ಹೆಜ್ಜೆ ಗುರುತು 

 

ಹೆಜ್ಜೆ ಗುರುತು

 

(ಕವನ ಸಂಕಲನ ಕೃತಿ ಅವಲೋಕನ )
*****–*****
(ದಿ.29-12-2024 ರಂದು ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ ಪ್ರದಾನ ಸಮಾರಂಭ ನಿಮಿತ್ತ ಕವನಸಂಕಲನ ಕುರಿತು ಲೇಖನ.)

ಸ್ರೃಜನಶೀಲ ಸಾಹಿತಿ ವಿಮರ್ಶಕಿ ಸಾಮಾಜಿಕ ಕಳಕಳಿಯುಳ್ಳ ಹಿತಚಿಂತಕಿ ಆತ್ಮೀಯ ಸಖಿ ಉದಯೋನ್ಮುಖ ಸ್ರೃಜನಶೀಲ ಕವಿಯಿತ್ರಿ ಎಂದು ಗುರುತಿಸಿಕೊಂಡ ಶ್ರೀಮತಿ. ಸುಧಾ. ಶಿವಾನಂದ ಪಾಟೀಲರು ಗದಗ ಜಿಲ್ಲೆಯ ಮಲ್ಲಸಮುದ್ರದ ಸಹಕಾರಿ ಧುರೀಣರೆಂದೇ ಜನಜನಿತರಾದ ಲಿಂ.ಶರಣ ಶ್ರೀ.ಬಿ.ಎಂ.ಪಾಟೀಲ- ಲಿಂ.ಶರಣೆ.ಅಕ್ಕಮಹಾದೇವಿ ದಂಪತಿಗಳ ಹಿರಿಯ ಕುಲದೀಪಿಕೆ.  ಇವರು ತಮ್ಮ ತಂದೆತಾಯಿವರಾದ ಲಿಂ.ಅಕ್ಕಮಹಾದೇವಿ.ಬಿ.ಪಾಟೀಲ ಹಾಗೂ ಅತ್ತೆಯವರಾದ ಲಿಂ.ರಾಚಮ್ಮ.ವೀ.ಪಾಟೀಲ ಅವರ ಸ್ಮರಣಾರ್ಥ ದತ್ತಿನಿಧಿ ಪ್ರತಿಷ್ಠಾಪಿಸಿರುವರಲ್ಲದೆ ಅಕ್ಕನ ಅರಿವು ವೇದಿಕೆ, ವಿಶ್ವಸ್ಥರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಈ ಸಂಘಟನೆಗಳಿಗೆ ಧಾರಾಳವಾಗಿ ಧನಸಹಾಯವಿತ್ತು, ಬೆಳಗಾವಿ ಜಿಲ್ಲೆಯ ಲೇಖಕ-ಲೇಖಕಿಯವರ ಸಮುದಾಯದಲ್ಲಿ ಕೊಡುಗೈದಾನಿ ಎಂದೆ ಚಿರಪರಿಚಿತರಾದವರು.

 

 

 

 

 

 

 

 

 

‘ ಹೆಜ್ಜೆ ಗುರುತು ‘ ಇವರ ಚೊಚ್ಚಲ ಕವನ ಸಂಕಲನ.ಈ ಕವನ ಸಂಕಲನ ಬೆಳಗಾವಿಯ ಡಾ.ಡಿ.ಎಸ್.ಕರ್ಕಿ ಪ್ರತಿಷ್ಠಾನ ಟ್ರಸ್ಟ್ ಪ್ರತಿವರ್ಷ ನೀಡುವ ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ, ಮತ್ತು ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ ಶಿವಮೊಗ್ಗ ದತ್ತಿ ಪ್ರಶಸ್ತಿ ೨೦೨೪ ರ ಪ್ರಶಸ್ತಿ ಪುರಸ್ಕೃತ ಕವನ ಸಂಕಲನವಾಗಿರುತ್ತದೆ.

‘ಹೆಜ್ಜೆ ಗುರುತು’ ನೂರು ಕವನಗಳನ್ನೊಳಗೊಂಡ ಕವನ ಸಂಕಲನ.ಪ್ರಥಮ ಕವನ ಸಂಕಲನದಲ್ಲಿಯೇ ಶತಕ ಬಾರಿಸಿದ ಅಚ್ಚ ಕನ್ನಡತಿ ಕವಿಯಿತ್ರಿ ಸುಧಾ. ಪ್ರೇಮ ಕವನ,ನೀತಿ ಬೋಧೆ,ತತ್ವ ಚಿಂತನ ಇತ್ಯಾದಿಗಳನ್ನು ಪ್ರಮುಖವಾಗಿ ವಸ್ತು ವಿಷಯವನ್ನಾಗಿಸಿಕೊಂಡಿರುವ ಕವನಗಳೊಂದಿಗೆ ಗಜಲ್ ಗಳನ್ನೊಳಗೊಂಡ ಕವನ ಸಂಕಲನವಿದು.

ಕಾವ್ಯವು ಕವಿಯ ಕಲ್ಪನೆಯನ್ನು ಅಕ್ಷರ ರೂಪದಲ್ಲಿ ಆಕರ್ಷಕ ರೀತಿಯಲ್ಲಿ ಪ್ರತಿನಿಧಿಸುತ್ತದೆ. ಕವಿತೆಯು ಸಹ್ರೃದಯರಿಗೆ ಕವಿಯ ಆಲೋಚನೆಗಳ ಲಯಬದ್ಧವಾದ ಸಾಹಿತ್ಯ ರಸದೌತಣವನ್ನು ಉಣಬಡಿಸುವಂತಹ ವಿಶಿಷ್ಟ ಮಾಧ್ಯಮವಾಗಿರುತ್ತದೆ ಎಂಬುದು ಸುಧಾ ಅವರ ಹೇಳಿಕೆಯಾಗಿರುತ್ತದೆ.’ನಾನ್ರೃಷಿ ಕುರುತೆ ಕಾವ್ಯಂ’ ಋಷಿಯಲ್ಲದವನು ಕವಿಯಾಗಲಾರ ಎಂಬ ಉಕ್ತಿ ಅರ್ಥಪೂರ್ಣವಾಗಿರುತ್ತದೆ.’ಸಚ್ಚಿದಾನಂದ ಸ್ವರೂಪವೇ ಕಾವ್ಯ ‘ಎಂಬ ಕವಿವರ್ಯರ ಹೇಳಿಕೆಯಂತೆ ಲೇಖಕಿ ಸುಧಾರವರ ಪ್ರತಿಯೊಂದು ಕವನಗಳೂ ಓದುಗರನ್ನು ಆನಂದದಾಗರದಲ್ಲಿ ತನ್ಮಯಗೊಳಿಸುತ್ತವೆ.ಸಮಾಜಕ್ಕೆ ಕವಿಯು ಕಾವ್ಯದ ಮುಖೇನ ವಿಶೇಷ ಸಂದೇಶ ಬಿತ್ತರಿಸಿರುವ ಶೈಲಿ ಸ್ಪೂರ್ತಿಯ ಸೆಲೆಯಂತಾಗಿರುತ್ತದೆ. ಕಾವ್ಯದ ನೈಜ ಸಂದೇಶ ಸಮಾಜ ಬಾಂಧವರಿಗೆ ಪ್ರೇರಣಾತ್ಮಕವಾಗುವದರಲ್ಲಿ ಎರಡು ಮಾತಿಲ್ಲ

ಡಾ.ಶಶಿಕಾಂತ ಪಟ್ಟಣವರ ಮಾರ್ಗದರ್ಶನ ಪ್ರೋತ್ಸಾಹ,ಸಹಕಾರ ಪ್ರಭಾವದಿಂದ ಸ್ಪೂರ್ತಿಪಡೆದ ಲೇಖಕಿ ವಿಮರ್ಶಕಿ ಚಿಂತಕಿ ಪೂರ್ಣಪ್ರಮಾಣದ ಕವಿಯಿತ್ರಿಯಾಗಿ ಸುಧಾ ಬಹುಮುಖ ಪ್ರತಿಭಾನ್ವಿತರಾಗಿದ್ದಾರೆಂಬುದು ನಾನು ಕಂಡುಂಡ ವಾಸ್ತವಿಕ ಸಹಜಾನುಭವ.
ಕವಿಯಿತ್ರಿಯ ಕೆಲವು ಪ್ರಮುಖ ಕವನಗಳನ್ನು ಕುರಿತು ವಿಮರ್ಶಾತ್ಮಕವಾದ ನನ್ನ ವಿಚಾರಧಾರೆಯನ್ನು ಬಿತ್ತರಿಸಿರುವ ಲೇಖನವಿದಾಗಿರುತ್ತದೆ..ಉದಾ:

ಹ್ರೃದಯದ ಮೂಲೆಯಲ್ಲಿ
ಹುಟ್ಟುತಿವೆ ನೆನಪುಗಳು
ಕಾಡುತಿವೆ ಬಿಡಿಬಿಡಿಯಾಗಿ”

‘ಕಾಡುತಿವೆ ನೆನಪುಗಳು’ ಕವನದ ಈ ಸಾಲುಗಳಲ್ಲಿ ಹುದುಗಿರುವ ಭಾವಗಳಿಗೆ ನೆನಪುಗಳಿಗೆ ಕವಿಯಿತ್ರಿ ಸ್ಪಂದಿಸಿರುವ ಶೈಲಿಯು’ ರೀತಿರಾತ್ಮಾ: ಕಾವ್ಯಸ್ಯ:’ ‘ರೀತಿಯೇ ಕಾವ್ಯದ ಆತ್ಮ’ ಎಂಬ ಕಾವ್ಯ ಮೀಮಾಂಸಕರ ಹೇಳಿಕೆಗೆ ಕೈಗನ್ನಡಿಯಂತಿದೆ.ಅನುಕ್ಷಣವೂ ಅನುದಿನವೂ ಕಾಡುವಂತಹ ಭಾವ ವಿಭಾವ ವಿಶಿಷ್ಟಾನು ಭಾವಪೂರಿತ ನೆನಪುಗಳೊಂದಿಗೆ ತಮ್ಮ ಸಂತಸ ವಿತರಿಸುವ ಧ್ವನಿಯು ಕಾವ್ಯಾತ್ಮಕವಾಗಿದ್ದು ‘ಧ್ವನಿರಾತ್ಮಾ: ಕಾವ್ಯಸ್ಯ:’ ಎಂಬ ವ್ಯಾಖ್ಯಾನಕ್ಕೆ ಉತ್ತಮ ನಿದರ್ಶನದಂತಿದೆ ಭಾವಜೀವಿ ಕವಿಯಿತ್ರಿಯ ಈ ಅನುಭಾವದ ನುಡಿಗಡಣ.

ಇದ್ದುಬಿಡು ಇಲ್ಲದಂತೆ ಎಂಬ ಕಾವ್ಯದಲ್ಲಿ ಸುಧಾರವರ ವಾಸ್ತವಿಕ ಜಗತ್ತಿನ ಟೀಕೆ ಅಪಹಾಸ್ಯ ವ್ಯಂಗ್ಯ ವಿಡಂಬನೆ ವೈವಿಧ್ಯಮಯ ಅನಿಸಿಕೆಗಳಿಗೆ ತಮ್ಮನ್ನು ತಾವೇ ಸಂತೈಸಿಕೊಳ್ಳುವ ಧನಾತ್ಮಕ ಚಿಂತನೆ ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ.

ಇದ್ದುಬಿಡು ಇಲ್ಲದಂತೆ
ಸದ್ದುಗದ್ದಲದೊಳಗೆ
ಶಾಂತ ಮೂರ್ತಿಯಾಗಿ
ಅಪೇಕ್ಷೆಯ ಮೀರಿ ಮಮತೆಯ
ಹಂಚಿ ಮನದ ಮೂಲೆಯಲಿ
ದೀಪ ಬೆಳಗಿಸಿ
ಇದ್ದು ಬಿಡು ಇಲ್ಲದಂತೆ
ಎಂಥಹ ಅತ್ಯದ್ಭುತವಾಗಿದೆ ನೋಡಿ ಕವಿಸಮಯವಿದು ತಾನೇ!”

‘ಕಾವ್ಯ ಕುಲುಮೆ ‘ ಈ ಸಂಕಲನದ ಇನ್ನೊಂದು ಕವನದಲ್ಲಿ ಭಾವಕವಿಯ ಕುಲುಮೆಯಲ್ಲಿ ಸಾಧನ ಎನ್ನುತ್ತಾ,

ಕಾವ್ಯ ಕುಲುಮೆ
ಉಸಿರಿನ ಪ್ರತಿ ಕ್ಷಣವೂ
ನಿನ್ನ ಜಪದಲ್ಲಿ
ಹ್ರೃದಯದ ಪ್ರತಿ ಬಡಿತವೂ
ನಿನ್ನ ನೆನಪಲ್ಲಿ
ನರನಾಡಿಗಳು ಪ್ರತಿ ಮಿಡಿತದಲಿ
ನಿನ್ನ ಸ್ನೇಹ ಪ್ರೀತಿ ಚಿಲುಮೆ
ಮನಸಿನ ಪ್ರತಿ ಕನವರಿಕೆಯೂ
ನಿನ್ನ ನಾಮಾವಳಿಯಲ್ಲಿ
ಮಾತಿನ ಪ್ರತಿ ಶಬ್ದವೂ
ನಿನ್ನ ಕಾವ್ಯ ಕುಲುಮೆಯಲ್ಲಿ “

ಕವಿಯಿತ್ರಿಯ ಪರಿಪೂರ್ಣ ಸಮರ್ಪಣಾ ಭಾವವು ನರನಾಡಿಗಳಲ್ಲಿ ಪ್ರೀತಿಸುವ ಮನದಾಳದಲ್ಲಿ ಬೇರೂರಿರಬೇಕೆಂಬ ಮಧುರಾತಿ ಮಧುರ ಪಿರುತಿ ಅತ್ಯದ್ಭುತವಾಗಿದೆ.
‘ಮೌನವು ಮಾತಾದಾಗ ‘ ಎಂಬ ಮತ್ತೊಂದು ಕವನದಲ್ಲಿ

ಮೌನವು ಮಾತಾಯಿತು
ಮೌನದ ಹೊದಿಕೆಯನು
ಮನಸಿನ ಪರದೆಯನು
ಬಿಚ್ಚಿ ಬಿಚ್ಚಿ ನೀ ಹರವಲು”

ಹೀಗೆ ಮೌನವೊಡೆದು ಮೊಗ್ಗು ಬಿರಿದು ಹೂವರಳಿದಂತಾಗಿ ಸುಮಧುರ ಸುವಾಸನೆ ಸುತ್ತಮುತ್ತ ಪಸರಿಸುತ್ತಲಿರುವ ಕವಿಭಾವ ಪ್ರತಿಮೆ ಅಪೂರ್ವವೇ ಸರಿ!
ಮೌನ ಮಾತಾಯಿತು ಎಂಬ ಕಾವ್ಯದಲ್ಲಿ ತನ್ನನ್ನು ತಾನೇ ಇಷ್ಟಪಡುವ ಮನಸಿನ ಪಾರದರ್ಶಕ ಪರದೆಯು ತಂತಾನೇ ಸರಿದು ಅನಾವರಣಗೊಂಡಾಗ ಖುಷಿಯ ಹೊನಲು ಕಾರಂಜಿಯಂತೆ ಪಸರಿಸಿ ಸಂತಸದಿಂದ ಮಾತು ಮೌನವಾಯಿತು ಎಂಬ ಕವಿಯಿತ್ರಿಯ ಪರಕಲ್ಪನೆ ಹ್ರೃದಯಂಗಮವಾಗಿದೆ.
ಪ್ರಾತಿನಿಧಿಕ ಕವನಗಳೊಂದಿಗೆ ಗಜಲ್ ಗಳ ಘಮಲುಗಳ ಸವಿಯನ್ನು ಸವಿಯಲು ಈ ಕವನ ಸಂಕಲನದಲ್ಲಿ ಅವಕಾಶವಿರುವದು ಈ ಸಂಕಲನದ ವಿಶೇಷತೆಯಾಗಿದೆ. ಉದಾ:ಗಜಲ್ ಹೀಗಿದೆ,

ಒಳ್ಳೆಯ ಮನಸಿನಿಂದ ಕಾರ್ಯ ಮಾಡು ನೀ
ಆಗ ಸುಧೆಯಂತೆ ಜೀವನ ನಿನ್ನದಾಗಬಾರದೇಕೆ ಬದುಕೆ”

ಹೀಗೆ ಹೆಜ್ಜೆ ಗುರುತು ಕವನಸಂಕಲನದಲ್ಲಿ ಕವಿಯಿತ್ರಿ ಸುಧಾರವರು ತಮ್ಮದೇಯಾದ ಹೆಜ್ಜೆ ಗುರುತು ಸ್ಫುರಿಸುವಲ್ಲಿ ಯಶಸ್ವಿಯಾಗಿದ್ದಾರಲ್ಲದೇ ಹಲವಾರು ಕ್ರೃತಿಗಳನ್ನು ರಚಿಸಿದ್ದಾರೆ.
ಡಾ.ಜಚನಿ( ಸಂಗ್ರಹ)ಬದುಕು ಬರಹ,ವಚನಗಳಲ್ಲಿ ಗುರುಲಿಂಗ ಜಂಗಮ,ಅನುಭವ ಸಿರಿ,ಕನ್ನಡದ ಕಬ್ಬಿಗರು,ದಾಸೋಹಂ, ಸಂಯುಕ್ತ,ತಾಯಿಯಿದ್ದರೆ ತವರೆಚ್ಚು,ಶರಣರ ನೆನೆದರ ಸರಗೀಯ ಇಟ್ಟಂಗ,ಹ್ರೃದಯದ ಮಾತು, ಚುಕ್ಕಿ ಹೇಳಿದ ಕಥೆ ಈ ಮೊದಲಾದ ಕ್ರೃತಿಗಳ ಕರ್ತೃ ಸುಧಾ ಪಾಟೀಲರು.

ಶರಣೆ ಸುಧಾ ಪಾಟೀಲ ಇವರ ಅನೇಕ ಲೇಖನ, ಶರಣ ಸಾಹಿತ್ಯದ ವಚನ ವಿಶ್ಲೇಷಣೆ ,ಗಜಲ್, ವಿಮರ್ಶೆ, ಕವನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಇವರ ಎರಡು ಕವನ ಸಂಕಲನಗಳು,ಒಂದು ಕಿರು ಹೊತ್ತಿಗೆ, ಶರಣರ ಲೇಖನಗಳ ಕೃತಿ ಹಾಗೂ ಆರು ಸಂಪಾದನೆಯ ಕೃತಿಗಳಲ್ಲಿ ಸಹಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಡಿಯಲ್ಲಿ ನಡೆಯುತ್ತಿರುವ ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಒಬ್ಬ ಮಹಿಳಾ ಉತ್ತಮ ಸಂಘಟಕಿಯಾಗಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುವುದರ ಮೂಲಕ ಬೆಳಗಾವಿಯಲ್ಲಿ ಸುಪರಿಚಿತರಾಗಿದ್ದಾರೆ. ಇವರ ಕವನ ರಚನಾ ಶೈಲಿ ಭಾಷಾ ಶುದ್ಧತೆ ಪ್ರತಿಮೆಗಳ ಅಳವಡಿಕೆ ಮುಂತಾದವು ಕಾವ್ಯ ರಚನೆಗಳಲ್ಲಿ ಎತ್ತಿದ ಕೈಯಾಗಿರುತ್ತವೆ ಎಂದು ಡಾ.ಶಶಿಕಾಂತ ಪಟ್ಟಣ ಅವರು ಮುನ್ನುಡಿ ಮತ್ತು ಬೆನ್ನುಡಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಧಾ ಒಬ್ಬ ಸುಂದರ ಮನಸ್ಸಿನ ಸ್ನೇಹ ಜೀವಿ. ಸೂಕ್ಷ್ಮ ಸ್ವಭಾವದ ಭಾವಜೀವಿ. ಕುಟುಂಬದ ಸರ್ವರನ್ನು ಅತಿಯಾಗಿ ಆತ್ಮೀಯವಾಗಿ ಸಾಮರಸ್ಯದಿಂದ ಬಾಂಧವ್ಯ ಬೆಳೆಸಿಕೊಳ್ಳುವ ಜನಪರ ಕಾಳಜಿ ಹೊಂದಿದ ಜವಾಬ್ದಾರಿ ಸಾಹಿತಿ ಎಂದು ಜನಪ್ರೀಯತೆ ಪಡೆದಿದ್ದಾರೆ.ಇವರು ಹತ್ತು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ,ಸದಸ್ಯೆಯಾಗಿ ಸೇವಾ ಕೈಂಕರ್ಯದಲ್ಲಿ ಅನೂಚಾನವಾಗಿ ನಿರತರಾಗಿದ್ದಾರೆ.ಈ ಕವನ ಸಂಕಲನವನ್ನು ತಮ್ಮ ತಾಯಿಗಿಂತ ಅಧಿಕ ಪ್ರೀತಿ ತೋರಿದ ಅತ್ತೆಯವರಾದ ಲಿಂ.ರಾಚಮ್ಮ ಪಾಟೀಲ ಸಾ/ಗಂದಿಗವಾಡ ಅವರಿಗೆ ಸಮರ್ಪಿಸಿದ್ದಾರೆ.ಇವರ ಸಾಹಿತ್ಯಿಕ ಸಾಂಸ್ಕೃತಿಕ ಸೇವೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳವರು ರಾಜ್ಯೋತ್ಸವ ಪ್ರಶಸ್ತಿ,ಅನುಪಮ ಸೇವಾರತ್ನ ಪ್ರಶಸ್ತಿ,ಮಿನರ್ವ ಪ್ರಶಸ್ತಿ,ಬಸವ ಪ್ರಶಸ್ತಿ ,ಹೀಗೆ ವಿವಿಧ ಪ್ರಶಸ್ತಿಯಿತ್ತು ಸತ್ಕರಿಸಿ ಗೌರವಿಸಿದ್ದಾರೆ.ಇವರ ಇನ್ನೂ ಅನೇಕ ಕೃತಿಗಳು ಲೋಕಾರ್ಪಣೆಗೊಳ್ಳುತ್ತಾ ಕನ್ನಡ ಸಾಹಿತ್ಯ ಲೋಕವನ್ನು ಮತ್ತು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.

ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. ಗದಗ.
ಮೊ:೯೯೮೦೭೧೧೪೩೫.

Don`t copy text!