನೀರಿನ ಊಟೆಯಂತೆ. ತನ್ನಲ್ಲಿರುವ ಎಲ್ಲವನ್ನು ಎಲ್ಲರಿಗೂ ಸ್ವ ಸಂತೋಷದಿಂದ ಹಂಚಿ ಅವರ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುವ ಜಗತ್ತಿನ ಏಕೈಕ ವ್ಯಕ್ತಿ ರೈತ. ಹೀಗೆ ರೈತ ಸಂತಸ ಪಡಲು ಆತನ ಕೊಡುವ ಗುಣವೇ ಕಾರಣವಾಗಿದೆ. ಈ ರೀತಿ ಶೀಗೆ ಹುಣ್ಣಿಮೆಯನ್ನು ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೀವು ಕೂಡ ಹತ್ತಿರದ ಯಾವುದಾದರೂ ಊರಿನ ಹೊಲಕ್ಕೆ ಹೋದರೆ ಅಲ್ಲಿಯ ರೈತರು ನಿಮ್ಮನ್ನು ಕೂಡ ಕರೆದು ಉಣ ಬಡಿಸುವುದರಲ್ಲಿ ಸಂದೇಹವೇ ಇಲ್ಲ. ಈ ರೀತಿ ಭೂಮಿ ತಾಯಿಯನ್ನು ಪೂಜಿಸುವ ರೈತ ಯಾವಾಗಲೂ ನಗುನಗುತ್ತಾ ಇರಲಿ ಆತನ ಬಾಳು ಹಸನಾಗಲಿ, ರೈತ ಜಗದ ಬೆಳಕಾಗಲಿ ಎಂಬಶೀಗಿ ಹುಣ್ಣಿಮೆ …ಭೂತಾಯಿಯ
ಸೀಮಂತದ ದಿನ
ಭಾರತ ದೇಶ ಕೃಷಿ ಪ್ರಧಾನವಾದದ್ದು. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶ ಇವುಗಳನ್ನು ಕೂಡ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮ್ಮನ್ನು ಹಡೆದ ತಾಯಿಗಿಂತಲೂ ಹೆಚ್ಚು. ‘ ಮಾತಾ ಭೂಮಿಹಿ ಪುತ್ರೋಹಂ ಪೃಥ್ವಿವ್ಯಾಹ’ಎಂದು ನಮ್ಮ ಮಹಾನ್ ಕಾವ್ಯ ಭೂಮಿ ಸೂಕ್ತದಲ್ಲಿ ಹೇಳಿದೆ. ಈ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಾವು ಹುಟ್ಟಿರುವ, ಬೆಳೆದಿರುವ, ನಡೆದಾಡುವ ಈ ಭೂಮಿ ನಮ್ಮ ಜನನಿ ಮತ್ತು ನಾವೆಲ್ಲರೂ ಆಕೆಯ ಮಕ್ಕಳು. ಆದ್ದರಿಂದಲೇ ನಮ್ಮ ಹಿರಿಯರು ಹೇಳಿದ್ದಾರೆ ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’… ಇಷ್ಟೇ ನಾವು ಜನಿಸಿದ ಈ ಭೂಮಿ ನಮಗೆ ಸ್ವರ್ಗಕ್ಕಿಂತಲೂ ಹೆಚ್ಚು.
ಭೂಮಿಯ ಜೊತೆಗಿರುವ ನಮ್ಮ ಸಂಬಂಧ ತಾಯಿ ಮಕ್ಕಳಂತೆ ಎಂಬುದು ಹಲವು ವಿಧಗಳಲ್ಲಿ ವೇದ್ಯವಾಗುತ್ತದೆ. ಮುಂಜಾನೆ ತಾಯಂದಿರು ಎದ್ದೊಡನೆ ‘ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯುವ ಭೂಮ್ತಾಯಿ, ಎದ್ದೊಂದು ಗಳಿಗೆ ನೆನೆದೇನ’ ಎಂದು ನೆಲ ಮುಟ್ಟಿ ನಮಸ್ಕರಿಸುತ್ತಾರೆ. ಆಟವಾಡುವ ಪ್ರತಿ ಕ್ರೀಡಾಳು ಕೂಡ ನೆಲವನ್ನು ಮುಟ್ಟಿ ನಮಸ್ಕರಿಸಿ ಗೆಲುವಿಗಾಗಿ ಪ್ರಾರ್ಥಿಸಿ ತನ್ನ ಆಟವನ್ನು ಪ್ರಾರಂಭಿಸುತ್ತಾನೆ ಆತನ ಎದುರಾಳಿ ಕೂಡ ಅದೇ ಭೂಮಿ ತಾಯಿಯನ್ನು ಅಂದರೆ ನೆಲವನ್ನು ಮುಟ್ಟಿ ನಮಸ್ಕರಿಸುತ್ತಾನೆ. ಇದೇ ನಮ್ಮ ಭಾರತೀಯ ಪರಂಪರೆಯ ಸೊಗಡು ಪರಸ್ಪರ ಎದುರಾಳಿಗಳಿಗೂ ಕೂಡ ಭೂಮಿ ತಾಯಿ ಮಾತೃಸ್ವರೂಪಳು. ತನ್ನ ಹೊಲವನ್ನು ಉತ್ತುವ ರೈತ ಕೂಡ..ಅಮ್ಮ ಬಂಗಾರದಂತಹ ಬೆಳೆ ಕೊಡು ಎಂದು ಬೇಡಿ ಕೊಳ್ಳುತ್ತಾನೆ. ಇದು ನಮ್ಮ ಭಾರತೀಯ ಪರಂಪರೆಯ ಶ್ರೀಮಂತಿಕೆಯು ಹೌದು. ಭೂಮಿ ತಾಯೆಡೆಗಿನ ಶ್ರದ್ಧೆ ಅನನ್ಯ. ಅದು ಭಾವಕ್ಕೆ ನಿಲುಕದ್ದು.. ಭಾವನಾತೀತವಾದುದು.
ನಮ್ಮ ಸಂಸ್ಕೃತ ಕಾವ್ಯಗಳಲ್ಲಿ ಮತ್ತು ಯೋಗದ ಪಠ್ಯಗಳಲ್ಲಿ ‘ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೆ ವಿಷ್ಣು ಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶ೦ ಕ್ಷಮಸ್ವಮೇ ‘ ಎಂದು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ. ಇದರ ತಾತ್ಪರ್ಯವಿಷ್ಟೇ ಸಮುದ್ರವೇ ನಿನ್ನ ವಸ್ತ್ರವು, ಪರ್ವತಗಳು ನಿನ್ನ ಸ್ತನ ಮಂಡಲಗಳು, ವಿಷ್ಣು ಪತ್ನಿ ಅಂದರೆ ಮಾತೇ ಲಕ್ಷ್ಮೀದೇವಿಯಾದ ಭೂಮಿ ತಾಯಿಯನ್ನು ನಾನು ನನ್ನ ಕೆಲಸಕಾರ್ಯಗಳಿಗಾಗಿ ತುಳಿಯುತ್ತೇನೆ, ನಡೆದಾಡುತ್ತೇನೆ ಆದ್ದರಿಂದ ನನ್ನನ್ನು ಕ್ಷಮಿಸು ತಾಯಿ ಎಂದು. ಹೀಗೆ ಭೂಮಿ ಮತ್ತು ಮನುಷ್ಯನ ಸಂಬಂಧ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತಾಯಿ ಮಕ್ಕಳ ಸಂಬಂಧದಂತೆ ಹಾಸು ಹೊಕ್ಕಾಗಿದೆ. ಅದರಲ್ಲಿಯೂ ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗ ಎಂದೇ ಕರೆಯುತ್ತಾರೆ.
ಭೂಮಿ ತಾಯಿ ನಮಗೆ ಜೀವನಕ್ಕೆ ಅವಶ್ಯಕವಾದ ಆಹಾರವನ್ನು ನೀರನ್ನು ದಯಪಾಲಿಸುತ್ತಾಳೆ. ನಮ್ಮನ್ನು ತನ್ನ ಮಡಿಲಲ್ಲಿಟ್ಟು ಪೋಷಿಸುತ್ತಾಳೆ. ಮುಂದೆ ನಾವು ಮಡಿದ ಮೇಲೆಯೂ ಮತ್ತೆ ತನ್ನ ಉದರದಲ್ಲಿ ನಮಗೆ ಆಶ್ರಯ ನೀಡುತ್ತಾಳೆ.
ಶ್ರಾವಣಮಾಸದಿಂದ ದೀಪಾವಳಿಯವರೆಗೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ ಹೊರಡುತ್ತದೆ. ಅದರಲ್ಲಿ ಶೀಗಿ ಹುಣ್ಣಿಮೆಯೂ ಒಂದು. ದಸರೆಯ ನಂತರ ಆಶ್ವಿಜ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ಬಯಲು ಸೀಮೆಯ ಜನ ಶೀಗಿ ಹುಣ್ಣಿಮೆಯನ್ನು ಆಚರಿಸುತ್ತಾರೆ. ಇದನ್ನು ಕರ್ನಾಟಕದ ಕೆಲವೆಡೆ ಭೂಮಿ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮಳೆಗಾಲ ಸ್ವಲ್ಪ ಹಿಂದೆ ಸರಿದು ರೈತನ ಶ್ರಮಕ್ಕೆ ಪ್ರತಿಫಲವಾಗಿ ತುಂಬಿ ನಿಂತ ಪೈರು ತೆನೆಗಳು ಕಣ್ಸೆಳೆಯುತ್ತಿರುತ್ತವೆ. ಹೊಲದ ಪ್ರತಿ ಮೂಲೆಯೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇನ್ನೇನು ಕೊಯ್ಲು ಮತ್ತು ರಾಶಿ ಮಾಡುವ ಕ್ರಿಯೆ ಆರಂಭವಾಗುವ ಕೆಲವೇ ದಿನಗಳ ಮುಂಚೆ ಈ ದಿನದಂದು ರೈತನು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸೀಮಂತದ ಊಟವನ್ನು ಬಡಿಸುತ್ತಾನೆ. ಜೊತೆ ಜೊತೆಗೆ ತನ್ನ ಬಂಧು ಬಾಂಧವರೊಡಗೂಡಿ ಹಬ್ಬದ ಊಟ ಮಾಡಿ ಸಡಗರ ಪಡುತ್ತಾನೆ. ಇದನ್ನು ಉತ್ತರ ಕರ್ನಾಟಕದಲ್ಲಿ ‘ಚರಗ ಚೆಲ್ಲುವುದು’ ಎಂದು ಕರೆಯುತ್ತಾರೆ.
ಶೀಗಿ ಹುಣ್ಣಿಮೆಗೆ ಹಲವಾರು ದಿನಗಳ ಮುಂಚೆಯೇ ಈ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ. ರೈತರ ಮನೆಯೆಂದ ಮೇಲೆ ಅಂಕಿ ಸಂಖ್ಯೆಗಳು ಮುಖ್ಯವಲ್ಲ ಜನರ ಹೊಟ್ಟೆ ತುಂಬುವುದು ಮುಖ್ಯ. ತೆಳ್ಳಗೆ ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆಯ ರೊಟ್ಟಿಗಳು, ಬಗೆ ಬಗೆಯ ಚಟ್ನಿಪುಡಿಗಳು, ಕೆಂಪು ಹಿಂಡಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಎಣ್ಣೆ ಹೋಳಿಗೆ (ನವಣೆ ಅಕ್ಕಿಯನ್ನು ಹುರಿದು ಮಾಡುವ ಒಂದು ಸಿಹಿ ಪದಾರ್ಥ), ಕರ್ಚಿಕಾಯಿಗಳು ಮೊದಲೇ ತಯಾರಾದರೆ ಹಬ್ಬದ ದಿನ ಎಣ್ಣೆ ಬದನೆಕಾಯಿ ಪಲ್ಯ, ಮೊಳಕೆ ಬರಿಸಿದ ಕಾಳುಗಳ ಪಲ್ಯ, ಕುದಿಸಿದ ಮೆಣಸಿನ ಕಾಯಿಯ ಪಲ್ಯ, ಪುಂಡಿ ಪಲ್ಯ, ಹಿಟ್ಟಿನ ಪಲ್ಯ, ಹಲವಾರು ಬಗೆಯ ಹಸಿಯಾಗಿಯೇ ತಿನ್ನಬಹುದಾದ ಹಸಿ ಈರುಳ್ಳಿ, ಸೌತೆಕಾಯಿ ಗಜ್ಜರಿ ಮೆಂತ್ಯ ಸೊಪ್ಪು ಜೊತೆಗೆ ಭೂತಾಯಿಯ ಎಡೆಗಾಗಿ ಕುಚ್ಚಗಡಬು,ಸಜ್ಜೆ ಕಡುಬು,ಜೋಳದ ಕಡುಬು, ಚಿತ್ರಾನ್ನ, ಮೊಸರನ್ನಗಳ ಬುತ್ತಿ, ಕರಿದ ಹಪ್ಪಳ ಸಂಡಿಗೆ ಮೆಣಸಿನಕಾಯಿ ಬಾಳಕ ಗಳು ಹೀಗೆ ಹಲವಾರು ಬಗೆಯ ಪದಾರ್ಥಗಳು ತಯಾರಾಗಿ ಒಂದೊಂದೇ ಡಬ್ಬಗಳಲ್ಲಿ ಶೇಖರಿಸಲ್ಪಟ್ಟು.. ಆ ಎಲ್ಲ ಡಬ್ಬಗಳನ್ನು ಶುದ್ಧ ಹಸಿ ವಸ್ತ್ರದಿಂದ ಒರೆಸಿ ವಿಭೂತಿ ಪಟ್ಟಿಯನ್ನು ಬರೆದು ಮತ್ತೆ ಎಲ್ಲಾ ಡಬ್ಬಗಳನ್ನು ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಹೇರಲಾಗುತ್ತದೆ. ಹೆಂಗಳೆಯರು ಇಲ್ಕಲ್ ಸೀರೆ ಕುಪ್ಪಸ, ರೇಷ್ಮೆ ಸೀರೆಗಳನ್ನು ಧರಿಸಿ ಬೋರಮಾಳ ಸರ, ಗುಂಡಿನ ಸರ, ಟೀಕಿ ಸರ, ಕಾಸಿನ ಸರ, ಗುಂಡ್ಹಚ್ಚಿನ ಸರ, ಪಾಟಲಿ, ಬಿಲವಾರ, ಹಸಿರು, ಕೆಂಪು ಮತ್ತು ಚಿಕ್ಕಿಯಬಳೆಗಳ ಧರಿಸಿ ಸೆರಗುಹೊತ್ತು ಅಲಂಕರಿಸಿಕೊಂಡರೆ, ಇತ್ತೀಚಿನ ನೀರೆಯರು ನಾವೇನು ಕಡಿಮೆ ಎಂಬಂತೆ ಜರತಾರಿ ಸೀರೆಗಳಲ್ಲಿ, ಹಳೆಯ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ತಯಾರಾಗುತ್ತಾರೆ. ಮಕ್ಕಳಿಗಂತೂ ಹಬ್ಬವೋ ಹಬ್ಬ. ತಂದೆ, ಅಜ್ಜ೦ದಿರಿಗೆ ದನಗಳನ್ನು ಹಳ್ಳಕ್ಕೆ ಕರೆದೊಯ್ದು ಜಳಕ ಮಾಡಿಸಲು, ತಯಾರು ಮಾಡಲು ಅವರ ಸಹಾಯ ಹಸ್ತ ಇದ್ದೇ ಇರುತ್ತದೆ. ದನ ಕರುಗಳು ಕೂಡ ಹಳ್ಳಗಳಲ್ಲಿ ಮೀಯಿಸಲ್ಪಟ್ಟು ಕೋಡುಗಳಿಗೆ ಬಣ್ಣ ಬಳಿದು ಅವುಗಳ ಬೆನ್ನ ಮೇಲೆ ಜರತಾರಿಯ ಸೀರೆಯಿಂದ ತಯಾರಾದ ಅಂಗವಸ್ತ್ರಗಳನ್ನು ಹೊದೆದು, ಕೋಡಣಸು, ಕೊಂಬಿನ ಸರಗಳನ್ನು ಧರಿಸಿ, ಕೊಂಬುಗಳನ್ನು ಕೂಡ ಶೃಂಗರಿಸಿ ಎಲ್ಲರೂ ಭೂತಾಯಿಯ ಪೂಜೆ ಸಲ್ಲಿಸಲು ಹೊಲಕ್ಕೆ ಸಾಗುತ್ತಾರೆ. ಒಟ್ಟಿನಲ್ಲಿ ಕಣ್ಣಿಗೆ ಹಬ್ಬದ ವಾತಾವರಣ, ಸಂಭ್ರಮ ಸಡಗರದ ಕಳೆ. ಎತ್ತಿನ ಕೊರಳಲ್ಲಿರುವ ಗಂಟೆಯ ಝೀಂಕಾರ, ಚಕ್ಕಡಿ ಹೊಡೆಯುವವನ ಹೂಂಕಾರ, ಮರದ ಗಾಲಿಯ ಕ್ಲಿಂಕಾರ, ಗಾಲಿಗೆ ಕೋಲಿಟ್ಟು ಶಬ್ದ ಮಾಡುವ ರೀತಿ ಮನಮೋಹಕ.
ಪ್ರತಿಯೊಬ್ಬ ರೈತನು ತನ್ನ ಹೊಲದಲ್ಲಿರುವ ಒಂದು ಅಚ್ಚುಕಟ್ಟಾದ ತಾವನ್ನು.. ಹೆಚ್ಚಾಗಿ ಬನ್ನಿ ಗಿಡ ಇರುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಜಮಖಾನೆಯನ್ನು ಹಾಸಿ ಬನ್ನಿ ಗಿಡದ ಕೆಳಗೆ ಐದು ಜನ ಪಂಚ ಪಾಂಡವರನ್ನು ( ೫ ಕಲ್ಲುಗಳನ್ನು ಪಾಂಡವರ ರೂಪದಲ್ಲಿ ಮತ್ತು ಹಿಂದೆ ಕರ್ಣನ (ಕೆಲವರು ಕಳ್ಳ ಎಂದು ಅಪಭ್ರಂಶ ಮಾಡಿದ್ದಾರೆ) ಹೆಸರಿನಲ್ಲಿ ಇನ್ನೊಂದು ಕಲ್ಲನ್ನು ಪ್ರತಿಷ್ಠಾಪಿಸಿ ಭೂತಾಯಿಯನ್ನು ಬನ್ನಿ ಮರದಲ್ಲಿ ಆಹ್ವಾನಿಸಿ, ಪ್ರತಿಷ್ಠಾಪಿಸಿ, ಪೂಜಿಸಿ, ಮಂಗಳಾರತಿ ಮಾಡಿ ಕಾಯಿ ಒಡೆದು ನೈವೇದ್ಯವನ್ನು ಮಾಡುತ್ತಾರೆ.
‘ಚಂದ್ರಗಾವಿಯ ಸೀರಿ ಚಂದಾಕ ತಂದೀನಿ ಭೂಮಿ ತಾಯವ್ವ ಉಡು ಬಾರ, ನಮ್ಮವ್ವ ರಾಶಿಗೆ ಹುಲಸು ಕೊಡು ಬಾರ, ಹಸಿರು ಸೀರಿ ಉಟ್ಟು ಬಸರಾದಳು, ಭೂತಾಯಿ ಬಸರಾದ ಅವಳ ನಡು ಚಂದ ಮಲೆನಾಡ ಸೂಸುವ ಭತ್ತದಂಗ ಬಳುಕ್ಯಾಳು”
ಎಂದು ಭೂಮಿ ತಾಯಿಯನ್ನು ಕೊಂಡಾಡುತ್ತಾರೆ.
ಪಾಂಡವರನ್ನು ಪೂಜಿಸುವ ಹಿಂದೆಯೂ ಒಂದು ಕಥೆ ಇದೆ. ಅಜ್ಞಾತವಾಸದಲ್ಲಿದ್ದ ಪಾಂಡವರು ಹಸಿವಿನಿಂದ ತತ್ತರಿಸುತ್ತಾ ಹೊಲದ ಬಳಿ ಬಂದಾಗ ಅಲ್ಲಿ ದಂಪತಿಗಳು ಬನ್ನಿ ಮರದ ಕೆಳಗೆ ಭೂತಾಯಿಯ ಪೂಜೆ ಮಾಡಿ ಆಹಾರ ಸ್ವೀಕರಿಸಲು ಅಣಿಯಾಗಿದ್ದರು. ಸಮಯಕ್ಕೆ ಸರಿಯಾಗಿ ಬಂದ ಅಭ್ಯಾಗತರನ್ನು ಸ್ವಾಗತಿಸಿದ ರೈತ ದಂಪತಿಗಳು ಅವರಿಗೆ ಊಟಕ್ಕೆ ಬಡಿಸಲು ಮುಂದಾದಾಗ ತಟ್ಟೆ ಅಥವಾ ಎಲೆ ಇರಲಿಲ್ಲ. ಆಗ ಮಾರುವೇಶದಲ್ಲಿದ್ದ ಧರ್ಮರಾಜನು ಮೇಲಿದ್ದ ಬನ್ನಿ ಪತ್ರವನ್ನು ಹರಿದು ಆ ಎಲೆಯಲ್ಲಿಯೇ ಊಟ ಬಡಿಸಲು ದಂಪತಿಗಳನ್ನು ಕೇಳಿಕೊಳ್ಳುತ್ತಾನೆ. ಅಷ್ಟು ಪುಟ್ಟ ಬನ್ನಿ ಎಲೆಯಲ್ಲಿ ಆಹಾರ ಹಿಡಿಸುವುದೇ ಎಂದು ಸೋಜಿಗದಿಂದ ರೈತ ದಂಪತಿಗಳು ಬಡಿಸುತ್ತಾ ಹೋದರೆ ಎಲೆ ತುಂಬುವುದೇ ಇಲ್ಲ, ಆದರೆ ಪಂಚಪಾಂಡವರು ತೃಪ್ತಿಯಿಂದ ಊಟ ಮಾಡುತ್ತಾರೆ. ಅಷ್ಟೇ ಅಲ್ಲ ತಮಗೆ ಉಣ ಬಡಿಸಿದ ರೈತ ದಂಪತಿಗಳಿಗೆ ತಾವು ಯಾವತ್ತೂ ರೈತನ ಹೊಲ ಕಾಯುವ ಕಾರ್ಯವನ್ನು ನಿಷ್ಠೆಯಿಂದ ನಿರ್ವಹಿಸುವೆವು ಎಂದು ಮಾತು ಕೊಡುತ್ತಾರೆ. ಅದಕ್ಕೆ ರೈತ ದಂಪತಿ ಪ್ರತಿವರ್ಷವೂ ಶೀಗಿ ಹುಣ್ಣಿಮೆಯ ಈ ದಿನ ನಿಮ್ಮನ್ನು ನಾವು ಸತ್ಕರಿಸುತ್ತೇವೆ ಎಂದು ಪ್ರತಿಯಾಗಿ ಹೇಳುತ್ತಾರೆ. ಅಜ್ಞಾತವಾಸಕ್ಕೂ ಮುನ್ನವೇ ಕರ್ಣನು ತಮ್ಮ ಸಹೋದರನೆಂಬ ಅರಿವಿದ್ದ ಸಹೋದರರು ಮತ್ತೊಂದು ಬನ್ನಿಯ ಪತ್ರ(ಎಲೆ)ದಲ್ಲಿ ತಮ್ಮ ಸಹೋದರ ಕರ್ಣನಿಗಾಗಿ ಆಹಾರವನ್ನು ಪಡೆಯುತ್ತಾರೆ ಎಂಬುದು.)
ನಂತರ ನೈವೇದ್ಯ ಮಾಡಿದ ಒಂದು ಭಾಗವನ್ನು ಭೂಮಿಯಲ್ಲಿ ಗುಳಿ ತೋಡಿ ಅಲ್ಲಿ ಆ ನೈವೇದ್ಯವನ್ನು ಸಮರ್ಪಿಸುತ್ತಾರೆ. ಇನ್ನುಳಿದ ನೈವೇದ್ಯದ ಭಾಗವನ್ನು ಚರಗಾ ಚೆಲ್ಲಲಿಕ್ಕೆಂದು ಹೊರಡುತ್ತಾರೆ. ನೈವೇದ್ಯ ಹಿಡಿದ ವ್ಯಕ್ತಿ ಹುಲ್ಲುಲ್ಲಿಗೋ ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಎಡೆಯಿಂದ ಸ್ವಲ್ಪ ಸ್ವಲ್ಪ ಭಾಗವನ್ನು ಹೊಲದ ಸುತ್ತಲೂ ಚೆಲ್ಲುತ್ತಾ ಸಾಗಿದರೆ ಹಿಂದೆ ಸಾಗುವ ಮಕ್ಕಳು ಚಳ್ಳಂಬರಿಗೋ ಎಂದು ಕೂಗುತ್ತಾ ಸಾಗುತ್ತಾರೆ. ಹುಲ್ಲುಲ್ಲಿಗೋ ಅಂದರೆ ಹೊಲದಲ್ಲಿರುವ ಪ್ರತಿಯೊಂದು ಹುಲ್ಲಿನ ಕಣಕ್ಕೂ, ಚಳ್ಳಂಬರಿಗೋ ಎಂದರೆ ಪ್ರತಿಯೊಂದು ಬೇರಿಗೂ ಈ ಆಹಾರವು ಮುಟ್ಟಲಿ ಎಂಬುದು ರೈತನ ಆಶಯ. ಜೊತೆಗೆ ಹೊಲದಲ್ಲಿರುವ ಎಲ್ಲಾ ಕ್ರಿಮಿಕೀಟಗಳಿಗು ರೈತ ಚರಗ ಚೆಲ್ಲುವ ಮೂಲಕ ಆಹಾರ ಸಲ್ಲಿಸುತ್ತಾನೆ…. ತನ್ಮೂಲಕ ವಸುದೈವ ಕುಟುಂಬಕಂ ಎಂದು ಜಗತ್ತಿಗೆ ಸಾರುತ್ತಾನೆ. ಹೀಗೆ ಭೂತಾಯಿಗೆ ಚರಗ ಚೆಲ್ಲಿದ ನಂತರ ರೈತನ ಕುಟುಂಬ ತನ್ನ ಬಂಧು ಬಾಂಧವರೂಡಗೂಡಿ ಹಬ್ಬದ ಅಡುಗೆಯನ್ನು ಸವಿಯುತ್ತಾರೆ. ರೈತನ ಮನೆಯ ಅಡುಗೆ ಮೃಷ್ಟಾನ್ನಕ್ಕಿಂತಲೂ ಹೆಚ್ಚು ..ಸವಿದಷ್ಟು ಸವಿ ಹೆಚ್ಚಾಗುವ, ಮೊಗೆದಷ್ಟೂ ಬಸಿವ ನೀರಿನ ಊಟೆಯಂತೆ. ತನ್ನಲ್ಲಿರುವ ಎಲ್ಲವನ್ನು ಎಲ್ಲರಿಗೂ ಸ್ವ ಸಂತೋಷದಿಂದ ಹಂಚಿ ಅವರ ಸಂತಸದಲ್ಲಿಯೇ ತನ್ನ ಸಂತಸವನ್ನು ಕಾಣುವ ಜಗತ್ತಿನ ಏಕೈಕ ವ್ಯಕ್ತಿ ರೈತ. ಹೀಗೆ ರೈತ ಸಂತಸ ಪಡಲು ಆತನ ಕೊಡುವ ಗುಣವೇ ಕಾರಣವಾಗಿದೆ. ಈ ರೀತಿ ಶೀಗಿ ಹುಣ್ಣಿಮೆಯನ್ನು ಉತ್ತರ ಕರ್ನಾಟಕದ ಬಯಲು ಸೀಮೆಯ ಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೀವು ಕೂಡ ಹತ್ತಿರದ ಯಾವುದಾದರೂ ಊರಿನ ಹೊಲಕ್ಕೆ ಹೋದರೆ ಅಲ್ಲಿಯ ರೈತರು ನಿಮ್ಮನ್ನು ಕೂಡ ಕರೆದು ಉಣ ಬಡಿಸುವುದರಲ್ಲಿ ಸಂದೇಹವೇ ಇಲ್ಲ. ಈ ರೀತಿ ಭೂಮಿ ತಾಯಿಯನ್ನು ಪೂಜಿಸುವ ರೈತ ಯಾವಾಗಲೂ ನಗುನಗುತ್ತಾ ಇರಲಿ ಆತನ ಬಾಳು ಹಸನಾಗಲಿ, ರೈತ ಜಗದ ಬೆಳಕಾಗಲಿ ಎಂಬ ಆಶಯದೊಂದಿಗೆ
–ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್