ಅಕ್ಕಮಹಾದೇವಿಯರ ವಚನ 3
ಅತ್ತೆ ಮಾಯೆ ಮಾವ ಸಂಸಾರಿ ಮೂವರು ಮೈದುನರು ಹುಲಿಯಂತಿಯರು
ನಾಲ್ವರು ನೆಗೆವೆಣ್ಣು ಕೇಳು ಕೆಳದಿ ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು ಕರ್ಮವೆಂಬ ಗಂಡನ ಬಾಯ ಟೊಣೆದು ಹಾದರವನಾಡುವೆನು ಹರನಕೂಡೆ ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ ಕರಚೆಲುವ ಶ್ರೀಶೈಲಚೆನ್ನ ಮಲ್ಲಿಕಾರ್ಜುನ ಎಂಬ ಸಜ್ಜನಗಂಡನ ಮಾಡಿಕೊಂಡೆ
-ಅಕ್ಕಮಹಾದೇವಿ
ಅಕ್ಕಮಹಾದೇವಿಯವರು ಚೆನ್ನಮಲ್ಲಿಕಾರ್ಜುನನೇ ಎನಗೆ ಗಂಡನಾಗಬೇಕೆಂದು ತುಂಬಾ ಸಮಯ ಕಾಲದವರೆಗೆ ತಪಿಸಿತ್ತು ಈ ಕಾಯ ಎನ್ನುವರು
ಅಕ್ಕ. ಅತ್ತೆ, ಮಾವ ,ನಾದನಿಯರು, ಹಾಗೂ ಚೆನ್ನಮಲ್ಲಿಕಾರ್ಜುನನೆಂಬ ಅಧ್ಯಾತ್ಮಿಕ ಅರಿವಿನ ಗಂಡನನ್ನು ಮದುವೆ ಮಾಡಿಕೊಂಡಿರುವೆ.ಇದು ನನ್ನ ಜನ್ಮ ಜನ್ಮಾಂತರದ ಬಯಕೆ.
ಆ ಶಿವನೇ ನನ್ನ ಗಂಡನಾಗಬೇಕೆಂಬುದು .ಅದು ಈ ಜನ್ಮದಲ್ಲಿ ಸಿದ್ದಿಸಿದೆ .
ಗುರು ನನ್ನನ್ನು ಚೆನ್ನಮಲ್ಲಿಕಾರ್ಜುನನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾರೆ .
ಗುರುವೇ ತೆತ್ತಿಗನಾದ ಲಿಂಗವೇ ಮದುವಣಿಗ ನಾದ ಆನು ಮದುವಣಿಗಿತ್ತಿಯಾದೆನು .ಈ ಕಾರಣಕ್ಕಾಗಿ ಆ ಹರನ ಜೊತೆಗೆ ಹಾದರನಾಡುವೆ, ಎನ್ನುವ ಲೌಕಿಕ ಗಂಡನನ್ನು ಬಿಟ್ಟು .ಅಮೂರ್ತ ವಾದ ಗಂಡನೊಂದಿಗಿನ ಸಂಬಂಧ ವನ್ನು ಅಕ್ಕಮಹಾದೇವಿಯವರು ಇಲ್ಲಿ ಹಾದರ ಎನ್ನುವ ಅರ್ಥವನ್ನು ಬಳಸಿರುವುದು ಒಂದು ಅಚ್ಚರಿಯ ಸಂಗತಿ .
ಅಕ್ಕನವರ ಗಂಡ ಚೆನ್ನಮಲ್ಲಿಕಾರ್ಜುನನೊಂದಿಗೆ ಅಸಂಖ್ಯಾತ ತಂದೆ ತಾಯಿಗಳು ಮದುವೆ ಮಾಡಿಕೊಟ್ಟಿದ್ದಾರೆ ಎನ್ನುವ ನಿರಾಕಾರ ದೇಹ ಭಾವ ವನ್ನು ತೊರೆದು ಭಗವಂತನೊಂದಿಗೆ ಒಂದಾಗುವ ಅಕ್ಕನವರ ವಿಚಾರ ನಿಜಕ್ಕೂ ಸೋಜಿಗ.
ಅಕ್ಕಮಹಾದೇವಿಯ ಗಂಡನ ಮನೆಯೇ ಒಂದು ಪ್ರಕೃತಿ ಅದನ್ನೇ ಅಕ್ಕ ಇಲ್ಲಿ ತನ್ನ ಅತ್ತೆ ಎಂದು ಭಾವಿಸಿಕೊಂಡಿದ್ದಾಳೆ
ಇಲ್ಲಿ ಅತ್ತೆ -ಎಂದರೆ ಪ್ರಕೃತಿ ಪುರುಷ ಭಗವಂತ .
ಈ ಸೃಷ್ಟಿಕರ್ತನ ಪ್ರಕೃತಿಯೇ ನನ್ನ ಮನೆ .ಇಲ್ಲಿರುವ ಸಕಲ ಜೀವ ರಾಶಿ ಇರುವ ಈ ಪ್ರಕೃತಿಯೇ ನನ್ನ ಮನೆ .
ಈ ಮನೆಯನ್ನು ಸೃಷ್ಟಿಸಿದ ಪ್ರಕೃತಿ ಪುರುಷನೇ ನನ್ನ ಅತ್ತೆ. ಇದೇ ನನ್ನ ಗಂಡನ ಮನೆ ಎನ್ನುವ ಅಕ್ಕಮಹಾದೇವಿಯವರು ಹೊಂದಿದ ನಿಲುವು ಅತ್ಯಂತ ಸೂಕ್ಷ್ಮ ವಾದದ್ದು .
ಈ ಪ್ರಕೃತಿಯನ್ನೇ ತನ್ನ ಗಂಡನ ಮನೆಯನ್ನಾಗಿ ಮಾಡಿಕೊಂಡ ಅಕ್ಕ ಮಹಾದೇವಿಯವರು ,ಪ್ರತಿಯೊಂದು ಪ್ರಾಣಿ ,ಪಕ್ಷಿಗಳಲ್ಲಿ ತನ್ನ ಅರಿವಿನ ಗಂಡನಾದ ಶ್ರೀ ಚೆನ್ನಮಲ್ಲಿಕಾರ್ಜುನನು ಎಲ್ಲಿರುವನು ? ಕರೆದು ತೋರಿರೇ! ಎನ್ನುವ ವಿಚಾರ ಅಕ್ಕನ ಒಳಗಿನ ಭಾವ ನಮ್ಮನ್ನು ಬದುಕಿನ ಪಥದತ್ತ ಕೊಂಡೊಯ್ಯುವ ಮಾರ್ಗವನ್ನು ತೋರುತ್ತದೆ .
ಮೂವರು ಮೈದುನರು -ಅಂದರೆ ಕಾಯ, ಮಾತು, ಮನಸ್ಸು.
ಇಲ್ಲಿ ಕಾಯ ಎನ್ನುವ ಶರೀರ ನಮ್ಮ ಒಳಗಿನ ಮನಸ್ಸಿನಂತೆ ನಮ್ಮ ಮಾತುಗಳು ಬರುತ್ತವೆ .ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು .ಎನ್ನುವ ಹಾಗೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವವು ಆತನ ಮನಸ್ಸನೊಳಗಿನಿಂದ ಬರುವ ಮಾತಿನಿಂದಲೇ .ಮಾತುಗಳು ಹೊರಹೊಮ್ಮಿದರೇ ಅವೇ ಮಾತುಗಳಿಂದ ನಮಗೆ ಶುಭನೂ ಆಗುತ್ತೆ .ಮತ್ತು ಹಾನಿಯೂ ಆಗುತ್ತೆ ಎನ್ನುವ ಅರಿವು ನಮಗೆ ಆಗಬೇಕು .ತಪ್ಪಾಗಿ ಮಾತನಾಡಿದರೆ ವ್ಯಕ್ತಿ ವ್ಯಕ್ತಿಗಳಲ್ಲಿ ಕಲಹ ಉಂಟಾಗಿ ಅದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ .
ಆ ಮಾತುಗಳೇ ನಮ್ಮನ್ನು ಹುಲಿಯಂತೆ ತಿಂದು ಹಾಕಲು ಬಹುದು ಎನ್ನುವ ಪ್ರಜ್ಞೆ, ಪ್ರತಿಯೊಬ್ಬ ಮಾನವರಿಗೂ ಅಕ್ಕಮಹಾದೇವಿಯವರು ಒಂದು ಉತ್ತಮ ಸಂದೇಶವನ್ನು ನೀಡಿರುವುದು ನಮಗೆ ಕಂಡು ಬಂದಿದೆ .
ನಾಲ್ವರು ನೆಗೆಣ್ಣಿಯರು ಕೇಳು ಕೆಳದಿ
ಅಂದರೆ ಓರಗಿತ್ತಿಯರು
ಮನಸ್ಸು,
ಬುದ್ಧಿ,
ಚಿತ್ತ ,ಮತ್ತು
ಅಹಂಕಾರ ಮನಸ್ಸಿನಂತೆ ಬುದ್ಧಿ ಇರುತ್ತದೆ .ಬುದ್ಧಿಯಂತೆ ನಮ್ಮ ಚಿತ್ತವು ಇರುತ್ತದೆ .
ಇಂತಹ ಮನದಲ್ಲಿ ಒಂದು ಸಣ್ಣ ಅಹಂಕಾರವು ಸೊಂಕಬಾರದು.
ಯಾರಲ್ಲಿ ಅಹಂಕಾರ ಇರುತ್ತದೆಯೋ ಅಲ್ಲಿ ನನ್ನ ಗಂಡ ಚೆನ್ನಮಲ್ಲಿಕಾರ್ಜುನ ಇರಲು ಬಯಸುವುದಿಲ್ಲ.
ಈ ನಾಲ್ವರು ಯಾವುದೇ ಭೇದ ಭಾವ ವಿಲ್ಲದೆ ಸರಿ ಸಮಾನವಾಗಿ ಇರಬೇಕು ಎನ್ನುವ ಅಕ್ಕ ಮಾತಿನಲ್ಲಿ ನೈಜತೆಯ ಅಧ್ಯಾತ್ಮಿಕ ಓರಗಿತ್ತಿಯರು ಕೇಳು ಗೆಳತಿ ಎನ್ನುವರು.
ಮತ್ತೆ ಮುಂದುವರೆದು ,
ಪ್ರತಿಯೊಬ್ಬ ವ್ಯಕ್ತಿಯರಲ್ಲಿ
ಐವರು ಭಾವಂದಿರು ಇರುವರು
ಅಂದರೆ ಪಂಚೇಂದ್ರಿಯಗಳು
ಕಣ್ಣು,
ಕಿವಿ ,
ಮೂಗು ,
ನಾಲಿಗೆ ಮತ್ತು ಚರ್ಮ.
ದೇಹವನ್ನು ಆಳಲು ಪ್ರಯತ್ನ ಮಾಡುವ ಪಂಚೇಂದ್ರೀಯಗಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಅನಾಹುತಕ್ಕೆ ಆಹ್ವಾನವಿತ್ತಂತೆ .ಎನ್ನುವ ಅರ್ಥವನ್ನು ಅತ್ಯಂತ ಮಾರ್ಮಿಕವಾಗಿ ಅಕ್ಕಮಹಾದೇವಿಯರು ಈ ಒಂದು ವಚನದಲ್ಲಿ ತಿಳಿಯಪಡಿಸಿದ್ದಾರೆ .
ಆರು ಜನ ಅತ್ತಿಗೆಯರು- ಅಂದರೆ ಅರಿಷಡ್ವರ್ಗಗಳು
ಕಾಮ ಕಂಡಿದ್ದನ್ನು ಪಡೆಯುವುದೇ ಕಾಮ .
ಕಾಮಿಗೆ ತನ್ನ ಮನವೇ ತನಗೆ ಉತ್ತರ ನೀಡುವುದು .
ಕಾಮ ಪಾಲಿಸದ ಗುರು ಒಂದು ಮಠಕ್ಕೆ ಹೇಗೆ ?ಗುರು ಆಗುವನು .
ಮನವೆಂಬ ಮಠಕ್ಕೆ ಗುರುವಾದ ಗುರು. ತಾನು ಕಾಮವನ್ನು ಗೆಲ್ಲುವಂತಾಗಬೇಕು. ಕಂಡ ಕಂಡ ನಾರಿಯರನ್ನು ತನ್ನ ಕಣ್ಣಲ್ಲೇ ಕಾಮಾತುರನಾಗುವ ಗುರು ಆತ ಎಂದೂ ಗುರು ಎನಿಸಿಕೊಳ್ಳಲು ಯೋಗ್ಯವಾಗಲಾರ. ಕಾಮವನ್ನು ಗೆದ್ದವನೇ ಯೋಗಿಯಾಗುತ್ತಾನೆ. ತನ್ನ ಒಳಗಿನ ಅಂತರಾತ್ಮದ ಜೊತೆಗೆ ಅನುಸಂಧಾನ ಮಾಡಿಕೊಳ್ಳುವ ಯೋಗಿಯಾಗಿ ಗುರುವಾಗಿ ,ಜ್ಞಾನಿ ಯಾಗಿ ಮನವನ್ನು ಗೆದ್ದು ನಡೆಯುವವನೇ ಮಹಾತ್ಮ ನಾಗುತ್ತಾನೆ.ಮಹದೇವನಾಗುತ್ತಾನೆ, ತಾನೇ ಪರಮಾತ್ಮನಾಗುತ್ತಾನೆ .
ಎಷ್ಟು ಜ್ಞಾನಿಯಾದರೇನು ? ಕಾಮ ವನ್ನು ಗೆಲ್ಲದ ಯೋಗಿಗೆ ಪಟ್ಟ ಕಟ್ಟಿದರೆ, ಚಟ್ಟದ ಮೇಲಿನ ವ್ಯಕ್ತಿಗೆ ಪಟ್ಟ ಕಟ್ಟಿದಂತೆ ಆಗುವುದು .
ಗುರುವಿನ ಜ್ಞಾನವೇ ಇಲ್ಲದ ವ್ಯಕ್ತಿಯು ,ಕಾಮವನ್ನು ಗೆದ್ದು ನಡೆಯಲು ಅಸಾಧ್ಯನಾಗುತ್ತಾನೆ.
ಕಾಮಿಯಾದ ವ್ಯಕ್ತಿಯು ಹೂವಿನ ಮಕರಂದ ಹೀರುವ ತುಂಬಿಯಂತೆ .ಕಾಯದೊಳಗೆ ಒಂದು ಅಂಟು ರೋಗ ಹಚ್ಚಿದ ಒಂದು ಸೊಳ್ಳೆಯಂತೆ ಆಗುವುದು .
ಶರಣರು ಸಂಸಾರವನ್ನು ತ್ಯಜಿಸಿ ನಡೆದವರಲ್ಲ .ಆದರೆ ಶರಣರು ಕಾಮವನ್ನು ಗೆದ್ದು ನಡೆದು, ಸಿದ್ಧಿ ಪಡೆದು ,ಸಿದ್ಧ ಪುರುಷರಾಗಿ ಜಗವ ಬೆಳಗಿದ ಜಗಜ್ಯೋತಿಯಾಗಿ. ಇಡೀ ವಿಶ್ವವನ್ನೇ ಬೆಳಗಿದ ಪುಣ್ಯ ಪುರುಷ ರಾದರು .ಪರಸ್ತ್ರೀಯನ್ನು ಅಕ್ಕ ,ಮಾತೆ ಎಂದು ಉಚ್ಚರಿಸಿ ನಡೆದ ದಿವ್ಯಾತ್ಮ ಶರಣರು 12 ನೇ ಶತಮಾನದದಲ್ಲಿ ಆಗಿ ಹೋಗಿದ್ದಾರೆ .ಇಂದು ,
ಅದೇಷ್ಟೋ ಕೌಶಿಕನಂತ ಮನ ವ್ಯಕ್ತಿಗಳು ಇದ್ದಾರೋ ,ಕಣ್ಣು ಮುಚ್ಚಿ ರೋಧಿಸುವ ನಾರಿಯರು ಅಕ್ಕಳಂತೆ .ದಿಟ್ಟರಾಗಿ ನಿಲ್ಲಬೇಕಾಗಿದೆ .
ಕ್ರೋಧ ಕಂಡಿದ್ದು ಸಿಗದೇ ಇದ್ದಾಗ ಉಂಟಾಗುವುದೇ ಕ್ರೋಧ. ತನಗೆ ಬಯಸಿದ್ದು ಸಿಗದೇ ಇದ್ದಾಗ ವ್ಯಕ್ತಿಯು ಸಿಟ್ಟಿಗೆದ್ದು ಬಿಡುವನು .ಅದು ಯಾವುದೇ ವ್ಯಕ್ತಿ ಆಗಿರಬಹುದು ,ವಸ್ತು ಆಗಿರಬಹುದು .ಅದು ಸಿಗದೇ ವ್ಯಕ್ತಿಯು ಕ್ರೋಧ ಗೊಂಡು.ತನ್ನ ಬಂಧು-ಬಳಗ ಎನ್ನದೇ ಆತ್ಮೀಯ ಸ್ನೇಹಿತರು ಎನ್ನದೇ ಯಾವುದೇ ವಸ್ತುವಾದರೂ, ಅದನ್ನು ಪಡೆದೇ ಪಡೆಯುವೆ ಎನ್ನುವ ಮನದ ಕೋಪಕ್ಕೆ ತನ್ನನ್ನೇ ತಾನು ಬಲಿ ಕೊಟ್ಟು ಕೊಳ್ಳುವ ಪ್ರಸಂಗವನ್ನು ನಾವು ನೀವುಗಳೆಲ್ಲ ನೋಡಿದ್ದೇವೆ .ಕೇಳಿದ್ದೇವೆಯೂ ಕೂಡಾ .
ಲೋಭ ಎಷ್ಟು ಪಡೆದರೂ ಇನ್ನಷ್ಟು ಪಡೆಯಬೇಕೆಂಬುದೇ ಲೋಭ . ಲೋಭಿಯಾದವನಿಗೆ ಸಂತೃಪ್ತಿ ಎನ್ನುವುದೇ ಇರಲಾರದು .ಒಂದು ಪಡೆದರೆ ಸಾಕು ಮತ್ತೊಂದು ಪಡೆಯಲು ಹೊಂಚು ಹಾಕುವನು .
ಅದು ಸಿಗದೇ ಇದ್ದಾಗ ಮನಸ್ಸು ಚಂಚಲವಾಗಿ ಹೋಗುವುದು .
ಶರಣರು ಲೋಭಿಗಳಾಗದೇ, ಕಾಯಕದಲ್ಲೇ ಸಂಪಾದನೆ ಮಾಡಿ ಉಳಿದದ್ದನ್ನು ದಾಸೋಹಕ್ಕೆ ಅರ್ಪಿಸುವ ದೊಡ್ಡ ಗುಣದ ಶರಣರನ್ನು ಇವತ್ತಿನ ಯುಗದಲ್ಲಿ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮಿಗಳು ನಿಜಕ್ಕೂ 12 ನೇ ಶತಮಾನ ಶರಣರ ತತ್ವ ಸಿದ್ದಾಂತವನ್ನು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ನಡೆದು ನುಡಿದು ತೋರಿದಂತವರು .
ಮೋಹ, ಇನ್ನಷ್ಟು ಪಡೆದರೂ ಕೈಬಿಟ್ಟು ಹೋಗಬಾರದು ಎಂಬುವುದೇ ಮೋಹ .
ಮೋಹಕ್ಕೆ ಮರುಳಾಗಿತ್ತು ಈ ಮಾಯೆ ಎನ್ನುವಂತೆ ಮೋಹವೆಂಬ ಮಾಯೆಯ ಬೆನ್ನು ಹತ್ತುವುದು ಅದು ಬಿಸಿಲ ಕುದುರೆಯನ್ನು ಬೆನ್ನು ಹತ್ತಿ ಓಡಿದಂತೆ ಆಗುವುದು .
ಒಂದು ಹೆಣ್ಣಿನ ಸೌಂದರ್ಯಕ್ಕೋ, ಯವ್ವನಕ್ಕೋ ,ಸಂಪತ್ತಿಗೋ ಅಥವಾ ಇನ್ನಾವುದಕ್ಕೋ ಮೋಹ ಗೊಂಡ ವ್ಯಕ್ತಿಯ ಮಲೀನ ಮನವನ್ನು ಶುದ್ಧಗೊಳಿಸಿದವರು ಶರಣರು .
ಮದ ಕೈ ಬಿಟ್ಟು ಹೋದರೂ ತನ್ನಲ್ಲಿ ಮಾತ್ರ ಇದೆ ಎನ್ನುವುದೇ ಮದ.
ಈ ಮದ ಅಂದರೆ ಸೊಕ್ಕು, ಯಾವ ವ್ಯಕ್ತಿಗಳಲ್ಲಿ ಈ ಮದ ಎನ್ನುವುದು ಇರುವುದೋ, ಅಂಥವರಲ್ಲಿ ಅಹಂಕಾರ ಎನ್ನುವುದು ತುಂಬಿ ತುಳುಕುತ್ತಿರುತ್ತದೆ .
ಅಹಂಕಾರದ ವ್ಯಕ್ತಿಗೆ ಯಾರೂ ಕಾಣಲಾರರು .ಸಂತೆಯೊಳಗಿನ ಗೂಳಿಯಂತೆ ನೂಕಿಕೊಂಡು ಬರುವ ಈ ಮದವನ್ನು ನಮ್ಮ ನಮ್ಮ ಮನಸ್ಸಿನ ಮೂಲಕ ಕಟ್ಟಿಹಾಕುವ ಕೆಲಸ ಆಗಬೇಕು .ಅಂಥಹ ಮದವನ್ನು ಒದ್ದು ನಡೆದು ಹೋದವರು ನಮ್ಮ 12 ನೇ ಶತಮಾನದ ಶರಣ, ಶರಣೆಯರು ಆಗಿ ಹೋಗಿದ್ದಾರೆ .
ಮತ್ಸರ ತನ್ನಲ್ಲಿರುವುದು ಮತ್ತೊಬ್ಬರಲ್ಲಿ ಇದೆ ಎನ್ನುವುದೇ ಮತ್ಸರ.
ಇಂದಿನ ಸಮಾಜದಲ್ಲಿ ಈ ಮತ್ಸರ ಎನ್ನುವ ಮನದ ವೈರ ಗುಣ ಎಲ್ಲಾ ಕಡೆಗೂ ತುಂಬಿ ತುಳುಕುತ್ತಿದೆ .ಒಬ್ಬ ರ ಸಾಧನೆ ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಒಬ್ಬರನ್ನು ಕಂಡರೆ ಒಬ್ಬ ರಿಗೆ ಆಗುತ್ತಿಲ್ಲ. ಅದು ಯಾವದೇ ರೂಪ, ರಸ, ಅಥವಾ ಗಂಧದಲ್ಲಾದರೂ ಆಗಲಿ ,
ಈ ಹೊಟ್ಟೆ ಕಿಚ್ಚಿನ ಗುಣ ತನ್ನ ಕಾಯವನ್ನೇ ಸುಡುವ ಕಿಚ್ಚಿನಂತೆ ಈ ಹೊಟ್ಟೆ ಕಿಚ್ಚು .
ಅದನ್ನು ಅಕ್ಕಮಹಾದೇವಿಯವರು
ನನ್ನ ಮನದಲ್ಲಿರುವ ವೈರಿಗಳು .ಇವರು ಇವರನ್ನು ಮೊದಲು ನಾನು ಜಯಿಸುವೆ .ಅವರನ್ನು ಜಯಿಸಬೇಕಾದರೆ ಮೊದಲು ನಾನು ಅವರನ್ನು ನನ್ನ ಸಖಿಯರನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಅತ್ಯಂತ ಸೂಕ್ಷ್ಮವಾದ ಭಾವ ಸಂವೇದನೆಯ ಮಾತುಗಳನ್ನು ಈ ಒಂದು ವಚನದ ನುಡಿಗಳಲ್ಲಿ ಹೇಳಿರುವುದು ,ಇಂದಿನ ಆಧುನಿಕತೆಗೆ ರನ್ನಗನ್ನಡಿಯಂತೆ ..
ಏಳು ಪ್ರಜೆ ತೊತ್ತಿಗರು- ಅಂದರೆ ಏಳು ಸೇವಕರು .
ಕಾಯುತ್ತಿದ್ದಾರೆ ಅವು ದ್ಯೂತ, ಮಾಂಸ ,ಸೂರೆ ,ವೇಶಾವೃತ್ತಿ, ಸಂತೋಷಕ್ಕಾಗಿ ಬೇಟೆಯಾಡುವುದು. ಚೌರ್ಯ, ಪರಸ್ತ್ರೀ ಮೋಹ.
ಇವೆಲ್ಲ ಕಾಯುತ್ತ ಕುಳಿತ್ತಿದ್ದಾರೆ .
ಕರ್ಮವೆಂಬ ಗಂಡ( ಕೌಶಿಕ)ನ ಬಾಯಿ ಹೊಲೆದು ಅಂದರೆ ಈ ಗಂಡ ಎನ್ನುವ ಕರ್ಮ ಕೌಶಿಕನನ್ನು ಕಳೆದು ಕರ್ಮದಿಂದ ಪಾರಾಗಿ ನಾನು ನನ್ನ ಹರನ ಕೂಡೆ ಹೋಗುವೆ.
ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು. ಅಂದರೆ ನನ್ನ ಮನವೆಂಬ ವಿರೋಧಿಯನ್ನು ನಿಗ್ರಹಿಸಿ, ಆ ಮನಸ್ಸನ್ನು ನನ್ನ ಗೆಳತಿ ,ನನ್ನ ಸಖಿಯನ್ನಾಗಿ ಮಾಡಿಕೊಂಡೆ ಎನ್ನುತ್ತಾರೆ ಅಕ್ಕಮಹಾದೇವಿ .
ಮನಸ್ಸನ್ನು ನಿಗ್ರಹ ಮಾಡಿಕೊಂಡು ಅನುಭವವ ಮಾಡಿಕೊಳ್ಳಲು ಸಾಧ್ಯ. ಇಲ್ಲಿ ಎಲ್ಲರೂ ನನ್ನ ವೈರಿಗಳು ಹೀಗಾಗಿ ನಾನು ಸಜ್ಜನ ಅಂದರೆ ಒಳ್ಳೆಯ ಗಂಡನನನ್ನು ಮಾಡಿಕೊಂಡೆ ಎನ್ನುತ್ತಾರೆ. ಇವರೆಲ್ಲರೂ ನನಗೆ ಅನುಕೂಲ ಮಾಡಿಕೊಡುಲಾರರು. ನಾನೇ ಹುಡುಕಿ ಸಜ್ಜನನ ಗಂಡನನ್ನು ಮಾಡಿಕೊಂಡೆ.ಶ್ರೀಶೈಲದ ಚೆನ್ನಮಲ್ಲಿಕಾರ್ಜುನನೇ ತನ್ನ ಚೆಲುವಿನ ಒಲವ ಪತಿ ಎಂದು ಅಭಿಮಾನದಿಂದ ಹೇಳಿಕೊಂಡ ಅಕ್ಕ ಇಲ್ಲಿ ‘ಚೆನ್ನಮಲ್ಲಿಕಾರ್ಜುನ’ ಜ್ಞಾನೋದಯದ ಸಂಕೇತ.
ಬಸವಣ್ಣನವರು ತಿಳಿಸಿಕೊಟ್ಟ ‘ಅರಿವಿನ ‘ ಪ್ರತೀಕ ಆ ಅರಿವೇ ತನ್ನ ಪತಿ ಎಂದು ಹೇಳುವ ಅಕ್ಕನವರ ವೈಚಾರಿಕತೆ ನಮ್ಮನ್ನು ಆಳಕ್ಕಿಳಿಸಿ ಬಿಡುತ್ತದೆ .
ಉಡುತಡಿಯಿಂದ ಕಲ್ಯಾಣಕ್ಕೆ ,ಕಲ್ಯಾಣದಿಂದ ಕದಳಿಯ ಪಯಣ ಇದು ಮನುಷ್ಯನ ಹುಟ್ಟಿನಿಂದ ಅರಿವಿನವರೆಗಿನ ಪಯಣ .ಅಂತರಂಗ ಪ್ರವೇಶಿಸುವ ‘ಕಾಯಪಯಣ’.
ಒಟ್ಟಿನಲ್ಲಿ ಇಡೀ ಜೀವ ಪಯಣದ ಹಾದಿಯಲ್ಲಿ ಉಡುತಡಿ ,ಕಲ್ಯಾಣ, ಕದಳಿ ,ಶ್ರೀಶೈಲ ಮಲ್ಲಿಕಾರ್ಜುನ ಎಲ್ಲವೂ ಭೌತಿಕ ಸಂಗತಿಗಳು .ತನ್ನ ಅರಿವಿನ ಮೂಲಕ ಜ್ಞಾನವೆಂಬ ಬೆಳಕಿನ ದರ್ಶನ ಪಡೆಯುವುದೇ ಗುರಿಯಾಗಿರುತ್ತದೆ.ಇದನ್ನು ಬಸವಾದಿ ಶರಣರ ಶಿವಯೋಗದ ಲಿಂಗ ಧ್ಯಾನದಲ್ಲಿ ಸಾಧ್ಯವಾಗಿಸಿಕೊಳ್ಳುತ್ತಾರೆ ಅಕ್ಕಮಹಾದೇವಿಯವರು .
ಒಟ್ಟಿನಲ್ಲಿ ನಮ್ಮೆಲ್ಲ ಆಗು ಹೋಗುಗಳಿಗೆ ನಮ್ಮ ನಮ್ಮ ಮನವೇ ಕಾರಣವಾಗಿ ನಿಲ್ಲುವುದು .
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ