ಶ್ರೀ ನಾಗರಾಳ ಮಲ್ಲಣ್ಣನವರು ನೆನಪು ಮಾತ್ರ ಅವರ ಸಾಧನೆ ಸಾರ್ಥಕವಾಗಲಿ 

ಶ್ರೀ ನಾಗರಾಳ ಮಲ್ಲಣ್ಣನವರು ನೆನಪು ಮಾತ್ರ ಅವರ ಸಾಧನೆ ಸಾರ್ಥಕವಾಗಲಿ 

 

 

 

 

 

 

 

 

 

 

ಕೃಷಿಋಷಿಗಳೂ, ವೈರಾಗ್ಯ ಚಕ್ರವರ್ತಿಗಳೂ-ಮಹಾನುಭಾವಿಗಳೂ ಆಗಿದ್ದ ಲಿಂಗೈಕ್ಯ ಶ್ರೀ ಘನಮಠದ ನಾಗಭೂಷಣ ಶಿವಯೋಗಿಗಳವರ ಹಾಗೂ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರರ ತಲೆಮಾರುಗಳ ಶಿಷ್ಯರಾದ ಘನಮಠ ಶಿವಯೋಗಿಗಳವರ ಕೃಷಿಜ್ಞಾನ ಪ್ರದೀಪಿಕೆಯ ಪರಿಣತರೂ-ಕೃಷಿಸಾಧಕರೂ ಆಗಿ ವಿದೇಶಿಯರಿಂದಲೂ ಗೌರವಗೊಂಡಿರುವ,ಶರಣ ಹಾಗೂ ಅನುಭಾವ ಸಾಹಿತ್ಯ,ಶರಣ ಚರಿತ್ರೆ ಮತ್ತು ಪರಂಪರೆಯ ಕುರಿತಾದ ಅಗಾಧ ಜ್ಞಾನಿಗಳಾಗಿದ್ದ ಹುನಗುಂದದ ಪ್ರತಿಷ್ಠಿತ ನಾಗರಾಳ ಕುಟುಂಬದ ಲಿಂಗೈಕ್ಯ ನಾಗರಾಳ ಶಂಕರಣ್ಣನವರ ಹಿರಿಯ ಮಗ,ಬರೀ ಹಿರಿಯ ಮಗನಷ್ಟೇ ಅಲ್ಲ ತಂದೆಯ ಸಮರ್ಥ ಉತ್ತರಾಧಿಕಾರಿ ಶರಣ ಬಂಧು ಶ್ರೀ ನಾಗರಾಳ ಮಲ್ಲಣ್ಣನವರು.ಇತ್ತೀಚೆಗೆಯಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರೂ ಸಹ ಅದನ್ನು ಕಡೆಗಣಿಸಿ ಸದಾ ಓದು-ಚಿಂತನೆಯಲ್ಲೇ ತೊಡಗಿ ಪ್ರತಿ ದಿನ ನನ್ನ ಹಾಗೂ ನನ್ನಂಥ ಆತ್ಮೀಯರೊಂದಿಗೆ ಚರ್ಚೆ-ಮಾತುಕತೆಯಲ್ಲೇ ತೊಡಗಿರುತ್ತಿದ್ದವರು ಶ್ರೀ ನಾಗರಾಳ ಮಲ್ಲಣ್ಣನವರು.ಘನಮಠ ಶಿವಯೋಗಿಗಳವರ ಕೃಷಿಜ್ಞಾನ ಪ್ರದೀಪಿಕೆ ಮತ್ತು ಅವರ ಜೀವನ ಚರಿತ್ರೆಯ ಸದಾ ಹೊಸ ಶೋಧನಾತ್ಮಕ ಓದು-ಚಿಂತನೆಯಲ್ಲಿ ತೊಡಗಿಕೊಂಡಿದ್ದು ಈಗ್ಗೆ ಎರಡು ವರ್ಷಗಳ ಹಿಂದೆ ಕೃಷಿಋಷಿ ಘನಮಠದಪ್ಪ ಎಂಬ ಹೊಸ ವಿಷಯಗಳುಳ್ಳ ಕೃತಿಯನ್ನು ಸಂತೆಕೆಲ್ಲೂರ ಶ್ರೀಮಠದಿಂದ ಪ್ರಕಟಿಸಿದರು.
ಒಮ್ಮೆ ನಮ್ಮ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಐಹೊಳೆ,ಪಟ್ಟದಕಲ್ಲು-ಬದಾಮಿಗಳಿಗೆ ಹೊರಸಂಚಾರಾರ್ಥ(ಪಿಕ್ ನಿಕ್)ವಾಗಿ ಹೋಗುತ್ತಿರುವ ಮಾಹಿತಿ ತಿಳಿದು ದಾರಿಯಲ್ಲೇ ಮನೆ ಇರುವುದರಿಂದ ಎಲ್ಲರೂ ತಮ್ಮ ಮನೆಗೆ ಬರಲೇಬೇಕೆಂದು ಒತ್ತಾಯಿಸಿದ ಕಾರಣ ನಾನು ನಮ್ಮ ಮೂರು ವಾಹನಗಳನ್ನು ಬೆಳಗಿನ 8-30 ರ ಹೊತ್ತಿಗೆ ಹುನಗುಂದದ ಅವರ ಮನೆಯ ಮುಂದೆ ನಿಲ್ಲಿಸಿದಾಗ ಅಷ್ಟೊತ್ತಿಗಾಗಲೇ ಎಲ್ಲರಿಗೂ ಅಲ್ಪೋಪಹಾರ-ಚಹಾ ವ್ಯವಸ್ಥೆ ಮಾಡಿ ಉಪಚರಿಸಿದರು.ಇದರಂತೆ ನಾನು ಕುಟುಂಬ ಹಾಗೂ ಗೆಳೆಯರ ಸಮೇತವಾಗಿ ಆ ಕಡೆ ಹೋದಾಗಲೆಲ್ಲ ಅವರ ಮನೆಗೆ ಹೋಗಿ ಊಟ-ಉಪಹಾರ ಮುಗಿಸಿಕೊಂಡು ಬರುವದು ನನ್ನ ರೂಢಿಯಾಗಿತ್ತು.
ಗದುಗಿನ ಲಿಂಗೈಕ್ಯ ತೋಂಟದ ಜಗದ್ಗುರುಗಳವರ,ಚಿತ್ತರಗಿ ವಿಜಯಮಹಾಂತೇಶ್ವರರೇ ಮುಂತಾದ ಪೂಜ್ಯರುಗಳ ಪ್ರೀತಿಯ ಒಡನಾಡಿಗಳಾಗಿದ್ದ ಶ್ರೀ ಮಲ್ಲಣ್ಣನವರು ಅವರುಗಳೊಂದಿಗಿನ ಒಡನಾಟದ ಅನೇಕ ವಿಶೇಷ ಪ್ರಸಂಗಗಳ ಬಗೆಗೆ, ಶಿವಯೋಗ ಮಂದಿರ-ಚಿತ್ತರಗಿ ಮಠದ ಪೂಜ್ಯಶ್ರೀ ಲಿಂಗೈಕ್ಯ ಕೊಪ್ಪದ ಮಹಾಂತ ಸ್ವಾಮಿಗಳವರ ಜೀವನ-ಸಾಧನೆಗಳ ಬಗಗೆ ಸದಾ ಹೊಸ ವಿಚಾರ ಬಗೆಗೆ ನನ್ನೊಂದಿಗೆ ಚರ್ಚಿಸುತ್ತಿದ್ದು ಕೊಪ್ಪದ ಮಹಾಂತ ಸ್ವಾಮಿಗಳವರ ಬಗ್ಗೆ ಹೊಸ ಚರಿತ್ರೆಯನ್ನು ಬರೆಯುವ ಹೊಣೆಗಾರಿಕೆಯನ್ನು ನನಗೆ ವಹಿಸಿದ್ದರು.
ಬಹುತೇಕ ನಾಡಿನಾದ್ಯಂತವಾಗಿ ನಮ್ಮ ಹೊಲವೂ ಸೇರಿ ಅನೇಕರ ಹೊಲಗಳಿಗೆ ಭೇಟಿ ನೀಡಿ ಅವುಗಳನ್ನು ಫಲವತ್ತಾಗಿಸುವಂತೆ ಮಾಡಬೇಕಾದ ಕ್ರಮಗಳ ಬಗ್ಗೆ ತಿಳಿಸುವದಷ್ಟೇ ಅಲ್ಲದೇ ಅದರ ಬೆಳವಣಿಗೆಯ ಬಗೆಗೆ ವಿಚಾರಿಸುತ್ತಿದ್ದರು.
ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ತಮ್ಮ ಕೃಷಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಇವರ ಮನೆ ನಿಜಕ್ಕೂ ಒಂದು ಧಾರ್ಮಿಕ ನೆಲೆಯಂತಾದುದು ಎಂಬುದು ಅತಿಶಯದ ಮಾತಲ್ಲ.
ಹೆಚ್ಚು-ಕಡಿಮೆ ಪ್ರತಿ ದಿನವೂ ನನ್ನೊಂದಿಗೆ ಮಾತನಾಡುತ್ತಿದ್ದ ಮಲ್ಲಣ್ಣ ಅಪ್ಪ ಇತ್ತೀಚೆಗೆ ಮಾತೇ ಆಡಿರಲಿಲ್ಲ.ನಾನೂ ಕೂಡ ಬೇರೆ ಕೆಲಸದಲ್ಲಿ ನಿರತನಾದ ಕಾರಣ ಆತನನ್ನು ನೆನೆಸಲೂ ಇಲ್ಲ.ನಿನ್ನೆ ಮಧ್ಯಾಹ್ನ ಮಾತನಾಡಿಸಬೇಕೆಂದು ಕರೆಮಾಡಿದಾಗ ಅವರ ಹಿರಿಯ ಸೊಸೆ ಅನಾರೋಗ್ಯದ ಮಾಹಿತಿ ನೀಡಿದರು. ಕೂಡಲೇ ನಮ್ಮ ಹಿರಿಯರಾದ ಶ್ರೀ ಗಿರಿರಾಜ ಹೊಸಮನಿ ಗುರುಗಳವರೊಂದಿಗೆ ಮಾತನಾಡಿದಾಗ ಅನಾರೋಗ್ಯದ ತೀವ್ರತೆಯ ಮಾಹಿತಿ ತಿಳಿದು ನಾಳೆ ರವಿವಾರ ಭೇಟಿಗಾಗಿ ಹುನಗುಂದಕ್ಕೆ ಹೋಗಲು ತೀರ್ಮಾನಿಸಿದೆವು. ಸಂಜೆ ಸಂತೆಕೆಲ್ಲೂರ ಶ್ರೀ ಘನಮಠೇಶ್ವರ ಮಠದ ಪೂಜ್ಯ ಶ್ರೀ ಗುರುಬಸವ ಮಹಾಸ್ವಾಮಿಗಳವರೊಂದಿಗೂ ಮಾತನಾಡಿದಾಗ ಇದು ಅವರಿಗೆ ತಿಳಿಯದ ವಿಷಯವಾಗಿತ್ತು.ಆಗ ಅವರೂ ಸಹ ರವಿವಾರ ಹುನಗುಂದಕ್ಕೆ ಹೋಗೋಣವೆಂದರು.ಆದರೆ ಇಂದು ಬೆಳಗಿನ 6-30 ರ ಹೊತ್ತಿಗೆ ಪೂಜ್ಯ ಶ್ರೀ ಗುರು ಬಸವ ಶ್ರೀಗಳು ಫೋನಾಯಿಸಿ ಅಪ್ಪ ಮಲ್ಲಣ್ಣನವರ ಲಿಂಗೈಕ್ಯ ವಾರ್ತೆಯನ್ನು ಕೊಟ್ಟಾಗ ನನಗೆ ಬಹಳ ಸಂಕಟವಾಯಿತು.ಒಬ್ಬ ಅಪರೂಪದ ವಿಶ್ವವಿದ್ಯಾಲಯ ಮಟ್ಟದ ಕೃಷಿ ವಿದ್ದಾಂಸ-ಸಾಧಕ,ಸದಾ ಹೊಸ ವಿಚಾರಗಳ ಶೋಧಕ ಎಲ್ಲಕ್ಕೂ ಹೆಚ್ಚಾಗಿ ನಮ್ಮ ಹಿತೈಷಿ ಹಿರಿಯ ಬಂಧುವಿನ ಅಗಲಿಕೆ ನನ್ನ ಸಮಾಧಾನವನ್ನು ಕಲಕಿತು.
ಅವರ ವಾಸಿಯಾಗದ ಹೃದಯ ಕಾಯಿಲೆ ಅವರನ್ನು ನಮ್ಮಿಂದ ಕಸಿದುಕೊಂಡಿತು. ಕಾಲನ ಬಲದ ಮುಂದೆ ಜಗದ ಜೀವವೆಲ್ಲವೂ ದುರ್ಬಲವೇ…..ಉಪಾಯವಿಲ್ಲ. ದಯಾಮಯನಾದ ಪರಮಾತ್ಮ ಹಾಗೂ ಬಸವಾದಿ ಶರಣಶರಣೆಯರು ಅವರಿಗೆ ಸದ್ಗತಿಯನ್ನು ದಯಪಾಲಿಸಲಿ….
ಹೋಗಿ ಬನ್ನಿ ಶರಣ ಬಂಧುವೇ…..
ತಮಗೆ ಭಾವಪೂರ್ಣ ವಿದಾಯಾತ್ಮಕ ಶರಣಾಂಜಲಿಗಳು.

ಡಾ.ಕೆ.ಶಶಿಕಾಂತ ಮತ್ತು ಕುಟುಂಬ ವರ್ಗ ಲಿಂಗಸೂಗೂರ

Don`t copy text!