ದುಡಿದು ದುಡಿದು ಸವೆಯುತ್ತಿರುವ ರೈತರು…..

ರೈತರ ದಿನ ಡಿಸೆಂಬರ್ 23…..……

ದುಡಿದು ದುಡಿದು ಸವೆಯುತ್ತಿರುವ ರೈತರು

ತಿಂದು ತಿಂದು ಕೊಬ್ಬುತ್ತಿರುವ ಕೆಲವರು

ದುಡಿಯದೇ ತಿನ್ನುತ್ತಾ ಅನ್ನವೇ ವಿಷವಾಗಿ ಸಾಯುತ್ತಿರುವ ಹಲವರು

ವಿಶ್ವದಲ್ಲಿ ಅತಿಹೆಚ್ಚು ರೈತರನ್ನು ಹೊಂದಿರುವ ದೇಶ ಭಾರತ…

ಆದರೆ, ಎಲ್ಲಿಯೂ ಹೇಳಿಕೊಳ್ಳುವಷ್ಟು ಸಾರ್ವಜನಿಕ ಆಚರಣೆ ಇಲ್ಲ, ಸಂಭ್ರಮ ಇಲ್ಲ, ಚರ್ಚೆಗಳಿಲ್ಲ, ಕೃತಜ್ಞತೆಗಳಿಲ್ಲ……….

ಆದರೆ,

ಆ ಉಳುವ ಯೋಗಿ ಮಾತ್ರ………..

ಹೇಳುವುದೇನು ?

ಬರೆಯಲು ಒಳ್ಳೆಯ ಪದಗಳು, ಭಾವನೆಗಳು, ಮನಮಿಡಿಯುವ ಘಟನೆಗಳು, ಆಕ್ರೋಶದ ನಿಂದನೆಗಳು, ಪರಿಹಾರದ ಸೂತ್ರಗಳು ಎಲ್ಲವೂ ನೆನಪಾಗುತ್ತದೆ.

ಪ್ರಯೋಜನವೇನು ?

ಅದೇ ಬಡಕಲು ಶರೀರ,
ಅದೇ ಮಾಸಿದ ಬಟ್ಟೆ,
ಅದೇ ಭುಜದ ಮೇಲಿನ ಟವಲ್,
ಅದೇ ಕುಡುಗೋಲು ಕೈಯಲ್ಲಿ,
ಅದೇ ನಿಟ್ಟುಸಿರು,
ಅದೇ ಬೇಡಿಕೆ,
ಅದೇ ಕೀಟನಾಶಕ ಕುಡಿದು ಆತ್ಮಹತ್ಯೆ,
ಅದೇ ಸುದ್ದಿ,
ಅದೇ ಪರಿಹಾರ,
ಅದೇ ಬೃಹತ್ ಪ್ರತಿಭಟನೆಗಳು….

ಸದ್ಯಕ್ಕೆ ಸಾಮಾನ್ಯರಿಗೆ ಊಟಕ್ಕೇನು ಕೊರತೆ ಇಲ್ಲ,
ರಾಜಕಾರಣಿಗಳಿಗೆ ಓಟು ಕೊಳ್ಳಲು ಸಮಸ್ಯೆ ಇಲ್ಲ,
ಉದ್ಯಮಿಗಳಿಗೆ ವ್ಯಾಪಾರಕ್ಕೇನು ತೊಂದರೆ ಇಲ್ಲ,……

ಡಾಕ್ಟರು, ಆಕ್ಟರು, ಮೇಷ್ಟರು, ಲಾಯರು, ಆಡಿಟರು, ಬ್ರೋಕರು, ಆಫೀಸರು ಯಾರಿಗೂ ತೊಂದರೆ ಏನೂ ಇಲ್ಲ….

ನೋಡೋಣ ಮುಂದೆ..

ರೈತರೆಲ್ಲ ವಿಷ ಕುಡಿದು ಸತ್ತ ಮೇಲೆ, ಊಟಕ್ಕೆ ತೊಂದರೆಯಾದ ಮೇಲೆ ರೈತರನ್ನು ನೆನಪಿಸಿಕೊಳ್ಳೋಣ…….

ಅಲ್ಲಿಯವರೆಗೂ ಚೆನ್ನಾಗಿ ಊಟ ಮಾಡ್ಕೊಂಡು ಎಲ್ರೂ ಆರಾಮವಾಗಿರಿ………

ಬೆಳಗಿನ ಬಿಸಿ ಬಿಸಿ ಕಾಫಿ ಟೀ,
ನಂತರದ ಉಪ್ಪಿಟ್ಟು ಚಿತ್ರಾನ್ನ ಇಡ್ಲಿ ವಡೆ ದೋಸೆ,
ಮಧ್ಯಾಹ್ನದ ರೊಟ್ಟಿ ಚಪಾತಿ ಮುದ್ದೆ ಅನ್ನ, ಸಂಜೆಯ ಪಾನಿಪುರಿ, ಮಸಾಲಾ ಪುರಿ, ಬೇಲ್ ಪುರಿ, ವಡಾ ಪಾವ್, ಪಾವ್ ಬಾಜಿ, ರಾತ್ರಿಯ ಚಿಕನ್ ಮಟನ್ ರೋಟಿ, ದಾಲ್ ಪಾಲಾಕ್, ದೋಕ್ಲಾ, ಕಿಚಡಿ ಎಲ್ಲಾ ದುಡ್ಡು ಕೊಟ್ಟರೆ ಸಿಗುತ್ತದೆ.
ಮನೆಗೇ ತಂದು ಕೊಡುತ್ತಾರೆ.

ಫಾದರ್ಸ್ ಡೇ, ಮದರ್ಸ್ ಡೇ, ಚಿಲ್ಡ್ರನ್ಸ್ ಡೇ, ವ್ಯಾಲೆಂಟೈನ್ ಡೇ, ಆ ಡೇ ಈ ಡೇ….ಎಲ್ಲಾ ಸಂಭ್ರಮದಿಂದ ಆಚರಿಸಿ…..

ನೋಡೋಣ ಗಾಡಿ ಹೀಗೆ ಎಷ್ಟು ದೂರ ಹೋಗುತ್ತೆ ಅಂತ……….

ರೈತರ ಬೆವರಿನ ಘಮಲು,
ಶ್ರಮದ ನಿಟ್ಟುಸಿರು,
ನಿರಾಸೆಯ ಆಕ್ರಂದನ,
ನೋವಿನ ಕೂಗು,
ಈ ಸಮಾಜಕ್ಕೆ ತಟ್ಟುವವರೆಗೂ……

ಮನುಷ್ಯ ಪ್ರಾಣಿಗಳ ಸುಖಕ್ಕೆ ತೊಂದರೆಯೇನು ಇಲ್ಲ……

ಆತ್ಮವಂಚಕರು
ನಾವು
ಆತ್ಮವಂಚಕರು…

ನಿಂಬೆ ಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡುವಿರಿ,…..

ಸೊಪ್ಪಿನ ಅಜ್ಜನ ಬಳಿ ಕೊಸರಾಡುವಿರಿ,….

ಕಡಲೆಕಾಯಿ ಮಾರುವವನ ಹತ್ತಿರ ಜಗಳವಾಡುವಿರಿ,..

ಹಣ್ಣಿನವನ ಹತ್ತಿರ ಪೌರುಷ ತೋರುವಿರಿ ,

ಎಳನೀರಿನವನ ಬಳಿ ಜುಗ್ಗುತನದಿಂದ ವರ್ತಿಸುವಿರಿ,

ಹೂವಿನವರ ಹತ್ತಿರ ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡುವಿರಿ.

ಗೊತ್ತೇ ನಿಮಗೆ ಭತ್ತ ಬೆಳೆಯುವವನ ಕಷ್ಟ,

ಗೊತ್ತೇ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆಂದು,

ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆಂದು,

ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು,

ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟ ವೆಂದು,

ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು,

ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮ ಕಾಂಡ,

ಗೊತ್ತೇ ನಿಮಗೆ ಅದರಲ್ಲಿ ಆಗುವ wastage ಎಷ್ಟೆಂದು,

ಗೊತ್ತೇ ನಿಮಗೆ ಇಷ್ಟಾದರೂ ಅದಕ್ಕೆ ಸಿಗುವ ಪ್ರತಿಫಲದ ನೋವು.

ನಿಮ್ಮ ಮನೆಯಲ್ಲಿ ಬೇಯುವ ಅನ್ನ Computer ನಲ್ಲಿ ತಯಾರಾದದ್ದಲ್ಲ,

ನೀವು ಊಟ ಮಾಡುವ ಅಕ್ಕಿ Internet ನಲ್ಲಿ ಬೆಳೆದದ್ದಲ್ಲ,

ಅದು ರೈತರ ಬೆವರ ಹನಿ ಗಳಿಂದ ಬಸಿದದ್ದು.

ತಾಕತಿದ್ದರೆ Pizza – Burger ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ,

ಧೈರ್ಯವಿದ್ದರೆ ಶಾಪಿ೦ಗ್ ಮಾಲ್ ಗಳಲ್ಲಿ ಕೊಸರಾಡಿ,

ಶಕ್ತಿಯಿದ್ದರೆ Multiplex theater ಟಿಕೆಟ್ ಕೌಂಟರ್ ನಲ್ಲಿ ಜಗಳವಾಡಿ.

ಕ್ಷಮಿಸಿ,

ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು,
ಆಹಾರದ ಮಹತ್ವ ಸಾರಲು…….

ವಿವೇಕಾನಂದ. ಹೆಚ್.ಕೆ.
9844013068

Don`t copy text!