ಕೂಡಲ ಸಂಗಮದೇವ ತನಗೆ ಬೇಕೆಂದು…
‘ನಮ್ಮ ಕೂಡಲ ಸಂಗಮದೇವ ತನಗೆ ಬೇಕೆಂದು ಇಷ್ಟು ಬೇಗ ಎತ್ತಿಕೊಳ್ಳಬಾರದಿತ್ತು’ ಎಂದು ಮನಸು ನೊಂದುಕೊಂಡಿದೆ. ಶರಣರಾದ ವೀರಭದ್ರಪ್ಪ ಸಾವ್ಕಾರ ಕುರಕುಂದಿ ಅವರ ಅಕಾಲಿಕ ಅಗಲಿಕೆ ಖಂಡಿತವಾಗಿ ಬಸವ ಪರಂಪರೆಗೆ ತುಂಬಲಾಗದ ನಷ್ಟ.
ಕಳೆದ ನಾಲ್ಕು ದಶಕಗಳಿಂದ ಸಿಂಧನೂರು ನನ್ನ ಇನ್ನೊಂದು ತವರುಮನೆ. ಅವ್ವನ ತಂಗಿ ಸೂಗಮ್ಮ ಕಕ್ಕಿ ಮತ್ತು ಕಕ್ಕ ಚಿಂತಮಾನದೊಡ್ಡಿ ಶರಣೇಗೌಡರೆಂದರೆ ನನಗೆ ಅದೇನೋ ವ್ಯಾಮೋಹ. ಕಕ್ಕ ಶರಣೇಗೌಡರು ಅಪ್ಪಟ ಬಸವ ಭಕ್ತರು. ವಚನ ಸಾಹಿತ್ಯದ ಕುರಿತು ಅಪಾರ ಗೌರವ.
ಅವರ ಮನೆಯ ಪ್ರತಿಯೊಂದು ಕೌಟುಂಬಿಕ ಕಾರ್ಯಕ್ರಮಗಳು ಬಸವ ತತ್ವದ ಆಧಾರದ ಮೇಲೆ ಜರುಗಲು ಬಹುದೊಡ್ಡ ಪ್ರೇರಕ ಶಕ್ತಿಯೇ ಈ ವೀರಭದ್ರಪ್ಪ ಸಾವ್ಕಾರ ಅವರು. ವಚನಗಳ ಕಾರಣದಿಂದ ಮೂರು ದಶಕದಿಂದ ನನಗೂ ಅಷ್ಟೇ ಆತ್ಮೀಯರಾಗಿದ್ದರು. ನಾನು ಕಕ್ಕಿಗೆ ಪ್ರಿಯವಾದ ಮಗ ಎಂಬ ಕಾರಣ ಬೇರೆ!
ಪ್ರತಿ ವರ್ಷದ ವಚನ ಶ್ರಾವಣಕ್ಕೆ ನಾನು ಖಾಯಂ ಅತಿಥಿ. ಅವರ ಪ್ರಾಸ್ತಾವಿಕ ನುಡಿ ನನಗೆ ಬಹು ದೊಡ್ಡ ಆಸರೆ.
ಬಸವ ಚಾರಿಟೇಬಲ್ ಟ್ರಸ್ಟ್ ಕಟ್ಟಡ ಉದ್ಘಾಟನೆಗೆ ಇಲಕಲ್ಲ, ಗದಗ ಹಾಗೂ ಚಿತ್ರದುರ್ಗ ಸ್ವಾಮಿಗಳ ಸಾನಿಧ್ಯದಲ್ಲಿ ಮಾತಾಡುವ ಅವಕಾಶ ಕಲ್ಪಿಸಿದ ಉದಾರಿ ಅವರು. ನಾನು ಯಾವುದೇ ವಿಷಯ ಕೊಟ್ಟರೂ ಮಾತಾಡುವೆ ಎಂಬ ವಿಶ್ವಾಸ ಬೇರೆ. ನನ್ನ ತವರು ಮನೆಯ ಪ್ರೀತಿಯ ಕಾರಣದಿಂದ ತಪ್ಪಿಸುವುದಿಲ್ಲ ಎಂಬ ನಂಬಿಕೆ ಅವರದು.
ರಾಯಚೂರು ಜಿಲ್ಲೆ ‘ಮೌಢ್ಯ ವೀರಶೈವರ ನಾಡು’ ಎಂಬ ಕಳಂಕ ಅಳಿಸಿ ಹಾಕಲು ಅವರು ಸಿಂಧನೂರು ಬಸವ ಕೇಂದ್ರದ ಮೂಲಕ ನಿರಂತರ ಹೋರಾಡಿದರು. ಚಾರಿಟೇಬಲ್ ಟ್ರಸ್ಟ್ ಮೂಲಕ ಹಾಸ್ಟೆಲ್ ಆರಂಭ ಮಾಡಿ, ಅನೇಕ ಮಕ್ಕಳಿಗೆ ನೆರವಾದರು.
ಅನೇಕ ಬಸವ ತತ್ವ ಅನುಯಾಯಿಗಳಿಗೆ ಇರುವ ಜ್ಞಾನದ ಜಂಬ ಇವರಲ್ಲಿ ಇರಲಿಲ್ಲ ಎಂಬುದೇ ವಿಶೇಷ.
ವಚನ ಸಾಹಿತ್ಯದ ಆಳ ಅಧ್ಯಯನ ಮತ್ತು ಪ್ರಸ್ತುತ ಪಡಿಸುವ ವಿಧಾನ ಕೂಡ ಅದ್ಭುತವಾಗಿತ್ತು. ಸರಳ ಉಡುಗೆ, ಬಿಳಿ ಜುಬ್ಬಾ, ಲುಂಗಿ ಅವರ ವ್ಯಕ್ತಿತ್ವದ ಮೆರುಗು. ತತ್ವ ನಿಷ್ಟ ಮಾತುಗಳ ಖಚಿತತೆ ಅವರ ಹೆಗ್ಗಳಿಕೆ. ಇತರರ ಮನ ಒಲಿಸುವ ಕಲೆ ಅವರಿಗೆ ಒಲಿದಿತ್ತು. ಇದೇ ಕಾರಣದಿಂದ ಚಾರಿಟೇಬಲ್ ಟ್ರಸ್ಟ್ ಎಲ್ಲರನ್ನು ಒಳಗೊಂಡಿದೆ.
ಸಿಂಧನೂರಿನ ಬಿಡುವಿಲ್ಲದ ವೈದ್ಯರಾದ ಡಾ. ಶಿವರಾಜ ಹಾಗೂ ಇತರ ರಾಜಕೀಯ ನಾಯಕರನ್ನು ಜಾಣ್ಮೆಯಿಂದ ಹ್ಯಾಂಡಲ್ ಮಾಡುತ್ತಿದ್ದ ಸಂಘಟನಾ ಚತುರತೆ ಇಂದಿನ ಅಗತ್ಯ ಎಂಬುದನ್ನು ಅರಿತವರಾಗಿದ್ದರು.
ಅನಿವಾರ್ಯ ಕಾರಣದಿಂದ ನಾನು ಮೊನ್ನಿನ ಶ್ರಾವಣಕ್ಕೆ ಬರಲಾಗಲಿಲ್ಲ ಎಂಬ ಕೊರಗು ಈಗ ಕಾಡುತ್ತಿದೆ. ತಮ್ಮ ಜ್ಞಾನವನ್ನು ಕೇವಲ ಜಿಲ್ಲೆಗೆ ಸೀಮಿತಗೊಳಿಸದ ವೀರಭದ್ರಪ್ಪ ಶರಣರು ಇಡೀ ರಾಜ್ಯ ಸಂಚಾರ ಮಾಡಿ ಕಲ್ಯಾಣ ಮಹೋತ್ಸವ ನಡೆಸುತ್ತಿದ್ದರು.
ನಮ್ಮ ಸಹೋದರರ ಮದುವೆ ಸಂದರ್ಭದಲ್ಲಿ ನಮ್ಮ ವಿಧವೆ ತಂಗಿಯ ಕೈಲಿ ಧ್ವಜಾರೋಹಣ ಮಾಡಿಸಿದ ಭಾವಪೂರ್ಣ ಔದಾರ್ಯ ಮತ್ತು ಆದರ್ಶವನ್ನು ನಾನು ಎಂದಿಗೂ ಮರೆಯುವುದಿಲ್ಲ. ಮರೆಯಬಾರದು ಕೂಡ!
ನನ್ನ ವಿಷಯವಾಗಿ ಅವರಿಗೆ ಅನೇಕ ತಕರಾರುಗಳು ಇದ್ದರೂ ಅವುಗಳ ಕುರಿತು ಟೀಕೆ ಮಾಡುದೇ ಗೌರವ ನೀಡಿದ ಅಪರೂಪದ ಹಿರಿಯ ಜೀವ.
ನಿನ್ನೆ ಸಿಂಧನೂರಿಗೆ ಹೋದಾಗ ಸೋದರ ಡಾ. ನಾಗರಾಜ ಮಾಲಿಪಾಟೀಲ ಚಿಂತಮಾನದೊಡ್ಡಿ, ಅವರ ವಿಚಿತ್ರ, ಅಪರೂಪದ ಕಾಯಿಲೆಯ ಅಪಾಯವನ್ನು ವಿವರಿಸಿದಾಗ ಅಪಾರ ದುಃಖವಾಯಿತು. ಗೌಡರು ಉಳಿಯುವುದಿಲ್ಲ ಎಂಬ ವ್ಯಥೆ ಕಾಡಿ ಮನಸು ಭಾರವಾಯಿತು. ಬಸವ ಪ್ರಜ್ಞೆಯ ಗಟ್ಟಿ ದನಿಯೊಂದು ಮಾಯವಾಗಿ ನಾವು ಅನಾಥರಾದೆವು.
ವೀರಭದ್ರಪ್ಪ ಅಣ್ಣ ಅವರ ಮೌಲ್ಯಗಳನ್ನು ನಾವು ಕಾಪಾಡಿಕೊಂಡು ಹೋಗಬೇಕು. ಶರಣರಿಗೆ ಮರಣವೇ ಮಹಾನವಮಿ ಆದರೆ ಕಳಕೊಂಡ ನಮಗೆ…
ಹೋಗಿ ಬನ್ನಿ ಗೌಡ್ರೆ ನಿಮಗೆ ಸಾವಿರದ, ಸಾವೇ ಇರದ ಶರಣು ಶರಣಾರ್ಥಿ.
–ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ.