ಕರ್ನಾಟಕ ಸರ್ಕಾರದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂ.ಎಸ್.ಐ.ಎಲ್) ನ ಬೋರ್ಡ್ ಆಫ್ ಡೈರೆಕ್ಟರಾದ ಶ್ರೀ ಅಂದಪ್ಪ ಗವಿಸಿದ್ದಪ್ಪ ಜವಳಿ ಕೊಪ್ಪಳ ಜಿಲ್ಲೆಯ ನೂತನ ತಾಲೂಕ ಕುಕನೂರಿನ ಬೆಣಕಲ್ ಗ್ರಾಮದವರು.
ಇಂದು ಅರುವತೊಂಬತ್ತನೆಯ ಹುಟ್ಟು ಹುಟ್ಟುಹಬ್ಬವನ್ನು (ಜನ್ಮದಿನ 21-12-1952) ಆಚರಿಸಿಕೊಳ್ಳುತ್ತಿದ್ದಾರೆ.ಹುಟ್ಟು ಹೋರಾಟಗಾರ ಕಳೆದ ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದರೂ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.ಓದಿದ್ದು ಎಸ್.ಎಸ್.ಎಲ್.ಸಿ ಆದರೂ ತಮ್ಮ ಬಾಯಿಯಿಂದಲೇ ಎಲ್ಲರನ್ನು ಬಗ್ಗಿಸುವ ತಾಕತ್ತನ್ನುಳ್ಳವರು.ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿಗಳು ಈಗಿನ ಕರ್ನಾಟಕ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರೂ ಆದ ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ್ ರವರ ನೆಚ್ಚಿನ ಭಂಟ.
ವೃತ್ತಿಯಿಂದ ಕೃಷಿಕನಾದರೂ ಕೃಷಿಯಲ್ಲಿ ಸಾಧನೆ ಮಾಡಿದ್ದು ಕಡಿಮೆಯೆನ್ನಬಹುದು.ಹಿಂದೆ ಮುಂದೆ ನೋಡದೆ ಎದುರಿನವರ ಮನಸ್ಸನ್ನು ಮುದುಡುವಂತೆ ಮಾತನಾಡುತ್ತಾನೆ ಎನ್ನುವುದನ್ನು ಬಿಟ್ಟರೆ,ಸ್ವಚ್ಛ ಮನಸ್ಸಿನ ಕಪಟವನ್ನರಿಯದ ವ್ಯಕ್ತಿ.ಮುಂದಾಲೋಚನೆ ಹಾಗೂ ದೂರದೃಷ್ಟಿಯಿಂದ ರಾಜಕಾರಣವನ್ನು ಮಾಡಿದ್ದರೆ ಎಂದೋ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕನಾಗಬಹುದಾದ ತಾಕತ್ತು ಇವರದು.ಯಾವ ಇಸಂಗಳಿಗೂ ಅಂಟಿಕೊಳ್ಳುವ ಜಾಯಮಾನ ಇವರದಲ್ಲ.ಈತನ ಮುಗ್ಧ ಮನಸ್ಸನ್ನು ಹಲವಾರು ಜನ ದುರುಪಯೋಗ ಮಾಡಿಕೊಂಡದ್ದು ಉಂಟು.ಆ ಕಾರಣಕ್ಕಾಗಿ ಹಲವಾರು ಜನರ ದ್ವೇಷವನ್ನು ಕಟ್ಟಿಕೊಂಡಿದ್ದಾನೆ.
ಯಲಬುರ್ಗಾ ಕಾಂಗ್ರೆಸ್ ಪಕ್ಷದಿಂದ ರಾಜಕಾರಣವನ್ನು ಆರಂಭಿಸಿದ ಇವರು ಈಗ ಬಿ.ಜೆ.ಪಿ.ಯ ಅಂಗಳದಲ್ಲಿ ಆಶ್ರಯ ಪಡೆದಿದ್ದಾರೆ.ಹತ್ತೊಂಬತ್ತ ನೂರಾ ಎಂಭತ್ತರ ದಶಕದ ಕೊನೆಯಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕರಾಗಿದ್ದ ಲಿಂಗರಾಜ ದೇಸಾಯಿಯವರ ಫಾಲೋವರ್ ಆಗಿ ರಾಜಕಾರಣ ಪ್ರಾರಂಭಿಸಿದ ಅಂದಪ್ಪ ಜವಳಿ ಒಂದಷ್ಟು ಮನಸ್ಸು ಮಾಡಿದ್ದರೆ ಇಂದು ರಾಜಕಾರಣದಲ್ಲಿ ಅತಿ ಮೇಲ್ಮಟ್ಟವನ್ನು ತಲುಪಬಹುದಾಗಿತ್ತು.
ಕೈ ಮತ್ತು ಕಚ್ಚೆಯನ್ನು ಶುದ್ಧವಾಗಿಟ್ಟುಕೊಂಡ ಅಂದಪ್ಪ ಜವಳಿ ಮಾತುಗಳ ಮೇಲೆ ಹಿಡಿತ ಸಾಧಿಸಿದ್ದರೆ ಯಲಬುರ್ಗಾ ತಾಲ್ಲೂಕಿನ ರಾಜಕಾರಣವೇ ಬೇರೆ ಆಗುತ್ತಿತ್ತು.ಒಂದು ಕಾಲಕ್ಕೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕೆನಿಸಿದ ಯಲಬುರ್ಗಾದ ಅಭಿವೃದ್ಧಿಯ ಹರಿಕಾರನೆನಿಸಿದ ಶ್ರೀ ಬಸವರಾಜ ರಾಯರೆಡ್ಡಿಯವರ ಜೊತೆಗೆ ಅನುಸರಿಸಿಕೊಂಡು ಹೋಗಿದ್ದರೆ ಇಂದು ಅಂದಪ್ಪ ಜವಳಿಯವರನ್ನು ಹಿಡಿಯುವವರೇ ಇರುತ್ತಿರಲಿಲ್ಲ.ಆದರೆ ಅಂದಪ್ಪ ಜವಳಿಯವರ ಮನಸ್ಥಿತಿ ಹೊಂದಿಕೊಂಡು ಹೋಗುವ ಜಾಯಮಾನ ಅಲ್ಲ,ಬದಲಾಗಿ ಪ್ರವಾಹಕ್ಕೆ ವಿರುದ್ಧವಾಗಿ ಈಜುವದೇ ಇವರಿಗೆ ಖುಷಿ ಎನಿಸುತ್ತಿರಬಹುದು.
ಬಡವರು, ದಮನಿತರು,ಮತ್ತು ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತುವದಕ್ಕೆ ಸದಾ ಹಂಬಲಿಸುತ್ತಿರುತ್ತಾನೆ.ಇವರಿಂದ ನ್ಯಾಯವನ್ನು ಪಡೆದುಕೊಂಡ ಅನೇಕ ಜನತೆ ಇವರ ಜೊತೆಗೆ ಬಹಳ ದಿವಸ ನಿಲ್ಲಲಿಲ್ಲ ಎನ್ನುವ ಜನರಾಡುವ ಮಾತನ್ನು ಕೇಳಿದ್ದೇನೆ, ಕಾರಣ ಏನೋ ನನಗೆ ಗೊತ್ತಿಲ್ಲ ? ನನ್ನ ಮತ್ತು ಶ್ರೀ ಅಂದಪ್ಪ ಜವಳಿಯವರ ಗೆಳೆತನ ಕಳೆದ ಮೂವತ್ತು ವರ್ಷಗಳಿಗಿಂತಲೂ ಮಿಗಿಲಾಗಿದೆ.ಅವರೂರಿನ ಶಾಲೆಯ ಬಾಲ್ಯದ ಗೆಳೆಯ ಶ್ರೀ ಎಸ್.ಸಿ.ಹಿರೇಮಠ ನಾನು ಕೆಲಸ ಮಾಡುತ್ತಿದ್ದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದರು.ಅವರನ್ನು ಭೆಟ್ಟಿ ಆಗಲು ಆಗಾಗ ನಮ್ಮ ಶಾಲೆಗೆ ಬಂದಾಗ ನಮ್ಮ ಶಾಲೆಯ ಎಲ್ಲ ಶಿಕ್ಷಕರೊಡನೆ ಪಟಪಟನೆ ಮಾತನಾಡುತ್ತಿದ್ದ ಪರಿಯನ್ನು ನೋಡಿ ಬೆರಗಾಗುತ್ತಿದ್ದೆ.
ಗ್ರಾನೈಟ್ ಉದ್ಯಮ ಅದೇ ಆಗ ಕೂಕನೂರಿನಲ್ಲಿ ತಲೆ ಎತ್ತುತ್ತಿದ್ದ ಕಾಲವದು.ಗ್ರಾನೈಟ್ ಉದ್ಯಮದಲ್ಲಿ ಒಂದು ಕೈಯನ್ನು ನೋಡಿದರು.ಕೃಷಿಯಲ್ಲಿ ಗಳಿಸಿದ ಲಾಭವನ್ನು ಗ್ರಾನೈಟ್ ಉದ್ಯಮದಲ್ಲಿ ಕಳೆದುಕೊಂಡರೂ ಎದೆಗುಂದಲಿಲ್ಲ. ಬಹುಶಃ ಅಂದಪ್ಪ ಜವಳಿಯವರ ಬದುಕಿನಲ್ಲಿ ಅಸಾಧ್ಯವೆಂಬುದೇ ಇಲ್ಲ.ಅದು ಒಳ್ಳೆಯದೇ ಆಗಿರಬಹುದು ಅಥವಾ ಕೆಟ್ಟದ್ದೇ ಆಗಿರಬಹುದು. ಅಸಾಧ್ಯವೆನ್ನುವ ಮಾತು ಅಂದಪ್ಪ ಜವಳಿಯವರ ಡಿಕ್ಷನರಿಯಲ್ಲೇ ಇಲ್ಲ. ಅಷ್ಟೊತ್ತಿಗಾಗಲೇ ಯಲಬುರ್ಗಾದ ರಾಜಕಾರಣದಲ್ಲಿ ಶ್ರೀ ಬಸವರಾಜ ರಾಯರೆಡ್ಡಿಯವರು ವಿರುದ್ಧ ಶ್ರೀ ಈಶಣ್ಣ ಗುಳಗಣ್ಣನವರ ಒಂದು ಶಕ್ತಿಯಾಗಿ ಬೆಳೆಯುತ್ತಿದ್ದರು, ಆ ಶಕ್ತಿಯ ಹಿಂದಿನ ಬೆನ್ನೆಲುಬಾಗಿ ಅಂದಪ್ಪ ಜವಳಿಯವರು ಒಬ್ಬರಾಗಿದ್ದರು ಎನ್ನುವುದು ಜನಜನಿತ ವಿಷಯವಾಗಿತ್ತು.
ಮುಂದೆ ಬಿ.ಜೆ.ಪಿ ಪಕ್ಷದಿಂದ ಶ್ರೀ ಈಶಣ್ಣ ಗುಳಗಣ್ಣನವರ್ ಶ್ರೀ ಬಸವರಾಜ ರಾಯರೆಡ್ಡಿ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾಗಿ ಶಾಸಕರಾಗುವಲ್ಲಿ ಅಂದಪ್ಪ ಜವಳಿ ಅವರ ಶ್ರಮವಿತ್ತು ಎನ್ನುವದನ್ನು ಯಲಬುರ್ಗಾ ತಾಲ್ಲೂಕಿನ ಜನತೆ ಇಂದಿಗೂ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ.ನಾನು ಮತ್ತು ಅಂದಪ್ಪ ಜವಳಿ ನಿಕಟ ಸಂಪರ್ಕಕ್ಕೆ ಬಂದದ್ದು ಹತ್ತೊಂಭತ್ತನೂರಾ ತೊಂಭತ್ತಾರರಲ್ಲಿ.ಹುಬ್ಬಳ್ಳಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಬೆಣಕಲ್ಲಿನ ಶ್ರೀ ಓ.ವಿ.ಗದಗರವರ ಜೊತೆಗೆ ಇವರು ಕೊಪ್ಪಳಕ್ಕೆ ಬರುತ್ತಿದ್ದರು.
ಆ ಸಂದರ್ಭ ಕೊಪ್ಪಳದಲ್ಲಿ ಬಣಜಿಗರು 3 A ಮೀಸಲಾತಿಯನ್ನು ಪಡೆಯಲು ಸಂಘಟನೆಯ ಆಗುತ್ತಿದ್ದ ಕಾಲವದು.ಕುಷ್ಟಗಿಯ ಶ್ರೀ ಬಸಪ್ಪ ಕರಡಿಯವರ ಜೊತೆಗೆ ವೀರಬಸಪ್ಪ ಬಳ್ಳೊಳ್ಳಿ,ಮಾಜಿ ಸಚಿವರಾದ ಶ್ರೀ ವಿರುಪಾಕ್ಷಪ್ಪ ಅಗಡಿ ಹಾಗೂ ಶ್ರೀ ಮಲ್ಲಿಕಾರ್ಜುನ ಅಗಡಿಯವರನ್ನು ಬೆಟ್ಟಿಯಾಗಲು ಕೊಪ್ಪಳಕ್ಕೆ ಬರುತ್ತಿದ್ದರು. ನಾನು ಈ ಹಿರಿಯರ ಜೊತೆಗೆ ಇರುತ್ತಿದ್ದರಿಂದ ನನ್ನ ಮತ್ತು ಅಂದಪ್ಪ ಜವಳಿ ಅವರ ಗೆಳೆತನ ನಿಕಟವಾಗುತ್ತಾ ಬಂತು.1998 ರ ವೇಳೆಗೆ ಕೊಪ್ಪಳದ ಬಣಜಿಗ ಯುವಕರು 3 ಎ ಮೀಸಲಾತಿಯನ್ನು ಪಡೆದುಕೊಳ್ಳುವಲ್ಲಿ ಸಫಲರಾದ ಮೇಲೆ ನಾಡಿನಲ್ಲಿರುವ ಬಣಜಿಗ ಸಮಾಜದ ಯುವಕರಿಗೆ ಈ ಸೌಲಭ್ಯವನ್ನು ದೊರಕಿಸಿಕೊಡಲು ರಾಜ್ಯ ಸಂಘಟನೆಯನ್ನು ಕಟ್ಟಬೇಕೆಂದು ತೀರ್ಮಾನವಾಯಿತು.ಅದರಂತೆ ರಾಜ್ಯಾದ್ಯಂತ ಸಂಚರಿಸಿ ಬಣಜಿಗರ ಪೂರ್ವಭಾವಿ ಸಭೆಯನ್ನು ಕರೆಯಲು ಶ್ರೀ ಮಲ್ಲಿಕಾರ್ಜುನ ಅಗಡಿ,ಬಸವರಾಜ ಗಣವಾರಿ ಮತ್ತು ನಾನು ಒಂದು ತಂಡವಾದರೆ ಇನ್ನೊಂದು ತಂಡದ ನಾಯಕತ್ವವನ್ನು ಅಂದಪ್ಪ ಜವಳಿ ವಹಿಸಿದ್ದರು ವಹಿಸಿದ್ದರು.
2003 ರಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘ ( ರಿ )ಬೆಂಗಳೂರು ಅಸ್ತಿತ್ವಕ್ಕೆ ಬರುವಲ್ಲಿ ಅಂದಪ್ಪ ಜವಳಿಯವರ ಶ್ರಮವೂ ಇತ್ತು.ಮುಂದೆ ಹುಬ್ಬಳ್ಳಿಯ ಶ್ರೀ ಓ.ವಿ.ಗದಗ, ಎಸ್.ವಿ.ಅಂಗಡಿ, ಎಂ.ವಿ.ಗೊಂಗಡಶೆಟ್ಟಿ,ಧಾರವಾಡದ ಎಮ್.ಜಿ.ಕುಂಬಾರಿ,ಕೊಪ್ಪಳದ ವೀರಬಸಪ್ಪ ಬಳ್ಳೊಳ್ಳಿ,ಅಂದಾನಪ್ಪ ಅಗಡಿ,ಕುಷ್ಟಗಿಯ ಬಸಪ್ಪ ಕರಡಿ,ಸಿದ್ದಣ್ಣ ಪಟ್ಟಣಶೆಟ್ಟಿ,ಗಂಗಾವತಿಯ ರುದ್ರಪ್ಪ ಗಾಳಿ,ಪರಣ್ಣ ಮುನವಳ್ಳಿ,ಮಂಜುನಾಥ ಸಿದ್ಧಾಪುರ,ಸವಣೂರಿನ ಮೋಹನ ಮೆಣಸಿನಕಾಯಿ,ಜಮಖಂಡಿಯ ತಾತಾಸಾಹೇಬ ಬಾಂಗಿ,ವಿಜಯಪುರದ ಸಿದ್ದಣ್ಣ ಸಕ್ರಿ, ಎ.ಬಿ.ಕಂಬಿ,ಶ್ರೀಶೈಲ ಜೋಗೂರ,ಸೋಮಶೇಖರ ಬಂದರವಾಡ, ಹೊನವಾಡದ ಮಲ್ಲಪ್ಪಣ್ಣ ಪಟ್ಟಣಶೆಟ್ಟಿ,ಹಾವೇರಿಯ ಚಂದ್ರಶೇಖರ ಸುರಳಿಹಳ್ಳಿ,ಬಳ್ಳಾರಿಯ ಶರಣಬಸಪ್ಪ ಹಾವಿನಾಳ,ಬಾಗಲಕೋಟೆಯ ಬಸವರಾಜ ನಾವಲಗಿ,ಲಿಂಗಸೂರಿನ ಡಾ. ಶಿವಬಸಪ್ಪ ಹೆಸರೂರು,ಹಟ್ಟಿ ಚಿನ್ನದ ಗಣಿಯ ಬಸವರಾಜಪ್ಪ ಪಾಮಶೆಟ್ಟಿ,ಮುಂಡರಗಿಯ ತಿಗರಿ ಗುಂಡಪ್ಪ,ಬೆಲ್ಲದ ಅಂದಪ್ಪನವರು, ಸಿಂಧನೂರಿನ ಎನ್. ಶಿವನಾಗಪ್ಪ, ಮಾಡಶಿರವಾರ ಸಿದ್ಧರಾಮಪ್ಪ,ಮಸ್ಕಿಯ ಅಂದಾನಪ್ಪ ಗುಂಡಳ್ಳಿ,ಕೂಡಲಸಂಗಮದ ಶಂಕರಣ್ಣ,ಇಳಕಲ್ಲಿನ ಮಹಾಂತಪ್ಪ ಶೆಟ್ಟರ,ಯಲಬುರ್ಗಾದ ಸಂಗಣ್ಣ ಟೆಂಗಿನಕಾಯಿ ಮುಂತಾದವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲಿಕಾರ್ಜುನ ಅಗಡಿಯವರು ರಾಜ್ಯಾಧ್ಯಕ್ಷರಾಗಿ ನಾನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಶ್ರೀ ಬಸವರಾಜ ಗಣವಾರಿ ಕೋಶಾಧ್ಯಕ್ಷರಾಗಿ ರಾಜ್ಯದಾದ್ಯಂತ ಸಂಚರಿಸಿ ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ ಬಣಜಿಗ ಕ್ಷೇಮಾಭಿವದ್ಧಿ ಸಂಘವನ್ನು ಅಸ್ತಿತ್ವಕ್ಕೆ ತಂದು ಸಮಾಜದ ಜನತೆಗೆ ಮೀಸಲಾತಿಯ ಸೌಲಭ್ಯವನ್ನು ಕೊಡಿಸುವಲ್ಲಿ ಸಫಲರಾದೆವು.
ಹಾಗೆಯೇ ಬಣಜಿಗರಲ್ಲಿ ಜಾತಿಯ ದುರಭಿಮಾನವನ್ನು ತುಂಬದೆ, ಸ್ವಾಭಿಮಾನವನ್ನು ಬೆಳೆಸುತ್ತಾ ಸಂಘಟನೆಯನ್ನು ಬಲಿಷ್ಠಗೊಳಿಸುವಲ್ಲಿ ಅಂದಪ್ಪ ಜವಳಿಯವರು ನಮ್ಮ ಜೊತೆಗಿದ್ದರು.ಉತ್ತರ ಕರ್ನಾಟಕದಲ್ಲಿ ಬಣಜಿಗರ ಶಕ್ತಿ ಭವನವನ್ನು ನಿರ್ಮಿಸಲು ಧಾರವಾಡದ ಸುತ್ತೂರಿನಲ್ಲಿ ಕರ್ನಾಟಕ ಗೃಹ ಮಂಡಳಿಯವರು ನಿರ್ಮಿಸಿದ ಬಡಾವಣೆಯಲ್ಲಿ ಒಂದು ಎಕರೆ ಹತ್ತು ಗುಂಟೆ ಜಮೀನನ್ನು ಬಣಜಿಗ ಸಂಘಕ್ಕೆ ಮಂಜೂರು ಮಾಡಿಸಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಜಗದೀಶ ಶೆಟ್ಟರ ಅವರ ಮನ ಒಲಿಸುವಲ್ಲಿ ಅಂದಪ್ಪ ಜವಳಿಯವರ ಶ್ರಮ ಇದೆ ಎನ್ನುವುದನ್ನು ನಾವ್ಯಾರೂ ಮರೆತಿಲ್ಲ.
ಸಂಘ ಜೀವಿಯಾದ ಅಂದಪ್ಪ ಜವಳಿ ಸುಮಾರು ನಲುವತ್ತು ವರ್ಷ ಸಾರ್ವಜನಿಕ ಜೀವನದಲ್ಲಿದ್ದರು ತನಗಾಗಿ ಮಾಡಿಕೊಂಡಿದ್ದು ಶೂನ್ಯ.ತಂತ್ರ ಕುತಂತ್ರಗಳು ಅಂದಪ್ಪ ಜವಳಿಯವರಿಗೆ ಗೊತ್ತಿಲ್ಲ.ಆದರೆ ತಂತ್ರಿ ಕುತಂತ್ರಿಗಳ ಬಾಯಿಗೆ ಕಿವಿಗೊಟ್ಟು ಪಜೀತಿಗೆ ಬಿದ್ದ ಎಷ್ಟೋ ಘಟನೆಗಳು ಇವೆ.ಆಸ್ತಿ ಅಂತಸ್ತಿಗೆ ಆಸೆ ಪಟ್ಟವರಲ್ಲ,ಇಂತಲ್ಲಿ ಹೋಗಬೇಕು ಇಂತಲ್ಲಿ ಹೋಗಬಾರದು ಎನ್ನುವ ನಿಯಮವನ್ನು ಪಾಲಿಸಿದವರಲ್ಲ.ಇಂದಿಗೂ ಉಡುಗೆ ತೊಡುಗೆಗಳ ಬಗ್ಗೆ ಎಂದೂ ಗಮನ ಹರಿಸಿದವರೇ ಅಲ್ಲ.ಮಾನ ಮುಚ್ಚುವುದಕ್ಕೆ ಬಟ್ಟೆಯೊoದಿದ್ದರೆ ಸಾಕು ಎನ್ನುವ ಮನೋಭಾವ ಅಂದಪ್ಪನದು.ಕಾಯಕಕ್ಕಾಗಿ ಯಾವುದೇ ಊರಿಗೆ ಹೋಗಬೇಕಾಗಿದ್ದರೆ ಬಸ್ಸು, ಕಾರು, ಟ್ರೇನು, ಟಮ್ ಟಮ್, ಲಾರಿ, ಎತ್ತಿನ ಬಂಡಿ ಆದರೂ ಸರಿ ಬೇದ ಭಾವವಿಲ್ಲ. ಹೇಗೆ ಹೋದೆ, ಹೇಗೆ ಬಂದೆ ಎನ್ನುವುದಕ್ಕಿಂತ ಮುಖ್ಯವಾಗಿ ಆ ಕ್ಷಣದ ಗುರಿ ಮುಟ್ಟುವುದು ಇವರಿಗೆ ಅವಶ್ಯ.
ಅಂದಿಗೂ ಇಂದಿಗೂ ಇವರಿಗೆ ಜೀವದ ಗೆಳೆಯನಾಗಿ ಉಳಿದವರೆಂದರೆ ಯಲಬುರ್ಗಾದ ಸಂಗಣ್ಣ ಕರಹಿoಡಿಯವರು ಒಬ್ಬರೇ ಎನಿಸುತ್ತದೆ.ಈಶಣ್ಣ ಗುಳಗಣ್ಣನವರ್, ರವಿತೇಜ ಅಬ್ಬಿಗೇರಿ, ವಾರದ ಶೇಖರಪ್ಪ,ವಿಜಯಕುಮಾರ ಕರಿಹಿಂಡಿ,ಕಜ್ಜಿ ಯಜಮಾನ್ರು,ಇಟಗಿಯ ಬೆಲ್ಲದ ಸರ್, ಸೋಂಪುರ ಕೊಟ್ರೇಶ, ಇಳಕಲ್ಲಿನ ಮಲ್ಲಿಕಾರ್ಜುನ ಶೆಟ್ಟರ್,ಮುಂತಾದವರು ಇವರ ಆತ್ಮೀಯ ಗೆಳೆಯರ ಬಳಗದಲ್ಲಿದ್ದಾರೆ.ಅಂದಪ್ಪ ಜವಳಿ ಯವರಿಗೆ ಹಿಂದೆಮುಂದೆ ನೋಡದೆ ಚಟಪಟನೆ ಮಾತನಾಡುವ ಚಟವೊಂದು ಬಿಟ್ಟರೆ ಮತ್ತಾವ ಚಟವು ಅವರ ಜೊತೆಗೆ ಇಂದು ಉಳಿದಿಲ್ಲ.
ಅಂದಪ್ಪ ಜವಳಿಯವರೇ ಹೇಳುವಂತೆ ಸುಮಾರು ನಾಲ್ಕು ದಶಕಗಳ ಹಿಂದೆ ಇಸ್ಪೀಟ್ ತಟ್ಟಲು ಕುಳಿತರೆ ಹಗಲು ರಾತ್ರಿ ಎನ್ನುವ ಪರಿವೆಯೇ ಇರಲಿಲ್ಲವಂತೆ.ಆದರೆ ಕೊಪ್ಪಳದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳವರನ್ನು ತಮ್ಮ ಮನೆಗೆ ಪೂಜೆಗೆ ಆಮಂತ್ರಿಸಲು ಹೋದಾಗ ನೀನು ಜೂಜಾಟ ಬಿಟ್ಟರೆ ಮಾತ್ರ ನಿಮ್ಮ ಮನೆಗೆ ಪೂಜೆಗೆ ಬರುತ್ತೇನೆ ಎಂದು ಹೇಳಿದರಂತೆ.ಅಂದು ಅವರಿಗೆ ಮಾತು ಕೊಟ್ಟ ಮನೆಗೆ ಪೂಜೆಗೆ ಕರೆದುಕೊಂಡು ಬಂದವರು ಇಂದಿಗೂ ಜೂಜಾಟದ ಕಡೆಗೆ ತಲೆ ಹಾಕಿಲ್ಲ ಅಷ್ಟು ದೃಢ ಮತ್ತು ಸ್ಥಿರವಾದ ಮನಸ್ಸು ಅಂದಪ್ಪ ಜವಳಿಯವರದು.
ತಮ್ಮ ಬಳಿ ಕಷ್ಟ ಹೇಳಿಕೊಂಡು ಬಂದವರಿಗೆ ನ್ಯಾಯ ಕೊಡಿಸುವ ತನಕ ವಿರಮಿಸದ ಮನಸ್ಥಿತಿ ಇವರದು.ಹಠಕ್ಕೆ ಬಿದ್ದರೆ ಎಂಥ ಅಪಮಾನ ಅವಮಾನಗಳನ್ನು ಮೈಮೇಲೆ ಎಳೆದುಕೊಳ್ಳಲು ಅಂಜುವುದಿಲ್ಲ.ತಾನು ತನ್ನ ಹೆಂಡತಿ ಮಕ್ಕಳು ಕುಟುಂಬವೆಂದು ಎಂದೂ ಪರಿತಪಿಸಿದವರಲ್ಲ.ಐದು ದಶಕಗಳ ಸಾರ್ವಜನಿಕ ಬದುಕಿನಲ್ಲಿ ವೈಯಕ್ತಿಕ ಚಾರಿತ್ರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.ನನ್ನ ಮತ್ತು ಅಂದಪ್ಪನವರ ನಡುವೆ ಕಳೆದ ಏಳೆಂಟು ವರ್ಷಗಳಿಂದ ಬೌದ್ಧಿಕ ಮತ್ತು ಸೈದ್ಧಾoತಿಕ ಭಿನ್ನಾಭಿಪ್ರಾಯಗಳು ಹಾಗೂ ಸಂಘಟನೆಯಲ್ಲಿ ನನ್ನ ಮೇಲೆ ಬಂದಿರುವ ಒಣ ಅಪವಾದ ಗಳಿಂದಾಗಿ ಮಾತು ಮತ್ತು ಮುಖಾಮುಖಿ ಬೆಟ್ಟಿಯನ್ನು ಕಡಿಮೆ ಮಾಡಿಕೊಂಡಿದ್ದೇವೆ.ಆದರೆ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಕೊರತೆಯಿಲ್ಲ,ಎಷ್ಟಿದ್ದರೂ ಆತ ನಮ್ಮ ಸಮಾಜದ ಹಿರಿಯ.ಏಪ್ಪತ್ತರ ಈ ವಯಸ್ಸಿನಲ್ಲಿಯೂ ಹದಿನೆಂಟರ ಹರೆಯದ ಕಸುವು ಹೊಂದಿರುವ ದೇಹ, ಕುಗ್ಗದ ಆತ್ಮವಿಶ್ವಾಸ,ಮತ್ತು ತನ್ನ ಧ್ವನಿಯ ಮೂಲಕವೇ ಎಲ್ಲರನ್ನೂ ತನ್ನಡೆಗೆ ಸೆಳೆಯುವ ಗುಣ ಇದೆಲ್ಲಕ್ಕಿಂತಲೂ ಮಿಗಿಲಾಗಿ ಗಾಡ್ ಫಾದರಾಗಿರುವ ಶ್ರೀ ಜಗದೀಶ ಶೆಟ್ಟರವರ ಬಲದಿಂದಾಗಿ ಅಂದಪ್ಪ ಜವಳಿ ರಾಜಕಾರಣದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆ ನನಗಿದೆ.
ಸಾರ್ವಜನಿಕ ಬದುಕು ಹಾಗೂ ರಾಜಕಾರಣದಲ್ಲಿ ಕನಿಷ್ಠ ರಾಜಿ ಮನೋಭಾವವನ್ನು ರೂಢಿಸಿಕೊಂಡು ಬಂದರೆ ಮತ್ತಷ್ಟು ಎತ್ತರಕ್ಕೆ ಏರಬಲ್ಲ ತಾಕತ್ತು ಹಾಗೂ ಸಾಮರ್ಥ್ಯ ಇವರಿಗಿದೆ.ಈ ದಿಶೆಯಲ್ಲಿ ಅಂದಪ್ಪ ಜವಳಿಯವರು ಚಿಂತನೆ ಮಾಡಲಿ. ಮಹಾತ್ಮ ಬಸವೇಶ್ವರ ತಮಗೆ ಮತ್ತಷ್ಟು ಆರೋಗ್ಯ, ಆಯುಷ್ಯ, ಸಂಪತ್ತನ್ನು ಕರುಣಿಸಲಿ ಎಂದು ಹಾರೈಸುತ್ತಾ ಅರುವತ್ತೊoಭತ್ತನೇಯ ಹುಟ್ಟುಹಬ್ಬದ ಶುಭಾಶಯಗಳು.
.. ಗವಿಸಿದ್ದಪ್ಪ.ವೀ.ಕೊಪ್ಪಳ