ಮಸ್ಕಿಯಲ್ಲಿ ಅದ್ದೂರಿಯಾಗಿ ಜರುಗಿದ ಜಂಭೂ ಸವಾರಿ, ಸಾವಿರ ಮಹಿಳೆಯರಿಂದ ಕುಂಭ ಮೆರವಣಿಗೆ
e,- ಸುದ್ದಿ ಮಸ್ಕಿ
ನವರಾತ್ರಿ ಅಂಗವಾಗಿ ಪಟ್ಟಣದಲ್ಲಿ ಶ್ರೀಭ್ರಮರಾಂಬ ದೇವಿಗೆ ೧೦೦೮ ಮಹಿಳೆಯರಿಂದ ಕುಂಭಾಭಿಷೇಕ, ಕುಂಕುಮಾರ್ಚಾನೆ, ಸಹಸ್ರ ಬಿಲ್ವಾರ್ಚಾನೆಯೊಂದಿಗೆ ದೇವಿಗೆ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ದೇವಿಗೆ ಉಡಿ ತುಂಬಿ ಭಕ್ತಿ ಭಾವದಿಂದ ಸಂತಸ ಪಟ್ಟರು.
ಪಟ್ಟಣದಲ್ಲಿ ಗುರುವಾರ ಅಶೋಕ ವೃತ್ತದದ ಬಳಿ ಮೈಸೂರು ದಸರಾ ಮಾದರಿಯಲ್ಲಿ ಆನೆಯ ಮೇಲೆ ಮಂಟಪ ಕಟ್ಟಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಜಂಭೂ ಸವಾರಿಗೆ ಗಚ್ಚಿನ ಹಿರೇಮಠದ ಷ.ಭ್ರ.ಶ್ರೀವರರುದ್ರಮುನಿ ಶಿವಾಚಾರ್ಯರು ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೇ ನೀಡಿದರು.
ಗಂಗಾಸ್ಥಳದಲ್ಲಿ ದೇವಿ ಮೂರ್ತಿಗೆ ಹಾಗೂ ಕುಂಭಗಳಿಗೆ ಪೂಜೆ ಸಲ್ಲಿಸಲಾಯಿತು. ಗಜಲಕ್ಷ್ಮೀ ಜಂಭೂ ಸವಾರಿ ಮೆರವಣಿಗೆ ಅಶೋಕ ವೃತ್ತದ ಮೂಲಕ ಅಗಸಿ ಮಾರ್ಗವಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿಂದ ದೈವದಕಟ್ಟೆ, ಮಲ್ಲಿಕಾರ್ಜುನ ದೇವಸ್ಥಾನದ ಮುಂಭಾಗದಿಂದ ಕನಕ ವೃತ್ತಕ್ಕೆ ಆಗಮಿಸಿ ನಂತರ ಶ್ರೀಭ್ರಮರಾಂಬ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಿತು.
ಗೊರವರ ಕುಣಿತ, ನಂದಿ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನ ಆಗಮಿಸಿದ್ದ ಭಕ್ತರಲ್ಲಿ ಮೈನವಿರೇಳಿಸಿತು.
ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಪಾಗೌಡ ಪಾಟೀಲ ತಹಸೀಲ್ದಾರ ಡಾ.ಮಲ್ಲಪ್ಪ ಕೆ.ಯರಗೋಳ ಹಾಗೂ ಗ್ರಾಮದ ಪ್ರಮುಖರಾದ ಮಹಾದೇವಪ್ಪಗೌಡ ಪಾಟೀಲ, ಪ್ರಕಾಶ ಧಾರಿವಾಲ, ಸಿದ್ದಲಿಂಗಯ್ಯ ಗಚ್ಚಿನಮಠ, ಅಂದಾನಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಬಸನಗೌಡ ಪೊಲೀಸ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಪುರ, ನಾಗರಾಜ ಸಜ್ಜನ್, ಮಲ್ಲಿಕಾರ್ಜುನ ಕ್ಯಾತ್ನಟ್ಟಿ, ಸಿದ್ದಣ್ಣ ಮುಳ್ಳುರು, ಬಸವರಾಜ ಬಾಗೋಡಿ, ವೀರೇಶಪ್ಪ ಬಾಳೆಕಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಗ್ರಾಮದ ಜಂಗಮಮರಿಗೆ ಗಣಾರಾಧನೆ ಮತ್ತು ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಿಪಿಐ ಬಾಲಚಂದ್ರ ಡಿ.ಲಕ್ಕಂ ಹಾಗೂ ಪಿಎಸ್‌ಐ ತಾರಬಾಯಿ ಬಂದೋಬಸ್ತ ಏರ್ಪಡಿಸಿದ್ದರು. ಪುರಸಭೆಯ ಮುಖ್ಯಾಧಿಕಾರಿ ನರಸರಡ್ಡಿ ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಜೆಸ್ಕಾಂ ಎಇಇ ವೆಂಕಟೇಶ ವಿದ್ಯೂತ್ ಅವಘಡ ಸಂಭವಿಸದAತೆ ಮುಂಜಾಗ್ರತೆ ವಹಿಸಿದ್ದರು. ಕುಂಭಹೊತ್ತ ಮಹಿಳೆಯರಿಗೆ ಭಕ್ತರು ಕುಡಿಯಲು ತಂಪು ಪಾನೀಯ, ಲಿಂಬು ಪೆಪ್ಪರಮೆಂಟ್ ವಿತರಿಸಿದರು.